ದೂರದಿಂದ ಬಂದವರು
ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು.
ತೀರ್ಥಹಳ್ಳಿಯ ಸಮೀಪದ ಕ್ಷೇಮಾಪುರದಿಂದ ವಿಜಯನಗರಕ್ಕೆ ಕಾಲುನಡಿಗೆಯಿಂದ ಬಂದವರಿಗೆ... ದೂರವೇ
‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ.
ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ವ್ಯಾಪಾರಕ್ಕೆ ಬರುತ್ತಿದ್ದಾಗ ವಿಜಯನಗರದಲ್ಲಿ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.
ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಒಳದಂಗೆ, ಉತ್ತರಕ್ಕೆ ಬಹಮನಿ ಮುಸ್ಲೀಮರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ..ಹೊಂಚುಹಾಕುತ್ತಿದ್ದ ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಾದಿ ಉದ್ದಕ್ಕೂ.
ಕೃಷ್ಣದೇವರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..
'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ಸಾಹಸ, ಶೌರ್ಯಗಳ ವೃತ್ತಾಂತವನ್ನೇ ಬಿಚ್ಚಿಡುತ್ತಿದ್ದರು.
ಕೃಷ್ಣದೇವರಾಯರ ಮೊದಲ ಆದ್ಯತೆ ಒಂದು ಒಳ್ಳೆಯ ಸೈನ್ಯಕಟ್ಟಬೇಕು, ಸೈನಿಕರ ತರಬೇತಿಗೆ, ಅರಬ್ಬೀ ದೇಶದ ಕುದುರೆಗಳನ್ನು, ದಕ್ಷಿಣದಿಂದ ಆನೆಗಳನ್ನು ತರಲು ಹಣದ ಕೊರತೆಯಿದ್ದಾಗ ನಮ್ಮವರಿಂದ ಆರ್ಥಿಕ ಸಹಾಯ ಪಡೆದರಂತೆ.ಸಹಾಯ ಉಹುಂ, ಇವರದು ಸಹಾಯಮಾಡುವ ಜಾಯಮಾನವೇ ಅಲ್ಲ..ಆಗ, ಶ್ರೀನಿವಾಸ ನಾಯಕರಾಗಿದ್ದಾಗ.., ಶುಧ್ಧ ವ್ಯವಹಾರದ ಲೆಕ್ಕಾಚಾರ.ಕೃಷ್ಣರಾಯರಿಂದಲೇ ಮುಂದೆ ವಿಜಯನಗರದ ಸಂಪತ್ತು ವೃಧ್ಧಿಸಲಿದೆ ಎನ್ನುವ ಬಲವಾದ ನಂಬಿಕೆ ಮತ್ತು ಆಗ ಬರಬಹುದಾದ ಇಮ್ಮಡಿ, ಮುಮ್ಮಡಿ ಗಾತ್ರದ ಲಾಭದ ಆಸೆ. ಅದು ಹಾಗೇ ಆಯಿತು ಕೂಡ. 'ಕುದುರೆ ಶೆಟ್ಟರು' ಎನ್ನುವ ವ್ಯಾಪಾರಿಗಳ ಗುಂಪಿಗೆ ಧಾರಾಳವಾಗಿ ಸಾಲ ಕೊಟ್ಟರಂತೆ. ಇವರು ಅರಬ್ಬೀ ದೇಶದಿಂದ ಕುದುರೆಗಳನ್ನು ತರಿಸಿ ವಿಜಯನಗರದ ಸೈನ್ಯಕ್ಕೆ ಕೊಡುತ್ತಿದ್ದರಂತೆ. ಮುಂದಿನ ಯುಧ್ಧಕ್ಕೆ ಸೈನ್ಯ ಸನ್ನಧ್ಧವಾಗಿದ್ದೇ ತಡ ಸಾಮ್ರಾಜ್ಯ ವಿಸ್ತರಣೆಯ ಪ್ರಕ್ರಿಯೆ ಶುರು. ಕೃಷ್ಣದೇವರಾಯರೇ ಮಂಚೂಣಿಯಲ್ಲಿ ನಿಂತು ವೀರಾವೇಷದಿಂದ ಕಾದಾಡಿ ಆ ಪ್ರಾಂತ್ಯದ ರಾಜರನ್ನು ಸೋಲಿಸಿ ಅಲ್ಲಿಯ ಸಂಪತ್ತನ್ನು ವಿಜಯನಗರದ ಬೊಕ್ಕಸಕ್ಕೆ ತುಂಬಿಸಿಬಿಟ್ಟಿರುತ್ತಿದ್ದರಂತೆ. ತೀರ್ಥಹಳ್ಳಿಯಿಂದ ಮುಂದಿನ ಸಲ ವಜ್ರದ ವ್ಯಾಪಾರಕ್ಕೆ ಹೋದಾಗ ಇಮ್ಮಡಿ ಗಾತ್ರದ ಧನರಾಶಿ ಇವರಿಗೆ ಖುದ್ದಾಗಿ ಕೃಷ್ಣದೇವರಾಯರೇ ಒಪ್ಪಿಸುತ್ತಿದ್ದರಂತೆ.
ಅದೆಲ್ಲಾ ತುಂಬಾ ಹಳೆಯ ವಿಷಯ....'ನನ್ನ ಮೂಗುತಿಯ ಪ್ರಸಂಗದ' ನಂತರ ನಡೆದ ಘಟನಾವಳಿಗಳು ಜಗಜ್ಜಾಹೀರಾದ ಸಂಗತಿ. ಅದನ್ನೆಲ್ಲಾ ಇಲ್ಲೇನು ಹೇಳುವುದು? ಅದನ್ನೆಲ್ಲಾ ಬಿಚ್ಚುತ್ತಾ ಹೋದರೆ ವಿಜಯನಗರದ ವೃತ್ತಾಂತವೇ ಮರೆತು ಹೋಗುತ್ತದೇನೋ.
“ಆದದ್ದೆಲ್ಲಾ ಒಳಿತೇ ಆಯಿತು “..ಎಂದು ಎಂದು ಮೊಟ್ಟ ಮೊದಲಿಗೆ ಹಾಡಲು ಶುರು ಮಾಡಿಕೊಂಡಾಗ ನನಗೇ ಆಶ್ಚರ್ಯವಾಯಿತು...ಯಾರಾದರೂ ಈ ಹಂತಕ್ಕೆ ಬದಲಾಗುವುದು ಸಾಧ್ಯವೇ ಅಂತ.
ಇವರು ಇರುವುದೇ ಹಾಗೇ, ಏನು ಮಾಡಿದರೂ ಒಂದು ಹುಚ್ಚು,ತೀವ್ರತೆ ಮತ್ತು ಆಸ್ಥೆಯಿಂದ ಮಾಡುತ್ತಾರೆ. ವಜ್ರದ ವ್ಯಾಪಾರದಲ್ಲಿ, ಲೇವಾದೇವಿ ವ್ಯವಹಾರದಲ್ಲಿ ಕೋಟಿ ಕೋಟಿ ಗಳಿಸಿದರು. ಆದರೆ ಇದಲ್ಲಾ ನಶ್ವರ..ಆ ಹರಿಯೇ ಎಲ್ಲಾ ಅಂದೆನಿಸಿದ ಕೂಡಲೇ ಕಿಂಚಿತ್ತೂ ಯೋಚಿಸದೆ ಎಲ್ಲವನ್ನೂ ತ್ಯಜಿಸಿ ಭಕ್ತಿಯಸಾಗರದಲ್ಲಿ ಮುಳುಗಿ ಹೋದರು.
ಸದ್ಯ ಅಂತೂ ಇಲ್ಲಿಗೆ ಬಂದು ತಲುಪಿದೆವು. ಕೃಷ್ಣದೇವರಾಯರನ್ನು ಭೇಟಿ ಮಾಡಿದಾಗ ದೇವರಾಯರಿಗೆ ಎಲ್ಲಿಲ್ಲದ ಆಶ್ಚರ್ಯ 'ಏನು ಶ್ರೀನಿವಾಸ ನಾಯಕರೇ..ನನಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದವರು ಎಲ್ಲವನ್ನೂ ತ್ಯಾಗಮಾಡಿ ಇದೇನು ಅವತಾರ?' ಎಂದಾಗ 'ನಿಮಗೆ ಬೇಕಾಗಿರುವುದು ರಾಜ್ಯ, ನನಗೆ ಹರಿ ಸ್ಮರಣೆಯಷ್ಟೇ ಸಾಕು..' ಎಂದುಬಿಡೋದೇ!
ಮುಂದೆ ತಿರುಪತಿಯಿಂದ ವ್ಯಾಸತೀರ್ಥರನ್ನು ಮಹಾರಾಜರೇ ಕರೆದುಕೊಂಡು ಬಂದು 'ರಾಜಗುರು' ಪಟ್ಟವನ್ನಲಂಕರಿಸಲು ಮನವಿಮಾಡಿಕೊಂಡ ಮೇಲೆ ವ್ಯಾಸರು ಮಾಡಿದ ಮೊದಲ ಕಾರ್ಯವೆಂದರೆ ಇವರಿಗೆ 'ಪುರಂದರ ದಾಸ' ಎಂದು ದೀಕ್ಷೆ ಕೊಡಿಸಿದ್ದು.
ನವರಾತ್ರಿಯ ಸಮಾರಂಭವನ್ನು ವಿದೇಶಗಳಲ್ಲೆಲ್ಲಾ ವರ್ಣಿಸಲಾಗಿದೆಯಂತೆ. ಅಂತಹ ಅಧ್ಭುತ ಅನುಭವದ ಮಧ್ಯದಲ್ಲೇ ಒಂದು ನವರಾತ್ರಿಯ ಸಮಾರಂಭದಂದು ನಮಗೇ ಎಂದು 'ಪುರಂದರ ಮಂಟಪ' ದ ಉಧ್ಘಾಟನೆಯಾಯಿತು. ತುಂಬಿ ಹರಿಯುತ್ತಿದ್ದ ತುಂಗಾನದಿಯ ತೀರದ ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿಸಿದ ಈ ವಿಶಾಲವಾದ ಮಂಟಪದಿಂದ ಎತ್ತ ನೋಡಿದರೂ ಪೃಕೃತಿಯ ವೈಭವ, ದೇವಸ್ಥಾನಗಳ ಗೋಪುರಗಳು, ಜುಳು ಜುಳು ಶಬ್ದದೊಂದಿಗೆ ಬೆರೆತು ಹೋಗುತ್ತಿದ್ದ ಹಕ್ಕಿಗಳ ಕಲರವ.
ಭಕ್ತಿ ಸಂಗೀತ ಅವಿರತವಾಗಿ ಹರಿಯಲು ಪ್ರಶಸ್ತ ಸ್ಥಳ.
ಅಂದಿನಿಂದ ಅಲ್ಲೇ ನಮ್ಮವಾಸ. ಅಲ್ಲಿಗೆ ಕನಕದಾಸರೂ ನಿಯಮಿತವಾಗಿ ಬರಲು ಪ್ರಾರಂಭಿಸಿದ ಮೇಲಂತೂ ಅದು ಭಕ್ತಿಯ ಕೇಂದ್ರವಾಯಿತು, ಹರಿಭಜನೆಯ ಬೀಡಾಯಿತು. ಕೆಲವು ಸಲ ಕೃಷ್ಣದೇವರಾಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ದಕ್ಷಿಣದ ತುದಿಯಿಂದ ಕೃಷ್ಣ ಗೋದಾವರಿಗಳನ್ನು ದಾಟಿ ಕಳಿಂಗದ ದೇಶದ ವರೆಗೂ ಹರಡಿರುವ ಸಾಮ್ರಾಜ್ಯದ ಅಧಿಪತಿ...ಪುರಂದರ ಮಂಟಪದಲ್ಲಿ ಒಬ್ಬ ಸಾಮಾನ್ಯ ಭಕ್ತರಂತೆ ಕುಳಿತು ಇವರ ಗಾನಸುಧೆಯಲ್ಲಿ ಮಿಂದು ಹೋಗುತ್ತಿದ್ದರು.
'ಕನ್ನಡ ರಾಜ್ಯ ರಮಾರಮಣ' ಬಿರುದು ಪಡೆದ ಅಪ್ರತಿಮ ವೀರನನ್ನೂ ಭಕ್ತಿಯ ಹೊಳೆಯಲ್ಲಿ ಮೀಯಿಸಿ ಬಿಡುತ್ತಿದ್ದವು ಪುರಂದರ ದಾಸರ ಕೀರ್ತನೆಗಳು.
ಕಾಲಚಕ್ರ...ಉರುಳುತ್ತಾ ಮುಂದೊಂದು ದಿನ ವಿಜಯ ವಿಠ್ಠಲನ ಮೂರುತಿಯನ್ನು ಇದೇ ಮಂಟಪದಲ್ಲಿ ರಕ್ಷಿಸುವ ದುರ್ವಿದಿಯೂ ಬಂದೆರಗಿತು. ಕೃತಜ್ಞತಾ ಭಾವದಿಂದ ವಿಠ್ಠಲನ ಆರಾಧಕರಿಗೆ ಅರ್ಪಪಿಸಿದ ಈ ಮಂಟಪವೇ ವಿಠ್ಠಲ ಮೂರುತಿಗೆ ಆಸರೆಯಾಯಿತು..
ದೂರದಿಂದ ಬಂದಿದ್ದಕ್ಕೂ ಸಾರ್ಥಕವಾಯಿತು.
ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com