Thursday, October 27, 2016

ಗೋವಿನಂತಹ ಗೋವಿಂದಣ್ಣ

ಗೋವಿನಂತಹ ಗೋವಿಂದಣ್ಣ
ಇತ್ತೀಚೆಗೆ ನಮ್ಮೆಲ್ಲರನ್ನು ಅಗಲಿದ  ಸಮಸ್ತ ಕನ್ನಡಿಗರ ಅಚ್ಚು ಮೆಚ್ಚಿನ, "ಮಲೆನಾಡ ಗಾಂಧಿ" ಎಂದೇ ಪ್ರಸಿದ್ಧವಾಗಿರುವ ಶ್ರೀಮಾನ್ ಗೋವಿಂದೇ ಗೌಡರ ಸಂಗ ಸಾನಿಧ್ಯದಲ್ಲಿ ಅರವತ್ತರ ದಶಕದಲ್ಲಿ ಕಳೆದ ಕೆಲವು ಅವಿಸ್ಮರಣೀಯ ದಿನಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದು ನನ್ನ ಸೌಭಾಗ್ಯ ಎಂದು ತಿಳಿಯುತ್ತೇನೆ.
1960 ರಿಂದ 1965ರ ಆರು ವರ್ಷಗಳ ಸುಧೀರ್ಘ ಅವಧಿಯಲ್ಲಿ  ಶಿವಮೊಗ್ಗ ಜಿಲ್ಲೆಯ ಕೊಪ್ಪದ ಸಮೀಪದ ಗುಣವಂತೆಯಲ್ಲಿ ನಾನು ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯವಹಿಸುವ ಮಹದಾವಕಾಶ ನನ್ನದಾಗಿತ್ತು.  ಆಗ ಶ್ರೀಯುತ ಗೋವಿಂದೇ ಗೌಡರು ಕೊಪ್ಪ ಮತ್ತು ಗುಣವಂತೆ ಮಧ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಅವರು ವಾಸಿಸುತ್ತಿದ್ದು ಒಂದು ಪುಟ್ಟ ಹಳ್ಳಿಯಾದರೂ ಅವರ ಸರಳತೆ ಮತ್ತು ಸಹೃದಯತೆಯ ಜೀವನ ಇಡೀ ಮಲೆನಾಡು ಪ್ರದೇಶಕ್ಕೆ ಮಾದರಿಯಾಗಿತ್ತು.  ಹಿರಿ ಕಿರಿಯರೆಲ್ಲರೂ ಅವರನ್ನು ಪ್ರೀತಿ ಮತ್ತು ಆದರದಿಂದ "ಗೋವಿಂದಣ್ಣ, ಗೋವಿಂದಣ್ಣ"  ಎಂದು ಕರೆಯುತ್ತಿದ್ದರು ಅಷ್ಟೊತ್ತಿಗಾಗಲೇ ಅವರು ತಮ್ಮ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಜಿಲ್ಲಾ ಮಟ್ಟದ ರಾಜಕೀಯದಲ್ಲಿ ಹಿರಿಮೆಯ ಸ್ಥಾನವನ್ನು ಪಡೆದಿದ್ದರು.  ಅವರ ಪ್ರೋತ್ಸಾಹದಿಂದ ಹುರಿದುಂಬಿಸಲ್ಪಟ್ಟ ನನ್ನ ಕನಸುಗಳು ಸಹ ಗರಿಗೆದರಿಕೊಂಡು ಸ್ವಚ್ಛಂದ ಬಾನಲ್ಲಿ ಹಾರಾಡ ತೊಡಗಿದವು. ಅವರ ಮಾರ್ಗದರ್ಶನ ಮತ್ತು ಸತ್ಸಂಗದಲ್ಲಿ ನಡೆದ ಕೆಲವು ಘಟನೆಗಳು ನನ್ನ ಬಾಳಿನ ಈ ಮುಸ್ಸಂಜೆಯಲ್ಲೂ ನೆನಪಿಸಿಕೊಂಡರೆ ಮೈ ಮನಗಳು ಪುಳಕಗೊಳ್ಳುತ್ತವೆ.
ಮಳೆಯಲ್ಲಿಯೇ ಪ್ರತ್ಯಕ್ಷವಾದ ಗೋವಿಂದಣ್ಣ
1962ರ ಸ್ವತಂತ್ರ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಬರಲು ಗೋವಿಂದಣ್ಣನವರು ಸಮ್ಮತಿಸಿದ್ದರು. ಆದರೆ ಅಂದು ಬೆಳಗಿನಿಂದಲೇ ಧೋ ಎಂದು ಮಳೆ ಸುರಿಯುತ್ತಿತ್ತು. ಮಲೆನಾಡಿನ ಮಳೆ ಎಂದರೆ ಕೇಳ ಬೇಕೇ. ನಿರಂತರವಾಗಿ ಸುರಿಯುತ್ತಿತ್ತು.  ಆಗ ಗುಣವಂತೆಗೆ ಯಾವ ತರಹದ ವಾಹನ ಸೌಕರ್ಯವೂ ಇರಲಿಲ್ಲ. ಇನ್ನೂ ಮುಖ್ಯ ಅತಿಥಿಗಳು ಬರುವುದಂತೂ ಸಾಧ್ಯವೇ ಇಲ್ಲ ಎಂಬ ನಿರಾಸೆ ನಮ್ಮೆಲ್ಲರನ್ನು ದಟ್ಟವಾಗಿ ಆವರಿಸಿತ್ತು. ಆದರೆ ಸರಿಯಾಗಿ ನಿರ್ಧಾರಿತ ಸಮಯಕ್ಕೆ ರೇನ್ ಕೋಟ್ ಮತ್ತು ಮೊಣಕಾಲೆತ್ತರದವರೆಗೆ ಧರಿಸಿದ ಗಂ ಬೂಟುಗಳೊಡನೆ ಗೋವಿಂದಣ್ಣ ಗುಣವಂತೆ ದಿಬ್ಬದ ಮೇಲೆ ಪ್ರತ್ಯಕ್ಷವಾಗೆ ಬಿಟ್ಟರು.  ಮಂಕಾಗಿ ಕುಳಿತಿದ್ದ ನಮ್ಮೆಲ್ಲರ ಮುಖದಲ್ಲಿ ಸಂತಸದ ಕಾರಂಜಿ ಚಿಮ್ಮಿತು. ಆಮೇಲಿನ ಸಮಾರಂಭವಂತೂ ಹರ್ಷೋಲ್ಲಾಸದೊಂದಿಗೆ ನಡೆಯಿತು.
ನಾಟಕ ಪಾತ್ರಧಾರಿ ಗೋವಿಂದಣ್ಣ.
ಗೋವಿಂದೇ ಗೌಡರು ತಮ್ಮ ಮನೆಯ ಮುಂದೆ ಒಂದು ಪುಟಾಣಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು.  ಮುಖ್ಯವಾಗಿ ಆ ಅಂಗಡಿಗೆ ಬರುತ್ತಿದ್ದ ಗಿರಾಕಿಗಳೆಂದರೆ ಅಲ್ಲಿನ ಸುತ್ತಮುತ್ತಲಿನ ಕಾಫಿ ಎಸ್ಟೇಟುಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಆಳುಗಳು ಸುಮಾರು ನಾಲ್ಕು ಗಂಟೆಯಷ್ಟೊತ್ತಿಗೆ ಇವರ ಅಂಗಡಿಗೆ ಬರುತ್ತಿದ್ದವರಿಗೆ ಇವರೇ ಖುದ್ದಾಗಿ ಅವರಿಗೆ ಬೇಕಾದ ದಿನಸಿಗಳನ್ನು ಅಳೆದು ತೂಗಿ ಕೊಡುತ್ತಿದ್ದರು.  ನಿಜವಾಗಿ ಹೇಳಬೇಕೆಂದರೆ ಅವರು ಆ ಕಿರಾಣಿ ಅಂಗಡಿ ನಡೆಸುತ್ತಿದ್ದುದೇ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾಳಿಗೋಸ್ಕರ.  ಅದೇ ಸಮಯಕ್ಕೆ ಸರಿಯಾಗಿ ನಾನು ಸಹ ಗುಣವಂತೆಯಿಂದ ಬಂದು ಇವರ ಜೊತೆ ಕೆಲ ಸಮಯ ಕಳೆಯುತ್ತಿದ್ದೆ. ಇದಂತೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದ ಸಂಗತಿ.
                  ಹೀಗಿರುವಾಗ ಒಂದು ಸಂಜೆ ಗೋವಿಂದಣ್ಣನವರ ಜೊತೆ ಏಕೆ ಒಂದು ಸಾಮಾಜಿಕ ಸಂದೇಶವಿರುವ ನಾಟಕವನ್ನು ರಚಿಸಿ ಪ್ರದರ್ಶಿಸಬಾರದು ಎಂಬ ವಿಚಾರದ ಬಗ್ಗೆ ಚರ್ಚಿಸಿದೆ. ಅದರಲ್ಲಿ ಬರುವ ಒಬ್ಬ ಆದರ್ಶವಾದಿ ರಾಜಕೀಯ ವ್ಯಕ್ತಿಯ ಪಾತ್ರವನ್ನು ಸ್ವತಃ ಗೋವಿಂದಣ್ಣನವರೇ ಮಾಡಲು ಒಪ್ಪಿಕೊಂಡರು ಮತ್ತು ನಿಯಮಿತವಾಗಿ ನಾಟಕಾಭ್ಯಾಸಕ್ಕೆ ಪ್ರತಿ ಸಂಜೆ ಬರುತ್ತಿದ್ದರು. ಅವರ ದೈನಂದಿನ ಉಡುಗೆಯಾದ ಖಾದಿ ಪೈಜಾಮ ಮತ್ತು ಖಾದಿ ಶರ್ಟು ನಾಟಕದ ತೊಡುಗೆಯಾಗಿತ್ತು. ಅವರ ನಿಸ್ವಾರ್ಥ ಸಮಾಜ ಸೇವೆ ಹಾಗೂ ಸರಳ ಜೀವನವನ್ನು ಪ್ರತಿ ಪಾದಿಸುತ್ತಿದ್ದ ನಾಟಕದ ಪಾತ್ರಕ್ಕೆ ಜೀವ ತುಂಬಲು ಅವರಿಗೆ ಹೆಚ್ಚಿನ ಶ್ರಮ ಪಡುವ ಅವಶ್ಯಕತೆ ಇರಲಿಲ್ಲ, ಏಕೆಂದರೆ ಅದೇ ಅವರ ಸಹಜ ಜೀವನವಾಗಿತ್ತು. ಕೊಪ್ಪದ ಆಸುಪಾಸಿನ ಮಲೆನಾಡಿನಲ್ಲಿ ಈ ನಾಟಕವಂತೂ ಭರ್ಜರಿ ಯಶಸ್ಸು ಗಳಿಸಿತು. ಈ ನಾಟಕದ " ಕಥೆ, ಸಂಭಾಷಣೆ ಮತ್ತು ನಿರ್ದೇಶನ ಶ್ರಿನಿವಾಸಯ್ಯ" ನಾನು ಹೆಮ್ಮೆಯಿಂದ ಬೀಗಿದೆ.
ಧಿಡೀರ್ ಎಂದು ಪ್ರತ್ಯಕ್ಷವಾದ ಕಡಿದಾಳ್ ಮಂಜಪ್ಪನವರು.
ಮಲೆನಾಡ ಗರ್ಭದಲ್ಲಿ ಗೋವಿಂದಣ್ಣನವರ ಮಾರ್ಗದರ್ಶನದಲ್ಲಿ ಕಳೆದ ಆ ದಿನಗಳಂತೂ ನನ್ನ ಜೀವನದ ಮಹತ್ತರ ತಿರುವನ್ನು ಪಡೆದು ಕೊಂಡ ಸಮಯ ಎಂದರೆ ಅತಿಶಯೋಕ್ತಿಯಾಗಲಾರದು. ಗೋವಿಂದಣ್ಣನವರ ನಿಸ್ವಾರ್ಥ ಸೇವೆ ಹಾಗೂ ಕ್ರಿಯಾಶೀಲತೆಯಿಂದಾಗಿ ಕೊಪ್ಪದ ಆಸುಪಾಸಿನ ಪ್ರದೇಶಗಳಲ್ಲಿ ಅಭಿವೃದ್ಧಿಯ ಸಂಕೇತವು ಎಲ್ಲೆಲ್ಲೂ ಕಾಣ ತೊಡಗಿದವು. ನಮ್ಮ ಶಾಲೆಯು ಹಿರಿದಾಗುತ್ತಾ ಹೋಗುತ್ತಿತ್ತು. ಅಲ್ಲಿಗೆ ಪೋಸ್ಟ್ ಆಫೀಸು ಸಹ ಬಂತು ಮತ್ತು ಗೋವಿಂದಣ್ಣನವರ ಆದೇಶದಂತೆ ನಾನೇ ಅದರ ಪೋಸ್ಟ್ ಮಾಸ್ಟರ್ ಕಾರ್ಯವನ್ನೂ ವಹಿಸಿಕೊಂಡೆ.  ಅಂತು ಇಂತು ಗುಣವಂತೆಯ ಶಾಲೆ ಕೊಪ್ಪ ತಾಲೂಕಿನಲ್ಲೇ ಪ್ರಸಿದ್ಧಿ ಪಡೆದು ಕೊಂಡಿತು. ನನ್ನ ಮತ್ತು ಗೋವಿಂದಣ್ಣನವರ ಬೆಸುಗೆ ಇನ್ನೂ ಬಲವಾಯಿತು. ಹೀಗಿರುವಾಗ ಒಮ್ಮೆ ಶ್ರೀಮಾನ್ ಕಡಿದಾಳ್ ಮಂಜಪ್ಪ ಅಂದಿನ ನಮ್ಮ ರಾಜ್ಯದ ಮುಖ್ಯಮಂತ್ರಿ ಕೊಪ್ಪದ ಪ್ರವಾಸಿ ಮಂದಿರದಲ್ಲಿ ತಂಗಿದ್ದಾರೆ ಎಂಬ ವಿಷಯ ಗೊತ್ತಾಯಿತು. ನನ್ನ ಮತ್ತು ಗೋವಿಂದಣ್ಣನ ನಿಯಮಿತ ಸಂಜೆ ಭೇಟಿಯಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪಿಸಿದೆ.  ನಮ್ಮ ಮುಖ್ಯಮಂತ್ರಿಯವರು ಇಷ್ಟು ಹತ್ತಿರವಿರುವಾಗ ಏಕೆ ನಮ್ಮ ಗುಣವಂತೆಯ ಶಾಲೆಗೆ ಭೇಟಿ ನೀಡಬಾರದು ಎಂಬ ವಿಷಯದ ಬಗ್ಗೆ ನಾವಿಬ್ಬರೂ ಚರ್ಚಿಸಿದೆವು. ಅದಕ್ಕೆ ಕೂಡಲೇ ಸ್ಪಂದಿಸಿದ ಗೋವಿಂದಣ್ಣ ಕಗ್ಗತ್ತಲಿನ ರಾತ್ರಿಯಲ್ಲೇ ಕೊಪ್ಪದ ಪ್ರವಾಸಿ ಮಂದಿರಕ್ಕೆ ನಡೆದು ಕೊಂಡು ಹೋಗಿ ಮರುದಿನದ ಕಾರ್ಯಕ್ರಮಕ್ಕೆ  ಒಪ್ಪಿಸಿದರು. ನಮ್ಮೆಲ್ಲರ ಆಶ್ಚರ್ಯಭರಿತ ಕಣ್ಗಳ ಮುಂದೇ ಮುಖ್ಯ ಮಂತ್ರಿ ಶ್ರೀಮಾನ್ ಕಡಿದಾಳ್ ಮಂಜಪ್ಪನವರ ಸನ್ಮಾನ ಸಮಾರಂಭವು ನಡೆದೇ ಹೋಯಿತು, ಇಂತಹ ಮಹಾನ್ ವ್ಯಕ್ತಿತ್ವ ನಮ್ಮೆಲ್ಲರ ನಡುವೆ ಅತಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು  ಅವರಿಗಿಂತ ನಾವೇ ಉತ್ತಮರು ಎಂಬಂತೆ ನಮ್ಮನ್ನು ನಡೆಸಿಕೊಂಡು ಆಳಿದ ವ್ಯಕ್ತಿಗೆ ಸಹಸ್ರ ನಮನಗಳು.
"ಜೈ ಹಿಂದ್, ಜೈ ಕರ್ನಾಟಕ"
 ಬದನ ಗೋಡು ಶ್ರಿನಿವಾಸಯ್ಯ (ಬ ವೆಂ ಶ್ರಿ).
ನಿವೃತ್ತ ಶಿಕ್ಷಕರು,
ರಂಗಸಿರಿ,
 ಚೆನ್ನಗಿರಿ(),  ದಾವಣಗೆರೆ.






No comments:

Post a Comment