Thursday, October 27, 2016

ದಾವಣಗೆರೆ ದಿನಚರಿ-3

ದಾವಣಗೆರೆ ದಿನಚರಿ-3

ದಾವಣಗೆರೆಯಲ್ಲಿ ಅಷ್ಟೊಂದು ಕಾರ್ಖಾನೆಗಳಿದ್ದರೂ ನಾವು ಚಿಕ್ಕವರಾಗಿದ್ದಾಗ ಈ ಕಮ್ಯುನಿಸ್ಟ್ ಎನ್ನುವ ಪದ ಕೇಳಿರಲಿಲ್ಲ. ಕಾರ್ಮಿಕರಲ್ಲೂ ಒಂದು ನಿಷ್ಠೆ ,ಸ್ವಾಮಿಭಕ್ತಿಯಿತ್ತು. ದಾವಣಗೆರೆ ಕಾಟನ್ ಮಿಲ್ಲಿನ ಸಮೀಪದಲ್ಲೇ ರಾಜನಹಳ್ಳಿ ಹನುಮಂತಪ್ಪನವರ ಭವ್ಯವಾದ ಬಂಗಲೆ ಇತ್ತು. ಅದು 'ಸಾಹುಕಾರರ ಮನೆ'ಎಂದೇ ನಮಗೆ ಪರಿಚಯಿಸಲಾಗಿತ್ತು. ಬೆರಗುಗಣ್ಣುಗಳಿಂದ ಆ ಮನೆಯನ್ನು ನೋಡುತ್ತಿದ್ದೆವು, ಬಂಗಲೆಯೊಳಗೇ ಸಿನಿಮಾ ಟಾಕೀಸು ಐತಂತೆ ಎಂದು ಮಾತಾಡಿಕೊಳ್ಳುತ್ತಿದ್ದೆವು. ಬಾಲ್ಯದ ಮೂರು ವರ್ಷಗಳು ದಾವಣಗೆರೆಯ ನಮ್ಮ ಸೋದರತ್ತೆ ಮತ್ತು ಸೋದರ ಮಾವನ ಮನೆಯಲ್ಲಿ ಬೆಳೆದೆ. ಬಹಳ ಸಂತೋಷದ ದಿನಗಳವು. ಭಾನುವಾರ ಬಂದಿತೆಂದರೆ ಎಲ್ಲಿಲ್ಲದ ಉತ್ಸಾಹ. ಚೀಲಗಳನ್ನೆಲ್ಲಾ ಜೋಡಿಸಿಕೊಂಡು ನಮ್ಮ ಮಾವನ ಸೈಕಲ್ಲಿನ ಹ್ಯಾಂಡಲ್ ಮೇಲೆ ಸವಾರನಾಗಿ ವಾರದ ದಿನಸಿ ತರಲು ಮಂಡಿಪೇಟೆಗೆ ಹೋಗುತ್ತಿದ್ದೆವು. ಆದರೆ ಮೊದಲು ಗಾಂಧೀ ಸರ್ಕಲ್ಲಿನ ಹತ್ತಿರದ ಕಾಮತ್ ಹೋಟಲಿನಲ್ಲಿ ಮಸಾಲೆ ದೋಸೆಯ ಸಮಾರಾಧನೆ! ಅದೇನು ಪರಿಮಳ, ಅದೇನು ರುಚಿ. ಸಂತೃಪ್ತ ಜೇವನ!.  ಅಲ್ಲಿಂದ ಮಂಡಿಪೇಟೆಗೆ. ವಾರಕ್ಕಾಗುವಷ್ಟು ದಿನಸಿ,ತರಕಾರಿ, ಹಣ್ಣುಗಳ ಖರೀದಿಯ ನಂತರ ಮನೆಗೆ ಮರಳುತ್ತಿದ್ದೆವು. ಅವತ್ತು ನಮ್ಮ ಸುನಂದಕ್ಕನ ಸ್ಪೆಷಲ್ ಅಡುಗೆ. ಕಾರಬೇಳೆ, ಜುನಕ ಮತ್ತು ಜೋಳದ ರೊಟ್ಟಿ. ಆ ರುಚಿ ಇನ್ನೂ ಬಾಯಿಗೆ ಮೆತ್ತಿ ಕೊಂಡಿದೆ. ಅವರು ತಿಂಡಿಗೆ ಮಾಡುತ್ತಿದ್ದ ಗೋದಿ ಕಡುಬು ಮತ್ತು ರಾಗಿ ಕೀಲಸ ಇನ್ನೂ ಅಧ್ಭುತ. ಈಗಿನ ಅಂತರಾಷ್ಟ್ರೀಯ ಖ್ಯಾತಿ ಪಡೆದ ದಾವಣಗೆರೆ ಬೆಣ್ಣೆ ದೋಸೆ ,ನರ್ಗೀಸ್ ಮಂಡಕ್ಕಿ ಮತ್ತು ಮಿರ್ಚಿಯ ಬಜ್ಜಿಗಳ ಪರಿಚಯವಿನ್ನೂ ಆಗಿರಲಿಲ್ಲ. ಮನೆಯಲ್ಲೇ ಸಂಪಾದ ಊಟೋಪಚಾರ ನಡೆಯುತ್ತಿದ್ದಾಗ ಹೊರಗಿನದಕ್ಕೇಕೆ ಹಂಬಲ.
       ಅವರ ಮನೆಯಲ್ಲಿ ಒಂದು ಮರ್ಫಿ ರೇಡಿಯೊ ಇತ್ತು. ಆಗಿನ ಕಾಲಕ್ಕೆ ಅದೇ ಒಂದು status symbol.
ನನಗೆ ಆಕಾಶವಾಣಿ ಭದ್ರಾವತಿಯಿಂದ, ರೇಡಿಯೊ ಸಿಲೋನ್ ವರೆಗೂ ಟ್ಯೂನ್ ಮಾಡಲು ಬರುತ್ತದೆ,ಕಾರ್ಯಕ್ರಮಗಳ ವಿವರವೂ ಗೊತ್ತು ಎನ್ನುವ ಸಣ್ಣಮಟ್ಟದ ಜಂಭಕೂಡ ಬೆಳೆದು ಬಿಟ್ಟಿತ್ತು. ನಮ್ಮ ರಾಮಾನುಜಂ ಮಾಮ ಬಹಳ ಧಾರ್ಮಿಕ ಪ್ರವೃತ್ತಿಯ ವ್ಯಕ್ತಿ. ಅವರ ಕೆಲವು ಸ್ನೇಹಿತರ ಜೊತೆಗೂಡಿ ಒಂದು ಮಠ ಸ್ಥಾಪಿಸಿದ್ದರು. ನಿಯಮಿತವಾಗಿ ಪೂಜೆ ಪುನಸ್ಕಾರಗಳು, ಭಜನೆಗಳು ನಡೆಯುತ್ತಿದ್ದವು, ರುಚಿ ರಚಿಯಾದ ಪ್ರಸಾದವೂ ಸಿಗುತ್ತಿತ್ತು. ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ದುಗ್ಗಮ್ಮನ ಜಾತ್ರೆಯ ಸಮಯದಲ್ಲಂತೂ ದಾವಣಗೆರೆಯ ಪೇಟೆಗಳಲ್ಲಿ, ಓಣಿಗಳಲ್ಲಿ ಮತ್ತು ಮನೆ ಮನಗಳಲ್ಲೂ ಸಂತೋಷದ,ಸಂಭ್ರಮದ ಹೊಳೆಯೇ ಹರಿಯುತ್ತಿತ್ತು. ಅದೆಷ್ಟು ಜನ ನೆಂಟರಿಷ್ಟರು ಸೇರುತ್ತಿದ್ದರು,ಅದಲ್ಲೆಲ್ಲಿಂದ ಬರುತ್ತಿದ್ದರು.  ಮೂರು ದಿನಗಳ ಈ ಜಾತ್ರೆಯ ರಂಗು, ಸಡಗರ,ಗದ್ದಲ, ಗಲಾಟೆ,ಮುಗಿಯದ ಮಾತುಕತೆಗಳು,ಅಧ್ಭುತವಾದ ಊಟೋಪಚಾರಗಳು.. ಮುಗಿಯಲೇಬಾರದು, ಜೀವನ ಹೀಗೆ ಮುಂದುವರೆಯಬಾರದೇಕೆ ಎನಿಸುತ್ತಿತ್ತು.
ಆದರೆ ವಿಧಿಯಾಟವೇ ಬೇರಿತ್ತು...ಅಚಾನಕ್ಕಾಗಿ ಗಂಗೂರಿನಲ್ಲಿ ನಮ್ಮ ಅಜ್ಜಿ ಪುಟ್ಟಮ್ಮ ಅಕಾಲ ಮರಣಕ್ಕೆ ತುತ್ತಾದರು. ಆಗ ನಮ್ಮ ತಂದೆಯವರು ಚಿಕ್ಕಮಗಳೂರಿನಲ್ಲಿ ಮೇಷ್ಟ್ರಾಗಿದ್ದರು. ಎಲ್ಲರನ್ನೂ ಅಲ್ಲಿಗೇ ಕರೆದುಕೊಂಡು ಹೋಗುವ ನಿರ್ಧಾರವಾದ ಮೇಲೆ ನನ್ನನ್ನೂ ದಾವಣಗೆರೆಯಿಂದ ಚಿಕ್ಕಮಗಳೂರಿಗೆ ವರ್ಗಾಯಿಸಿದರು. ಮುಂದೆ ಪಿಯುಸಿ ಓದಲು ಪುನಃ ದಾವಣಗೆರೆಗೆ ಬಂದೆ. ಈ ನಡುವೆ ಆಗಾಗ ರಜಾದಿನಗಳಲ್ಲಿ ದಾವಣಗೆರೆಗೆ ಹೋಗಿಬರುತ್ತಿದ್ದೆ. ಪ್ರತಿಸಲ ಬಂದಾಗಲೂ ಪರಿವರ್ತನೆಗಳು ಕಾಣುತ್ತಿದ್ದವು. ಕೆಂಬಣ್ಣದ ಉದಯವಾಯಿತು, ಮುಗ್ದತೆ ಮುಗಿದೇ ಹೋಯಿತು, ಶರಣ್ರೀಯಪ್ಪಾ ಅಂತಿದ್ದವರೆಲ್ಲಾ ಲಾಲ್ ಸಲಾಮ್ ಅನ್ನೋಕೆ ಶುರುಮಾಡಿದರು. ಕಾಗುಣಿತ ಕಲಿಯದವರೂ ಕಾಮ್ರೇಡುಗಳಾಗಿಬಿಟ್ಟರು. ಹಳಸಿದ ಸಿದ್ದಾಂತಗಳ ಪುಸ್ತಕಗಳು ಹರಿದಾಡತೊಡಗಿದವು.    
    ಮಿಸೈಲ್ ತಾಂತ್ರಿಕತೆಯಲ್ಲಿ ಒಂದು K4 ಎನ್ನುವ ಒಂದು ಕಮಾಂಡ್ ಇದೆ. ಇದನ್ನು ಯಾವಾಗ ಉಪಯೋಗಿಸುತ್ತಾರೆಂದರೆ ಮಿಸೈಲ್ ನಿಯಂತ್ರಣ ತಪ್ಪಿದಾಗ.ಇದೊಂದು self destruction command. ಮಿಸೈಲನ್ನು ಸ್ಪೋಟಿಸಲೇ ಬೇಕು ಇಲ್ಲದಿದ್ದರೆ ಅದು ನಮ್ಮ ದೇಶದ ಆಸ್ತಿಗೆ ಮುಳುವಾಗಬಹುದು. ಆದರೆ ಇದರಲ್ಲಿ collateral damage..ಸಾಂಭವಿಕ ಹಾನಿ ಆಗುವುದು ಅನಿವಾರ್ಯ.
    ಶಬ್ದವಡಗಿ ಸತ್ತು ಬಿದ್ದಿರುವ ಸೈರನ್ನುಳಿಗೆ ಪುನಃ ಜೀವ ಕೊಡುವುದು ಅಸಾಧ್ಯ ಆದರೆ ಇರುವ ಸೈರನ್ನುಗಳ ಕಹಳೆ ಮೊಳಗಲಿ. ಏನಂತೀರಾ?   

No comments:

Post a Comment