ಕೃಷ್ಣದೇವರಾಯರಂತಹ ಪರಾಕ್ರಮಿ, ಧರ್ಮಭೀರು, ಸಾಹಿತ್ಯ ಪ್ರೇಮಿ ಮತ್ತು ದಕ್ಷ ಆಡಳಿತಗಾರರ ಸಂಗ ಕೆಲವು ದಿನಗಳು ಇದ್ದು ಅವರಿಂದ ಕೆಲವು ಸೂತ್ರಗಳನ್ನಾದರೂ ಕಲಿಯ ಬೇಕೆಂಬ ಉತ್ಸಾಹ ನನಗೂ ಇತ್ತು. ಮೈಸೂರಿನ ಓಡೆಯರೂ ಸೇರಿದಂತೆ ಸುತ್ತಲಿನ ಇತರೆ ರಾಜರುಗಳು ಶ್ರೀರಂಗಪಟ್ಟಣದ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರುತ್ತಾರೆ. ವಿಜಯನಗರದ ಶ್ರೀರಕ್ಷೆ ಇರುವುದರಿಂದ ಇವರಾರೂ ಸದ್ಯಕ್ಕೇನು ದುಸ್ಸಾಹಸ ಮಾಡುತ್ತಿಲ್ಲ. ಈ ಸಮಾರಂಭಕ್ಕೆ ನಾನು ಹೋಗಿದ್ದೆ ಎಂಬ ವಿಷಯ ಇವರಿಗೂ ಗೊತ್ತಾಗಲಿ ಎಂಬುದೂ ಉದ್ದೇಶವಾಗಿತ್ತು.
ವಿಜಯನಗರ ತಲುಪಿ, ನಮ್ಮಕ್ಕ ತಿರುಮಲಾಂಬೆಯನ್ನು ನೋಡುತ್ತಿದ್ದಂತೇ ಪ್ರಯಾಣದ ಆಯಾಸವೆಲ್ಲಾ ಪರಿಹಾರವಾಯಿತು. ಚಿಕ್ಕ ತಮ್ಮನಾದ್ದರಿಂದ ನನ್ನ ಬಗ್ಗೆ ವಿಶೇಷವಾದ ಅಕ್ಕರೆ. ನನಗಿಷ್ಟವಾದ ಖಾದ್ಯಗಳನ್ನು ತಾನೇ ತಯಾರಿಸಿ ಬಡಿಸಿದಳು. ಭವ್ಯ ವಿಜಯನಗರ ಸಾಮ್ರಾಜ್ಯದ ಪಟ್ಟದರಾಣಿ ಅಡುಗೆ ಮಾಡುವುದೇ! ಅಷ್ಟು ಕುಕ್ಕುಲಾತಿ ನಮ್ಮಕ್ಕನಿಗೆ ನನ್ನನ್ನು ಕಂಡರೆ.
ಪ್ರತಿಸಲ ವಿಜಯೋತ್ಸವದಿಂದ ಮರಳಿದ ದೇವರಾಯರು ತಮ್ಮ ರಾಣಿಯರ ಬೊಕ್ಕಸವನ್ನು ಮುತ್ತು ರತ್ನ, ವಜ್ರ ವೈಢೂರ್ಯವನ್ನು ತುಂಬಿ ಬಿಡುತ್ತಾರಂತೆ. ಅದನ್ನೆಲ್ಲಾ ತೋರಿಸುತ್ತಲೇ ನನ್ನ ಕೊರಳು ಭಾರವಾಗುವಂತೆ ಕಂಠಹಾರಗಳನ್ನು ಬಲವಂತವಾಗಿ ಹಾಕೇಬಿಟ್ಟಳು.
ನಮ್ಮ ರಾಜ್ಯ ಶ್ರೀರಂಗಪಟ್ಟಣವೂ ವಿಜಯನಗರ ಸಮ್ರಾಜ್ಯಕ್ಕೆ ಸೇರಿದ್ದು. ನಾವೂ ವಿಧೇಯರಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತೇವೆ. ಇಲ್ಲಿಂದ ಆದೇಶ ಬಂದಾಗ ನಮ್ಮ ಸೈನಿಕರನ್ನು, ಕುದುರೆಗಳನ್ನು ಆನೆಗಳನ್ನು ಕಳುಹಿಸಿಕೊಡುತ್ತೇವೆ. ಕೆಲವೊಮ್ಮೆ ನಮ್ಮ ಕುಟುಂಬದಲ್ಲಿ ಇದರ ಬಗ್ಗೆ ಅಸಮಧಾನದ ಮಾತುಗಳು ನಡೆಯುತ್ತದೆ. ಆದರೆ ಕೃಷ್ಣದೇವರಾಯರ ವಿರುದ್ದ ದಂಗೆಯೆದ್ದವರ ಪಾಡು ಏನಾಗುತ್ತದೆ ಎಂಬ ಹಲವಾರು ನಿದರ್ಶನಗಳನ್ನು ನೋಡಿದ್ದೇವೆ. ಶ್ರೀರಂಗಪಟ್ಟಣದ ರಾಜಕುಮಾರಿ ಈ ಸಾಮ್ರಾಜ್ಯದ ಪಟ್ಟಮಹಿಷಿಯಲ್ಲವೇ...ವಿಷಯ ಅಲ್ಲಿಗೆ ನಿಂತು ಬಿಡುತ್ತದೆ. ಏನೋ ನಮ್ಮಕ್ಕನ ಐಶ್ವರ್ಯವನ್ನು ನೋಡಿ ಇದೆಲ್ಲಾ ನೆನಪಿಗೆ ಬಂತು.
ಸಾಯಂಕಾಲ ಕೃಷ್ಣದೇವರಾಯರ ಭೇಟಿಯೂ ಆಯಿತು. ಆಗತಾನೇ ಉದಯಗಿರಿಯನ್ನು ಜಯಿಸಿಬಂದ ವಿಜಯದ ಕಳೆ ಮುಖದಲ್ಲಿ ರಾರಾಜಿಸುತ್ತಿತ್ತು. ಇವರ ಪ್ರತಿ ವಿಜಯ ಮಹೋತ್ಸವವನ್ನು ಒಂದು ಹೊಸ ದೇವಾಲಯ, ಇನ್ನೊಂದು ಅರಮನೆ, ಮತ್ತೊಂದು ಮಹಲನ್ನು ಉಧ್ಘಾಟಿಸುವ ಮೂಲಕ ಆಚರಿಸುತ್ತಾರಂತೆ. ಈ ಸಲದ ವಿಜಯೋತ್ಸವ ಮಹಾನವಮಿ ಮಂಟಪವೆಂಬ ಭವ್ಯ ಮಂಟಪದ ಉಧ್ಘಾಟನೆಯಿಂದ ನಡೆಯಲಿದೆ. ಒಂಭತ್ತು ದಿನಗಳ ದಸರಾ ಮಹೋತ್ಸವವೂ ಅಲ್ಲೇ ನಡೆಯುತ್ತಂತೆ.
ರಾತ್ರಿಯ ಭೋಜನದ ನಂತರ ಹಾಗೇ ಒಂದು ಸುತ್ತು ನಗರದ ಕಡೆ ಹೊರಟೆ. ದೂರದ ಊರುಗಳಿಂದ ಈ ಸಮಾರಂಭಕ್ಕೆಂದು ಜನಸಾಗರವೇ ಹರಿದು ಬಂದಿತ್ತು.
ಕಲಾವಿದರಿಗೆಂದು ಪ್ರತ್ಯೇಕವಾದ ಬಿಡಾರ ವ್ಯವಸ್ಥೆಯಲ್ಲಿ ಆಗಲೇ ತೆನಾಲಿ ರಾಮಕೃಷ್ಣರು ಓಡಾಡಿಕೊಂಡು ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದರು. ನನ್ನ ಜೊತೆ ಬಂದಿದ್ದ ಸೇನಾಧಿಕಾರಿಗಳು ನನ್ನ ಪರಿಚಯವನ್ನು ಮಾಡಿಕೊಟ್ಟ ಮೇಲೆ ಆದರದಿಂದ ನನ್ನನ್ನು ಸ್ವಾಗತಿಸಿದರು. ಎಲ್ಲೆಲ್ಲೂ ಕಲಾವಿದರ ಕಲರವ. ಕನ್ನಡ ಮತ್ತು ತೆಲುಗು ಭಾಷೆಗಳ ಸಮ್ಮಿಶ್ರಣದ ಮಾತುಕತೆಗಳು. ತೆಲುಗು ಬಾರದ ನನಗೆ ಸ್ವಲ್ಪ ವಿಚಿತ್ರವೆನಿಸಿದರೂ, ಈ ಎರಡೂ ಭಾಷೆಗಳ, ಸಂಸ್ಕೃತಿ ಮತ್ತು ಸಾಹಿತ್ಯಗಳ ನೈಸರ್ಗಿಕವಾದ ಮಿಶ್ರಣವೇ ವಿಜಯನಗರದ ವೈಶಿಷ್ಟ್ಯವೆನಿಸಿತು. ಅವರ ಭೋಜನ ಮತ್ತು ವಸತಿ ಸೌಕರ್ಯಗಳನ್ನು ನೋಡಿದೆ, ಎಷ್ಟು ಅಚ್ಚುಕಟ್ಟಾಗಿದೆ ಎಲ್ಲವೂ ಎನಿಸಿತು. ಕಲಾವಿದರ ಆವಶ್ಯತೆಗಳು, ಕುಂದು ಕೊರತೆಗಳನ್ನು ಪರಿಶೀಲಿಸಲು ನಿಯಮಿಸಿದ್ದ ಅಧಿಕಾರಿಗಳು ಕಲಾವಿದರ ನಡುವೆಯೇ ಓಡಾಡಿಕೊಂಡು ಆಗಿಂದ್ದಾಗ್ಗೆ ಪರಿಹರಿಸುತ್ತಿದ್ದುದು ಕಂಡುಬಂತು.
ಪಕ್ಕದಲ್ಲೇ ಮಲ್ಲಯುಧ್ಧದ ಸ್ಪರ್ಧೆಗೆ ಬಂದಿದ್ದ ಕುಸ್ತಿಪಟುಗಳ ಬಿಡಾರ. ಇದು ಕೃಷ್ಣದೇವರಾಯರ ಅಚ್ಚುಮೆಚ್ಚಿನ ಸ್ಪರ್ಧೆ. ಅದರ ಪಕ್ಕದಲ್ಲಿ ಹೊರದೇಶದಿಂದ ಬಂದಿದ್ದ ಅತಿಥಿಗಳ ಬಿಡಾರ. ಇವರಲ್ಲಿ ಬಹುತೇಕರು ಪೋರ್ಚುಗೀಸರಂತೆ. ವಿಜಯನಗರದ ಸೈನ್ಯಕ್ಕೆ ಹಲವಾರು ವರ್ಷಗಳಿಂದಲೂ ಕುದುರೆಗಳ ಸರಬರಾಜು ಮಾಡುತ್ತಿದ್ದುದು ಇವರಂತೆ. ನದಿ ಮತ್ತು ಕೆರೆಗಳ ನೀರನ್ನು ನಾಗರೀಕರಿಗೆ, ದೇವಸ್ಥಾನಗಳಿಗೆ ಮತ್ತು ಅರಮನೆಗಳಿಗೆ ತೂಬುಗಳ ಮುಖಾಂತರ ಹರಿಸುವ ವ್ಯವಸ್ಥೆಯನ್ನು ಇವರೇ ಮಾಡಿಕೊಟ್ಟದ್ದಂತೆ.
ಇದರ ಪಕ್ಕದಲ್ಲೇ ಸಾಮಾನ್ಯ ನಾಗರೀಕರ ಬಿಡಾರ. ಇಲ್ಲಿಯ ಶಿಸ್ತನ್ನು ಕಾಪಾಡಲು ಮತ್ತು ಸೌಲಭ್ಯಗಳನ್ನು ಪರಿಭಾರಿಸಲು ಸೈನಿಕರನ್ನು ನಿಯಮಿಸಿದ್ದರು. ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ವ್ಯವಸ್ಥೆ. ಪ್ರತಿ ನೂರು ಅಡಿಗೊಂದರಂತೆ ನೀರು, ಮಜ್ಜಿಗೆ ಮತ್ತು ಪಾನಕಗಳ ವ್ಯವಸ್ಥೆ. ವಿಶಾಲವಾದ ಭೋಜನಾಲಯದಲ್ಲಿ ಊಟದ ಸಂಭ್ರಮ ನಡೆಯುತ್ತಿತ್ತು.
ಇಂತಹ ಸಂಧರ್ಭಗಳಲ್ಲಿ ಕಳ್ಳಕಾಕರ ಸಂಚಾರವಿರುವುದು ಸಹಜ , ಅದಕ್ಕೇನು ವ್ಯವಸ್ಥೆ ಮಾಡಿದ್ದಾರೆ ಎಂದು ಸೈನ್ಯಾಧಿಕಾರಿಗಳನ್ನು ಕೇಳಿದೆ... ಅವರ ಕೊಟ್ಟ ಉತ್ತರಕ್ಕೆ ದಂಗಾಗಿ ಹೋದೆ. ಈಗಾಗಲೇ ಸಿಕ್ಕ ಹತ್ತು ಹನ್ನೆರಡು ಕಳ್ಳರ ಕೈಗಳನ್ನು ಎಲ್ಲರ ಮುಂದೆಯೇ ಕತ್ತರಿಸಲಾಗಿದೆಯಂತೆ. ಸಮಾಜದಲ್ಲಿ ಶಿಸ್ತು ಕಾಪಾಡಲು ಇಂತಹ ಮಟ್ಟದ ಕ್ರೌರ್ಯವಿರಬೇಕೆ ಎಂದು ಯೋಚಿಸುತ್ತಾ ನನ್ನ ಅತಿಥಿ ಗೃಹಕ್ಕೆ ಮರಳಿದೆ.