Thursday, November 10, 2016

ಪಾಂಡಿಚೆರಿಯ ಪ್ರಸಂಗಗಳು-5

        

ಪಾಂಡಿಚೆರಿ ತಲುಪಿದ ನಾಲ್ಕೇದಿನಕ್ಕೆ ದೀಪಾವಳಿ ಹಬ್ಬ. ಹಬ್ಬದ ಸಮಯದಲ್ಲಿ ಕಾರುಗಳ ಮಾರಾಟ ಎಷ್ಟು ಆಕರ್ಷಕವಾಗಿತ್ತೆಂದರೆ, ಒಂದು ವಿನಿಮಯ ಕೊಡುಗೆಯಲ್ಲಿ ಹಳೇ ಕಾರನ್ನು ಬದಲಿಸಿ ಒಂದು ಹೊಸ ಕಾರನ್ನು ಖರೀದಿಸಿಯೇ ಬಿಟ್ಟೆ. ತಮಿಳರ ಸಾಂಪ್ರದಾಯಕತೆಯ ಪರಿಚಯವೂ ಅದರೊಂದಿಗೆ ಪರಿಚಯವಾಯಿತು. 'ನೀವು ಪೂಜಾ ಡ್ರೈವ್ ಯಾವಾಗ ಮಾಡುತ್ತೀರಾ?' ಎಂದು Hyundi ನ ಅಂಬುಮಣಿ ಕೇಳಿದಾಗ ಒಂತರ ಮೋಜೆನಿಸಿತು. ಆದರೆ ಇವರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ರಾಹುಕಾಲವಿರಬಾರದು, ಮನೆದೇವರ ದೇವಸ್ಥಾನದಲ್ಲೇ ಕಾರಿನ ಪೂಜೆಯಾಗಬೇಕು, ಹಾಗೆ. ಮರುದಿನ ಸಾಯಂಕಾಲ ಐದು ಗಂಟೆಗೆ ಬರುತ್ತೇನೆ ಎಂದೆ‌. ಮನಸ್ಸಿನಲ್ಲಾಗಲೇ ನಿರ್ಧರಿಸಿದ್ದೆ, ಸಮುದ್ರತಟಕ್ಕೆ ಸಮಾನಾಂತರವಿರುವ ECR ಹೆದ್ದಾರಿಯಲ್ಲಿ ಒಂದು ಅರ್ಧಗಂಟೆ ಡ್ರೈವ್ ಮಾಡಿ ಒಂದು ಬೀಚಿನಲ್ಲಿ ಸೂರ್ಯಾಸ್ತ ವೀಕ್ಷಿಸಿ ವಾಪಾಸು ಬರುವುದೆಂದು. ಅದೆಂತಹ ಅಧ್ಭುತ ಅನುಭವ. ರಸ್ತೆಯ ಬಲಗಡೆ ಸಮುದ್ರತಟದ ಉದ್ದಕ್ಕೂ ಬಣ್ಣ ಬಣ್ಣದ ದೋಣಿಗಳು, ಸಂಜೆಯ ಪ್ರಶಾಂತವಾದ ನೀಲಿ ಸಮುದ್ರ. ಎಲ್ಲೆಲ್ಲೂ ಸುಂದರ ಪ್ರಕೃತಿಯದೇ ಕಾರುಬಾರು. ಎಡಬದಿಗೆ ಹಸಿರಿನ ಸಿರಿ. ತೆಂಗು, ಬಾಳೆ, ಭತ್ತಗಳ ದರ್ಬಾರು. ಅಲ್ಲಲ್ಲಿ ಸಣ್ಣ ಪುಟ್ಟ ಹಳ್ಳಿಗಳು, ಮೀನುಗಾರರ ಗುಡಿಸಲುಗಳು. ಹಿಂತಿರುಗಲು ಮನಸ್ಸಾಗುತ್ತಲೇ ಇಲ್ಲ, ಸೌಂದರ್ಯ ಆಸ್ವಾದನೆಯಲ್ಲಿ ಅದು ಯಾವಾಗ 'ಕಡ್ಡಲೂರಿಗೆ 'ಬಂದು ತಲುಪಿದೆನೋ ತಿಳಿಯಲೇ ಇಲ್ಲ. ಸರಿ ನನ್ನ ಪೂಜಾ ಡ್ರೈವ್ ಮುಗಿಯಿತು ಎಂದು ವಾಪಾಸಾದೆ. ಆಕಾಶದಿಂದ ಪಾಂಡಿಚೆರಿಯ ಸೌಂದರ್ಯವನ್ನು ಆಸ್ವಾದಿಸಿದೆ, ಈಗ ಭೂಮಿಯ ಮೇಲೂ ಒಂದು ಹಂತದ ಪರಿಚಯವಾಯಿತು, ಇನ್ನುಳಿದಿರುವುದು ಸಮುದ್ರದ ಮಾರ್ಗದ ಮುಖಾಂತರ, ಅದಕ್ಯಾವಾಗ ಗಳಿಗೆ ಕೂಡಿಬರುವುದೋ ಎಂದು ಯೋಚಿಸುತ್ತಿದ್ದೆ. ನಾನು ಹೋಗಲಿಲ್ಲ..ಅದೇ ಬಂತು!
 
     25 ಡಿಸಂಬರ್ ರಾತ್ರಿ ಆಶೋಕ ಹೋಟಲಿನ ವ್ಯವಸ್ಥೆ ಎಲ್ಲಾ ಚೆನ್ನಾಗಿದೆ ಎನ್ನುವ ಸಂದೇಶ ನನ್ನ ವಾಯುಸೇನೆಯ ಮಿತ್ರರಿಂದ ಬಂದ ಮೇಲೆ, ನಮ್ಮ ಶ್ರೀಮತಿಯವರೊಂದಿಗೆ ನಾವೂ ಕೂಡ ಒಂದು ರೆಸ್ಟೋರೆಂಟಿನಲ್ಲಿ ಸ್ಥಿತವಾದೆವು.  Seagull ರೆಸ್ಟೋರೆಂಟು ಸಮುದ್ರದ ಮೇಲೆ ಮರದ ದಿಮ್ಮಿಗಳ ಮೇಲೆ ಹಲಗೆಗಳನ್ನು ಪೇರಿಸಿ  ನಿರ್ಮಿಸಲಾಗಿದೆ‌. ಸಮುದ್ರದ ಅಲೆಗಳ ಶಬ್ದವೊಂದನ್ನು ಬಿಟ್ಟರೆ ಪ್ರಶಾಂತವಾದ ವಾತಾವರಣವೇ. ಅವತ್ತು ರಾತ್ರಿ ಹೆಚ್ಚು ಜನಸಂದಣಿ ಇರಲಿಲ್ಲ, ಹಾಗಾಗಿ ತಡರಾತ್ರಿಯವರೆಗೂ ಅಲ್ಲೇ ಕೂತಿದ್ದೆವು. It was a romantic evening!  ಅಲ್ಲಿಂದ ಹೊರಡುವಾಗ ಲೇಟಾಗಿತ್ತು. ಮರುದಿನದ sky diving ನ ಪ್ರದರ್ಶನವಿದ್ದುದರಿಂದ ಬೆಳಗಿನ ಫ್ಲೈಯಿಂಗ್ ಮಾಡುವುದು ಬೇಡ ಎನಿಸಿತು. ಅಂತೆಯೇ ನಮ್ಮ ತಾಂತ್ರಿಕ ತಂಡದ ಮುಖ್ಯಸ್ಥರಿಗೆ ಮೊಬೈಲಿನಲ್ಲಿ ವಿಷಯ ತಿಳಿಸಿದೆ.
     26  ಡಿಸೆಂಬರ್, ಬೆಳಗಿನ ಮೊದಲ ಕರೆ ಬಂದಿದ್ದು ಪಾಂಡಿಚರಿಯ ಲೆಫ್ಟಿನೆಂಟ್ ಗವರ್ನರ್ ಕಛೇರಿಯಿಂದ!
     ಅವರ ಕಾರ್ಯದರ್ಶಿ ಮಾತಾಡಿದರು, ಸಮುದ್ರತೀರದಲ್ಲಿ ಅತಿ ಉಬ್ಬರ ಬಂದು ನೀರು ಒಳ ಪ್ರದೇಶಗಳಿಗೆ ನುಗ್ಗಿದೆಯಂತೆ, ಕೆಲವು ಕಡೆ ಪ್ರಾಣಹಾನಿಯಾಗಿರುವ ಹೆದರಿಕೆಯೂ ಇದೆ, ಕೂಡಲೇ ಒಂದು ರೌಂಡು ವಾಯು ವೀಕ್ಷಣೆ ನಡೆಸಿ ವರದಿ ಕೊಡಲು ಸಾಧ್ಯವೇ ಎಂದರು. ಸರಿ ಆಗಬಹುದು ಎಂದು ಏರ್ಪೋರ್ಟಿನ ಕಡೆ ದೌಡಾಯಿಸಿದೆ. ಇದಾವುದರ ಅರಿವೇ ಇಲ್ಲದಂತೆ ಅಂದಿನ sky diving ಕಾರ್ಯಕ್ರಮವನ್ನು ನೋಡಲು ಜನಸಾಗರವೇ ಏರ್ಪೋರ್ಟಿನ ಸಮೀಪದ ಕ್ರೀಡಾಂಗಣದೆಡೆಗೆ ಹರಿದು ಬರುತ್ತಿದೆ. ಅಷ್ಟರಲ್ಲಿ ಒಂದು ವಿಡಿಯೋ ಕ್ಯಾಮರದ ಏರ್ಪಾಡು ಮಾಡಲು NCC ಅಧಿಕಾರಿಯೊಬ್ಬರಿಗೆ ತಿಳಿಸಿದೆ. ಅಷ್ಟೋತ್ತಿಗೆ ಸುಮಾರು ಒಂಬತ್ತು ಗಂಟೆ. ವಿಡಿಯೋ ಕ್ಯಾಮರ ಹಿಡಿದುಕೊಂಡು ಬಂದವರನ್ನೇ ಕೂರಿಸಿಕೊಂಡು ಗಗನಕ್ಕೇರಿದೆವು.
      ಏರ್ಪೋರ್ಟಿನ ಮತ್ತು ಸಮುದ್ರದ ಮಧ್ಯ ಇರುವ ಅಶೋಕ ಹೋಟಲಿನ ಮೇಲೆ ಹಾರಾಡುವಾಗ...ನೋಡೋಣ ನಮ್ಮ ಮಿತ್ರರಿಗೊಂದು ಸರ್ಪ್ರೈಸ್ ಕೊಡೋಣ ಎಂದು ಹೋಟಲಿನ ಟೆರೇಸಿನ ಮೇಲೆ ರೌಂಡು ಹೊಡೆಯೋಣ ಎನಿಸಿತು, ವಿಡಿಯೋ ರೆಕಾರ್ಡಿಂಗು ಮಾಡಿ ಎಂದೆ. ನೋಡಿದರೆ ಸಮುದ್ರದ ನೀರು ಹೋಟಲು ಸುತ್ತಲೂ ಆವರಿಸಿದೆ. ಟೆರೇಸಿನ ಮೇಲೆ ಜನರು ನಮ್ಮ ಕಡೆ ಕೈ ಬೀಸುತ್ತಿದ್ದಾರೆ! ಇನ್ನೂ ಸ್ವಲ್ಪ ಕೆಳಗೆ ಬಂದು ಸುತ್ತು ಹಾಕಿದೆ ಅನುಮಾನವೇ ಇಲ್ಲ ನಮ್ಮ ಏರ್ಫೋರ್ಸ್ ಮಿತ್ರರೂ ಅಲ್ಲಿದ್ದಾರೆ. ಇದೇನೋ ದೊಡ್ಡ ಅನಾಹುತ ಎಂದು ಮೊಟ್ಟ ಮೊದಲಿಗೆ ಅನಿಸಿತು. ಸಮುದ್ರದ ದೊಡ್ಡ ಅಲೆಗಳೇನು ಕಾಣಿಸಲಿಲ್ಲ ಆದರೆ ಸಮುದ್ರದ ಬಣ್ಣ ಕೆಂಪಾಗಿತ್ತು. ದೂರ ದೂರದ ವರೆಗೂ ಒಂದು ದೋಣಿಯೂ ಕಾಣಲಿಲ್ಲ. ಇಷ್ಟೊತ್ತಿಗೆ ಮೀನು ಹಿಡಿಯಲು ಹೋದ ದೋಣಿಗಳು ಮರಳುವ ಸಮಯ. ಏನೇಯಿತು ಈ ದೋಣಿಗಳಿಗೆ? ಸಮುದ್ರವನ್ನೇ ನೋಡುತ್ತಿದ್ದ ನಮಗೆ ಹೆದ್ದಾರಿಯ ಈ ಕಡೆ ನೋಡಿದರೆ
  ಇನ್ನೂ ಗೊಂದಲ ಹುಟ್ಟಿಸುವ ಕೆಲವು ದೃಷ್ಯಗಳು ಕಂಡು ಬಂದವು. ಬಣ್ಣ ಬಣ್ಣದ ದೋಣಿಗಳು ಹೆದ್ದಾರಿಯನ್ನು ದಾಟಿ ಆಕಡೆ ಚಲ್ಲಾಪಿಲ್ಲಿಯಾಗಿದ್ದವು. ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ ನಮ್ಮ ಮಿತ್ರ ಒಂದೇ ಸಲ ಚೀತ್ಕರಿಸಿದರು ' ಸರ್ ಇಲ್ಲೊಂದು ಹಳ್ಳಿಯಿತ್ತು, ನಮ್ಮ ಸಂಬಂದಿಕರು ಇಲ್ಲೇ ಇದ್ದರು' ಇನ್ನೂ ಸ್ವಲ್ಪ ಕೆಳಗೆ ಬಂದೆವು ಆಗ ಆಯಿತು ನೋಡಿ ಪ್ರಕೃತಿ ವಿಕೋಪದ ಪರಿಚಯ,ಅದೇನು ಕ್ರೌರ್ಯರೂಪ. ನೆಲಸಮವಾದ ಗುಡಿಸಲುಗಳು,ಬಣ್ಣದ ಸೀರೆಯುಟ್ಟ ಹೆಣ್ಣುಮಕ್ಕಳ ಶವಗಳು,ಮುರಿದು ಬಿದ್ದ ತೆಂಗಿನ ಮರಗಳು, ಚೀರಾಡುತ್ತಿರುವ ಹಕ್ಕಿಗಳು,ದೇವರೇ ಇದಲ್ಲಾ ಸುಳ್ಳಾಗಿರಲಿ ಎಂದು ಪ್ರಾರ್ಥಿಸ ತೊಡಗಿದೆ. ಎನ್ನು ಐದು ನಿಮಿಷಗಳಲ್ಲಿ ಕಡಲೂರಿನ ಮೇಲೆ ಬಂದೆವು. ಅಲ್ಲಾಗಿದ್ದ ಜೀವರಾಶಿಯ ನಾಶವಂತೂ ಹೇಳತೀರದು. ಇಷ್ಟೊಂದು ರಕ್ತ ಕುಡಿದ ಸಮುದ್ರ ಕೆಂಪಾಗಿರದೆ ಇನ್ಹ್ಯಾಗಿರಲು ಸಾಧ್ಯ.
  ಪಾಂಡಿಚರಿ ಏರ್ಪೋರ್ಟಿಗೆ ಮರಳುವಷ್ಟೊತ್ತಿಗೆ ಗೊಂದಲ,ಖಿನ್ನತೆ ಮೈ ಮನಗಳನ್ನಾವರಿಸಿತ್ತು. ಅಷ್ಟೊತ್ತಿಗಾಗಲೇ ನಮ್ಮ ಏರ್ಫೋರ್ಸಿನ ಮಿತ್ರರನ್ನು ಸುರಕ್ಷಿತವಾಗಿ ಏರ್ ಪೋರ್ಟಿಗೆ ತರಲಾಗಿತ್ತು. ಹೆಲಕಾಪ್ಟರ್ ಪೈಲಟ್ಟುಗಳೂ ಬಂದರು. ಕಾರ್ಯಕ್ರಮವೆಲ್ಲಾ ರದ್ದಾಯಿತು. ಅದೇ ಹೆಲಿಕಾಪ್ಟರುಗಳನ್ನು ಪರಿಹಾರ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವ ಅನುಮತಿಯೂ ಬಂತು.
ಆಗಲೇ ಇನ್ನೊಂದು ಆಘಾತಕರ ಸುದ್ದಿ ,ಅಂಡಮಾನಿನ ವಾಯುನೆಲೆ 'ಕಾರ್ ನಿಕೋಬಾರ್' ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ ಎಂದು.
ಮೂರು ತಿಂಗಳ ನಂತರ ನಾನು ಅಂಡಮಾನಿಗೆ ಹೋದಾಗ ಕೇಳಿದ ನೈಜ ಘಟನೆಯ ಬಗ್ಗೆ ನಿಮಗೆ ಹೇಳಲೇಬೇಕು.
ಕಾರ್ನಿಕೋಬಾರಿನಲ್ಲಿ ಕೊಚ್ಚಿಕೊಂಡು ಹೋದ ವಾಯುಸೇನೆಯ ನೂರಕ್ಕೂ ಹೆಚ್ಚು  ಜೀವಗಳಲ್ಲಿ ,ಹನ್ನೊಂದು ವರ್ಷದ 'ಮಾಯಾ'ಎನ್ನುವ ಹುಡುಗಿ ಮುರಿದುಬಿದ್ದ ತನ್ನ ಮನೆಯ ಬಾಗಿಲನ್ನೇ ಬಿಗಿಯಾಗಿ ಹಿಡಿದು ಕೊಂಡಿತ್ತಂತೆ. ಕೆಲವು ಗಂಟೆಗಳನಂತರ ಪ್ರಙೆ ಬಂದು ಸುತ್ತಲಿನದೆಲ್ಲಾ ನಿಧಾನವಾಗಿ  ಅರಿವಾಗ ತೊಡಗಿತಂತೆ..ತಾನಿನ್ನೂ ಬದುಕಿದ್ದೇನೆ, ತನ್ನ ಮನೆಯ ಮುರಿದ ಬಾಗಿಲು ನನ್ನ ಜೀವ ಉಳಿಸಿದೆ ಮತ್ತು ಅದೇ ಬಾಗಿಲು ಕೆಲವು ಹಾವುಗಳೂ ಆಸರೆಯಾಗಿದೆ ಎಂದು. ಇದೇ ರೀತಿ ನನ್ನ ತಂದೆ ತಾಯಿಗಳೂ ಬದುಕಿರಬಹುದು ಎಂದು ಪ್ರಾರ್ಥಿಸುತ್ತಿರುವಾಗಲೇ ಒಂದು ಚಮತ್ಕಾರ ನಡೆಯುತ್ತದೆ. ಆಯಾಸದಿಂದ ಜೋಂಪು ಹೊಡೆಯುತ್ತಿದ್ದವಳು ಕಣ್ತೆರೆದಾಗ ಸಮುದ್ರ ತೀರದ ಮೇಲೆ ಮಲಗಿದ್ದಳಂತೆ. ಎದ್ದು ನಿಂತವಳಿಗೆ ಸ್ಥಳೀಯರು ಆಸರೆ ಕೊಟ್ಟು ಅಳಿದುಳಿದ ವಾಯುನೆಲೆಗೆ ತಲುಪಿಸಿದರಂತೆ. ಮುನಿಸಿನ ನಡುವೆಯೂ ಪ್ರಕೃತಿ ಒಂದು ಸಣ್ಣಗೆ ಮುಗುಳ್ನಕ್ಕ ಹಾಗೆ.

Thursday, November 3, 2016

ಸೌಂದರ್ಯದ ಬೀಡು ಸ್ವಿಟ್ಜರ್ಲೆಂಡ್



ಸೌಂದರ್ಯದ ಬೀಡು ಸ್ವಿಟ್ಜರ್ಲೆಂಡ್

        ತುಂಬಾ ದಿನಗಳ  ಕನಸು, ಯೂರೋಪಿನ ಅದರಲ್ಲೂ ವಿಶೇಷ ವಾಗಿ ಸ್ವಿಟ್ಜರ್ಲೆಂಡನ ರೈಲು ಪ್ರಯಾಣ ಮಾಡಬೇಕು ಎಂದು,ಅದು ಕೆಲವು ದಿನಗಳ ಹಿಂದೆ ನನಸಾಗುವ ಅದೃಷ್ಟ ಬಂದೊದಗಿತು.
        ಸ್ವಿಟ್ಜರ್ಲೆಂಡಿಗೆ ನಮ್ಮ ಪ್ರಯಾಣ ಶುರುವಾಗಿದ್ದು ಡಿಸ್ನಿಲ್ಯಾಂಡ್ ಪ್ಯಾರಿಸ್ಸಿನಿಂದ. ಫ್ರಾನ್ಸ್ ಮತ್ತು ಸ್ವಿಟ್ಝರ್ಲ್ಯಾಂಡ್ನ ಸೊಬಗನ್ನು ಸವಿಯ ಬೇಕು ಎಂದರೆ ನೀವು ಅಲ್ಲಿನ ಸುವ್ಯವಸ್ತಿತ ರೈಲಿನಲ್ಲೇ ಪ್ರಯಣಿಸಬೇಕು ಎಂದು ಕೆಲವರು ಸಲಹೆ ಕೊಟ್ಟಿದ್ದರು. ಅದರಂತೆ TGV ಎನ್ನುವ ತೀವ್ರಗತಿಯ ರೈಲಿನಲ್ಲಿ ರಿಸರ್ವೇಷನ್  ಮಾಡಿಸದ್ದೆವು. ಅಲ್ಲಿನ ರೈಲು ನಿಲ್ದಾಣ ಒಂದು ಆಧುನಿಕ ವಿಮಾನ ನಿಲ್ದಾಣದಷ್ಟೇ ಸುವ್ಯವಸ್ತಿತವಾಗಿತ್ತು. ಪ್ರಯಾಣ ಸುಲಲಿತವಾಗಿರಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದ್ದರು. ಫ್ರಾನ್ಸ್ ನಲ್ಲಿ ಒಂದೇ ತೊಂದರೆ ಎಂದರೆ ಭಾಷೆ, ಇಂಗ್ಲೀಷ್ ನ ಬಳಕೆ ತುಂಬಾ ಕಡಿಮೆ, ಕೆಲವೊಮ್ಮೆ ಪಜೀತಿಗೀಡಾಗಿಸುತ್ತದೆ. ಆದರೆ ಅಲ್ಲಿನ ಜನರು ತುಂಬಾ ಸ್ನೇಹ ಜೀವಿಗಳು,ಭಾಷೆಯ ತೊಂದರೆ ಇದ್ದರೂ ಸಹಾ ಸಾದ್ಯವಾದಷ್ಟುಸಹಾಯ ಮಾಡುತ್ತಾರೆ.
  

















             TGV ರೈಲು ಒಂದು ಪಂಚತಾರ ಮಟ್ಟದ ರೈಲು ಎನ್ನಬಹುದು. ಆರಾಮದಾಯಕ ಸುಖಾಸೀನಗಳು,ಪಕ್ಕಕ್ಕೆ ಸುಸಜ್ಜಿತ ರೆಸ್ಟೋರೆಂಟ ಬೋಗಿ.ಆ ರೈಲಿನ ವಿಶೇಷ ವೆಂದರೆ ಹೊರಗಿನ ದೃಶ್ಯವನ್ನು ಯಾವ ಅಡಚಣೆ ಇಲ್ಲದೆ ವೀಕ್ಷಿಸಲು ಅನುಕೂಲ ವಾಗುವಂತೆ ಅಗಲವಾದ ಗಾಜಿನ ಕಿಟಕಿಗಳು,ಇಡೀ ಬೋಗಿಯೇ ಒಂದು ಗಾಜಿನ ಟ್ಯೂಬಿನೋಪಾದಿ ಕಾಣುವಂತಿತ್ತು. ಸುಮಾರು 300 ಕಿಮೀ ವೇಗದಲ್ಲಿ ಚಲಿಸುತ್ತಿದ್ದರೂ ಸಹ ಬೋಗಿಯೊಳಗೆ ಮಾತ್ರ ನಿಶಬ್ದದ ವಾತಾವರಣ,ಹೊರಗೆ ನಯನ ಮನೋಹರ ದೃಶ್ಯ. ದೃಷ್ಟಿ ಹರಿಸಿದಷ್ಟೂದೂರ ಹಸಿರು ಚಾದರ ಹೊದ್ದುಕೊಂಡು ಬಿಮ್ಮನೆ ಬೀಗುತ್ತಿರುವ ಪ್ರಕೃತಿ, ತುಂಬಿ ಹರಿಯುವ ನದಿಗಳು, ಸಂತೃಪ್ತಿಯಿಂದ ಹಸಿರು ಮೇಯುತ್ತ ಓಡಾಡುತ್ತಿದ್ದ ಗೋವುಗಳ ಸಮೂಹ,ಎಲ್ಲಾಕಡೆ ಶಾಂತಿಯ ವಾತಾವರಣ. ಯೂರೋಪಿನಲ್ಲಿ ಜನಸಂಖ್ಯೆ ವಿರಳ, ಪ್ರಕೃತಿಯದೇ ಸಾಮ್ರಾಜ್ಯ, ಅಲ್ಲಿನ ಹಳ್ಳಿಗಳಲ್ಲಿ ಅಬ್ಬಬ್ಬಾ ಎಂದರೆ 20-25 ಮನೆಗಳ ಒಂದು ಗುಂಪು,ಉಲ್ಟಾ V ಆಕಾರದ ಛಾವಣಿಗಳು,ಅದರ ಮಧ್ಯೆ ತೂರಿಸಿ ಕೊಂಡು ಹೊರ ಬಂದಿರುವ ಹೊಗೆ ಚಿಮಣಿಗಳು,ಉದ್ದನೆಯ ಚರ್ಚಿನ ಕಟ್ಟಡ,ಹಾಲಿನ ಡೈರಿಗಳು,ದ್ರಾಕ್ಷಿ ತೋಟದ ನಡುವಿನ ಫಾರಂಹೌಸ್ಗಳು,ವಿರಳವಾಗಿ ಅಲ್ಲೊಂದು ಇಲ್ಲೊಂದು ವ್ಯಾನುಗಳು,ಯಾವುದೋ ಕಿನ್ನರಲೋಕಕ್ಕೆ ಹೋದ  ಅನುಭವ. ಕೆಲವುಕಡೆ ಸಣ್ಣಕ್ಕೆ ಮಳೆಯ ವಾತಾವರಣದಿಂದ ಮಂಜುಕವಿದು ಪ್ರಕೃತಿಯ ರಮಣೀಯತೆಗೆ ಇನ್ನೂ ಮೆರುಗು ಕೊಟ್ಟಂತಿತ್ತು.
        
           ಈ ಅವಿಸ್ತ್ರರಣೀಯ ದೃಶ್ಯವನ್ನು ಅನುಭವಿಸುತ್ತಲೇ ನಮ್ಮ ಮಗಳ ಹುಟ್ಟುಹಬ್ಬದ ಒಂದು ಚಿಕ್ಕ ಸಮಾರಂಭವೂ ರೈಲಿನಲ್ಲಿ ನಡಯಿತು!ಸುಮಾರು ನಾಲ್ಕು ಘಂಟೆಗಳ ಪ್ರಯಾಣದ ನಂತರ, ಫ್ರಾನ್ಸ್ ನ ಗಡಿ ದಾಟಿ ಸ್ವಿಟ್ಜ್ರರ್ಲಾಂಡಿನ 'ಬೇಸಲ್ 'ಎನ್ನುವ ರೈಲು ನಿಲ್ದಾಣಕ್ಕೆ ಬಂದು ತಲುಪಿದೆವು.
ಸ್ವಿಸ್ನಲ್ಲಿ ನಾಲ್ಕು ದಿನಗಳ ಪ್ರೋಗ್ರಾಂ ಹಾಕಿಕೊಂಡು ಬಂದಿದ್ದೆವು. ಅದರ ಪ್ರಕಾರ ಸ್ಪಿಸ್ ರೈಲಿನಲ್ಲಿ ಅನಿಯಮಿತ ಪ್ರಯಾಣದ ಪಾಸ್ ಖರೀದಿಸಿದೆವು.  ರೈಲು ಪ್ರಯಾಣ ದುಬಾರಿಯಾದರೂ ಸಹ,ಅವರು ನೀಡುವ ಉತ್ತಮ ದರ್ಜೆಯ ಸೌಲಭ್ಯಗಳಿಗೆ ,ಪೈಸಾ ವಸೂಲ್ ಎಂದು ಹೇಳಬಹುದು. ಬೇಸಲ್  ನಿಂದ ನಮ್ಮ ಮುಂದಿನ ಪ್ರಯಾಣ ಇಂಟರ್ಲೇಕನ್ ಎಂಬ ನಗರಕ್ಕೆ. ಸುಪ್ರಸಿದ್ದ ಅಲ್ಪೈನ್
   ಪರ್ವತ ಶ್ರೇಣಿಯ ತಪ್ಪಲಲ್ಲಿ,ಎರಡು ದೊಡ್ಡ ಸರೋವರಗಳ ಮಧ್ಯೆ ಮತ್ತು ಎರಡು ರೈಲು ನಿಲ್ದಾಣದ ಮಧ್ಯೆ ಹರಡಿ ಕೊಂಡಿರುವ ಅತ್ಯಂತ ಸುಂದರವಾದ ನಗರ. ಸ್ವಿಸ್ ನ ಸಾಂಸ್ಕೃತಿಕತೆ ಮತ್ತು ಆಧುನಿಕ ಐಷಾರಾಮ ಎರಡನ್ನೂ ಮೇಳ್ಳೈಸಿಕೊಂಡಿರುವ ವಿಶಿಷ್ಟವಾದ ಪ್ರದೇಶ. ಇಲ್ಲಿನ ಜನಸಂಖ್ಯೆಯಲ್ಲಿ ಪ್ರವಾಸಿಗರದೇ ಮೇಲುಗೈ. ಸುಮಾರು ಐದು ಸಾವಿರ ಸ್ಥಳೀಯ ನಾಗರಿಕರು ತಮ್ಮ ಸುಂದರವಾದ,ಮರದಲ್ಲಿ  ಆಕರ್ಷಕ ವಿನ್ಯಾಸ ದಿಂದ ಕಟ್ಟಿದ ಮನೆಯಲ್ಲಿ ವಾಸಿಸುತ್ತಾರೆ. ಮನೆಯ ಸುತ್ತಲೂ ಚಂದದ ಹೂವಿನ ತೋಟ, ಕಿಟಕಿಗಳ ಕಟ್ಟು,ಬಾಗಿಲುಗಳ ಮುಂದೆ, ಮೆಟ್ಟಿಲುಗಳ ಮೇಲೆ ಸುಂದರವಾದ ಬೊಂಬೆಗಳಿಂದ ಅಲಂಕೃತಗೊಂಡಿರುತ್ತವೆ. ,ಗೇಟುಗಳಾಲಿ ಅಥವಾ ಸೆಕ್ಯೂರಿಟಿ ಗಾರ್ಡಗಳಾಗಲಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಇದರಲ್ಲಿಯ  ಕೆಲವು ಮನೆಗಳು ರೆಸ್ಟೋರೆಂಟ್ ಮತ್ತು ಪಿಜ್ಜಾರಿಯಗಳಾಗಿ ಪರಿವರ್ತನೆಗೊಂಡಿವೆ.
    ಇಂಟರ್ಲೇಕನ್ OST ಜಂಕ್ಷನ್ ಆ ಏರಿಯಾದಲ್ಲೇ ಒಂದು ದೊಡ್ಡ ರೈಲು ನಿಲ್ದಾಣ. ಎಲ್ಲಾ ಕಡೆಗೆ ಈ ನಿಲ್ದಾಣ ದಿಂದ ಅತ್ಯುತ್ತಮ ರೈಲು ಸಂಪರ್ಕವಿದೆ. ನಮ್ಮ ಮುಂದಿನ ಪ್ರಯಾಣ ಜಂಗ್ಫ್ರುಎನ್ನುವ ಆಲ್ಪ್ ಪರ್ವತ ಶಿಖರ.
    ಸಮುದ್ರ ಮಟ್ಟದಿಂದ ಸುಮಾರು ಹನ್ನೆರಡು ಸಾವಿರ ಅಡಿ ಎತ್ತರದ ಪ್ರದೇಶ. ಇಲ್ಲಿಗೆ ರೈಲು ಹೋಗುವುದೇ ಒಂದು ಆಶ್ಚರ್ಯವೆನಿಸಿತ್ತು,ಆದರೆ ಅಲ್ಲಿನ ರೈಲು ನಿಲ್ದಾಣ ಸುಮಾರು ನೂರು ವರುಷ ಹಳೆಯದು ಎಂಬ ವಿಷಯ ತಿಳಿದು ಸ್ವಿಸ್ನ ತಾಂತ್ರಿಕತೆಗೆ ತಲೆದೂಗಲೇಬೇಕಾಯಿತು.
 
    ಈ ಭಾಗದ ಪ್ರಯಾಣ ಒಂದು ಸುಂದರವಾದ ಸ್ವಪ್ನದಂತೆ, ನೆನಪಿನಂಗಳದಲ್ಲಿ ಉಳಿದು ಕೊಂಡು ಬಿಟ್ಟಿದೆ. ಮಂದಗತಿಯಲ್ಲಿ ನಿಶಬ್ದವಾಗಿ ಚಲಿಸುವ ರೈಲು ಹಚ್ಚ ಹಸಿರು ಹೊದ್ದುಕೊಂಡು ಮಲಗಿದ ಪರ್ವತ ಶಿಖರದತ್ತ ಏರುತ್ತಿರುವ ನೋಟ, ಪ್ರತಿ ನಿಮಿಷಕ್ಕೂ ಬದಲಾಗತ್ತ ಹೋಗುವ ವರ್ಣಮಯ ಚಿತ್ರದಂತೆ ಗೋಚರವಾಗುತ್ತಿತ್ತು. ಸ್ವಲ್ಫ ಸಮಯದ ನಂತರ ಅಲ್ಲಲ್ಲಿ ಹಿಮದ ಗುಡ್ಡೆಗಳು ಕಾಣತೊಡಗಿದವು. ಜನ ಗಳು ಮನೆಗಳು,ಹಳ್ಳಿಗಳು ಒಂದೊಂದೇ ಮರೆಯಾಗತೊಡಗಿದವು. ನೋಡು ನೋಡುತ್ತಲೇ ಎಲ್ಲಾ ಕಡಗೂ ದಟ್ಟವಾದ ಹಿಮ ಆವರಿಸಿಕೊಳ್ಳತೊಡಗಿತು.
    ಮಧ್ಯೆ ಮಧ್ಯೆ ರೈಲು ಐದು ನಿಮಷ ನಿಂತು ಈ ದೃಷ್ಯದ ಸವಿನ್ನುಣ್ಣಲು ಅನುವು ಮಾಡಿಕೊಟ್ಟಿದ್ದರು. ಎರಡುಗಂಟೆಯ ಪ್ರಯಾಣದ ನಂತರ ಯೂರೋಪಿನ ಅತ್ಯಂತ ಎತ್ತರದ ರೈಲು ನಿಲ್ದಾಣ 'ಜಂಗ್ಫ್ರೌ'ಗೆ ಬಂದು ತಲುಪಿದೆವು. ಇದೊಂದು  ಸುರಂಗದೊಳಗೆ ಸೃಷ್ಟಿಸಿದ ನಿಲ್ದಾಣ. ಇಲ್ಲಿಂದ ಸುರಂಗ ಮಾರ್ಗದಲ್ಲಿ ಮತ್ತು ಕೆಲವುಕಡೆ ಲಿಫ್ಟ್ ನ ಸಹಾಯದಿಂದ ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಹಿಮದ ಅನುಭವ ನೀಡುವ ಉದ್ದೇಶದಿಂದ ಒಂದು ಛಾವಣಿಯನ್ನು ನಿರ್ಮಿಸಿಲಾಗಿದೆ.
ಇಲ್ಲಿಗೆ ತಲುಪಿದ ಪ್ರವಾಸಿಗಳ ಉತ್ಸಾಹವಂತೂ ಹೇಳತೀರದು. ಆದರೆ ಹತ್ತು ಹದಿನೈದು ನಿಮಿಷಗಳಲ್ಲಿ ಆಯಾಸ ಕಾಣಿಸಿಕೊಂಡಾಗ ನೆನಪಾಯಿತು ಇಲ್ಲಿನ ಹವೆಯಲ್ಲಿ ಆಮ್ಲಜನಕದ ಸಾಂದ್ರತೆ ಕಡಿಮೆ ಇರುತ್ತದೆ ಎಂದು, ಆ ಯೋಧ ಹನುಮಂತಪ್ಪನ ನೆನಪಾಯಿತು, ಅದು ಹೇಗೆ ಬದುಕಿದ್ದ ಎಂಟು ದಿನ ಹಿಮದಲ್ಲಿ ಹೂತುಕೊಂಡು...
    ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಹಿಮದ ಅರಮನೆ. ಗಟ್ಟಿ ಹಿಮದಲ್ಲಿ ಕಟ್ಟಿದ ಈ ಸೌಧದಲ್ಲಿ ಹಲವಾರು ಹಿಮದ ಮೂರ್ತಿಗಳನ್ನು ಇಡಲಾಗಿದೆ.ಆ ಗಟ್ಟಿ ಹಿಮದ ನೆಲದ ಮೇಲೆ ಓಡಾಡುವುದೇ ಒಂದು ಕಸರತ್ತು.
    ಮುಂದೆ ಮೂರು ದಿನಗಳ ಪ್ರವಾಸ ಇದೇ ತರಹದ ಅಹ್ಲಾದಕರ ಅನುಭವ ವಾಗಿತ್ತು.
   
    ಸ್ವಿಟ್ಜರ್ಲಾಂಡ ಒಂದು ಪ್ರವಾಸಿಸ್ನೇಹ ದೇಶ,ಅಲ್ಲಿನ ಮೂಲಭೂತ ಸೌಕರ್ಯ, ನಾಡಿನ ಸೌಂದರ್ಯ ಮತ್ತು ಅಲ್ಲಿನ ಜನರ ಸೌಹಾರ್ದ ನಡೆ ನುಡಿಗೆ ಮರುಳಾಗುವುದರಲ್ಲಿ ಅನುಮಾನವೇ ಇಲ್ಲ.