ಹರಿಯುವ ನೀರಿಗೆ ಇರುವ ಚೈತನ್ಯದಾಯಕತೆ, ಔಷದೀಯ ಗುಣಗಳು ನಿಂತ ನೀರಿಗೆ ಇರಲ್ವಂತೆ..ಹೀಗಂತ ನಮ್ಮಜ್ಜ ನನಗೆ ನಮ್ಮ ಕುಲ ಕಸಬನ್ನು ಕಲಿಸಿಕೊಡುವಾಗ ಹೇಳಿಕೊಟ್ಟ ಮೊದಲ ಪಾಠ. ನಾವು 'ನೀರುಗಂಟಿಗಳ' ವಂಶದವರು, ಜಲ ನಿರ್ವಹಣೆಯೇ ನಮ್ಮ ಜೀವನ.
ವಿಜಯನಗರದ ಅರಸರು ನೀರಿಗೆ ಕೊಟ್ಟೊಷ್ಟು ಮಹತ್ವವನ್ನು ಇನ್ನಾರೂ ಕೊಡಲಿಲಲ್ಲವಂತೆ. ಎರಡು ಗುಡ್ಡಗಳನ್ನು ನೋಡಿದರೆ ಸಾಕು ಅದರ ಕಣಿವೆಯಲ್ಲಿ ಕೆರೆ ಕಟ್ಟಿಸುತ್ತಿದ್ದರಂತೆ. ನೋಡು ನೋಡುತ್ತಿದ್ದಂತೇ ಕೆಲವೇ ವರ್ಷಗಳಲ್ಲಿ ಕೆರೆತುಂಬಿಕೊಂಡು, ಸುತ್ತಲೂ ಹಸಿರು ಹರಡಿಕೊಂಡು,ಹಸನಾದ ಬೆಳೆಗಳ ಸಮೃಧ್ಧದ ಬೀಡಾಗುತ್ತಿತ್ತಂತೆ. ಆ ಕೆರೆಗಳ ನಿಯಂತ್ರಣಕ್ಕೆ ನಮ್ಮ ವಂಶದ ನೀರುಗಂಟಿಗಳ ನೇಮಕವಾಗುತ್ತಿತ್ತು. ಹಾಗಾಗಿ ಕೆರೆಗಳ ಜೊತೆಗೇ ನಮ್ಮ ವಂಶವೂ ಹರಡಿಕೊಳ್ಳ ತೊಡಗಿತು.
ಆಗ ವ್ಯಾಪಾರಾರ್ಥವಾಗಿ ವಿಜಯನಗರಕ್ಕಾಗಲೇ ಪೋರ್ಚುಗೀಸರ ಪ್ರವೇಶವಾಗಿತ್ತು. ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಇವರ ಹಡಗಿನಿಂದಲೇ ಅರಬ್ಬೀ ದೇಶದಿಂದ ಗೋವಾಕ್ಕೆ, ಭಟ್ಕಳದ ಬಂದರಿನಿಂದ ವಿಜಯನಗರಕ್ಕೆ ಬರುತ್ತಿದ್ದವು. ಇವರ ಇನ್ನೊಂದು ತಾಂತ್ರಿಕ ಪರಿಣಿತಿಯಿಂದ ಕೃಷ್ಣದೇವರಾಯರಿಗೆ ಇವರು ಆಪ್ತರಾದರು. ಇವರೂ ನಮ್ಮ ಹಾಗೆ ಜಲ ನಿರ್ವಹಣೆಯ ಪ್ರವೀಣರು. ನನ್ನನ್ನು 'ಪೋಂಟೆ' ಎಂಬ ತಂತ್ರಙ್ನರೊಡನೆ ತರಬೇತಿಗೆ ನಿಯಮಿಸಲಾಯಿತು.
ಕೃಷ್ಣದೇವರ ಯೋಜನೆಯ ಪ್ರಕಾರ ತುಂಗಭಧ್ರಾನದಿಯ ನೀರನ್ನು ಕಾಲುವೆಗಳ ಮೂಲಕ ಕಮಲಾಪುರದ ಕೆರೆಯವರೆಗೂ ಹರಿಸುವುದು. ಈ ಯೋಜನೆಯಿಂದ ಉತ್ತರಕ್ಕೆ ತುಂಗಭದ್ರೆ, ದಕ್ಷಿಣಕ್ಕೆ ಕಮಲಾಪುರದ ಕೆರೆ... ವರ್ಷವಿಡೀ ನೀರಿನ ಕೊರತೆಯೇ ಇಲ್ಲ..ಎಂಥಹ ಅಧ್ಭುತ ವಿಚಾರ. ಕಲ್ಲು ಬಂಡೆಗಳ ನಾಡೆಂದು ಹೆಸರು ಪಡೆದಿದ್ದ ವಿಜಯನಗರ ಏನಾಗಬಹುದು.
ಕಲ್ಲು ಬಂಡೆಗಳೇ ನಮ್ಮ ಅಣೆಕಟ್ಟಿನ ಮೂಲಾಧಾರ. ಹಂಪೆಯಿಂದ ಸುಮಾರು ಮೂವತ್ತು ಮೈಲಿದೂರದಲ್ಲಿ ತುಂಗಭದ್ರ ನದಿ ಕವಲೊಡೆದು ಹರಿಯುತ್ತಿತ್ತು. ಮಧ್ಯ ಒಂದು ಪುಟ್ಟ ದ್ವೀಪ. ಯೋಜನಯಂತೆ ದ್ವೀಪದ ಎರಡೂ ಕಡೆ ಕಲ್ಲು ಬಂಡೆಗಳಿಂದಲೇ ಅಣೆಕಟ್ಟು ಕಟ್ಟುವುದು ಮತ್ತು ನದಿ ನೀರನ್ನು ಇಬ್ಬದಿಯಿಂದಲೂ ಕಾಲುವೆಗಳಿಗೆ ಹರಿಸುವುದು. ಕಲ್ಲು ಬಂಡೆಗಳ ನಡುವೆ ಹೂಣು ಕಟ್ಟದಹಾಗೆ ಕಿರಿದಾದ ಜಾಗದಲ್ಲಿ ವೇಗವಾಗಿ ನೀರು ಹರಿಯುತ್ತಿತ್ತು. ಹೀಗೆ ನದಿ ನೀರಿನ ವೇಗಕ್ಕಿಂತ ಕಾಲುವೆ ನೀರಿನ ರಭಸ ಹೆಚ್ಚಾಗಿ ಎತ್ತರದ ಪ್ರದೇಶಗಳಿಗೆ ನೀರು ಸರಾಗವಾಗಿ ತಲುಪುತ್ತಿತ್ತು.
ಕೃಷ್ಣದೇವರಾಯರ ಸಮ್ಮುಖದಲ್ಲೇ ಇದರ ಉಧ್ಗಾಟನೆ ವಿಜ್ರಂಭಣೆಯಿಂದ ನಡೆಯಿತು. ಈ ಕಾಲುವೆಗೆ 'ರಾಯ ಕಾಲುವೆ' ಎಂದು ಹೆಸರಿಸಲಾಯಿತು.
ಕೃಷ್ಣದೇವರು ಆಗತಾನೇ ಅವರ ತಾಯಿಯ ನೆನಪಿನಲ್ಲಿ'ನಾಗಲಾಪುರ' ನಗರವನ್ನು ಕಟ್ಟಲು ಪ್ರಾರಂಭಿಸುತ್ತಿದ್ದರು. ನಗರ ನಿರ್ಮಾಣಕ್ಕೆ ಮೊದಲೇ ತುಂಗಭದ್ರೆ ಆ ನಗರ ಪ್ರವೇಶಕ್ಕೆ ಸಿಧ್ಧಳಾಗಿದ್ದಳು.
"ಕಟ್ಟು ಮತ್ತು ಕೊಡುಗೆ" ಎನ್ನುವ ಯೋಜನೆ ವಿಜಯ ನಗರ ಸಾಮ್ರಾಜ್ಯದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಮತ್ತು ಜಮೀನುದಾರಿಗೆ ಜನಪ್ರಿಯವಾದ ಅವಕಾಶ. ಇದರ ಪ್ರಕಾರ ಕೆರೆ, ಕಾಲುವೆ ಮತ್ತು ಚಿಕ್ಕ ಅಣೆಕಟ್ಟುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ 'ಕಟ್ಟು'ವವರಿಗೆ 'ಕೊಡುಗೆ'ಯಾಗಿ ಕೆಲವು ಎಕರೆ ಜಮೀನನ್ನು ದೇಣಿಗೆಯಾಗಿ ಕೊಡುತ್ತಿದ್ದರು. ಕೆರೆ ಕಾಲುವೆಗಳ ನಿರ್ವಹಣೆ ಮಾಡುತ್ತಿದ್ದ ನಮ್ಮ ವಂಶಸ್ತರಿಗೆ ತೆರೆಗೆ, ಕಂದಾಯಗಳ ವಿನಾಯಿತಿ ಇರುತ್ತಿತ್ತು.
ಹೀಗಾಗಿ ರಾಜಬೊಕ್ಕಸಕ್ಕೆ ನಷ್ಟವಿಲ್ಲದೆ ಸಾಮ್ರಾಜ್ಯ ಸಂಪದ್ಭರಿತವಾಗಿ ಬೆಳೆಯುತ್ತಾಹೋಯಿತು.