ಮರಳಿ ಮನೆಗೆ
ಇಸ್ರೇಲಿನ ದಾಳಿಗಳ ಯಶಸ್ಸಿನ ರಹಸ್ಯ ಅವರ ಅದ್ವಿತೀಯ ಬೇಹುಗಾರಿಕೆಯ ಜಾಲ. ಪ್ರಪಂಚದ ಮೂಲೆ ಮೂಲೆಗಳಲ್ಲೂ ಇವರು ಹರಡಿ ಕೊಂಡಿದ್ದಾರೆ.
ಅರಬ್ ದೇಶಗಳಲ್ಲಿ,ಆಫ್ರಿಕಾದಲ್ಲಿ,ಅಮೆರಿಕಾದಲ್ಲಿ ಎಲ್ಲೆಲ್ಲೂ. ಹೋಟೆಲುಗಳಲ್ಲಿ ವೈಟರುಗಳಾಗಿ, ಟೈಲರುಗಳಾಗಿ,ಮೋಚಿಗಳಾಗಿ,ಯಾವ ಕೆಲಸವಾದರೂ ಸರಿ,ಮೈಯೆಲ್ಲಾ ಕಣ್ಣಾಗಿಸಿ ಮಾಹಿತಿ ಕಲೆ ಮಾಡಿ ಇಸ್ರೇಲಿಗೆ ತಲುಪಿಸುವುದೇ ಇವರ ಮುಖ್ಯ ಉದ್ದೇಶ. ಕೆಲವು ಸಲ 'ಟಾರ್ಗೆಟ್' ಗಳನ್ನು ನಿಷ್ಕ್ರಿಯಗೊಳಿಸುವುದನ್ನೂ ಸಹ ಲೀಲಾಜಾಲವಾಗಿ ಮಾಡಿ ಮುಗಿಸಿ ಬಿಡುತ್ತಾರೆ! ಇವರ ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಚಾಣಾಕ್ಷರು,ನಿರ್ದಯಿಗಳು,ಏಕಾಂಗಿಗಳು ಆದರೆ ತಮ್ಮ ದೇಶದ ಬಗ್ಗೆ ಇರುವ ಅಚಲ ಅಭಿಮಾನವೇ ಇವರಿಗಿರುವ ಸ್ಪೂರ್ತಿ.
ಎಂಟೆಬ್ಬೆಯಕಾರ್ಯಾಚರಣೆಯಲ್ಲಿ ಇವರು ನಿರಂತರವಾಗಿ ಕಳುಹಿಸುತ್ತಿದ್ದ ಮಾಹಿತಿಯಾಧಾರದ ಮೇಲೇ ಎಲ್ಲವೂ ನಿರ್ಭರವಾಗಿತ್ತು. ಇಸ್ರೇಲಿ ಒತ್ತೆಯಾಳುಗಳನ್ನು ಎಲ್ಲಿಟ್ಟಿದ್ದಾರೆ, ಅಪಹರಣಕಾರು ಎಷ್ಟು ಜನರಿದ್ದಾರೆ,ಅವರ ವಿವರಣೆ. ಏರ್ಪೋರ್ಟಿನ ವಿವರಣೆ,ಎಷ್ಟು ಬಾಗಿಲುಗಳಿವೆ,ಎಷ್ಟು ಮೆಟ್ಟಿಲುಗಳಿವೆ, ಈ ಸಣ್ಣ ಸಣ್ಣ ವಿವರಗಳೂ ತುಂಬ ಮಹತ್ವದ ವಿಷಯ. ಇನ್ನೊಂದು ಕಡೆಗಣಿಸಲಾಗದ ವಿಷಯವೆಂದರೆ ಯಹೂದಿಗಳು ಮಾರವಾಡಿಗಳ ತರಹ, ಚಿನ್ನ,ಬೆಳ್ಳಿ,ವಜ್ರಗಳ ವ್ಯಾಪಾರ ಇವರಿಗೆ ಅನುವಂಶೀಯವಾಗಿ ಬಂದ ಬಳುವಳಿ, ಹಾಗಾಗಿ ಅಫ್ರಿಕಾದ ದೇಶಗಳಲ್ಲಿ ಇವರ ಪ್ರಭಲತೆಯನ್ನು ಅಲ್ಲಿಯ ಸರಕಾರವೂ ಒಪ್ಪಿಕೊಳ್ಳುತ್ತದೆ. ಎಂಟೆಬ್ಬೆಯ ಕಾರ್ಯಾಚರಣೆಯಲ್ಲಿ ಇದೊಂದು ಮಹತ್ತರ ಅಂಶ.
ಈ ಶ್ರೀಮಂತ ಇಸ್ರೇಲಿಯರ ವರ್ಚಸ್ಸಿನಿಂದಾಗಿ ಉಗಾಂಡದ ಪಕ್ಕದ ದೇಶ ಕೆನ್ಯಾ , ಇಸ್ರೇಲಿ ಸೈನ್ಯದ ಕಾರ್ಯಾಚರಣೆಗೆ ಸಹಾಯ ಮಾಡಲು ಒಪ್ಪಿಕೊಂಡಿತು. ಅದರಂತೆ ಸೈನ್ಯದ ಉನ್ನತ ಅಧಿಕಾರಿಗಳು ಬೋಯಿಂಗ್ 707 ವಿಮಾನದಲ್ಲಿ ಬಂದಿಳಿದುಬಿಟ್ಟರು. ಪ್ಲಾನಿನ ಪ್ರಕಾರ ಇಸ್ರೇಲಿನಿಂದ ಹರ್ಕ್ಯುಲಿಸ್ ಉಗಾಂಡಕ್ಕೆ ತಲುಪುವವಷ್ಟು ಹೊತ್ತಿಗೆ ವಿಮಾನದಲ್ಲಿ ಸ್ವಲ್ಪವೇ ಇಂಧನ ಉಳಿದು ಕೊಂಡಿರುತ್ತದೆ. ಎಂಟೆಬ್ಬಯ ಕಾರ್ಯಾಚರಣೆ ಮುಗಿಸಿ ಅಲ್ಲಿಂದ ಕೆನ್ಯಾದ ನೈರೋಬಿಯಲ್ಲಿಳಿದು ಇಂಧನ ತುಂಬಿಸಿಕೊಂಡು ಇಸ್ರೇಲಿಗೆ ಮರುಳುವುದೆಂದು ಒಪ್ಪಂದವಾಯಿತು.
ನಾಲ್ಕು ಹರ್ಕ್ಯುಲಿಸ್ ವಿಮಾನಗಳು ಶತ್ರುದೇಶದ ರಡಾರುಗಳಿಂದ ಕಣ್ತಪ್ಪಿಸಿ ಉಗಾಂಡ ತಲುಪುವಷ್ಟರಲ್ಲಿ ಮಧ್ಯರಾತ್ರಿಯ ಹನ್ನೆರಡು ಗಂಟೆ. ಮೊದಲನೆಯ ವಿಮಾನ ಭೂಸ್ಪರ್ಶ ಮಾಡಿ ರನ್ ವೇಯ ಕೊನೆಯನ್ನು ತಲುಪಿತು. ಪ್ಲೇನು ಇನ್ನೂ ಚಲಿಸುತ್ತಿದ್ದಾಗಲೇ ಕೆಲವು ಕಮಾಂಡೊಗಳು ಹೊರಗೆ ಧುಮಿಕಿ ರನ್ ವೇಯ ಇಕ್ಕೆಲಗಳಲಲ್ಲಿ ಬೆಳಕಿನ ಬೀಕನ್ನುಗಳನ್ನು ಇಟ್ಟು ಕೊಳ್ಳುತ್ತಾ ಹೋದರು. ಇದರಿಂದ ಇತರೆ ಮೂರು ವಿಮಾನಗಳು ಸುಸೂತ್ರವಾಗಿ ಭೂಸ್ಪರ್ಶ ಮಾಡಿದವು. ವಿಮಾನದಿಂದ ಭರ್ ಭರ್ರೆನ್ನುತ್ತಾ ಕಮಾಂಡೋಗಳು ಕಾರುಗಳನ್ನು ಡ್ರೈವ್ ಮಾಡಿಕೊಂಡು ಗೇಟಿನ ಕಡೆ ದೌಡಾಯಿಸಿದರು. ಎಲ್ಲವೂ ರಿಹರ್ಸಲ್ ಮಾಡಿದಂತೇ ನಡೆಯುತ್ತಿತ್ತು.
ಗೇಟಿನಲ್ಲಿದ್ದ ಇಬ್ಬರು ಗಾರ್ಡುಗಳು ನಿರೀಕ್ಷಿಸಿದಂತೆ 'stop'ಎಂದು ಗುಡುಗಿದರು, ಅದು ಅವರ procedure. ಈದಿ ಅಮೀನೇ ಇರಬಹುದೆಂದು ಗೇಟಿಗೆ ಹಾಕಿದ್ದ ಅಡ್ಡಕಂಬಿಯನ್ನು ಇನ್ನೇನು ಎತ್ತ ಬೇಕು ಅನ್ನುವಷ್ಟರಲ್ಲಿ ಹತ್ತಿರಕ್ಕೆ ಸಲ್ಯೂಟ್ ಮಾಡಲು ಬಂದ ಗಾರ್ಡ ಕಣ್ಣುಕಿರಿದಾಗಿಸಿ ಮುಂದಿನ ಸೀಟಿನಲ್ಲಿದ್ದ ವ್ಯಕ್ತಿಯನ್ನು ಅನುಮಾಸ್ಪದವಾಗಿ ನೋಡುತ್ತಲೇ ಟ್ರಿಗರಿನ ಕಡೆ ಕೈ ಚಲಿಸಲು ಶುರುವಾಯ್ತು. ಇನ್ನು ತಡಮಾಡಿದರೆ ಶೂಟ್ ಮಾಡಿಬಿಡುತ್ತಾರೆಂದು ,ಸೈಲೆನ್ಸರ್ ಅಡವಳಿಸಿದ ಪಿಸ್ತೊಲಿನಿಂದ ಕ್ಷಣಾರ್ದದಲ್ಲಿ ನೆಲಕ್ಕುರಿಳಿಸಿಬಿಟ್ಟರು ಕರ್ನಲ್ ನೆತನ್ಯಾಹು. ಆದರೆ ಅವರಿಬ್ಬರೂ ಸತ್ತಿರಲಿಲ್ಲ . ಇದನ್ನು ಗಮನಿಸಿದ ಹಿಂದಿನಿಂದ ಬಂದ ಕಮಾಂಡೊ, ಹೀಗೆ ಇವರನ್ನು ಬಿಟ್ಟರೆ ಎಚ್ಚರವಾದಮೇಲೆ ಹಿಂದಿನಿಂದ ಆಕ್ರಮಣ ಮಾಡುವ ಸಾಧ್ಯತೆ ಇರುತ್ತದೆ ಎಂದು ,ಬಂದೂಕಿನಿಂದ ಡಮಾರ್ ಎಂದು ಗುಂಡು ಹಾರಿಸಿ ಮುಗಿಸೇಬಿಟ್ಟ.
ಇಡೀ ಕಾರ್ಯಾಚರಣೆಯ ಮೂಲಮಂತ್ರವಾಗಿದ್ದ "Surprise Element" ಅನಿರೀಕ್ಷತತೆಯ ತಂತ್ರ ,ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಈ ಗೌಪ್ಯತೆಯನ್ನು ಆದಷ್ಟು ಕಾಪಾಡಿಕೊಂಡಿರಬೇಕಾದ ನಿಯಮ ಅಲ್ಲಿಗೆ ಮುಗಿದೇಬಿಟ್ಟಿತು. ಆಸುಪಾಸಿನಲ್ಲಿದ್ದ ಉಗಾಂಡದ ಸೈನಿಕರು ಗಾಬರಿಗೊಂಡು ಹಿಗ್ಗಾ ಮುಗ್ಗಾ ಫೈರಿಂಗ್ ಮಾಡತೊಡಗಿದರು. ಒಳಗಿದ್ದ ಒತ್ತೆಯಾಳುಗಳು ಈ ಟೆರರಿಸ್ಟುಗಳೇ ಗುಂಡು ಹಾರಿಸುತ್ತಿದ್ದಾರೆ ಇನ್ನೇನು ನಮ್ಮ ಕಥೆ ಮುಗಿದಹಾಗೇ ಎಂದು ಗಾಬರಿಗೊಂಡರು. ಈಗೇನು ಮಾಡುವುದು ಎನ್ನುವ ಅನಿಶ್ಚಿತೆ ಕಮಾಂಡೋಗಳಲ್ಲೂ ಉಂಟಾಯಿತು. ಇಂತಹ ಪರಿಸ್ಥಿತಿಯನ್ನು ಹಲವಾರು ಬಾರಿ ಅನುಭವಿಸಿದ್ದ ಕರ್ನಲ್ ನೆತನ್ಯಾಹು ತ್ವರಿತವಾಗಿ ರಣತಂತ್ರವನ್ನು ಬದಲಿಸಿದರು. ಮೊದಲನೇ ಕಮಾಂಡೊ ಪಡೆಯನ್ನು ಒತ್ತೆಯಾಳುಗಳಿದ್ದ ಕಡೆ ದೌಡಾಯಿಸಿದರು. ಎರಡನೇ ಪಡೆಯನ್ನು ಉಂಗಾಂಡದ ಸೈನಿಕರನ್ನು ಹಿಮ್ಮೆಟ್ಟಲು ಆದೇಶಿಸಿದರು. ಇದನ್ನೆಲ್ಲಾ ಮುಂದೆನಿಂತು ಆದೇಶಿಸುವ ಸಮಯದಲ್ಲೇ ATC tower ನ ಮೇಲಿದ್ದ ಒಬ್ಬ ಉಗಾಂಡದ ಸೈನಿಕ ಇವರ ಮೇಲೆ ಗುಂಡು ಹಾರಿಸೇ ಬಿಟ್ಟ. ಕುಸಿದು ಬಿದ್ದ ನೇತನ್ಯಾಹು. ಕಾಮಾಂಡೋಪಡೆಗಳಲ್ಲಿ ಆಹಾಕಾರ ಉಂಟಾಯಿತು. ನಮ್ಮ ಕಮಾಂಡಿಂಗ್ ಆಫೀಸರ್ಗೆ ಗುಂಡೇಟು ಬಿತ್ತು....ಅದರಲ್ಲೇ ಸಾವರಿಸಿಕೊಂಡು ಅಪಹರಣಕಾರರನ್ನು ಮೊದಲು ಮುಗಿಸಿಬಿಡಿ ಎಂದು ಆದೇಶಿಸಿದರು. ಕಮಾಂಡೋಗಳು ಇನ್ನಿಲ್ಲದ ರೋಷದಿಂದ ಅಪಹರಣಕಾರರನ್ನು ಅಟ್ಟಾಡಿಸಿಕೊಂಡು ಗುಂಡಿಕ್ಕಿ ಕೊಂದು ಬಿಟ್ಟರು. ಒತ್ತೆಯಾಳುಗಳಿಗೆ ಇಸ್ರೇಲಿ ಮಾತೃಭಾಷೆಯಲ್ಲಿ 'ನಾವು ಇಸ್ರೇಲಿ ಸೈನಿಕರು ನಿಮ್ಮನ್ನು ಕರೆದು ಕೊಂಡು ಹೋಗಲು ಬಂದಿದ್ದೇವೆ' ಎಂದು ಕೂಗಿ ಹೇಳಿದಾಗಲಂತೂ ಇದೇನಿದು ಪವಾಡ...ಪವಾಡ ಎಂದರು ಒಕ್ಕೊರಲಿನಿಂದ. ಉಳಿದ ಇಬ್ಬರು ಅರಬ್ ಆತಂಕವಾದಿಗಳು ಅವಿತಿದ್ದ ಬಾತ್ ರೂಮಿನಲ್ಲೇ ಅವರನ್ನು ಛಿದ್ರಗೊಳಿಸಿದರು.
ಅದೇ ಸಮಯಕ್ಕೆ ನಾಲ್ಕನೇ ಹರ್ಕ್ಯುಲಿಸ್ ಏರೋಪ್ಲೇನು ಒತ್ತಯಾಳುಗಳಿದ್ದ ಕಟ್ಟಡದ ಸಮೀಪವೇ ಬಂದಿತು. ತ್ವರಿತವಾಗಿ ಎಲ್ಲರನ್ನು ಅದರಲ್ಲಿ ಕೂರಿಸಿ ಕೆಲವೇ ನಿಮಿಷಗಳಲ್ಲಿ ಎಂಟೆಬ್ಬೆಯಿಂದ ಹೊರಟೇ ಬಿಟ್ಟಿತು. ಸುಮಾರು 45 ಉಗಾಂಡದ ಸೈನಿಕರು ಹತರಾದರು. ನಿಧಾನವಾಗಿ ಗುಂಡಿನ ಶಬ್ದಗಳು ಆಗೊಂದು ಈಗೊಂದು ಕೇಳಿ ಬರುತ್ತಿತ್ತು. ಕರ್ನಲ್ ನೆತನ್ಯಾಹುವನ್ನು ಇಸ್ರೇಲಿ ಡಾಕ್ಟರುಗಳು ತಮ್ಮ ಸುಪರ್ದಿಗೆ ತೆಗೆದು ಕೊಂಡು ಅವರನ್ನು ಉಳಿಸಲು ಇನ್ನಿಲ್ಲದ ಪ್ರಯತ್ನಮಾಡತೊಡಗಿದರು. ಆದರೆ ನೆತ್ತರು ತುಂಬಾ ಹರಿದಿತ್ತು.
ಕಾರ್ಯಾಚರಣೆಯನ್ನು ಮುಗಿಸಿದ ಮೂರು ಹರ್ಕ್ಯುಲಸ್ ವಿಮಾನಗಳು ಕೆನ್ಯದ ನೈರೋಬಿಯ ಕಡೆ ಹೊರಟವು. ನಾಲ್ಕನೆಯ ವಿಮಾನದಲ್ಲಿದ್ದ ಕಮಾಂಡೋಗಳಿಗೆ ಇನ್ನೊಂದು ಅಂತಿಮ task ಉಳಿದಿತ್ತು. ಇನ್ನೇನು ಕೆಲವೇ ಸಮಯದಲ್ಲಿ ಈದಿ ಅಮೀನನಿಗೆ ವಿಷಯತಿಳಿದು ಅವಮಾನದಿಂದ ಕುದ್ದು ಹೋಗುತ್ತಾನೆ. ಸೇಡು ತೀರಿಸಿ ಕೊಳ್ಳಲು ಯುಧ್ಧ ವಿಮಾನಗಳನ್ನು ಇಸ್ರೇಲಿ ಪ್ಲೇನುಗಳ ಮೇಲೆ ಆಕ್ರಮಣಕ್ಕೆ ಆದೇಶಿಸ ಬಹುದು. ಕೆಲವೇ ನಿಮಿಷಗಳಲ್ಲಿ ಎಂಟಬ್ಬೆಯಲ್ಲಿದ್ದ ಎಲ್ಲಾ ಹನ್ನೊಂದು ಯುಧ್ಧವಿಮಾನಗಳನ್ನು ನೆಲಸಮ ಮಾಡಿ ಅವರೂ ಅಲ್ಲಿಂದ ನಿರ್ಗಮಿಸುತ್ತಾರೆ.
ಈದಿ ಅಮೀನನಿಗೆ ಅನ್ನಿಸಿರಬಹುದು... ಬೀದಿಲಿ ಹೋಗ್ತಿದ್ದ ಮಾರಿನ ಮನಿಗ್ಯಾಕ್ ಕರಕಂಡು ಬಂದೆ. ಸುಖಾಸುಮ್ಮನೆ ಹನ್ನೊಂದು ಯುಧ್ಧ ವಿಮಾನಗಳನ್ನ ಕಳೊಕೊಂಡೆ, 45 ಸೈನಿಕರನ್ನು ಕಳೊಕೊಂಡೆ ಅಂತರಾಷ್ಟ್ರವಲಯದಲ್ಲಿ ಮಂಗನಾದೆ....
ಎಂಟು ಗಂಟೆಯ ಪ್ರಯಾಣದ ನಂತರ ,ಎಂಟು ದಿನಗಳ ನರಕಯಾತನೆಯನಂತರ 103 ಇಸ್ರೇಲಿಯರು ಮರಳಿ ಮನೆಗೆ ಬಂದರು.
ಜಗತ್ತೇ ನಿಬ್ಬರಗಾಗಿ ಈ ನಂಬಲಸಾಧ್ಯವಾದ ಸಾಹಸಗಾಥೆಗೆ ಸಲ್ಯೂಟ್ ಹೊಡೆಯಿತು. ಆದರೆ ಇಸ್ರೇಲಿಗರು ತಮ್ಮನ್ನಗಲಿದ ಗಂಡೆದೆಯ ವೀರ ಕರ್ನಲ್ ಜೋನಾತನ್ ನೆತನ್ಯಾಹುವುನ ಬಲಿದಾನದ ಬೆಲೆಯನ್ನು ಎಂದೂ ಮರೆತಿಲ್ಲ.
No comments:
Post a Comment