Thursday, October 27, 2016

ವಿಯೆಟ್ನಾಮ್ ಡೈರೀಸ್

ವಿಯೆಟ್ನಾಮ್ ಡೈರೀಸ್, ದಿನ-1

     ಲೀಮ್ ,ಆ ಮರ್ಸಿಡೀಸ್ ಕಾರಿನ ಚಾಲಕಿ, ಇಪ್ಪತ್ತರ ಹರೆಯದ ನಗುಮೊಗದ ‌ಹುಡುಗಿ. ಹೋಚಿಮಿನ್ ಸಿಟಿಯ ಏರ್ರ್ಪೋರ್ಟಿನಿಂದ ನಗರದ ಮಧ್ಯಭಾಗದಲ್ಲಿರುವ ಸೋಫಿಟೆಲ್ ಹೋಟಲಿಗೆ ನಮ್ಮನ್ನು ತಲುಪಿಸಿದ ಮತ್ತು ವಿಯಟ್ನಾಮಿ ಭಾಷೆಯಲ್ಲಿ ಹಲ್ಲೋ....'ಮಿ ಚೌ'  ಎನ್ನುವ ಇವರ ಭಾಷಾ ಪರಿಚಯ ಮಾಡಿಕೊಟ್ಟ ಮೊದಲ ವಿಯೆಟ್ನಾಮಿ. ಸುಮಾರು ನಲವತ್ತು ನಿಮಿಷಗಳ ಡ್ರೈವಿಂಗ್ನಲ್ಲಿ ಕನಿಷ್ಟ ಅಂದರೆ ಹತ್ತು ಕಡೆಯಾದರೂ ಟ್ರಾಫಿಕ್ ಸಿಗ್ನಲ್ನಲ್ಲಿ ಒಂದೆರಡು ನಿಮಿಷಗಳ ನಿಲುಗಡೆ ಇತ್ತು. ಹೀಗೆ ಕಾರು ನಿಂತಾಗ ಹಿಂತಿರುಗಿ ನಮ್ಮ ಮಗಳ ಹತ್ತಿರ ಮಾತು ಕಥೆಗೆ ಶುರು ಹಚ್ಚಿಕೊಳ್ಳುತ್ತಿದ್ದಳು.   ಇಂಗ್ಲೀಷಿನಲ್ಲಿ ಸ್ವಲ್ಪ ಎಡರು ತೊಡರಾದರೂ ಸಹ ..ನಾಚಿಕೊಳ್ಳುತ್ತಲೇ ನಮ್ಮ ಜೊತೆ ಮಾತಾಡುತ್ತಿದ್ದಳು....ನಿನ್ನ ಕಣ್ಣುಗಳು ತುಂಬಾ ಸುಂದರವಾಗಿವೆ ಎಂಬ ಶ್ಲಾಘನೆಯನ್ನು ನಮ್ಮ ಮಗಳಿಗೆ ಹೇಳುವ  ಪ್ರಾಮಾಣಿಕವಾದ ಹೃದಯವಂತಿಕೆಯನ್ನೂ ತೋರಿದಳು.
  ಏರ್ಪೋರ್ಟಿನಲ್ಲಿ 200 ಡಾಲರ್ಗಳನ್ನು ಇಲ್ಲಿಯ ಡಾಂಗ್ ಗಳಾಗಿ ಪರಿವರ್ತಿಸಿದ ಮೇಲೆ ಸಿಕ್ಕಿದ್ದು ಬರೋಬ್ಬರಿ ನಲವತ್ತುವರೆ ಲಕ್ಷ...ಅಂದ್ರೆ ನಮ್ಮ ನೂರು ರೂಪಾಯಿ ಇಲ್ಲಿಯ ಇಲ್ಲಿ ಮೂರುಸಾವಿರ ಡಾಂಗ್! ಏರ್ಪೋರ್ಟಿನಿಂದ ಹೋಟಲಿಗೆ ಇಪ್ಪತ್ತುಸಾವಿರ ಡಾಂಗ್,ಅಸಲಿಗೆ ಬೆಂಗಳೂರಿಗಿಂತ ಅಗ್ಗ ರೂಪಾಯಿಯ ಲೆಕ್ಕದಲ್ಲಿ.
  ಸುರಕ್ಷಿತವಾಗಿ ಹೋಟೆಲು ತಲುಪಿಸಿದ ಲೀಮ್ ಗೆ ಧನ್ಯವಾದಗಳನ್ನು ಹೇಳುವಾಗ ಅವಳ ಮೊಬೈಲು ನಂಬರ್ ಕೊಟ್ಟು ,ಕಾರಿನ ಅವಶ್ಯಕತೆ ಇದ್ದರೆ ಕರೆಮಾಡಿ ಎಂದು ಹೇಳಿದಳು.
  ಹೋಚಿಮಿನ್ ಸಿಟಿ ದಕ್ಷಿಣ ವಿಯೆಟ್ನಾಮಿನ ಅತಿದೊಡ್ಡ ಸಿಟಿ. ಹಲವಾರು ದಶಕಗಳ ಚೀನ ಮತ್ತು ರಷ್ಯದ ಕಮ್ಯನಿಷ್ಟರು ಉತ್ತರದಿಂದ ಮತ್ತು  ಫ್ರೆಂಚ್ ಹಾಗು ಅಮೆರಿಕದ ಬಂಡವಾಳಶಾ‌ಹಿಗಳು ದಕ್ಷಿಣದಿಂದ ನಡೆಸಿದ ಸೈಧ್ಧಾಂತಿಕ ಯುಧ್ಧದ ರಣಭೂಮಿ. ಕೆಲ ಸಮಯ ಅಮೆರಿಕ ದರ್ಬಾರು ನಡೆಸಿದರೆ,ಕೆಲ ಸಮಯ ಫ್ರಾನ್ಸಿನ ಅಧಿಕಾರ. ಅಂತೂ 75 ರ ದಶಕದಲ್ಲಿ ಉತ್ತರ, ದಕ್ಷಿಣ ವಿಯಟ್ನಾಮುಗಳು ಒಂದಾಗಿ ಅಮೆರಿಕದಿಂದ ಮುಕ್ತಿ ಪಡೆದವು. ಅಷ್ಟೊತ್ತಿಗಾಗಲೇ ಸುಮಾರು 58 ಸಾವಿರ ಅಮೆರಿಕನ್ನರು ಪ್ರಾಣತ್ಯಾಗ ಮಾಡಿದ್ದರು. ಯಾವ ಪುರುಷಾರ್ತಕಕ್ಕಾಗಿ,ಯಾವ ದೇಶದ ಉಳಿವಿಗಾಗಿ ಇಷ್ಟೊಂದು ಜನರ ಜೀವಗಳು ನಾಶವಾದವು ಎನ್ನುವ ಕಹಿ ನೆನಪು ಈಗಲೂ ಅಮೆರಿಕಾದ ಅಹಂಗೆ ಮುಳ್ಳಾಗಿರುವ ವಿಷಯ. ಈ ಎರಡು ಅಂದಿನ ಪ್ರಭಲ ಶಕ್ತಿಗಳ ನಡುವೆ ಸಿಲುಕಿದ ಲಕ್ಷಾಂತರ ವಿಯಟ್ನಾಮಿಗಳ ಮಾರಣಹೋಮವೂ ನಡೆಯಿತು.

    ಈಗಿನ ಸಂಪಧ್ಭರಿತ ವಿಯಟ್ನಾಂ ಅದಲ್ಲವನ್ನೂ ಮರೆತು ಮುನ್ನುಗ್ಗತ್ತಿದೆ. ಇನ್ನೊಂದು ಗಮನಸೆಳೆಯುವ ಅಂಶವೆಂದರೆ ಎಲ್ಲಾ ವಾಣಿಜ್ಯ ಚಟುವಟಿಕೆಗಳಲ್ಲಿ ಮಹಿಳೆಯರದೇ ಮೇಲುಗೈ.   
     ಇಲ್ಲಿಯ ಐತಿಹಾಸಿಕ ‘ಬೆನ್ಥಾನ್ ‘ಮಾರ್ಕೆಟ್ಟಿನಲ್ಲಂತೂ ಇವರ ಮಾರಾಟದ ಕುಶಲತೆ ನೋಡಿ ಅನುಭವಿಸಬೇಕು!
ಅಲ್ಲಿ ತುಂಬ ಸೆಕೆ ಇದ್ದುದರಿಂದ ನಿಲುವಂಗಿಗಳನ್ನು ಧರಿಸಲು ಸಾಧ್ಯವಿರಲಿಲ್ಲ, ಆದ್ದರಿಂದ ತುಂಡು ಬಟ್ಟೆಗಳನ್ನು ಧರಿಸಿದ್ದರು. ಇದರಿಂದಾಗಿ ಖರೀದಿದಾರರ ಜೊತೆಗೆ, ನೋಡುಗರ ಜಾತ್ರೆಯೂ ನೆರೆದಿತ್ತು. ಅವರಂತೂ ಮೈಗೆ ತಾಕಿಕೊಂಡೇ ಮಾತನಾಡಿಸುತ್ತಿದ್ದರು. ಇದರಿಂದಾಗಿ ಸಣ್ಣ ಸಣ್ಣ ವಸ್ತುಗಳ ಖರೀದಿಗೂ ತುಂಬಾ ಸಮಯ ಹಿಡಿಯುತ್ತಿತ್ತು! ಆದರೆ ಇವರ ಜೊತೆ ಜೋರಾಗೇ ಚೌಕಾಸಿ ಮಾಡಬೇಕು. ಕೋಳಿಮೊಟ್ಟೆಯ ಸಿಪ್ಪೆಯ ಪೀಸುಗಳನ್ನು ಉಪಯೋಗಿಸಿಕೊಂಡು ತಯಾರಿಸುವ ಚಿತ್ರಕಲೆ ಇಲ್ಲಿಯ ವಿಷೇಶತೆ. ವಿಷೇಶ ವಿನ್ಯಾಸದ ಉಡುಪುಗಳೂ ಸಹ ಇಲ್ಲಿಯ ಆಕರ್ಷಣೆ.

  2 ಸೆಪ್ಟಂಬರ್ 1975 ರಂದು ಉತ್ತರ ಮತ್ತು ದಕ್ಷಿಣ ವಿಯೆಟ್ನಾಮ್ಗಳು ಒಂದಾಗಿ ಸ್ವತಂತ್ರವಾದವು. ಕೈಗಾರಿಕಾ ಪ್ರಗತಿಯ ಪ್ರಾರಂಭವಾಯಿತು. ಹೇರಳವಾದ ತೈಲ ಸಂಪನ್ಮೂಲಗಳ ಸಂಸ್ಕರಣ ಶುರುವಾಯಿತು. ಕಾಫಿ ಮತ್ತು ಭತ್ತ ಇಲ್ಲಿಯ ಮಖ್ಯ ಬೆಳೆಗಳಾದರೆ, ಮೀನುಗಾರಿಕೆಯಿಂದ ಹೇರಳ ಉತ್ಪನ್ನ ಬರಲಾರಂಬಿಸಿತು. ಇಲ್ಲಿಯ ಸಾಂಪ್ರದಾಯಕ ವ್ಯವಸಾಯವಾದ ಮರದ ಪೀಠೋಪಕರಣಗಳು ವಿಶ್ವದೆಲ್ಲೆಡೆ ಪ್ರಸಿದ್ದಿಯಾದವು. ಇಲ್ಲಿಯ ಉತ್ಕ್ರುಷ್ಟ ದರ್ಜೆಯ ಬಟ್ಟೆಗಳು ಇಷ್ಟೊಂದು ಅಗ್ಗವಾಗಿ ಭಾರತದಲ್ಲೆಲ್ಲೂ ಸಿಗುವುದಿಲ್ಲ. ಪ್ರತಿಯೊಂದು ಮನೆಯ ಮುಂದೆ ಒಂದು ಅಂಗಡಿಯಿರುತ್ತದೆ. ಅದು ಇಲ್ಲಿ ಯಥೇಚ್ಚವಾಗಿ ಬೆಳೆಯುವ ಹಣ್ಣಿನ ಅಂಗಡಿ ಗಳಾಗಿರಬಹುದು,ರೆಸ್ಟೋರೆಂಟುಗಳಾಗಿರಬಹುದು, ಇಲ್ಲಿರುವ ಲಕ್ಷಾಂತರ ಸ್ಕೂಟರ್ಗಳಿಗೆ ಸಂಬಂದಿಸಿದ ಸರ್ವೀಸಿಂಗ್  ಸೆಂಟರುಗಳಿರಬಹುದು, ಹೆಲ್ಮೆಟ್ ಅಂಗಡಿಗಳಿರಬಹುದು,ಡೀಲರ್ಗಳಿರಬಹುದು, ಏನಾದರೂ ಸರಿ ,ಮುಂದೆ ಒಂದು ಅಂಗಡಿ ಹಿಂದೆ ಮನೆ. ನಮ್ಮಲ್ಲಿರುವ ಹಾಗೆ ಮನೆಗಳು ಒಂದುಕಡೆ ಹಾಗೂ ವಾಣಿಜ್ಯ ವಹಿವಾಟುಗಳು ಒಂದುಕಡೆ ಎನ್ನುವ ಪದ್ದತಿ ಇಲ್ಲಿಲ್ಲ.
  ಇಲ್ಲಿ ದೊರಕುವ ಹೇರಳವಾಗಿ ಸಿಗುವ ಹಣ್ಣುಗಳ ಬಗ್ಗೆ ಮತ್ತು ಸ್ವಲ್ಪ ಮುದ್ದೆಯಂತಾದರೂ ಸರಿ ,ಅನ್ನ ಮಾತ್ರ ಎಲ್ಲಾ ಸಮಯದಲ್ಲೂ ಸಿಗುತ್ತದ ಎಂಬ ಭರವಸೆ ಇದ್ದುದರಿಂದೆ ಊಟದಬಗ್ಗೆ ಹೆಚ್ಚು ತಲೆ ಕೆಡಸಿಕೊಳ್ಳಲಿಲ್ಲ, ಆದರೂ ಚಟ್ನಿಪುಡಿ, ಉಪ್ಪಿನಕಾಯಿ ,ಗೊಜ್ಜುಗಳನ್ನು ಮಾತ್ರ ತಪ್ಪದೇ ಪ್ಯಾಕಿಂಗ್ ಮಾಡಿಕೊಂಡು ಬಂದಿದ್ದೆವು.   ಈ ಹೋಟಲಿನ ತಿಂಡಿಯಂತೂ ಅಧ್ಭುತ,ನಮ್ಮಕಡೆಯಲ್ಲಿ ಮಲೆನಾಡಿಗಷ್ಟೇ ಸೀಮಿತವಾದ ಅಕ್ಕಿ ನುಚ್ಚಿನ ಗಂಜಿಯೂ ಸಿಗುತ್ತದೆ, ಆದರೆ ಉಪ್ಪಿನಕಾಯಿಯನ್ನು ಸ್ವಲ್ಪ ಹುಷಾರಾಗಿ ನೋಡಿಕೊಳ್ಳಬೇಕು...ಎಲ್ಲಾ ತರಹದ ಹುಳ ಹುಪ್ಪಡಿಗಳ ಉಪ್ಪಿನಕಾಯಿಗಳನ್ನು ಸಾಲಾಗಿ ಪೇರಿಸುರುತ್ತಾರೆ. "ಫೋ" ಎನ್ನುವ ನೂಡಲ್ಸು ಮತ್ತು ತರಕಾರಿಗಳ ಮಿಶ್ರಿತ ಸೂಪ್ ಮಾದರಿಯ ಆಹಾರವೇ ಇಲ್ಲಿಯ ರಾಷ್ಟ್ರೀಯ ಖಾದ್ಯ! ಇದರ ಜೊತೆ ಯಾವ ತರಹದ ಮೀನು, ಚಿಕನ್ನುಗಳ ಕಾಂಬಿನೇಷನ್ ಅವರವರ ರುಚಿಗೆ ತಕ್ಕಂತೆ. ಮೊದಲ ದಿನವೇ ಇದರ ರುಚಿಗೆ ಮರುಳಾದೆವು. ವಿಯಟ್ನಾಮಿಗಳಿಗೆ ಬಿಸಿಬಿಸಿ "ಫೋ" ಸವಿಯಲು ಹೊತ್ತು ಗೊತ್ತು ಏನೂ ಬೇಡ,ಯಾವಾಗಾದರೂ ಸರಿ.


ವಿಯಟ್ನಾಮ್ ಡೈರೀಸ್, ದಿನ -2

ಸೈಗೋನ್ ಎಂದು ಕರೆಯಲಾಗುತ್ತಿದ್ದ ಈ ಸಿಟಿಯನ್ನು
2 ಜುಲೈ 1976 ನಲ್ಲಿ ಸ್ವತಂತ್ರ ಹೋರಾಟದ ಮುಖಂಡ ಶ್ರೀ ಹೊ ಚಿ ಮಿನ್ಹ ಅವರಿಗೆ ಗೌರವ ಸೂಚಿಸಲು ಹೊಚಿಮಿನ್ಹ ಸಿಟಿ ಎಂದು ನಾಮಕರಣ ಮಾಡಲಾಗುತ್ತದೆ. ಸ್ವತಂತ್ರ ಹೋರಾಟದ ಈ ರುವಾರಿ ಇಲ್ಲಿಯ ಮಹಾತ್ಮಗಾಂಧಿಯೂ ಮತ್ತು ಸುಭಾಷ್ ಚಂದ್ರ ಬೋಸ್ ಆಗಿ ನಿರಂತರವಾಗಿ ಹೋರಟ ನಡೆಸಿದ ಫಲ, ಸ್ವಾತಂತ್ರ ಮತ್ತು ಸೈದ್ದಾಂತಿಕವಾಗಿ ಹೋಳು ಮಾಡಿದ್ದ ಎರಡು ದೇಶಗಳು ಒಂದಾದವು.

ಅಮೆರಿಕ ಸೋತ ಏಕೈಕ ಯುಧ್ಧ ವಿಯೆಟ್ನಾಮಿನಲ್ಲಿ. ಇವರ ಗೊರಿಲ್ಲಾ ಶೈಲಿಯ,ಅದರಲ್ಲೂ ರಾತ್ರಿ ಸಮಯದಲ್ಲಿ ಮಾಡುತ್ತಿದ್ದ  ಆಕ್ರಮಣದಿಂದ ಕಕ್ಕಾಬಿಕ್ಕಿಯಾಗಿ ಹೋಗುತ್ತಿದ್ದರು ಅಮೆರಿಕನ್ನರು. ಇವರು ಎಲ್ಲಿಂದ ಬರುತ್ತಾರೆ,ಹಗಲು ಹೊತ್ತು ಎಲ್ಲಿರುತ್ತಾರೆ ಎನ್ನವ ಕಿಂಚಿತ್ತೂ ಮಾಹಿತಿ ಸಿಗುತ್ತಿರಲಿಲ್ಲ. ಇದಕ್ಕೆಂದೇ ಈ ಚಾಣಾಕ್ಷ ವಿಯಟ್ನಾಮಿಗಳು ಸುಮಾರು 200 ಚದರ ಕಿಮೀ ನಷ್ಟು ದಟ್ಟ ಕಾಡಿನಲ್ಲಿ ಸುರಂಗದ ಜಾಲವನ್ನೇ ಸೃಷ್ಟಿಸಿಕೊಂಡಿದ್ದರು. "ಕು ಚಿ" ಎನ್ನುವ ಈ ಪ್ರದೇಶವನ್ನು  ವಿಯಟ್ನಾಮಿನ ಒಂದು ಪ್ರವಾಸಿಗರ ಆಕರ್ಷಣೆಯಾಗಿ ಸೃಷ್ಟಿಸಲಾಗಿದೆ. ಈಗಲೂ ದಟ್ಟ ಕಾಡೇ ಇದೆ. ಕೆಲವು ಸುರಂಗಗಳಲ್ಲಿ ನಾವೂ ತೆವಳಿಕೊಂಡು, ಉಸಿರುಗಟ್ಟುವವರೆಗೂ ಇದ್ದು ಉಸ್ಸಪ್ಪಾ ಎನ್ನುತ್ತ ಹೊರಗೆ ಬಂದೆವು. ವಿಯಟ್ನಾಮಿ ಗೋರಿಲ್ಲಾಗಳು ಹಗಲೆಲ್ಲಾ ಈ ಬಿಲಗಳಲ್ಲಿದ್ದು,ರಾತ್ರಿ ಹೊರಗೆ ಬಂದು,ಕೆಲವರು ದಾಳಿ ಮಾಡಲು ಹೋದರೆ ಇನ್ನು ಕೆಲವರು ಹೊಲ ಗದ್ದೆಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರಂತೆ. ಇನ್ನು ಕೆಲವರು ಪಕ್ಕದ ಲಾವೋಸ್ನಿಂದ ದವಸ ಧಾನ್ಯಗಳನ್ನು ತಂದು ಈ ಬಿಲಗಳಲ್ಲಿ ತುಂಬಿಸಿಡುತ್ತಿದ್ದರಂತೆ. ಅಲ್ಲಿಯೇ ಒಂದು ಸಾಮೂಹಿಕ ಅಡುಗೆ ಮನೆಯನ್ನು ನಿರ್ಮಿಸಿ,ಅದರ ಹೊಗೆಯನ್ನು ಚದುರಿಸಲು ನೆಲಮಾಳಿಗೆಯಲ್ಲೇ ವಿವಿಧ ದಿಕ್ಕುಗಳಲ್ಲಿ ಹರಿಸಲು ಮಾಡಿಕೊಂಡ ವ್ಯವಸ್ಥೆಯನ್ನು ತೋರಿಸಲು ದಿನವಿಡೀ ಹೊಗೆಯಾಡುವ ಹಾಗೆ ಮಾಡಿರುತ್ತಾರೆ. ಒಂದಕ್ಕೊಂದು ಬಿಲಗಳಿಗೆ ನೆಲದೊಳಗೇ ಸುರಂಗದ ಮೂಲಕ ಸಂಪರ್ಕ ಕಲ್ಪಿಸಿ ಒಂದು ಆಸ್ಪತ್ರೆಯ ವ್ಯವಸ್ಥೆಯೂ ಸೇರಿದಂತೆ ಒಂದು ಸಂಪೂರ್ಣ ಸಿಟಿಯನ್ನೇ ಸೃಷ್ಟಿಮಾಡದ್ದ ಕುರುಹು ಈಗಲೂ ಇದೆ. ಇಲ್ಲಿ ಮದುವೆಗಳೂ ನಡೆದಿದ್ದವಂತೆ!. ಇವರ ಈ ಕ್ಲಿಷ್ಟಕರವಾದ ಸುರಂಗದ ಜಾಲವನ್ನು ಅರ್ಥಮಾಡಿ ಕೊಳ್ಳಲು ಅಮೆರಿಕನ್ನರು ಹರಸಾಹಸ ಪಡುತ್ತಾರೆ. B-52 ಎನ್ನುವ ಬಾಂಬರ್ ಏರೋಪ್ಲೇನಿನಿಂದ ಬಾಂಬುಗಳ ದಾಳಿ ನೆಡೆಸುತ್ತಾರೆ. ಈ ಬಾಂಬಿನ ದಾಳಿಯಲ್ಲಿ ಹತ್ತಾರು ವಿಮಾನಗಳನ್ನು ಕಳೆದು ಕೊಳ್ಳುತ್ತಾರೆ ಆದರೆ ವಿಯೆಟ್ನಾಮಿಗಳ ಸಾಹಸ ಪೃವೃತ್ತಿ ಕಿಂಚಿತ್ತೂ ಕುಂದಲಿಲ್ಲ. ಈ ಬಿಲಗಳ ಪ್ರವೇಶ ದ್ವಾರ ಎಷ್ಟು ಚಿಕ್ಕದೆಂದರೆ ಧಢೂತಿ ಅಮೆರಿಕನ್ನರು ಒಳಗೆ ಹೋಗುವುದು ದುಸ್ಸಾಹಸದ ಮಾತು. ಹಾಗೇ ಕೆಲವರು ಪ್ರಯತ್ನಿಸಿದವರು ಅವರು ಹರಡಿದ್ದ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಪ್ರಾಣವನ್ನೇ ಕಳೆದು ಕೊಂಡರು. ಗ್ರೆನೇಡುಗಳನ್ನು ಎಸೆದರು, ಹೊಗೆ ತುಂಬಿದರು...ಒಳಗಿನವರು ಜಪ್ಪಯ್ಯ ಎನಲಿಲ್ಲ.
       ಸುಮಾರು ನಾಲ್ಕುಗಂಟೆಗಳ ಈ ಟೂರನ್ನು ಮುಗಿಸಿಕೊಂಡು ಬರುವಾಗ ವಿಯಟ್ನಾಮಿಗಳ ಈ ಸಾಹಸ ಪೃವೃತ್ತಿ ಕಣ್ಣಿಗೆ ಕಟ್ಟಿ ಬಂತು.
      
ಈ ಯುಧ್ಧದಿಂದ ಅಮೆರಿಕನ್ನರಿಗೆ ಸಿಕ್ಕಿದ್ದೇನು?
ನಾವೊಂದು ಪ್ರಬಲವಾದ ದೇಶ ಎನ್ನುವ ಅಹಂಕಾರ ಮುರಿದು ಬಿತ್ತು. ನಿಕ್ಸನ್ ಮಾಡಿದ ಕುತಂತ್ರದ ರಾಜಕಾರಣದಿಂದ ಜನ ಕೆರಳಿ ಹೋದರು. ಹತಾಶಗೊಂಡ ಅಮೆರಿಕದ ಯುವಜನ ದಂಗೆಯ ಪ್ರವೃತ್ತಿಗಿಳಿದು ಬಿಟ್ಟರು. ಹಿಪ್ಪಿಗಳ, ಮಾದಕ ವ್ಯಸನಿಗಳ, ರಾಕ್ ಸಂಗೀತದ, ಯುಧ್ಧವಿರೋದಿ ಸಿನೇಮಾಗಳ ಯುಗವೇ ಶುರುವಾಯಿತು. ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತದೆ ಎನ್ನುವುದು ಇದಕ್ಕೇ.....


ವಿಯೆಟ್ನಾಮ್ ಡೈರೀಸ್,  ದಿನ-3

       ಸಿಟಿಯಲ್ಲಿ ಕಾಣುವ ಸಿರಿತನವೇನೊ ವಿಯಟ್ನಾಮಿನ ಪ್ರಗತಿಯನ್ನು ಸಾರಿ ಹೇಳುತ್ತಿದೆ, ಆದರೆ ಇಲ್ಲಿಯ ಹಳ್ಳಿಗಳನ್ನು ನೋಡೋಣ ಎಂದು ಮರುದಿನ ಸೋಫಿಟಲ್ ಹೋಟಲಿನ ಅಧ್ಭುತವಾದ ಉಪಹಾರದ ನಂತರ ಹೊರಟೆವು. ಮಿಕಾಂಗ್ ನದಿಯು ಸಮುದ್ರ ಸೇರುವ ಮುಖಜ ಭೂಮಿಯಕಡೆ ನಮ್ಮ ಪ್ರಯಾಣ. ಸುಮಾರು ಎರಡು ಗಂಟೆಯ ವಿಯಟ್ನಾಮಿನ ದಿವ್ಯ ದರ್ಶನ.
       ಇಲ್ಲಿನವರು ಧರಿಸುವ ಬಿಳಿ ಶಂಕಾಕಾರದ ಟೋಪಿಯನ್ನು 'ನೂನ್ ಲಾ' ಎಂದು ಹೇಳುತ್ತಾರೆ. ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಕೊಡುವ ಈ ಶಿರಸ್ತ್ರಾಣ ಅವರ ಒಂದು ರಾಷ್ಟೀಯ ಸಂಕೇತವೂ ಹೌದು. ಹಸಿರು ಭತ್ತದ ಗದ್ದೆಗಳಲ್ಲಿ ಈ ನೂನ್ ಲಾ ಧರಿಸಿದ ರೈತರು ಕೆಲಸ ಮಾಡುವ ಚಿತ್ರಣ ನಯನ ಮನೋಹರ. ಇಲ್ಲಿಯ ಹಿಂಗಾರು ಮಳೆಯ ಬಿರುಸಿನ ಅನುಭವವೂ ಆಯಿತು. ಅಷ್ಟು ಜೋರಾಗಿ ಮಳೆ ಬರುತ್ತಿದೆ ಸ್ವಲ್ಪ ನಿಲ್ಲಿಸಿಕೊಂಡು ಹೋಗೋಣವೆಂದುದಕ್ಕೆ ನಮ್ಮ ಚಾಲಕ ಹಗುರವಾಗಿ ನಕ್ಕು,ಡ್ರೈವಿಂಗ್ನಲ್ಲಿ ನಿರತರಾದರು. ನಿರಂತರವಾಗಿ ನಡೆಯುವ ಮಳೆ ಬಿಸಿಲಿನ ಜೂಟಾಟದಲ್ಲಿ ಇಲ್ಲಿ ಏನೂ ನಿಲ್ಲುವುದಿಲ್ಲ....ದೋಣಿ ಸಾಗಿ ಮುಂದೆ ಹೋಗುತ್ತಿರುತ್ತದೆ.
ಮೀಕಾಂಗ್ ತಲುಪಿದ ನಮ್ಮ ಮುಂದಿನ ಪ್ರಯಾಣವೂ ದೋಣಿಯಲ್ಲೇ.
ಟಿಬೆಟ್ಟಿನಲ್ಲಿ ಹುಟ್ಟಿ ಆರು ದೇಶಗಳ ದಾಹವನ್ನು ತಣಿಸಿ,ಸುಮಾರು 4800 ಕಿಮೀಗಳ ಪ್ರವಾಸವನ್ನು ಮುಗಿಸಿ ದಕ್ಷಿಣ ವಿಯಟ್ನಾಮಿನಲ್ಲಿ ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ...ಮೀಕಾಂಗ್ ನದಿ. ಒಂದು ತಟದಿಂದ ಇನ್ನೊಂದು ತಟಕ್ಕೆ ಸುಮಾರು ಮೂರು ಕಿಮೀಗಳ ಅಂತರ. ಮಧ್ಯ ಕೆಲವು ಜನಭರಿತ ಚಿಕ್ಕ ಚಿಕ್ಕ ದ್ವೀಪಗಳು. ಮೊದಲನೆ ಅಂತಹ ಒಂದು ದ್ವೀಪದಲ್ಲಿ ಸಮೃಧ್ಧವಾದ ಜೇನುಗಾರಿಕೆ. ಹೋದ ಕೂಡಲೇ ಜೇನುತಪ್ಪದ ಸಮಾರಾಧನೆ. ಜೇನು ಹಚ್ಚಿದ ಶುಂಟಿ,ಬಾಳೆಹಣ್ಣುಗಳು ಮತ್ತು ಶೇಂಗಾ ಮಿಟಾಯಿಗಳ ಸೇವನೆಯಾದ ಮೇಲೆ ಅಲ್ಲಿಯ ಬಡಕಟ್ಟು ಜನಾಂಗದ ಕಲಾವಿದರ ಸಂಗೀತ. ಅಲ್ಲಿಂದ ಹೊರಟು ಇನ್ನೊಂದು ದ್ವೀಪದ ಪರಿಚಯ. ಇಲ್ಲಿ ಹೆಂಗಸರೇ ನಡೆಸುವ ಉದ್ದನೆಯ ಬೋಟುಗಳಲ್ಲಿ ಆ ದ್ವೀಪದ ಒಳಗೇ ಇರುವ ಚಾನಲ್ಲುಗಳಂತೆ ಕಾಣುವ,ಇಕ್ಕೆಲಗಳಲ್ಲೂ ದಟ್ಟವಾಗಿ ಬೆಳದಿರುವ ತೆಂಗಿನ ಮರಗಳ ಮಧ್ಯ ಸುರಂಗದಂತೆ ಕಾಣುವ ಕಿರುದಾದ ನೀರ್ದಾರಿ. ಈ ಅನುಭವವಂತೂ ಅಧ್ಭುತವಾಗಿತ್ತು.
ಇದೊಂದು ಒಳ್ಳೆಯ ಪ್ರವಾಸ ಸ್ನೇಹಿ ದೇಶ. ಕೆಲವೊಮ್ಮೆ ಭಾಷೆಯ ತೊಡರಾಗಬಹುದಾದರೂ ಜನರು ಮಾತ್ರ ಸರಳ ಮತ್ತು ನಿರಂಹಕಾರಿಗಳು. ವಸತಿ ಮತ್ತು ಪ್ರಯಾಣದ ಖರ್ಚೂ ಸಹ ಕಡಿಮೇನೆ,ಇತರ ಈಶಾನ್ಯ ಏಶ್ಯಾ ದೇಶಗಳಿಗೆ ಹೋಲಿಸಿದರೆ. ಇಲ್ಲಿ ಪ್ರಕೃತಿ ಸೌಂದರ್ಯದ ಭರಪೂರ ಭಂಡಾರವೇ ಇದೆ. ಅನುಭವಿಸಲು ಸಮಯ ಮತ್ತು ಸಂಯಮವಿರಬೇಕಷ್ಟೆ. 

No comments:

Post a Comment