Thursday, October 27, 2016

ಎಂಟೆಬ್ಬೆಯ ಸಾಹಸಗಾಥೆ

ಎಂಟೆಬ್ಬೆಯ ಸಾಹಸಗಾಥೆ

"ಎಂಟೆಬ್ಬೆ" ಎನ್ನುವ ಒಂದು ವಿಚಿತ್ರವಾದ ಹೆಸರು,ಈಗಲೂ ವಿಶ್ವದಾದ್ಯಂತ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕುತ್ತದೆ. ಬರೊಬ್ಬರಿ ನಲವತ್ತು ವರ್ಷಗಳ ಹಿಂದೆ ನಡೆದ, ಒಂದು ಊಹೆಗೂ ಮೀರಿದ ಸಾಹಸಗಾಥೆ ಅನೇಕ ಚಲನಚಿತ್ರಗಳಿಗೆ,ಪುಸ್ತಕಗಳಿಗೆ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಭಾರತವೂ ಸೇರಿದಂತೆ ಹಲವಾರು ಮಿಲಿಟರಿ ತರಬೇತಿ ಕೇಂದ್ರಗಳಲ್ಲಿ ಇದು ಪಾಠದ ವಿಷಯವೂ ಆಗಿದೆ.
ಏನು ಅಂತದ್ದು ನಡೆಯಿತು ಅಲ್ಲಿ. ಅಸಲಿಗೆ ಎಂಟೆಬ್ಬೆ ಎಂದರೆ ಏನು ಮತ್ತು ಎಲ್ಲಿದೆ ಎಂಬ ಹಲವಾರು ಪ್ರಶ್ನೆಗಳಿಗೆ ಈಗ ಸುಲಭವಾಗಿ ಗೂಗಲ್ಲಿನಲ್ಲಿ ಹಾಗು ಅಂತರ್ಜಾಲದ ಇತರೆ ವೆಬ್ ತಾಣಗಳಲ್ಲಿ ಸಿಗುತ್ತದೆ.
  ಆದರೆ 27 ಜೂನ್ 1976 ರಂದು ಇಸ್ರೇಲಿನ ಮಂತ್ರಿಮಂಡಲ 'ಎಂಟೆಬ್ಬೆ'ಎನ್ನುವ ಹೆಸರಿನಿಂದ ಕಕ್ಕಾಬಿಕ್ಕಿಯಾಗಿ, ವಿಶ್ವಭೂಪಟದಲ್ಲಿ ಹುಡುಕತೊಡಗಿದರು. ಅಂತೂ ಸಿಕ್ಕಿತು. ಮಧ್ಯ ಆಫ್ರಿಕದ ಉಗಾಂಡದಲ್ಲಿನ ಒಂದು ಏರ್ಪೊರ್ಟು. ಏರ್ ಫ್ರಾನ್ಸ್ ವಾಯುಯಾನದ ಒಂದು ವಿಮಾನ ಇಸ್ರೇಲಿನಿಂದ ಪ್ಯಾರಿಸ್ಸಿಗೆ ಹೋಗುವ ಮಾರ್ಗ ಮಧ್ಯದಲ್ಲಿ, ಪಾಲೆಸ್ಟೈನಿನ ಉಗ್ರರಿಂದ ಅಪಹರಿಸಲ್ಪಟ್ಟು,ಸುಮಾರು 250 ಜನ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯೊಂದಿಗೆ ಈ ಏರ್ರ್ಪೋರ್ಟಿಗೆ ಬಂದಿಳಿಯಿತು.  ಇದರಲ್ಲಿ ನೂರಕ್ಕೂ ಹೆಚ್ಚು ಇಸ್ರೇಲಿ ಪ್ರಯಾಣಿಕರಿದ್ದರು.  ಇಸ್ರೇಲಿನಿಂದ ಎಂಟೆಬ್ಬೆಗೆ  ಬರೊಬ್ಬರಿ 38೦೦ ಕಿಮೀಗಳ ದೂರ! ಎಲ್ಲಾ ಬಿಟ್ಟು ಇಷ್ಟುದೂರದ ಆಫ್ರಿಕಾದ ಏರ್ರ್ಪೋರ್ಟಿಗೆ ಯಾಕೆ ಅಪಹರಿಸಿಕೊಂಡರೆಂಬುದು ಸ್ವಲ್ಪ ಸಮಯದಲ್ಲೇ ಇಸ್ರೇಲಿಗೆ ತನ್ನ ಗುಪ್ತಚರ ಅಂಗ 'ಮೊಸ್ಸಾದ್' ನಿಂದ ತಿಳಿಯಿತು. ಅಲ್ಲಾಗಲೇ ಕಾಯುತ್ತಿದ್ದ ಇನ್ನೂ ನಾಲ್ಕು ಉಗ್ರರು ಇವರ ಜೊತೆ ಸೇರಿಕೊಂಡರು. ಇದರಲ್ಲಿ ಉಗಾಂಡದ ಐಲು ಸರ್ವಾಧಿಕಾರಿ ಇದಿ ಅಮಿನ್ ಮೇಲ್ನೋಟಕ್ಕೆ ಮಧ್ಯವರ್ತಿಯಂತೆ ಕಂಡರೂ, ಇದು ಅವನಿಂದಲೇ ರಚಿತವಾದ ಒಂದು ಪೂರ್ವ ನಿಯೋಜಿತ ಸಂಚು ಎಂದು ಇಸ್ರೇಲಿಗೆ ಮನದಟ್ಟಾಯಿತು. ಎಂಟೆಬ್ಬೆಯಲ್ಲಿ ಪ್ರಯಾಣಿಕರನ್ನು ಎರಡು ಗುಂಪು ಮಾಡಲಾಯಿತು. ಒಂದು ಗುಂಪು ಇಸ್ರೇಲಿಯರು ಮತ್ತೊಂದು ಗುಂಪು ಇತರರು. ಈ ಇತರರ ಗುಂಪನ್ನು ಮರುದಿನ ಇನ್ನೊಂದು ವಿಮಾನದಲ್ಲಿ ಪ್ಯಾರಿಸ್ಸಿಗೆ ಕಳುಹಿಸಲಾಯ್ತು. ಆಗ ಅರಿವಾಯ್ತು ಇವರ ಉದ್ದೇಶವೇನು ಎಂದು. ಇಸ್ರೇಲಿನಲ್ಲಿರುವ  ಸುಮಾರು ಐವತ್ತು ಜನ ಪ್ಯಾಲಸ್ತ್ತೇನಿ ಉಗ್ರರನ್ನು ಇನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡದಿದ್ದರೆ ಇಸ್ರೇಲಿಗಳನ್ನು ಹಂತ ಹಂತವಾಗಿ ಕೊಲ್ಲಲಾಗುವುದೆಂಬ ಬೆದರಿಕೆಯನ್ನು ಇಸ್ರೇಲಿಗೆ ತಲುಪಿಸಲಾಯ್ತು.
  ಇನ್ನು ಮೂರು ದಿನಗಳಲ್ಲಿ ಏನು ಮಾಡಲು ಸಾಧ್ಯ?  ಅಮೆರಿಕದ ಮುಖಾಂತರ ಈಜಿಪ್ಟಿನ ರಾಷ್ಟ್ರಾಧ್ಯಕ್ಷ ಅನ್ವರ್ ಸಾದತ್ ರವರ ಮುಖಾಂತರ ಹೇಳಿಸಿ ನೋಡಿದರು. ಉಹುಂ...ಜಪ್ಪಯ್ಯ ಎನ್ನಲಿಲ್ಲ. ಬೇಕಾದರೆ ಇನ್ನು ಎರಡು ದಿನಗಳ ಗಡವು ಕೊಡುತ್ತೇವೆ ಅಷ್ಟೆ, ಅಂತಿಮ ನಿರ್ಧಾರ ಏನು ಎಂಬುದನ್ನು ನಿರ್ಧರಿಸಲು ಇಸ್ರೇಲಿನ ಕ್ಯಾಬಿನೆಟ್ ದಿನ ರಾತ್ರಿ ಎನ್ನದೆ ಸಭೆ ನಡೆಸಿತು. ಅಂದಿನ ಇಸ್ರೇಲಿನ ಪ್ರಧಾನ ಮಂತ್ರಿಗಳು ಜೈಲಿನಲ್ಲಿರುವ ಪ್ಯಾಲಸ್ತೇನಿ ಉಗ್ರರನ್ನು ಬಿಡುಗಡೆ ಮಾಡುವುದೇ ಸೂಕ್ತ ಎಂದರೆ ಅದಕ್ಕೆ ರಕ್ಷಣಾಮಂತ್ರಿ ಆಕ್ಷೇಪವೆತ್ತಿದರು. ಒಂದು ಸಲ ನಾವು ಬಗ್ಗಿದರೆ ಇದೇ ತಂತ್ರ ಮುಂದುವರೆಯಬಹುದು ಎನ್ನುವ ಶಂಕೆ. ಆದರೆ ಎಲ್ಲರಿಗೂ ಈ ಕ್ರೂರಿ,ಮುಂಗೋಪಿ ,ಈದಿ ಅಮೀನನ ಪರಿಚಯ ಚೆನ್ನಾಗೇ ಗೊತ್ತಿತ್ತು,ಅದಕ್ಕೇ ಏನಾದರೊಂದು ನಿರ್ಧಾರ ತೆಗೆದು ಕೊಳ್ಳುವುದು ಒಳ್ಳೆಯದು, ಇಲ್ಲ ಅಂದರೆ  ಎಂಟೆಬ್ಬೆಯಲ್ಲಿರುವ ಇಸ್ರೇಲಿಯರ ಪ್ರಾಣಕ್ಕೆ ಅಪಾಯ ಖಚಿತ.
  ಈದಿ ಅಮೀನನ ವ್ಯಕ್ತಿತ್ವವೇ ಹಾಗೆ. ಇವನ ಬಗ್ಗೆ ಬರೆಯುವಾಗ ಕ್ರೌರ್ಯ ಮತ್ತು ಕಾಮಿಡಿ ಜೊತೆ ಜೊತೆಯಾಗಿ ಸಾಗುತ್ತವೆ. ಉಗಾಂಡದ 'ಕಕ್ವ' ಎನ್ನುವ ಪಂಗಡದಲ್ಲಿ ಹುಟ್ಟಿದ್ದೇ ಮೊದಲ ಕಾಮಿಡಿ! ನಾಲ್ಕನೇ ತರಗತಿಯಲ್ಲಿ ಫೇಲಾದ ಮೇಲೆ ಅಂದು ಉಗಾಂಡವನ್ನಾಳುತ್ತಿದ್ದ ಬ್ರಿಟಿಷ್ ಸೇನೆಯಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಳ್ಳುತ್ತಾನೆ. ಸೈನ್ಯಕ್ಕೆ ಹೇಳಿಮಾಡಿಸಿದ ಮೈಕಟ್ಟು,ಅಗಾಧವಾದ ಶಕ್ತಿ ಮತ್ತು ಹುಮ್ಮಸ್ಸು.  ಇವನ ಕ್ರೌರ ಪ್ರವೃತ್ತಿಯನ್ನು ಬರ್ಮ,ಸೊಮಾಲಿಯ ಮತ್ತು ಕೆನ್ಯಾದಲ್ಲಿ ನಡೆದ ಯುಧ್ಧದಲ್ಲಿ ಗಮನಿಸಿದ ಅಧಿಕಾರಿಗಳು ಕೆಲವೇ ವರ್ಷಗಳಲ್ಲಿ ಉಗಾಂಡ ಸೈನ್ಯದಲ್ಲಿ ಆಫೀಸರ್ ದರ್ಜೆಗೆ ಬಡ್ತಿ ಕೊಟ್ಟುಬಿಡುತ್ತಾರೆ. 1962 ನಲ್ಲಿ ಬ್ರಿಟಿಷರು ಉಗಾಂಡಕ್ಕೆ ಸ್ವಾತಂತ್ರ ಕೊಟ್ಟು ಹೋದಮೇಲೆ ಈದಿ ಅಮೀನ್ ತನಗೆ ಬೇಕೆನಿಸಿದ ಪಟ್ಟ ಕಟ್ಟಿಕೊಳ್ಳುತ್ತಾನೆ. ಅಂದಿನ ಉಗಾಂಡದ ಅಧ್ಯಕ್ಷ ಮಿಲ್ಟನ್ ಒಬೋಟ್ ಖಾಸಾ ದೋಸ್ತ್ ಆಗಿಬಿಡುತ್ತಾನೆ. ಇಬ್ಬರೂ ಸೇರಿಕೊಂಡು ಇನ್ನಿಲ್ಲದ ಹಾಗೆ ಕೊಳ್ಳೇಹೊಡೆಯತ್ತಾರೆ. 1971ರಲ್ಲಿ ಒಬೋಟ್ ನನ್ನೇ ಓಡಿಸಿ ತಾನೇ ಅಧ್ಯಕ್ಷನಾಗುತ್ತಾನೆ. ಭಾರತೀಯರು ಸೇರಿದಂತೆ ಸುಮಾರು 50 ಸಾವಿರ ಶ್ರೀಮಂತರ ಆಸ್ತಿಯನ್ನೆಲ್ಲಾ ಮಟ್ಟಗೋಲು ಹಾಕಿಕೊಂಡು ಅವರನ್ನು ದೇಶ ಬಿಟ್ಟು ಓಡಿಸುತ್ತಾನೆ. ತನಗೆ ತಾನೇ ಡಾಕ್ಟರೇಟ್,ಫೀಲ್ಡ್ ಮಾರ್ಶಲ್ ಪದವಿಯನ್ನು ಕೊಟ್ಟುಕಳ್ಳುತ್ತಾನೆ. ತನ್ನ ಯೂನಿಫಾರಮ್ಮನ್ನು ನಾನಾ ವಿಧದ ಪದಕಗಳಿಂದ ಅಲಂಕರಿಸಿಕೊಳ್ಳುತ್ತಾನೆ. ಇಂತಹ ಹಿಂಸಾಪ್ರವೃತ್ತಿಯ ಮೃಗವನ್ನು ಮಾಧ್ಯಮದವರು ಪೈಪೋಟಿಗೆ ಬಿದ್ದು ವೈಭವೀಕರಿಸುತ್ತಾರೆ. ಇದರಿಂದ ಇನ್ನಷ್ಟು ಹುರುಪುಗೊಂಡು ಇನ್ನಿಲ್ಲದ ಹೀನ ಕೃತ್ಯಗಳಿಗಿಳಿದು ಬಿಡುತ್ತಾನೆ. ಒಂದು ವರದಿಯ ಪ್ರಕಾರ ,ಇವನೊಬ್ಬ ನರಮಾಂಸ ಭಕ್ಷಕ,ತನಗಿರುವ ಹಲವಾರು ಹೆಂಡತಿಯರಲ್ಲಿ ಒಬ್ಬಳ ಅಂಗಾಂಗಗಳನ್ನೇ ತಿಂದುಬಿಟ್ಟಿದ್ದನಂತೆ,ರಾಕ್ಷಸ.

        1972 ರ ವರೆಗು ಈದಿ ಅಮಿನ್ ಇಸ್ರೇಲಿನ ಜೊತೆ ಸ್ನೇಹದಿಂದಲೇ ಇರುತ್ತಾನೆ. ಉಗಾಂಡದಲ್ಲಿ ಬಹುತೇಕ ಕಟ್ಟಡಗಳನ್ನು ಇಸ್ರೇಲಿ ಕಂಟ್ರಾಕ್ಟರ್ಗಳೇ ಕಟ್ಟುತ್ತಾರೆ. ಆದರೆ ಇವನ ದುರಾಸೆಗೆ ಮಿತಿ ಇರುವುದಿಲ್ಲ,ನನಗೆ ನಿಮ್ಮ ಜೆಟ್ ವಿಮಾನ ಬೇಕು,ಹಣದ ಸಹಾಯ ಬೇಕು ಎಂದು ದುಂಬಾಲು ಬೀಳುತ್ತಾನೆ. ಇಸ್ರೇಲು ನಿರಾಕರಿಸುತ್ತದೆ. ಆಗ ನೋಡಿ ಇಸ್ರೇಲಿನ ವಿರುದ್ದ ಯಾವ ಪರಿ ತಿರುಗಿ ಬೀಳುತ್ತಾನೆಂದರೆ ,ಇಸ್ರೇಲಿನಿಂದ ಪ್ಯಾರಿಸ್ಸಿಗೆ ಪ್ರಯಾಣಿಸುತ್ತಿದ ಏರ್ ಫ್ರಾನ್ಸ್  ವಿಮಾನ ಅಪಹರಣವಾಗಿ ,ಇವನ ದೇಶಕ್ಕೆ ಬರುವ ಹಾಗೆ ಪ್ಲಾನು ಹಾಕಿ,ಅದರಲ್ಲಿ ಪ್ಯಾಲಿಸ್ತೇನ್ ಮತ್ತು ಜರ್ಮನ್ ಉಗ್ರರನ್ನು ಸೇರಿಸಿಕೊಳ್ಳುತ್ತಾನೆ. ಈ ಒಂದು ಹಿನ್ನಲೆ ಇದ್ದುದರಿಂದ ಇಸ್ರೇಲಿನಲ್ಲಿ ಚಡಪಡಿಕೆ ಶುರುವಾಗುತ್ತದೆ.
        ಸುಮಾರು 3800 ಕಿಮೀ ದೂರದಲ್ಲಿರುವ ಎಂಟ್ಟೆಬ್ಬೆಯಲ್ಲಿ ಮಿಲಟರಿ ಕಾರ್ಯಾಚರಣೆಯನ್ನು ಮಾಡುವುದಾದರೂ ಹೇಗೆ? ಅಲ್ಲಿಗೆ ತಲುಪಲು ಸುಮಾರು 7-8 ಗಂಟೆಗಳ ವಿಮಾನಯಾನ. ಆಕ್ರಮಣ ತಂಡದಲ್ಲಿ ಎಷ್ಟು ಜನರಿರಬೇಕು. ಅಲ್ಲಿಯ ಕಾರ್ಯಾಚರಣೆ ಮುಗಿದಮೇಲೆ ವಾಪಸಾಗಲು ವಿಮಾನದ ಇಂಧನದ ಏರ್ಪಾಡು ಹೇಗೆ?
        ಇದನ್ನೆಲ್ಲಾ ಸಂಭಾಳಿಸುವ ತಂಡದ ನಾಯಕ ಯಾರು,ಎಂಬೆಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ಹಲವಾರು ಗಂಟೆಗಳ ಮೀಟಿಂಗ್ ನಡೆಯುತ್ತದೆ. ಈ ಪ್ರಕ್ರಿಯೆಗೆ ಒಂದು ತ್ವರಿತ ಚಾಲನೆ ನೀಡಲು   ಲೆ. ಕರ್ನಲ್ ಜೊನಾತನ್ ನಿತ್ಯಾನ್ಯೆಹು ಎಂಬ ನುರಿತ ಸಾಹಸಿಯನ್ನು ಆಯ್ಕೆ ಮಾಡಲಾಗುತ್ತದೆ. "ಆಪರೇಷನ್ ಥಂಡರ್ ಬೋಲ್ಟ್" ನ ಅಧ್ಯಾಯ ಶುರು.
        ಈ ತಂಡದಲ್ಲಿ ಕರ್ನಲ್ ಜೊನಾತನ್ ರ ತಮ್ಮನೂ ಇರುತ್ತಾರೆ. ಆದರೆ ಈ ತರಹದ ರಿಸ್ಕೀ ಕಾರ್ಯಾಚರಣೆಯಲ್ಲಿ ಒಂದೇ ಕುಟುಂಬದ ಎರಡು ಸದಸ್ಯರು ಬೇಡ ಎಂದು ನಿರ್ಧರಿಸಲಾಗುತ್ತದೆ. ಮನಸ್ಸಿಲ್ಲದ ಮನಸ್ಸಿನಿಂದ ತಮ್ಮ , ಬೆಂಜಮಿನ್ ನೆತನ್ಯಾಹು ಈ ಕಾರ್ಯಾಚರಣೆಯಿಂದ ಹೊರಗುಳಿಯತ್ತಾರೆ. ಅವರೆ ಇಂದಿನ ಇಸ್ರೇಲಿನ ಪ್ರಧಾನಿ!


ಉಗಾಂಡದೆಡೆ ಉಡಾಣ

        1948ರಲ್ಲಿ ಜನ್ಮಪಡೆದು,ಹುಟ್ಟಿನಿಂದಲೂ ಭಯೋತ್ಪಾದನೆಯನ್ನು ನಿರಂತರವಾಗಿ ಹೆದರಿಸುತ್ತಿರುವ ಇಸ್ರೇಲ್ ಹೇಗೆ ನಿಭಾಯಿಸುತ್ತದೆ ಈ ಪೀಡೆಯನ್ನು?
    ಸಿಂಪಲ್, ಭಯೋತ್ಪಾದನೆಯ ಫ್ಯಾಕ್ಟರಿಗೆ ನುಗ್ಗಿ ,ಉತ್ಪಾದನೆಯ ಹಂತದಲ್ಲೇ ಬಗ್ಗುಬಡಿಯುವುದು. ಈ ಹಿಂದೆ ಇರಾಕಿನ ಒಸಿರಾಕ್ ಅಣುಸ್ಥಾವರದ ಬಗ್ಗೆ ಒದಿದ್ದು ನೆನಪಿರಬಹುದು. ಇನ್ನೇನು ಹತ್ತು ದಿನಗಳಲ್ಲಿ ಅಣುಬಾಂಬು ತಯಾರಿಸುವ ಸಾಮರ್ಥ್ಯವನ್ನು ಇರಾಕ್ ಪಡೆದೇ ಬಿಡ್ತು ಎನ್ನೊಷ್ಟು ಹೊತ್ತಿಗೆ , ರಾಜಾರೋಷವಾಗಿ ಆ ಅಣುಸ್ಥಾವರವನ್ನು ಸಣ್ಣ ಸಣ್ಣ ಪೀಸುಗಳಾಗಿ ಮಾಡಿದರು. ಅರಬರೂ ಸೇರಿದಂತೆ ಹಲವಾರು ದೇಶಗಳು ಲಬೋ ಲಬೋ ಎಂದು ಬಾಯಿಬಡಿದು ಕೊಂಡರು. ಅವರು ಅದರ ಬಗ್ಗೆ ಏನಾದರೂ ತಲೆಕೆಡಿಸಿ ಕೊಂಡರಾ? ಇಲ್ಲ.
    ಇದು ಇಸ್ರೇಲಿನ ಸ್ಪೆಷಾಲಿಟಿ. ಅವರು ಒಂದು ಸಲ ತಮ್ಮ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಂಡರೆಂದರೆ ಮುಗಿಯಿತು. ಬೇರೆದೇಶಗಳ, ಅಮೆರಿಕಾದ ಅಥವಾ ವಿಶ್ವಸಂಸ್ಥೆಯ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದೇ ಇಲ್ಲ.
  ಇನ್ನೊಂದು ಇಸ್ರೇಲಿಯರ ವೈಶಿಷ್ಟ್ಯವೆಂದರೆ ತಮ್ಮ ದೇಶದ ಬಗ್ಗೆ ಇರುವ ಗಾಢವಾದ ಅಭಿಮಾನ,ಗೌರವ. ಪರಸ್ಪರರಲ್ಲಿರುವ ಭಾಂಧವ್ಯ,ಅಚಲವಾದ ವಿಶ್ವಾಸ,ಇವೇ ಅವರನ್ನು ವಿಶ್ವದಲ್ಲಿ ವಿಷೇಶ ಸ್ಥಾನದಲ್ಲಿಟ್ಟಿರುವುದು. ಇದಕ್ಕಾಗೇ ಅವರನ್ನು ಅಭಿಮಾನಿಸುವುದು ಮತ್ತು
ಇದಕ್ಕಾಗಿಯೆ ಅವರನ್ನು ದ್ವೇಷಿಸುವುದು ಕೂಡ.

       ಈದಿ ಅಮೀನನ ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿರುವ ಸುಮಾರು ನೂರು ಜನ ಇಸ್ರೇಲಿಯರನ್ನು ಬಿಡುಗಡೆ ಮಾಡಲು ಕುಳಿತಿದ್ದ ತುರ್ತು ಸಭೆಯಲ್ಲಿ ಎರಡು ಗುಂಪುಗಳು ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪರ ವಿರೋದದ ವಾದ ಮಾಡುತ್ತಿರುವಾಗಲೇ, ರಕ್ಷಣಾ ಮಂತ್ರಿ ಮಿಲಿಟರಿಗೆ  ಕಣ್ಣು ಮಿಟುಕಿಸಿ..Go ahead ಎಂದೇ ಬಿಟ್ಟರು.
      ಜೊನಾತನ್ ನ್ಯೇಟನ್ನಾಹುವಿನ ಮುಖಂಡತ್ವದಲ್ಲಿ ತಯಾರಿಗಳು ಭರದಿಂದ ನಡೆಯಲು ಶುರುವಾಯಿತು. ಎಂಟೆಬ್ಬೆಯ ಏರ್ಪೋರ್ಟಿನ ಕಟ್ಟಡಗಳನ್ನು ಕೆಲವೇ ವರ್ಷಗಳಹಿಂದೆ ಕಟ್ಟಿದ ಕಂಟ್ರಾಕ್ಟರು ಇಸ್ರೇಲಿ! ಕೆಲವೇ ಗಂಟೆಗಳಲ್ಲಿ ಅವರಲ್ಲಿದ್ದ ನಕಾಶೆಯ ಸಹಾಯದಿಂದ ಒಂದು ಮಾದರಿಯನ್ನ ಮರಳಿನಲ್ಲಿ ಕಟ್ಟೇಬಿಟ್ಟರು. ಆಕ್ರಮಣದ ಕಮಾಂಡೊ ದಳಕ್ಕೆ ಉಂಗಾಡದ ಸೇನೆಯ ಮಾದರಿಯ ಡ್ರೆಸ್ಸನ್ನು ರಾತ್ರೊರಾತ್ರಿ ಹೊಲೆಯಲಾಯಿತು.  
         ಗುಪ್ತಚರ ಮಾಹಿತಿಯ ಪ್ರಕಾರ  ಈದಿ ಅಮಿನನ ಕಪ್ಪು ಬಣ್ಣದ ಮರ್ಸಿಡೀಸ್ ಕಾರಿನಂತಹದೇ ಒಂದು ಕಾರು ಮತ್ತು ಅಲ್ಲಿಯ ಮಿಲಿಟರಿಯವರು ಉಪಯೋಗಿಸುವ ಮಾದರಿಯ ಮೂರು ವಾಹನಗಳು,ಒಟ್ಟು ನಾಲ್ಕು ವಾಹನಗಳನ್ನು ಮೊದಲನೆ C-130  ಹರ್ಕ್ಯುಲಿಸ್ ಏರೋಪ್ಲೇನಿನಲ್ಲಿ ಲೋಡ್ ಮಾಡಲಾಯಿತು. ವಿದೇಶಕ್ಕೆ ಹೋದ ಈದಿ ಅಮಿನ್ ಮರಳಿ ಬರುತ್ತಿದ್ದಾನೆನ್ನವ ನಾಟಕದ ರಂಗತಾಲೀಮಿನ ರಚನೆಯಾಯ್ತು.  ಕಮಾಂಡೊ ಕಾರ್ಯಾಚರಣೆಯ ತಾಲೀಮಿನಲ್ಲಿ ನಿಮಿಷ ನಿಮಿಷಕ್ಕೂ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ,ಯೋಚಿಸಿ,ಪರಾಂಬರಿಸಿ,ಚರ್ಚಿಸಿ ತರಬೇತಿಯಲ್ಲಿ ಅಳವಡಿಸಿಕೊಂಡರು. ಈ ಹೆಜ್ಜೆ ಯಡವಟ್ಟಾದರೆ ಅದಕ್ಕೆ ಪರ್ಯಾಯವೇನು ಎಂಬುದೆಲ್ಲಾ ಪರಿಗಣಿಸಲಾಯಿತು. ಈ ಕಾರ್ಯಾಚರಣೆಯ ಬುನಾದಿ ...ಅನಿರೀಕ್ಷಿತತೆ, ಅಲ್ಲಿರುವವರು ಬರೀ ಅರಬ್ ವಿಮಾನ ಅಪಹರಣಕಾರೇ ಅಲ್ಲ ಉಗಾಂಡದ ಸೈನಿಕರೂ ಆಸುಪಾಸಿನಲ್ಲಿದ್ದಾರೆಂದು ತಿಳಿದು ಬಂತು. ಪಿಸ್ತೊಲುಗಳಿಗೆ ಸೈಲೆನ್ಸರ್ ಅಳವಡಿಸಲಾಗಿತ್ತು. ಬಂದೂಕಿನ ಫೈರಿಂಗ್ ಕೊನೆಯಹಂತದ ಆಕ್ರಮಣಕ್ಕೆ ಮಾತ್ರ.
  ಮೊದಲಿಂದಲೂ ಅವರು ಉಗಾಂಡದ ಸೈನಿಕರಂತೇ ವರ್ತಿಸಬೇಕು..ಅಪಹರಣಕಾರರನ್ನು ಸೆರೆ ಹಿಡಿಯುವವರೆಗೂ ಅಥವಾ ನಿಷ್ಕ್ರಿಯೆ ಗೊಳಿಸುವವರೆಗು. ಅಲ್ಲಿಗೆ ಹೋಗುತ್ತಿರುವುದು ನಮ್ಮ ಇಸ್ರೇಲಿಯರನ್ನು ಉಳಿಸುವುದಕ್ಕೆ ಉಂಗಾಡ ಸೈನ್ಯದ ಜೊತೆ ಯುಧ್ಧ ಮಾಡುವುದಕ್ಕಲ್ಲ ಎಂಬುದನ್ನೂ ಎಲ್ಲರಿಗೂ ಮನವರಿಕೆಯಾಗುವಂತೆ ರಿಹರ್ಸಲ್ ನಡೆಸಲಾಯಿತು.
    ಎಂಟೆಬ್ಬೆಗೆ ಹೊರಡಲು ತಯಾರಾಗಿದ್ದ ಒಟ್ಟು ನಾಲ್ಕು C-130 ಹರ್ಕ್ಯುಲಿಸ್ ಎಲ್ಲಾ ಪೈಲಟ್ಗಳಿಗೆ ನಡುರಾತ್ರಿಯ ಕಗ್ಗತ್ತಿನಲ್ಲಿ ಯಾವ ಬೆಳಕಿನ ಸಹಾಯವಿಲ್ಲದೆ ಭೂಸ್ಪರ್ಶ ಮಾಡುವ ತರಬೇತಿಯನ್ನು ಕೊಡಲಾಯಿತು. ನಡುರಾತ್ರಿಯ ನಿಷಬ್ದದಲ್ಲಿ  ನಾಲ್ಕು ಏರೋಪ್ಲೇನುಗಳ  ಶಬ್ದವನ್ನು ಕಡಿಮೆ ಮಾಡಲು ಏರ್ಪೋರ್ಟು ಹತ್ತಿರವಾಗತ್ತಿದ್ದಂತೆ ಎರಡು ಎಂಜಿನ್ನುಗಳನ್ನು ನಿಷ್ಕ್ರಿಯಗೊಳಿಸುವ ಪ್ರಯೋಗವನ್ನೂ ನಡೆಸಲಾಯಿತು. ನಾಲ್ಕನೇ ವಿಮಾನದಲ್ಲಿ ಒಂದು ಚಿಕ್ಕ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ಬಿಟ್ಟರೆ ಒತ್ತೆಯಾಳುಗಳಾಗಿದ್ದ ಇಸ್ರೇಲಿಯರನ್ನು ಕರೆದುಕೊಂಡು ಬರಲು ಖಾಲಿಯಾಗೇ ಇಡಲಾಯಿತು.
    ಎಂಟೆಬ್ಬೆಯಲ್ಲಿ ಈಗಾಗಲೇ ಆರು ದಿನಗಳ ನರಕಯಾತನೆಯನ್ನು ಅನುಭವಿಸಿದ್ದ ಇಸ್ರೇಲಿಯರು ಅವರಿಗಾಗಿ ಕಾದಿರಿಸಿದ್ದ ನಾಲ್ಕನೇ ಏರೋಪ್ಲೇನಿನಲ್ಲಿ ...ಎಲ್ಲರೂ ಬಂದರೇ?
    3 ಜುಲೈ 1976, ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಕಮಾಂಡೋಗಳು, ಪೈಲಟ್ಗಳು,ಎಂಜಿನಿಯರ್ಗಳು, ವೈರ್ಲೆಸ್,ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಜಮಾಯಿಸಿ ಅಂತಿಮವಾಗಿ ಕರ್ನಲ್ ನೆತನ್ಯಾಹುರ ನೇತೃತ್ವದಲ್ಲಿ ತಾಲೀಮು ನಡೆಸಲಾಗುತ್ತದೆ. ಇಲ್ಲಿ ಒಂದು ಚಿಕ್ಕ ವಿವಾದವೆದ್ದು ಬಿಡುತ್ತದೆ. ಅದೇನೆಂದರೆ ಮೊದಲನೇ ಗೇಟಿನಲ್ಲಿರಬಹುದಾದ ಉಗಾಂಡದ ಗಾರ್ಡುಗಳನ್ನು ಹೇಗೆ ನಿಭಾಯಿಸುವುದು? ಅವರನ್ನು ಬರೀ ನಿಷ್ಕ್ರಿಯಗೊಳಿಸಬೇಕೇ ಅಥವಾ ಮುಗಿಸಿಬಿಡಬೇಕೇ ಈ ವಿವಾದ ನಿಖರವಾಗಿ ಬಗೆಹರಿಯುವುದಿಲ್ಲ. ಸರಿ ಅಲ್ಲೇ ನೋಡೋಣ ಎಂದು ಬಿಡುತ್ತಾರೆ ಕಮಾಂಡೊಗಳ ಮುಖಂಡ.
     ಇದೊಂದನ್ನು ಬಗೆಹರಿಸಿಕೊಂಡಿದ್ದರೆ?
    
    ಮಿಲಿಟರಿ ಕಾರ್ಯಾಚರಣೆಯಲ್ಲಿ ಕೆಲವು ಸಣ್ಣ ಸಾಂಧರ್ಭಿಕ ನಿರ್ಧಾರಗಳೂ ಎಷ್ಟು ಪ್ರಾಮುಖ್ಯತೆ ಪಡೆಯುತ್ತವೆಯಲ್ಲವೇ?
    ಮಧ್ಯಾಹ್ನ 2.30. ಇಸ್ರೇಲ್ ಕ್ಯಾಬಿನೆಟ್ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಇನ್ನೂ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ!!
    ಎಂಟುಗಂಟೆಗಳ ವಾಯುಯಾನದ ನಂತರ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ಮಾಡಲು ಎಂಟೆಬ್ಬೆಯನ್ನು ತಲುಪಬೇಕೆಂದರೆ ಸಂಜೆ ನಾಲ್ಕರ ಆಸುಪಾಸಿಗೆ ಈ ವಿಮಾನಗಳು ಇಸ್ರೇಲಿನಿಂದ ನಿರ್ಗಮಿಸಲೇ ಬೇಕು...ಆದರೆ ಈ ಕಾರ್ಯಾಚರಣೆಗೆ ಇನ್ನು ಅಧಿಕೃತವಾಗಿ ಪರವಾನಗಿಯೇ ದೊರೆತಿಲ್ಲ. ಎಂತಹ ವಿಪರ್ಯಾಸ.
    ಇನ್ನೊಂದು ಆತಂಕದ ಸಮಾಚಾರವೂ ಇಸ್ರೇಲಿನ ಗುಪ್ತಚರ ಇಲಾಖೆ 'ಮೊಸ್ಸಾದ್'ನಿಂದ ಬರುತ್ತದೆ. ಅದೆಂದರೆ, ಮೌರಿಶಿಯಸ್ ದೇಶದ ಪ್ರವಾಸ ಮುಗಿಸಿಕೊಂಡು ಈದಿ ಅಮೀನ್ ಆ ರಾತ್ರಿ ಉಗಾಂಡಕ್ಕೆ ಮರಳುತ್ತಿದ್ದಾನೆ. ಆ ಕ್ರೂರ ಮುಂಗೋಪಿ ಇಸ್ರೇಲ್ ಇನ್ನೂ ಪ್ರತಿಕ್ರಯಿಸಿಲ್ಲ ಎಂದು ತಿಳಿದರೆ ಏನು ಮಾಡುತ್ತಾನೊ?
    ಈ ಸಂಧರ್ಭದಲ್ಲಿ ಮಿಲಿಟರಿ ಅಧಿಕಾರಿಗಳು ಸಾಧಕ ಭಾದಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.
    ನಾವಂತೂ ಹೊರಡುತ್ತೇವೆ, ನಾಲ್ಕು ಗಂಟೆಗಳ ವಿಮಾನಯಾದನಂತರ ಒಂದು  "Point of no return" ತಲುಪುವುದರೊಳಗೆ ಕ್ಯಾಬಿನೆಟ್ಟಿನ ಅನುಮೋದನೆ ದೊರೆತರೆ ಮುಂದುವರೆಯುತ್ತೇವೆ ಇಲ್ಲದಿದ್ದರೆ ಮರಳಿಬರುತ್ತೇವೆ. ಅದಕ್ಕೆ ರಕ್ಷಣಾಮಂತ್ರಿಯವರು ಒಪ್ಪುತ್ತಾರೆ.
    ಆಪರೇಷನ್ ಥಂಡರ್ ಬೋಲ್ಟ್ ಗಗನಕ್ಕೇರುತ್ತದೆ...ಅದರ ಜೊತೆಗೇ  ಇಸ್ರೇಲಿನ ಭವಿಷ್ಯಕೂಡ.
      

ಮರಳಿ ಮನೆಗೆ

          ಇಸ್ರೇಲಿನ ದಾಳಿಗಳ ಯಶಸ್ಸಿನ ರಹಸ್ಯ ಅವರ ಅದ್ವಿತೀಯ ಬೇಹುಗಾರಿಕೆಯ ಜಾಲ.  ಪ್ರಪಂಚದ ಮೂಲೆ ಮೂಲೆಗಳಲ್ಲೂ ಇವರು ಹರಡಿ ಕೊಂಡಿದ್ದಾರೆ.
ಅರಬ್ ದೇಶಗಳಲ್ಲಿ,ಆಫ್ರಿಕಾದಲ್ಲಿ,ಅಮೆರಿಕಾದಲ್ಲಿ ಎಲ್ಲೆಲ್ಲೂ. ಹೋಟೆಲುಗಳಲ್ಲಿ ವೈಟರುಗಳಾಗಿ, ಟೈಲರುಗಳಾಗಿ,ಮೋಚಿಗಳಾಗಿ,ಯಾವ ಕೆಲಸವಾದರೂ ಸರಿ,ಮೈಯೆಲ್ಲಾ ಕಣ್ಣಾಗಿಸಿ ಮಾಹಿತಿ ಕಲೆ ಮಾಡಿ ಇಸ್ರೇಲಿಗೆ ತಲುಪಿಸುವುದೇ ಇವರ ಮುಖ್ಯ ಉದ್ದೇಶ. ಕೆಲವು ಸಲ 'ಟಾರ್ಗೆಟ್' ಗಳನ್ನು ನಿಷ್ಕ್ರಿಯಗೊಳಿಸುವುದನ್ನೂ ಸಹ ಲೀಲಾಜಾಲವಾಗಿ ಮಾಡಿ ಮುಗಿಸಿ ಬಿಡುತ್ತಾರೆ! ಇವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಚಾಣಾಕ್ಷರು,ನಿರ್ದಯಿಗಳು,ಏಕಾಂಗಿಗಳು ಆದರೆ ತಮ್ಮ ದೇಶದ ಬಗ್ಗೆ ಇರುವ ಅಚಲ ಅಭಿಮಾನವೇ ಇವರಿಗಿರುವ ಸ್ಪೂರ್ತಿ.
    ಎಂಟೆಬ್ಬೆಯಕಾರ್ಯಾಚರಣೆಯಲ್ಲಿ ಇವರು ನಿರಂತರವಾಗಿ ಕಳುಹಿಸುತ್ತಿದ್ದ ಮಾಹಿತಿಯಾಧಾರದ ಮೇಲೇ ಎಲ್ಲವೂ ನಿರ್ಭರವಾಗಿತ್ತು. ಇಸ್ರೇಲಿ ಒತ್ತೆಯಾಳುಗಳನ್ನು ಎಲ್ಲಿಟ್ಟಿದ್ದಾರೆ, ಅಪಹರಣಕಾರು ಎಷ್ಟು ಜನರಿದ್ದಾರೆ,ಅವರ ವಿವರಣೆ. ಏರ್ಪೋರ್ಟಿನ ವಿವರಣೆ,ಎಷ್ಟು ಬಾಗಿಲುಗಳಿವೆ,ಎಷ್ಟು ಮೆಟ್ಟಿಲುಗಳಿವೆ, ಈ ಸಣ್ಣ ಸಣ್ಣ ವಿವರಗಳೂ ತುಂಬ ಮಹತ್ವದ ವಿಷಯ. ಇನ್ನೊಂದು ಕಡೆಗಣಿಸಲಾಗದ ವಿಷಯವೆಂದರೆ ಯಹೂದಿಗಳು ಮಾರವಾಡಿಗಳ ತರಹ, ಚಿನ್ನ,ಬೆಳ್ಳಿ,ವಜ್ರಗಳ ವ್ಯಾಪಾರ ಇವರಿಗೆ ಅನುವಂಶೀಯವಾಗಿ ಬಂದ ಬಳುವಳಿ, ಹಾಗಾಗಿ ಅಫ್ರಿಕಾದ ದೇಶಗಳಲ್ಲಿ ಇವರ ಪ್ರಭಲತೆಯನ್ನು ಅಲ್ಲಿಯ ಸರಕಾರವೂ ಒಪ್ಪಿಕೊಳ್ಳುತ್ತದೆ. ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಇದೊಂದು ಮಹತ್ತರ ಅಂಶ.
    ಈ ಶ್ರೀಮಂತ ಇಸ್ರೇಲಿಯರ ವರ್ಚಸ್ಸಿನಿಂದಾಗಿ ಉಗಾಂಡದ ಪಕ್ಕದ ದೇಶ ಕೆನ್ಯಾ , ಇಸ್ರೇಲಿ ಸೈನ್ಯದ ಕಾರ್ಯಾಚರಣೆಗೆ ಸಹಾಯ ಮಾಡಲು ಒಪ್ಪಿಕೊಂಡಿತು. ಅದರಂತೆ ಸೈನ್ಯದ ಉನ್ನತ ಅಧಿಕಾರಿಗಳು ಬೋಯಿಂಗ್ 707 ವಿಮಾನದಲ್ಲಿ ಬಂದಿಳಿದುಬಿಟ್ಟರು. ಪ್ಲಾನಿನ ಪ್ರಕಾರ ಇಸ್ರೇಲಿನಿಂದ ಹರ್ಕ್ಯುಲಿಸ್ ಉಗಾಂಡಕ್ಕೆ ತಲುಪುವವಷ್ಟು ಹೊತ್ತಿಗೆ ವಿಮಾನದಲ್ಲಿ ಸ್ವಲ್ಪವೇ ಇಂಧನ ಉಳಿದು ಕೊಂಡಿರುತ್ತದೆ. ಎಂಟೆಬ್ಬಯ ಕಾರ್ಯಾಚರಣೆ ಮುಗಿಸಿ ಅಲ್ಲಿಂದ ಕೆನ್ಯಾದ ನೈರೋಬಿಯಲ್ಲಿಳಿದು ಇಂಧನ ತುಂಬಿಸಿಕೊಂಡು ಇಸ್ರೇಲಿಗೆ ಮರುಳುವುದೆಂದು ಒಪ್ಪಂದವಾಯಿತು.
    ನಾಲ್ಕು ಹರ್ಕ್ಯುಲಿಸ್ ವಿಮಾನಗಳು ಶತ್ರುದೇಶದ ರಡಾರುಗಳಿಂದ ಕಣ್ತಪ್ಪಿಸಿ ಉಗಾಂಡ ತಲುಪುವಷ್ಟರಲ್ಲಿ ಮಧ್ಯರಾತ್ರಿಯ ಹನ್ನೆರಡು ಗಂಟೆ. ಮೊದಲನೆಯ ವಿಮಾನ ಭೂಸ್ಪರ್ಶ ಮಾಡಿ ರನ್ ವೇಯ ಕೊನೆಯನ್ನು ತಲುಪಿತು. ಪ್ಲೇನು ಇನ್ನೂ ಚಲಿಸುತ್ತಿದ್ದಾಗಲೇ ಕೆಲವು ಕಮಾಂಡೊಗಳು ಹೊರಗೆ ಧುಮಿಕಿ ರನ್ ವೇಯ ಇಕ್ಕೆಲಗಳಲಲ್ಲಿ ಬೆಳಕಿನ ಬೀಕನ್ನುಗಳನ್ನು ಇಟ್ಟು ಕೊಳ್ಳುತ್ತಾ ಹೋದರು. ಇದರಿಂದ ಇತರೆ ಮೂರು ವಿಮಾನಗಳು ಸುಸೂತ್ರವಾಗಿ ಭೂಸ್ಪರ್ಶ ಮಾಡಿದವು. ವಿಮಾನದಿಂದ ಭರ್ ಭರ್ರೆನ್ನುತ್ತಾ ಕಮಾಂಡೋಗಳು ಕಾರುಗಳನ್ನು ಡ್ರೈವ್ ಮಾಡಿಕೊಂಡು ಗೇಟಿನ ಕಡೆ ದೌಡಾಯಿಸಿದರು. ಎಲ್ಲವೂ ರಿಹರ್ಸಲ್ ಮಾಡಿದಂತೇ ನಡೆಯುತ್ತಿತ್ತು.
    ಗೇಟಿನಲ್ಲಿದ್ದ ಇಬ್ಬರು ಗಾರ್ಡುಗಳು ನಿರೀಕ್ಷಿಸಿದಂತೆ 'stop'ಎಂದು ಗುಡುಗಿದರು, ಅದು ಅವರ procedure.  ಈದಿ ಅಮೀನೇ ಇರಬಹುದೆಂದು ಗೇಟಿಗೆ ಹಾಕಿದ್ದ ಅಡ್ಡಕಂಬಿಯನ್ನು ಇನ್ನೇನು ಎತ್ತ ಬೇಕು ಅನ್ನುವಷ್ಟರಲ್ಲಿ ಹತ್ತಿರಕ್ಕೆ ಸಲ್ಯೂಟ್ ಮಾಡಲು ಬಂದ ಗಾರ್ಡ ಕಣ್ಣುಕಿರಿದಾಗಿಸಿ ಮುಂದಿನ ಸೀಟಿನಲ್ಲಿದ್ದ ವ್ಯಕ್ತಿಯನ್ನು ಅನುಮಾಸ್ಪದವಾಗಿ ನೋಡುತ್ತಲೇ ಟ್ರಿಗರಿನ ಕಡೆ  ಕೈ ಚಲಿಸಲು  ಶುರುವಾಯ್ತು.  ಇನ್ನು  ತಡಮಾಡಿದರೆ ಶೂಟ್ ಮಾಡಿಬಿಡುತ್ತಾರೆಂದು ,ಸೈಲೆನ್ಸರ್ ಅಡವಳಿಸಿದ ಪಿಸ್ತೊಲಿನಿಂದ ಕ್ಷಣಾರ್ದದಲ್ಲಿ ನೆಲಕ್ಕುರಿಳಿಸಿಬಿಟ್ಟರು ಕರ್ನಲ್ ನೆತನ್ಯಾಹು. ಆದರೆ ಅವರಿಬ್ಬರೂ ಸತ್ತಿರಲಿಲ್ಲ . ಇದನ್ನು ಗಮನಿಸಿದ ಹಿಂದಿನಿಂದ ಬಂದ ಕಮಾಂಡೊ, ಹೀಗೆ ಇವರನ್ನು ಬಿಟ್ಟರೆ ಎಚ್ಚರವಾದಮೇಲೆ ಹಿಂದಿನಿಂದ ಆಕ್ರಮಣ ಮಾಡುವ ಸಾಧ್ಯತೆ ಇರುತ್ತದೆ ಎಂದು ,ಬಂದೂಕಿನಿಂದ ಡಮಾರ್ ಎಂದು ಗುಂಡು ಹಾರಿಸಿ ಮುಗಿಸೇಬಿಟ್ಟ.
    ಇಡೀ ಕಾರ್ಯಾಚರಣೆಯ ಮೂಲಮಂತ್ರವಾಗಿದ್ದ "Surprise Element" ಅನಿರೀಕ್ಷತತೆಯ ತಂತ್ರ ,ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಈ ಗೌಪ್ಯತೆಯನ್ನು ಆದಷ್ಟು ಕಾಪಾಡಿಕೊಂಡಿರಬೇಕಾದ ನಿಯಮ ಅಲ್ಲಿಗೆ ಮುಗಿದೇಬಿಟ್ಟಿತು. ಆಸುಪಾಸಿನಲ್ಲಿದ್ದ ಉಗಾಂಡದ ಸೈನಿಕರು ಗಾಬರಿಗೊಂಡು ಹಿಗ್ಗಾ ಮುಗ್ಗಾ ಫೈರಿಂಗ್ ಮಾಡತೊಡಗಿದರು. ಒಳಗಿದ್ದ ಒತ್ತೆಯಾಳುಗಳು ಈ ಟೆರರಿಸ್ಟುಗಳೇ ಗುಂಡು ಹಾರಿಸುತ್ತಿದ್ದಾರೆ ಇನ್ನೇನು ನಮ್ಮ ಕಥೆ ಮುಗಿದಹಾಗೇ ಎಂದು ಗಾಬರಿಗೊಂಡರು. ಈಗೇನು ಮಾಡುವುದು ಎನ್ನುವ ಅನಿಶ್ಚಿತೆ ಕಮಾಂಡೋಗಳಲ್ಲೂ ಉಂಟಾಯಿತು. ಇಂತಹ ಪರಿಸ್ಥಿತಿಯನ್ನು ಹಲವಾರು ಬಾರಿ ಅನುಭವಿಸಿದ್ದ ಕರ್ನಲ್ ನೆತನ್ಯಾಹು ತ್ವರಿತವಾಗಿ ರಣತಂತ್ರವನ್ನು ಬದಲಿಸಿದರು. ಮೊದಲನೇ ಕಮಾಂಡೊ ಪಡೆಯನ್ನು ಒತ್ತೆಯಾಳುಗಳಿದ್ದ ಕಡೆ ದೌಡಾಯಿಸಿದರು. ಎರಡನೇ ಪಡೆಯನ್ನು ಉಂಗಾಂಡದ ಸೈನಿಕರನ್ನು ಹಿಮ್ಮೆಟ್ಟಲು ಆದೇಶಿಸಿದರು. ಇದನ್ನೆಲ್ಲಾ ಮುಂದೆನಿಂತು ಆದೇಶಿಸುವ ಸಮಯದಲ್ಲೇ ATC tower ನ ಮೇಲಿದ್ದ ಒಬ್ಬ ಉಗಾಂಡದ ಸೈನಿಕ ಇವರ ಮೇಲೆ ಗುಂಡು ಹಾರಿಸೇ ಬಿಟ್ಟ. ಕುಸಿದು ಬಿದ್ದ ನೇತನ್ಯಾಹು. ಕಾಮಾಂಡೋಪಡೆಗಳಲ್ಲಿ ಆಹಾಕಾರ ಉಂಟಾಯಿತು. ನಮ್ಮ ಕಮಾಂಡಿಂಗ್ ಆಫೀಸರ್ಗೆ ಗುಂಡೇಟು ಬಿತ್ತು....ಅದರಲ್ಲೇ ಸಾವರಿಸಿಕೊಂಡು ಅಪಹರಣಕಾರರನ್ನು ಮೊದಲು ಮುಗಿಸಿಬಿಡಿ ಎಂದು ಆದೇಶಿಸಿದರು. ಕಮಾಂಡೋಗಳು ಇನ್ನಿಲ್ಲದ ರೋಷದಿಂದ ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದು ಬಿಟ್ಟರು. ಒತ್ತೆಯಾಳುಗಳಿಗೆ ಇಸ್ರೇಲಿ ಮಾತೃಭಾಷೆಯಲ್ಲಿ 'ನಾವು ಇಸ್ರೇಲಿ ಸೈನಿಕರು ನಿಮ್ಮನ್ನು ಕರೆದು ಕೊಂಡು ಹೋಗಲು ಬಂದಿದ್ದೇವೆ' ಎಂದು ಕೂಗಿ ಹೇಳಿದಾಗಲಂತೂ ಇದೇನಿದು ಪವಾಡ...ಪವಾಡ  ಎಂದರು ಒಕ್ಕೊರಲಿನಿಂದ. ಉಳಿದ ಇಬ್ಬರು ಅರಬ್ ಆತಂಕವಾದಿಗಳು ಅವಿತಿದ್ದ ಬಾತ್ ರೂಮಿನಲ್ಲೇ ಅವರನ್ನು ಛಿದ್ರಗೊಳಿಸಿದರು.
    ಅದೇ ಸಮಯಕ್ಕೆ ನಾಲ್ಕನೇ ಹರ್ಕ್ಯುಲಿಸ್ ಏರೋಪ್ಲೇನು ಒತ್ತಯಾಳುಗಳಿದ್ದ ಕಟ್ಟಡದ ಸಮೀಪವೇ ಬಂದಿತು. ತ್ವರಿತವಾಗಿ ಎಲ್ಲರನ್ನು ಅದರಲ್ಲಿ ಕೂರಿಸಿ ಕೆಲವೇ ನಿಮಿಷಗಳಲ್ಲಿ ಎಂಟೆಬ್ಬೆಯಿಂದ ಹೊರಟೇ ಬಿಟ್ಟಿತು. ಸುಮಾರು 45 ಉಗಾಂಡದ ಸೈನಿಕರು ಹತರಾದರು. ನಿಧಾನವಾಗಿ ಗುಂಡಿನ ಶಬ್ದಗಳು ಆಗೊಂದು ಈಗೊಂದು ಕೇಳಿ ಬರುತ್ತಿತ್ತು. ಕರ್ನಲ್ ನೆತನ್ಯಾಹುವನ್ನು ಇಸ್ರೇಲಿ ಡಾಕ್ಟರುಗಳು ತಮ್ಮ ಸುಪರ್ದಿಗೆ ತೆಗೆದು ಕೊಂಡು ಅವರನ್ನು ಉಳಿಸಲು ಇನ್ನಿಲ್ಲದ ಪ್ರಯತ್ನಮಾಡತೊಡಗಿದರು. ಆದರೆ ನೆತ್ತರು ತುಂಬಾ ಹರಿದಿತ್ತು.
    ಕಾರ್ಯಾಚರಣೆಯನ್ನು ಮುಗಿಸಿದ ಮೂರು ಹರ್ಕ್ಯುಲಸ್ ವಿಮಾನಗಳು ಕೆನ್ಯದ ನೈರೋಬಿಯ ಕಡೆ ಹೊರಟವು. ನಾಲ್ಕನೆಯ ವಿಮಾನದಲ್ಲಿದ್ದ ಕಮಾಂಡೋಗಳಿಗೆ ಇನ್ನೊಂದು ಅಂತಿಮ task ಉಳಿದಿತ್ತು. ಇನ್ನೇನು ಕೆಲವೇ ಸಮಯದಲ್ಲಿ ಈದಿ ಅಮೀನನಿಗೆ ವಿಷಯತಿಳಿದು ಅವಮಾನದಿಂದ ಕುದ್ದು ಹೋಗುತ್ತಾನೆ. ಸೇಡು ತೀರಿಸಿ ಕೊಳ್ಳಲು ಯುಧ್ಧ ವಿಮಾನಗಳನ್ನು ಇಸ್ರೇಲಿ ಪ್ಲೇನುಗಳ ಮೇಲೆ ಆಕ್ರಮಣಕ್ಕೆ ಆದೇಶಿಸ ಬಹುದು. ಕೆಲವೇ ನಿಮಿಷಗಳಲ್ಲಿ ಎಂಟಬ್ಬೆಯಲ್ಲಿದ್ದ ಎಲ್ಲಾ ಹನ್ನೊಂದು ಯುಧ್ಧವಿಮಾನಗಳನ್ನು ನೆಲಸಮ ಮಾಡಿ ಅವರೂ ಅಲ್ಲಿಂದ ನಿರ್ಗಮಿಸುತ್ತಾರೆ.
    ಈದಿ ಅಮೀನನಿಗೆ ಅನ್ನಿಸಿರಬಹುದು... ಬೀದಿಲಿ ಹೋಗ್ತಿದ್ದ ಮಾರಿನ ಮನಿಗ್ಯಾಕ್ ಕರಕಂಡು ಬಂದೆ. ಸುಖಾಸುಮ್ಮನೆ ಹನ್ನೊಂದು ಯುಧ್ಧ ವಿಮಾನಗಳನ್ನ ಕಳೊಕೊಂಡೆ, 45 ಸೈನಿಕರನ್ನು ಕಳೊಕೊಂಡೆ ಅಂತರಾಷ್ಟ್ರವಲಯದಲ್ಲಿ ಮಂಗನಾದೆ....
    ಎಂಟು ಗಂಟೆಯ ಪ್ರಯಾಣದ ನಂತರ ,ಎಂಟು ದಿನಗಳ ನರಕಯಾತನೆಯನಂತರ 103 ಇಸ್ರೇಲಿಯರು ಮರಳಿ ಮನೆಗೆ ಬಂದರು.
    ಜಗತ್ತೇ ನಿಬ್ಬರಗಾಗಿ ಈ  ನಂಬಲಸಾಧ್ಯವಾದ ಸಾಹಸಗಾಥೆಗೆ ಸಲ್ಯೂಟ್ ಹೊಡೆಯಿತು. ಆದರೆ ಇಸ್ರೇಲಿಗರು ತಮ್ಮನ್ನಗಲಿದ ಗಂಡೆದೆಯ ವೀರ ಕರ್ನಲ್ ಜೋನಾತನ್ ನೆತನ್ಯಾಹುವುನ ಬಲಿದಾನದ ಬೆಲೆಯನ್ನು ಎಂದೂ ಮರೆತಿಲ್ಲ.

No comments:

Post a Comment