Thursday, October 27, 2016

ಉಗಾಂಡದೆಡೆ ಉಡಾಣ

ಉಗಾಂಡದೆಡೆ ಉಡಾಣ

        1948ರಲ್ಲಿ ಜನ್ಮಪಡೆದು,ಹುಟ್ಟಿನಿಂದಲೂ ಭಯೋತ್ಪಾದನೆಯನ್ನು ನಿರಂತರವಾಗಿ ಹೆದರಿಸುತ್ತಿರುವ ಇಸ್ರೇಲ್ ಹೇಗೆ ನಿಭಾಯಿಸುತ್ತದೆ ಈ ಪೀಡೆಯನ್ನು?
    ಸಿಂಪಲ್, ಭಯೋತ್ಪಾದನೆಯ ಫ್ಯಾಕ್ಟರಿಗೆ ನುಗ್ಗಿ ,ಉತ್ಪಾದನೆಯ ಹಂತದಲ್ಲೇ ಬಗ್ಗುಬಡಿಯುವುದು. ಈ ಹಿಂದೆ ಇರಾಕಿನ ಒಸಿರಾಕ್ ಅಣುಸ್ಥಾವರದ ಬಗ್ಗೆ ಒದಿದ್ದು ನೆನಪಿರಬಹುದು. ಇನ್ನೇನು ಹತ್ತು ದಿನಗಳಲ್ಲಿ ಅಣುಬಾಂಬು ತಯಾರಿಸುವ ಸಾಮರ್ಥ್ಯವನ್ನು ಇರಾಕ್ ಪಡೆದೇ ಬಿಡ್ತು ಎನ್ನೊಷ್ಟು ಹೊತ್ತಿಗೆ , ರಾಜಾರೋಷವಾಗಿ ಆ ಅಣುಸ್ಥಾವರವನ್ನು ಸಣ್ಣ ಸಣ್ಣ ಪೀಸುಗಳಾಗಿ ಮಾಡಿದರು. ಅರಬರೂ ಸೇರಿದಂತೆ ಹಲವಾರು ದೇಶಗಳು ಲಬೋ ಲಬೋ ಎಂದು ಬಾಯಿಬಡಿದು ಕೊಂಡರು. ಅವರು ಅದರ ಬಗ್ಗೆ ಏನಾದರೂ ತಲೆಕೆಡಿಸಿ ಕೊಂಡರಾ? ಇಲ್ಲ.
    ಇದು ಇಸ್ರೇಲಿನ ಸ್ಪೆಷಾಲಿಟಿ. ಅವರು ಒಂದು ಸಲ ತಮ್ಮ ಕಾರ್ಯಾಚರಣೆಯ ಬಗ್ಗೆ ನಿರ್ಧಾರ ತೆಗೆದುಕೊಂಡರೆಂದರೆ ಮುಗಿಯಿತು. ಬೇರೆದೇಶಗಳ, ಅಮೆರಿಕಾದ ಅಥವಾ ವಿಶ್ವಸಂಸ್ಥೆಯ ಅಭಿಪ್ರಾಯಗಳ ಬಗ್ಗೆ ತಲೆಕೆಡಿಸಿ ಕೊಳ್ಳುವುದೇ ಇಲ್ಲ.
  ಇನ್ನೊಂದು ಇಸ್ರೇಲಿಯರ ವೈಶಿಷ್ಟ್ಯವೆಂದರೆ ತಮ್ಮ ದೇಶದ ಬಗ್ಗೆ ಇರುವ ಗಾಢವಾದ ಅಭಿಮಾನ,ಗೌರವ. ಪರಸ್ಪರರಲ್ಲಿರುವ ಭಾಂಧವ್ಯ,ಅಚಲವಾದ ವಿಶ್ವಾಸ,ಇವೇ ಅವರನ್ನು ವಿಶ್ವದಲ್ಲಿ ವಿಷೇಶ ಸ್ಥಾನದಲ್ಲಿಟ್ಟಿರುವುದು. ಇದಕ್ಕಾಗೇ ಅವರನ್ನು ಅಭಿಮಾನಿಸುವುದು ಮತ್ತು
ಇದಕ್ಕಾಗಿಯೆ ಅವರನ್ನು ದ್ವೇಷಿಸುವುದು ಕೂಡ.

       ಈದಿ ಅಮೀನನ ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳುಗಳಾಗಿ ಸಿಲುಕಿಕೊಂಡಿರುವ ಸುಮಾರು ನೂರು ಜನ ಇಸ್ರೇಲಿಯರನ್ನು ಬಿಡುಗಡೆ ಮಾಡಲು ಕುಳಿತಿದ್ದ ತುರ್ತು ಸಭೆಯಲ್ಲಿ ಎರಡು ಗುಂಪುಗಳು ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪರ ವಿರೋದದ ವಾದ ಮಾಡುತ್ತಿರುವಾಗಲೇ, ರಕ್ಷಣಾ ಮಂತ್ರಿ ಮಿಲಿಟರಿಗೆ  ಕಣ್ಣು ಮಿಟುಕಿಸಿ..Go ahead ಎಂದೇ ಬಿಟ್ಟರು.
      ಜೊನಾತನ್ ನ್ಯೇಟನ್ನಾಹುವಿನ ಮುಖಂಡತ್ವದಲ್ಲಿ ತಯಾರಿಗಳು ಭರದಿಂದ ನಡೆಯಲು ಶುರುವಾಯಿತು. ಎಂಟೆಬ್ಬೆಯ ಏರ್ಪೋರ್ಟಿನ ಕಟ್ಟಡಗಳನ್ನು ಕೆಲವೇ ವರ್ಷಗಳಹಿಂದೆ ಕಟ್ಟಿದ ಕಂಟ್ರಾಕ್ಟರು ಇಸ್ರೇಲಿ! ಕೆಲವೇ ಗಂಟೆಗಳಲ್ಲಿ ಅವರಲ್ಲಿದ್ದ ನಕಾಶೆಯ ಸಹಾಯದಿಂದ ಒಂದು ಮಾದರಿಯನ್ನ ಮರಳಿನಲ್ಲಿ ಕಟ್ಟೇಬಿಟ್ಟರು. ಆಕ್ರಮಣದ ಕಮಾಂಡೊ ದಳಕ್ಕೆ ಉಂಗಾಡದ ಸೇನೆಯ ಮಾದರಿಯ ಡ್ರೆಸ್ಸನ್ನು ರಾತ್ರೊರಾತ್ರಿ ಹೊಲೆಯಲಾಯಿತು.  
         ಗುಪ್ತಚರ ಮಾಹಿತಿಯ ಪ್ರಕಾರ  ಈದಿ ಅಮಿನನ ಕಪ್ಪು ಬಣ್ಣದ ಮರ್ಸಿಡೀಸ್ ಕಾರಿನಂತಹದೇ ಒಂದು ಕಾರು ಮತ್ತು ಅಲ್ಲಿಯ ಮಿಲಿಟರಿಯವರು ಉಪಯೋಗಿಸುವ ಮಾದರಿಯ ಮೂರು ವಾಹನಗಳು,ಒಟ್ಟು ನಾಲ್ಕು ವಾಹನಗಳನ್ನು ಮೊದಲನೆ C-130  ಹರ್ಕ್ಯುಲಿಸ್ ಏರೋಪ್ಲೇನಿನಲ್ಲಿ ಲೋಡ್ ಮಾಡಲಾಯಿತು. ವಿದೇಶಕ್ಕೆ ಹೋದ ಈದಿ ಅಮಿನ್ ಮರಳಿ ಬರುತ್ತಿದ್ದಾನೆನ್ನವ ನಾಟಕದ ರಂಗತಾಲೀಮಿನ ರಚನೆಯಾಯ್ತು.  ಕಮಾಂಡೊ ಕಾರ್ಯಾಚರಣೆಯ ತಾಲೀಮಿನಲ್ಲಿ ನಿಮಿಷ ನಿಮಿಷಕ್ಕೂ ನಡೆಯಬಹುದಾದ ಘಟನೆಗಳ ಬಗ್ಗೆ ಊಹಿಸಿ,ಯೋಚಿಸಿ,ಪರಾಂಬರಿಸಿ,ಚರ್ಚಿಸಿ ತರಬೇತಿಯಲ್ಲಿ ಅಳವಡಿಸಿಕೊಂಡರು. ಈ ಹೆಜ್ಜೆ ಯಡವಟ್ಟಾದರೆ ಅದಕ್ಕೆ ಪರ್ಯಾಯವೇನು ಎಂಬುದೆಲ್ಲಾ ಪರಿಗಣಿಸಲಾಯಿತು. ಈ ಕಾರ್ಯಾಚರಣೆಯ ಬುನಾದಿ ...ಅನಿರೀಕ್ಷಿತತೆ, ಅಲ್ಲಿರುವವರು ಬರೀ ಅರಬ್ ವಿಮಾನ ಅಪಹರಣಕಾರೇ ಅಲ್ಲ ಉಗಾಂಡದ ಸೈನಿಕರೂ ಆಸುಪಾಸಿನಲ್ಲಿದ್ದಾರೆಂದು ತಿಳಿದು ಬಂತು. ಪಿಸ್ತೊಲುಗಳಿಗೆ ಸೈಲೆನ್ಸರ್ ಅಳವಡಿಸಲಾಗಿತ್ತು. ಬಂದೂಕಿನ ಫೈರಿಂಗ್ ಕೊನೆಯಹಂತದ ಆಕ್ರಮಣಕ್ಕೆ ಮಾತ್ರ.
  ಮೊದಲಿಂದಲೂ ಅವರು ಉಗಾಂಡದ ಸೈನಿಕರಂತೇ ವರ್ತಿಸಬೇಕು..ಅಪಹರಣಕಾರರನ್ನು ಸೆರೆ ಹಿಡಿಯುವವರೆಗೂ ಅಥವಾ ನಿಷ್ಕ್ರಿಯೆ ಗೊಳಿಸುವವರೆಗು. ಅಲ್ಲಿಗೆ ಹೋಗುತ್ತಿರುವುದು ನಮ್ಮ ಇಸ್ರೇಲಿಯರನ್ನು ಉಳಿಸುವುದಕ್ಕೆ ಉಂಗಾಡ ಸೈನ್ಯದ ಜೊತೆ ಯುಧ್ಧ ಮಾಡುವುದಕ್ಕಲ್ಲ ಎಂಬುದನ್ನೂ ಎಲ್ಲರಿಗೂ ಮನವರಿಕೆಯಾಗುವಂತೆ ರಿಹರ್ಸಲ್ ನಡೆಸಲಾಯಿತು.
    ಎಂಟೆಬ್ಬೆಗೆ ಹೊರಡಲು ತಯಾರಾಗಿದ್ದ ಒಟ್ಟು ನಾಲ್ಕು C-130 ಹರ್ಕ್ಯುಲಿಸ್ ಎಲ್ಲಾ ಪೈಲಟ್ಗಳಿಗೆ ನಡುರಾತ್ರಿಯ ಕಗ್ಗತ್ತಿನಲ್ಲಿ ಯಾವ ಬೆಳಕಿನ ಸಹಾಯವಿಲ್ಲದೆ ಭೂಸ್ಪರ್ಶ ಮಾಡುವ ತರಬೇತಿಯನ್ನು ಕೊಡಲಾಯಿತು. ನಡುರಾತ್ರಿಯ ನಿಷಬ್ದದಲ್ಲಿ  ನಾಲ್ಕು ಏರೋಪ್ಲೇನುಗಳ  ಶಬ್ದವನ್ನು ಕಡಿಮೆ ಮಾಡಲು ಏರ್ಪೋರ್ಟು ಹತ್ತಿರವಾಗತ್ತಿದ್ದಂತೆ ಎರಡು ಎಂಜಿನ್ನುಗಳನ್ನು ನಿಷ್ಕ್ರಿಯಗೊಳಿಸುವ ಪ್ರಯೋಗವನ್ನೂ ನಡೆಸಲಾಯಿತು. ನಾಲ್ಕನೇ ವಿಮಾನದಲ್ಲಿ ಒಂದು ಚಿಕ್ಕ ಆಸ್ಪತ್ರೆಯಂತಹ ವ್ಯವಸ್ಥೆಯನ್ನು ಬಿಟ್ಟರೆ ಒತ್ತೆಯಾಳುಗಳಾಗಿದ್ದ ಇಸ್ರೇಲಿಯರನ್ನು ಕರೆದುಕೊಂಡು ಬರಲು ಖಾಲಿಯಾಗೇ ಇಡಲಾಯಿತು.
    ಎಂಟೆಬ್ಬೆಯಲ್ಲಿ ಈಗಾಗಲೇ ಆರು ದಿನಗಳ ನರಕಯಾತನೆಯನ್ನು ಅನುಭವಿಸಿದ್ದ ಇಸ್ರೇಲಿಯರು ಅವರಿಗಾಗಿ ಕಾದಿರಿಸಿದ್ದ ನಾಲ್ಕನೇ ಏರೋಪ್ಲೇನಿನಲ್ಲಿ ...ಎಲ್ಲರೂ ಬಂದರೇ?
    3 ಜುಲೈ 1976, ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಕಮಾಂಡೋಗಳು, ಪೈಲಟ್ಗಳು,ಎಂಜಿನಿಯರ್ಗಳು, ವೈರ್ಲೆಸ್,ವೈದ್ಯಕೀಯ ಸಿಬ್ಬಂದಿ ಎಲ್ಲರನ್ನೂ ಜಮಾಯಿಸಿ ಅಂತಿಮವಾಗಿ ಕರ್ನಲ್ ನೆತನ್ಯಾಹುರ ನೇತೃತ್ವದಲ್ಲಿ ತಾಲೀಮು ನಡೆಸಲಾಗುತ್ತದೆ. ಇಲ್ಲಿ ಒಂದು ಚಿಕ್ಕ ವಿವಾದವೆದ್ದು ಬಿಡುತ್ತದೆ. ಅದೇನೆಂದರೆ ಮೊದಲನೇ ಗೇಟಿನಲ್ಲಿರಬಹುದಾದ ಉಗಾಂಡದ ಗಾರ್ಡುಗಳನ್ನು ಹೇಗೆ ನಿಭಾಯಿಸುವುದು? ಅವರನ್ನು ಬರೀ ನಿಷ್ಕ್ರಿಯಗೊಳಿಸಬೇಕೇ ಅಥವಾ ಮುಗಿಸಿಬಿಡಬೇಕೇ ಈ ವಿವಾದ ನಿಖರವಾಗಿ ಬಗೆಹರಿಯುವುದಿಲ್ಲ. ಸರಿ ಅಲ್ಲೇ ನೋಡೋಣ ಎಂದು ಬಿಡುತ್ತಾರೆ ಕಮಾಂಡೊಗಳ ಮುಖಂಡ.
     ಇದೊಂದನ್ನು ಬಗೆಹರಿಸಿಕೊಂಡಿದ್ದರೆ?
    
    ಮಿಲಿಟರಿ ಕಾರ್ಯಾಚರಣೆಯಲ್ಲಿ ಕೆಲವು ಸಣ್ಣ ಸಾಂಧರ್ಭಿಕ ನಿರ್ಧಾರಗಳೂ ಎಷ್ಟು ಪ್ರಾಮುಖ್ಯತೆ ಪಡೆಯುತ್ತವೆಯಲ್ಲವೇ?
    ಮಧ್ಯಾಹ್ನ 2.30. ಇಸ್ರೇಲ್ ಕ್ಯಾಬಿನೆಟ್ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಇನ್ನೂ ಯಾವ ನಿರ್ಣಯವನ್ನೂ ತೆಗೆದುಕೊಂಡಿಲ್ಲ!!
    ಎಂಟುಗಂಟೆಗಳ ವಾಯುಯಾನದ ನಂತರ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ಮಾಡಲು ಎಂಟೆಬ್ಬೆಯನ್ನು ತಲುಪಬೇಕೆಂದರೆ ಸಂಜೆ ನಾಲ್ಕರ ಆಸುಪಾಸಿಗೆ ಈ ವಿಮಾನಗಳು ಇಸ್ರೇಲಿನಿಂದ ನಿರ್ಗಮಿಸಲೇ ಬೇಕು...ಆದರೆ ಈ ಕಾರ್ಯಾಚರಣೆಗೆ ಇನ್ನು ಅಧಿಕೃತವಾಗಿ ಪರವಾನಗಿಯೇ ದೊರೆತಿಲ್ಲ. ಎಂತಹ ವಿಪರ್ಯಾಸ.
    ಇನ್ನೊಂದು ಆತಂಕದ ಸಮಾಚಾರವೂ ಇಸ್ರೇಲಿನ ಗುಪ್ತಚರ ಇಲಾಖೆ 'ಮೊಸ್ಸಾದ್'ನಿಂದ ಬರುತ್ತದೆ. ಅದೆಂದರೆ, ಮೌರಿಶಿಯಸ್ ದೇಶದ ಪ್ರವಾಸ ಮುಗಿಸಿಕೊಂಡು ಈದಿ ಅಮೀನ್ ಆ ರಾತ್ರಿ ಉಗಾಂಡಕ್ಕೆ ಮರಳುತ್ತಿದ್ದಾನೆ. ಆ ಕ್ರೂರ ಮುಂಗೋಪಿ ಇಸ್ರೇಲ್ ಇನ್ನೂ ಪ್ರತಿಕ್ರಯಿಸಿಲ್ಲ ಎಂದು ತಿಳಿದರೆ ಏನು ಮಾಡುತ್ತಾನೊ?
    ಈ ಸಂಧರ್ಭದಲ್ಲಿ ಮಿಲಿಟರಿ ಅಧಿಕಾರಿಗಳು ಸಾಧಕ ಭಾದಕಗಳನ್ನು ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ.
    ನಾವಂತೂ ಹೊರಡುತ್ತೇವೆ, ನಾಲ್ಕು ಗಂಟೆಗಳ ವಿಮಾನಯಾದನಂತರ ಒಂದು  "Point of no return" ತಲುಪುವುದರೊಳಗೆ ಕ್ಯಾಬಿನೆಟ್ಟಿನ ಅನುಮೋದನೆ ದೊರೆತರೆ ಮುಂದುವರೆಯುತ್ತೇವೆ ಇಲ್ಲದಿದ್ದರೆ ಮರಳಿಬರುತ್ತೇವೆ. ಅದಕ್ಕೆ ರಕ್ಷಣಾಮಂತ್ರಿಯವರು ಒಪ್ಪುತ್ತಾರೆ.
    ಆಪರೇಷನ್ ಥಂಡರ್ ಬೋಲ್ಟ್ ಗಗನಕ್ಕೇರುತ್ತದೆ...ಅದರ ಜೊತೆಗೇ  ಇಸ್ರೇಲಿನ ಭವಿಷ್ಯಕೂಡ.
      

No comments:

Post a Comment