ಆ ರಾತ್ರಿ campfire ನ ಮುಂದೆ ಕುಳಿತು ಅಶ್ವಥ್ಥಾಮರನ್ನು ನೆನಸುವುದಕ್ಕೆ ಒಂದು ಹಿನ್ನಲೆಯಿದೆ.
ಈ ಕಾಡಿನ ಹತ್ತಿರವೇ ತಪಕೇಶ್ವರ ದೇವಸ್ತಾನವಿದೆ. ಅದೊಂದು ನೈಸರ್ಗಿಕವಾಗಿ ಸೃಷ್ಟಿಗೊಂಡ ಗುಹೆ. ಅಲ್ಲಿಯ ಶಿವಲಿಂಗದ ಇತಿಹಾಸವೇನೆಂದರೆ,ದ್ವಾಪರಯುಗದಲ್ಲಿ ದ್ರೋಣಾಚಾರ್ಯರು ಈ ಗುಹೆಯೊಳಗೆ ಧೀರ್ಘಕಾಲ ತಪಸ್ಸುಮಾಡಿ ಶಿವನಿಂದ ಧನುರ್ವಿಧ್ಯೆಯನ್ನು ಪಡೆದು ಕೊಂಡರೆಂಬ ದಟ್ಟವಾದ ಪ್ರತೀತಿ ಇದೆ. ದ್ರೋಣ ಪುತ್ರ ಅಶ್ವಥ್ಥಾಮ ಚಿಕ್ಕಂದಿನಿಂದಲೂ ಈ ಗುಹೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದನಂತೆ. ಆಗ ಶಿವಲಿಂಗದ ಮೇಲೆ ಹನಿಹನಿಯಾಗಿ ಹಾಲು ಹನುಕುತ್ತಿತ್ತಂತೆ. ಅಶ್ವಥ್ಥಾಮ ಆ ಹಾಲನ್ನೇ ಸವಿಯತ್ತಾ ಬೆಳೆದನಂತೆ. ಅಲ್ಲಿಯ ಸ್ಥಳೀಯರ ನಂಬಿಕೆಯ ಪ್ರಕಾರ ಈಗಲೂ ಅಲ್ಲಿಗೆ ರಾತ್ರಿಸಮಯದಲ್ಲಿ ಅಶ್ವಥ್ಥಾಮ ಬಂದು ಪೂಜೆ ಸಲ್ಲಿಸುತ್ತಾರಂತೆ. ಇದೊಂದೇ ಶಿವಾಲಯವಲ್ಲ ಈ ಪ್ರಾಂತದ ಹಲವಾರು ಶಿವಾಲಯಗಳಲ್ಲಿ ಹೀಗೊಂದು ಅಶ್ವಥ್ಥಾಮನ ಆಗಮನದ ವಿಷಯವನ್ನು ಬಹಳ ಮಾಮೂಲಿ ವಿಷಯದಂತೆ ಮಾತನಾಡುತ್ತಾರೆ. ನಾನು ವಾಯುಸೇನೆಯ ಆಯ್ಕೆಗೆ ಡೆಹ್ರಾಡೂನಿಗೆ ಬಂದಾಗ ಈ ಶಿವಾಲಯವನ್ನು ನೋಡಿದ್ದೆ.
ಈಗ ಗದುಗಿನ ನಾರಾಯಣಪ್ಪನ ವಿಷಯ. ಗದುಗಿನ ವೀರನಾರಾಯಣ ಮತ್ತು ತ್ರಿಕುಟೇಶ್ವರ ದೇವಾಲಯಗಳು ಸುಮಾರು ಹನ್ನೆರಡನೇ ಶತಮಾನದಲ್ಲಿ ಸ್ತಾಪಿತವಾದ ಪುರಾತನ ದೇವಾಲಯಗಳು. 15 ನೇ ಶತಮಾನದ ಆರಂಭದಲ್ಲಿ ಗದುಗಿನ ನಾರಾಯಣಪ್ಪ ಈ ತ್ರಿಕಟೇಶ್ವರ ಮಂದಿರದಲ್ಲಿ ಬಹಳ ಭಕ್ತಿಯಿಂದ ಶಿವಾರಾಧನೆಯನ್ನು ಮಾಡುತ್ತಿದ್ದರಂತೆ. ಒಂದು ದಿನ ಕನಸಿನಲ್ಲಿ ಶಿವಾದೇಶವಾಯಿತಂತೆ,ಬರುವ ದ್ವಾದಶದ ಪಾರಣದಲ್ಲಿ ಯಾರು ಮೊದಲು ದೇವಸ್ಥಾನದಿಂದ ಹೊರಹೋಗುತ್ತಾರೋ ಅವರೇ ಅಶ್ವಥ್ಥಾಮ ಅವರಿಗೆ ಶರಣು ಹೋಗು, ಮಹಾಭಾರತವನ್ನು ನಿನಗೆ ಅರ್ಥವಾಗುವ ಭಾಷೆಯಲ್ಲಿ ಬರೆಸುತ್ತಾರೆ. ಸರಿ ಪಾರಣದಲ್ಲಿ ಅಶ್ವಥ್ಥಾಮನನ್ನು ಗುರುತಿಸಿದ ಅವರು ಕಾಲಿಡಿದು ತಮ್ಮ ಬೇಡಿಕೆಯನ್ನು ಮುಂದಿಡುತ್ತಾರೆ.
ಆಶ್ಚರ್ಯಗೊಂಡ ಅಶ್ವಥ್ಥಾಮ ಸರಿ,ಆಗಲಿ ಆದರೆ ಎರಡು ಶರತ್ತುಗಳಿವೆ. ಅದೇನೆಂದರೆ,ಒಂದು, ಈ ವಿಷಯವನ್ನು ಯಾರಿಗೂ ತಿಳಿಸಬಾರದು. ಎರಡನೇ ಶರತ್ತು ಸ್ನಾನ ಮಾಡಿಕೊಂಡು ಒದ್ದೆ ಪಂಚೆಯಲ್ಲಿ ದೇವಸ್ಥಾನದ ಒಂದು ನಿರ್ದಿಷ್ಟ ಕಂಭದ ಬಳಿ ಕುಳಿತುಕೊಂಡು ಬರೆಯಲು ಶುರು ಮಾಡು. ನಿನ್ನ ಪಂಚೆ ಹಸಿಯಾಗಿರುವವರೆಗೂ ನಿನ್ನ ಲೇಖನಿಯಿಂದ ಮಹಭಾರತವನ್ನು ಬರೆಸುತ್ತಿರುತ್ತೇನೆ ಎಂದರಂತೆ.
ಶರತ್ತಿನ ಪ್ರಕಾರ ಒದ್ದೆ ಪಂಚೆಯಲ್ಲಿ ಬಂದು ಕುಳಿತು ಕೊಂಡ ನಾರಾಯಣಪ್ಪನವರ ಲೇಖನಿಯಿಂದ ಪಂಚೆ ಒಣಗುವವರೆಗೂ ಮಹಾಭಾರತ ನಿರಂತರವಾಗಿ ಪ್ರವಹಿಸಲು ಶುರುವಾಯಿತಂತೆ. ಆದಿಪರ್ವದಿಂದ ಶುರುವಾದ ಮಹಾಭಾರತ ಎಷ್ಟೋದಿನಗಳ ನಂತರ ಹತ್ತನೇ ಪರ್ವಕ್ಕೆ ಬಂದು ತಲುಪಿತು. ಅದು ಸೌಪ್ತಿಕ ಪರ್ವ...ಇದರಲ್ಲಿ ಹೇಗೆ ಅಶ್ವಥ್ಥಾಮ ಅಧರ್ಮದಿಂದ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ ಎನ್ನುವ ವಿವರಣೆ ಇದೆ. ಇದನ್ನು ಬರೆಸುವಾಗ ಅಶ್ವಥ್ಥಾಮನಿಗೆ ದುಖಃ ಒತ್ತರಿಸಿಬಂತಂತೆ. ಗಳಗಳನೆ ಅತ್ತು ಅವತ್ತಿನ ವೃತ್ತವನ್ನು ಅಲ್ಲಿಗೇ ನಿಲ್ಲಿಸಿದನಂತೆ.
ನಾರಾಯಣಪ್ಪನಿಗೂ ಅತೀವ ವ್ಯಥೆಯಾಗಿ,ಶರತ್ತನ್ನು ಮರೆತು ಅವರ ಪತ್ನಿಯ ಬಳಿ ಅವರ ದುಖಃವನ್ನು ತೋಡಿಕೊಂಡರಂತೆ. ಅಲ್ಲಿಗೆ ಅವರ ಮಹಾಭಾರತ ನಿಂತೇ ಹೋಯಿತು. ವ್ಯಾಸಮುನಿಗಳ ಮಹಾಭಾರತ ಹದಿನೆಂಟು ಪರ್ವಗಳಿದ್ದು,ಕುಮಾರ ವ್ಯಾಸರ ಭಾರತ ಹತ್ತು ಪರ್ವಗಳಿಗೇ ನಿಂತಿತು.
ಇವಲ್ಲಾ ಯಾವಾಗಲೋ ಓದಿ ಮರೆತು ಹೋದ ವಿಷಯಗಳು. ಇವು ನಿಜವೋ, ಕಟ್ಟುಕಥೆಗಳೋ ತಿಳಿಯದು. ಸುಪ್ತ ಚೇತನದಿಂದ ಒತ್ತರಿಸಿ ಬಂದದ್ದಂತು ಸತ್ಯ. ಇವತ್ತು ಅಶ್ವಥ್ಥಾಮರು ಆ ಗುಹಾಲಯಕ್ಕೆ ಬಂದಿದ್ದರೆ? ನಾನೂ ತೀವ್ರತೆಯಿಂದ,ಉತ್ಕಟತೆಯಿಂದ ಪ್ರಾರ್ಥಿಸಿದರೆ ಅವರ ಸೂಕ್ಷ ಶರೀರ ನನಗೆ ಕಾಣಬಹುದೇ? ಆದರೆ ಬಲವಾಗಿ ಪ್ರಯತ್ನಿಸಿದಷ್ಟೂ ಮನವೆಂಬುದು ಮರಕೋತಿ ಆಡಲು ಶುರು ಮಾಡುತ್ತದೆ.
ಮತ್ತೊಂದು ಬೆಳಗು,ಇನ್ನೊಂದು ದಿನ ತಾನೇ ಎನ್ನುವ ಸಮಾಧಾನ. ನಿನ್ನೆ ಸಂಗ್ರಹಿಸಿಕೊಂಡ ಗಿಡ ಮೂಲಿಕೆಗಳಲ್ಲಿ ಕೆಲವನ್ನು ಮರಳುತ್ತಿರುವ ನೀರಿಗೆ ಹಾಕಿ ಕಷಾಯ ಮಾಡಿಕೊಂಡು ಪಿಂಗಾಣಿ ಬಾಟಲಿನಲ್ಲಿ ತುಂಬಿಕೊಂಡೆ. ಅಷ್ಟರಲ್ಲಿ ತರಬೇತಿ ಸಿಬ್ಬಂದಿಯವರು ಬಂದರು. ನನಗೆ ಇಲ್ಲಿಯ ಗಿಡ ಮೂಲಿಕೆಗಳ ಬಗ್ಗೆ ಇರುವ ಅರಿವು ಅವರಿಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿರಬಹುದು. ಫ್ಲೈಟ್ ಲೆಫ್ಟಿನೆಂಟ್ ಪಾಂಡೆಯವರಿಗೆ
ಇಲ್ಲಿರುವ ಸಸ್ಯಕಾಶಿಯ ಬಗ್ಗೆ ತಿಳಿಸಿದೆ. ಮುಂದೆ ಅವರ ಮದುವೆ ಅಲಹಬಾದಿನಲ್ಲಿ ನಡೆದ ಸಮಯದಲ್ಲಿ ಭೇಟಿಯಾದಾಗ ಹೇಳಿದರು, ನಾನು ಕೊಟ್ಟಿದ್ದ ಮಾಹಿತಿಯನ್ನು ಇನ್ನೂ ಒಂದು ಸ್ವಲ್ಪ ಸಂಶೋಧಿಸಿ,ಅದನ್ನು ಮುಂದಿನ ಕೋರ್ಸುಗಳಿಗೆ ಅಳವಡಿಸಿದ್ದಾರೆ. ನಮ್ಮ ಹೊಲದಲ್ಲಿ ಕಲಿತ ವಿದ್ಯೆ ಸಾರ್ಥಕವಾಯಿತು ಎಂದು ಹೆಮ್ಮೆಪಟ್ಟೆ.
ಆ ದಿನದ ತರಬೇತಿಯ ಮುಖ್ಯ ಅಂಶವೆಂದರೆ ,ದೊರೆತ ಮಾಹಿತಿಯ ಪ್ರಕಾರ ನಾಳೆ ಬೆಳಗ್ಗೆ ನಮ್ಮನ್ನು ಹುಡುಕಲು ಹೆಲಿಕಾಪ್ಟರನ್ನು ಕಳುಹಿಸಲಿದ್ದಾರೆ,ಆದರೆ ನಮ್ಮ ಲೊಕೇಶನ್ ಅವರಿಗೆ ಖಚಿತವಾಗಿ ಗೊತ್ತಿಲ್ಲ. ಹಿಂದಿನ ದಿನದ ಮ್ಯಾಪನ್ನೇ ಕೊಟ್ಟು 'ಪ್ಲಾನ್ ಮಾಡಿ' ಎಂದರು.
ಮೊದಲು ಈ ಕ್ಯಾಂಪನ್ನು ಸ್ಥಳಾಂತರಿಸಬೇಕು. ಹೆಲಿಕಾಪ್ಟರಿಗೆ ಕಾಣುವಹಾಗೆ ಒಂದು ಮೈದಾನ ಪ್ರದೇಶದಲ್ಲಿ ನಮ್ಮ ಹೊಸ ಕ್ಯಾಂಪ್ ಸ್ಥಾಪಿಸಬೇಕು. ಎರಡು ದಿನ ಅನ್ನವಿಲ್ಲದ ದೇಹಕ್ಕೆ ನಿತ್ರಾಣ ಒಂದು ಕಡೆಯಾದರೆ,ಈ ಎರಡು ದಿನಗಳಲ್ಲಿ ಇದೇ ಸುರಕ್ಷಿತ ಸ್ಥಳ ಎನಿಸಿಬಿಟ್ಟಿತ್ತು. ನಿರ್ವಾಹವಿಲ್ಲದೆ ಪ್ಯಾರಾಚೂಟನ್ನು ಪ್ಯಾಕ್ ಮಾಡಲು ಶುರುಮಾಡಿದೆವು. ತಿನಿಸುಗಳೇನು ಉಳಿದಿರಲಿಲ್ಲ. ಸರಿ ಬಿಡು ನಾಳೆ ಹೆಲಿಕಾಪ್ಟರ್ ಬರುತ್ತೆ ಎನ್ನುವ ಸಮಾಧಾನ. ಕಾಡನ್ನು ಯಥಾವಥ ಬಿಡಬೇಕು,ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿ ಹೋಗಬೇಕು. ನಾನೇ ಮಾಡಿದ ಬೆಂಕಿಯೊಂದಿಗೆ ಒಂದು ಭಾವನಾತ್ಮಕ ಬೆಸುಗೆ ಬೆಳೆದು ಬಿಟ್ಟಿತ್ತು! ನಾಳೆ ಹೆಲಿಕಾಪ್ಟರಿಗೆ ಕಾಣುವಂತೆ ದಟ್ಟವಾದ ಹೊಗೆ ಮಾಡಬೇಕು. ಈ ಬೆಂಕಿಯನ್ನು ಆರಿಸುವ ಮೊದಲು ಒಂದು ಒಣ ರೆಂಬೆಗೆ ಬೆಂಕಿ ತಗಲಿಸಿ ಮುಂದಿನ ಕ್ಯಾಂಪಿನವರೆಗೂ ಅದನ್ನು ಹೊಗೆಯಾಡಿಸುತ್ತಲೇ ಹಿಡಿದುಕೊಂಡು ಹೋದೆ.
ಸುಮಾರು ಮೂರು ಗಂಟೆಗಳ ಚಾರಣದ ನಂತರ ಒಂದು ಫುಟ್ಬಾಲಿನ ಮೈದಾನದಷ್ಟು ದೊಡ್ಡ ಸ್ಥಳಕಾಣಿಸಿತು. ನಮ್ಮ ಗುಂಪಿನಲ್ಲಿದ್ದ ಮೂವರು ಹೆಲಿಕಾಪ್ಟರ್ ಪೈಲಟ್ಗಳ ನಿರ್ದೇಶನದಲ್ಲಿ ಒಂದು ಹಂಗಾಮಿ ಹೆಲಿಪ್ಯಾಡನ್ನು ನಿರ್ಮಿಸಿದೆವು. ಮರದ ರೆಂಬೆಗಳನ್ನು ಕಡಿದು "H" ಎನ್ನುವ ಆಕಾರದಲ್ಲಿ ಜೋಡಿಸಿದೆವು. ಹತ್ತಿರದಲ್ಲೇ ಅಗ್ನಿಸ್ಥಾಪನೆಯೂ ಆಯಿತು. ಕತ್ತಲಾಗುವ ಮುನ್ನ ಹೊಗೆ ಹುಟ್ಟುಹಾಕಲು ಸಾಕಷ್ಟು ಪ್ರಮಾಣದಲ್ಲಿ ಸೌದೆಗಳನ್ನು ಶೇಖರಿಸಿಟ್ಟೆವು. ಎಲ್ಲರ ಮನಸ್ಸಿನಲ್ಲಿ ಒಂದೇ ಆತಂಕ,ಹೆಲಿಕಾಪ್ಟರನ್ನು ಮಿಸ್ ಮಾಡಬಾರದು. ರಾತ್ರಿ ಕನಸಿನಲ್ಲೂ ಹೆಲಿಕಾಪ್ಟರ್ ಸುತ್ತು ಹಾಕುತ್ತಿರುವ ಶಬ್ದ.
ಬೆಳ್ಳಂಬೆಳಗ್ಗೇ ಧೋ ಎಂದು ಮಳೆಶುರುವಾಯಿತು.
ಇದ್ದಬದ್ದ ಸೌದೆಗಳನ್ನು ಬೆಂಕಿಯು ಆರದ ಹಾಗೆ ಹಾಕಿ ಅದರ ಮೇಲೆ ಪ್ಯಾರಾಚೂಟಿನ ಹೊದಿಕೆ ಹಿಡಿದು ಕೊಂಡು ನಿಂತೆವು. ಇವತ್ತು ಈ ನಂದಾದೀಪ ಆರಬಾರದು. ಈ ಮಳೆಯಲ್ಲಿ ಹೆಲಿಕಾಪ್ಟರ್ ಬರುವುದು ಅನುಮಾನ. ಆದರೆ ನಮ್ಮ ಹೆಲಿಕಾಪ್ಟರ್ ಮಿತ್ರರಿಗೆ ಭರವಸೆ ಇತ್ತು. ನನ್ನಲ್ಲಿದ್ದ ತುಳಸಿ ಮತ್ತು ಕರಿಬೇವಿನ ಬಿಸಿ ಬಿಸಿ ಕಷಾಯ ಮಾಡಿಕೊಟ್ಟೆ. ಎಲ್ಲರೂ ಸ್ವಲ್ಪ ಚೇತರಿಸಿಕೊಂಡೆವು. ಅಷ್ಟರಲ್ಲೇ ನಮ್ಮ ತರಬೇತಿ ತಂಡದವರು ಬಂದರು. ಅವರಾಗಲೇ ಹೆಲಿಕಾಪ್ಟರ್ ಪೈಲಟ್ಗಳ ಜೊತೆ ಫೋನಿನಲ್ಲಿ ಮಾತಾಡಿಕೊಂಡು ಬಂದರಂತೆ. ಇನ್ನೊಂದು ಘಂಟೆ ಬಿಟ್ಟು ಕೊಂಡು ಪ್ರಯತ್ನಿಸುತ್ತೇವೆ ಎಂದರಂತೆ. ನಮಗಿಂತಲೂ ಅವರೇ ಚಿಂತಾಕ್ರಾಂತರಂತೆ ಕಂಡರು. ಅದಕ್ಕೆ ಕಾರಣವೂ ಇತ್ತು. ಇವತ್ತೇ ಮಧ್ಯಾಹ್ನ ನಮ್ಮನ್ನು ಕಾಡಿನಿಂದ ಹಿಮಚ್ಚಾದಿತ ಗುಲ್ಮರ್ಗಕ್ಕೆ ಸ್ಥಳಾಂತರಿಸಬೇಕಾಗಿತ್ತು. ಆದರೆ ಮಾರ್ಗಮಧ್ಯದ ಪಂಜಾಬಿ ಧಾಭಾದಲ್ಲಿ ಊಟ ಕೊಡಿಸುತ್ತೇವೆಂದು ಹೇಳಿದ್ದೇ ನಮ್ಮ ಗುಂಪಿನಲ್ಲಿ ಉಲ್ಲಾಸದ ಹೂಮಳೆಯೇ ಸುರಿಯಿತು. ನಿಧಾನವಾಗಿ ಮಳೆ ಕಡಿಮೆಯಾಗುತ್ತಾ ಬಂತು. ದೂರದಲ್ಲಿ ಹೆಲಿಕಾಪ್ಟರಿನ ಶಬ್ದ ಕೇಳಿದ್ದೇ ಸಾಕು....ಹೊಗೆ ಹಾಕಿರಿ,ಹೊಗೆ ಮಾಡಿರಿ..ಮಳೆಯಲ್ಲಿ ನೆಂದುಹೋದ ಸೌದೆಗಳಿಂದ ದಟ್ಟವಾದ ಹೊಗೆಯೇ ಹಬ್ಬಿಕೊಂಡಿತು. ಅಷ್ಟುಹೊತ್ತಿಗೆ ಸರಿಯಾಗಿ ಹೆಲಿಕಾಪ್ಟರ್ ನಮ್ಮ ಡೇರೆಯ ಮೇಲೆ ಒಂದು ಸುತ್ತು ಹಾಕಿ ಮೆಲ್ಲಗೆ ಕೆಳಗಿಳಿಯತೊಡಗಿತು. ಭೂಸ್ಪರ್ಶ ಮಾಡಿದ ಹೆಲಿಕಾಪ್ಟರಿನ ರೋಟರ್ ಗಳು ನಿಧಾನವಾಗಿ ತಿರುಗುತ್ತಿದ್ದವು. ಪೈಲಟ್ಟುಗಳು ತಲೆ ತಗ್ಗಿಸಿ ಬರುವಂತೆ ಸನ್ನೆ ಮಾಡಿದ ಮೇಲೆ ಹೆಲಿಕಾಪ್ಟರ್ ಹತ್ತಿದೆವು. ಅಲ್ಲಿಂದ ಸೀದಾ ಶ್ರೀನಗರದ ವಾಯುನೆಲೆಗೆ. ಅಲ್ಲಾಗಲೇ ಟ್ರಕ್ಕುಗಳು ತಯಾರಾಗಿ ನಿಂತಿದ್ದವು. ಬಿಡುವೇ ಇಲ್ಲ,ಕಾಡಿನಿಂದ ಹಿಮಾವೃತ್ತ ಗುಲ್ಮರ್ಗದ ಕಡೆಗೆ. ತರಬೇತಿ ಸಿಬ್ಬಂದಿಗಳ ಆತಂಕ ಇನ್ನೂ ಹೋಗಿರಲಿಲ್ಲ. ಮಧ್ಯಾಹ್ನದ ಮೂರು ಘಂಟೆಯ ಒಳಗೆ ನಿರ್ದಿಷ್ಟ ಪ್ರದೇಶವನ್ನು ತಲುಪಬೇಕು. ಕತ್ತಲಾಗುವುದರೊಳಗೆ ನಮ್ಮ ಕ್ಯಾಂಪನ್ನು ಅಣಿಮಾಡಿಕೊಳ್ಳಬೇಕು.
ಮಾತು ಕೊಟ್ಟಂತೆ ಒಂದು ಹೆದ್ದಾರಿಯ ಪಕ್ಕದ ಧಾಭಾದ ಬಳಿ ಟ್ರಕ್ಕನ್ನು ನಿಲ್ಲಿಸಿದ್ದೇ ತಡ, ಮೂರು ದಿನ ಖಾಲಿಯಿದ್ದ ಹೊಟ್ಟೆಯ ಆಕ್ರಂದನ ತಾರಕಕ್ಕೇರಿತು. ತಂದೂರಿನಿಂದ ಬಿಸಿ ಬಿಸಿಯಾಗಿ ಒಂದೊಂದೇ ಐಟಂ ಹೊರಬರುತ್ತಿದ್ದಂತೆ ಕ್ಷಣಾರ್ದದಲ್ಲಿ ನಾಪತ್ತೆ. ಅದೇನೇನು ತಿಂದೆವೋ, ಅದೆಷ್ಟೆಷ್ಟು ತಿಂದೆವೋ ಒಂದೂ ಅರಿವಿಲ್ಲ. ತರಬೇತಿ ಸಿಬ್ಬಂದಿಯವರು ಹರಸಾಹಸ ಮಾಡಿ ಮರಳಿ ನಮ್ಮನ್ನು ಟ್ರಕ್ಕಿಗೆ ತುಂಬಿಸುವವರೆಗೂ ತಂದೂರನ್ನು ಬಿಟ್ಟು ಕದಲಲಿಲ್ಲ. ಬಕಾಸುರನಿಗೆ ಊಟ ಕೊಂಡೊಯ್ಯತ್ತಿದ್ದ ಭೀಮನಂತೆ ತಿಂದು ತೇಗಿದೆವು.
ನಮ್ಮ ಹಿಮಾವೃತ ತರಬೇತಿಯ ಜಾಗವನ್ನು ತಲುಪವಷ್ಟರಲ್ಲಾಗಲೇ ಸಂಜೆಯ ಮುಂದ ಬೆಳಕು. ಹಿಮಪಾತವಾಗುತ್ತಿತ್ತು,ಎಲ್ಲೆಲ್ಲೂ ದಟ್ಟನೆ ಮೃದುವಾದ ಹಿಮ. ಕೊರೆಯುವ ಛಳಿಯಿಂದ ರಕ್ಷಿಸಿಕೊಳ್ಳಲು ಒಂದು ದಪ್ಪನೆಯ ಕೋಟು,ಕೈಗೆ ಗ್ಲೌಸುಗಳು ಮತ್ತು ಇಲ್ಲಿಗೇ ಅಂತಲೇ ಕೆಲವು ಮೇಣದ ಬತ್ತಿಗಳನ್ನು ಕೊಟ್ಟಿದ್ದರು ಯಾಕೆಂದರೆ ಇಲ್ಲಿ ಬೆಂಕಿಯನ್ನು ಮಾಡುವುದಂತೂ ಅಸಾಧ್ಯದ ಕೆಲಸ. ಮರಗಳೂ ಸಹ ಅಲ್ಲೊಂದು ಇಲ್ಲೊಂದು. ಕಾಡಿನಲ್ಲಿ ಪ್ಯಾರಾಚೂಟಿನಲ್ಲಿ ಮಾಡಿಕೊಂಡ ತೂಗು ಹಾಸಿಗೆಯ ಸೌಲಭ್ಯವೂ ಇಲ್ಲ. ಉಳಿದಿರುವುದೊಂದೇ ಉಪಾಯ ಸುಮಾರು ನಾಲ್ಕು ಐದು ಅಡಿಗಳಷ್ಟು ಎತ್ತರಕ್ಕೆ ಮರದ ರೆಂಬೆಗಳನ್ನು ಕಡಿದು ಒಂದರ ಮೇಲೆ ಒಂದರಂತೆ ಏರಿಸಿ ಎಲ್ಲರಿಗೂ ಮಲಗಲು ಸಾಧ್ಯವಾಗುವಂತಹ ಒಂದು platform ತಯಾರಿಸಿದೆವು. ಅಷ್ಟೊತ್ತಿಗೆ ಪೂರ್ತಿ ಕತ್ತಲಾವರಿಸಿಕೊಂಡು ಬಿಟ್ಟಿತು. ಮಧ್ಯಾಹ್ನದ ಭೀಮಭೋಜನ,ಟ್ರಕ್ಕಿನಲ್ಲಿ ಪ್ರಯಾಣ ಮತ್ತು ನಡೆದುಕೊಂಡು ಬಂದ ಆಯಾಸ ಎಲ್ಲರನ್ನು ಬಸವಳಿಸಿಬಿಟ್ಟಿತ್ತು. ಈಗ ಸದ್ಯಕ್ಕೆ ಎಲ್ಲರೂ ಮಲಗಿ ಬಿಡೋಣ ಉಳಿದಿದ್ದನ್ನು ನಾಳೆ ನೋಡಿಕೊಂಡರಾಯಿತು ಎಂದು ಒಬ್ಬೊಬ್ಬರಾಗಿ ಮಲಗೇ ಬಿಟ್ಟರು.
ಅದೆಂತ ನಿದ್ರೆ ಬಂತೆಂದರೆ ಸೂರ್ಯನ ಪ್ರಕಾಶ ಕಣ್ಣು ಚುಚ್ಚಲು ಶುರುವಾದ ಮೇಲೇ ಎಚ್ಚರವಾಗಿದ್ದು. ಹಿತವೆನಿಸುವಷ್ಟು ಬಿಸಿಲು,ಶುಭ್ರವಾದ ವಾತಾವರಣ ದೂರದ ಹಿಮಚ್ಚಾದಿತ ಪರ್ವತ ಶಿಖರಗಳು ಮನಸ್ಸಿಗೆ ಮುದನೀಡಿದವು. ಹತ್ತಿರದಲ್ಲೆಲ್ಲೋ ಹರಿಯುತ್ತಿರುವ ನದಿಯ ಜುಳು ಜುಳು ಶಬ್ದ. ಒಬ್ಬಬ್ಬರಾಗೇ ಮೈಮುರಿಯತ್ತಾ ಎದ್ದು ಹಾಗೇ ಮಲಗಿಕೊಂಡೇ ಮಾತಿಗೆ ಶುರು ಹಚ್ಚಿಕೊಂಡೆವು. ಒಬ್ಬರಿಗೆ ಬಹಿರ್ದೆಸೆಯ ಒತ್ತಡ ಹೆಚ್ಚಾಗಿ ಎದ್ದು , ಹಿಂದಿನ ದಿನ ನಾವು ನಿರ್ಮಿಸಿದ platform ನಿಂದ ಕೆಳಗಿಳಿದು ಹೋದರು. ಕೆಲವೇ ಸೆಕಂಡುಗಳಲ್ಲಿ ಕೂಗಲು ಶುರುಮಾಡಿದರು. ಏಕಾಏಕಿ ಇವರಿಗೇನಾಯಿತು ಎಂದು ಎಲ್ಲರೂ ಒಟ್ಟಿಗೆ ಎದ್ದು ಸುತ್ತಲೂ ನೋಡಿದೆವು. ಪರಿಸ್ಥಿತಿಯ ಅರಿವಾದಕೂಡಲೇ ಎದೆ ಧಸಕ್ಕೆಂದಿತು. ಅಸಲಿಗೆ ಏನಾಗಿತ್ತೆಂದರೆ ಹಿಂದಿನ ರಾತ್ರಿ ನಾವು ನಿರ್ಮಿಸಿದ platform ಹಿಮಗಟ್ಟಿದ ನದಿಯ ಮೇಲೆ! ಅದರ ಅರಿವೇ ಆಗದಷ್ಟು ಹಿಮಗಟ್ಟಿತ್ತು. ಈಗ ಬಿಸಿಲೇರಿದಂತೆ ಹಿಮವೆಲ್ಲಾ ಕರಗಿ ರಭಸದಿಂದ ಹರಿಯುವ ನದಿಯಾಗುತ್ತಿದೆ. ಕೆಲವೇ ಸೆಕೆಂಡುಗಳಲ್ಲಿ ನಮ್ಮ ನಮ್ಮ ಪ್ಯಾಕುಗಳನ್ನು ಎತ್ತಿಕೊಂಡು ದಡಸೇರಿದ ಸ್ವಲ್ಪ ಹೊತ್ತಿನಲ್ಲೇ ನಾವು ಅಷ್ಟುಕಷ್ಟಪಟ್ಟು ನಿರ್ಮಿಸಿದ platform ತೇಲಿಕೊಂಡು ಹೋಗೇಬಿಟ್ಟಿತು.