Friday, October 14, 2016

ಕಾಶ್ಮೀರದಲ್ಲಿ ಕೃಷ್ಣಮೂರ್ತಿ

ಕಾಶ್ಮೀರದಲ್ಲಿ ಕೃಷ್ಣಮೂರ್ತಿ

ಒಂದು ತಿಂಗಳ ವಾರ್ಷಿಕ ರಜೆ ಮುಗಿಸಿಕೊಂಡು  ಅಲಹಬಾದಿನ ವಾಯುನೆಲೆಗೆ ಮರಳುವ ಸಮಯ ಬಂತು. ಹೊರಡುವ ಮುನ್ನ ವಾಡಿಕೆಯಂತೆ ಸಪ್ನ ಬುಕ್ ಅಂಗಡಿಗೆ ಭೇಟಿಕೊಟ್ಟು ನನಗೆ ಮತ್ತು ಅಲಹಬಾದಿನ ಸ್ನೇಹಿತರಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಿದ ಮೇಲೆ ರೈಲು ಹತ್ತುವ ಪ್ಲಾನು ಇತ್ತು.  ಆ ಸಲದ 'ಅಲೆ' ಶಿವರಾಮ ಕಾರಂತರ ಪುಸ್ತಕಗಳದ್ದು. 'ಮೂಕಜ್ಜಿಯ ಕನಸುಗಳು' ಪುಸ್ತಕಕ್ಕೆ ‌ಪುರಸ್ಕಾರ ಸಿಕ್ಕು ಹಲವೇ ವರ್ಷಗಳು ಕಳೆದಿದ್ದರೂ ಆ ಪುಸ್ತಕವನ್ನಿನ್ನೂ ಓದಿರಲಿಲ್ಲ. ಅದರ ಜೊತೆಗೆ ಕಾರಂತರ ಇನ್ನೂ ಅನೇಕ ಪುಸ್ತಕಗಳನ್ನು ಖರೀದಿಸಿ ಇಂಗ್ಲೀಷು ಪುಸ್ತಕಗಳ ವಿಭಾಗಕ್ಕೆ ಹೋದೆ. ನಿರ್ದಿಷ್ಟವಾಗಿ ಇಂತದೇ ಪುಸ್ತಕ ಕೊಂಡುಕಳ್ಳುವ ಇರಾದೆ ಏನೂ ಇರಲಿಲ್ಲವಾದರೂ ಹಾಗೇ ಕಣ್ಣಾಡಿಸುತ್ತಾ ಬಂದೆ.  ಜಿದ್ದು ಕೃಷ್ಣಮೂರ್ತಿಯವರ ಪು‌ಸ್ತಕಗಳ ಉದ್ದನೆಯ ಸಾಲೇ ಇತ್ತು. ಅವರ ಬಗ್ಗೆ ಎಲ್ಲೋ  ಹೀಗೇ ಓದಿದ ನೆನಪು‌,ಆದರೆ ನಿಖರವಾಗಿ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಇವರದೂ ಒಂದು ಪುಸ್ತಕವಿರಲಿ ಎಂದು ಇದ್ದುದರಲ್ಲೇ ಅತಿ ಚಿಕ್ಕ ಪುಸ್ತಕವೊಂದನ್ನು ಎತ್ತಿಕೊಂಡೆ. "Beyond Violence" ಶೀರ್ಷಿಕೆಯ ಈ ಪುಸ್ತಕ ಸುಮಾರು ಎಂಭತ್ತು ಪುಟಗಳಿಷ್ಟಿತ್ತು. 
       ಚಿಕ್ಕಂದಿನಿಂದಲೂ ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರಭಾವಿತನಾಗಿ ಸ್ವಲ್ಪಮಟ್ಟಿಗೆ ಆಧ್ಯಾತ್ಮದತ್ತ ಒಲವು ಬೆಳೆದಿತ್ತು. ಆದರೆ ಬೇರೆ ಯಾವ ತತ್ವಶಾಸ್ತ್ರವಾಗಲೀ,ಧಾರ್ಮಿಕ ಪುಸ್ತಕಗಳಾಗಲೀ ಹೆಚ್ಚಾಗಿ ಓದಿರಲಿಲ್ಲ. ಕೆಲವು ಸಲ ಓದಲು ಪ್ರಯತ್ನಿಸಿದೆ,ಆದರೆ ಸಹಜವಾದ ಆಸ್ಥೆ ಬೆಳಯಯಲಿಲ್ಲ.
       ಬೆಂಗಳೂರಿನಿಂದ ಅಲಹಬಾದಿಗೆ ಸುಮಾರು ಎರಡು  ದಿನಗಳ ಪ್ರಯಾಣ. ಒಳ್ಳೆ ಸಹಪ್ರಯಾಣಿಕರ ಜೊತೆ ಸಿಕ್ಕರೆ ಅಥವಾ ಒಳ್ಳೆಯ ಪುಸ್ತಕಗಳಿದ್ದರೆ ಪ್ರಯಾಣ ಸಂತಸವಾಗೇ ಸಾಗುತ್ತದೆ. ಈಸಲ ಒಳ್ಳೆಯ ಪುಸ್ತಕಗಳ ಸಾಂಗತ್ಯವಿತ್ತು. ಕೆಲವೇ ಘಂಟೆಗಳಲ್ಲಿ ಕರ್ನಾಟಕದ ನೆಲದಿಂದ ದೂರಾಗಿ ಆಂಧ್ರ,ತಮಿಳುನಾಡಿನ ಹವೆಯೊಂದಿಗೆ ಚಲ್ಲಾಟವಾಡುತ್ತ ರೈಲು ಹೋಗುತ್ತಿದ್ದರೆ ನಾನು ಪುಸ್ತಕಗಳಕಡೆ ಗಮನ ಹರಿಸಿದೆ. ಶಿವರಾಮಕಾರಂತರ ಪುಸ್ತಕಗಳಲ್ಲಿ ಮೈಮರೆಯುವದಕ್ಕಿಂತ ಮುಂಚೆ ಈ ಕೃಷ್ಣಮೂರ್ತಿಯವರ ಪುಸ್ತಕವನ್ನೊಮ್ಮೆ ನೋಡೋಣ ಎಂದು ನನ್ನ ಸಂಗ್ರಹಗಳಲ್ಲೇ ಅತಿ ಚಿಕ್ಕ ' Beyond Violence' ಪುಸ್ತಕವನ್ನು ಕೈಗೆತ್ತಿಕೊಂಡೆ. ಅದು ಕೃಷ್ಣಮೂರ್ತಿಯವರು ಬರೆದ ಪುಸ್ತಕವಲ್ಲ ಎಂಬುದು ಮೊಟ್ಟಮೊದಲು ತಿಳಿದ ಅಂಶ. ಅಸಲಿಗೆ ಅವರು ಯಾವ ಪುಸ್ತಕವನ್ನೂ ಬರೆದಿಲ್ಲ. ಅಂದರೆ ಸಪ್ನ ಬುಕ್ ಹೌಸಿನಲ್ಲಿ  ಸಾಲುಸಾಲಾಗಿ ಪೇರಿಸಿದ್ದ ಪುಸ್ತಕಗಳೆಲ್ಲಾ ಅವರ ಭಾಷಣಗಳ,ಸಂವಾದಗಳ ಮತ್ತು ಸಂದರ್ಶನಗಳ ಸಂಕಲನ. ಇದು ಸದ್ಯ ಕಥೆಪುಸ್ತಕವಲ್ಲ ,ಮೊದಲಿಂದ ಕೊನೆಯವರೆಗೂ ಓದುವ ಕಟ್ಟುಪಾಡಿಲ್ಲ,ಇಂತಹ ಪುಸ್ತಕಗಳನ್ನು ಎಲ್ಲಿಂದಾದರೂ ಶುರುಮಾಡಿಕೊಂಡು ಎಲ್ಲಿ ಬೇಜಾರಾಗತ್ತೋ ಅಲ್ಲಿ ನಿಲ್ಲಿಸಬಿಡಬಹುದು ಎಂದು ಸಮಾಧಾನ ಪಟ್ಟುಕೊಂಡೆ.  ಅಧ್ಯಾಯಗಳ ವಿಂಗಡನೆ ನೋಡಿದರೆ ಇದೊಂದು psychology ತರಹದ ಪುಸ್ತಕ ಎನಿಸಿತು. Fear, attention, fragmentation of mind,
       ಸರಿ,"ಭಯ" ಎನ್ನುವ ವಿಷಯದಿಂದಲೇ ಶುರುಮಾಡಿಕೊಂಡೆ.
       ಒಂದು ಸಂಪೂರ್ಣ,ಅರ್ಥಪೂರ್ಣ ಜೀವನ ನಡೆಸಲು,ಒಂದು ಮಟ್ಟದ ತೀವ್ರತೆಯ,ಉತ್ಕಟತೆಯ ಮನೋಭಾವಿರಬೇಕು ಎಂಬುದು ಕೃಷ್ಣಮೂರ್ತಿಯವರ ಅಭಿಪ್ರಾಯ. ಭಯ ತಲೆಎತ್ತುವುದು ಇಂತಹ intensity ಇಲ್ಲದಿದ್ದಾಗ. ಭಯ ಎಂದೂ ಸ್ವಾವಲಂಬಿಯಲ್ಲ ಅಂದರೆ, ಭಯ ಸಮಯದ ಪರಾವಲಂಬಿ. ನಿನ್ನೆಯ ಕಹಿ ಘಟನೆಗೋ, ನಾಳೆ ಸಂಭವಿಸಬಹುದಾದ ಅವಘಡಕ್ಕೋ ಅಂಟಿಕಳ್ಳುವುದೇ ಭಯದ ಸ್ವಭಾವ,ಅದೊಂದು ಅಸ್ತಿತ್ವವೇ ಇಲ್ಲದ ಮನಃಸ್ಥಿತಿ,ಬರೀ ಅಂತರಂಗದ ಸೃಷ್ಟಿ..ಅಷ್ಟೆ.
       ಒಂದು ಪುಟವಿನ್ನೂ ಮುಗಿದಿರಲಿಲ್ಲ,ನನ್ನೊಳಗಿನ ವಿವೇಚನೆಯನ್ನು ಬಡಿದೆಬ್ಬಿಸಿದ ಅನುಭವ. ಮತ್ತೆ ಭಯವನ್ನು ಹೋಗಲಾಡಿಸುವ ಬಗೆ ಹೇಗೆ? ನೋಡೋಣ ಮುಂದೇನು ಹೇಳುತ್ತಾರೆಂದು ಮತ್ತೆ ಪುಸ್ತಕವನ್ನು ಕೈಗೆತ್ತಿಕೊಂಡೆ.
       ಭಯದ ಇನ್ನೊಂದು ಮೂಲ 'ಸುಖ,ಸಂತೋಷಗಳ ನಿರೀಕ್ಷೆ!' ಎಂದು ಹೇಳುತ್ತಾರೆ. ಅದು ಹೇಗೆ ಎಂದು ಮತ್ತೆ ನನ್ನ ಆಲೋಚನಗಳನ್ನು  ಕೆಣಕಿದರು. 'ಸಂತೋಷ' ನಿಮ್ಮ ಆಲೋಚನೆಗಳ ಸೃಷ್ಟಿ,ಆದರೆ 'ಆನಂದ'ಹಾಗಲ್ಲ ಅದು ಆಗಿಂದ್ದಾಗ್ಗೆ ದೊರಕುವ ಅನುಭವ. 'ಸಂತೋಷ'ದಲ್ಲಿ ಅದನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎನ್ನುವ ಭಯ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು.
       ಯಾವುದಾದರೂ ಒಂದು ವಸ್ತು ಅಥವಾ ಘಟನೆಯನ್ನು ವೀಕ್ಷಿಸುವಾಗ,ಅದನ್ನು ಅತಿ ತೀಕ್ಷಣತೆಯಿಂದ,ಯಾವ ವಿಮರ್ಷೆ ಇಲ್ಲದೆ,ಅತಿ ತೀವ್ರತೆಯಿಂದ ಗಮನಿಸಿದರೆ ,ಆ ವಸ್ತು ನನ್ನ ಅಸ್ತಿತ್ವದ ಅಂಗವೇನೋ ಎಂಬಂತಹ  ಉತ್ಕಟತೆಯಿದ್ದರೆ,ನಿಮ್ಮೊಳಗೇ ಒಂದು ಶಕ್ತಿಯ ಸಂಚಲನವಾಗುತ್ತದೆ, ಇದು ಉಢಾಫೆಯ ವಿಷಯವಲ್ಲ, ಹೀಗೆಂದಾದರೂ ಅನುಭವಾಗಿದೆಯೇ...ಎಂದು ಚಾಲೆಂಜ್ ಮಾಡುತ್ತಾರೆ .ಇಂತಹ intensity ಬೆಳಸಿಕೊಂಡರೆ ಭಯವಿರುವುದಿಲ್ಲ.
       ಇವರು ವರ್ಣಿಸುವ ರೀತಿಯಲ್ಲಿ ಒಂದು ಕೆಣಕುತನವಿದೆ ಎನಿಸಿತು. ಅದೆಷ್ಟು ಹೊತ್ತು ಹಾಗೇ ಯೋಚಿಸುತ್ತಿದ್ದೆನೋ,ಅರಿವಿರಲಿಲ್ಲ.
       ಸುಮಾರು ಎರಡೂವರೆ ದಿನಗಳ ಪ್ರಯಾಣದಲ್ಲಿ ಓದಿದ್ದು ಕೆಲವೇ ಪುಟಗಳು ಆದರೆ ಅಂತರಂಗದ  ಮಂಥನ ಅವಿರತವಾಗಿ ನಡೆಯುತ್ತಿತ್ತು.
       ಅಲಹಬಾದಿನ ವಾಯುನೆಲೆಗೆ ತಲುಪಿ ಪುನಃ ಸಮವಸ್ತ್ರದ ಜೀವನಕ್ಕೆ ಮರುಳಿದೆನಾದರೂ ಕೃಷ್ಣಮೂರ್ತಿಯವರ ಗೀಳಿನಿಂದ ಹೊರಬರಲು ಸಾಧ್ಯವಾಗಲಿಲ್ಲ.
      ಏರ್ಫೋರ್ಸಿನಲ್ಲಿ  ಪೈಲಟ್ ರಜೆಯಿಂದ ಮರಳಿದ ಮೇಲೆ,ಅವರಿಗೆ ಒಂದು ಟ್ರೈನಿಂಗ್ ಫ್ಲೈಟ್ pilots examiner ಜೊತೆ ಮಾಡಬೇಕು.  ರಜೆಯ ಅವಧಿಯಲ್ಲಿ ಕೆಲವು ಅಂಶಗಳು ಮರೆತಿದ್ದರೆ ಒಂದು refresher training.
        ಮರುದಿನದ ಬೆಳಗಿನ ಈ ಫ್ಲೈಟಿಗೆ ತಯಾರಿಯನ್ನು ಹಿಂದಿನ ರಾತ್ರಿಯೇ ಮಾಡಿಕೊಂಡೆ.
       ಆದರೆ ಈ ಸಲದ ತಯಾರಿಯಲ್ಲಿ ಒಂದು ವಿಭಿನ್ನತೆ ಒಂದು ನವನವೀನ ಉತ್ಸಾಹ ಇದ ಅನಿಸಿತು. ತೀವ್ರತೆ, ಉತ್ಕಟತೆ..ಇಡೀ ಏರೊಪ್ಲೇನು ನನ್ನ ಅಸ್ತಿತ್ವದ ಅಂಗ..ಇಂತ‌ ವಿಚಾರಗಳು ಆಳವಾಗಿ ಇಳಿದಿವೆ ಎನಿಸಿತು. ಒಂದು ಘಂಟೆ ಅವಧಿಯ ಈ ಫ್ಲೈಟಿನಲ್ಲಿ autopilot ನ ಪಾತ್ರವೇನು ಇರುವುದಿಲ್ಲ . ಏರೊಪ್ಲೇನಿನ ನಿಯಂತ್ರಣ ಪೂರ್ತಿ ನಮ್ಮ ಅಂಗಾಂಗಳು ಮತ್ತು ಪಂಚೇಂದ್ರಿಯಗಳಿಂದಲೇ! ವಿಮಾನ ಹಾರಿಸುವುದು ಪ್ರಪಂಚದ ಅತ್ಯಂತ ಕೌಶಲ್ಯದ ಕೆಲಸದಲ್ಲಿ  ಒಂದು  ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಮಾನಸಿಕ  ಸ್ಥೈರದ ಜೊತೆ ದೈಹಿಕ ಧಾರ್ಢ್ಯತೆಗೂ ತುಂಬಾ ಮಹತ್ವವಿದೆ. ಸಂಯಮ ಮತ್ತು ಚುರುಕುತನ ಎರಡೂ ಸರಿಸಮನಾಗಿ  ಮೇಳೈಸಿರಬೇಕು,'ಭಯ'ಕ್ಕೆ ಜಾಗವೇ ಇಲ್ಲ.
       ಈಗ ಹಲವಾರು ವರ್ಷಗಳೇ ಆದವು ಆ 'ಫ್ಲೈಟ್'ಮಾಡಿ ಆದರೆ ನನ್ನ ಜೊತೆಗಿದ್ದ ಆ examiner ಸಹ ದಂಗುಬಡಿದು ಹೋದರು,ಅಂತಹ ಘಟನೆಗಳು ನಡೆದು ಹೋದವು ಆ ದಿನದ ಫ್ಲೈಟಿನಲ್ಲಿ.
       ಆ ದಿನ ಸೂರ್ಯೋದಯದ ಜೊತೆಗೇ ನಾವೂ ಬಾನಿಗೆ ಹಾರಿದೆವು. ಪ್ರಶಾಂತವಾದ ಬೆಳಗು,ಇಂಜಿನ್ನಿನ ನಾದ,(ಅದು ನಮಗೆ ಶಬ್ದವಲ್ಲ!)  ಮನಸ್ಸಿನಲ್ಲಿ ಒಂದು ಅನಿರ್ವಚನೀಯ ಪ್ರಶಾಂತತೆ,ಧೃಢವಾದ ಏಕಾಗ್ರತೆ. ಏರೋಪ್ಲೇನಿನ controls ಗಳು ನನ್ನ ಶರೀರದ ಅಂಗಭಾಗ ಎನಿಸುವಷ್ಟು ಉತ್ಕಟತೆ ,ಕಣ್ಣುಗಳು ತೀಕ್ಷ್ಣ ವಾಗಿ ಮುಂದಿರುವ ಎಲ್ಲಾ ಸ್ವಿಚ್ಚುಗಳನ್ನು,ಡಯಲ್ಗಳನ್ನು ಅವಲೋಕಿಸುತ್ತಿವೆ. Examiner ಹೇಳಿದ ಒಂದೊಂದೇ training exercise ಮಾಡಿತೋರಿಸುತ್ತಿದ್ದೇನೆ. ಎಲ್ಲೂ ಒಂದಿಷ್ಟು ತಪ್ಪಾಗಲಿಲ್ಲ, ಈ ಮಧ್ಯ ಒಂದು ಎಂಜಿನ್ನನ್ನು ನಿಷ್ಕ್ರಿಯಗೊಳಿಸಿದರು. ಅದಕ್ಕೂ ವಿಚಲಿತನಾಗದೆ ಉಳಿದಿರುವ ಇನ್ನೊಂದು ಇಂಜಿನ್ನಿನಲ್ಲೇ ಇನ್ನು ಕೆಲಸಮಯ ಹಾರಾಡಿಕೊಂಡು ವಾಪಾಸು ಭೂಸ್ಪರ್ಶ ಮಾಡಿದೆವು,ಅದೂ ಒಂದೆ ಇಂಜಿನ್ನಿನ ಸಹಾಯದಿಂದ.
       You are better than autopilot,ಅಷ್ಟೆ ಅವರು ನನಗೆ ಹೇಳಿದ್ದು. ಆದರೆ ಇತರೆ ಪೈಲಟ್ಗಳ ಜೊತೆ ಕಾಫಿಕುಡಿಯುತ್ತ 'ಈ ಸಲದ ರಜೆಯಲ್ಲಿ ಏನೋ ಚಮತ್ಕಾರ ನಡೆದಿರಬಹುದು' ಎಂದು ಹೇಳುತ್ತಿದ್ದುದ್ದನ್ನು ಹಾಗೇ ಕೇಳಿಸಿಕೊಂಡೆ. ಆಗ ನನಗೂ ಕೃಷ್ಣಮೂರ್ತಿಯವರ ತತ್ವಗಳು ನನ್ನ ಮೇಲೆ ಆಳವಾಗಿ ಪರಿಣಾಮ ಬೀರುತ್ತಿವೆ ಎನಿಸಿತು.
       ಇದಾದ ಒಂದು ವಾರದಲ್ಲೇ ನನಗೆ ಕಾಶ್ಮೀರಕ್ಕೆ ಹೋಗುವ ಅವಕಾಶ ದೊರಕಿತು. ಇಲ್ಲಿ ಸುಮಾರು ಒಂದು ತಿಂಗಳು ಅವಧಿಯ Jungle and Snow Survival ಕೋರ್ಸು ಮಾಡಲು ಶ್ರೀನಗರಕ್ಕೆ ಬಂದಿಳಿದೆ. ಇದು ಏರ್ಫೋರ್ಸಿನ ಎಲ್ಲಾ ಪೈಲಟ್ಗಳು ಕಡ್ಡಾಯವಾಗಿ ಮಾಡಲೇಬೇಕಾದ ಟ್ರೈನಿಂಗು. ಇದರ ಹಿನ್ನೆಲೆಯೆಂದರೆ ಕಾಡಿನಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಹೊರಬಂದು ಕಾಡಿನಲ್ಲಿ ಮತ್ತು ಹಿಮಾವೃತ ಪ್ರದೇಶದಲ್ಲಿ ಬದುಕಿ ಉಳಿಯುವುದರ ಒಂದು ಕಠಿಣ ತರಬೇತಿ.  ಒಂದು ಪ್ಯಾರಾಚೂಟು,ಕೆಲವು ಜೀವನಾವಶ್ವದ ಸಾಮಗ್ರಿಗಳ ಒಂದು ಸಣ್ಣ ಚೀಲ ಮತ್ತು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಒಂದು ಚಿಕ್ಕ ಮಚ್ಚು ,"ಕುಕ್ರಿ"ಎನ್ನುವ ಈ ಬಹುಉಪಯೋಗಿ ಆಯುಧ ಗೂರ್ಖರು ಸದಾ ಅವರ ಸೊಂಟಕ್ಕೆ ಕಟ್ಟಿಕೊಂಡಿರುವ ಅವರ ಧಾರ್ಮಿಕ ಸಂಕೇತ.  ಎಷ್ಟೋಜನ ಈ ತರಬೇತಿಯಿಂದ  ನುಣಿಚಿಕೊಳ್ಳುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಾರೆ. ಊಟ,ನೀರಿಲ್ಲದೆ ಡೆಹ್ರಾಡೂನಿನ ಕಾಡಿನಲ್ಲಿ ಮತ್ತು ಕೊರೆಯುವ ಕಾಶ್ಮೀರದ ಹಿಮದಲ್ಲಿ ಕಳೆಯುವ ಆ ನಾಲಕ್ಕು ದಿನಗಳ ಅನುಭವ ಎಲ್ಲರ ಕೈಲು ನಿಭಾಯಿಸಲು ಆಗುವುದಿಲ್ಲ.  ಎಂತಹ ಸಾಹಸಿಗಳನ್ನೂ ಅಧೀರರನ್ನಾಗಿ‌ ಮಾಡಿಬಿಡುತ್ತದೆ. 
        ಆದರೆ ಸೀದಾ ಕಾಡಿಗೆ ಕಳುಹಿಸುವುದಿಲ್ಲ,ಮೊದಲು ದೈಹಿಕವಾಗಿ,ಮಾನಸಿಕವಾಗಿ ಸುಮಾರು ಹದಿನೈದು ದಿನಗಳ ಕಠಿಣ ತರಬೇತಿಯನ್ನು ಶ್ರೀನಗರದ ವಾಯುನೆಲೆಯಲ್ಲಿ ಕೊಡಲಾಗುತ್ತದೆ.
       ಆ ಸಮಯದ ದಿನಚರಿ ಹೇಗಿತ್ತೆದೆಂದರೆ,ಬೆಳಗ್ಗೆ ಆರು ಘಂಟೆಗೆ ಶ್ರೀನಗರದ ವಾಯುನೆಲೆಯ  ಒಂದು ತುದಿಯಿಂದ  ಇನ್ನೊಂದು ತುದಿಗೆ  ಅಂದರೆ ಸುಮಾರು ಮೂರು ಕಿಮೀ ದೂರ ಒಂದು ನಿರ್ದಿಷ್ಟ ವೇಗದಲ್ಲಿ ಓಡಬೇಕು,ಮತ್ತೆ ಎರಡು ಮೂರು ನಿಮಿಷಗಳ ನಂತರ ವಾಪಸ್ ಎಲ್ಲಿಂದ ಶುರು ಮಾಡಿಕೊಂಡಿದ್ದೆವೋ ಅಲ್ಲಿಗೆ ಹೋಗಿ ತಲುಪಬೇಕು.  ಒಟ್ಟು ಸುಮಾರು ಆರು ಕಿ ಮೀ ದೂರ. ಒಂದು  ವಾರದ ನಂತರ ಇದರ ಪರೀಕ್ಷೆ, ಪಾಸಾಗದವರಿಗೆ ಪುನಃ ಸಾಯಂಕಾಲ ಆರು ಕಿಮೀ ಓಟ!. ಈ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಏನಾದರೂ ಸರಿ ಮೊದಲ ಸಲವೇ ಪಾಸಾಗಬೇಕೆಂಬ ಅನಿವಾರ್ಯತೆ.
      
      
       ಅಷ್ಟರಲ್ಲಿ ಜಿದ್ದು ಕೃಷ್ಣಮೂರ್ತಿಯವರ 'ಧ್ಯಾನ'ದ ಅಧ್ಯಾಯ ಓದುತ್ತಿದ್ದೆ. ಅವರ ಪ್ರಕಾರ ಧ್ಯಾನ ಯಾರೋ ಒಬ್ಬರು ಹೇಳಿಕಟ್ಟಂತೆ ಕುಳಿತು ಮಾಡುವ ವಿಧಾನವಲ್ಲ . ಅದು ಶಿಸ್ತಿನಿಂದ ಕಲಿತ ವಿದ್ಯೆಯೂ ಅಲ್ಲ.
       ಧ್ಯಾನ ನೀವೇ ಸೃಷ್ಟಿಸಿಕೊಳ್ಳಬೇಕಾಗಿರುವ ಒಂದು ಸುಪ್ತತೆ. ಒಂದು ಅಧ್ಭುತವಾದ ನಿಶಬ್ದಾವಸ್ತೆ .ಅದು ಪುಸ್ತಕಗಳನ್ನು ಓದಿದರೆ,ಉಪನ್ಯಾಸಗಳನ್ನು ಕೇಳಿದರೆ ಕರಗತವಾಗುವ ಕಲೆಯಲ್ಲ. ನಿಮ್ಮ ಆಲೋಚನಾ ಲಹರಿಯನ್ನು,ಮನಸ್ಸನ್ನು ಬಹಳ ಶಾಂತವಾಗಿ ಆದರೆ ಯಾವ ಒಂದು ಒತ್ತಡವಿಲ್ಲದೆ,ಅದರಲ್ಲೇ ಅವಿಭಾಜ್ಯವಾಗಿ,ಉತ್ಕಟತೆಯಿಂದ ಗಮನಿಸುವ ಅವಸ್ಥೆ.
       ಆಗುತ್ತದೆಯಾ? ನಿಮ್ಮಿಂದ ಸಾಧ್ಯವಾ? ಮತ್ತೆ ಕೆಣಕಲು ಶುರು ಹಚ್ಚಿಕೊಂಡರು.
       ದೈಹಿಕವಾಗಿ ನನಗೆ ಕ್ರೀಡಾಪಟುಗಳಿಗಿರುವಂತಹ ಸಾಮರ್ಥ್ಯ ಯಾವಾಗಲೂ ಇರಲಿಲ್ಲ. ಅದ್ದರಿಂದ ಈ ಆರು ಕಿಮೀಗಳ ಓಟದ ಸ್ಪರ್ಧೆ ಒಂದು ಚಾಲೆಂಜ್ ಮತ್ತು ಮಾಡಲಾಗದಿದ್ದರೆ ಇತರೆ ಪೈಲಟ್ಗಳ ಮುಂದೆ ಮುಖಭಂಗ. ಈ ಚಾಲೆಂಜಿಗಿಂತ ನನ್ನ ಮುಂದಿದ್ದ ಇನ್ನೊಂದು ಛಲ ,ಅದೆಂದರೆ ಇವರು ಧ್ಯಾನದ ಬಗ್ಗೆ ಹೇಳುತ್ತಿರುವ 'ಸುಪ್ತಾವಸ್ಥೆ'ಯ ಅನುಭವ ಪಡೆಯಬೇಕು ಎನ್ನುವುದು. ಆ ವಿಚಾರದಲ್ಲೇ ಮುಳುಗಿ ಹೋಗಿದ್ದೆ.
       ಅಂತಿಮ ಪರೀಕ್ಷೆಯ ದಿನ ಬಂದೇ ಬಿಟ್ಟಿತು. ಎಲ್ಲರ ಕೈಯಲ್ಲಿ ಮೂರು ಬಿಲ್ಲೆಗಳು. ಪ್ರತಿ ಎರಡು ಕಿಮೀ ದೂರದಲ್ಲಿ ನಿಂತಿರುವ ತರಬೇತಿ ಸಿಬ್ಬಂದಿಗೆ ಆ ಬಿಲ್ಲೆಗಳನ್ನು ಕೊಡಬೇಕು. ಇದರಿಂದ ಯಾರಿಗೂ ಕಿರುದಾರಿಯಲ್ಲಿ ಹೋಗುವ ಅವಕಾಶವಿರುವುದಿಲ್ಲ. ನಿರ್ದಿಷ್ಟವಾದ ಮಾರ್ಗದಲ್ಲೇ ಓಡಬೇಕು.
       ಆರಂಭದ ಸೀಟಿಯೊಡನೆ ಸ್ಪರ್ಧೆ ಶುರುವಾಯಿತು. ಎಲ್ಲರ ಜೊತೆ ನಾನೂ ನಿಧಾನಗತಿಯಲ್ಲಿ ಓಟ ಶುರು ಮಾಡಿದೆ. ಧ್ಯಾನಾವಸ್ತೆಯಲ್ಲೇ ಮನಸ್ಸನ್ನು ಕೇಂದ್ರೀಕರಿಸಿಟ್ಟುಕೊಂಡು ವೇಗವನ್ನು ಕ್ರಮೇಣ  ಹೆಚ್ಚುಸುತ್ತಾ ಹೋದೆ. ದೇಹದ ಪ್ರತಿಯೊಂದು ಭಾಗದತ್ತ ಗಮನ ಹರಿಸುತ್ತಾ ಹೋದೆ. ನನಗೆ ನಾನೇ ಕೆಣಕಿಕೊಳ್ಳುತ್ತಾ,ಗಮನವನ್ನು ಒಂದು ಕಡೆ ಕದಲದಹಾಗೆ ಇಟ್ಟುಕೊಂಡಿರಲು ಸಾಧ್ಯವಾ?,ಆಗುತ್ತಾ?
       ಮೊದಲನೆ ಪಾಯಿಂಟಿನಲ್ಲಿ ಒಂದು ಬಿಲ್ಲೆಯನ್ನು ಕೊಟ್ಟು ಓಟವನ್ನು ಮುಂದುವರೆಸಿದೆ.  ಆದರೆ ನನಗಿಂತ  ಸ್ವಲ್ಪದೂರದಲ್ಲೆ ಮೂವರು ಏದುಸಿರು ಬಿಡುತ್ತಾ ಓಡುತ್ತಿದ್ದರು. ಆಗಾಗಲೇ ಏಳೆಂಟು ಬಿಲ್ಲೆಗಳು ಅವರ ಕೈಯಲ್ಲಿದ್ದವು. ಈ ಹಂತದಲ್ಲಿ ಅಂದರೆ ಮುಂದಿನ ಬಿಲ್ಲೆಯನ್ನು ಕೊಡುವವರೆಗೂ ಗಮನವನ್ನು ಬಲಗಾಲಿನ ಹೆಬ್ಬೆರಳಿನಲ್ಲಿ ಅಚಲವಾಗಿ,ಶರೀರದ ಎಲ್ಲಾ ಶಕ್ತಿಯು ಅಲ್ಲೇ ಕೂಡಿಕೊಂಡಿದೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತಾ ಓಟದ ತೀವ್ರತೆಯನ್ನು ಹೆಚ್ಚಿಸುತ್ತಾ ಹೋದೆ.  ಉಸಿರಾಟದ ತೀವ್ರತೆ ಹೆಚ್ಚುತ್ತಿದ್ದುದು ಗಮನಕ್ಕೆ ಬಂತು,ಧೀರ್ಘವಾಗಿ ಉಸಿರಾಡುವುದನ್ನು ನಿಯಂತ್ರಿಸುತ್ತಾ ಚಿತ್ತವನ್ನು ಅತ್ತಿತ್ತ ಕದಲಿಸದಂತೆ ಕ್ರೋಡೀಕೃತಿಸಿಕೊಂಡು ಒಮ್ಮೆ ತಲೆಎತ್ತಿ ನೋಡಿದೆ. ಇನ್ನೇನು ಎರಡನೇ ಪಾಯಿಂಟು ಸ್ವಲ್ಪದೂರಲ್ಲೇ ಕಾಣುತಿತ್ತು,ಇಬ್ಬರು ಈಗಾಗಲೇ ಆ ಪಾಯಿಂಟನ್ನು ತಲುಪಿದ್ದರು. ನನ್ನ ಬಿಲ್ಲೆಯನ್ನು ಕೊಟ್ಟು ಓಟವನ್ನು ಮುಂದುವರೆಸಿ ಪುನಃ ಕೃಷ್ಣಮೂರ್ತಿ ಯವರ ಧ್ಯಾನದ ಪ್ರಕಾರದಲ್ಲಿ ತಲ್ಲೀನಾದೆ. ನಿಯಮಿತವಾಗಿ ಧೀರ್ಘವಾಗಿ ಉಸಿರಾಡುತ್ತಿದ್ದುದರಿಂದ ಹೆಚ್ಚಿನ ಆಯಾಸವೆನಿಸಲಿಲ್ಲ. ಈ ಹಂತದಲ್ಲಿ ಗಮನವನ್ನು ಎಡಗಾಲಿನ ಹೆಬ್ಬೆರಳಿನ ಮೇಲೆ ಕೇಂದ್ರೀಕರಿಸಿದೆ,ಅದರಲ್ಲಿಯೇ ತಲ್ಲೀನನಾದೆ,ನನ್ನಷ್ಟಿಗೆ ನಾನೇ..ಚಾಲೆಂಜ್ ಮಾಡಿಕೊಂಡು ಓಟದ ತೀವ್ರತೆಯನ್ನು ಇನ್ನು ಹೆಚ್ಚಿಸಲು ಆಗುತ್ತಾ ತಾಕತ್ತಿದಯಾ...ಹಾಗಾದರೆ ಮಾಡು ನೋಡೋಣ ಅಂದುಕೊಳ್ಳುತ್ತಾ ಮೂರನೆ ಪಾಯಿಂಟಿನ ಕಡೆ ಗಮನವಿಟ್ಟು ಅತ್ತಿತ್ತ ನೋಡದಹಾಗೆ ಮುಂದುವರೆದೆ. ದಾರಿಯಲ್ಲಿ ಇಬ್ಬರು ಇನ್ನು ಓಡೋಕ್ಕೆ ಆಗಲ್ಲ ಎಂದು ಏದುಸಿರು ಬಿಡುತ್ತಾ ಕುಳಿತೇಬಿಟ್ಟರು.
       ಮೂರನೇ ಪಾಯಿಂಟು ತಲುಪಿ ನನ್ನ ಬಿಲ್ಲೆಯನ್ನು ಅವರ ಕೈಗೆ ಕೊಟ್ಟೆ. ಅವರ ಕೈಯಲ್ಲಿ ಯಾವ ಬಿಲ್ಲೆಯೂ ಕಾಣಲಿಲ್ಲ. ಸುಮಾರು ಎರಡು ಮೂರು ನಿಮಿಷಗಳ ನಂತರ ನಮ್ಮ ಬ್ಯಾಚಿನಲ್ಲೆ ದೈಹಿಕ ಧಾರ್ಢ್ಯದಲ್ಲಿ ಹೆಸರಾದ ಪೈಲಟ್, ಭಾರಧ್ವಜ್ ಎನ್ನುವವರು ಬಂದರು. ಬೆವರೊರೆಸಿಕೊಳ್ಳುತ್ತಾ ನನ್ನ ಹತ್ತಿರ ಬಂದು you are a dark horse,congratulations! ಅಂದಾಗಲೇ ನನಗೆ ಗೊತ್ತಾಗಿದ್ದು ಎಲ್ಲರಿಗಿಂತ ಮೊದಲು ಬಂದವನು ನಾನೇ ಅಂತ. ಕೃಷ್ಣಮೂರ್ತಿಯವರಿಗೆ ಮನಸ್ಸಿನಲ್ಲೇ ನಮಿಸಿದೆ.
       ಮೂರು ದಿನಗಳ ನಂತರ ಇನ್ನೊಂದು ಸ್ಪರ್ಧೆ. ಈ ಸಲ ಶ್ರೀನಗರದ ಶಂಕರಾಚಾರ್ಯ ಬೆಟ್ಟವನ್ನು ಹತ್ತುವುದು. ಅದೇ ಮೂರು ಬಿಲ್ಲೆಗಳ ಸ್ಪರ್ಧೆಯ ನಿಯಮ. ಬೆಟ್ಟದ ಮೇಲೆ ಪ್ರಸಿದ್ದವಾದ ಶಿವಾಲಯವಿದೆ. ಮೂರನೆ ಬಿಲ್ಲೆಯನ್ನು ಶಿವಾಲಯದಲ್ಲಿ ಕಾಯುತ್ತಿರುವ ಸಿಬ್ಬಂದಿಗೆ ಕೊಡುವಾಗಲೂ ಇನ್ನೂ ಯಾರೂ ಕೊಟ್ಟಿರಲಿಲ್ಲ.
       ಇದೆಲ್ಲಾ ಮುಗಿದು ದೈಹಿಕ ಧಾರ್ಢ್ಯತೆ,ಮಾನಸಿಕ ಸ್ಥೈರ್ಯತೆಯ ಜೊತೆ ಕೃಷ್ಣಮೂರ್ತಿಯವರಿಂದ ಪಡೆದ ಹೊಸ ಸ್ಪೂರ್ತಿಯೊಂದಿಗೆ ಉತ್ತರಾಖಾಂಡದ ಕಾಡುಗಳು ಮತ್ತು ಕಾಶ್ಮೀರದ ಹಿಮಚ್ಚಾದಿತ ಪರ್ವತಗಳ ಕಡೆ ನಿರ್ಗಮಿಸುವ ಸಮಯ ಬಂತು.
 

ಶೆಟ್ಟರ ಸವಾಸ

ಶೆಟ್ಟರ ಸವಾಸ


     ಗಂಗೂರಿನ ನಮ್ಮ ಮನೆಯ ಎದುರು ಸೀತಾರಾಮ ಶೆಟ್ಟರ ಮನೆ. ಶೆಟ್ಟರು ಮತ್ತು ನಮ್ಮ ತಂದೆಯವರು  ಬಾಲ್ಯಸ್ನೇಹಿತರು,ಇಬ್ಬರೂ ಜೊತೆಗೆ ಪ್ರಾಥಮಿಕ ಶಾಲೆಯಿಂದಲೂ  ಒಟ್ಟಿಗೆ ಓದಿಕೊಂಡು ಬೆಳೆದವರು. ಎಂಬತ್ತರ ದಶಕಗಳಲ್ಲಿರುವ ಇಬ್ಬರೂ, ಈಗಲೂ ಅನ್ಯೋನ್ಯವಾಗಿದ್ದಾರೆ. ಎರಡೂ ಮನೆಗಳ ಮಧ್ಯ ಸಣ್ಣಪುಟ್ಟ ವಿರಸಗಳಿದ್ದರೂ ಸಹ,ಕಾಲಕ್ರಮೇಣ ಇವರ ಸ್ನೇಹ ಮಾತ್ರ ಭದ್ರವಾಗಿ ಉಳಿದಿದೆ. ವಿಧ್ಯಾಭ್ಯಾಸ  ಮುಗಿದು ನಮ್ಮ ತಂದೆಯವರು ಉಪಾಧ್ಯಾಯರಾದರೆ, ಶೆಟ್ಟರು ತಮ್ಮ ಕುಲಕಸುಬಾದ ವ್ಯಾಪಾರದ ದಾರಿ ಹಿಡಿದರು. ಸುತ್ತಲಿನ ಹಳ್ಳಿಗಳ ಹತ್ತಿ,ಮೆಣಸಿನಕಾಯಿ ಮತ್ತು ಇತರೆ ದವಸ ಧಾನ್ಯಗಳನ್ನು  ಖರೀದಿಸಿ ಮನೆಯಲ್ಲಿ ಕೂಡಿಸಿಡುತ್ತಿದ್ದರು. ಮಾರುಕಟ್ಟೆಯಲ್ಲಿ  ಒಳ್ಳೆಯ ದರ ಸಿಕ್ಕಾಗ ಬೆಂಗಳೂರಿನ ಮಂಡಿಯಲ್ಲಿ  ಮಾರಿ ಬರುತ್ತಿದ್ದರು. ಹಾಗೆ ಬೆಂಗಳೂರಿಗೆ ಹೋದಾಗಲೆಲ್ಲ ಎರಡು ಮೂರು ದಿನಗಳು ಅಲ್ಲೇ ಇರಬೇಕಾಗಿರುತ್ತಿತ್ತು.
     ನಮ್ಮೂರಿಗೆ ಹಿಂತಿರುಗಿ ಬಂದ ನಂತರ ಅವರ ಬೆಂಗಳೂರಿನ ಪ್ರವಾಸದ ಬಗ್ಗೆ ಬಹಳ ರಸವತ್ತಾಗಿ ಕಥೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಿದ್ದರು. ಅವರು  ಹೋದ ಹೋಟೆಲ್ಗಳ ವಿವರಣೆ, ತಿಂದ ತಿಂಡಿಗಳ ವರ್ಣನೆ,ಬೆಂಗಳೂರುನ್ನು ಕಂಡರಿಯದ ನಾವು, ಬಿಟ್ಬ  ಬಾಯಿ ಬಿಟ್ಟ ಹಾಗೆ, ಅವರು ಹೇಳುವುದನ್ನೇ ಕೇಳುತ್ತ, ಬೆಂಗಳೂರು ಹಾಗಿರಬಹುದು ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೆವು. ಅವರು ನಮ್ಮ ತಂದೆಯ ವಯಸ್ಸಿನವರಾದರೂ ಸಹ,ನಾವಿಬ್ಬರೂ ಪಕ್ಕಾ ದೋಸ್ತುಗಳು. ನಾನೂ ಅವರ ಹತ್ತಿರ ಯಾವ ಸಂಕೋಚವಿಲ್ಲದೆ ಮಾತಾಡುತ್ತಿದ್ದೆ. ನಮ್ಮ ಮನೆಯವರಲ್ಲಿ ಮಾತನಾಡದ ವಿಷಯಗಳನ್ನು ಇವರ ಹತ್ತಿರ ನಿರ್ಗಳವಾಗಿ ಮಾತಾಡುತ್ತಿದ್ದೆ. ಶೆಟ್ಟರು ತುಂಬಾ ಹಾಸ್ಯಸ್ವಭಾವದ ವ್ಯಕ್ತಿ, ಮಾತಾಡಲು ಶುರು ಹಚ್ಚಿಕೊಂಡರೆ,ಲಂಗು ಲಗಾಮೆ ಇಲ್ಲ. ಇದೇ ಕಾರಣ ಕೆಲವು ಸಲ ಹಳ್ಳಿಯ ಹೆಂಗಸರ ಕೆಂಗಣ್ಣಿಗೂ ತುತ್ತಾಗುತ್ತಿದ್ದರಾದರೂ ಸ್ವಲ್ಪ ಹೊತ್ತಿನಲ್ಲೇ ಸರಿಪಡಿಸಿಕೊಳ್ಳುವ ಜಾಣತನವೂ ಇತ್ತು.
     ಒಮ್ಮೆ ಏನಾಯಿತೆಂದರೆ,ಹಿತ್ತಲಿನಲ್ಲಿ ಒಬ್ಬ ಹೆಣ್ಣುಮಗಳು ಸಗಣಿಗೆ ತೌಡು ಸೇರಿಸಿ ಬೆರಣಿ ತಟ್ಟುತ್ತಿದ್ದರು,ಇದು ನಮ್ಮ ಹಳ್ಳಿಗಳಲ್ಲಿ ಕಾಣುವ ಸಾಮಾನ್ಯ ದೃಷ್ಯ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶೆಟ್ಟರು ಆವಮ್ಮನನ್ನು ನೋಡಿ'ಏನಿದು ರಮಣಿ ನಿನ್ನ ಮುಖವೆಲ್ಲಾ ಸಗಣಿ' ಎನ್ನಬೇಕೇ!ಮೊದಲೇ ಸಿಟ್ಟಿನಲ್ಲಿದ್ದ ಆವಮ್ಮ ಸಗಣಿಯ ಉಂಡೆಯೊಂದನ್ನು ಶೆಟ್ಟರ ಮುಖಕ್ಕೆ ಗುರಿಯಿಟ್ಟು ಎಸದುಬಿಟ್ಟಳು,ಶೆಟ್ಟರಂತೂ ಸ್ವಲ್ಪದರಲ್ಲಿ ಬಚಾವಾದರು!,ಹೀಗೆ ಕೆಲವೊಮ್ಮೆ ಅವಾಂತರಕ್ಕೀಡಾಗುತ್ತಿದ್ದರು. ಅವರ ಮನೆಯ ಎತ್ತರವಾದ ಕಟ್ಟೆಯ ಮೇಲೆ ಕುಳಿತು ಹೋಗಿ ಬರುವವರನ್ನೆಲ್ಲ ಮಾತಾಡಿಸಿದ್ದೇ ಮಾತಾಡಿಸಿದ್ದು. ಅವರ ಹಾಸ್ಯ,ಕುಚೇಷ್ಟೆಯ ಮಾತುಗಳು ಇತರರ ಮೇಲೂ ಸಾಂಕ್ರಾಮಿಕ ಪರಿಣಾಮಬೀರಿ ಒಂದು ನಗೆಯ ವಾತಾವರಣ ತನಗೆತಾನೇ ಸೃಷ್ಟಿಯಾಗುತ್ತಿತ್ತು.
    
     ಒಂದು ಸಂಜೆ ಶೆಟ್ಟರ ಹತ್ತಿರ ಮಾತನಾಡುತ್ತ ,ಪಿಯುಸಿ ಮುಗಿದ ಮೇಲೆ ನಾನು ಏರ್ಫೋರ್ಸಿಗೆ ಸೇರುವ ಆಲೋಚನೆಯ ಬಗ್ಗೆ ತಿಳಿಸಿದೆ. 'ಏನೋ ಏರ್ಫೋರ್ಸು ಎಂದರೆ?'ಎಂದು ಕೇಳಿದರು. ಅಲ್ಪ ಸ್ವಲ್ಪ ನನಗೆ ಆಗ ತಿಳಿದಿದ್ದನ್ನು ಹೇಳಿದೆ.ಓ.. ಅದು ಮಿಲಿಟ್ರೀನಾ,ಗಾಳಿ ಬಂದ್ರೆ ತೂರಿಕೊಂಡು ಹೋಗ್ತೀಯ  ನಿನ್ಯಾರು ತಂಗತಾರೆ'  ಎಂದು ಗೇಲಿ ಮಾಡಿದರು.  ಆದರೆ ಏರ್ಫೋರ್ಸ ಬಗ್ಗೆ ಅವರಿಗಿಷ್ಟವಾದ ಅಂಶವೆಂದರೆ ಊಟ ತಿಂಡಿ, ವಸತಿ ರೈಲುಪ್ರಯಾಣ ಎಲ್ಲಾ ಫ್ರೀ!
      
      ನನ್ನ ಅದೃಷ್ಟ ಚೆನ್ನಾಗಿತ್ತು. ಪಿಯುಸಿ ಮುಗಿದನಂತರ ಅಗ್ರಿಕಲ್ಚರ್  ಬಿಎಸ್ಸಿ ಕೋರ್ಸ್ನ ಸಂದರ್ಶನಕ್ಕೆ ಬೆಂಗಳೂರಿಗೆ ಹೋಗಬೇಕಾಗಿತ್ತು ಮತ್ತು ಅದರ ಮರುದಿನವೇ ಏರ್ಫೋರ್ಸನ ಸಂದರ್ಶನದ ಕರೆಯೂ ಬಂತು. ಆದರೆ ಶೆಟ್ಟರನ್ನು  ಬಿಟ್ಟರೆ ಈ ವಿಷಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಬೆಂಗಳೂರನ್ನು ತಲುಪಿದ ಮೇಲೆ ತಂದೆಯವರಿಗೆ ಏರ್ಫೋರ್ಸಿನ ಸಂದರ್ಶನದ ಬಗ್ಗೆ ತಿಳಿಸಿದೆ. ಸರಿ ನಿನ್ನ್ ಇಷ್ಟ ಎಂದರು.  ಏರ್ರ್ಫೋರ್ಸಿನ ಆಯ್ಕೆಯ ಪ್ರಕ್ರಿಯೆ ಸತತವಾಗಿ ನಾಲ್ಕು ದಿನಗಳವರೆಗೂ ನಡೆಯಿತು. ಈ ಅನಿರೀಕ್ಷಿತ ನಾಲ್ಕು ದಿನಗಳ ಬೆಂಗಳೂರಿನ ಖರ್ಚು ವೆಚ್ಚಗಳನ್ನು ಭರಿಸಲು ಶೆಟ್ಟರ ಪರಿಚಯದ ಮಂಡಿ ಸಾಹುಕಾರರಿಂದ ಸಹಾಯ ಪಡೆಯಬೇಕಾಯಿತು.
   ಮೊದಲ ದಿನ   ಸುಮಾರು 200 ಅಭ್ಯರ್ಥಿಗಳಿಂದ  ಕಿಕ್ಕಿರಿದು ತುಂಬಿದ್ದ ,ಕಬ್ಬನ್ ರೋಡಿನ ವಾಯು ಸೈನಿಕ ಆಯ್ಕೆ ಕೇಂದ್ರದಲ್ಲಿ ಎಲ್ಲಾ ಕಲಾಪಗಳು ಶಿಸ್ತಿನಿಂದ ಚಕಚಕನೆ ನಡೆಯುತ್ತಿದ್ದವು. ಎಲ್ಲಾ ಸಂಭಾಷಣೆಗಳು ಇಂಗ್ಲೀಷಿನಲ್ಲಿ,ಕಕ್ಕಾಬಿಕ್ಕಿಯಾಗಿ ಹೋದೆ! ಆದರೂ ನನ್ನ ಕನಸನ್ನು ನನಸಾಗಿಸಿ ಕೊಳ್ಳುವ ಅವಕಾಶವನ್ನು ಕೈಬಿಡಬಾರದೆಂದು ಅವಡುಗಚ್ಚಿಕೊಂಡು ಎಲ್ಲಾ ಪರೀಕ್ಷೆಗಳಲ್ಲಿ ಭಾಗವಹಿಸಿದೆ. ಪ್ರತಿದಿನ ವಿವಿದ ರೀತಿಯ  ಸರಣಿ ಪರೀಕ್ಷೆಗಳು ಮತ್ತು ಆಗಿಂದಾಗಲೇ ಫಲಿತಾಂಶ ಪ್ರಕಟಿಸುತ್ತಿದ್ದರು. ಪಾಸಾದವರು ಮುಂದಿನ ಪರೀಕ್ಷೆಗೆ ತಯಾರಾಗಬೇಕು, ಫೇಲಾದವರು ನಿರ್ಗಮಿಸುತ್ತಿದ್ದರು. ನಾಲ್ಕನೇ ದಿನ ಅಂತಿಮ ಸಂದರ್ಶನ ಅಷ್ಟೊತ್ತಿಗೆ ಉಳಿದು ಕೊಂಡಿದ್ದವರು ನಾನು ಮತ್ತು ಬೆಳಗಾವಿ ಜಿಲ್ಲೆಯಿಂದ ಬಂದಿದ್ದ ಇನ್ನೊಬ್ಬ ಅಭ್ಯರ್ಥಿ. ಆಯ್ಕೆಕೇಂದ್ರದ ಅಧ್ಯಕ್ಷರ ಸಂದರ್ಶನದಲ್ಲಿ ಇಬ್ಬರೂ ಪಾಸಾದೆವು.  ನಾನು ಆಯ್ಕೆಯಾಗಿದ್ದೀನಿ ಎನ್ನುವ ವಿಷಯ ಅದೇಕೋ ಇನ್ನೂ ನಂಬಲಾರೆ ಆದರೆ ತಂದೆಯವರಾಗಲೇ ಬಿಮ್ಮನೆ ಬೀಗುತ್ತಿದ್ದರು. ಅವತ್ತು ನನ್ನ ಹದಿನೇಳನೆ ಹುಟ್ಟು ಹಬ್ಬ ಎನ್ನುವುದು ಮತ್ತೊಂದು ವಿಶೇಷ.  ಸಾಯಂಕಾಲ ಮೆಜೆಸ್ಟಿಕ್ಕಿನ ಹೋಟಲೊಂದರಲ್ಲಿ ವಿಶೇಷ ಭೋಜನ ಮತ್ತು ಸಂತೋಷ್ ಟಾಕೀಸಿನಲ್ಲಿ 'ಬಯಲು ದಾರಿ' ಸಿನಿಮ ನೋಡಿ ನನ್ನ ಹಟ್ಟು ಹಬ್ಬ ಮತ್ತು ಏರ್ಫೋರ್ಸಗೆ ಆಯ್ಕೆಯ ಸಂಭ್ರಮ ವನ್ನು ಆಚರಿಸಿಕೊಂಡು ನಮ್ಮ ಹಳ್ಳಿಗೆ ಮರಳಿದೆವು.

    'ಲಕ್ಷ ರೂಪಾಯಿಯ ಲಾಟರಿ ಹೊಡೆದು ಬಿಟ್ಟೆಯಲ್ಲೋ'ಸೀತಾರಾಮ ಶೆಟ್ಟರ ಉದ್ಗಾರ, ನನ್ನ  ಏರ್ಫೋರ್ಸಿನ ಆಯ್ಕೆಯ ವಿಷಯ ತಿಳಿದು. ಅಂದಿನಿಂದಲೆ ನನ್ನ ಯಶಸ್ಸಿನ ಅಧಿಕೃತ ವಕ್ತಾರರಾಗಿಬಿಟ್ಟರು. ಅವರೇ  ಆಯ್ಕೆಯಾಗಿದ್ದಾರೆನೋ ಎನ್ನುವಷ್ಟು ಖುಶಿ ಪಟ್ಟರು. ಕೆಲವೇ  ದಿನಗಳಲ್ಲೇ ಏರ್ಫೋರ್ಸಿನ ತರಬೇತಿಯ ಕರೆ ಬಂತು,ಜೀವನದ ಹೊಸ ಪರ್ವ ಶುರುವಾಯಿತು.

ಮೊದಲೆಲ್ಲಾ ನಮ್ಮ ಹಳ್ಳಿಗಳಲ್ಲಿ ,ಕೆಲವರ ಮೈಮೇಲೆ ದೇವರು ಬರುತ್ತದೆ ಇನ್ನು ಕೆಲವರ ಮೈಮೇಲೆ ದೆವ್ವ ಬರುತ್ತೆ ಎನ್ನುವುದು ಪ್ರಚಲಿತ ವಿಷಯ. ನಮ್ಮ ತಂದೆಯವರು ,ಸೀತಾರಾಮ ಶೆಟ್ರು ಅವರ ಪ್ರಾಯದ ದಿನಗಳಲ್ಲಿ ಹಳ್ಳಿಯಲ್ಲಿ ಬೆಳೆದು ಬಂದಿದ್ದ ಕೆಲವು ಮೂಢನಂಬಿಕೆಗೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದರ ಬಗ್ಗೆ ಆಗಾಗ ಹೇಳುತ್ತಿದ್ದರು.
ಇಂತಹ ಒಂದು ಸ್ವಾರಸ್ಯಕರ ಘಟನೆ ಶೆಟ್ಟರದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುವುದೇ ಮಜ!
  ಒಂದು ದಿನ ಯಾರೊ ಹೆಣ್ಣುಮಗಳೊಬ್ಬಳ ಮೇಲೆ ದೆವ್ವಬಂದಿದೆ ಎಂದು ಅವಳನ್ನು ಮಾರಮ್ಮನ ದೇವಸ್ತಾನಕ್ಕೆ ಕರೆದುಕೊಂಡು ಬಂದರು. ಅಲ್ಲೇಇದ್ದ ಶೆಟ್ಟರಿಗೆ ಈ'ದೆವ್ವದ'ಬಗ್ಗೆ ಸ್ವಲ್ಪ ಅನುಮಾನ ಬಂದು ಆಸುಪಾಸಿನಲ್ಲಿ ವಿಚಾರಿಸಿದ್ದಾಗ ಗೊತ್ತಾಗಿದ್ದೇನೆಂದರೆ ನೆರಮನೆಯವರನ್ನು ಹೆದರಿಸಲು ಮಾಡಿರುವ ನಾಟಕವಿರಬಹುದು  ಎನ್ನುವ ಅನುಮಾನ ಮೂಡಿದೆ. ಸರಿ ,ಶೆಟ್ಟರು ತಮ್ಮದೇ ಶೈಲಿಯಲ್ಲಿ ಕಾರ್ಯಗತರಾದರು. ದುರ್ಗಪ್ಪನ ಮೇಲೆ ಮಾರಮ್ಮ ಬರುತ್ತಾಳೆ ಎನ್ನುವುದೂ ಸಹ ಆಗ ಚಾಲ್ತಿಯಲ್ಲಿದ್ದ ಸುದ್ದಿ. ಆ ದುರ್ಗಪ್ಪನನ್ನೇ ಹಿಡಿದು ಅವನ ಕೈಗೆ ದಪ್ಪನೆ ಬೇವಿನಮರದ ರೆಂಬೆಯೊಂದನ್ನು ಕೊಟ್ಟು, "ಅಕ್ಕಲೆ ದುರ್ಗ ಅಮ್ಮ ಏಳಿತಿ" ಎಂದು ಅವನಿಗೆ ಆದೇಶಿಸಿದರು. ಆ ದುರ್ಗಪ್ಪನೂ ಅದಕ್ಕೆ ತಕ್ಕಂತೆ ಮೈಯನ್ನೆಲ್ಲಾ ಕುಣಿಸುತ್ತಾ ' ಯಾರೇ ನೀನು,ಇಲ್ಲಗ್ಯಾಕೇ ಬಂದೆ' ಎಂದು ರಪ ರಪನೆ ಬೇವಿನ ರೆಂಬೆಯಿಂದ ಬಾರಿಸಲು ಶುರು ಮಾಡಿದ. ಆ ಹೊಡೆತಕ್ಕೆ 'ದೆವ್ವ' ಬಿದ್ದೆನೊ, ಸತ್ತೆನೊ ಎಂದು ಓಡಿಹೋಯಿತಂತೆ.
  ಅಂದಿನಿಂದ "ಅಕ್ಕಲೆ ದುರ್ಗ ಅಮ್ಮ ಏಳಿತಿ"ಎನ್ನುವುದು ಶೆಟ್ಟರ ಕಾಪಿರೈಟ್ ಪ್ರೊಟೆಕ್ಟೆಡ್ ಸ್ಲೋಗನ್!

  ಏರ್ಫೋರ್ಸಗೆ ಸೇರಿದ ನಂತರ ಶೆಟ್ಟರ ಭೇಟಿ ವರ್ಷಕ್ಕೊಮ್ಮೆ ಸೀಮಿತವಾಯಿತು.  ಆದರೂ ಜೀವನದ ಹಾಗುಹೋಗುಗಳು,ಏರಿಳಿತಗಳನ್ನೆಲ್ಲ ಶೆಟ್ಟರ ಜೊತೆ ಹಂಚಿಕೊಳ್ಳತ್ತಿದ್ದೆ. ವಾಯುಸೈನಿಕನಾಗಿ ಸೇರಿದ ನಾಲ್ಕು ವರ್ಷಗಳಲ್ಲೇ ಶೆಟ್ಟರು ಹೇಳುವ ಹಾಗೆ,ಇನ್ನೊಮ್ಮೆ ದೊಡ್ಡ ಲಾಟರಿ ಹೊಡೆಯಿತು. ಸ್ವಲ್ಪ ತಲೆ ಕೆಡಿಸಿಕೊಂಡು ಪ್ರಯತ್ನಿಸಿದ್ದಕ್ಕೆ ಪೈಲಟ್ ತರಬೇತಿಗೆ ಆಯ್ಕೆಯಾದೆ. ತರಬೇತಿಯನ್ನು ಮುಗಿಸಿ  ಅಂದಿನ ಕೇಂದ್ರ ರಕ್ಷಣಾ ಮುಂತ್ರಿಯವರ ಕೈಯೀಂದಲೇ 'ಪೈಲಟ್ ಆಫೀಸರ್' ಹುದ್ದೆಯೂ ಪ್ರಧಾನವಾಯಿತು.   ಪಿಯುಸಿ ಮಾಡಿಕೊಂಡುವನಿಗೆ ಮೊದಲ ‌‌ವರ್ಗದ ಗೆಜಟಡ್ ಅಧಿಕಾರಿಯ ಸ್ಥಾನ! ಎಲ್ಲಾ ದೇವರ ದಯೆ.
  ಕಾಲಕ್ರಮೇಣ ಶೆಟ್ರು ಗಂಗೂರನ್ನು ಬಿಟ್ಟು ಮಕ್ಕಳ ಜೊತೆಗೆ ಬೆಂಗಳೂರುನಲ್ಲಿ ಸೆಟ್ಲಾದರು.
  ಇತ್ತೀಚಿಗೆ ನಮ್ಮ ತಂದೆಯವರ ಸಹಸ್ರ ಪೂರ್ಣಚಂದ್ರಶಾಂತಿ, ಅವರೇ ಕಟ್ಟಿಸಿದ ಚೆನ್ನಕೇಶವ ದೇವಾಲಯದಲ್ಲಿ ನೆರವೇರಿತು. ಪೂಜೆಯ, ತುಲಾಭಾರದ ಸಿದ್ದತೆ ಜೋರಾಗಿ ನಡೆಯುತ್ತಿತ್ತು.  ಶೆಟ್ಟರಿಗೂ ಇದೇ ಸಂದರ್ಭದಲ್ಲಿ ತುಲಾಭಾರವನ್ನು ಮಾಡಿಸುವ ಆಲೋಚನೆಯು ಬಂತು.
  ಕರೆ ಮಾಡಿದಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿಯಿತು. " ನಾನು ಬಂದರೆ ನಂದೂ ತುಲಾಭಾರ ಮಾಡುಸ್ತಿಯೇನೋ" ಎಂದರು,ಸರಿ ಬನ್ನಿ ಮಾಡಿಸೋಣ ಎಂದೆ.  ಯಾಕೋ ಶೆಟ್ಟರು ಖಿನ್ನರಾಗಿದ್ದಾರೆ ಎನಿಸಿತು. ಎರಡು ದಿನಬಿಟ್ಟು ಮತ್ತೆ ಕರೆ ಮಾಡಿದೆ, ಇನ್ನೂ ಆಸ್ಪತ್ರೆಯಲ್ಲಿ ಇದ್ದರು.  ಡಾಕ್ಟರು  ಪ್ರಯಾಣ ಮಾಡಬಾರದು ಎಂದು ಹೇಳಿದರಂತೆ. ಹೋಗಲಿ ಬಿಡು ನನ್ನ ತುಲಾಭಾರದ ಖರ್ಚು ಉಳಿಯಿತು ಎಂದರು. ಆದರೆ ನನ್ನ ಪ್ಲಾನಿನ  ಪ್ರಕಾರ ನೀವು ಬಂದರೆ ಇನ್ನೂ ಖರ್ಚು ಉಳಿಯುತ್ತದೆ ಎಂದೆ,'ಅದು ಹೇಗೋ?' ಎಂದರು,ಸರಿ ನನ್ನ ಪ್ಲ್ಯಾನನ್ನು ವಿವರಿಸಿದೆ...ಒಂದು ತಕ್ಕಡಿಯಲ್ಲಿ ನಮ್ಮ ತಂದೆಯವರು(ಬರೋಬ್ಬರಿ 90ಕಿಲೊ) ಒಂದು ತಕ್ಕಡಿಯಲ್ಲಿ ಶೆಟ್ಟರು (45 ಕಿಲೊ) ಉಳಿದ 45 ಕಿಲೊಗಳ ಬಾಳೆಹಣ್ಣು ! ಹೇಗಿದೆ ತುಲಾಭಾರ ಎಂದೆ,ಅಂತೂ ಬಾಳೆಹಣ್ಣಿನ ಜೊತೆ ನನ್ನನ್ನೂ ದಾನ ಮಾಡುವ ಪ್ಲಾನು ಇದೆ, ಅಂಗಾರೆ ಖಂಡಿತಾ ಬರಲ್ಲ ಎಂದರು. ಇಷ್ಟು ಮಾತಾಡುವ ಹೊತ್ತಿಗೆ ಅವರ ಮೂಡು ತಿಳಿಯಾಗಿದೆ ಎನಿಸಿತು,ಅದೇ ನನ್ನ ಉದ್ದೇಶವೂ ಆಗಿತ್ತು.
     ಮುಂದೊಮ್ಮೆ ಬೆಂಗಳೂರಿನ ಮನೆಯಲ್ಲಿ ನಡೆದ ಸಮಾರಂಭಕ್ಕೆ ನಮ್ಮ ಮನೆಗೆ ಬಂದರು. ನನಗಂತೂ ಶೆಟ್ರು ನಮ್ಮ ಮನೆಗೆ ಬಂದರು ಅಂತ ಸಂಭ್ರಮವೋ   ಸಂಭ್ರಮ. ಈಗಲೂ ಪ್ರತಿವರ್ಷ ಯುಗಾದಿಯ ಸಂಜೆ ಶೆಟ್ಟರನ್ನು ,ಅವರೆಲ್ಲಿದ್ದರೂ ಸರಿ ಅವರನ್ನು ಮಾತಾಡಿಸಿ ಅವರ ಆಶೀರ್ವಾದವನ್ನು ಪಡೆಯುವುದೇ ನನ್ನ ಪುಣ್ಯ ಎಂದು ಭಾವಿಸುತ್ತೇನೆ.

ಷಾಹೀನ್ ಬಸ್ಸಿನ ಸುತ್ತಮುತ್ತ


ಬಾಲ್ಯದ ದಿನಗಳ ನೆನಪು.. ದಟ್ಟ ಮಲೆನಾಡಿನ ಮತ್ತು ಬಯಲುಸೀಮೆಯ ನಡುವೆ ಹಂಚಿಕೊಂಡ ದಿನಗಳವು.
ಷಾಹೀನ್ ಎನ್ನುವ ಹಸಿರು ಬಣ್ಣದ ಬಸ್ಸು ದಾವಣಗೆರೆ ಯಿಂದ ಚಿಕ್ಕಮಗಳೂರಿನ ನಡುವೆ ಓಡುತ್ತಿದ್ದ 'ಎಕ್ಸ್ಪ್ರೆಸ್'ಗಾಡಿ. ಈಗಿನ ಬೆಂಗಳೂರು ಟು ನ್ಯೂಯಾರ್ಕ ಫ್ಲೈಟ್ ಗೆ ಇರುವ ಗತ್ತು ಆಗ ಆ ಬಸ್ಸಿಗೆ ಇರುತ್ತಿತ್ತು. ಬೆಳಗ್ಗೆ  ಆರು ಘಂಟೆಗೆ ದಾವಣಗೆರೆ ಯಿಂದ ಹೊರಟರೆ ಮಧ್ಯಾಹ್ನದ ಮೂರು ಘಂಟೆಗೆ ಚಿಕ್ಕಮಗಳೂರು ತಲುಪುತ್ತಿತ್ತು. ಜೋರಾಗಿ ಹಾರ್ನ ಹೊಡೆದು ಕೊಂಡು ಧೂಳೆಬ್ಬಿಸಿಕೊಂಡು ಬಂತೆಂದರೆ ಇತರೆ ಗ್ರಾಮಾಂತರದ ಬಸ್ಸುಗಳು ಮತ್ತು ಸಣ್ಣಪುಟ್ಟ ವಾಹನಗಳು ಸೈಡಾಗಲೇಬೇಕು. ಈ ಬಸ್ಸಿನಲ್ಲಿ ಕೆಲವು  ವರ್ಷಗಳ ತನಕ ದಾವಣಗೆರೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದೆವು.  ನಂತರ ನಮ್ಮ ತಂದೆಯವರಿಗೆ ಚಿಕ್ಕಮಗಳೂರಿನಿಂದ  ಬುಕ್ಕಾಂಬುಧಿ ಎನ್ನುವ ಸ್ಥಳಕ್ಕೆ ವರ್ಗಾವಣೆ ಯಾಯಿತು. ಆಗ ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಅವಧಿ ಕಡಿಮೆಯಾಯಿತಾದರೂ, ಅದರ ಜೊತೆಗಿನ ನಂಟು ನನ್ನ  ಎಸ್ಸೆಸ್ಎಲ್ಸಿ ಮುಗಿಯುವವರೆಗು ಪ್ರತಿ ವಾರಕ್ಕೊಮ್ಮೆ ಒಂದರಂತೆ ಮುಂದುವರೆಯಿತು.
  ಬುಕ್ಕಾಂಭುಧಿಯಲ್ಲಿ ನಮ್ಮ ತಂದೆಯ ಜೊತೆ ನಾನು, ಮತ್ತು ಅಲ್ಲಿಂದ ಸುಮಾರು ಐವತ್ತು ಕಿಮೀ ದೂರದ ಹುಟ್ಟೂರಾದ ಗಂಗೂರಿನಲ್ಲಿ ನಮ್ಮ ತಾಯಿ ಇತರೆ ಮೂವರು ಮಕ್ಕಳೊಂದಿಗೆ ಇರುವ ವ್ಯವಸ್ಥೆ. ಪಿತ್ರಾರ್ಜಿತ ಜಮೀನು ಕಂಡವರ ಪಾಲಾಗಬಾರದೆಂದು ನಮ್ಮ ತಂದೆ ತಾಯಿ ಮತ್ತು ಮಕ್ಕಳ ಮಧ್ಯದ ಈ ರೀತಿಯ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲೇ ಬೇಕಾದ ಪರಿಸ್ತಿತಿ ಉಂಟಾಗಿತ್ತು. ಈ ಎರಡು ಊರುಗಳ ನಡುವೆ ಹೊಕ್ಕಳು ಬಳ್ಳಿಯಂತೆ ಸಾರಿಗೆ ಭಾಂಧವ್ಯಕಲ್ಪಿಸಿದ್ದು ಷಾಹೀನ್ ಬಸ್ಸು.
  ಪ್ರತಿ  ಸೋಮವಾರ ಗಂಗೂರಿನ ಮನೆಯಲ್ಲಿ ದಡಬಡಿಸಿಕೊಂಡು ಎದ್ದು ನಿದ್ದೆಗಣ್ಣಿನಲ್ಲೇ ಬಸ್ಸ್ಟಾಂಡ್ ತಲುಪಿ ಷಾಹೀನ್ ಬಸ್ಸು ಹಿಡಿದು ಬಿಟ್ಟು ಬುಕ್ಕಾಂಬುಧಿ ತಲುಪಿದರೆ ಪುನಃ ಶನಿವಾರದ ಬೆಳಗಿನ ಕ್ಲಾಸ್ ಮುಗಿಸಿಕೊಂಡು ಗಂಗೂರಿನ ಕಡೆಗೆ ಸವಾರಿ. ನನಗೆ ಮಾತ್ರ ಷಾಹೀನ್ ಬರೀ ಒಂದು ಬಸ್ಸಾಗಿರಲಿಲ್ಲ,ಅದರ ಜೊತೆಗೆ ಒಂದು ಗಾಢವಾದ ಬಾಂಧವ್ಯ ಏರ್ಪಟ್ಟಿತ್ತು. . ಒಂದು ಕಡೆ ತಂದೆಯವರ ಉದ್ಯೋಗ ಪರ್ವ ಇನ್ನೊಂದು ಕಡೆ ತಾಯಿಯ ಕರ್ಮಭೂಮಿ. ಇವೆರಡರ ನಡುವೆ ನಾನು ಮತ್ತು ನನ್ನ ಷಾಹೀನ್ ಬಸ್ಸು.  ಈ ಬಸ್ಸೇ ನನ್ನದೇನೊ ಎನ್ನುವ ಭಾವನಾತ್ಮಕ ಸಂಬಂಧ ಬೆಳೆದುಕೊಂಡುಬಿಟ್ಟತ್ತು ಅದರೊಟ್ಟಿಗೆ ಕಳೆದ ನಾಲ್ಕು ವರ್ಷಗಳಲ್ಲಿ.
  ಬುಕ್ಕಾಂಬುಧಿಯಲ್ಲಿ ಏಳನೇ ತರಗತಿಯಿಂದ ಎಸ್ ಎಸ್ ಎಲ್ಸಿ ಮುಗಿಯುವವರೆಗಿನ ಆ ನಾಲ್ಕು ವರ್ಷಗಳು ನನ್ನ ಬದುಕಿಗೇ ಮಹತ್ತರ ತಿರುವುಕೊಟ್ಟ ಹಂತ.
  ಮೊಟ್ಟಮೊದಲ ಪಾಠ, ಅಡುಗೆಮಾಡುವ ಅನಿವಾರ್ಯತೆ. ಮೊದಲಿಂದಲೂ ಇದರಲ್ಲಿ ಸ್ವಲ್ಪ ಅಭಿರುಚಿ ಇದ್ದುದರಿಂದ ಅದೇನು ಕಷ್ಟವೆನಿಸಲಿಲ್ಲ.
  ತಂದೆಯವರಿಗೂ ಮಲೆನಾಡಿನ ಶೈಲಿಯ ರುಚಿಕರವಾದ ಅಡುಗೆ ಮಾಡುವ ಅನುಭವವಿದ್ದುದರಿಂದ ಕಲಿಯಲು ಸಲೀಸಾಯಿತು. ಮಲೆನಾಡಿನ  ಶೈಲಿಯ ಹುಳಿ ಎಂದರೆ ತೆಂಗಿನಕಾಯಿ ಮತ್ತು ಸಾಂಬಾರ್ ಮಸಾಲೆ ರುಬ್ಬಿಕೊಂಡು ಬೇಯಿಸಿದ ಬೇಳೆ ತರಕಾರಿಗೆ ಬೆರೆಸಿ ಮಾಡಬೇಕು ಮತ್ತು ಅದಕ್ಕೆ ತುಪ್ಪದ ಒಗ್ಗರಣೆ, ಅದೇನು ರುಚಿ!,ಸ್ವಲ್ಪ ಸಮಯದಲ್ಲೇ ಎಕ್ಸ್ಪರ್ಟು. ಸೋಮವಾರ ಅಲ್ಲಿ ಸಂತೆ. ವಾರಕ್ಕಾಗುವಷ್ಟು ಸೊಪ್ಪು ತರಕಾರಿಗಳನ್ನು ಖರೀದಿಸಿ,ಒದ್ದೆ ಬಟ್ಟೆಯಲ್ಲಿ ಸುತ್ತಿ ಜತನ ಮಾಡಿಟ್ಟುಕೊಳ್ಳುತ್ತಿದ್ದೆ.
  ಬುಕ್ಕಾಂಬುಧಿಗೆ ಆ ಹೆಸರು ಬಂದಿದ್ದು ಅಲ್ಲಿನ ಅಂಬುಧಿಯೋಪಾದಿಯ, ಬುಕ್ಕರಾಯ ಕಟ್ಟಿಸಿದ ಕೆರೆಯಿಂದಾಗಿ.ಆ ವಿಶಾಲವಾದ ಕೆರೆಯ ನೀರು ಸುತ್ತಲಿನ ಹಳ್ಳಿಗಳನ್ನು,,ಗದ್ದೆ,ತೋಟಗಳನ್ನು ನಿರಂತರವಾಗಿ ತಣಿಸುತ್ತದೆ. ಅಡಿಕೆ ತೆಂಗು, ಬಾಳೆ, ಕಬ್ಬು ಸಮ್ರುದ್ದವಾಗಿ ಬೆಳೆದು ಎಲ್ಲಿನೋಡಿದರಲ್ಲಿ ಹರಿದ್ರ ಸೌಂದರ್ಯದ ಮೆರವಣಿಗೆ. ಕೆರೆಯ ಮತ್ತು ಊರಿನ ನಡುವೆ ಒಂದು ಬೆಟ್ಟ. ನಮ್ಮ ಹೈಸ್ಕೂಲು ಆ ಬೆಟ್ಟದ ತಪ್ಪಲಿನಲ್ಲೇ ಇದ್ದುದರಿಂದ ನನ್ನಂತಹ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತ ವಾತಾವರಣ. ಬೆಟ್ಟದ ಮೇಲೆ ಒಂದು ಪುಟ್ಟ ದೇವಸ್ಥಾನ, ಅಲ್ಲಿ ಒಬ್ಬರು ಸನ್ಯಾಸಿ ಕೂಡ ವಾಸಿಸುತ್ತಿದ್ದರು.ಆ ಊರಿನ ಜನರಿಗೆ ಸನ್ಯಾಸಿಯವರ ಬಗ್ಗೆ ತುಂಬಾ ಗೌರವ. ಮುಂದೆ ಭೈರಪ್ಪನವರ ಕಾದಂಬರಿ ಯಲ್ಲಿ ಇದೇ ತರಹದ ಬೆಟ್ಟದ ಮೇಲೆ ಒಬ್ಬ ಸನ್ಯಾಸಿಯ ಬಗ್ಗೆ ಓದುತ್ತಿದ್ದಾಗ ಇವರನ್ನು ನೆನಪಿಸಿಕೊಳ್ಳುತ್ತಿದ್ದೆ.  ಪ್ರಕ್ರುತಿಯ ಸಂತುಷ್ಟತೆ ಇದ್ದಾಗ ಜನರೂ ಸುಸಂಸ್ಕಕೃತರಾಗಿರುತ್ತಾರೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಧಾರ್ಮಿಕತೆ ಮಲೆನಾಡಿನ ಜನಗಳಲ್ಲಿ ಸಹಜವಾಗಿ ಮೈಗೂಡಿರುತ್ತದೆ. ಊರಿನ ಮಧ್ಯದಲ್ಲಿ ವಿರೂಪಾಕ್ಷ ದೇವರ ದೇವಸ್ತಾನ,ಆದರ ಸುತ್ತಲಿನ ವಿಶಾಲವಾದ ಆವರಣದಲ್ಲಿ ಒಂದಲ್ಲ ಒಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವರುಷವಿಡೀ ನಡೆಯುತರುತ್ತಿತ್ತು. ಗಣೇಶ ಚತುರ್ಥಿ ಅಲ್ಲಿನ ವಿಶೇಷವಾದ ಹಬ್ಬ. ಹನ್ನೊಂದು ದಿನಗಳು ಊರಿಗೆ ಊರೇ ಸಂಭ್ರಮದ ಬೀಡಾಗಿರುತ್ತಿತ್ತು. ನಾಟಕ, ಹಾಡುಗಾರಿಕೆಗಳ ಸ್ಪರ್ಧೆ, ಯಕ್ಷಗಾನ, ಗೊಂಬೆಯಾಟ ಇನ್ನುಇತರೆ ಪ್ರತಿಭಾ ಪ್ರದರ್ಶನಕ್ಕೆಒಂದು ಒಳ್ಳೆಯ ವೇದಿಕೆ.
   ನಮ್ಮ ಶಾಲೆಯ ಕನ್ನಡ ಪಂಡಿತರು ಕಾಸರಗೋಡಿನ ಕಡೆಯವರು. ಅಧ್ಭತ  ಪ್ರತಿಭಾವಂತ ವ್ಯಕ್ತಿ. ಅವರೇ ರಚಿಸಿದ ಮತ್ತು‌ ನಿರ್ದೇಶಿಸಿದ ಗೀತಾನಾಟಕಗಳಂತೂ ಮರೆಯಲಾರದ ಅನುಭವ. ಇವರ ಪ್ರೋತ್ಸಾಹದಿಂದ ನಾನು ಒಂದು ಮಟ್ಟದ ಗಾಯಕನಾದೆ,ನಟನಾದೆ.'ಜನತಾ ಫ್ರೌಢಶಾಲೆಯ' proud ವಿಧ್ಯಾರ್ಥಿಯಾದೆ. ನಮ್ಮ ಹೈಸ್ಕೂಲಿನ ಕುಮುದ ಎನ್ನುವ ಪತ್ರಿಕೆಯ ಉಪ ಸಂಪಾದಕನೂ ಆದೆ. ಇನ್ನೂ ತುಂಬಾ ಸಾಧನೆ ಮಾಡುವ ಹುಮ್ಮಸ್ಸು ಬೆಳೆಯತೊಡಗಿತು. ಹಗಲುಗನಸುಗಳು ಗರಿಕೆದರಿಕೂಂಡವು. ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಸಮಯ ಈ ಸಾಧನೆಗಳ ತುಡಿತಕ್ಕೆ  ರೆಕ್ಕೆಗಳು ಕಟ್ಟಿಕೊಂಡು ಇನ್ನೂ  ತೀವ್ರವಾಗುತ್ತಿತ್ತು. ವಾರಾಂತ್ಯ ಗಂಗೂರಿನ ಹೊಲದಲ್ಲಿ ಮತ್ತು ಹಿತ್ತಲಿನಲ್ಲಿ  ಕೆಲಸ ಮಾಡುವ ಅನಿವಾರ್ಯತೆ ಇದ್ದುದರಿಂದ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಲು ಕಷ್ಟವಾಗುತ್ತಿತ್ತು. ಇದನ್ನು  ಗಮನಿಸಿದ ಹೆಡ್ಮಾಷ್ಟರು 'ಏನೂ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗುತ್ತಾ ಇದೆ' ಎನ್ನುವ ಎಚ್ಚರಿಕೆಯನ್ನೂ ಕೊಟ್ಟರು.
  ಆದರೆ ಎಸ್ಸೆಸ್ಎಲ್ಸಿ ಪರೀಕ್ಷೆಗೆ ಗುಟ್ಟಾಗಿ ತಯಾರಿ ನಡೆಸಿರುವ ಹುನ್ನಾರ ಇತರರಿಗೆ ಗೊತ್ತೇ ಆಗಲಿಲ್ಲ . ರಾತ್ರಿ ಎಲ್ಲರೂ ಮಲಗಿದ ಮೇಲೆ ಅಟ್ಟದ ಮೇಲೆ ಹೋಗಿ ಓದಲು ಶುರುಮಾಡಿಕೊಳ್ಳುತ್ತಿದ್ದೆ. ಲೈಟು ಬಲ್ಬಿಗೆ ಕಪ್ಪು ಪೇಪರ್ನಿಂದ ಸುತ್ತಿಬಿಟ್ಟು ಸ್ವಲ್ಪ ಬೆಳಕು ಬೀಳುವ ಜಾಗದಲ್ಲಿ ಕುಳಿತು ಓದುತ್ತಿದ್ದೆ. ತೂಕಡಿಕೆ ಬಂದಾಗ ತಣ್ಣೀರು ಚುಮಿಕಿಸಿಕೊಂಡು ಪುನಃ ಶುರುಮಾಡಿಕೊಳ್ಳುತ್ತಿದ್ದೆ. ಹೀಗೊಂದು  ದಿನ ಜೋರಾಗಿ ನಿದ್ದೆ ಬಂದು ಅಟ್ಟದ ಮೆಟ್ಟಲಿನ ಮೇಲಿಂದ ಜಾರಿ ಸೀದಾ ಕೆಳಗೆ ಬಂದು ಬೆನ್ನಿಗೆ ಪೆಟ್ಟು ಮಾಡಿ ಕೊಂಡಮೇಲೆ ಈ ಗುಪ್ತ ಮಾರ್ಗವನ್ನು ಬಿಡಬೇಕಾಯಿತು.
  ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಸಮಯದಲ್ಲಿ ಪುಸ್ತಕ ಗಳು ಜೊತೆಗೆ ಇರುತ್ತಿತ್ತು, ಆಗಾಗ ಓದಿ ಮನದಟ್ಟು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು.
  ಅಂತೂ ನೋಡು ನೋಡುತ್ತಿದ್ದ ಹಾಗೆ ಪರೀಕ್ಷೆಯ ಸಮಯ ಬಂದೇಬಿಟ್ಟಿತು. ಅಜ್ಜಂಪುರದ ಪರೀಕ್ಷಾ ಕೇಂದ್ರ ಸ್ವಲ್ಪ ದೂರವಿದ್ದುದರಿಂದ ಅಲ್ಲಿಯ ಆಶ್ರಮದಲ್ಲೇ ವಾಸದ ವ್ಯವಸ್ಥೆ ಮಾಡಿದ್ದರು. ಓದಲು ತುಂಬಾ ಪ್ರಶಾಂತ ವಾತಾವರಣದಲ್ಲಿ ಪರೀಕ್ಷೆಯ ತಯಾರಿ ಸುಲಭವಾಯಿತು. ಆಶ್ರಮದ ಸ್ವಾಮಿಗಳು ಆಗಾಗ ಮಾತಾಡಿಸಿ ಪ್ರೋತ್ಸಾಹ ನೀಡುತ್ತಿದ್ದರು. ಪರೀಕ್ಷೆಗಳಲ್ಲಿ  ಚೆನ್ನಾಗಿ ಮಾಡಿದ್ದೇನೆ ಎನ್ನುವ ಸಂತಸದಿಂದ ಗಂಗೂರಿಗೆ ಅದೇ ಷಾಹೀನ್ ಬಸ್ಸಿನಲ್ಲಿ ಮರುಳಿದೆ.
  ಬೇಸಿಗೆ ರಜಾ ದಿನಗಳಂತೂ ಕಳೆದಿದ್ದೇ ಗೊತ್ತಾಗಲಿಲ್ಲ.
  ಅಷ್ಟರಲ್ಲಿ ಹಳ್ಳಿಯ, ಹೊಲಗಳ,ವ್ಯವಸಾಯದ ಜೀವನದ ಒಂದು ಹದ ಸಿಕ್ಕಿತು. ಅದು ಎಷ್ಟರ ಮಟ್ಟಿಗೆ ಅದರಲ್ಲಿ ಬೆರೆತು ಹೋಗಿದ್ದೆನೆಂದರೆ,ಎಸ್ಸೆಸೆಲ್ಸಿಯ ಪರೀಕ್ಷಾ ಪಲಿತಾಂಶ ಬಂದಾಗ ನಾನು ಜಿಟಿಜಿಟಿ ಮಳೆಯಯಲ್ಲಿ,ಮೆಣಸಿನಸಸಿಗಳನ್ನು ಕಸಿ ಮಾಡುತ್ತಿದ್ದೆ.
  ಹೊಲಕ್ಕೇ ನಮ್ಮ ತಂದೆಯವರು ಬರೆದ ಪತ್ರ ತಲುಪಿಸಿದರು. ಮಳೆಯಲ್ಲಾಗಲೇ ಅರ್ಧ ನೆನೆದು ಹೋಗಿದ್ದ ಪತ್ರದಲ್ಲಿತ್ತು ನನ್ನ ಪಲಿತಾಂಶ,ಮೊದಲ ದರ್ಜೆ ಯಲ್ಲಿ ಪಾಸಾಗಿದ್ದೆ! ಕೆಲವೇ ಕ್ಷಣಗಳಲ್ಲಿ ನನ್ನ ಪ್ರಪಂಚವೇ ಬದಲಾಯಿತು. ಧಿಢೀರನೆ ಸಿಕ್ಕ ಪ್ರಖ್ಯಾತಿ,ಹೊಗಳಿಕೆಗೆ ಕಕ್ಕಾಬಿಕ್ಕಿಯಾದೆ.
  ಸ್ಕೂಲಿನಿಂದ  ಸನ್ಮಾನ ಸಮಾರಂಭದ ಕರೆ ಬಂತು. ಎಷ್ಟು ಪ್ರೋತ್ಸಾಹದಿಂದ ಹುರಿದುಂಬಿಸಿದರು ಬುಕ್ಕಾಂಬುದಿಯ ಜನ,ಅವಿಸ್ಮರಣೀಯ.  ದಾವಣಗೆರೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಯಾಣ. ಷಾಹೀನ್ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಗಳ ಜೊತೆ ಸಿಹಿ ಹಂಚಿಕೂಂಡು ಅವರಿಗೆ ವಿದಾಯ ಹೇಳುವಾಗ ಗಂಟಲು ತುಂಬಿ ಬಂತು.
  ಈಗಲೂ ದಾವಣಗೆರೆಯ ಕಡೆ ಹೋದಾಗ ಕಣ್ಣುಗಳು ಆ ಹಸಿರು ಬಣ್ಣದ ಬಸ್ಸನ್ನೇ ಹುಡುಕುತಿರುತ್ತವೆ.