Wednesday, March 29, 2017

ಕುದುರೆ ಶೆಟ್ಟರು

         
 
             ಆಗಿನ್ನೂ ಕೃಷ್ಣದೇವರಾಯರ ಪಟ್ಟಾಭಿಷೇಕವಾಗಿರಲಿಲ್ಲ. ನಮ್ಮ ತಂದೆಯವರು ವಿಜಯನಗರದಿಂದ ಭಟ್ಕಳಕ್ಕೆ  ಮೊದಲ ಸಲ ನನ್ನನ್ನು ಕರೆದುಕೊಂಡು ಹೋಗಿದ್ದರು. ಒಂದು ತಿಂಗಳು ಭಟ್ಕಳದಲ್ಲಿದ್ದು ಅಲ್ಲಿಯ ಕುದುರೆ ವ್ಯಾಪಾರಿಗಳಿಗೆ ಪರಿಚಯಿಸಿದರು. ಅಲ್ಲಿಂದ ಹೊನ್ನಾವರ, ಅಂಕೋಲ ಮತ್ತು ಗೋವಾಕ್ಕೆ ಪ್ರಯಾಣಿಸುತ್ತಾ ಇನ್ನೊಂದು ತಿಂಗಳು ಕಳೆಯಿತು.
    ಮೂಲತಃ ನಾವು ವಿಜಯನಗರದಲ್ಲಿ ಸಾಂಬಾರ ದಿನಸಿಗಳ ವ್ಯಾಪಾರ ಮಾಡುತ್ತಿದ್ದೆವು. ಸುತ್ತ ಮುತ್ತಲಿನ ಪ್ರದೇಶಗಳಿಂದ ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗಗಳನ್ನೆಲ್ಲಾ ಸಂಗ್ರಹಿಸಿ ಭಟ್ಕಳಕ್ಕೆ ಸಾಗಿಸಿ ಅಲ್ಲಿಯ ಮಾಪಿಳ್ಳರ ಮುಖಾಂತರ ಅರಬ್ಬೀ ದೇಶದ ಮತ್ತು ಪೋರ್ಚುಗೀಸಿನ ವರ್ತಕರಿಗೆ ಮಾರಾಟ ಮಾಡುತ್ತಿದ್ದೆವು. ಸಂಪಾದನೆಯೇನೋ ಚೆನ್ನಾಗೇ ಇತ್ತು. ನಮ್ಮ ತಂದೆ ರಾಮಲಿಂಗ ಶೆಟ್ಟರು ವ್ಯಾಪಾರ ವಲಯದಲ್ಲಿ ನಂಬಿಕಸ್ಥ ಮರ್ಯಾದಸ್ಥ, ಯಾರಿಗೂ ಮೋಸಮಾಡುವವರಲ್ಲ ಎನ್ನುವ ಹೆಸರು ಗಳಿಸಿದ್ದರು. ಆಗ ಒಂದು ಅಂದಾಜಿನ ಪ್ರಕಾರ ಸುಮಾರು ಇನ್ನೂರಕ್ಕೂ ಹೆಚ್ಚು ಬಂದರುಗಳಿದ್ದವಂತೆ ವಿಜಯನಗರ ಸಾಮ್ರಾಜ್ಯದಲ್ಲಿ. ಈ ಬಂದರುಗಳಲ್ಲಿ ಮಾಪಿಳ್ಳರದೇ ಮೇಲುಗೈ. ಇವರಲ್ಲಿ ಎರಡು ತರಹದ ಮಾಪಿಳ್ಳರಿದ್ದಾರೆ. ತಲತಲಾಂತರದಿಂದಲೂ ಅರಬ್ ವ್ಯಾಪಾರಿಗಳಿಗೆ ದುಬಾಷಿಗಳಾಗಿ, ದಲಾಲಿಗಳಾಗಿ ವ್ಯವಹರಿಸುತ್ತಿದ್ದ ಮುಸ್ಲೀಮ್ ಮಾಪಿಳ್ಳರು. ಇತ್ತೀಚಿಗೆ ಮತಾಂತರಗೊಂಡ ಕ್ರಿಶ್ಚಿಯನ್ ಮಾಪಿಳ್ಳರು. ಇವರನ್ನು ನಸರಾಣಿ ಮಾಪಿಳ್ಳರೂ ಅಂತಲೂ ಕರೆಯುತ್ತಾರೆ. ಈ ನಸರಾಣಿ ಮಾಪಿಳ್ಳರು ಪೋರ್ಚುಗೀಸರಿಗೆ ಹತ್ತಿರವಾದರು.
   
       ವಿಜಯನಗರ ಸಾಮ್ರಾಜ್ಯದ ಬಂದರುಗಳಲ್ಲಿ ಅತಿ ಹೆಚ್ಚು ಲಾಭದ ವ್ಯವಹಾರವೆಂದರೆ ಅರಬ್ಬೀದೇಶದ ಮತ್ತು ಯೂರೋಪಿನ ಹಲವಾರು ದೇಶಗಳಿಂದ ಬರುತ್ತಿದ್ದ ಕುದುರೆಗಳ ಮಾರಾಟ. ಇದರಲ್ಲಿ ಹೂಡಿಕೆಯೂ ದೊಡ್ಡ ಮೊತ್ತದಲ್ಲಿರುತ್ತದೆ ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳು ಇದಕ್ಕೆ ಕೈಹಾಕುವುದಕ್ಕೆ ಹೆದರುತ್ತಾರೆ.
         
           ನಮ್ಮ ತಾತನವರು 'ನಾನು ಕುದುರೆ ವ್ಯಾಪಾರ ಮಾಡುತ್ತೇನೆ' ಎಂದು ಹೇಳಿದಾಗ ಇಡೀ ಕುಟುಂಬವೇ ವಿರೋದಿಸಿದರಂತೆ. ಮೊಟ್ಟಮೊದಲ ಹೆದರಿಕೆ ಎಂದರೆ ಈ ವ್ಯವಹಾರದಲ್ಲಿ ಪ್ರವೇಶಿಸಿದವರನ್ನು ಮತಾಂತರ ಮಾಡುತ್ತಾರೆಂಬ ಮಾತು. ಕುದುರೆ ವ್ಯಾಪಾರ ಅರಬರ ಜೊತೆ ಮಾಡಬೇಕು ಎಂದರೆ ಮುಸ್ಲೀಮ್ ಮಾಪಿಳ್ಳನಾಗಿರಬೇಕು ಇಲ್ಲಾ ಪೋರ್ಚುಗೀಸರೊಂದಿಗೆ ವ್ಯವಹರಿಸಲು ನಸರಾಣಿ ಮಾಪಿಳ್ಳನಾಗಿರಬೇಕು. ಆದರೆ ನಮ್ಮ ತಾತನವರು ಮಾತ್ರ ಆಗಲೇ ಧೃಡನಿಶ್ಚಯ ಮಾಡಿಯಾಗಿತ್ತು...ಮತಾಂತರಕ್ಕೊಳಗಾಗದೆ ವ್ಯಾಪಾರ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟರು. ಕುದುರೆ ವ್ಯಾಪಾರ ಅಷ್ಟು ಲಾಭದಾಯಕವಾಗಿತ್ತು. ಕುದುರೆಗಳ ಖರೀದಿಗೆ ಮುಂಗಡವಾಗಿ ಹಣಪಾವತಿ ಮಾಡಬೇಕು ಮತ್ತು ಕುದುರೆಗಳು ಬಂದಮೇಲೆ ಅಂದಿನ ಪರಿಸ್ಥಿತಿಗೆ ತಕ್ಕಂತೆ ಖರೀದಿದಾರಗೆ ಮಾರಬೇಕು. ಕೆಲವೊಮ್ಮೆ ಹೂಡಿಕೆಗಿಂತ ನಾಲ್ಕುಪಟ್ಟು ಲಾಭವಾಗುತ್ತಿತ್ತು ಮತ್ತೆ ಕೆಲವೊಮ್ಮೆ ಹೂಡಿಕೆಯ ಹಣವೂ ದಕ್ಕುತ್ತಿರಲಿಲ್ಲ.  ಕುದುರೆಗಳ ಮಾರಾಟ ರಾಜಕೀಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
   
         ಕೃಷ್ಣದೇವರಾಯರ ಪಟ್ಟಾಭಿಷೇಕವಾದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಗೋವಾದ ಬಂದರಿಗೆ ಬಂದಿಳಿದ ಕುದುರೆಗಳನ್ನು ಬಹಮನಿ ಸುಲ್ತಾನರ ಕಡೆಗೆ ಹೋಗದ ಹಾಗೆ ನೋಡಿಕೊಳ್ಳುವುದು ಮತ್ತು ಆ ಎಲ್ಲಾ ಕುದುರೆಗಳೂ ವಿಜಯನಗರದ ಸೈನ್ಯಕ್ಕೆ ಸೇರುವ ವ್ಯವಸ್ಥೆಯಾಗುವಂತೆ ಪೋರ್ಚುಗೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಪೋರ್ಚುಗೀಸರಿಗೂ ಇವರ ಸೈನ್ಯದ ನೆರವು ಬೇಕಿತ್ತು ಹಾಗಾಗಿ ಒಂದು ಸಮತೂಲವಾದ ಒಪ್ಪಂದ ಮಾಡಿಕೊಂಡರು.
    ಧರ್ಮಭೀರುವಾದ ಕೃಷ್ಣದೇವರಿಗೆ ಚೆನ್ನಾಗಿ ಅರಿವಿತ್ತು ಪೋರ್ಚುಗೀಸರ ಹುನ್ನಾರ...ಇವರು ಬರೀ ವ್ಯಾಪಾರಕ್ಕೆಂದು ಬಂದವರಲ್ಲ. ಒಂದು ಕೈಯಲ್ಲಿ ಶಿಲುಬೆ ಒಂದು ಕೈಯಲ್ಲಿ ಖಡ್ಗ ಹಿಡಿದುಕೊಂಡೇ ಗೋವಾಕ್ಕೆ ಪ್ರವೇಶಿಸಿದ ಇವರು ಹಿಂದೂಗಳ ಮೇಲೆ ನಡೆಸಿದ ಮತಾಂತರ, ದೌರ್ಜನ್ಯದ ಬಗ್ಗೆ ಮಾಹಿತಿಯಿತ್ತು. ಆದರೆ ಗೋವಾದಲ್ಲಿ ಬಹಮನಿ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರು...ಶತ್ರುಗಳ ಶತ್ರುಗಳು..ಸದ್ಯಕ್ಕೆ ಮಿತ್ರರು!
        
ಪೋರ್ಚುಗೀಸರೊಂದಿಗೆ ವ್ಯವಹರಿಸಲು ಭಟ್ಕಳದ ಸಾಮಂತ ತಿಮ್ಮಯ್ಯನವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟುಬಿಟ್ಟಿದ್ದರು. ಅವರ ಪೂರ್ಣ ಗಮನ ಒಂದು ಬೃಹತ್ ಸೈನ್ಯವನ್ನು ಕಟ್ಟುವುದರ ಕಡೆಗೆ ಕೇಂದ್ರೀಕೃತವಾಗಿತ್ತು.
  
        ವಿಜಯನಗರದಲ್ಲಿ ನಡೆಯುತ್ತಿರುವ ಹಾಗುಹೋಗುಗಳ ಬಗ್ಗೆ ನಿಗಾ ಇಡಲು ಪೋರ್ಚುಗೀಸರು ಲೂಯಿಸ್ ಎನ್ನುವ ರಾಯಭಾರಿಯನ್ನು ಕಳುಹಿಸಿದ್ದರು ಆದರೆ ಕೆಲವು ತಿಂಗಳುಗಳಲ್ಲಿ ಇವರು ಅನುಮಾನಾಸ್ಪದ ಸಂದರ್ಭದಲ್ಲಿ ಹತರಾದರು. ಮುಸ್ಲೀಮರ ಯುವಕನೊಬ್ಬ ಇವರನ್ನು ಹತ್ಯೆಗೈದು ತಪ್ಪಿಸಿಕೊಂಡು ಓಡಿಹೋಗಿದ್ದಾನೆಂಬ ಮಾಹಿತಿ ಗೋವಾಕ್ಕೆ ಮುಟ್ಟಿಸಲಾಯಿತು. ಆದರೆ ನಡೆದಿದ್ದೇ ಬೇರೆ. ಗೋವಾದಿಂದ ಕುದುರೆಗಳು ಬೇರಲ್ಲಿಗೋ ರವಾನೆಯಾಗಿ  ಅಂತಿಮವಾಗಿ ಬಹಮನಿ ತುರುಕರ ಕೈವಶವಾಗುತ್ತಿವೆ ಎಂಬ ಮಾಹಿತಿ ಬೇಹುಗಾರರ ಮೂಲಕ ಕೃಷ್ಣದೇವರಾಯರಿಗೆ ವಿಷಯ ತಿಳಿಯಿತು. ಹೊನ್ನಾವರ ಮತ್ತು ಭಟ್ಕಳದ ಸಾಮಂತರ ಜೊತೆ ಈ ವಿಷಯವನ್ನು ನಿಷ್ಕರ್ಶಿಸಿ ಒಂದು ವ್ಯೂಹದ ರಚನೆ ಮಾಡಿದ್ದರು. ವಿಜಯನಗರಕ್ಕೆ ಬೇಕಾದ ಇಪ್ಪತ್ತು ಸಾವಿರ ಕುದುರೆಗಳು ದೊರತಕೂಡಲೇ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸುವುದು. ಇದಕ್ಕೆಂದೇ ಹಲವಾರು ಸಾಮಂತರಿಗೆ ಸೇನೆಯ ಅವಶ್ಯಕತೆಯ ಪಟ್ಟಿಯನ್ನಾಗಲೇ ಗುಪ್ತವಾಗಿ ಕಳುಹಿಸಿ ಕೊಟ್ಟಿದ್ದರಂತೆ. ಆದರೇ ಈ ವಿಷಯ ಹೇಗೋ ರಾಯಭಾರಿಗೆ ಗೊತ್ತಾಗಿಬಿಟ್ಟಿದೆ. ಇನ್ನೇನು ಗೋವಾದ ವೈಸರಾಯಿಗೆ ಈ ವಿಷಯ ರವಾನಿಸುವುದರಲ್ಲೇ ಇದ್ದರು ಅವರೇ ರವಾನಿಯಾಗಿ ಬಿಟ್ಟರು!