Tuesday, October 25, 2016

ಮರಳಿ ಬಾನಿಗೆ

1 ಡಿಸೆಂಬರ್ 1972, ಜು಼ಲ್ಫೀಕರ್ ಆಲಿ ಭುಟ್ಟೊ ಪಾಕಿಸ್ತಾನದ ಅಂದಿನ ಪ್ರಧಾನಿ ,ರಾವಲ್ಪಿಂಡಿಯಲ್ಲಿ ಭಾರತೀಯ ವಾಯುಸೇನೆಯ ಪೈಲಟ್ ಗಳೂ ಸೇರಿದಂತೆ ಇತರೆ ಯುಧ್ಧಕೈದಿಗಳನ್ನುದ್ದೇಶಿಸಿ 'ನೀವಿನ್ನು ಸ್ವತಂತ್ರರು' ಎಂದು ಘೋಷಿಸುತ್ತಾರೆ!
   ಅಮೃತಸರದ ಹತ್ತಿರದ ವಾಘಾ ಬಾರ್ಡರಿನಲ್ಲಿ ಇವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
    ಅಮೃತಸರದ ವಾಯುನೆಲೆಯಲ್ಲಿ ಇವರ ಕುಟುಂಬದ ಸದಸ್ಯರುಗಳನ್ನೆಲ್ಲಾ ಮೊದಲೇ ಕರೆಸಿಟ್ಟುಕೊಂಡಿದ್ದರು. ಯುಧ್ಧ ಶುರುವಾದ ಬರೊಬ್ಬರಿ ಒಂದು ವರ್ಷದ ನಂತರ ಇವರ ಸಮಾಗಮ. ಆ ಒಂದು ಭಾವನೆಗಳ ಸಮ್ಮಿಳನ ಅದನ್ನು ಅನುಭವಿಸಿದವರಿಗೇ ಗೊತ್ತು. ನಾವೆಲ್ಲಾ ಪ್ರೇಕ್ಷಕಗಣ.
    ವಿಂಗ್ ಕಮಾಂಡರ್ ಗ್ರೇವಾಲ್,ಬಾನಿಗೆ ಮರಳಿದರಾದರೂ, ಕೆಲ ವರ್ಷಗಳ ನಂತರ ವಾಯುಪಡೆಗೆ ರಾಜೀನಾಮೆ ಕೊಟ್ಟು, ಹಿಮಾಲಯದ ತಪ್ಪಲಿನ 'ತೆರಾಯ್' ಪ್ರದೇಶದಲ್ಲಿ ಈಗಲೂ ವ್ಯವಸಾಯ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ನು ಈ Great Escape ನ ಮುಖಂಡ ಗ್ರೂಪ್ ಕ್ಯಾಪ್ಟನ್ ದಿಲಿಪ್ ಪರೂಲ್ಕರ್ ಪೂನಾದಲ್ಲಿ ವಿವಿಧ ಉದ್ಯೊಗಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
   ನಮ್ಮ ಗ್ರೂಪ್ ಕ್ಯಾಪ್ಟನ್ ಹರೀಶ್  ಬೆಂಗಳೂರಿನಲ್ಲಿ ಸೆಟ್ಲಾದರು. ಆದರೆ ದುರದೃಷ್ಟವಶಾತ್ 1999 ರಲ್ಲಿ ಅನಾರೋಗ್ಯದಿಂದ ಬಳಲಿ ಮೃತರಾದರು. ಅವರ ಮಗ ವಿಕ್ರಮ್, ನರನರಗಳಲ್ಲೂ ಅವರ ಅಪ್ಪನ ನೆನಪುಗಳನ್ನೇ ತುಂಬಿಕೊಂಡು ಜೀವಿಸಿತ್ತಿರುವ ವ್ಯಕ್ತಿ, ನಮ್ಮ ಜೊತೆ 'ಇಂಡಿಗೊ ಏರ್ಲೈನ್' ನಲ್ಲಿ ಪೈಲಟ್ ಆಗಿದ್ದಾರೆ.
    ಇವರ ಈ ಸಾಹಸಗಾಥೆ 'ಖುಲೇ ಆಸ್ಮಾ ಕೆ ಓರ್' ಎನ್ನುವ ಚಲನಚಿತ್ರವಾಗಲಿದೆ ಎನ್ನುವ ವಿಷಯ ತಿಳಿದು ಬಂದಿದೆ.
    ಇನ್ನೊಬ್ಬರು ಈ ಸಾಹಸಗಾಥೆಯನ್ನು ಒಂದು ವಿಷೇಶ ರೀತಿಯಲ್ಲಿ ಬರೆದರು. ಏನು ಅವರ ಬರಹದಲ್ಲಿ ವೈವಿಧ್ಯತೆ ಎಂದರೆ ,ಅವರು ಬಾಯಲ್ಲಿ ಪೆನ್ನು ಕಚ್ಚಿಕೊಂಡು ಬರೆದರು,ಅವರು ಬರೆಯುತ್ತಿದ್ದುದೇ ಹಾಗೆ!
    ಅವರೇ ಫ್ಲೈಯೀಂಗ್ ಆಫೀಸರ್ ಅನಿಲ್ ಕುಮಾರ್.
    1988ರಲ್ಲಿ ಪಠಾಣಕೊಟಿನ ವಾಯುನೆಲೆಯಲ್ಲಿ ನಡೆದ ಒಂದು ಧುರ್ಘಟನೆಯಲ್ಲಿ ಈ ಫೈಟರ್ ಪೈಲಟ್ ನ ಕತ್ತು ಮುರಿದು ಹೋಯಿತು. ಬದುಕುಳಿದರಾದರೂ ಕತ್ತಿನಕೆಳಿಗಿನ ಅಂಗಗಳೆಲ್ಲಾ ನಿಷ್ಕ್ರಿಯ. ಪುಣೆಯ ಸಮೀಪದ ಮಿಲಟರಿ ಆಸ್ಪತ್ರೆಯನ್ನೇ ಮನೆ ಮಾಡಿಕೊಂಡರು. ತಮ್ಮ ನೋವನ್ನೆಲ್ಲಾ ಮರೆತು ಸದಾ ಬೇರೆಯವರ ಆಸರೆಯಾಗುತ್ತಿದ್ದರು. ಮೊದಲು ಬಾಯಲ್ಲಿ ಪೆನ್ನು ಕಚ್ಚಿ ಬರೆದರು ಆಮೇಲೆ ಅದರಿಂದಲೇ ಕೀಬೋರ್ಡನ್ನು ಒತ್ತಲು ಶುರು ಮಾಡತೊಡಗಿದರು. ಅದೇ ಅವರ ಅಸ್ತ್ರ.  ಆಸ್ಪತ್ರೆಯ ಸಿಬ್ಬಂದಿಯಾಗಲೀ,ಆಡಳಿತವರ್ಗವಾಗಲಿ ಎಂದೂ ಇವರನ್ನು ನಿರ್ಲಕ್ಷಿಸಲಿಲ್ಲ,ಇವರು ಹಾಗಾಗಲು ಬಿಡುತ್ತಲೂ ಇರಲಿಲ್ಲ. ಇವರಿಗೆ chair borne warrior  ಎಂಬ ಬಿರುದಾಂಕಿತವೂ ಆಗಿತ್ತು. ಕೆಲಸ ಮಾಡುತ್ತಿದ್ದ ಅಂಗಾಂಗಳನ್ನೆಂದೂ ನಿಷ್ಕ್ರಿಯವಾಗಿರಲು ಬಿಡಲಿಲ್ಲ. ಇವರು ಕುಳಿತಲ್ಲೇ ಗುಟುರು ಹಾಕಿದರೆ ಆಸ್ಪತ್ರೆಯೇ ನಡುಗುವಷ್ಟು ನಿಯಂತ್ರಣವಿತ್ತು. ಇವರ ಸಹಾಯ ಕೇಳಿಕೊಂಡು ಎಲ್ಲೆಲ್ಲಿಂದಲೊ ಬರುತ್ತಿದ್ದರು. ವಾಯುಸೇನೆಯ ಅಧ್ಯಕ್ಷರೂ ಸಹ ಇವರ ಮಾತನ್ನು ತಳ್ಳಿಹಾಕುತ್ತಿರಲಿಲ್ಲ,ಅಷ್ಟೊಂದು ಖಧರ್ ಇತ್ತು. 2014 ರಲ್ಲಿ ತುಂಬಾದಿನಗಳ ಅನಾರೋಗ್ಯದಿಂದಾಗಿ ಪರ ಲೋಕಕ್ಕೆ ಹೊರಟುಹೋದರು. ಅಂತಹ ಸ್ಥಿತಿಯಲ್ಲಿಯೂ 26 ವರ್ಷಗಳ ಸಾರ್ಥಕ ಜೀವನ ನಡೆಸಿದರು,ಎಂದಿಗೂ ತಮ್ಮ ಬಗ್ಗೆ self pity ತೋರಿಸದ ಗಟ್ಟಿಜೀವ.
   ಈ Great Escape ನ ವಿಷಯ ಯಾಕೆ ಬಂತು ಅಂದರೆ,ಗುಲ್ಮರ್ಗದ ಹಿಮದ ಅನುಭವದ ನಂತರ ನಮ್ಮ ತರಬೇತಿಯ ಮುಂದಿನ ಹಂತವೇ ಅದಾಗಿತ್ತು. Escape from the enemy to fight another day.
   ಅಂದು ಗುಲ್ಮರ್ಗದಿಂದ ಶ್ರೀನಗರದ ವಾಯುನೆಲೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಮುಖ್ಯದ್ವಾರದಲ್ಲಿರುವ ಗಾರ್ಡರೂಮಿನಲ್ಲಿ ನಮ್ಮನ್ನು ಕೂರಿಸಿಕೊಂಡು ನಾವು ಮಾಡಬೇಕಾಗಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.
  ಎಲ್ಲರ ಕೈಯಲ್ಲೂ ಮೂರು ಟೋಕನ್ನುಗಳು.  ವಾಯುನೆಲೆಯಲ್ಲಿ ಅಲ್ಲಲ್ಲಿ ಕಮಾಂಡೊಗಳು ಇರುತ್ತಾರೆ ಅವರೇ ನಿಮ್ಮ ಶತ್ರುಗಳು. ನೀವು ಯಾವಕಾರಣಕ್ಕೂ ಅವರ ಕೈಗೆ ಸಿಗಬಾರದು ,ಅವರ ಕಣ್ಣಿಗೆ ಕಾಣಿಸದ ಹಾಗೆ ತಪ್ಪಿಸಿಕೊಂಡು ವಾಯುಯಾನ ನಿಯಂತ್ರಣ ಕೇಂದ್ರವನ್ನು (ATC tower) ತಲುಪಬೇಕು.  ಅಪ್ಪಿತಪ್ಪಿ  ಕಮಾಂಡೊಗಳ ಕೈಗೆ ಸಿಕ್ಕರೆ ಅವರಿಗೆ ಒಂದು ಟೋಕನ್ ಒಪ್ಪಿಸಬೇಕು,ಏನಾದರು ಓಡಲು ಪ್ರಯತ್ನಿಸಿದರೆ ಕಮಾಂಡೊಗಳಿಗೆ ನಮ್ಮನ್ನು ಬಂದಿಸಲು ಏನು ಬೇಕಾದರೂ ಮಾಡಬಹುದೆಂಬ ಅಧಿಕಾರ ವಿರುತ್ತದೆ. ಕಮಾಂಡೊಗಳು ಎಂದರೆ ಕೇಳಬೇಕೆ..ಯಾಕೆ ರಿಸ್ಕು ಎಂದು ಮೂರು ಟೋಕನ್ನುಗಳನ್ನು ಕೊಟ್ಟುಬಿಟ್ಟರೆ ಅಲ್ಲಿಗೆ ಅವರನ್ನು  ಯುಧ್ಧಕೈದಿಗಳು ಎಂದು ಘೋಷಿಸಿ ಮುಂದೆ Geneva Convention ನಿಯಮಗಳಂತೆ ಮುಂದಿನ ಕಾರ್ಯಕ್ರಮ!.
  ಯುಧ್ಧಕೈದಿಗಳು ಬರಿ ಅವರ ಹೆಸರು. ಪದವಿ ಮತ್ತು ಅವರ ಸೈನಿಕ ಸಂಖ್ಯೆ , ಬರಿ ಇಷ್ಟೇ ಹೇಳಬೇಕು. ಶತ್ರುಗಳು ಎಷ್ಟೇ ಹಿಂಸಿಸಲಿ ಇನ್ನಾವ ರಕ್ಷಣಾ ವ್ಯವಸ್ಥೆಯ ಬಗ್ಗೆ ಬಾಯಿಬಿಡಬಾರದು. ಮೊದಲೆಲ್ಲಾ ಈ ತರಬೇತಿಯಲ್ಲಿ 'ಥರ್ಡ್ ಡಿಗ್ರಿ ,ಏರೋಪ್ಲೇನ್ ಏರಿಸೊದು ಎಲ್ಲ ನಡೆಯುತ್ತಿತ್ತಂತೆ! ಆದರೆ ನಮಗೆ ಸದ್ಯಕಿದ್ದದ್ದು ಯುಧ್ಧಕೈದಿಯಾಗುವ ಅವಮಾನದಿಂದ ತಪ್ಪಿಸಿಕೊಳ್ಳಬೇಕೆಂಬ ಛಲ.
  ಸ್ವಲ್ಪ ಹೊತ್ತಿನಲ್ಲೇ ನಮ್ಮನ್ನೆಲ್ಲಾ ಚದುರಿಸಿ ಬೇರೆ ಬೇರೆ ಮಾರ್ಗಗಳಲ್ಲಿ ಬಿಟ್ಟರು. ಇನ್ನು ಮೇಲೆ ನಮ್ಮ ನಮ್ಮ ಕುರುಕ್ಷೇತ್ರ..ನಾವೇ ಕಾದಾಡಬೇಕು. ATC tower ನ ಮೇಲೆ ಒಂದು ನಿರ್ದಿಷ್ಟ ವೇಗದಲ್ಲಿ ಸುತ್ತುವ ಪ್ರಖರವಾದ  ಲೈಟ್ ಇರುತ್ತದೆ. ವಿಮಾನಗಳಿಗೆ ಇದೇ ದಾರಿದೀಪ. ಅವತ್ತು ನಮಗೂ ಅದೇ ಮಾರ್ಗದರ್ಶಿ. ಅದನ್ನು ನೋಡುತ್ತಲೇ ಏಳುತ್ತಾ ಬೀಳುತ್ತ,ತೆವಳುತ್ತ..ಯಾರ ಕಣ್ಣಿಗೂ ಕಾಣದ ಹಾಗೆ ಕತ್ತಲಿನಲ್ಲಿ ಕರಗುತ್ತಾ ಮುನ್ನಡೆದೆ.  ಸಮಯದ ಪರಿವೆ, ನಾನು ಎಲ್ಲಿದ್ದೆನೆಂಬ ಅರಿವು ಉಹುಂ..ಏನೂ ಗೊತ್ತೇ ಇಲ್ಲ. ದೂರದಲ್ಲೆಲ್ಲೋ ಮಾತಾಡುವ ಶಬ್ದ ಕೇಳಿಸಿದ ಕೂಡಲೇ ಎಚ್ಚರವಹಿಸಿ ಸ್ತಬ್ದವಾಗಿ ಆಲಿಸಿ,ಕಮಾಂಡೊಗಳಲ್ಲ ಎಂದು ಖಚಿತವಾದ ಮೇಲೆ ಮುಂದುವರೆಯುತ್ತಿದ್ದೆ. ನನ್ನ ಮಿತ್ರರ ಸುಳಿವೇ ಇಲ್ಲ,ಅವರೆಲ್ಲಾ ಆಗಲೇ ತಲುಪಿದರಾ? ಯಾರಾದರೂ ಸಿಕ್ಕಿಬಿದ್ದರಾ?
  ದೂರದಲ್ಲಿ ಒಂದು ವಾಹನದ ಶಬ್ದ ಕೇಳಿಸಿತು ಅದು ಹತ್ತಿರವಾಗುತ್ತಿದ್ದ ಹಾಗೆ ಒಂದು ಮರದ ಹಿಂದೆ ನಿಂತೆ. ಅದು ಒಂದು ಮಿಲಿಟರಿ ಟ್ರಕ್ಕು. ಸ್ವಲ್ಪ ಮುಂದೆ ಹೋಗಿ ನಿಂತಿತು. ಪುನಃ ಜೋರು ಜೋರಾಗಿ ಮಾತಾಡುವುದು ಕೇಳಿಸಿತು. ಗಮನವಿಟ್ಟು ಆಲಿಸಿದಾಗ ಅವರಲ್ಲಿ ಯಾರೂ ಕಮಾಂಡೊಗಳಲ್ಲ ಎನ್ನುವುದು ಖಚಿತವಾಯಿತು. ಅದು ಒಂದು ಊಟ ಹಂಚುವ ಟ್ರಕ್ಕು. ವಾಯುನೆಲೆಯ ಹಂತ ಹಂತದಲ್ಲೂ ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಿರುತ್ತಾರೆ. ಅವರ ಊಟದ ವ್ಯವಸ್ಥೆಯನ್ನು ಅವರಿರುವ ಕಾವಲು ಜಾಗಕ್ಕೇ ತಲುಪಿಸಲಾಗುತ್ತದೆ. ಡ್ರೈವರ್ ಗಾಡಿಯನ್ನು ನಿಲ್ಲಿಸಿ,ಬಂದ ಗಾರ್ಡುಗಳ ತಟ್ಟೆಗಳಿಗೆ, ಕ್ಯಾರಿಯರ್ ಗಳಿಗೆ ಬಡಿಸಿ ಒಂದು ಸಿಗರೇಟ್ ಹಚ್ಚಿಕೊಂಡು ಅವರ ಜೊತೆ ಮಾತಿಗಿಳಿದ.
ಫಕ್ಕನೆ ಒಂದು ಐಡಿಯ ಬಂತು. ಡ್ರೈವರ್ ಉಭಯಕುಶಲೋಪರಿಯ ಮಾತುಗಳನ್ನು ಮುಗಿಸಿ ಗಾಡಿ ಶುರು ಮಾಡಿದ್ದೇ ತಡ ಹಿಂದಿನಿಂದ ಓಡಿಹೋಗಿ ಗಾಡಿಯನ್ನು ಹತ್ತಿಕೊಂಡು ಬಿಟ್ಟೆ. ಬಿಸಿ ಬಿಸಿ ಊಟದಲ್ಲಿ ಮಗ್ನರಾಗಿದ್ದ ಗಾರ್ಡುಗಳಿಗೆ ಇದು ಕಾಣಿಸಲೇ ಇಲ್ಲ!
   ಏನು ಅದೃಷ್ಟ ಅಂದರೆ ಮುಂದಿನ ಕಾವಲು ನಿಲ್ದಾಣವೇ ATC tower, ನಾನು ತಲುಪಬೇಕಿದ್ದ ತಾಣ. ಅಲ್ಲಿ ಕಮಾಂಡೊಗಳ ದಂಡೇ ನೆರೆದಿತ್ತು. ಅವರನ್ನು ದಾಟಿಕೊಂಡು ಟ್ರಕ್ಕು ಮುಂದೆ ಹೋಯಿತು. ಯಾರೂ ಈ ಟ್ರಕ್ಕಿನ ಕಡೆ ಗಮನಹರಿಸಲೇಇಲ್ಲ. ಟ್ರಕ್ಕು ನಿಧಾನಗತಿಗೆ ಬಂದ ಕೂಡಲೇ ಕೆಳಗೆ ಜಿಗಿದು ಮತ್ತೆ ಕತ್ತಲಿನಲ್ಲಿ ಲೀನವಾದೆ. ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿಯ ಅರಿವಾಯಿತು. ಕಮಾಂಡೊಗಳು ಆಗಲೇ ಕೆಲವರನ್ನು ಹಿಡಿದಾಗಿತ್ತು. ಒಬ್ಬರಿಗೆ ಚೇಳು ಕಚ್ಚಿ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ರಾತ್ರಿ ಹತ್ತು ಘಂಟೆಯಾದರೂ ನಾನು ಮತ್ತು ನನ್ನ ಬ್ಯಾಚ್ ಮೇಟ್ ರಾವ್ ಕಾಣುತ್ತಲೇ ಇಲ್ಲ ಎಂದು ಆತಂಕ ಪಡುತ್ತಿದ್ದರು ನಮ್ಮ ತರಬೇತಿ ಸಿಬ್ಬಂದಿ. ಇದನ್ನೆಲ್ಲಾ ಮನವರಿಸಿಕೊಂಡು ಇನ್ನು ನಾನು ಸುರಕ್ಷಿತವಾಗಿದ್ದೇನೆ ಎನಿಸಿದ ಮೇಲೆ ಕತ್ತಲಿಂದ ಹೊರಬಂದೆ. ಮೂರು ಟೋಕನ್ಗಳು ನನ್ನ  ಹತ್ತಿರ ಸುರಕ್ಷಿತವಾಗಿದ್ದವು!..ಮಾನ ಉಳಿಯಿತು.
   ಈ ಮಾನ ಸಮ್ಮಾನಗಳನ್ನು ಉಳಿಸಿಕೊಳ್ಳುವುದೇ ನಮ್ಮ ಮಿಲಿಟರಿ ತರಬೇತಿಯಲ್ಲಿ ಕಲಿಸಿಕೊಡುವುದು.

ನಮ್ಮ ಮಾನ, ನಮ್ಮ ಭಾರತ ಮಾತೆಯ ಮಾನ. ಇದಕ್ಕೆ ಯಾವ ಬೆಲೆಯನ್ನೂ ಕೊಡಲು ಸಿದ್ದ.
ಜಯ ಭಾರತ.

The Great Escape

ಕ್ಯಾಪ್ಟನ್ ಸೌರಭ್ ಕಾಲಿಯ ರವರ ಛಿದ್ರಗೊಂಡ ಮೃತದೇಹವನ್ನು ನೋಡಿ ಪಾಕೀಸ್ತಾನಿಗಳ ಕ್ರೌರ್ಯಕ್ಕೆ ಇಡೀ ಭಾರತಕ್ಕೆ ಭಾರತವೇ ಕೆರಳಿಹೋಯ್ತು.
    ಒಬ್ಬ ಯುದ್ದ ಕೈದಿಯನ್ನು ಹೇಗೆ ನೋಡಿಕೊಳ್ಳ ಬೇಕೆಂಬ ಹಲವಾರು ಅಂತರಾಷ್ಟ್ರೀಯ ನಿಯಮಗಳಿದ್ದರೂ ಸಹ,ಈ ಕ್ರೂರಿಗಳು ಅವರನ್ನು ಚಿತ್ರಹಿಂಸೆಗೀಡು ಮಾಡಿ ಕೊಂದರು.
    ಇದೇ ಕಾರ್ಗಿಲ್ ಸಮಯದಲ್ಲೇ ಫ್ಲೈಯಿಂಗ್ ಆಫೀಸರ್ ನಚಿಕೇತ ಎನ್ನುವ ಫೈಟರ್ ಪೈಲಟ್ ಸಹ ಯುದ್ದಕೈದಿಗಳಾಗಿ ಪಾಕಿಸ್ತಾನಿಯರ ಕೈಗೆ ಸಿಕ್ಕಿ ಬಿದ್ದರು. ಮೊದಮೊದಲು ಅವರಿಗೂ ಯಮಯಾತನೆ ಕೊಟ್ಟರು. ಆದರೆ ಅಂತರಾಷ್ಟ್ರೀಯ ಮಾಧ್ಯಮಗಳು ಇವರ ಬಂಧನದ ಬಗ್ಗೆ ಬಿತ್ತರಿಸತೊಡಗಿದಾಗ,ಮತ್ತು ಆಗಿನ ಸರಕಾರದ ಬಲವಾದ ಒತ್ತಡದಿಂದ ಅವರನ್ನು ಬಿಡುಗಡೆ ಮಾಡಿದರು. ಆದರೆ ಅವರಿಗೆ ಕೊಟ್ಟ ದೈಹಿಕ ಹಾಗು ಮಾನಸಿಕ ಹಿಂಸೆಯ ನೆನಪುಗಳಿಂದ ಹೊರಬರಲು ತುಂಬಾ ಸಮಯ ಹಿಡಿಯಿತಂತೆ.
    1971 ರಲ್ಲಿ ನಡೆದ ಯುಧ್ಧದಲ್ಲಿಯೂ ಸಹ ಇದೇ ಧರ್ಮ,ಅಧರ್ಮಗಳ ಘರ್ಷಣೆ ಭಾರತ ಮತ್ತು ಪಾಕೀಸ್ತಾನಗಳ ನಡುವೆ ಯುಧ್ಧಕೈದಿಗಳನ್ನು ಬಿಡುಗಡೆಯ ವಿಷಯವಾಗಿ ನಡೆಯಿತು. ಬಂಗ್ಲಾದೇಶದಲ್ಲಿ ಶರಣಾದ 90 ಸಾವಿರಕ್ಕೂ ಹೆಚ್ಚು ಪಾಕಿಗಳನ್ನು 'ಸಿಮ್ಲಾ ಸಂಧಾನ 'ದಂತೆ ನಾವು ಬಿಡುಗಡೆ ಮಾಡಿದರೂ ಸಹ ನಮ್ಮ ದೇಶದ ಕೆಲವು ಯುಧ್ಧಕೈದಿಗಳ ಬಿಡುಗಡೆಗೆ ಕಳ್ಳಗೊಂದು ಪಿಳ್ಳೆನೆವದಂತೆ ಕಿರಿಕ್ಕು ಮಾಡುತ್ತಾ ಬಂತು ಪಾಕಿಸ್ತಾನ. ಇದರಲ್ಲಿ ಸುಮಾರು 15 ಜನ ಭಾರತೀಯ ವಾಯುಸೇನೆಯ ಪೈಲಟ್ಗಳೂ ಇದ್ದರು.
    ಯುಧ್ಧಮುಗಿದು 5-6 ತಿಂಗಳುಗಳಾದರೂ ಸಹ ಬಿಡುಗಡೆಯ ದಿನ ಘೋಷಿಲಿಲ್ಲದಿದ್ದಾಗ ಈ ಪೈಲಟ್ಗಳ ಮನೋಸ್ಥೈರ್ಯ ಕುಸಿಯತೊಡಗಿತು. ಇದು ಸಹಜವೆ. ಪಾಕಿಸ್ತಾನದ ಕಾರ್ಯ‌ವೈಖರಿಯನ್ನು ಬಹಳ ಹತ್ತಿರದಿಂದ ನೋಡಿದ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾದರು.
    ಯುಧ್ಧದಲ್ಲಿ ಪೂರ್ವ ಪಾಕೀಸ್ತಾನವನ್ನು ಕಳೆದು ಕೊಂಡು ಅವಮಾನಿತರಾದ ಪಾಕಿಗಳು,ಈ ಯುಧ್ಧ ಕೈದಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಶುರುಮಾಡಿದರು.  ರಾವಲ್ಪಿಂಡಿಯ ಜೈಲಿನಲ್ಲಿದ್ದ ಭಾರತೀಯ ವಾಯುಸೇನೆಯ ಪೈಲಟ್ ಗಳಲ್ಲಿ ಕೆಲವರು ಹತಾಶೆಯಿಂದ ಕೈಚೆಲ್ಲಿ ಕುಳಿತರೆ ಇನ್ನು ಕೆಲವರು ಒಂದು great escape ನ ನೀಲಿನಕಾಶೆ ತಯಾರು ಮಾಡಲು ಶುರುಹಚ್ಚಿಕೊಂಡರು.
    ಪರೂಲ್ಕರ್, ಗ್ರೇವಾಲ್ ಹಾಗು ಮೈಸೂರಿನವರಾದ ಹರೀಷ್ ಸಿನ್ಹಜಿ ಅಲ್ಲಿಂದ ಪರಾರಿಯಾಗುವ ಒಂದು ಅಧ್ಭುತ ಪ್ಲಾನನ್ನು ರಚಿಸಿದರು.  ಜೈಲಿನಿಂದ ಹೊರಬಿದ್ದು ಪೇಷಾವರದ ಬಳಿಯ ರೈಲ್ವೆ ನಿಲ್ದಾಣ ತಲುಪಿದರೆ ಅಲ್ಲಿಂದ ಅಫ್ಘಾನಿಸ್ಥಾನವನ್ನು ತಲುಪಬಹುದು ಎನ್ನುವ  ಯೋಜನೆಯೊಂದಿಗೆ ತಯಾರಿ ಶುರುವಾಯಿತು.
     ಊಟದ ಜೊತೆಗೆ ಬರುತ್ತಿದ್ದ ಚಾಕು ಚಮಚಗಳನ್ನು ಉಪಯೋಗಿಸಿಕೊಂಡು  ಹಿಂದಿನ ಗೋಡೆಯನ್ನು ಕೊರೆದು ಒಂದು ಅಂಗೈಯಗಲದ ತೂತಿನಿಂದ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಹತ್ತಿರವೇ ಒಂದು ಸಿನೆಮಾ ಥಿಯೇಟರ್ ಇತ್ತು ಮತ್ತು ಅದರ ಪಕ್ಕದಲ್ಲೇ ಒಂದು ಬಸ್ ನಿಲ್ದಾಣವೂ ಇತ್ತು. ರಾತ್ರಿಯ ಕೊನೆಯಪ್ರದರ್ಶನದ ನಂತರ ಒಂದು ಬಸ್ಸು ಅಲ್ಲಿಂದ ಹೊರಟು ಪೇಷಾವರಕ್ಕೆ ಹೋಗುವ ವಿಷಯನ್ನು ತಿಳಿದು ಕೊಂಡರು.   ಇವರಿಗೆ ಸಿಕ್ಕ ಒಂದು ಹಳೆಯ ಮ್ಯಾಪಿನ ಪ್ರಕಾರ,ಆ ಟೌನಿನಿಂದ ಸ್ವಲ್ಪ ದೂರದಲ್ಲೇ ಒಂದು ರೈಲ್ವೆ ನಿಲ್ದಾಣವಿದೆ ಮತ್ತು ಅಲ್ಲಿಂದ ಆಫ್ಘಾನಿಸ್ತಾನದ ಗಡಿಗೆ ಕೆಲವೇ ಘಂಟೆಗಳ ಪ್ರಯಾಣ. ಒಮ್ಮೆ ಅಲ್ಲಿಗೆ ತಲುಪಿ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿದರೆ ಇನ್ನೇನು ನಮ್ಮ great escape ಯಶಸ್ವಿಯಾದ ಹಾಗೆ ಎನ್ನುವವರೆಗೂ ಎಲ್ಲಾ ಸಿದ್ದತೆಗಳು ನಡೆದವು.
    ಆ ಅಂಗೈಯಗಲದ ಕಿಂಡಿಯನ್ನು ಇಟ್ಟಿಗೆಗಳ ಮಧ್ಯದ ಕಾಂಕ್ರೀಟು ಕೆರೆದು ಅಗಲ ಮಾಡುತ್ತಾ ಹೋದರು. ರಾತ್ರಿಯೆಲ್ಲಾ ಈ ಕೆಲಸ ನಡೆಯುತ್ತಿತ್ತು ಮತ್ತು ಬೆಳಗಾಗುವ ಮುನ್ನ ಯಾರಿಗೂ ಅನುಮಾನ ಬರದಂತೆ ಇಟ್ಟಿಗೆಗಳನ್ನು ಜೋಡಿಸಿಟ್ಟು ಬಿಡುತ್ತಿದ್ದರು. ಕೆಲವೇ ದಿನಗಳಲ್ಲಿ ಇದು ಒಬ್ಬಬ್ಬರಾಗಿ ನುಸುಳಿಕೊಂಡು ಹೊರಬರುವಷ್ಟು ಅಗಲವಾಯಿತು.
    ಆಗಸ್ಟ್ 12 ರ ರಾತ್ರಿ great escape ನ ಕಾರ್ಯಾಚರಣೆ ಶುರು. ಪ್ಲಾನು ಎಷ್ಟು ಕರಾರುವಕ್ಕಾಗಿ ಮಾಡಿದ್ದರೆಂದರೆ, ಕತ್ತಲಿನಲ್ಲಿ,ಇನ್ನೇನು ಸಿನೆಮಾ ಮುಗಿದು ಜನರ ಗುಂಪು ಹೊರ ಬರುತ್ತಿದ್ದ ಹಾಗೆ ಈ ಮೂವರು ನುಸುಳಿಕೊಂಡು  ಬಂದರು. ಅದೇ  ಸಮಯಕ್ಕೆ  ಮಳೆಯೂ ಶುರುವಾದ್ದರಿಂದ ಇವರು ನುಸುಳಿಕೊಂಡು ಹೊರ ಬಂದದ್ದು  ಯಾರಿಗೂ ಕಾಣಲಿಲ್ಲ. ಸದ್ಯ ದೇವರು ನಮ್ಮೊಂದಿಗಿದ್ದಾನೆ ಎನಿಸಿತಂತೆ.  ಥಿಯೇಟರಿನಿಂದ ಹೊರಬಂದ ಗುಂಪು ಸೀದಾ ಬಸ್ಸಿನಲ್ಲಿ ತುಂಬಿಕೊಂಡು ಬಿಟ್ಟಿತು. ಇವರೂ ಗುಂಪಿನಲ್ಲಿ ಗೋವಿಂದರಾದರು.           
    ಪಂಜಾಬಿನವರಾದ ಗ್ರೇವಾಲ್ ಪಠಾಣರ ಮಾದರಿಯಲ್ಲಿ ಮಾತನಾಡುತ್ತ ಯಾರಿಗೂ ಅನುಮಾನ ಬರದ ಹಾಗೆ ನೋಡಿಕೊಂಡರು. ಮೈಸೂರಿನ ಹರೀಶರಿಗೆ 'ಹರಾಲ್ಡ್' ಎಂದು ನಾಮಕರಣ ಮಾಡಿ ಅವರು ಬಾಯಿಬಿಡದ ಹಾಗೆ ನೋಡಿಕೊಂಡರು!
    ಬೆಳಗಿನ ಜಾವದಷ್ಟು ಹೊತ್ತಿಗೆ ಬಸ್ಸು ಪೇಷಾವರಕ್ಕೆ ಬಂದು ತಲುಪಿತು. ರಾತ್ರಿಯೀಡೀ ಬ‍ಸ್ಸಿನಲ್ಲಿ ತೂಕಡಿಸುತ್ತಾ ಹರೀಷ್ ತಮ್ಮ ಮೈಸೂರಿನ ನಜರಾಬಾದ ಮನೆಯಲ್ಲಿ,ತಂದೆ ತಾಯಿಯರ ಜೊತೆ ಊಟ ಮಾಡುವ ಕನಸು ಕಾಣುತ್ತಿದ್ದರಂತೆ..
    ಇವರ ಕೈಲಿದ್ದ ಮ್ಯಾಪಿನ ಪ್ರಕಾರ 'ಲಂಡಿ ಖಾನ' ಎನ್ನುವ  ರೈಲು ನಿಲ್ದಾಣ ಮೂರು ಕಿಮೀ ದೂರ. ಅಲ್ಲೇಹತ್ತಿರದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಾ,ನಾವು ಪಾಕಿಸ್ತಾನದ ವಾಯುಸೈನಿಕರು ರಜೆಯಲ್ಲಿದ್ದೇವೆ ,ಪ್ರವಾಸ ಮಾಡುತ್ತಿದ್ದೇವೆ ಎಂದು ಯಾರಿಗೂ ಅನುಮಾನ ಬರದ ಹಾಗೆ ಮಾತಾಡಿದರು. ಇನ್ನೂ ಯುಧ್ಧದ ನೆನಪು ಮಾಸಿರಲಿಲ್ಲ,ಅಪನಂಬಿಕೆಯ ವಾತಾವರಣ ಆದರೂ ಇರಬಹುದೇನೋ ಎಂದು ಅವರ ಪಾಡಿಗೆ ಹೋಗುತ್ತಿದ್ದರೇನೋ...ಆದರೆ ಇವರಿಂದ ಒಂದು ದೊಡ್ಡ ಪ್ರಮಾದ ನಡೆದು ಹೋಯಿತು. ಅದರಿಂದಾಗಿ ಮೂವರೂ ಪುನಃ ರಾವಲ್ಪಿಂಡಿಯ ಕಾರಾಗೃಹಕ್ಕೆ ವಾಪಸಾಗುವ ಪರಿಸ್ಥಿತಿ ನಿರ್ಮಾಣವಾಯಿತು.!

All is fair in love and war

ಇದೊಂದು ಶತಮಾನಾಂತರಗಳಿಂದ ರೂಢಿಯಲ್ಲಿರುವ ಗಾದೆ. Love ಇಲ್ಲಿಯ ವಿಷಯವಲ್ಲ ಆದರೆ  War...ಹೌದು ಇದು ನಮ್ಮ ವಿಷಯ.
ಆದರೆ ಯುದ್ದದಲ್ಲೂ ಕೆಲವೊಂದು ನೀತಿಗಳನ್ನು ಸೃಷ್ಟಿಸಲಾಗಿದೆ.  ಅದಕ್ಕೂ ಒಂದು ಕೈಪಿಡಿಯನ್ನು ರಚಿಸಿದ್ದಾರೆ.  ಅಂತರಾಷ್ಟೀಯ ಮಟ್ಟದಲ್ಲಿ ಒಂದು ಒಪ್ಪಂದವಿದೆ. ಆದರೆ ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ಎನ್ನುವುದು ಖಚಿತವಾಗಿ ಹೇಳಲಾಗುವುದಿಲ್ಲ. ಸೆರೆ ಹಿಡಿದ ಯುದ್ದಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕೆಂಬುದಕ್ಕೂ ಒಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಒಪ್ಪಂದವಿದೆ ಅದಕ್ಕೆ Geneva Convention ಎಂದು ಹೇಳುತ್ತಾರೆ. ಯುದ್ದಕ್ಕಿಳಿದಿರುವ ಎರಡು ದೇಶಗಳ ನಡುವೆ ರಾಜಕೀಯವಾಗಿ ಒಂದು ಒಪ್ಪಂದವಾಗುವವರೆಗೂ ಈ ಯುದ್ದಕೈದಿಗಳನ್ನು ಕಾಯಿದೆಯನ್ವಯ ಸುರಕ್ಷಿತವಾಗಿಡಬೇಕು. ಅವರಿಗೆ ದೈಹಿಕವಾಗಿ ಯಾವ ಹಿಂಸೆಯನ್ನೂ ಕೊಡಬಾರದು,ಅವರಿಂದ ಮಾಹಿತಿ ಪಡೆಯುವ ಸಮಯದಲ್ಲಿ ಏನೇನು ಪ್ರಶ್ನೆಗಳನ್ನು ಕೇಳಬಹುದು ಎಂಬುವ ವಿವರಗಳೆಲ್ಲಾ ಈ ಒಂದು Convention ನಲ್ಲಿ ಇದೆ.
  1971 ರ ಭಾರತ ಮತ್ತು ಪಾಕೀಸ್ತಾನದ ಯುಧ್ಧದಲ್ಲಿ ವಿಜೇತವಾದ ಭಾರತ,ಸುಮಾರು 90 ಸಾವಿರ ಪಾಕಿಸ್ತಾನದ ಸೈನಿಕರನ್ನು ಯುಧ್ಧಕೈದಿಗಳಾಗಿ ವಶಪಡಿಸಿಕೊಂಡಿತು. ಇನ್ನೊಮ್ಮೆ ಓದಿ, 90 ಸಾವಿರ ಪಾಕಿ ಸೈನಿಕರನ್ನು ನಾವು ವಶಪಡಿಸಿಕೊಂಡಿದ್ದೆವು. ಆದರೆ ಸಿಮ್ಲಾ ಒಪ್ಪಂದದ ಪ್ರಕಾರ ಅವರನ್ನು ಕ್ಷಮಿಸಿ ಬಿಡುಗಡೆ ಮಾಡಿದೆವು. ಯಾಕೆ ?
  ಯಾಕೆಂದರೆ ಈ ಒಪ್ಪಂದಗಳಿಗೆ ಒಂದು ಅಂತರಾಷ್ಟ್ರೀಯ ಮಟ್ಟದ ಕಾನೂನಿನ ಚೌಕಟ್ಟು ಇರುತ್ತದೆ. ಅದನ್ನು ಪಾಲಿಸುವುದು  ಧರ್ಮ ಪಾಲನೆ.   ಅಧರ್ಮದ ಉದ್ದಟತನವನ್ನೂ ಮಾಡಬಹುದು ಮತ್ತು ಇಂತಹ ಕಾನೂನುಗಳಿಗೆ ಕ್ಯಾರೇ ಎನ್ನದೆ ತಮ್ಮ ಅಧರ್ಮದ ದಾರಿಯಲ್ಲೂ ಹೋಗಬಹುದು.

ಕೌರವ ಪಾಂಡವರ ಕುರುಕ್ಷೇತ್ರ ಯುದ್ದದಂತೆ.

ಹೀಗೆ ಕ್ಷಮಾಯಾಚನೆ ಪಡೆದು ಜೀವ ಉಳಿಸಿಕೊಂಡ ಪಾಕೀ ಸೈನಿಕನ ಆಂತರ್ಯ ಹೇಗಿರಬಹುದು....ಅವಮಾನದಿಂದ ಕುದ್ದು ಹೋದರು. ಏನಾದರೂ ಸರಿ ಪ್ರತೀಕಾರ ತೀರಿಸಿಕೊಳ್ಳಲೇಬೇಕು...
   ಅದಕ್ಕೇ, ಜೀವದಾನ ಮಾಡಿದ ಭಾರತೀಯ ಸೇನೆಯ ಮೇಲೆ ಅವರಿಗೆ ಎಲ್ಲಿಲ್ಲದ ದ್ವೇಷ.  ಅದಕ್ಕೇ ಅವರಿಗೆ ಗೊತ್ತಿರುವ,ಯಾವಾಗಲೂ ಪಾಲಿಸುವ ಅಧರ್ಮದ ದಾರಿ ‌ಹಿಡಿದರು.
    ಕ್ಯಾಪ್ಟನ್ ಸೌರಭ್ ಕಾಲಿಯಾ ಎನ್ನುವ ಯೋಧನ ಬಗ್ಗೆ ಓದಿರುವ ನೆನಪಿದೆಯೇ..
    ಹೇಳಿ ಏನು ನೆನಪಿದೆ....?

ಗೌರಿ ನಡೆದುಬಂದ ಮಾರ್ಗ

            ಬೆಳ್ಳಂಬೆಳಗ್ಗೆ ಕಾಶ್ಮೀರದ ಗುಲ್ಮರ್ಗದಲ್ಲಿ ಆ ನದೀ ತೀರದಲ್ಲಿನಿಂತು ಸದ್ಯ ಬದುಕಿದೆಯಾ ಬಡಜೀವವೇ ಎಂದು ಏದುಸಿರು ಬಿಡುತ್ತಾ ನಿಂತಿರುವಾಗಲೇ ನಮ್ಮ ತರಬೇತಿ ತಂಡದವರು ಬಂದು ತಲುಪಿದರು. ಹಿಂದಿನ ರಾತ್ರಿ ನಾವು ಹಿಮಗಟ್ಟಿದ ನದಿಯ ಮೇಲೆ ಮಲಗಿಕೊಂಡದ್ದು ಮತ್ತು ಬೆಳಗ್ಗೆ ಹಿಮಕರಗಿ ನದಿ ರಭಸವಾಗಿ ನಮ್ಮ platform ಕೆಳಗೇ ಹರಿಯುತ್ತಿದ್ದನ್ನು ಕೇಳಿಸಿಕೊಳ್ಳುತ್ತಲೇ ನಿದ್ದೆಮಂಪರಿನಲ್ಲಿ ಮಾತುಕತೆಯಾಡುತ್ತಿದ್ದುದು, ಯಾರೋ ಕೂಗಿ ನಮ್ಮನ್ನು ಎಚ್ಚರಿಸಿದ್ದು,ಕ್ಷಣಾರ್ಧದಲ್ಲಿ ಬಿದ್ದೆವೋ ಕೆಟ್ಟೆವೋ ಎಂದು ಓಡಿ ಬಂದದ್ದು,ಅದೆಲ್ಲಾ ಈಗ ಹೊಟ್ಟೆ ಹುಣ್ಣಾಗುವಂತೆ ನಗುವ ವಿಷಯವಾಗಿತ್ತು ನಮ್ಮೆಲ್ಲರಿಗೆ. ಮಿಲಿಟರಿ ಮೆಂಟಾಲಿಟಿಯೇ ಹಾಗೆ,ಸಾವಿನದವಡೆಯಿಂದ ತಪ್ಪಿಸಿಕೊಂಡು ಬಂದವರು ತಕ್ಷಣ ಮಾಡುವ ಕೆಲಸವೆಂದರೆ ಆ ವೃತ್ತಾಂತವನ್ನೆಲ್ಲಾ ಸ್ನೇಹಿತರಲ್ಲಿ ಹೇಳಿಕೊಂಡು ಬಿದ್ದು ಬಿದ್ದು ನಗುವುದು.
    ವಾತಾವರಣ ಸ್ವಲ್ಪ ತಿಳಿಯಾದ ಮೇಲೆ ನಮ್ಮ ಆಸುಪಾಸಿನ  ಅಧ್ಭುತ ಸೌಂದರ್ಯದ ಅರಿವಾಯಿತು. ಗುಲ್ಮರ್ಗವನ್ನು ಕೆಲವುಕಡೆ ಸ್ವಿಟ್ಜರ್ಲಾಂಡಿಗೆ ಹೋಲಿಸಿ ಬರೆಯಲಾಗಿದೆ. ಅಂದಿನ"ಗೌರಿ ಮಾರ್ಗ"ಮುಂದೆ ಮುಘಲರ ಕಾಲದಲ್ಲಿ ಗುಲ್ಮರ್ಗವಾಯಿತೆಂದು ಹೇಳುತ್ತಾರೆ. ವರ್ಷಾ ವರ್ಷಾ ಗೌರಿ ಇದೇ ಮಾರ್ಗವಾಗಿ ಗಣೇಶನನ್ನು ಕರೆದುಕೊಂಡು ಬರುತ್ತಿದ್ದಳಂತೆ.
    ಕಾಶ್ಮೀರ, ನದಿಗಳ,ಹಿಮಚ್ಛಾದಿತ ಪರ್ವತಗಳ ಮತ್ತು ಸಾಗರದೋಪಾದಿಯ ಸರೋವರಗಳ ನಾಡು. 'ಮಿರ,ಮೈರ' ಹಿಂದಿಯಲ್ಲಿ ಸಾಗರ ಎಂದಾಗುತ್ತದೆ. ಕಶ್ಯಪಮುನಿಯ ಬೀಡಿದು, ಅದಕ್ಕೇ ಕಶ್ಯಪ + ಮಿರ = "ಕಾಶ್ಮೀರ "ಎನ್ನುವ ‌ಹೆಸರಿನ ಇತಿಹಾಸ. ಆಗ ಇಡೀ ಕಾಶ್ಮೀರ ಒಂದು ದೊಡ್ಡ ಸರೋವರವಂತೆ. ಕಶ್ಯಪ ಮುನಿಗಳು ಕೆಲವು ಕಣಿವೆಗಳ ಮೂಲಕ ಈ ಸರೋವರವನ್ನು ಬರಿದು ಮಾಡಿ ,ಕೆಲ ಬ್ರಾಹ್ಮಣರನ್ನು  ಇಲ್ಲಿರಲು ಆಹ್ವಾನಿಸಿದರಂತೆ.  ಕ್ರಮೇಣ ಎಲ್ಲಾ ಕಡೆಯಿಂದಲೂ ಜನರು ಬಂದು ನೆಲೆಸಲು ಶುರುಮಾಡಿ ನಗರ ದೊಡ್ಡದಾದಂತೆ ಇದಕ್ಕೆ ಕಾಶ್ಮೀರ ಪುರವೆಂಬ ಹೆಸರಿಡಲಾಯಿತಂತೆ. ದೇವಿ ಸರಸ್ವತಿಯನ್ನು 'ಕಾಶ್ಮೀರ ಪುರವಾಸಿನಿ 'ಎಂದು ಹಲವೆಡೆ ಉಲ್ಲೇಖಿಸಲಾಗಿದೆ. ದೇವಿ ಲಕ್ಷ್ಮಿಯ ಊರು ಶ್ರೀನಗರ,ಈಗಿನ ರಾಜಧಾನಿ.
    ಇಷ್ಟೆಲ್ಲಾ ಬರೆಯಲು ಎಷ್ಟುಚಂದ,ಓದಲು ಎಷ್ಟುಚಂದ.
    ಆದರೆ ಈಗಿನ ಪರಿಸ್ಥಿತಿ ವಿಷಾದಕರ..ಈ ತುರುಕರು ಬಂದು ಅಂತಹ ಸೌಂದರ್ಯದ ಬೀಡನ್ನು ರಕ್ತಸಿಕ್ತಗೊಳಿಸಿದರು. ನೆಹರೂನಂತ ಲಂಪಟನನ್ನು ಈ ದೇಶದ ಪ್ರಧಾನಿಯನ್ನಾಗಿಸಿದ್ದು ನಮ್ಮ ರಕ್ಷಣಾಪಡೆಗಳ ದುರಂತ ...ಅತ್ತ ಹಾವೂ ಸಾಯಬಾರದು ಇತ್ತ ಕಡ್ಡಿನೂ ಮುರಿಬಾರದು. ಸಾವಿರಾರು ಸೈನಿಕರು ಇಂತಹ ಅತಂತ್ರದ ರಾಜನೀತಿಯ ಬಲಿಪಶುಗಳಾಗತ್ತಿದ್ದೇವೆ. ನಾವು ‌ಹೆಂಗಿದ್ರೂ ಹೋಗೋದೇ,ಒಂದು ಸಲ ನಮ್ಮ ಕೈಗೆ ಕಟ್ಟಿರೋ ಹಗ್ಗ ಬಿಚ್ರೀ...ಅಂತಾ ಚೀರುತ್ತಿರೋ ಆ ಸೈನಿಕರ ಆಕ್ರಂದನ ಯಾರಿಗೆ ಕೇಳಿಸಬೇಕು... it's really sad.
   ಸರಿ,ಮುಂದೆ ಅವತ್ತಿನ task ಅಂದ್ರೆ, ಹಿಮದ ಇಟ್ಟಿಗೆಗಳಿಂದ ಒಂದು ಐದು ಅಡಿ ಎತ್ತರದ 'ಇಗ್ಲೂ' ಕಟ್ಟಬೇಕು. ಬಿಸಿಲೇರಿದ ಹಾಗೆ ಕಣ್ಣುಬಿಡುವುದೇ ಕಷ್ಟವಾಗತೊಡಗಿತು. ಬೆಳ್ಳನೆ ಹಿಮದಿಂದ ಪ್ರತಿಬಿಂಬಿಸುವ ಸೂರ್ಯನ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ ಕಣ್ಣುಮುಚ್ಚಿಕೊಂಡು ಓಡಾಡಬೇಕಾದ ಪ್ರಮೇಯ! ಗಟ್ಟಿಹಿಮವನ್ನು ಕುಕ್ರಿಯಿಂದ ಕೆತ್ತಿ ಒಂದು ತಂಡ ತಯಾರಿ ಮಾಡುತ್ತಿದ್ದಹಾಗೆ ಇನ್ನೊಂದು ತಂಡ ಅದನ್ನು ಒಂದು ಅರ್ಧ ಗೋಲಾಕಾರದ ಮನೆಯನ್ನು ನಿರ್ಮಿಸಿಲು ಅಣಿವು ಮಾಡಿಕೊಂಡೆವು. ಮಧ್ಯಾಹ್ನದಷ್ಟೊತ್ತಿಗೆ ತಯಾರಾಯಿತು.
   ಮುಂದಿನದು, ಹಿಮಚ್ಚಾದಿತ  ಶಿಖರಗಳ ಪರ್ವತಾರೋಹಣ. ಒಂದು ಉದ್ದನೆಯ ಹಗ್ಗದಿಂದ ಎಲ್ಲರ ಸೊಂಟಕ್ಕೂ ಒಂದು ಸುತ್ತು ಬಿಗಿದುಕೊಂಡು, ಶುರು ಮಾಡಿಕೊಂಡೆವು. ಏನೇ ಆಗಲಿ ಕೈಗಳ ಹಿಡಿತ ಮಾತ್ರ ಬಿಡಲೇ ಬಾರದು. ನಿಗದಿತ ಹಂತಕ್ಕೆ ತಲುಪಿ ಪುನಃ ವಾಪಸ್ಸು ಕೆಳಗಿಳಿಯಬೇಕು. ಅದು ಹೆಚ್ಚು ದೂರ ಏನೂ ಇರಲಿಲ್ಲ.
   ತರಬೇತಿ ಸಿಬ್ಬಂದಿಯವರಾಗಲೇ ಹೊರಡಲು ಅಣಿಯಾಗಿದ್ದರು, ಯಾಕೆಂದರೆ ಇನ್ನೊಂದು ಕೌತುಕ ಶ್ರೀನಗರದ ವಾಯುನೆಲೆಯಲ್ಲಿ ಕಾಯುತ್ತಿತ್ತು.!  

ಡೆಹ್ರಾಡೂನಿನಲ್ಲಿ ಕುಮಾರ ವ್ಯಾಸ

ಮಿಲಿಟರಿ ಟ್ರೈನಿಂಗಿನ ಒಂದು ವಿಷೇಶವೆಂದರೆ ನಮ್ಮ   ಬ್ಯಾಚ್ ಮೇಟ್ ಗಳ ಜೊತೆಗಿರುವ ಗಾಢವಾದ ಮಿತ್ರುತ್ವ . ಮಿಲಿಟರಿಗೆ ಸೇರಿ ನಮ್ಮ ತರಬೇತಿ ಶುರುವಾದಾಗ ಇನ್ನೂ 18 -19 ರ ವಯಸ್ಸು. ಮನೆಯಿಂದ,ಬಂಧು ಬಳಗ, ಸ್ನೇಹಿತರಿಂದ ಮತ್ತು ನಮ್ಮ ಪರಿಚಿತವಾದ ಪರಿಸರಗಳಿಂದ ದೂರಾಗಿ ಬಂದು,ಇಲ್ಲಿ ವಿವಿಧ ಹಿನ್ನಲೆಯಿಂದ ಬಂದಿರುವ ಇತರೆ ಅಭ್ಯರ್ಥಿಗಳ ಜೊತೆ ಬೆರೆತು  ತರಬೇತಿಯ ಸಮಯದಲ್ಲಿ ಆಗುವ ನೋವು ನಲಿವುಗಳನ್ನು ಹಂಚಿಕೊಳ್ಳುವುದನ್ನು ಕಲಿಯುತ್ತೇವೆ.
       ವಾಯುಸೇನೆಯ ವೈಮಾನಿಕ ತರಬೇತಿ ಶುರುವಾದಾಗ ನಮ್ಮನ್ನೆಲ್ಲಾ ಅಧೀರರನ್ನಾಗಿಸುತ್ತಿದ್ದ ಇನ್ನೊಂದು ಅಂಶವೆಂದರೆ ತರಬೇತಿಗೆ ಬಂದವರಲ್ಲಿ ಎಲ್ಲರೂ'ಪೈಲಟ್ ಆಫೀಸರ್'ಆಗಿ ಯಶಸ್ವಿಯಾಗಿ ಪಾಸಾಗುತ್ತಾರೆ ಅನ್ನುವ ಖಚಿತತೆ ಇರುವುದಿಲ್ಲ. ವಿಮಾನ ಹಾರಾಟದ ತರಬೇತಿಯೇ ಹಾಗೆ ' ಯೇಗ್ದಾಗೆಲ್ಲಾ ಐತೆ,' ಅನಿಸುತ್ತೆ.  ಬಂದಿರುವ 40 ಜನಗಳ ಬ್ಯಾಚಿನಲ್ಲಿ 8-10 ಅಭ್ಯರ್ಥಿಗಳು ತರಬೇತಿಯ ಒತ್ತಡವನ್ನು  ನಿಭಾಯಿಸಲಾಗದೆ ಮನೆಗೆ ಮರುಳುತ್ತಾರೆ.  ಆ ಒಂದು ಅನಿಶ್ಚಿತೆ ನಮ್ಮನ್ನು ಇನ್ನೂ ಒಬ್ಬರಿಗೊಬ್ಬರನ್ನು ಹತ್ತಿರ ತರುತ್ತದೆ. ಮೂರು ಹಂತದಲ್ಲಿ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಮೇಲೆ ಒಂದು 'ದೀಕ್ಷಾಂತ ಸಮಾರೋಹ' ದಲ್ಲಿ ನಮಗೆ President's Commission ಸಿಗುತ್ತದೆ. ಅದಕ್ಕೇ  ಸಾಮಾನ್ಯವಾಗಿ ಮಿಲಿಟರಿ ಆಫೀಸರುಗಳನ್ನು Commissioned Officers ಎಂದು ಕರೆಯುತ್ತಾರೆ. ಇದು ಒಂದು ಬ್ರಿಟಿಷ್ ಸಂಪ್ರದಾಯ,ಅಲ್ಲಿ Queen's commission ಎಂದು ಕರೆಯುತ್ತಾರೆ‌ ಇನ್ನೊಂದು ವಿಷೇಶವೆಂದರೆ ಬ್ರಿಟಿಷ್ ರಾಜ ಮನೆತನದಲ್ಲಿ ಈಗಲೂ ಸಹ ಸಾಂಪ್ರದಾಯಕವಾಗಿ ಎಲ್ಲಾ ಯುವರಾಜರು ಪಾರಂಪರಿಕ ಕಡ್ಡಾಯತೆಯಿಂದ ಬ್ರಿಟನ್ನಿನ  ‌ಮಿಲಿಟರಿಯಲ್ಲಿ Queen's Commission ಪಡೆಯಲೇ ಬೇಕು.  ನಮ್ಮ  ದೇಶದಲ್ಲಿ  ಈ ಪರಂಪರೆ  ರಾಜಾಸ್ತಾನದ ರಾಜಮನೆತನಗಳಲ್ಲಿ ಈಗಲೂ ಜೀವಂತವಾಗಿದೆ. ದುರದೃಷ, ನಮ್ಮ ಕರ್ನಾಟಕದಲ್ಲಿ ಈ ಸಂಸ್ಕ್ರುತಿ ಬೆಳೆಯಲಿಲ್ಲ .
        ಇದಾದನಂತರ ಪುನಃ ನಮ್ಮನ್ನು  ಮೂರು ವಿಭಾಗಗಳಲ್ಲಿ ಬೇರ್ಪಡಿಸುತ್ತಾರೆ. ಹೆಚ್ಚಿನ ಪಾಲು ಪೈಲಟ್ ಗಳು  ಯುಧ್ಧ ವಿಮಾನಗಳಿಗೆ ಹೋದರೆ , ಕೆಲವರನ್ನು  ಹೆಲಿಕಾಪ್ಟರ್ ಮತ್ತು ಟ್ರಾನ್ಸಪೋರ್ಟ್ ಏರೋಪ್ಲೇನುಗಳಿಗೆ ಕಳುಹಿಸುತ್ತಾರೆ. ನಮ್ಮ ವಿಭಾಗದ ಮುಂದಿನ ತರಬೇತಿಗಾಗಿ ಚದುರಿ ಹೋಗುತ್ತೇವೆ. ಆದರೆ ತರಬೇತಿ ಸಮಯದ ಆ ನೆನಪುಗಳು ಮಾತ್ರ ಗಟ್ಟಿಯಾಗಿ ಉಳಿದು ಕೊಂಡುಬಿಡುತ್ತವೆ. ಮುಂದೆ ಎಂದಾದರೊಮ್ಮೆ ಭೇಟಿಯಾದಾಗ ನಮ್ಮ ಮಾತುಕತೆಗಳೆಲ್ಲಾ ಆ ತರಬೇತಿಯ ದಿನಗಳದ್ದೇ.  ಆಗಿನ ಅಡ್ಡ ಹೆಸರುಗಳೇ ಈಗಲೂ ಚಾಲ್ತಿಯಲ್ಲಿವೆ. ಸಕ್ಸೇನ ಎನ್ನುವ ಹೆಸರು  'ಸೆಕ್ಸಿ'ಯಾಗಿ,ಸಂಪತ್ ನ ಹೆಸರು 'ಸ್ಯಾಮ್' ಆಗಿಯೇ ಮುಂದುವರೆಯತ್ತವೆ. 
       ಈ Jungle and snow survival ಕೋರ್ಸಿನಲ್ಲಿ ನನ್ನ ಜೊತೆ ಇಬ್ಬರು ಬ್ಯಾಚ್ ಮೇಟುಗಳಿರುವುದು ಒಂದು ಸಮಾಧಾನದ ವಿಷಯ. ನಾವು ಮೂವರು ಯಾವ ಮುಚ್ಚು ಮರೆ ಇಲ್ಲದೆ,ಮುಕ್ತವಾಗಿ, ಮಾತನಾಡಬಹುದು ಎನ್ನುವ ಅನಿಸಿಕೆಯೇ ಒಂದು stress buster.
       ಬೆಳಗ್ಗೆ ಎಚ್ಚರವಾದಾಗ ಇನ್ನೂ ಮುಸುಕು ಬೆಳಗು. ಕಾಡಿನಲ್ಲಿ ಬದುಕುವ ಕೆಲವು ಆತಂಕದ ವಿಷಯಗಳಲ್ಲಿ ಮುಖ್ಯವಾದ್ದು ಹಸಿವು ಮತ್ತು ಅಲ್ಲಿಯೇ ಸಿಗುವ ಆಹಾರದ ಹುಡುಕಾಟ. ಪ್ಯಾಕಿನಲ್ಲಿ ಇನ್ನೂ ಎರಡು ಮೂರು ಸೂಪಿನ ಪೊಟ್ಟಣಗಳಿದ್ದರೂ ಪರಿಸ್ತಿತಿ ಬಿಗಡಾಯಿಸುವುದಕ್ಕೆ ಮುನ್ನವೇ ಏನಾದರೂ ಹುಡುಕಬೇಕು, ಒಂದು ತಂಡವನ್ನು ಮಾಡಿಕೊಂಡು ಹೊರಟೆವು. ಅಮೃತಬಳ್ಳಿಯಗಿಡ ಮತ್ತು ಕರಿಬೇವಿನ ಮರಗಳು ಯಥೇಚ್ಚವಾಗಿದ್ದವು. ಗೆಣಸಿನಂತೆ ಕಾಣುವ ಕೆಲವು ಗಡ್ಡೆಗಳನ್ನು ಕಿತ್ತು ಕಲೆಹಾಕಿದೆವು. ಈಗ ಅದು ತಿನ್ನಲು ಅರ್ಹವೊ ಎನ್ನುವುದನ್ನು ಪರೀಕ್ಷಿಸ ಬೇಕು‌.
       ನೀರನ್ನು ಚೆನ್ನಾಗಿ ಕುದಿಸಿ ಅಮೃತಬಳ್ಳಿಯ ಮತ್ತು ಕರಿಬೇವಿನ ಸೂಪು ತಯಾರಾಯಿತು. ಅದಕ್ಕೆ ನಾನೇ ಪ್ರಯೋಗ ಪಶುವಾದೆ. ಸ್ವಲ್ಪವೇ ಕುಡಿದೆ,ರುಚಿಯು ಪರವಾಗಿಲ್ಲ ಎನಿಸಿತು. ಆರೋಗ್ಯಕ್ಕೆ ಒಳ್ಳೆಯದೆಂದು ಖಚಿತವಾಗಿ ಗೊತ್ತಿತ್ತು. ಆದರೆ ಇತರರಿಗ್ಯಾಕೊ ನನ್ನ ರೆಸಿಪಿ ಇಷ್ಟವಾಗಲಿಲ್ಲ. ಅಷ್ಟೊತ್ತಿಗಾಗಲೇ ತರಬೇತಿ ಸಿಬ್ಬಂದಿಯವರು ಬಂದು ಅವತ್ತಿನ task ಹೇಳುತ್ತಿದ್ದರು.
       ಕಾಡಿನ ಒಂದು ಹಳೆಯ ಮ್ಯಾಪ್,ಒಂದು ದಿಕ್ಸೂಚಿಯ ಸಹಾಯದಿಂದ ಒಂದು ನಿರ್ದಿಷ್ಟ ಪ್ರದೇಶವನ್ನು ತಲುಪಬೇಕು. ಆದರೆ ಮರಳಿ ಬರುವಾಗ ಯಾವ ಸಹಾಯವಿಲ್ಲದೆ ನಮ್ಮ ಕ್ಯಾಂಪನ್ನು ತಲುಪಬೇಕು. ಸುಮಾರು ನಾಲ್ಕು ಕಿಮೀಗಳ ಚಾರಣ. ಒಬ್ಬರ ಕೈಯಲ್ಲಿ ಮ್ಯಾಪು,ಇನ್ನೊಬ್ಬರ ಕೈಯಲ್ಲಿ ಕಂಪಸ್ಸು ಇವರ ಹಿಂದೆ ಇಬ್ಬರು ಕುಕ್ರಿಯನ್ನಿಡಿದು ನಾವು ಸಾಗುತ್ತಿದ್ದ ದಾರಿಯ ಇಕ್ಕೆಲಗಳಿಲ್ಲಿರುವ ಮರಗಳ ಮೇಲೆ ಗುರುತು ಮಾಡುತ್ತಾ ಸಾಗುತ್ತಿದ್ದರು,ಇದರಿಂದ, ಮರಳಿಬರುವಾಗ ದಾರಿ ತಪ್ಪಬಾರದೆಂದು. ಬೆನ್ನಿಗೆ  ಒಂದು ಚೀಲ ಕಟ್ಟಿಕೊಂಡು ನೀರಿನ ಬಾಟಲಿ  ಸೊಂಟಕ್ಕೆ ಬಿಗಿದು ಕೊಂಡು ,ಕೈಯಲ್ಲಿ ಕುಕ್ರಿ ಹಿಡಿದುಕೊಂಡು ಹೊರಟೆವು.
       ಇದು ದಿನವಿಡೀ ನಡೆಯುವ ಪ್ರಕ್ರಿಯೆ,ನನ್ನ ನೀರಿನ ಬಾಟಲಿಯಲ್ಲಿ ನೀರಿಗೆ ಬದಲು ಅಮೃತ ಬಳ್ಳಿಯ ಸೂಪನ್ನು ತುಂಬಿಕೊಂಡೆ. ಇಂತಹ ಸಮಯದಲ್ಲಿ ವ್ಯರ್ಥವಾಗಿ ಶಕ್ತಿಯವ್ಯಯವಾಗದಂತೆ ಗಮನವನ್ನು ಕೇಂದ್ರೀಕರಿಸಿಕೊಂಡು ಎಲ್ಲರಜೊತೆ ಸಾಲಿನಲ್ಲಿ ನಡೆಯ ತೊಡಗಿದೆ.

       ನಮ್ಮ ಹಳ್ಳಿಯಲ್ಲಿ ಇರುವ ಹನ್ನೆರಡು ಎಕರೆ ಹೊಲದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ನಮ್ಮ ಮುತ್ತಜ್ಜನ ಕಾಲದಿಂದಲೂ ಔಷದಿಯ ಗಿಡಗಳನ್ನು ಬೆಳೆಸುತ್ತಿದ್ದರು ಮತ್ತು ಅದರ ಔಷಧಿಗಳನ್ನು ಮನೆಯಲ್ಲಿಯೆ ತಯಾರಿಸಿ  ವಂಶ ಪಾರಂಪರ್ಯವಾದ ವೈದ್ಯಕೀಯ ನಮ್ಮ ತಂದೆಯವರ ಕಾಲದ ವರೆಗೂ ನಡೆಯಿತು. ಅದರಿಂದಾಗಿ,ಅಶ್ವಗಂಧ, ಬ್ರಾಹ್ಮೀ,  ನೆಲ್ಲಿಕಾಯಿ,ವಿವಿದ ಬಗೆಯ ತುಳಸಿಗಳು ಇನ್ನು ಇತರೆ ಹಲವಾರು ಗಿಡ ಮೂಲಿಕೆಗಳ ಪರಿಚಯವಿತ್ತು. ಆಶ್ಚರ್ಯವೆಂದರೆ ಡೆಹರಾಡೂನಿನ ಕಾಡಿನಲ್ಲಿ ಅವಲ್ಲಾ ಯಥೇಚ್ಚವಾಗಿದ್ದುದನ್ನು ಕಂಡು ಆನಂದ ಪುಳಕಿತನಾದೆ. ಇನ್ನು ಹಸಿವು ನನ್ನನ್ನು ಕಾಡಲಾರದು!
       ಕೆಲವನ್ನಂತೂ ಹಸಿ ಹಸಿಯಾಗಿ ತಿನ್ನತೊಡಗಿದೆ,ಇನ್ನು ಕೆಲವು ಎಲೆಗಳು,ಹೂಗಳನ್ನು ಬಿಡಿಸಿಕೊಂಡು ಚೀಲಕ್ಕೆ ತುಂಬಿಸಿಕೊಂಡೆ. ಕೆಲವು ಸಣ್ಣದಾಗಿ ಮತ್ತು ಬರಿಸುವ ಸಸ್ಯಗಳನ್ನೂ ನೊಡಿದೆ, ಮುಟ್ಟಲಿಲ್ಲ, ಮೊದಲೇ ಹೊಟ್ಟೆ ಖಾಲಿ!.ಅಪಾಯ.
       ಗಮನ ಹಲವಾರು ವಿಧದ ಹೂಗಳತ್ತ ಹರಿಯಿತು. ಕೆಂಪು ಹೂವಿನಲ್ಲೇ ಅದೆಷ್ಟು ವಿಧವಾದ ಕೆಂಪುಗಳು,ನಸುಗೆಂಪು,ಕಡುಗೆಂಪು,ಬಿಳಿಪು ಮಿಶ್ರಿತ ಕೆಂಪು,ಹಳದಿ ಮಿಶ್ರಿತ ಕೆಂಪು‌,ಹಸಿರೆಲೆಗಳ ಮರೆಯಲ್ಲಿರುವ ಕೆಂಪು,ನಾನೇ ಇಲ್ಲಿಯ ರಾಣಿ ಎಂದು ಬಿಮ್ಮನೆ ಬೀಗುತ್ತಿರುವ ಕೆಂಪು.
       ಒಂದು ಕಣ್ಣು ನಾವು ಸಾಗುತ್ತಿರುವ ಮಾರ್ಗದ ಕಡೆ ನೆಟ್ಟಿತ್ತು,ಇನ್ನುಳಿದ ನಾಲ್ಕೂವರೆ ಇಂದ್ರಿಯಗಳು ಈ ಅಧ್ಭುತ ಪ್ರಕೃತಿಯನ್ನಾವರಿಸಿಕೊಂಡುಟ್ಟಿದ್ದವು. ದೂರದಲ್ಲೆಲ್ಲೋ ಜುಳು ಜುಳು ನದಿಯನೀರು ಹರಿಯುತ್ತಿರುವ ಶಬ್ದ ಒಮ್ಮೆಲೇ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿಬಿಟ್ಟಿತು. ಮ್ಯಾಪಿನಲ್ಲಿ  ಈ ನದಿ ಇರಲಿಲ್ಲವಲ್ಲಾ..ಹಾದಿ ತಪ್ಪಿದೆವಾ?
       ಇಲ್ಲ...ಇದು ತರಬೇತಿ ಸಿಬ್ಬಂದಿಯವರ ವತಿಯಿಂದ  ಸ್ನಾನಮಾಡಲಿ ಎಂದು ಒಂದು ಪುಟ್ಟ surprise! ಶುಭ್ರವಾದ ಸಿಹಿ ನೀರು ಮೈಮೇಲೆ ಒಂದು ನೂಲೂ ಇಲ್ಲದ ಹಾಗೆ ಉಟ್ಟಿದ್ದ ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ನದಿಗೆ ಹಾರಿದೆವು. ನನ್ನ ಬೆಂಗಾಲಿ ಸ್ನೇಹಿತನಿಗೆ ಸ್ನಾನಕ್ಕಿಂತ ಮುಖ್ಯವಾಗಿ ಮೀನು ಹಿಡಿಯ ಬೇಕಾಗಿತ್ತು. ಅಂತೂ ಕೆಲವು ಮೀನಗಳನ್ನು ಹಿಡಿದು ರಾತ್ರಿಯ ಊಟದ ಚಿಂತೆಯನ್ನು ಬಗೆಹರಿಸಿಕೊಂಡ.
       ಮರಳಿ ಬರುವಷ್ಟೊತ್ತಿಗೆ ಸಾಯಂಕಾಲವಾಗಿತ್ತು. ಆದರೆ ತರಬೇತಿ ಸಿಬ್ಬಂದಿ ಇನ್ನೊಂದು task ಕೊಟ್ಟರು. ನಮ್ಮಲ್ಲಿ ಒಬ್ಬನು ಅನಾರೊಗ್ಯದಿಂದ ಮಲಗಿ ಬಿಟ್ಟಿದ್ದಾನೆ ಅವನನ್ನು ಹೊತ್ತುಕೊಂಡು ಕ್ಯಾಂಪಿಗೆ ಕರದೊಯ್ಯಬೇಕು. ಸರಿ ಒಂದು makeshift ಚಟ್ಟ ಕಟ್ಟಿ ಅವನನ್ನು ಹೊತ್ತುಕೊಂಡು ಬಂದೆವು. ಆದರೆ ಕಾಡಿನಿಂದ ಹೊರಗೆ ಬಂದು ಶ್ರೀನಗರ ತಲುಪಿದ ನಂತರ ಎಲ್ಲರಿಗೂ ಒಂದು ಒಳ್ಳೆಯ ಹೋಟಲಿನಲ್ಲಿ ಊಟ ಕೊಡಿಸುತ್ತೇನೆಂದು ಆಣೆ ಪ್ರಮಾಣ ಮಾಡಿದ ಮೇಲೇ ಅವನ ಚಟ್ಟ ಹೊತ್ತಿದ್ದು!
       ಅವತ್ತು ರಾತ್ರಿಯ campfire ನ ಮಂದ ಬೆಳಕಿನ ಮುಂದೆ ಕುಳಿತಾಗ ಮನಸ್ಸನ್ನಿಡೀ  ಆವರಿಸಿದ್ದು "ಕುಮಾರ ವ್ಯಾಸ". ಒಂಥರ ವಿಚಿತ್ರವೆನಿಸಿತು. ಯಾಕೆ ಬಂತು ಈ ವಿಚಾರ?
       ಆಗ, ನಾನು ಕುಳಿತು ಹೀಗೆ ಯೋಚಿಸುತ್ತಿದ್ದ ನೆಲ ದ್ರೋಣಾಚಾರ್ಯರ ಜನ್ಮಭೂಮಿ. ಡೆಹ್ರಾಡೂನಿಗೆ ಯಾಕೆ ಈ ಹೆಸರು ಬಂತು ಎನ್ನುವ ಹಲವಾರು ಪ್ರತೀತಿಗಳಲ್ಲಿ ದ್ರೋಣರ ಮತ್ತು ಕ್ರಿಪಿಯ(ಕೃಪಾಚಾರ್ಯರ ತಂಗಿ) ಪ್ರಣಯ ವೃತ್ತಾಂತಗಳಿವೆ. ಅಶ್ವಥ್ಥಾಮ ಹುಟ್ಟಿ ಬೆಳೆದ ನಾಡು ಇದು.
       ಅವನು ಹುಟ್ಟಿದ ಕೂಡಲೇ ಕುದುರೆಯ ತರ ಕೆನೆಯಲು ಶುರು ಮಾಡಿದ್ದಕ್ಕೆ ಈ ತರದ ಅಡ್ಡ ಹೆಸರಿಟ್ಟರಂತೆ. ಆದರೆ ಅಶ್ವಥ್ಥಾಮ ಚಿರಂಜೀವಿಯಲ್ಲವೇ,ಹಾಗಾಗಿ ಅದರ ಬಗ್ಗೆಯೂ ತುಂಬ ವದಂತಿಗಳಿವೆ.
       ಅದು ಸರಿ, ಗದುಗಿನ ನಾರಾಣಪ್ಪನಿಗೂ ಈ ಡೆಹ್ರಾಡೂನಿನ ಕಾಡಿಗೂ ಏನು ಸಂಬಂಧ?      

ಅರಣ್ಯ ಕಾಂಡ

ಭಾರತೀಯ ವಾಯುಸೇನೆಯ ಫೈಟರ್ ಏರೋಪ್ಲೇನುಗಳ ಸೀಟಿನ ವಿನ್ಯಾಸ ಹೇಗಿರುತ್ತದೆ ಎಂಬುದು ಬಹಳ ಕುತೂಹಲಕಾರಿ ವಿಷಯ. ಇದನ್ನು ejection seat ಎನ್ನುತ್ತಾರೆ.
     ನಾಲ್ಕು ಉಕ್ಕಿನ ತೂಬುಗಳ ಮೇಲೆ ಸೀಟನ್ನು ಭಧ್ರಪಡಿಸಿರುತ್ತಾರೆ ಮತ್ತು ಈ ತೂಬಿನ ಒಳಗೆ ಸಿಡಿಮದ್ದಿನ ಪ್ಯಾಕಿಂಗ್ ಮಾಡಿರುತ್ತಾರೆ. ಪ್ಲೇನು ಶತ್ರುಗಳ ಮಿಸೈಲ್ ಆಕ್ರಮಣಕ್ಕೆ ತುತ್ತಾಗಿ ಅಥವಾ ತಾಂತ್ರಿಕ ದೋಷದಿಂದ ಅನಿವಾರ್ಯವಾಗಿ ಆ ಪೈಲಟ್ ಹಾರುತ್ತಿರುವ ಏರೋಪ್ಲೇನಿನಿಂದ ಹೊರಬರಬೇಕು ಎಂದ ಕೂಡಲೆ ಕೆಲವು ಕಂಟ್ರೊಲುಗಳ ಸಹಾಯದಿಂದ ಈ ಸೀಟಿನ ಕೆಳಗಿರುವ ಸಿಡಿಮದ್ದುಗಳು ನಿಯಂತ್ರಿತ ರೀತಿಯಲ್ಲಿ ಸ್ಫೊಟಗೊಂಡು ಸೀಟಿನ ಸಮೇತ ಪೈಲಟ್ ಹೊರಗೆ ಎಸೆಯಲ್ಪಡುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಪ್ಯಾರಾಚೂಟು ಬಿಚ್ಚಿಕೊಳ್ಳುತ್ತದೆ. ಇಷ್ಟೆಲ್ಲಾ ಆಗವುದು ಕೆಲವೇ ಸೆಕೆಂಡುಗಳಲ್ಲಿ! ಈ ಸೀಟಿನಲ್ಲೇ ಒಂದು survival pack ಇರುತ್ತದೆ. ಇದರಲ್ಲಿ ಕೆಲವು ಚಾಕೊಲೆಟ್,ಸೂಪಿನ ಪೊಟ್ಟಣಗಳು, ಕೆಲವು ಮೇಣದ ಬತ್ತಿಗಳು,ಆತ್ಮರಕ್ಷಣೆಗೆ ಬೇಕಾದ ಕೆಲವು ಆಯುಧಗಳು ಇರುತ್ತವೆ. ಯುಧ್ಧದ ಸಮಯದಲ್ಲಿ ಒಂದು ಪಿಸ್ತೂಲು ಮತ್ತು ಶತ್ರುದೇಶದ ಹಣವನ್ನೂ ಪ್ಯಾಕ್ ಮಾಡಿರುತ್ತಾರೆ.

            ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ,ನಾವು ಭಾಗವಹಿಸುತ್ತಿರುವ Jungle and snow survival ಕೋರ್ಸು ಇದೇ ಹಿನ್ನಲೆಯಿಂದ ರಚಿತವಾದದ್ದು. ಈ ಕೋರ್ಸಿನ ಕೊನೆಯ ಭಾಗವಂತೂ ಇನ್ನೂ ರೋಚಕ ,ಅದರಲ್ಲಿ ನಮಗೆ ಅಪರಿಚಿತ ಕೆಲವು ಸೈನಿಕರಿಂದ ತಪ್ಪಿಸಿಕೊಂಡು ಒಂದು ನಿರ್ದಿಷ್ಟ ಸ್ಥಳವನ್ನು ತಲುಪಬೇಕು. ಅವರ ಕೈಗೇನಾದರು ಸಿಕ್ಕಿಬಿದ್ದರೆ 'ಯುಧ್ಧ ಕೈದಿ' ಎಂದು ಘೋಷಿಸಲಾಗುತ್ತದೆ.
     ಕಾಡಿನಲ್ಲಿ ಬೆಂಕಿ ಮಾಡಿಕೊಂಡು ಮತ್ತು ಅದನ್ನು ಆರದಹಾಗೆ ನೋಡಿಕೊಳ್ಳುವುದು ಒಂದು ಅತ್ಯಂತ ತಾಳ್ಮೆಯ ಮತ್ತು ಶಿಸ್ತಿನ ಕೆಲಸ. ಬೆಂಕಿಯೊಂದಿದ್ದರೆ,ಒಂದು ಮಟ್ಟದ ಆತ್ಮಸ್ಥೈರ್ಯವಿರುತ್ತದೆ.  ಎನನ್ನಾದರೂ ಬೇಯಿಸಿಕೊಂಡು ಹಸಿವು ನೀಗಿಸಿಕೊಳ್ಳಬಹುದು,ಕಾಡುಪ್ರಾಣಿಗಳ ಹೆದರಿಕೆ ಇರುವುದಿಲ್ಲ ಮತ್ತು ಇನ್ನೊಂದು ಮುಖ್ಯವಾದ ಅಂಶ ಎಂದರೆ ಈ ತರಹದ ಘಟನೆಗಳಾದ ನಂತರ ಹೆಲಿಕಾಪ್ಟರ್ಗಳಿಂದ ಹುಡುಕಾಟದ ಪ್ರಕ್ರಿಯೆ ಶುರುವಾಗುತ್ತದೆ ಹೊಗೆಯ ಜಾಡು ಸಿಕ್ಕರೆ ಅನುಕೂಲ.
     ಇನ್ನು ಕಾಡಿನಲ್ಲಿ ಏನೇನು ತಿನ್ನಬಹುದು ಎನ್ನುವುದೂ ಬಹಳ ಸಂಯಮದಿಂದ ಮಾಡಬೇಕಾದ ಕೆಲಸ. ಹಸಿವಿನ ಒತ್ತಡ ತಾಳಲಾರದೆ ಏನನ್ನಾದರೂ ತಿಂದು ಆಪತ್ತಿಗೀಡಾಗುವುದು ಬಹಳ ಸುಲಭ. ಕೋತಿಗಳು ತಿನ್ನುವುದನ್ನು ಮನುಷ್ಯರು ತಿನ್ನಬಹುದು  ಎಂಬ ಸಲಹೆ ಎಲ್ಲಾಸಮಯದಲ್ಲೂ ಅನುಸರಿಸುವುದು ಕಷ್ಟ. ಅನಿವಾರ್ಯತೆ ಇದ್ದರೆ ಹಾವೂ ಸಹ ಆಹಾರದ ವಸ್ತು! ತಲೆಯಿಂದ ಆರು ಇಂಚು ಬಾಲದಿಂದ ಆರು ಇಂಚು ಕತ್ತರಿಸಿದರೆ ಉಳಿದಿದ್ದನ್ನು ಬೆಂಕಿಯಲ್ಲಿ ಚೆನ್ನಾಗಿ ಸುಟ್ಟರೆ ಸ್ನೇಕ್ ಕಬಾಬ್ ರೆಡಿ!
     ಕಾಡಿನಲ್ಲೇ ಸಿಗುವ ಗಡ್ಡೆ ಗೆಣಸುಗಳು ಹಣ್ಣು ಹಂಪಲುಗಳನ್ನೂ ಸಹ ತಾಳ್ಮೆಯಿಂದ ಆರಿಸಿಕೊಳ್ಳಬೇಕು ಏನನ್ನೂ ಅವಸರದಿಂದ ತಿನ್ನಬಾರದು. ಇಷ್ಟೆಲ್ಲಾ ದೈಹಿಕ ಹಂತದ ತರಬೇತಿಯ ವಿಷಯಗಳಾದರೆ,ಮಾನಸಿಕವಾಗಿಯೂ ಸ್ಥೈರ್ಯ,ವಿಶ್ವಾಸಗಳನ್ನು ಧೃಢವಾಗಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾದ ವಿಷಯ ಮತ್ತು ಅದು ಪ್ರತ್ಯಕ್ಷವಾಗಿ ಅನುಭವವಾದಾಗಲೇ ಅದರ ಮಹತ್ವ ತಿಳಿಯುವುದು.
      ಇಷ್ಟೆಲ್ಲಾ ಪೂರ್ವಸಿಧ್ಧತೆಯ ನಂತರ ಕಾಡಿಗೆ ಹೊರಡುವ ದಿನ ಬಂದೇಬಿಟ್ಟಿತು. ಶ್ರೀನಗರದಿಂದ 'ಸರ್ಸಾವ' ಎನ್ನುವ ಪಂಜಾಬಿನ ವಾಯುನೆಲೆಗೆ ವಾಯುಸೇನೆಯ ವಿಮಾನಯಾನ, ಅಲ್ಲಿಂದ ಡೆಹ್ರಾಡೂನಿನ ಸಮೀಪದ ಕಾಡಿಗೆ ಟ್ರಕ್ಕುಗಳಲ್ಲಿ ಪ್ರಯಾಣ ಮುಂದುವರೆಯಿತು.
      ನೀಲಿಬಣ್ಣದ flying dress,ಸೊಂಟಕ್ಕೆ ಕಟ್ಟಿಕೊಂಡ 'ಕುಕ್ರೀ',ಪ್ಯಾರಾಚೂಟಿನ ಜೊತೆಗೆ ಒಂದು ಚಿಕ್ಕ survival pack, ಒಂದು ಪಿಂಗಾಣಿಯ ನೀರಿನ ಬಾಟಲು,ಇವಿಷ್ಟೇ ನಮ್ಮ ಜೊತೆಗೆ ತೆಗೆದುಕೊಂಡು ಹೋಗಬಹುದಾದ ವಸ್ತುಗಳು. ಕೆಲವರು ಸ್ವಲ್ಪ ತಿನಿಸುಗಳನ್ನು ಕಳ್ಳಸಾಗಾಣಿಕೆ ಮಾಡುವ ವ್ಯರ್ಥಪ್ರಯತ್ನವನ್ನೂ ಮಾಡಿದರು,ಬ್ರಷ್,ವಾಚು, ಬಾಚಿಣಿಕೆಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದರು. ನಾಲ್ಕುದಿನಗಳ ಕಾಡಿನವಾಸವೇನು ಮೋಜಿನ ಪ್ರವಾಸವೇನೂ ಆಗಲಾರದು ಎಂದು ಗೊತ್ತಿದ್ದರೂ ಉತ್ಸಾಹದಿಂದಲೇ ಕಾಡಿನಲ್ಲಿ ಬಂದಿಳಿದೆವು. ತರಬೇತಿ ಸಿಬ್ಬಂದಿಯವರು ಇನ್ನೊಮ್ಮೆ ಎಲ್ಲಾ ವಸ್ತುಗಳ ತಪಾಸಣೆ ನಡೆಸಿ ನಿರ್ಗಮಿಸಿದರು. ಅಂತೂ ಹರಸಾಹಸ ಮಾಡಿ ಒಂದು ಪೆನ್ನು ಉಳಿಸಿಕೊಂಡಿದ್ದೆ! ಬರೆಯುವಗೀಳು ಮೊದಲಿಂದಲೂ ಇತ್ತು.
      ಮೊಟ್ಟಮೊದಲು ನಾವೆಲ್ಲಾ ಮಾಡಿದ ಕೆಲಸವೆಂದರೆ ಎರಡು ಮರಗಳ ನಡುವೆ ಪ್ಯಾರಾಚೂಟನ್ನು ಕಟ್ಟಿ ನಮ್ಮ ಮಲಗುವ ವ್ಯವಸ್ಥೆಯನ್ನು ಮಾಡಿಕೊಂಡೆವು.
      ಕೆಲವು ಕೆಲಸಗಳನ್ನು ನಮ್ಮ ನಮ್ಮಲ್ಲೇ ಹಂಚಿಕೊಂಡೆವು಼. ಕೆಲವರು ನೀರನ್ನು ಹುಡುಕಲು ಹೊರಟರು,ಇನ್ನು ಕೆಲವರು ಸೌದೆ ಮತ್ತು ಗರಿಕೆಗಳನ್ನು ಕಲೆಹಾಕತೊಡಗಿದರು. ಕತ್ತಲಾಗುವ ಮುನ್ನ ಬೆಂಕಿಯ ಸ್ಥಾಪನೆಯಾಗಲೇ ಬೇಕು.
      ದುರಾದೃಷ್ಟದಿಂದ ಆಗಲೇ ಸಣ್ಣಗೆ ಮಳೆ ಶುರುವಾಯಿತು.  ಬೆಂಕಿಮಾಡುವ  ಕೆಲಸವನ್ನು ನಾನು ವಹಿಸಿಕೊಂಡಿದ್ದೆ. ಸ್ವಲ್ಪ ಹೊತ್ತು ಹಾಗೇ ಕುಳಿತುಕೊಂಡು ಸುತ್ತಲೂ ವೀಕ್ಷಿಸಿದೆ. ಇದ್ದುದರಲ್ಲೆ ಒಣಗಿದ ಕಟ್ಟಿಗೆ ತುಂಡುಗಳನ್ನು ಆರಿಸಿಕೊಂಡು ಪ್ಯಾರಾಚೂಟಿನ ಕೆಳಗೆ ಕುಳಿತು ಒಂದು ಕಟ್ಟಿಗೆಯನ್ನು ಕುಕ್ರಿಯಿಂದ ಕೆತ್ತಿ ಮೊನಚು ಮಾಡಿಕೊಂಡು ಇನ್ನೊಂದು ತುಂಡಿನ ತೊಗಟನ್ನು ತೆಗೆದು ಸಪೂರ ಮಾಡಿಕೊಂಡು,ಚೂಪಾದ ತುಂಡನ್ನು ಅದರ ಮೇಲೆ ಉಜ್ಜುತ್ತಾ ಹೋದೆ.
      ಸುತ್ತಲಿನ ಶಬ್ದಗಳನ್ನು ಆಲಿಸುತ್ತಾ ಹೋದೆ, ಶಬ್ದದ ತರಂಗಗಳನ್ನು ಆಳವಾಗಿ ಕೇಳಿಸಿಕೊಳ್ಳುತ್ತಾ ಹೋಗಿ,ಅದನ್ನು ವಿಷ್ಲೇಶಿಸಬೇಡಿ ಎನ್ನುತ್ತಾರೆ ಜಿದ್ದು ಕೃಷ್ಣಮೂರ್ತಿ. ಅತಿ ತೀಕ್ಷಣವಾದ ಅರಿವಿನಿಂದ ಆಲಿಸುತ್ತಾಹೋದೆ. ಎಲೆಗಳ ಮೇಲೆ ಬೀಳುತ್ತಿದ್ದ ಮಳೆ ಹನಿಗಳು, ಜೀರುಂಡೆಗಳ,ಹಕ್ಕಿಗಳ ಕೂಗು,ಅದು ಬಿಟ್ಟರೆ ಇನ್ನೆಲ್ಲ ನಿಶಬ್ದ,ನೀರವತೆ.  ಆ ನಿಶಬ್ದತೆಯಲ್ಲೂ ನಾದಗಳ ಮೇಳ ನಡೆಯತ್ತಿತ್ತು. ಕಿವಿಗಳು ಬಿಸಿಯಾದ ಅನುಭವ. ನಾನು ಈ ನಾದ ಮೇಳದ ಒಂದು ಅವಿಭಾಜ್ಯ ಅಂಗ, ನಾನು ಬೆಂಕಿ ಮಾಡಲು ತಿಕ್ಕುತ್ತಿದ್ದಾ ಗಸ ಗಸ ಶಬ್ದವೂ ಈ ಆರ್ಕೆಸ್ಟ್ರಾದ ವಾದ್ಯ...ಹೀಗೇ ಸುತ್ತಲಿನದೆಲ್ಲಾ ಉತ್ಕಟವಾಗಿ ಆಲಿಸುತ್ತಿದ್ದಾಗ ಶರೀರದ ಆಯಾಸವೆಲ್ಲಾ ನೀಗಿ ಹೊಸ ಉತ್ಸಾಹದೊಂದಿಗೆ ನನ್ನ ಆರ್ಕೇಸ್ಟ್ರಾದ ನಾದದಗತಿಯನ್ನು ತೀವ್ರಗೊಳಿಸಿದೆ.
      "ನಿಶಬ್ದದಲ್ಲೂ ಅವೆಷ್ಟು ಶಬ್ದಗಳಿವೆ!"

      ಒಮ್ಮೆಲೇ ಕೈಗೆ ಬಿಸಿ ತಗುಲಿತು. ಇಲ್ಲಿಯವರೆಗೂ ಹೊಗೆಯಾಡುತ್ತಿದ್ದ ಕಟ್ಟಿಗೆಯ ಮೊನಚಾದ ತುದಿಗೆ ಬೆಂಕಿ ಹತ್ತಿಕೊಂಡಿತು! ನನ್ನನ್ನೇ ಆಶ್ಚರ್ಯದಿಂದ ನೊಡುತ್ತಿದ್ದ ಇಬ್ಬರು ಸಹ ಪೈಲಟ್ಗಳು  ಓಡಿಬಂದು ಕೆಲವು ಒಣಗಿದ ಎಲೆಗಳ ಸಹಾಯದಿಂದ ಬೆಂಕಿಯನ್ನು ಹೆಚ್ಚಿಸಿದರು. ನೋಡು ನೋಡತ್ತಲೇ ನಮ್ಮ camp fire ರೆಡಿಯಾಯಿತು.
      ಇನ್ನು ಮೂರುದಿನಗಳು ಈ ಬೆಂಕಿಯನ್ನು ಆರದ ಹಾಗೆ ಉಳಿಸಿಕೊಳ್ಳಬೇಕು. ಮಳೆಯಲ್ಲೂ ಸಹಾ. ಆ ಸಾಯಂಕಾಲ ನನಗೆ 'Lord of Fire'ಎನ್ನುವ ಹೊಸ ನಾಮಕರಣವನ್ನೂ ಮಾಡಿದರು.
      ಇನ್ನೂ ಪೂರ್ತಿ ಕತ್ತಲಾಗಿರಲಿಲ್ಲ. ನನ್ನ ಕಣ್ಣುಗಳಾಗಲೇ ಬೇರೊಂದು ವಸ್ತುವಿಗೆ ಹುಡುಕಾಟ ನಡೆಸಿದ್ದವು. ಅಂತು ಒಂದು ಪೆನ್ನನ್ನು ಕಳ್ಳಸಾಗಾಣಿಕೆ ಮಾಡಿಕೊಂಡು ಬಂದಿದ್ದೆ,ಆದರೆ ಯಾವುದರಲ್ಲಿ ಬರೆಯುವುದು? ಒಂದು ಉಪಾಯ ಹೊಳೆಯಿತು. ಒಂದು ಉದ್ದನೆಯ ನೀಲಗಿರಿ ಮರಕ್ಕೆ ಹೋಲುವ ಮರದ  ತೊಗಟೆಯನ್ನು ಸುಮಾರು ಮೂರು ಪದರಗಳಷ್ಟು ಬಿಡಿಸಿದ ಮೇಲೆ ನವಿರಾದ ಅಂಗೈ ಅಗಲದ ಕಂದು ಬಣ್ಣದ ಹಾಳೆ ಸಿಕ್ಕಿತು. ನನ್ನ ಅವಿಷ್ಕಾರಕ್ಕೆ ನಾನೆ ಹೆಮ್ಮೆ ಪಟ್ಟುಕೊಂಡೆ.
      ಅವತ್ತಿನ ರಾತ್ರಿಯ ಊಟವೆಂದರೆ ಒಂದು  ಪ್ಯಾಕೆಟ್ ಸೂಪ್. ಆಶ್ಚರ್ಯವೆಂದರೆ ಪ್ಯಾಕಿನಲ್ಲಿ ಒಂದು  ಸಿಗರೇಟ್ ಪ್ಯಾಕ್ ಕೂಡ ಇತ್ತು. ಇದನ್ನು ಸಿಗರೇಟು ಸೇದುವವರಿಗೆ ಒಂದು ಪ್ಯಾಕೆಟ್ ಸೂಪ್ ಗಾಗಿ ಮಾರಾಟದ ವ್ಯವಹಾರವೂ ನಡೆದು ಹೋಯಿತು.
      ಮಲಗುವ ಮುನ್ನ ಇನ್ನೂ ಒಂದು 'task' ಮಾಡಬೇಕಿತ್ತು. ಮೊಲದಂತಹ ಚಿಕ್ಕ ಪ್ರಾಣಿಗಳನ್ನು ಬಲೆಹಿಡಿಯುವ ಒಂದು ಟ್ರ್ಯಾಪ್ ನಿರ್ಮಿಸಬೇಕು. ಮಳೆ ಬಂದು ಭೂಮಿ ಸ್ವಲ್ಪ ನೆಂದಿದ್ದರಿಂದ ಗುಂಡಿ ತೋಡುವುದು ಸುಲಭವಾಯಿತು. ಗೆಜ್ಜರಿಯಂತ ಕೆಲವು ಗೆಡ್ಡೆಗಳನ್ನು ಹಾಕಿ ಎಲೆಗಳಿಂದ ಆ ಗುಂಡಿಯನ್ನು ಮುಚ್ಚಿ ಬಂದೆವು. ಹಾಗೇನಾದರು ಮೊಲಗಳು ಸಿಕ್ಕಿಹಾಕಿ ಕೊಂಡರೆ ,ತರಬೇತಿ ಸಿಬ್ಬಂದಿಗೆ ತೋರಿಸಿ ಅವುಗಳನ್ನು ಪುನಃ ಕಾಡಿಗೆ ಬಿಟ್ಟುಬಿಡಬೇಕೆಂಬ ನಿಯಮವಿತ್ತು. ನಾಳೆ ಇನ್ನು ಏನೇನು ಕಾದಿದೆಯೋ ಎನ್ನುವ ಆತಂಕದಿಂದಲೇ ಒಬ್ಬಬ್ಬರಿಗೂ ಶುಭರಾತ್ರಿ ಹೇಳುತ್ತ ಪ್ಯಾರಾಚೂಟಿನ ತೂಗು ಹಾಸಿಗೆಯಲ್ಲಿ ಅಡ್ಡಾದೆವು.
      ಇಂತಹ ಶಾಂತಿಯ ವಾತಾವರಣದಲ್ಲಿ ಭಯ ಮತ್ತು ಹಿಂಸೆ ಇರಲು ಸಾಧ್ಯವೇ. ದೈಹಿಕ ಸುರಕ್ಷತೆಯ ಭಯ ಕಾಡಿನಲ್ಲಿರುವುದು ಸಹಜ ಆದರೆ ಹಿಂಸಾಪ್ರವೃತ್ತಿ?
      ಈ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ಮಲಗಿರುವವರೆಲ್ಲಾ ಅಹಿಂಸಾವಾದಿಗಳೇ ,ಇಲ್ಲ ನಾಳೆ ಬೆಳಗ್ಗೆ ಎದ್ದ ಮೇಲೆ ಕೆಲವು ಘರ್ಷಣೆಗಳು ನಡೆಯುವುದನ್ನು ನಿರೀಕ್ಷಿಸಬಹುದು ಏಕೆಂದರೆ ಇದು ಸ್ಪರ್ಧೆ, survival of the fittest. ನಕ್ಸಲೀಯರು ಇಂತಹ ಸುಂದರವಾದ ಅರಣ್ಯಗಳಿಂದಲೇ ತಾನೆ ರಕ್ತದೋಕುಳಿ ಹರಿಸುವ ಪ್ಲಾನು ಹಾಕುವುದು.

ಹಾಗಾದರೆ ಹಿಂಸೆಯ ಉಧ್ಭವ ಎಲ್ಲಿಂದ?

      ನಮ್ಮ ವಿವೇಚನೆಗಳು ಒಂದು ಪಂಗಡದ,ಸಮಾಜದ , ಜಾತಿಯ ತತ್ವಗಳಿಂದ ಪ್ರೇರೇಪಿತವಾಗಿರುತ್ತವೆ. ಇವು ನಮ್ಮ ನಮ್ಮ ನಂಬಿಕೆಯ ಪರಾವಲಂಬಿತ ಆಲೋಚನೆಗಳು. ಎಲ್ಲಿ ಮನಸ್ಸು ಆಲೋಚನಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೋ ಅಲ್ಲಿ "ಈಗ ಮತ್ತು ಇಲ್ಲಿ"ಯ ಅರಿವಿರುವುದಿಲ್ಲ. ಅಂತರ್ಮುಖಿಯಾಗಿ,ಮನಸ್ಸಿನ ಸಂವೇದನೆಗಳನ್ನು ಯಾವ ಹಿಂಸೆಗೂ ಒಳಪಡಿಸದೆ, ಕಟ್ಟುಪಾಡುಗಳಿಲ್ಲದೆ ಮುಕ್ತವಾಗಿ ಅವಲೋಕಿಸುವ ಸಾಮರ್ಥ್ಯ ಬೆಳಸಿಕೊಂಡರೆ ದ್ವಂದ್ವ ಇರುವುದಿಲ್ಲ. ಹಿಂಸೆಯೂ ಇರುವುದಿಲ್ಲ.
'ಕಾಫಿರ'ರನ್ನು ಗುಂಡಿಕ್ಕಿ ಕೊಲ್ಲುವುದು ಹಿಂಸೆಯ ಪರಮಾವಧಿಯಾದರೆ ,'ಈ ಮುಂಡೇ ಮಗನನಿಂದ ನನ್ನ ಮಡಿ ಹಾಳಾಯಿತು' ಎನ್ನುವುದೂ ಕೂಡ ಹಿಂಸೆಯೇ,ಏಕೆಂದರೆ ಇಬ್ಬರ ಆಲೋಚನೆಗಳಲ್ಲಿ ಸ್ವಂತಿಕೆ ಇರುವುದಿಲ್ಲ. ಕಟ್ಟುಪಾಡಿನ, ತಲತಲಾಂತರಗಳ ನಂಬಿಕೆಗಳ ನಿಯಂತ್ರಣಕ್ಕೊಳಗಾದ ಮನಸ್ಸು ಮುಕ್ತವಾಗಬೇಕು,ಸುತ್ತ ಮುತ್ತಲಿನ ಆಗು ಹೋಗುಗಳನ್ನು ಯಾವ ಪೂರ್ವ ನಿಯೋಜಿತ ವಿಚಾರಗಳಿಲ್ಲದೆ ಗಮನಿಸುವ ಗಾಢತೆ ಇದ್ದರೆ ಮನಸ್ಸು ಹಿಂಸಾಮುಕ್ತವಾಗಲು ಸಾಧ್ಯ ಎಂದು ಹೇಳುತ್ತಾರೆ ಕೃಷ್ಣಮೂರ್ತಿಯವರು.

       ಇವನ್ನಲ್ಲಾ camp fire ನ ಮುಂದ ಬೆಳಕಿನಲ್ಲಿ ತೆಳುವಾದ ಮರದ ತೊಗಟೆಯ ಹಾಳೆಯಲ್ಲಿ ಬರೆಯುತ್ತಿರುವಾಗಲೇ ಕಾಡುಹಂದಿಯೊಂದು ಗುಟುರು ಹಾಕತ್ತಾ ಸ್ವಲ್ಪಹೊತ್ತು ನಿಂತಿದ್ದು ಹಾಗೇ ಹಿಂದೆಸರಿದು ಹೊರಟು ಹೋಯಿತು.