Thursday, October 27, 2016

ಆಪರೇಷನ್ ಪರಾಕ್ರಮ್-5

ಆಪರೇಷನ್ ಪರಾಕ್ರಮ್-5

ಒಂದು ಯುಧ್ಧವಿಮಾನದ ಬೆಲೆ ಎಷ್ಟು ಗೊತ್ತೇ?
700-800 ಕೋಟಿ!. ಇತ್ತೀಚೆಗೆ ಫ್ರಾನ್ಸ್ ದೇಶದ ಜೊತೆ "ರಫೇಲ್" ಯುಧ್ಧವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಎಲ್ಲಾ ಫಿಟ್ಟಿಂಗ್ ಸೇರಿ ಯುಧ್ಧಕ್ಕೆ ರೆಡಿ ಇರುವ ಒಂದು ವಿಮಾನದ ಬೆಲೆ ಬರೋಬ್ಬರಿ 1673 ಕೋಟಿ ರೂಪಾಯಿ. ಒಟ್ಟು 36 ಏರೋಪ್ಲೇನುಗಳಿಗೆ ಲೆಕ್ಕಹಾಕಿ!
ಯಾಕೆ ಬೇಕು ಇಷ್ಟೊಂದು ದುಬಾರಿ ಯುಧ್ಧವಿಮಾನ?
ಬೇಕು,ಯಾಕೆಂದರೆ ಕೆಲವೇ ಗಂಟೆಗಳಲ್ಲಿ ಯುಧ್ಧದ ರೂಪುರೇಷವನ್ನೇ ಬದಲಿಸುವ ತಾಕತ್ತು ಈ ವಾಯುಶಕ್ತಿಗಿದೆ. ಸಾವಿರಾರು ಮೈಲಿ ದೂರದ ಪರಿಧಿಯಳ್ಳ ಮಾರಕಾಸ್ತ್ರ ಇದು. ಶತ್ರುವಿನ ಮನೆಗೆ ನುಗ್ಗಿ ಅಲ್ಲಿಯದನ್ನೆಲ್ಲಾ ಸರ್ವನಾಶ ಮಾಡಬಹುದಾದ ಧಾರ್ಡ್ಯತೆ ಇದೆ. ಯುಧ್ಧರಂಗದಲ್ಲಿನ ಬಹುಮುಖ ಪಾತ್ರದ ಕಲಾವಿದ ಈ ಯುಧ್ಧವಿಮಾನ ಮತ್ತು ಅದರ  ಚಾಲಕ. ಆದರೆ ಇದಕ್ಕೆ ತಕ್ಕನಾದ ರಣತಂತ್ರವಿರಬೇಕು,ಆವಾಗಲೇ ಇದರ ಮಹತ್ವದ ಅರಿವಾಗುವುದು. ಕೌಟಿಲ್ಯನ ಆಕ್ರಾಮಿಕ ರಣತಂತ್ರಕ್ಕೆ ಹೇಳಿಮಾಡಿಸಿದಂತಹ ಪ್ರಯೋಗಾಸ್ತ್ರ, ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ. ಪರಿಣಾಮಕಾರಿಯಾಗಿ ಉಪಯೋಗಿಸಿದರೆ ನಿರಂತರವಾಗಿ ಪ್ರಯೋಗಿಸಬಹುದಾದ ಮಿಸೈಲ್.
   ವಾಯುಸೇನೆಯ ಯುಧ್ಧದಲ್ಲಿನ ಕೆಲವು ಅಂಶಗಳನ್ನು ಅರ್ಥ್ಥೈಸಲು ಪ್ರಯತ್ನಿಸುತ್ತೇನೆ. ವಾಯು ಯುಧ್ಧದ ಮೂಲ ಉದ್ದೇಶ ಆಕಾಶದಲ್ಲಿ ಸಾರ್ವಭೌಮತ್ವವನ್ನು ಸ್ಥಾಪಿಸುವುದು. ಅಂದರೆ ಶತ್ರುವಿನ ರೆಕ್ಕೆಗಳನ್ನು ಮುರಿದು ಆಕಾಶದಲ್ಲಿ ತಲೆಎತ್ತದಂತೆ ಮಾಡುವುದು. ಈ ಆತಂಕ ನಿವಾರಣೆಯಾದರೆ ಭೂಸೇನೆಯ ಮತ್ತು ನೌಕಾಸೇನೆಯ ಆಕ್ರಮಣ ವೇಗದಿಂದ ಮುಂದುವರೆಯುತ್ತದೆ. ಈ ಹಂತ ತಲುಪಬೇಕೆಂದರೆ ಶತ್ರುಗಳ ವಿಮಾನಗಳು,ರಡಾರುಗಳು,ಮಿಸೈಲುಗಳು, ಸಂಪರ್ಕ ಜಾಲ ಎಲ್ಲವನ್ನು ನಿಷ್ಕ್ರಿಯಗೊಳಿಸಬೇಕು. ಇದನ್ನೇ ಆಕ್ರಾಮಿಕ ವಾಯು ಕಾರ್ಯಾಚರಣೆ.. Offensive Air Operations ಎನ್ನುತ್ತಾರೆ.
   ಪಾಕೀಸ್ತಾನದ ಒಂದು ವಾಯುನೆಲೆಯನ್ನು ನೆಲಸಮ ಮಾಡುವ ಪ್ರಕ್ರಿಯೆ ಹೇಗೆ ನಡೆಯಬಹುದು....
   ಸುಮಾರು ಹತ್ತು ಯುಧ್ಧವಿಮಾನಗಳ ಒಂದು 'ಪ್ಯಾಕೇಜ್' ಪಾಕಿಸ್ತಾನದ ಗಡಿದಾಟಿ ಸುಮಾರು ಇನ್ನೂರು ಕಿಮೀ ದೂರ ಭೂಮಿಗಪ್ಪಿಕೊಂಡಷ್ಟು ಕೆಳಗೆ ಮತ್ತು ಸುಮಾರು ಸಾವಿರ ಕಿಮೀ ವೇಗದಲ್ಲಿ ಹಾರಬೇಕಾಗುತ್ತದೆ.
   ಏನೇನೆಲ್ಲಾ ಇರುತ್ತದೆ ಈ ಪ್ಯಾಕೇಜ್ ನಲ್ಲಿ. ಇದೊಂದು ಚಕ್ರದಾಕಾರದ formation. ಮಧ್ಯದಲ್ಲಿ ನಾಲ್ಕು ಅಥವಾ ಆರು ನೆಲದ ಮೇಲಿನ ಟಾರ್ಗೆಟ್ಟನ್ನು ಧ್ವಂಸಗೊಳಿಸುವುದಕ್ಕೆ ಬೇಕಾದ ಬಾಂಬುಗಳನ್ನು ಅಳವಡಿಸಿಕಂಡ strike ಏರೋಪ್ಲೇನುಗಳಿರುತ್ತವೆ. ಇವುಗಳ ಇಕ್ಕೆಲಗಳಲ್ಲಿ ರಡಾರುಗಳನ್ನು ನಿಷ್ಕ್ರಿಯಗೊಳಿಸುವ jammer ಏರೋಪ್ಲೇನುಗಳಿರುತ್ತವೆ. ಮಾರ್ಗಮಧ್ಯದಲ್ಲಿ ಬರುವ ಎಲ್ಲಾ ರಡಾರುಗಳ ಮಾಹಿತಿಯನ್ನು ಒಂದು threat library ಯಲ್ಲಿ ಸೃಷ್ಟಿಸಿರುತ್ತಾರೆ. ಇದರ ಕೆಲಸವೇನಪ್ಪಾ ಅಂದರೆ  ಈ ರೆಡಾರುಗಳ ತರಂಗಾಂತರಗಳನ್ನು ಹುಡುಕಿ  ಅದರ ಸ್ಕ್ರೀನಿನ ಮೇಲೆ ಈ ಏರೋಪ್ಲೇನುಗಳು ಕಾಣದಂತೆ ಮಾಡುವುದು. ಇದಲ್ಲಾ ಆಟೋಮ್ಯಾಟಿಕ್ಕಾಗಿ ಸೆಕಂಡುಗಳಲ್ಲಿ ನಡೆಯುವ ಕ್ರಿಯೆ. ಇವುಗಳ ಹಿಂದೂ ಮುಂದು ಇರುವ ಎರಡು ಏರೋಪ್ಲೇನುಗಳ ಡ್ಯೂಟಿ ಏನಂದರೆ ಮೈಯೆಲ್ಲಾ ಕಣ್ಣಾಗಿ ಶತ್ರುಗಳ ಯುಧ್ಧವಿಮಾನಗಳಿಗೆ ಹುಡುಕಾಟ. ಹಾಗೇನಾದರೂ ಕಂಡುಬಂದರೆ ಅವುಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ air to air ಮಿಸೈಲನ್ನು ಪ್ರಯೋಗಿಸುತ್ತದೆ.
   ಬೇರೆ ಬೇರೆ ವಾಯುನೆಲೆಗಳಿಂದ ಹೊರಟ ಈ ವಿಮಾನಗಳು ಒಂದು ಪೂರ್ವ ನಿರ್ಧಾರಿತ ಮೀಟಿಂಗ್ ಪಾಯಿಂಟಿನಲ್ಲಿ ಕೂಡಿಕೊಳ್ಳುತ್ತವೆ. ಪಾಕೀಸ್ತಾನದ ಗಡಿ ಪ್ರವೇಶಿಸುದುವಕ್ಕೂ ಮುನ್ನ ನೂರು ಅಡಿ ಎತ್ತರಕ್ಕಿಳಿದು ರಡಾರಿನಿಂದ ಮರೆಯಾಗುತ್ತವೆ. ಈ ಹತ್ತು ಏರೋಪ್ಲೇನುಗಳು ಈಗ ಪಾಕೀಸ್ತಾನದೊಳಗೆ...ಮುಂದಿನ ಕಾರ್ಯಾಚರಣೆ ರಿಹರ್ಸಲ್ ಮಾಡಿದ ಹಾಗೆ ನಡೆಯಬಹುದೆಂಬ ಭರವಸೆ ಇರುವುದಿಲ್ಲ. ಟಾರ್ಗೆಟ್ ಹತ್ತಿರವಾಗುತ್ತಿದ್ದಂತೆ ಪುನಃ ದಿಕ್ಕಿಗೊಬ್ಬರು ಚದರಿಕೊಂಡು ತಮ್ಮ ತಮ್ಮ ಪಾಲಿನ ಟಾರ್ಗೆಟ್ಟುಗಳ ಮೇಲೆ ಗುಂಡಿನ ಮಳೆಗರೆಯುತ್ತಾರೆ. ಇದಲ್ಲಾ ಒಟ್ಟು ಮೂರು ನಾಲ್ಕು ನಿಮಿಷಗಳ ಕಾರ್ಯಾಚರಣೆ. ಎಲ್ಲಾ ಪ್ಲಾನಿನಂತೆ ನಡೆದರೆ ಪಾಕಿಸ್ತಾನದ ಅರ್ಧ ವಾಯುಸೇನೆ ಮಟಾಷ್.
   ಈ ಪ್ಯಾಕೇಜ್ ಈಗ ಅತಿವೇಗದಲ್ಲಿ ಗಡಿ ದಾಟಿ ಭಾರತವನ್ನು ಪ್ರವೇಶಿಸುತ್ತವೆ. ಇದರಲ್ಲಿ ಯಾರಿಗಾದರೂ ಇಂಧನ ಕಡಿಮೆಯಾಗಿದ್ದರೆ ಗಡಿಯ ಹತ್ತಿರವೇ ಹಾರುತ್ತಿರುವ ಟ್ಯಾಂಕರ್ ವಿಮಾನ ಟ್ಯೂಬುಗಳ ಮುಖಾಂತರ ಇಂಧನವನ್ನು ಸಪ್ಲೈಮಾಡುತ್ತದೆ. ಈ ವಿಮಾನಗಳು ತಮ್ಮ ತಮ್ಮ ವಾಯುನೆಲೆಗಳಿಗೆ ಮರಳುತ್ತಾರೆ.
   ಈ ತರಹದ ಹಲವಾರು ತಾಲೀಮುಗಳು ನಿರಂತರವಾಗಿ 
   ಆಪರೇಷನ್ ಪರಾಕ್ರಮದ ಸಮಯದಲ್ಲಿ ನಡೆಯುತ್ತವೆ.

  
2002 ಜನವರಿ ಎರಡನೇ ವಾರದ ಹೊತ್ತಿಗೆ ಸೈನ್ಯದ ಜಮಾವಣೆಯ ಪ್ರಕ್ರಿಯೆ ತ್ವರಿತ ಗತಿಯಲ್ಲಿ ನಡೆಯಲಾರಂಭಿಸಿತು. ಎಲ್ಲರ ರಜೆಗಳು ರದ್ದಾದವು. ತರಬೇತಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ,ಅಲ್ಲಿಯ ಸಿಬ್ಬಂದಿಗಳನ್ನು ಗಡಿಪ್ರದೇಶಕ್ಕೆ ಕಳುಹಿಸಲಾಯಿತು. ಗುಜರಾತ್,ರಾಜಸ್ತಾನ ಮತ್ತು ಜಮ್ಮು ಕಾಶ್ಮೀರಗಳ ಗಡಿಗಳಲ್ಲಿ ಬೃಹದಾಕಾರದ ಸೇನೆಯ ಜಮಾವಣೆಯಾಯಿತು. ಸುಮಾರು ಐದು ಲಕ್ಷ ಬಲದ ಭಾರತದ ಸೈನ್ಯ , ಮೂರು ಟ್ಯಾಂಕ್ ಡಿವಿಷನ್,ಯುಧ್ಧವಿಮಾನಗಳು,ಮಿಸೈಲುಗಳು ಮತ್ತು ನೌಕಾದಳ ಎಲ್ಲಾ ಸಜ್ಜಾಗಿ ಆದೇಶದ ನಿರೀಕ್ಷೆಯಲ್ಲಿ ತುದಿಗಾಲಲ್ಲಿ ನಿಂತಿತ್ತು. ಕಾಯಿರಿ...ತಾಳ್ಮೆಯಿಂದಿರಿ ಎಂಬ ಮಾತು ಕೇಳಿಬಂದಿತೇ ವಿನಹ, ಮುನ್ನುಗ್ಗಿರಿ,ಪಾಕಿಗಳನ್ನು ಸದೆಬಡಿಯಿರಿ ಎನ್ನುವ ಆದೇಶವೇ ಬರಲಿಲ್ಲ. ಕಬ್ಬಿಣ ಕೆಂಪಾಗಿತ್ತು,ಆದರೆ ತಣ್ಣಗಾಗಲು ಬಿಟ್ಟರು.
         ಬಲಪ್ರದರ್ಶನಕ್ಕೆ ಇಷ್ಟೊಂದು ಸೈನ್ಯವನ್ನು ಜಮಾಯಿಸಿದರೇ? ಉಗ್ರರು ಪಾರ್ಲಿಮೆಂಟ್ ಬಿಲ್ಡಿಂಗಿನ ಆಸುಪಾಸಿನಲ್ಲಿ ದಾಳಿಮಾಡಿದರು ಎನ್ನುವ ಸಿಟ್ಟಿಗಾಗಿ ಮಾಡಿದ ಪರಾಕ್ರಮವೇ?
          ದಿನಗಳು ಕಳೆದಂತೆ ಉತ್ಸಾಹ ,ಹುಮ್ಮಸ್ಸು ಕಡಿಮೆಯಾಗತೊಡಗಿತು. ಅನಿಶ್ಚತತೆಯ ಕೈ ಮೇಲಾಯಿತು. ಮೇ ತಿಂಗಳಿನಲ್ಲಿ ಕಾಶ್ಮೀರದ ಕಾಲುಚಕ್ ಎನ್ನುವ ಪ್ರದೇಶದಲ್ಲಿ ಇನ್ನೊಂದು ದುರಂತ ನಡೆದು ಹೋಯಿತು. ಉಗ್ರರು ಒಂದು ಟೂರಿಸ್ಟ ಬಸ್ಸಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 34 ಜನರ ಹತ್ಯೆಗೈದರು. ಇದರಲ್ಲಿ ಭಾರತೀಯ ಸೈನ್ಯದ ಕುಟುಂಬದ ಸದಸ್ಯರೂ ಸೇರಿದ್ದರು. ಆಗಲೂ ಸೈನ್ಯದ ಕೈ ಕಟ್ಟಿಹಾಕೇ ಇತ್ತು. ಒಂದು ಮಟ್ಟದ ಹತಾಶೆ ಆವರಿಸಿತ್ತು....ಇನ್ನೊಂದು ಕೈತಪ್ಪಿದ ಅವಕಾಶ.
  ಸುಮಾರು ಹತ್ತು ತಿಂಗಳವರೆಗೂ ಭಾರತ ಮತ್ತು ಪಾಕೀಸ್ತಾನದ ಸೈನಿಕರು ಒಬ್ಬರನ್ನೊಬ್ಬರು ದುರುಗುಟ್ಟಿಕೊಂಡು ನೋಡುವಷ್ಟ ಹತ್ತಿರದಲ್ಲಿ ನಿಂತಿದ್ದರೂ ಒಂದು ಗುಂಡು ಹಾರಲಿಲ್ಲ. ಅಷ್ಟರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳನ್ನು ಹೇರಲಾಯಿತು. ಎರಡು ಅಣುಬಾಂಬು ಶಕ್ತದೇಶಗಳು ಕಾದಾಡಲು ಸಜ್ಜಾಗಿ ನಿಂತರೆ ಸಾವಿರಾರು ಸಂಖ್ಯೆಯಲ್ಲಿ ಸಾಮಾನ್ಯ ಪ್ರಜೆಗಳು  ಬಲಿಯಾಗುತ್ತಾರೆ ಎನ್ನುವ ವಾದಕ್ಕೆ ಎರಡೂ ದೇಶಗಳು ಮಣಿಯಲೇ ಬೇಕಾಯಿತು.
  ಮಿಲಿಟರಿಯ ಪ್ರಯೋಗದ ಆಯ್ಕೆಯನ್ನು ಬಹಳ ವಿವೇಚನೆಯೀಂದ ಮಾಡಬೇಕು. ಒಮ್ಮೆ ಮಾಡಿದ ಮೇಲೆ ಪೂರ್ತಿ ಸ್ವಾತಂತ್ರ ಕೊಟ್ಟಬಿಡಬೇಕು ಮಿಲಿಟರಿ ನಾಯಕತ್ವಕ್ಕೆ. 1948 ರಲ್ಲಿ ಪಾಕೀಸ್ತಾನದಿಂದ ಬಂದ ಕಳ್ಳರು,ದರೋಡಕಾರರನ್ನು ಹದ್ದುಬಡೆಯಲು ಸೈನ್ಯಕ್ಕೆ ಪೂರ್ತಿ ಸ್ವಾತಂತ್ರ ಕೊಟ್ಟಿದ್ದರೆ POK ಸೃಷ್ಟಿಯಾಗುತ್ತಿರಲಿಲ್ಲ. ಅದು ಮಾಡುವುದು ಬಿಟ್ಟು ವಿಶ್ವಸಂಸ್ಥೆಯ ಮೊರೆ ಹೋದರು.   ವಿಶ್ವಸಂಸ್ಥೆಯ ಆದೇಶದಂತೆ ಪಾಕೀಸ್ತಾನ ತನ್ನ ಸೈನ್ಯವನ್ನು POK ಇಂದ ವಾಪಸ್ ತೆಗೆದುಕೊಳ್ಳ ಬೇಕೆಂಬ ಆದೇಶವಿತ್ತು. ಅದನ್ನು ಪಾಕಿಸ್ತಾನ ಮಾಡದಿದ್ದಾಗ ಅದನ್ನು ವಿಶ್ವಸಂಸ್ಥೆಗೆ ಮನದಟ್ಟು ಮಾಡಲಿಲ್ಲ. 1971 ರಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಪಾಕೀಸ್ತಾನದ ಜೊತೆ ಸಿಮ್ಲಾ ಒಪ್ಪಂದದಡಿಯಲ್ಲಿ ಇದನ್ನು ಸರಿಪಡಿಸಿಕೊಳ್ಳುವ ಒಂದು ಅವಕಾಶವಿತ್ತು, ಅದೂ ನಡೆಯಲಿಲ್ಲ.
  ವಿಜಯೋತ್ಸವದ ಅವಸರದಲ್ಲಿ ಇದನ್ನೂ ಕಡೆಗಣಿಸಲಾಯಿತು.
  ಆಪರೇಷನ್ ಪರಾಕ್ರಮದಲ್ಲಿ ಯುಧ್ಧ ನಡೆಯದಿದ್ದರೂ ಸತ್ತವರ ಸಂಖ್ಯೆ 700 ದಾಟಿತ್ತು. ಪಾಕೀಸ್ತಾನವಂತೂ ನಾಯಿಬಾಲ ಡೊಂಕು ಎನ್ನುವಂತೆ ಮತ್ತೆ ಭಯೋತ್ಪಾದನೆಯ ತವರಾಯಿತು.
  ಆಪರೇಶನ್ ಪರಾಕ್ರಮದಲ್ಲಿ ಕಲಿತದ್ದೇನೆಂದರೆ,
  1.   ಭಯೋತ್ಪದಕರ ದಾಳಿಗೆ ಒಂದು ಸಾಂಪ್ರದಾಯಕ ರೀತಿಯ ಯುಧ್ಧ ಪರ್ಯಾಯವಲ್ಲ. ಇಸ್ರೇಲಿ ಮಾದರಿಯಲ್ಲಿ ಭಯೋತ್ಪಾದನೆಯನ್ನು  ಹುಟ್ಟಿಸುವವರನ್ನು ,ಪ್ರೇರೇಪಿಸುವವರನ್ನು ಅವರದೇ ಮಾದರಿಯಲ್ಲಿ ನಿಷ್ಕ್ರಿಯೆಗೊಳಿಸಬೇಕು.
  2.   ಯುಧ್ಧವೇ ಆಗಬೇಕು ಎನ್ನುವ ನಿರ್ಧಾರವಾದರೆ ಅದರ ನಿರ್ದಿಷ್ಟ ಗುರಿಗಳನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಬೇಕು.


No comments:

Post a Comment