ಆಪರೇಶನ್ ಪರಾಕ್ರಮ-3
ಜನವರಿ 2002 ನಲ್ಲಿ ಆಪರೇಶನ್ ಪರಾಕ್ರಮಕ್ಕೆ ಚಾಲನೆ ಸಿಕ್ಕಾಗ ನಾನು ಬೆಳಗಾವಿಯ ತರಬೇತಿ ಕೇಂದ್ರದಲ್ಲಿ ಕಮಾಂಡಿಂಗ್ ಆಫೀಸರಾಗಿ ಕಾರ್ಯನಿರ್ವಹಿಸುತ್ತಿದ್ದೆ. ನಿರೀಕ್ಷಿಸಿದಂತೆ ವಾಯು ಮುಖ್ಯಾಲಯದಿಂದ ಕರೆಬಂತು. ಆದೇಶದ ಪ್ರಕಾರ ನಾನು ಆಪರೇಶನ್ ಪರಾಕ್ರಮದಲ್ಲಿ ಅನಿರ್ದಿಷ್ಟ ಅವಧಿಯವರೆಗೂ ಭಾಗವಹಿಸಲು ಬರೋಡದ ವಾಯುನೆಲೆಗೆ ಕೂಡಲೇ ಹಾಜಿರಾಗಬೇಕೆಂದಿತ್ತು. ಈ ಪ್ರಕ್ರಿಯೆ ಮುಗಿಯುವವರೆಗೂ ಯಾವ ರಜೆಯನ್ನು ಕೊಡಲಾಗುವುದಿಲ್ಲ ಎಂದದಿತ್ತು ಆದೇಶದಲ್ಲಿ. ನನ್ನ ಗೈರಿನಲ್ಲಿ ನಮ್ಮ ಮನೆಯವರಿಗೆ ಮಾಡಬೇಕಾದ ಸಹಾಯವನ್ನು ನನ್ನ ಸಹ ಅಧಿಕಾರಿಗಳಿಗಾಗಲೇ ಮನವರಿಕೆ ಮಾಡಿದ್ದೆ. ಇಂತಹ ಸಂಧರ್ಭದಲ್ಲಿ ಯಾವ ಯೋಚನೆಗಳು ಕಾಡುತ್ತಿರಬಾರದು,ಅದೇ ರೀತಿ ಉಳಿದವರೆಲ್ಲಾ ಸ್ಪಂದಿಸುತ್ತಾರೆ. ಇದೇ ಮಿಲಿಟರಿಯ ಜೀವನದ highlight ಒಬ್ಬರಿಗೊಬ್ಬರು ಮಿಡಿಯುವ ಭಾಂದವ್ಯ.
ಬರೋಡ ತಲುಪಿದ ಕೆಲವೇ ಘಂಟೆಗಳಲ್ಲಿ Avro ವಿಮಾನದ ಹಾರಾಟದ ತರಬೇತಿ ಪ್ರಾರಂಬವಾಗೇ ಬಿಟ್ಟಿತು. ಈ ವಿಮಾನದಲ್ಲಿ ಸುಮಾರು ಏಳು ವರ್ಷಗಳ ಅನುಭವವಿತ್ತು. ಎರಡು ಘಂಟೆಗಳ ತರಬೇತಿಯಲ್ಲಿ ಪುನಃ ಈ ವಿಮಾನದ ಅಂಗವಾದೆ. ಜೆಟ್ ವಿಮಾನಗಳೂ ಸೇರಿದಂತೆ ಸುಮಾರು ಎಂಟು ವಿವಿಧ ಏರೋಪ್ಲೇನುಗಳನ್ನು ಹಾರಿಸಿದ ಅನುಭವವಿತ್ತು. ಆದರೂ ಪ್ರತಿ ವಿಮಾನದ ಪರಮಿಧಿ ಬೇರೆಯಾಗಿರುತ್ತದೆ. ಇದನ್ನು ಗೌರವಿಸಿದರೆ ವಿಮಾನ ನಮ್ಮನ್ನು ಗೌರವಿಸುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವಹಾಗೆ.
ಮರುದಿನ ಬೆಳಗ್ಗೆ ಪೂನಕ್ಕೆ ಹೋಗಿ ಅಲ್ಲಿಂದ ಅಲ್ಲಿಂದ ಕೆಲವು ಯುಧ್ಧಸಾಮಗ್ರಿಗಳೊಂದಿಗೆ ರಾಜಾಸ್ಥಾನದ ಗಡಿಪ್ರದೇಶದ ವಾಯುನೆಲೆಗೆ ಹೋಗಬೇಕು, ಇದಾದನಂತರ ಮುಂದಿನ ಆದೇಶಕ್ಕಾಗಿ ಕಾಯಿರಿ ಎನ್ನುವ ಸ್ಪಷ್ಟ ನಿರ್ದೇಶನಗಳೊಂದಿಗೆ ನನ್ನ ಆಪರೇಶನ್ ಪರಾಕ್ರಮದ ಅಧ್ಯಾಯ ಶುರುವಾಯಿತು.
ಪೂನದ ವಾಯುನೆಲೆ ಯಾವಾಗಲೂ ಅತ್ಯಂತ ಪ್ರಮುಖ ವಾಯು ತರಬೇತಿಯ ಕೇಂದ್ರ. ಇಲ್ಲಿಯ ಸೂಪರ್ಸೋನಿಕ್ ಜೆಟ್ಗಳ ಗಡಚಿಕ್ಕವ ಶಬ್ದ ನಿರಂತರ. ರನ್ವೇಯ ಇಕ್ಕೆಲಗಳಲ್ಲಿ ಯಾವಾಗಲೂ ನಿಲ್ಲಿಸಿರುವ ಆ ವಿಮಾನಗಳ ಸಾಲನ್ನು ನೋಡುವುದೇ ಒಂದು ಪಳಕಿತಗೊಳಿಸುವ ಅನುಭವ. ಆದರೆ ಈ ಸಲ ನೋಡಿದಾಗ ಎಲ್ಲಾ ಖಾಲಿ. ಆ ವಿಮಾನಗಳಾಗಲೇ ಯುಧ್ಧ ಕಾರ್ಯಾಚರಣೆಯ ಲೊಕೇಶನ್ ಗಳಿಗೆ ಹಾರಿದ್ದವು. ಈಗ ನಾವೂ ಅಲ್ಲಿಗೇ ಹೋಗಬೇಕು. ಫೈಟರ್ ಏರೋಪ್ಲೇನುಗಳು ನಾಲ್ಕು ಅಥವ ಆರರ ಗುಂಪಿನಲ್ಲಿ ಹಾರುತ್ತವೆ. ಸುಮಾರು ಒಂದು ಘಂಟೆಯ ಹಾರಾಟದ ನಂತರ ಹತ್ತಿರದ ವಾಯುನೆಲೆಯಲ್ಲಿಳಿದು ಇಂಧನ ತುಂಬಿಸಿಕೊಂಡು ಮತ್ತೊಮ್ಮೆ ತಾಂತ್ರಿಕ ತಪಾಸಣೆಯ ನಂತರ ಮತ್ತೆ ಗಗನಕ್ಕೆ ಹಾರಿ ಮುಂದಿನ ವಾಯುನೆಲೆ ಅಥವ ನಿರ್ದಿಷ್ಟವಾದ ಯುಧ್ಧನೆಲೆಯನ್ನು ತಲುಪುತ್ತವೆ. ಹೀಗೆ ಅವು ನಿರ್ದಿಷ್ಟ ನೆಲೆ ತಲುಪುವವರೆಗೆ ಮುಂದೊಂದು ಮತ್ತು ಹಿಂದೊಂದು ಪ್ರಯಾಣಿಕ ಹಾಗು ಸರಕು ಸಾಗಾಣಿಕೆಯ ವಿಮಾನ ಈ ಫೈಟರ್ ವಿಮಾನಗಳಿಗೆ ಅವಶ್ಯವಾದ ಸಾಮಗ್ರಿಗಳು ಹಾಗು ತಾಂತ್ರಿಕವರ್ಗವನ್ನು ಮುಂದಿನ ನೆಲೆಗೆ ಸಾಗಿಸುತ್ತದೆ. ಯುಧ್ಧವಿಮಾನಗಳು ತಮ್ಮ ಪಾಲಿನ ಕಾರ್ಯಾಚರಣೆಯಲ್ಲಿ ಕಾರ್ಯಗತವಾಗುವುದಕ್ಕೆ ಒಂದು ನಿರ್ದಿಷ್ಟ ಸಮಯದ ಮಿತಿಯಿರುತ್ತದೆ. ಅದಕ್ಕಾಗಿ ಆದೇಶ ದೊರತ ಕೂಡಲೇ ಎಲ್ಲರಲ್ಲಿ ಒಂದು ಅವಸರದ ಸಡಗರವಿರುತ್ತದೆ. ಪೈಲಟ್ಗಳು,ತಾಂತ್ರಿಕವರ್ಗ,ಯಧ್ಧನಿರ್ವಹಣೆಯ ಸಿಬ್ಬಂದಿ ಮತ್ತು ಆಡಳಿತ ವ್ಯವಸ್ಥೆಯ ಸಿಬ್ಬಂದಿ ಎಲ್ಲರಿಗೂ' ನಾವು ರೆಡಿ 'ಎಂದು ಹೇಳುತ್ತಿರುವ ತವಕವಿರುತ್ತದೆ. ಯುಧ್ಧದ ಸಮಯದಲ್ಲಿ ಬಹುತೇಕ ಕಾರ್ಯಾಚರಣೆಗಳು ನೆಲಮಾಳಿಗೆಯಲ್ಲಿ ನಡೆಯುತ್ತವೆ. ನೆಲಮಾಳಿಗೆಯಲ್ಲೇ ಒಂದು 'ಯುಧ್ಧ ಕೊಟಡಿ' ಕಾರ್ಯಾರಂಭ ಗೊಳ್ಳುತ್ತದೆ. ಇದೇ ಎಲ್ಲಾ ಚಟುವಟಿಕೆಗಳ ಕೇಂದ್ರಬಿಂದು. ಇಲ್ಲಿ ಟೆಲಿಫೋನುಗಳ ಸಂತೆಯೇ ಹರಡಿಕೊಂಡಿರುತ್ತದೆ. ರಡಾರ್ ಸ್ಕ್ರೀನುಗಳು ಅದರಮುಂದೆ ಇಪ್ಪತ್ತು ನಾಲ್ಕುಘಂಟೆ ಎವೆಯಿಕ್ಕದೆ ಗಮನಿಸುತ್ತಿರುವ ಕಂಟ್ರೋಲರುಗಳು, ಮಿಸೈಲುಗಳ ನಿಯಂತ್ರಣ ತಂಡ, ಭೂಸೈನ್ಯದ ಅಂಗ,ಬೇಹುಗಾರಿಕೆ ಪಡೆ ,ಎಲ್ಲವೂ ಇಲ್ಲಿಯೇ ಮೇಳೈಸಿರುತ್ತದೆ. ಇವರಿಗೆ ಬೇಕಾದ ಊಟತಿಂಡಿಯ ಸರಬರಾಜು, ಮಧ್ಯ ಒಂದು ಚಿಕ್ಕ ವಿರಾಮಕ್ಕೆ ಬೇಕಾದ ಅನುಕೂಲಗಳು ಇರುತ್ತದೆ. ಈ ವ್ಯವಸ್ಥೆ ಅಕಸ್ಮಾತ್ ಶತ್ರುಗಳ ದಾಳಿಗೀಡಾದರೆ ಅದಕ್ಕೆ ಇನ್ನೊಂದು ಪರ್ಯಾಯ ಕೇಂದ್ರವನ್ನೂ ರಹಸ್ಯ ಸ್ಥಳದಲ್ಲಿ ನಿರ್ಮಿಸಲಾಗಿರುತ್ತದೆ.
ಪೂನಾದಿಂದ ನಮ್ಮ ಉಡಾಣ ರಾಜಾಸ್ತಾನದ ನಾಲ್ ಎನ್ನುವ ವಾಯುನೆಲೆಗೆ. ದಟ್ಟ ಮರುಭೂಮಿ ,ಪಾಕೀಸ್ತಾನದ ನೆಲ ಕೆಲವೇ ಕಿಮೀ ದೂರ. ಇಲ್ಲಿರುವ ಯುಧ್ಧವಿಮಾನಗಳನ್ನು ತುಂಬಾ ಜಾಗರೂಕತೆಯಿಂದ ಮರೆಸಲಾಗಿತ್ತು. ಎಲ್ಲದಕ್ಕೂ ಛದ್ಮವೇಷದ ಹೊದಿಕೆ. ಇಲ್ಲಿ ನನ್ನ ಬ್ಯಾಚ್ಮೇಟ್ ಅರ್ಜುನ್ ಸುಬ್ರಮಣ್ಯನೇ ಕಮಾಂಡಿಂಗ್ ಆಫೀಸರ್. ತುಂಬಾ ವರ್ಷಗಳ ನಂತರ ನಾವಿಬ್ಬರೂ ಭೇಟಿಯಾಗುತ್ತಿದ್ದದ್ದು. ಅಂತಹ ಗಡಿಬಿಡಿಯಲ್ಲೂ ಒಂದು ಕಪ್ ಚಹದ ಸೇವನೆಯೊಂದಿಗೆ ಹಳೆಯ ನೆನಪುಗಳ ಒಂದು ಝಲಕ್ ಕೂಡ ನಡೆದು ಹೋಯಿತು. ಈ ವರ್ಷ ಅರ್ಜುನ್ ಸುಬ್ರಮಣ್ಯಮ್ ಒಂದು ಬರೋಬ್ಬರಿ 600 ಪುಟಗಳ India's Wars ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದ್ದಾನೆ,ಸದ್ಯಕ್ಕೆ top-10 ನಲ್ಲಿ ನಡೀತಾ ಇದೆ.
ಅವತ್ತು ಅರ್ಜುನ್ ಅವಸರದಲ್ಲಿದ್ದ. ORP(Operational Readiness Platform) ಯ ವ್ಯವಸ್ಥೆಯನ್ನು ತಪಾಸಣೆ ಮಾಡಬೇಕಿತ್ತು.
ಈ ORP ಯ ಬಗ್ಗೆ ಸ್ವಲ್ಪ ವಿವರಿಸಿ ಹೇಳುತ್ತೇನೆ. ಶತ್ರುವಿನ ವಿಮಾನ ನಮ್ಮಕಡೆಗೆ ಬರುತ್ತಿದೆ ಎನ್ನುವ ಮಾಹಿತಿ ತಿಳಿದ ಎರಡು ನಿಮಿಷದಲ್ಲಿ ನಮ್ಮ ಎರಡು ವಿಮಾನಗಳು ಗಗನಕ್ಕೇರಿರ ಬೇಕು,ಅಲ್ಲಿಂದ ರಡಾರ್ ಕಂಟ್ರೋಲರುಗಳು ಅವರಿಗೆ ಶತ್ರುವಿನ ವಿಮಾನದ ಕಡೆ ಮಾರ್ಗದರ್ಶನ ಮಾಡಿ ಆ ವಿಮಾನವನ್ನು ನಿಷ್ಕ್ರಿಯೆ ಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಪ್ರತಿಯೊಂದು ಸೆಕೆಂಡೂ ಅತ್ಯಮೂಲ್ಯ. ನಾವು ಏರೋ ಇಂಡಿಯಾದಂತ ಏರ್ಷೋಗಳಲ್ಲಿ ಮೈನವಿರೇಳಿಸುವ ಈ ಉಕ್ಕಿನಹಕ್ಕಿಗಳ ಹಾರಾಟ ಇಂತಹ ವಾಯು ಕಾದಾಟದಲ್ಲಿ ತುಂಬಾ ಮಹತ್ವದ ಅಂಶ. ಕೆಲವೇ ನಿಮಿಷಗಳ ಕಾದಾಟದಲ್ಲಿ ಇಡೀ ಯುಧ್ಧದ ಬಣ್ಣವನ್ನೇ ಬದಲಾಯಿಸುವ ಮಹತ್ವ ಈ ಯುಧ್ಧವಿಮಾನಗಳಿಗಿದೆ. ಇದಕ್ಕೆಂದು ಈವಿಮಾನಗಳನ್ನು ರನ್ವೇಯಹತ್ತಿರವೇ ಟೇಕಾಫ್ ಗೆ ತಯಾರಾಗಿಟ್ಟುರುತ್ತಾರೆ. ಇಬ್ಬರೂ ಪೈಲಟ್ಗಳು ಓಡಿಬಂದು ಸೆಕೆಂಡುಗಳಲ್ಲಿ ಏರೋಪ್ಲೇನು ಹತ್ತುವ ದೂರದಲ್ಲಿ ನೆಲಮಾಳಿಗೆಯ ಕೊಟಡಿಯಲ್ಲಿರುತ್ತಾರೆ. ತಾಂತ್ರಿಕವರ್ಗದವರೂ ಅಲ್ಲೇ ಇರುತ್ತಾರೆ. Scramble.... Scramble ಎಂದು ಧ್ವನಿವರ್ಧಕದಲ್ಲಿ ಬಂದ ಎರಡು ನಿಮಿಷಗಳಲ್ಲೇ ಇಷ್ಟೆಲ್ಲಾ ಆಗಿರಬೇಕು.
No comments:
Post a Comment