Thursday, October 27, 2016

ದಾವಣಗೆರೆ ದಿನಚರಿ-2

ದಾವಣಗೆರೆ ದಿನಚರಿ-2

ಸುಮಾರು ಎಂಭತ್ತರ ದಶಕದವರೆಗೂ ದಾವಣಗೆರೆಗೆ ಯಾವ ದಿಕ್ಕಿನಿಂದ ಬಂದರೂ ಮೊದಲು ಕಾಣಸಿಗುತ್ತಿದ್ದುದೇ ಸಾಲು ಸಾಲಾಗಿ ಗತ್ತಿನಲ್ಲಿ ನಿಂತಿದ್ದ ಕಾರ್ಖಾನೆಗಳು, ಅವಕ್ಕೆ ಅಂಟಿಕೊಂಡಿದ್ದ ಒಂದು ವಿಷೇಶವಾದ ವಾಸನೆ ಮತ್ತು ಅವರದೇ ಆದ ವಿಶಿಷ್ಟವಾದ ಸೈರನ್ನಿನ ಶಬ್ದ. ಈ ಸೈರನ್ನಿನ ಶಬ್ದದಿಂದಲೇ ನಾವು ಇದು ಯಾವ ಮಿಲ್ಲಿನ ಸೈರನ್ನು ಮತ್ತು ಸಮಯ ಎಷ್ಟು ಎಂಬುದನ್ನು ಕಂಡು ಹಿಡಿಯತ್ತಿದ್ದೆವು.
     ಒಂದು ಸಮಯದಲ್ಲಿ ಕರ್ನಾಟಕದ 'ಮ್ಯಾಂಚೆಸ್ಟರ್' ಎಂದೇ ಪ್ರಸಿದ್ದಿ ಪಡೆದಿದ್ದ ಈ ಕೈಗಾರಿಕಾ ನಗರ ಹತ್ತಿ ಮಿಲ್ಲುಗಳ ತವರೂರು. ಅದರ ಜೊತೆ ಜೊತೆ ಎಣ್ಣೆ ಗಿರಣಿಗಳು,  ರೈಸ್ ಮಿಲ್ಲುಗಳು, ಸಕ್ಕರೆ ಕಾರ್ಖಾನೆಗಳು ಎಲ್ಲಿ ನೋಡಿದರಲ್ಲಿ ಕಾರ್ಖಾನೆಗಳು,ಕಾರ್ಮಿಕರು.
ಇದು ಇಂದು ನಿನ್ನೆಯದಲ್ಲ ,ಶತಮಾನದ ಇತಿಹಾಸವಿದೆ ಈ ಅಧ್ಭುತ ನಗರಕ್ಕೆ.
         ಚಾಲುಕ್ಯರ ಕಾಲದಲ್ಲಿ ದಾವಣಗೆರೆಯ ಬಳಿಯ ಬೇತೂರು ಅವರ ಒಂದು ಪ್ರಮುಖ ಪ್ರಾಂತ್ಯವಾಗಿತ್ತು. ಸೈನಿಕರು ಈ ಕಡೆ ಬಂದಾಗ ಬೇತೂರಿನ ಬಳಿ ಇದ್ದ ಒಂದು ಹಳ್ಳಿಯ ಕೆರೆಯ ಹತ್ತಿರ ಕುದುರೆಗಳಿಗೆ ನೀರು ಕುಡಿಸಿ ತಾವೂ ದಣಿವಾರಿಸಿಕೊಳ್ಳುತ್ತಿದ್ದರು. ಈ 'ದಣಿವಾರಿಸುವ ಕೆರೆ' ಮುಂದೆ "ದಾವಣಗೆರೆ" ಯಾಯಿತೆಂಬ ಪ್ರತೀತಿ ಇದೆ.
ಆದರೆ ಈ ಒಂದು ಹಳ್ಳಿಯನ್ನು ಬಳುವಳಿಯಾಗಿ ಪಡೆದ ಅಪೋಜಿ ರಾಮ್ ಎನ್ನುವ ಮರಾಠಿ ಜಾಗೀರ್ದಾರನಿಗೆ ನ್ಯಾಯವಾಗಿ ಇದನ್ನು ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಿದ ಶ್ರೇಯ ಸಲ್ಲಬೇಕು. ಇಲ್ಲಿಗೆ ಬಂದ ವರ್ತಕರು ಈ ಹಳ್ಳಿಯನ್ನು ಆರ್ಥಿಕವಾಗಿ ಬೆಳೆಸುತ್ತಾ ಹೋಗುತ್ತಾರೆ. ಹೀಗೆ ನಿರಂತರವಾಗಿ ವಾಣಿಜ್ಯ ಪ್ರಾಬಲ್ಯತೆಯನ್ನು ಪಡೆಯುತ್ತಾ ಬೆಳೆಯುತ್ತ ಬಂದ ಪಟ್ಟಣ ಬ್ರಿಟಿಷರ ಗಮನ ಸೆಳೆದು ಇತರೆ ಯೂರೋಪ್ ದೇಶಗಳ ಸಹಾಯದಿಂದ ಅಲ್ಲಿ ಒಂದು ಕಾಟನ್ ಮಿಲ್ಲಿನ ಉಧ್ಭವವಾಗುತ್ತದೆ. 22 ಜೂನ್ 1936 ನಲ್ಲಿ ರಾಜನಳ್ಳಿ ಹನುಮಂತಪ್ಪ ಮತ್ತು ರಾಮಾ ಶೆಟ್ರು ಈ ಕಾಟನ್ ಮಿಲ್ಲನ್ನು ಖರೀದಿಸುತ್ತಾರೆ. ಇದೇ ದಾವಣಗೆರೆಯ ಐತಿಹಾಸಿಕ ಮೈಲುಗಲ್ಲಾದ 'ದಾವಣಗೆರೆ ಕಾಟನ್ ಮಿಲ್ಸ್'
     ಮಿಲ್ಲುಗಳಲ್ಲೇ ರಾಜ ಮಿಲ್ಲು ಅಂದರೆ ದಾವಣಗೆರೆಯ ಕಾಟನ್ ಮಿಲ್! ದಾವಣಗೆರೆಯ ಹೆಮ್ಮೆಯ ಪ್ರತೀಕ. ಇದರೊಂದಿಗೆ ಒಂದು ಭಾವನಾತ್ಮಕ ಸಂಬಂಧ ಚಿಕ್ಕಂದಿನಿಂದಲೇ ಬೆಳೆದುಕೊಂಡು ಬಂದಿತ್ತು. ದಾವಣಗೆರೆಯಲ್ಲಿದ್ದ ನನ್ನ ಸಂಬಂಧಿಗಳು ಹಲವಾರು ಮಂದಿ ಈ ಮಿಲ್ಲಿನ ಕಾರ್ಮಿಕರು. ಇವರಿಗೆ ಕೆಲವೊಮ್ಮೆ ನಾವು ಊಟ ಕೊಡಲು ಹೋಗುತ್ತಿದ್ದೆವು. ಮಿಲ್ಲಿನ ಸೈರನ್ ಕೂಗಿದ ಕೂಡಲೇ ಒಬ್ಬೊಬ್ಬರಾಗಿ ಹೊರಗೆ ಬಂದು ಮನೆಯಿಂದ ಊಟ ತೆಗೆದು ಕೊಂಡವರ ಜೊತೆ ಮತ್ತು ಇತರ ಸ್ನೇಹಿತರ ಜೊತೆ ಒಂದು ಮರದ ನೆರಳಿನ ಕೆಳಗೆ ಮಾತುಕತೆಯಾಡುತ್ತಾ ಊಟ ಮಾಡುವುದೇ ಒಂದು ಮರೆಯಲಾಗದ ಅನುಭವ. ಇದು ದಿನವೂ ನಡೆಯುವ ಪಿಕ್ನಿಕ್ಕು! ಊಟ ಮುಗಿದ ನಂತರ  'ಸಾಯಂಕಾಲ ಪಿಚ್ಚರ್ ನೋಡ್ರಿ' ಎಂದು ದುಡ್ಡು ಕೊಡುತ್ತಿದ್ದರು. ರಾಜಕುಮಾರ್ ಪಿಚ್ಚರ್ ಯಾವ ಟಾಕೀಸಿನಲ್ಲಿ ನಡೀತಿದೆ ಎಂಬುದನ್ನು ನಾವು ಬಸ್ಸಿನಿಂದ ಇಳಿಯುವ ಮೊದಲೇ ಕಂಡುಹಿಡುದು  ಆಮೇಲೆ ಅಜ್ಜಿಯ ಮನೆಗೆ ಹೋಗುತ್ತಿದ್ದೆವು!
     ಈಗಲೂ ಆ ಮನೆಯನ್ನು" ಕ್ವಾಟ್ರಸ್ ಮನೆ" ಎಂದೇ ಕರೆಯುವ ರೂಢಿ. ಮಿಲ್ಲಿನ ಮಾಲೀಕರು ಕಾರ್ಮಿಕರಿಗೆಂದು ಕಟ್ಟಿಸಿದಸಾಲು ಮನೆಗಳ ಒಂದು ವ್ಯವಸ್ಥಿತ ವಸಹಾತು. ಅದರಲ್ಲೇ ಎರಡು ಮನೆಗಳನ್ನು ಶಾಲೆಯಾಗಿ ಪರಿವರ್ತಿಸಿದ್ದರು. ಇದರಲ್ಲೇ ನನ್ನ ಪ್ರಾಥಮಿಕ ಶಿಕ್ಷಣ ಶುರುವಾಗಿದ್ದು. ಐದು ಮನೆಗಳ ಒಂದು ಸಾಲು,ಎದುರಿಗೇ ಇನ್ನೈದು ಮನೆಗಳು,ಒಟ್ಟು ಹತ್ತು ಮನೆಗಳ ಗುಚ್ಚವೇ ಒಂದು cosmopolitan society. ಇದರಲ್ಲಿ ಮಲಯಾಳಿ, ತಮಿಳು, ತೆಲುಗು, ಮರಾಠಿಯವರೂ ಇದ್ದರು. ಬ್ರಾಹ್ಮಣರು,ಲಿಂಗಾಯಿತರು, ವೈಷ್ಣವರು, ಕ್ರಿಶ್ಚಿಯನ್ನರು ಎಲ್ಲರ ಸಹಬಾಳ್ವೆಯ ತಾಣ. ಮಧ್ಯದಲ್ಲಿ ಒಂದು ಪಾರ್ಕು,ಮಕ್ಕಳ ಜೊತೆ ದೊಡ್ಡವರಿಗೂ ಆಡಲು, ವಿಶ್ರಮಿಸಲು, ಮಿತೃತ್ವ ಬೆಳೆಸಲು ಹೇಳಿಮಾಡಿಟ್ಟಂತಹ platform.
     ಬೆಳಗ್ಗೆ ಸುಮಾರು ಏಳುವರೆಗೆ ಒಂದೊಂದಾಗಿ ಮಿಲ್ಲುಗಳ ಸೈರನ್ನುಗಳು ಕೂಗಲು ಶುರುಹಚ್ಚಿಕೊಳ್ಳುತ್ತಿದ್ದವು. ಅಷ್ಟೊತ್ತಿಗಾಗಲೇ ಹಾಲು,ಬ್ರೆಡ್ಡು,ಇಡ್ಲಿ ಮಾರುವವರ ಸುತ್ತಾಟ ಮುಗಿದು ಹೋಗಿರುತ್ತಿತ್ತು. ಸುಮಾರು ಮನೆಗಳಲ್ಲಿ ಇವರ "ವರ್ತ್ನೆ"ಇರುತ್ತಿತ್ತು,ಅಂದರೆ ಬಾಗಿಲ ಹತ್ತಿರ ಇಟ್ಟಿದ್ದ ಪಾತ್ರೆಗಳಲ್ಲಿ ದಿನಕ್ಕಿಷ್ಟು ಇಡ್ಲಿ, ಬ್ರೆಡ್ಡು ಅಥವಾ ಹಾಲನ್ನು ಹಾಕಿ ಹೋಗುತ್ತಿದ್ದರು. ಸುಮಾರು ಹತ್ತು ಗಂಟೆಗೆ ಮೊಸರಿನವರ ಸರದಿ. ಹನ್ನೊಂದುವರೆಯಷ್ಟು ಹೊತ್ತಿಗೆ ಪ್ರತಿಮನೆಗೊಬ್ಬಬ್ಬರಂತೆ ಟಿಫನ್ ಕ್ಯಾರಿಯರ್ ಧಾರಿಗಳು ಮಿಲ್ಲಿನ ಕಡೆ ದೌಢಾಯಿಸುತ್ತಿರುತ್ತಿದ್ದರು. ಪ್ರತಿಯೊಂದು ಚಟುವಟಿಕೆಯಲ್ಲೂ ಒಂದು ವಿಧವಾದ ಏಕ ಸಾಮ್ಯತೆ ಇರುತ್ತಿತ್ತು.
     ಕಾರ್ಖಾನೆಗಳು ಮತ್ತು ಅದರಲ್ಲಿ ಶ್ರಮಿಸುತ್ತಿದ್ದ ಕಾರ್ಮಿಕರು ದಾವಣಗೆರೆಯ ಉಸಿರಾಗಿದ್ದರು, ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದ್ದ ಇಲ್ಲಿಯ ಉತ್ಪನ್ನಗಳ ಯಶೋಗಾಥೆಯ ಅಂಗವಾಗಿದ್ದರು. ಹತ್ತಾರು ಧರ್ಮಪ್ರವರ್ತಕರು ನಗರದ ಅಭಿವೃಧ್ಧಿಗಾಗಿ ಉದಾರ ದೇಣಿಗೆ ನೀಡಿದರು. ಬೇತೂರಿನ ಹೊರವಲಯದ ಈ ಹಳ್ಳಿ ನೋಡುನೋಡುತ್ತಲೇ ದೈತ್ಯಾಕಾರವಾಗಿ ಬೆಳೆಯತೊಡಗಿತು. ಹೀಗೇ ಬೆಳೆದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ?...ಆದರೆ ಮನುಷ್ಯನ ದುರಾಸೆಗೆಲ್ಲಿ ಕೊನೆಯಿದೆ....
     'ದಾವಣಗೆರೆ ಕಾಟನ್ ಮಿಲ್ಸ್' ನ ಸಮಾಧಿಯ ಮೇಲೆ ಈಗ ಮನೆಗಳನ್ನು ಕಟ್ಟಲಾಗಿದೆ. ಯಾಕೆ ಹೀಗಾಯಿತು?
        

No comments:

Post a Comment