Wednesday, March 22, 2017

ಅಕ್ಷಯ..ಅಮರ..-3

ಭೂಮಿ, ಆಕಾಶ, ವಾಯು, ಜಲ ಮತ್ತು ಅಗ್ನಿ...
ಹುಂ.. ಅಂತಿಮವಾಗಿ ಅಗ್ನಿಯಲ್ಲಿ..ಪಂಚಭೂತಗಳಲ್ಲಿ‌‌..
ಲೀನವಾದ ನನಗೆ ಮಾನವ ಸಹಜ ಭಾವನೆಗಳಿಲ್ಲವಂತಿಲ್ಲ. ಮಾತೃ ಪ್ರೇಮ, ದೇಶಪ್ರೇಮ ಇವೆಲ್ಲಾ ಅಳಿಸಿ ಹೋಗಲಾರದ ಮನೋಧರ್ಮಗಳು.

  Good night ಅಮ್ಮಾ...ಎಂದು ಮಲಗಿದವನು, ಬೆಳಗ್ಗೆ ಕಣ್ಣುಬಿಡುವ ಮುಂಚೆನೇ ಹೊರಡುತ್ತಿದ್ದ ಶಬ್ದ..ಅಮ್ಮಾ. 
ನನಗೆ ಕನ್ನಡಕ ಬಂದಮೇಲಂತೂ  'ಅಮ್ಮಾ ನನ್ನ ಕನ್ನಡಕ ಕಾಣುತ್ತಾ ಇಲ್ಲ' ಎನ್ನುವುದೇ ನನ್ನ ಸುಪ್ರಭಾತ. ಇದಕ್ಕೆಂದೇ ಅಮ್ಮ ಇನ್ನೊಂದು ಜೊತೆ ಕನ್ನಡಕ ಮಾಡಿಸಿ ಬಿಟ್ಟರು. 'ಅಮ್ಮಾ ಕನ್ನಡಕ' ಅಂದ ಕೂಡಲೇ ಅದನ್ನು ತಂದು ಕೊಟ್ಟು ಬಿಡುವರು, ನಂತರ ನಾನು ಹಿಂದಿನರಾತ್ರಿ ಅಲ್ಲೆಲ್ಲೋ ಬಿಟ್ಟಿದ್ದ ಕನ್ನಡಕವನ್ನು ಜೋಪಾನವಾಗಿಟ್ಟು ಕೊಳ್ಳುತ್ತಿದ್ದರು... ಮರುದಿನ ಕೊಡಲು!

Akshay's Spectacles found by mother Meghna Girish
  ಹೀಗೆ ನಮ್ಮಮ್ಮನ ಸೆರಗಿನಲ್ಲೇ ಬೆಳದೆ..ಸೈನ್ಯಕ್ಕೆ ಸೇರುವವರೆಗೂ. ಆಮೇಲೆ ನಮ್ಮಿಬ್ಬರ 'ದೋಸ್ತಿ' ಮೊಬೈಲುಗಳಲ್ಲಿ ಮುಂದುವರೆಯಿತು. ವಾಟ್ಸಪ್ಪಿನಲ್ಲಿ ದಿನಕ್ಕೆ ನಾಲ್ಕೈದು ಸಲವಾದರೂ ಸಂದೇಶಿಸುತ್ತಿದ್ದೆವು.

ಈಗ ಅಮ್ಮ ದುಖಿಃಸುತ್ತಾಳೆ, ಎಲ್ಲರೂ ಕಣ್ಣೀರಿಡುತ್ತಿದ್ದಾರೆ..ಸಹಜವೇ.
   ಅವತ್ತು ಅಮ್ಮ, ಅಪ್ಪ, ನೇಹಾ ಮತ್ತು ಭಾವ ಪ್ರದೀಶ್ ನಗ್ರೋತಕ್ಕೆ ಬಂದಿದ್ದರು. ಆತಂಕವಾದಿಗಳನ್ನು ಹಿಮ್ಮೆಟ್ಟಿ ಕೊಂದು ಮುಗಿಸಿದ್ದನ್ನು ವಿವರವಾಗಿ ಹೇಳುತ್ತಿದ್ದರು ಕರ್ನಲ್ ಪ್ರಕಾಶ್. ಮಧ್ಯ ಮಧ್ಯ ಅಮ್ಮ ,ನೇಹಾರ ಅಳು... ನಾನಿಲ್ಲೇ ಇದ್ದೇನೆ ಅಮ್ಮಾ..ನಿನ್ನ ಹತ್ತಿರ.
   ಗುಂಡಿನೇಟು, ಗ್ರೆನೇಡಿನ ಸ್ಪೋಟದಿಂದ ನಾನು ಬಿದ್ದಿದ್ದ ಸ್ಥಳಕ್ಕೆ ಬಂದರು. ಕಣ್ಣು ತುಂಬಿ ಬಂತು ಅಮ್ಮನಿಗೆ. ಅಲ್ಲೇ ಬಿದ್ದಿದ್ದ ಒಂದು ಚಿಕ್ಕ ಕಲ್ಲನ್ನು ಎತ್ತಿಕೊಂಡಳು ಅಮ್ಮಾ..ನನ್ನ ನೆನಪಿನ Memento ದಂತೆ.
   ಅಲ್ಲೇ ಹತ್ತಿರದಲ್ಲೇ ಅದೇ ನನ್ನ ಕನ್ನಡಕ ಬಿದ್ದಿದ್ದನ್ನು ಈಗ ಎಷ್ಟೋ ದಿನಗಳಾದರೂ ಯಾರಿಗೂ ಕಾಣಿಸಲಿಲ್ಲವೇ..ಈಗ ಅಮ್ಮನೂ ಅದನ್ನು ದಾಟಿ ಕೊಂಡೇ ಹೋದಳು...ಅಮ್ಮಾ ಹಿಂತಿರುಗಿ ಬಾ..ನನ್ನ ಕನ್ನಡಕ ಎತ್ತಿಕೊಂಡು ಹೋಗು ಎಂದು ಕೂಗ ಬೇಕಿನಿಸಿತು. ಸ್ವಲ್ಪ ದೂರ ಹೋದವಳು ತಿರುಗಿ ಬಂದಳು...ಆಗ ಕಾಣಿಸಿತು ಅಮ್ಮನಿಗೆ ನನ್ನ ಕನ್ನಡಕ.
   ಕಣ್ಣೀರಧಾರೆಯಲ್ಲೇ ತೊಳೆದು ಬಿಟ್ಟಳು ನನ್ನ ಕನ್ನಡಕವನ್ನು. ಅಂತೂ ನನ್ನ ಕನ್ನಡಕ ಅಮ್ಮನ ಬಳಿ ಜೋಪಾನವಾಯ್ತು. ಇನ್ನೆಂದೂ ನನ್ನ ಕನ್ನಡಕ ಹುಡಿಕಿಕೊಡು ಎನ್ನುವುದಿಲ್ಲ....
   ಆದರೆ ಅದು ಹೇಗೆ ನನ್ನ ಕನ್ನಡಕವನ್ನು ದಾಟಿಕೊಂಡು ಹತ್ತಾರು ಜನ, ಹಲವಾರು ದಿನ ಓಡಾಡಿದರು, ನಮ್ಮಮ್ಮನೂ ದಾಟಿಕೊಂಡು ಹೋದವಳು..ಮರಳಿ ಬಂದು ಎತ್ತಿಕೊಂಡಳು?
   "ತೆನವಿನ ತೃಣಮಪಿನ ಚಲತಿ"
   ನಿನ್ನ ಕರುಣೆ ಇಲ್ಲದೆ ಹುಲುಕಡ್ಡಿಯೂ ಅಲ್ಲಾಡದು.  
Akshya's Spectacles