Thursday, October 27, 2016

ದಾವಣಗೆರೆ ದಿನಚರಿ-4

ದಾವಣಗೆರೆ ದಿನಚರಿ-4




ನಮ್ಮ ತಂದೆಯವರು 'ದೇಹದಾನಿ' ಎಂದು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಬರೆದುಕೊಟ್ಟ ಒಪ್ಪಂದಕ್ಕೆ ಈಗಾಗಲೇ ಆರು ವರ್ಷಗಳಾದವು. ಮೊನ್ನೆ ಅಂದರೆ 22 ಅಕ್ಟೋಬರ್ 2016 ರಂದು ಅವರನ್ನು ಚನ್ನಗಿರಿಯಿಂದ ದಾವಣಗೆರೆಗೆ ಕರೆದುಕೊಂಡು ಹೋದೆವು. ಅಂದು ದೇಹದಾನಿಗಳ ವಾರ್ಷಿಕ ಸಮ್ಮೇಳನ. ಸುಮಾರು ಐನೂರು ದೇಹದಾನಿಗಳಿದ್ದರು. ಎಲ್ಲಾ ಗುಂಪಿನ ದಾನಿಗಳಿದ್ದರು. ಗಂಡಸರು,ಹೆಂಗಸರು,ಹಳ್ಳಿಮಂದಿ,ಸಾಫ್ಟ್ವೇರ್ ಎಂಜಿನಿಯರ್ಗಳು ಮತ್ತು ವಿದ್ಯಾರ್ಥಿಗಳು. ಇದೊಂದು ಒಳ್ಳೆಯ ಸಂಕಲ್ಪ. ಈ ವರ್ಷದಿಂದ ಒಂದು ಮಹತ್ತರ ಮಾರ್ಪಾಡು ಏನಂದರೆ, ಈ ದಾನಿಗಳ ಮರಣಾನಂತರ ಉಪಯುಕ್ತವಾದ ಅಂಗಾಂಗಗಳನ್ನು ತೆಗೆದುಕೊಂಡು ದೇಹವನ್ನು ಅವರ ವಾರಸುದಾರಿಗೆ ವಾಪಸು ಕೊಡುತ್ತಾರಂತೆ,ಅಂತಿಮ ಕ್ರಿಯೆಯ ಪ್ರಕ್ರಿಯೆಗೆ ಅನುವಾಗಲು. ಇಂತಹವನ್ನೆಲ್ಲಾ ನಿರ್ಭಾವುಕರಂತೆ ಬರೆಯುವುದೂ ಕಷ್ಟವೇ, ಅದೂ ನಮ್ಮವರೇ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಾಗ. ಆದರೆ ಅವರ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ. ಸರಿ ಇದೇ ಅವಕಾಶ ಅವರಿಗೆ ಸಂತೋಷವಾಗುವಂತೆ ನಾವೂ ನಡೆದು ಕೊಳ್ಳಲು.
ಈಗ ಸ್ಮಾರ್ಟ್ ಸಿಟಿಯಾಗಿ ಪರಿವರ್ತಿತವಾಗುವುದರ ಹೊಸಲಲ್ಲಿ ನಿಂತಿರುವ ದಾವಣಗೆರೆ ಹೇಗಿದೆ ನೋಡೋಣ ಎಂದು ಒಂದು ರೌಂಡು ಹೊರಟೆವು. ದಿನದ ಶುಭಾರಂಭವಾಗಿದ್ದು ಇಲ್ಲಿಯ ಪ್ರಖ್ಯಾತ ಬೆಣ್ಣೆ ದೋಸೆ. ದೋಸೆಹಿಟ್ಟಿನಲ್ಲಿ ಇಲ್ಲಿಯದೇ ವಿಷೇಶ ಉತ್ಪನ್ನವಾದ ಮುಂಡಕ್ಕಿಯನ್ನು ಬೆರಸುವುದರಿಂದ ದೋಸೆ ದಪ್ಪವಿದ್ದರೂ ಗರಿಗರಿಯಾಗಿರುತ್ತದೆ. ಅರ್ಧ ಬೆಂದಮೇಲೆ ಚಿಕ್ಕ ಚಿಕ್ಕ ಬೆಣ್ಣೆ ಉಂಡೆಗಳನ್ನು ಮೇಲಿಂದ ಹಾಕುತ್ತಾರೆ ಆಗ ಶುರುವಾಗುತ್ತದೆ ನೋಡಿ ಅದರ ಗಮ್ಮತ್ತು, ಖಾರವಾದ ಚಟ್ನಿ ಮತ್ತು ಸಪ್ಪೆ ಆಲೂಗಡ್ಡೆ ಪಲ್ಯ 
ಈ combination ದಾವಣಗೆರೆಯ ವೈಶಿಷ್ಟ್ಯ. ದಾವಣಗೆರೆಯ ಇನ್ನೊಂದು ವೈಶಿಷ್ಟ್ಯ ಇಲ್ಲಿಯ ನೂರಾರು ಭಟ್ಟಿಗಳಲ್ಲಿ ತಯಾರಾಗುವ ಗರಿಗರಿ ಮುಂಡಕ್ಕಿ. 'ಹೊಟ್ಟೆ ನಂಜಪ್ಪನ ಖಾರಾ ಮಂಡಕ್ಕಿ' ನೆನಸಿಕೊಂಡರೆ ಬಾಯಿಚಪ್ಪರಿಕೆ ತಾನಾಗೇ ಬರುತ್ತದೆ ಎನ್ನುತ್ತಾರೆ ನಮ್ಮ ತಂದೆ! ಒಂದು ಯಕಶ್ಚಿತ್ ಖಾರಾ ಮಂಡಕ್ಕಿಗೆ ಈ ಹಂತದ ಪ್ರಸಿದ್ಧಿ ಬರಲು ನಂಜಪ್ಪನವರೇ ಕಾರಣವಂತೆ. ಅವತ್ತೇ ಭಟ್ಟಿಯಿಂದ ತಂದ ಗರಿಗರಿ ಮಂಡಕ್ಕಿ ಮತ್ತು ಆಗತಾನೇ ಎಲ್ಲರ ಮುಂದೇ ತಯಾರಾಗುತ್ತಿದ್ದ ಬಿಸಿ ಬಿಸಿ ಖಾರಾ ಮತ್ತು ಮೆಣಸಿನಕಾಯಿ ಬಜ್ಜಿ, ಚಪ್ಪರಿಕೆ ಬರದೆ ಇನ್ನೇನು ಮತ್ತೆ!. ಸಂಜೆ ನಾಲ್ಕುಗಂಟೆಗೆ ಬಾಗಿಲು ತೆಗೆಯುವ ಮೊದಲೇ ಕ್ಯೂ ಇರುತ್ತಿತ್ತಂತೆ. ದಾವಣಗೆರೆಯನ್ನು ಹಾದು ಹೋಗುತ್ತಿದ್ದ NH 4 ನ ವಾಹನಗಳು  ಮಂಡಿಪೇಟೆಯ ಇವರ ಅಂಗಡಿಯಿಂದ ಖಾರಾ ಮಂಡಕ್ಕಿ ಕಟ್ಟಿಸಿಕೊಂಡು ಮುಂದುವರೆಯುತ್ತಿದ್ದವಂತೆ. ಕೊನೆಯ ಪ್ರದರ್ಶನದ ಸಿನಿಮಾ ನೋಡಿಕೊಂಡು ನಡು ರಾತ್ರಿಯಲ್ಲಿ ಇಲ್ಲಿಗೆ ಬಂದು ಖಾರಾ ಮಂಡಕ್ಕಿ ಸವಿದು ಹೋಗುವುದನ್ನೇ ಒಂದು ಆಚರಣೆಯಂತೆ ಮಾಡಿಕೊಂಡಿದ್ದರಂತೆ.

ಐವತ್ತರ ದಶಕದಲ್ಲಿ ದಾವಣಗೆರೆಯಲ್ಲಿ  SSLC ವ್ಯಾಸಂಗ ಮಾಡುತ್ತಿದ್ದ ನಮ್ಮ ತಂದೆ ,ರಾಷ್ಟ್ರಕವಿ G S ಶಿವರುದ್ರಪ್ಪನವರ ಮೆಚ್ಚಿನ ಶಿಷ್ಯರಂತೆ. ನಾಡಿಗೆರ್ ಗೋವಿಂದರಾಯರು ಅವರಿಗೆ ನೆನಪಿರುವ ಇನ್ನೊಬ್ಬ ಕನ್ನಡದ ಮಹಾನ್ ಕವಿ.
ನೆಂಟರೊಬ್ಬರ ಮನೆಯಲ್ಲಿ ಊಟ ಮಾಡಿಕೊಂಡು, ಇನ್ನೊಬ್ಬ ನೆಂಟರ ಮನೆಯಲ್ಲಿ ವಿದ್ಯುತ್ ದೀಪದ ಸೌಲಭ್ಯವಿದ್ದುದರಿಂದ ಅವರ ಮನೆಯಲ್ಲಿ ಓದಿಕೊಂಡು ಬೆಳೆದವರು. ಮುಂದೆ ಕೆಲವೇ ವರ್ಷಗಳಲ್ಲಿ ಉಪಾಧ್ಯಾಯರಾಗಿ ದಾವಣಗೆರೆಯನ್ನು ತೊರೆದು ಮಲೆನಾಡಿಗೆ ಹೋಗಬೇಕಾದ ಅನಿವಾರ್ಯತೆ. ಹಾಗೆ ಹೋದವರು ಮಧ್ಯದಲ್ಲಿ ಬಂದು ಒಬ್ಬ ದಾವಣಗೆರೆಯ ಹುಡುಗಿಯನ್ನೇ ಮದುವೆ ಮಾಡಿಕೊಂಡು ಇಲ್ಲಿಯ ನಂಟನ್ನು ಬ್ರಹ್ಮಗಂಟಿನಲ್ಲಿ ಕಟ್ಟಿಕೊಂಡು ಹೊರಟೇ ಬಿಟ್ಟರು!...ಇದನ್ನೆಲ್ಲಾ ಅವತ್ತು ದಾವಣಗೆರೆಯನ್ನು ಸುತ್ತಿಸುತ್ತಿದ್ದಾಗ ಹೇಳಿದರು.
ಇನ್ನು ನಮ್ಮ ತಾಯಿಯ ಬಗ್ಗೆ ಹೇಳಬೇಕೆಂದರೆ ಅಧ್ಭುತ ಗಾಯಕಿ. ಚಿಕ್ಕಂದಿನಿಂದಲೇ ಅವರ ಸೋದರಮಾವ ಶಾಮಣ್ಣನಿಂದ ಸಾಂಪ್ರದಾಯಕವಾಗಿ ಸಂಗೀತ ಕಲಿತವರು. ಸಂಗೀತ ಶಾಮಣ್ಣ ಎಂದು ಪ್ರಸಿಧ್ಧಿ ಪಡೆದು,ಆಸ್ಥಾನ ಗಾಯಕರು ಎಂಬ ಬಿರುದನ್ನೂ ಪಡೆದುಕೊಂಡ ಮಹಾನ್ ವ್ಯಕ್ತಿ.  ನಮ್ಮ ತಾಯಿಯವರ ಜೊತೆ ಇನ್ನೊಬ್ಬ 'ನಾಟಕದ ಹುಡುಗನಿಗೂ' ಸಂಗೀತ ಕಲಿಸುತ್ತಿದ್ದರಂತೆ. ಶಾಮಣ್ಣನವರು ಈ ನಾಟಕದ ಹುಡುಗನ ಶ್ರಧ್ಧೆಯನ್ನು ತುಂಬಾ ಮೆಚ್ಚಿಕೊಂಡು ನಮ್ಮ ತಾಯಿಯ ಮುಂದೆ ಅವರ ಬಗ್ಗೆ ತುಂಬಾ ಹೊಗಳುತ್ತಿದ್ದರಂತೆ, 'ನೋಡುತ್ತಿರು  ಅಂಬುಜಾ, ಮಂದೆ ಈ ವ್ಯಕ್ತಿ ನಟನೆಯಲ್ಲಿ ಮತ್ತು ಗಾಯನದಲ್ಲಿ ತುಂಬಾ ಒಳ್ಳೆಯ ಹೆಸರು ಮಾಡುತ್ತಾನೆ' ಎನ್ನುತ್ತಿದ್ದರಂತೆ. ಕಾಲಾನಂತರ ಅದು ನಿಜವಾಯಿತು. ಅವರೇ ಕನ್ನಡ ಚಿತ್ರರಂಗದ ನಟಸಾರ್ವಭೌಮ,ವರನಟ ಡಾ| ರಾಜ್ ಕುಮಾರ್!.
ದಾವಣಗೆರೆ ನಾಟಕ ಕಂಪನಿಗಳ ತವರೂರೂ ಹೌದು. ಗುಬ್ಬಿವೀರಣ್ಣನ ಕಂಪನಿ ಅಲ್ಲದೆ ಶಿವಶಂಕರ್ ಎನ್ನುವವರು ಸ್ಥಾಪಿಸಿದ ನಾಲ್ಕು ನಾಟಕದ ಕಂಪನಿಗಳಿದ್ದವು. G V ಐಯ್ಯರ್,ಬಾಲಕೃಷ್ಣ, ನರಸಿಂಹರಾಜು,ಪಾಪಮ್ಮ ಮತ್ತು 'ಮುತ್ತುರಾಜ್' ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮುಂದೊಮ್ಮೆ ರಾಜ್ ರವರು ಚಲನಚಿತ್ರಂಗ ಪ್ರವೇಶಿಸಿದರೂ, ಅವರ ಚೊಚ್ಚಲು ಚಿತ್ರ'ಬೇಡರ ಕಣ್ಣಪ್ಪ'  ನಾಡಿನಲ್ಲೆಲ್ಲಾ ಪ್ರಸಿಧ್ಧಿ ಪಡೆದ  ಚಲನಚಿತ್ರವಾದರೂ ನಾಟಕಗಳ ಮತ್ತು ದಾವಣಗೆರೆಯ ನಂಟನ್ನು ಬಹಳ ದಿನಗಳವರೆಗೂ ಉಳಿಸಿಕೊಂಡಿದ್ದರಂತೆ. ಅವರು ಮದ್ರಾಸಿಗೆ ಸ್ಥಳಾಂತರಿಸಿದ ಮೇಲೂ ದಾವಣಗೆರೆ ನಾಟಕ ಕಂಪನಿಗಳೊಂದಿಗೆ ಸಂಪರ್ಕದಲ್ಲಿದ್ದರಂತೆ.

ದಾವಣಗೆರೆಯ ಆಯ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೇಗಾಯಿತು?
ಇದಕ್ಕೆ ಹಲವಾರು ಕಾರಣಗಳಿವೆ. ಕರ್ನಾಟಕದ ಹೃದಯಭಾಗದಲ್ಲಿರುವ ಈ ನಗರ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಬೆಂಗಳೂರು,ಹುಬ್ಬಳ್ಳಿ,ಪೂನಾ, ಮುಂಬೈ ಮತ್ತು ಕರ್ನಾಟಕದ ಇತರೆ ಪ್ರಮುಖ ನಗರಗಳೊಂದಿಗೆ ಒಳ್ಳೆಯ ಸಾರಿಗೆ ಸಂಪರ್ಕವಿದೆ.  ಇಲ್ಲಿಯ ಕೈಗಾರಿಕಾ ಇತಿಹಾಸವೂ ಒಂದು ಮಹತ್ತರ ವಿಷಯ. 1901 ರಲ್ಲೇ ಇಲ್ಲಿ ಮುನಿಸಿಪಾಲಿಟಿ ಇತ್ತಂತೆ. ಅದರ ಫಲವಾಗಿ ಈಗಲೂ ಇಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ತ್ಯಾಜ್ಯವಿಲೇವಾರಿ ಉತ್ತಮ ಮಟ್ಟದಲ್ಲಿದೆ. ಇಲ್ಲಿರುವ ನಾಲ್ಕು ಎಂಜನಿಯರಿಂಗ್ ಮತ್ತು ನಾಲ್ಕು ಮೆಡಿಕಲ್ ಕಾಲೇಜುಗಳು ಸೇರಿದಂತೆ ಇತರೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ದೇಶದಾದ್ಯಂತ ಹೆಸರಿದೆ. ಮಧ್ಯ ಹದಗೆಟ್ಟು ಹೋಗಿದ್ದ ಮೂಲಭೂತ ಸೌಕರ್ಯಗಳ ಪರಿಸ್ಥಿತಿ ಸುಧಾರಿಸುವ ಹಾಗೆ ಕಾಣುತ್ತದೆ.
ಕೆಲವು ಹಿರಿಯರು ಈಗಲೂ , ಕೆಂಗಲ್ ಹನುಮಂತಪ್ಪನ ಪ್ರಭಾವದಿಂದ ಬೆಂಗಳೂರು ರಾಜಧಾನಿಯಾಯಿತು, ನಿಜಲಿಂಗಪ್ಪನ ಪ್ರಭಾವದಿಂದ ಚಿತ್ರದುರ್ಗ ಜಿಲ್ಲೆಯಾಗಿ ಮೆರೆಯಿತು.  ಅಸಲಿಗೆ ದಾವಣಗೆರೆ ಆಗ ಈ ಎರಡೂ ಬಿರುದುಗಳಿಂದ ವಂಚಿತವಾಗಿತ್ತು, ಈಗ ನ್ಯಾಯಸಿಗಬಹುದು ಎನ್ನುತ್ತಾರೆ. ಈ ನಗರದ ಅಭಿಮಾನಿ ನಾಗರೀಕರ ಆಶಯವೇನೆಂದರೆ , ಕುತಂತ್ರ ರಾಜಕೀಯದಿಂದ,ಮಿಲ್ ಮಾಲೀಕರು ಮತ್ತು ಕಮ್ಯುನಿಷ್ಟರ ದುರ್ವರ್ತನೆಯಿಂದ ಅವಕಾಶಗಳಿಂದ ವಂಚಿತವಾದ ಈ ನಗರ ಒಂದು ಆದರ್ಶ ನಗರವಾಗಿ ಮುಂಬರುವ ದಿನಗಳಲ್ಲಿ ಮೂಡಲಿದೆ, thanks to Smart City Project.

No comments:

Post a Comment