ನಮ್ಮೂರು ಗಂಗೂರು ಮತ್ತು ಚೆನ್ನಗಿರಿಯ ನಡುವೆ ದೇವರಹಳ್ಳಿ ಒಂದು ಹಳ್ಳಿ. ಹಳ್ಳಿ ಸಣ್ಣದಾದರೂ ಅಲ್ಲಿಯ ಬೆಟ್ಟದ ಮೇಲಿನ ರಂಗನಾಥ ದೇವಸ್ತಾನ ಮತ್ತು ಅಲ್ಲಿ ನಡೆಯುತ್ತಿದ್ದ ಜಾತ್ರೆ ಮೊದಲಿಂದಲೂ ಹೆಸರುವಾಸಿ. ಆ ಜಾತ್ರೆ ಬೇಸಿಗೆ ರಜೆಯ ಸಮಯದಲ್ಲಿ ನಡೆಯುತ್ತಿದ್ದರಿಂದ ನಾವು ಚಿಕ್ಕವರಾಗಿದ್ದಲೂ ರಾತ್ರಿಯ ಬೆಳದಿಂಗಳಿನಲ್ಲಿ ನಡೆದು ಕೊಂಡು ಹೋಗುತ್ತಿದ್ದೆವು. ಈಗಲೂ ದೇವರಹಳ್ಳಿಯನ್ನು ಹಾದು ಹೋಗುವಾಗ ಆ ಜಾತ್ರೆಯ ನೆನಪಾಗುತ್ತದೆ.
ದೇವರಹಳ್ಳಿಯ ಇನ್ನೊಂದು ವಿಷೇಶತೆಯೆಂದರೆ ಅಲ್ಲಿಯ ತರಕಾರಿ ಬೆಳವಣಿಗೆ. ನಮ್ಮ ಹಳ್ಳಿಯೂ ಸೇರಿದಂತೆ ಇತರೆ ಸುತ್ತ ಮುತ್ತಲ ಹಳ್ಳಿಗಳಲ್ಲಿ ಜೊಳ, ರಾಗಿಯಂತಹ ಸಾಂಪ್ರದಾಯಕವಾದ ಬೆಳೆಗಳನ್ನು ಬೆಳೆದರೆ ,ದೇವರಹಳ್ಳಿಯಲ್ಲಿ ತರಕಾರಿ ಬೆಳೆಯುವ ಒಂದು ವೈವಿಧ್ಯತೆ ಮೊದಲಿಂದಲೂ ಇತ್ತು. ಇನ್ನೂ ಒಂದು ವಿಷೇಶವೆಂದರೆ ಇದರಲ್ಲೆಲ್ಲಾ ಹಳ್ಳಿಯ ಹೆಂಗಸರದೇ ಮೇಲುಗೈ. ಸಾಯಂಕಲದವರೆಗೂ ಹೊಲದಲ್ಲಿ ಕೆಲಸ ಮಾಡಿ ಬೆಳ್ಳಂಬೆಳಗ್ಗೇನೆ ತರಕಾರಿಗಳನ್ನು ಕಿತ್ತು ಬುಟ್ಟಿ ತುಂಬಿಸಿಕೊಂಡು ಸುತ್ತಲಿನ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿಕೊಂಡು ಮಧ್ಯಾಹ್ನದಷ್ಟೊತ್ತಿಗೆ ಹಿಂತಿರುಗುತ್ತಿದ್ದರು. ಇಲ್ಲಿಯ ಸೊಪ್ಪು ,ಬದನೇಕಾಯಿ ಮತ್ತು ಹಾಗಲಕಾಯಿಗಳು ಕ್ರಮೇಣ ಪ್ರಸಿದ್ದಿ ಪಡೆದು ದಾವಣಗೆರೆ ಮತ್ತು ಶಿವಮೊಗ್ಗದ ಮಾರುಕಟ್ಟೆಗಳನ್ನೂ ತಲುಪಿದವು. ಇದೇ ಪರಂಪರೆ ಮುಂದುವರೆದು ಈಗ ಅದು ಎಲ್ಲಿಯ ಮಟ್ಟಿಗೆ ತಲುಪಿದೆಯೆಂಬುದರ ನನಗಾದ ಆಶ್ಚರ್ಯವನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಈಗ ಒಂದು ವಾರದ ಕೆಳಗೆ ಬೆಂಗಳೂರಿನಿಂದ ದುಬೈ ಫ್ಲೈಟ್ ಮಾಡುವಾಗ ನನಗೆ ಒಂದು ಆಶ್ಚರ್ಯ ಕಾದಿತ್ತು.
ಸುಮಾರು ಮೂರು ಟನ್ನುಗಳಷ್ಟು ಹಾಗಲಕಾಯಿಗಳನ್ನು ವಿಮಾನದಲ್ಲಿ ಲೋಡು ಮಾಡಿದ್ದರು. ಸುಮ್ಮನೆ ಕುತೂಹಲದಿಂದ ಕೇಳಿದೆ ಇದು ಎಲ್ಲಿಂದ ಬರುತ್ತದೆ ಅದಕ್ಕೆ ಸಿಕ್ಕ ಉತ್ತರದಿಂದ ಆಶ್ಚರ್ಯದ ಜೊತೆ ಹೆಮ್ಮಯೂ ಆಯಿತು, ಏಕೆಂದರೆ ಆ ಹಾಗಲಕಾಯಿಗಳು ದೇವರಹಳ್ಳಿಯಿಂದ ಬರುತ್ತದಂತೆ!
ರಾತ್ರಿ ಸುಮಾರು ಒಂದು ಘಂಟೆಗೆ ದೇವರಹಳ್ಳಿಯ ಆ ತರಕಾರಿ ಹೊಲಗಳಲ್ಲಿ ಜನ ಜಾತ್ರೆಯೇ ನೆರದಿರುತ್ತದಂತೆ ತರಕಾರಿಗಳನ್ನು ಕಿತ್ತು ಟ್ರಕ್ಕುಗಳಲ್ಲಿ ಲೋಡು ಮಾಡಲು. ಅಲ್ಲಿಂದ ಹೊರಟ ಟ್ರಕ್ಕು ಬೆಳಗ್ಗೆ ಐದು ಗಂಟೆಗೆ ಬೆಂಗಳೂರಿನ ಏರ್ಪೋರ್ಟನ್ನು ತಲುಪಿ ನಂತರ ಬೆಳಗ್ಗೆ ಏಳು ಘಂಟೆಯ ಸಮಯಕ್ಕೆ ಹೊರಡುವ ಇಂಡಿಗೊ ವಿಮಾನದಲ್ಲಿ ಲೋಡು ಮಾಡಲಾಗುತ್ತದೆ. ಸುಮಾರು ನಾಲ್ಕು ಘಂಟೆಗಳ ನಂತರ ಈ ತರಕಾರಿಗಳು ದುಬೈ ಮಾರುಕಟ್ಟೆಯಲ್ಲಿ ಲಭ್ಯ...ಅಧ್ಭುತ!
ಇದೇ ಅಧ್ಭುತದ ಜೊತೆ ಇನ್ನೂ ಒಂದು ಅಧ್ಭುತದ ಬಗ್ಗೆ ಹೇಳುತ್ತೇನೆ...ಅದೇ ದುಬೈನ ಏರ್ಪೋರ್ಟು .
ದುಬೈ ಎನ್ನುವ ಮಾಯಾ ನಗರ, ಕುರುಡರು ಆನೆ ಮುಟ್ಟಿದಂತೆ ಅವರವರ ಆಶಯ,ಆಸಕ್ತಿ ಮತ್ತು ಅನುಭವಕ್ಕೆ ತಕ್ಕಂತೆ ಗೋಚರಿಸುತ್ತದೆ. ಕೆಲವರಿಗೆ ಅಲ್ಲಿಯ ಗಗನ ಚುಂಬಿ ಕಟ್ಟಡಗಳ ನೆನಪಾದರೆ ಮತ್ತೆ ಕೆಲವರಿಗೆವರಿಗೆ ಇಲ್ಲಿಯ ಝಗಝಗಿಸುವ ಶಾಪ್ಪಿಂಗ್ ಮಾಲುಗಳ ಚಿತ್ರಣ ಮೂಡಿಬರಹುದು,ಇನ್ನೂ ಕೆಲವರಿಗೆ ಅಲ್ಲಿಯ ಉಚ್ಚಮಟ್ಟದ ಮೂಲಭೂತ ಸೌಕರ್ಯಗಳಿಗೆ ಬೆರಗಾಗಿರಬಹುದು.
ಹಾಗೆ ನೊಡಿದರೆ ದುಬೈನ ತೈಲಸಂಪನ್ಮೂಲ ಇತರೆ ಕೊಲ್ಲಿ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ, ಆದರೆ ಅಲ್ಲಿಯ ಅಧ್ಭುತ ಸೌಕರ್ಯಗಳಿಂದಾಗಿ ವಿಶ್ವದ ಬಹುತೇಕ ದೇಶದ ವ್ಯವಹಾರಗಳು ಇಲ್ಲಿಯೇ ಕೇಂದ್ರೀಕೃತವಾಗಿರುತ್ತದೆ. ಪ್ರಪಂಚದಲ್ಲಿ ಅತ್ಯಂತ ಬ್ಯುಸಿ ಏರ್ಪೋರ್ಟು ಎಂಬ ಬಿರುದು ಪಡೆದು,ಅಲ್ಲಿಯ ಮೂಲಭೂತ ಸೌಕರ್ಯಗಳಲ್ಲಿ ಕಿರೀಟಪ್ರಾಯವಾಗಿ ಮೆರೆಯುತ್ತಿದೆ ದುಬೈ ಏರ್ಪೋರ್ಟು.
ಅಸಲಿಗೆ ಬೆಂಗಳೂರಿನಲ್ಲಿ ಏರ್ಪೋರ್ಟು ಶುರುವಾದಾಗ ದುಬೈನ ಹೆಸರೇ ಪ್ರಪಂಚಕ್ಕೆ ಗೊತ್ತಿರಲಿಲ್ಲ. ಮರಳುಗಾಡಿನಲ್ಲಿ ಏರ್ಪೋರ್ಟು? ಉಹುಂ...ಸಾಧ್ಯವೇಇಲ್ಲ. ಆದರೆ ಈಗ ಬೆಂಗಳೂರಿನ ಏರ್ಪೋರ್ಟಿಗಿಂತ ನಾಲ್ಕೈದು ಪಟ್ಟು ದೊಡ್ಡ ಏರ್ಪೋರ್ಟನ್ನು ಹೇಗೆ ನಿರ್ಮಿಸಲು ಸಾಧ್ಯವಾಯಿತು ಎನ್ನುವುದೇ ಒಂದು ರೋಚಕ ಅಧ್ಯಯನ.
ಅಂತಹ ಬಿಸಿಲು ನಾಡನ್ನು ಪ್ರವಾಸಿ ಕೇಂದ್ರವಾಗಿ, ಪ್ರಪಂಚವೇ ಕಂಡರಿಯದ ವಾಣಿಜ್ಯ ಕೇಂದ್ರವಾಗಿ ಪರಿವರ್ತಸಬೇಕೆಂಬ ಕನಸು ಹೊತ್ತ ಅಲ್ಲಿನ ದೊರೆ ಮಾಡಿದ ಮೊಟ್ಟ ಮೊದಲ ಕೆಲಸವೆಂದರೆ ತೈಲ ಸಂಪನ್ಮೂಲಗಳಿಂದ ಬಂದ ಆದಾಯವನ್ನು ಅಲ್ಲಿಯ ಮೂಲಭೂತಸೌಕರ್ಯಗಳನ್ನು ಸೃಷ್ಟಿಸುವುದರಲ್ಲಿ ವಿನಿಯೋಗಿಸಿದ್ದು.
ಸುಮಾರು 7200 ಎಕರೆಯಷ್ಟು ವಿಶಾಲ ಮರುಭೂಮಿಯನ್ನು ಜಗತ್ತಿನ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎನಿಸಿಕೊಂಡಿರುವ ಈ ಏರ್ಪೋರ್ಟನ್ನು ನಿರ್ಮಿಸಿದ ಕೀರ್ತಿ ದುಬೈನ ದೊರೆ ರಶೀದ್ ಬಿನ್ ಸಯೀದ್ ಅಲ್ ಮಕ್ತೂಮ್ ರವರಿಗೆ ಸಲ್ಲುತ್ತದೆ.
1960 ರಲ್ಲಿ ಒಂದು ಪ್ರಯೋಗದೋಪಾದಿಯಲ್ಲಿ ಗಟ್ಟಿ ಮರಳಿನಲ್ಲಿ ಸುಮಾರು 6೦೦೦ ಅಡಿ ಉದ್ದದ ರನ್ವೇಯೊಂದನನ್ನು ನಿರ್ಮಾಣಗೊಳಿಸಲಾಯಿತು. ಅದೇ ಸಮಯದಲ್ಲಿ ಪ್ರಪಂಚದ ಇತರೆ ರಾಷ್ಟ್ರಗಳು ಕೊಲ್ಲಿ ಪ್ರಾಂತದ ತ್ತೈಲಸಂಪನ್ಮೂಲ ಸಂಬಂದಿತ ಉದ್ಯಮದ ಕಡೆಗೆ ಆಕರ್ಷಿತರಾಗಿ ನಾಮುಂದು ತಾಮುಂದು ಎಂದು ಕೊಲ್ಲಿಯ ಕಡೆಗೆ ದೌಡಾಯಿಸತೊಡಗಿದರು.
ದುಬೈಯನ್ನು ಒಂದು ಜಾಗತಿಕ ಮಟ್ಟದ ವ್ಯವಹಾರ ಕೇಂದ್ರವಾಗಿ ಅಭಿವೃದ್ಧಿ ಗೊಳಿಸಬೇಕೆಂದರೆ,ಅಮೆರಿಕ, ಯೂರೊಪ್,ಆಸ್ಟ್ರೇಲಿಯಾ ಮತ್ತು ಏಷಿಯಾದ ದೇಶದ ಹೂಡಿಕೆದಾರರನ್ನು ತನ್ನೆಡೆಗೆ ಆಕರ್ಷಿಸಲು ಇರುವ ಒಂದೇ ಮಾರ್ಗವೆಂದರೆ,ಒಂದು ಸುಸಜ್ಜಿತ ಆಧುನಿಕ,ದೊಡ್ಡ ಜೆಟ್ ವಿಮಾನಗಳಿಗೆ ಅನುಕೂಲ ಕರವಾಗುವ ವಿಮಾನ ನಿಲ್ದಾಣದ ನಿರ್ಮಾಣವಾಗಲೇಬೇಕು ಎನಿಸಿತು ದುಬೈನ ದೊರೆಗೆ.
ಅದರಂತೆ ಹಂತ ಹಂತವಾಗಿ ವಿಮಾನ ನಿಲ್ದಾಣದ ಆಧುನೀಕರಣ ಭರದಿಂದ ನಡೆಯತೊಡಗಿತು.
ವಿಮಾನಯಾನಕ್ಕೆ ಬೇಕಾದ ಇಂಧನ ತುಂಬಾ ಅಗ್ಗವಾಗಿ ಕೊಲ್ಲಿರಾಷ್ಟ್ರಗಳಲ್ಲಿ ಸಿಗುತ್ತಾದರಿಂದ ಹೆಚ್ಚು ಹೆಚ್ಚು ವಿಮಾನಗಳು ಇಂಧನ ತುಂಬಿಸಲೆಂದೇ ದುಬೈಗೆ ಬರಲಾರಂಬಿಸಿದವು. ಅಷ್ಟೇ ರಭಸದಿಂದ ವಿಮಾನ
ನಿಲ್ದಾಣದ ವಿಸ್ತರಣೆಯಾಗತೊಡಗಿತು.
80ರ ದಶಕದ ಅಂತ್ಯದಲ್ಲಿ ಸೊವಿಯತ್ ಯೂನಿಯನ್ ವಿಭಜನೆಯಾದದ್ದು ವಿಮಾನ ಯಾನಕ್ಕೆ ವರದಾನವಾಯಿತು. ಅಷ್ಟು ಹೊತ್ತಿಗಾಗಲೇ ದುಬೈ ಏರ್ಪೋಟ್ ದೂರಯಾನದ ದೊಡ್ಡ ಜೆಟ್ ವಿಮಾನಗಳ ಆಗಮನಕ್ಕೆ ಸಜ್ಜಾಗಿನಿಂತಿತ್ತು.
ದುಬೈ ವಿಶ್ವಮಟ್ಟದ ವಾಣಿಜ್ಯ ಹಾಗೂ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿದ್ದಂತೆ ಜಗತ್ತಿನ ಎಲ್ಲೆಡೆಯಿಂದ ಎಂಜಿನಿಯರ್ಗಳು,ಕುಶಲಕರ್ಮಿಗಳು,
ಪೈಲಟ್ಗಳು,ಡ್ರೈವರ್ಗಳು,ಗಗನಸಖಿಯರು,ಮೆಕ್ಯಾನ್ನಿಕ್ಗಳುಲೋಡರ್ಗಳು ಬರಲಾರಂಬಿಸಿದರು. ಎಲ್ಲಾ ವರ್ಗಗಳ ಎಲ್ಲಾ ವಿಭಾಗದ ಬಾಗಿಲುಗಳು ಬಂದವರನ್ನು ಆದರದಿಂದ ಬರಮಾಡಿಕೊಂಡವು. ಯೂರೋಪಿಯನ್ನರು,ಭಾರತೀಯರು,ಆಫ್ರಿಕಾದವರು,ಚೈನೀಸ್,ಜಪಾನೀಯರು,ಪಾಕಿಸ್ತಾನಿಗಳು..
ವಸುದೈವ ಕುಟುಂಬಕಂ...ನೋಡಬೇಕು ಎನಿಸಿದರೆ ದುಬೈ ಏರ್ಪೋರ್ಟಿಗೆ ಹೋಗಿ ನೋಡಿ. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ 90 ಸಾವಿರ ಜನಗಳಿಗೆ ದುಬೈ ಏರ್ಪೋಟ್ ಉದ್ಯೋಗ ಕಲ್ಪಿಸಿಕೊಟ್ಟಿದೆ.
ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ಹೊಕ್ಕುಹೋಗುತ್ತಾರೆ!!
ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚಿನ ವಿಮಾನಗಳ ಟೇಕಾಫ್/ಲ್ಯಾಂಡಿಂಗ್ ಆಗುತ್ತದೆ. ಇಲ್ಲಿರುವ ಎರಡು ರನ್ವೆಗಳಲ್ಲಿ ಒಂದನ್ನು ವಿಮಾನಗಳನ್ನು ಇಳಿಸಲು ಮತ್ತೊಂದು ಟೇಕ್ ಆಫ್ ಮಾಡಲು ಬಳಸಲಾಗುತ್ತದೆ.
ದುಬೈನಲ್ಲಿ ಕೊತ್ತಂಬರಿಸೊಪ್ಪು ಸಹ ಬೆಳೆ ಯುವುದಿಲ್ಲ! ತರಕಾರಿ, ಹಣ್ಣು,ಹೂವು ಎಲ್ಲವೂ ಹೊರಗಿನಿಂದ ವಿಶೇಷವಾಗಿ ಭಾರತದಿಂದ ಬರಬೇಕು ಮತ್ತು ಬಂದ ಕೂಡಲೇ ತ್ವರಿತವಾಗಿ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ ವಿಶೇಷವಾದ
ಟರ್ಮಿನಲ್ ನಿರ್ಮಾಣಗೊಂಡಿದೆ.
ವಾಯುಯಾನ ಕಂಪನಿಗಳು ಲಾಭಗಳಿಸುವುದು ಏರೋಪ್ಲೇನುಗಳು ಹಾರಾಡುತ್ತಿರುವಾಗ,ನೆಲದ ಮೇಲೆ ಇದ್ದಾಗ ಅಲ್ಲ!ಆದ್ದರಿಂದಲೇ ಕನಿಷ್ಟ ಸಮಯದಲ್ಲಿ ಪ್ರಯಾಣಿಕರ ಆಗಮನ ನಿರ್ಗಮನ,
ತಾಂತ್ರಿಕ ಪರೀಕ್ಷೆ, ಸುರಕ್ಷಾ ತಪಾಸಣೆ,ಪೈಲೆಟ್ ಗಗನಸಖಿಯರ ಬದಲಾವಣೆ ಎಲ್ಲಾ ಅತಿಶೀಘ್ರವಾಗಿ ನಡೆಯಬೇಕು. ದುಬೈನಂತ ವಿಶಾಲವಾದ ಏರ್ಪೋಟ್ನಲ್ಲಿ ಇದು ಎಷ್ಟು ವ್ಯವಸ್ಥಿತವಾಗಿ ನಡೆಯತ್ತದ ಎಂದರೆ ಸುಮಾರು 180-200 ಪ್ರಯಾಣಿಕರನ್ನು ಹೊತ್ತು ತರುವ ವಿಮಾನಗಳು ಬರೀ 20 ನಿಮಿಷಗಳಲ್ಲಿ ಹೊರಡಲು ರೆಡಿ!
ನಮಗಂತೂ ದುಬೈಗೆ ಹೋಗುವುದೆಂದರೆ ತಿರುಪತಿಗೆ ಹೋಗಿಬಂದ ಹಾಗೆ,ಏಕೆಂದರೆ ಕೆಲವು ಸಲ ಲ್ಯಾಂಡಿಗ್ ಮಾಡಲು queue ನಲ್ಲಿ ನಮ್ಮದು ಹದಿನೆಂಟನೇ ಏರೋಪ್ಲೇನಾಗರುತ್ತದೆ! ಅಲ್ಲಿಗೆ ಹೋಗುವ ಮೊದಲು ಒಂದು ಮಟ್ಟದ ಕಾತುರ..ಈ ಸಲ ಹೇಗಿರಬಹುದು ಎಂದು. ಅಲ್ಲಿಂದ ಬಂದ ಮೇಲೆ,ಇಂತಹ ಅಧ್ಭುತದಲ್ಲಿ ನಾನೂ ಪಾಲ್ಗೊಂಡೆನೆಂಬ ಒಂದು ಧನ್ಯತಾ ಭಾವ.
ದೂರದೃಷ್ಟಿಯುಳ್ಳ ದಕ್ಷ ಆಡಳಿತ ಒಂದಿದ್ದರೆ ಮರಳುಗಾಡನ್ನೂ ಸ್ವರ್ಗದೋಪಾದಿಯಾಗಿ ಬದಲಾಯಿಸಬಹುದು ಎನ್ನುವ ನಂಬಿಕೆಗೆ ದುಬೈನೇ ಸಾಕ್ಷಿ.
No comments:
Post a Comment