Tuesday, October 25, 2016

ಅರಣ್ಯ ಕಾಂಡ

ಭಾರತೀಯ ವಾಯುಸೇನೆಯ ಫೈಟರ್ ಏರೋಪ್ಲೇನುಗಳ ಸೀಟಿನ ವಿನ್ಯಾಸ ಹೇಗಿರುತ್ತದೆ ಎಂಬುದು ಬಹಳ ಕುತೂಹಲಕಾರಿ ವಿಷಯ. ಇದನ್ನು ejection seat ಎನ್ನುತ್ತಾರೆ.
     ನಾಲ್ಕು ಉಕ್ಕಿನ ತೂಬುಗಳ ಮೇಲೆ ಸೀಟನ್ನು ಭಧ್ರಪಡಿಸಿರುತ್ತಾರೆ ಮತ್ತು ಈ ತೂಬಿನ ಒಳಗೆ ಸಿಡಿಮದ್ದಿನ ಪ್ಯಾಕಿಂಗ್ ಮಾಡಿರುತ್ತಾರೆ. ಪ್ಲೇನು ಶತ್ರುಗಳ ಮಿಸೈಲ್ ಆಕ್ರಮಣಕ್ಕೆ ತುತ್ತಾಗಿ ಅಥವಾ ತಾಂತ್ರಿಕ ದೋಷದಿಂದ ಅನಿವಾರ್ಯವಾಗಿ ಆ ಪೈಲಟ್ ಹಾರುತ್ತಿರುವ ಏರೋಪ್ಲೇನಿನಿಂದ ಹೊರಬರಬೇಕು ಎಂದ ಕೂಡಲೆ ಕೆಲವು ಕಂಟ್ರೊಲುಗಳ ಸಹಾಯದಿಂದ ಈ ಸೀಟಿನ ಕೆಳಗಿರುವ ಸಿಡಿಮದ್ದುಗಳು ನಿಯಂತ್ರಿತ ರೀತಿಯಲ್ಲಿ ಸ್ಫೊಟಗೊಂಡು ಸೀಟಿನ ಸಮೇತ ಪೈಲಟ್ ಹೊರಗೆ ಎಸೆಯಲ್ಪಡುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಪ್ಯಾರಾಚೂಟು ಬಿಚ್ಚಿಕೊಳ್ಳುತ್ತದೆ. ಇಷ್ಟೆಲ್ಲಾ ಆಗವುದು ಕೆಲವೇ ಸೆಕೆಂಡುಗಳಲ್ಲಿ! ಈ ಸೀಟಿನಲ್ಲೇ ಒಂದು survival pack ಇರುತ್ತದೆ. ಇದರಲ್ಲಿ ಕೆಲವು ಚಾಕೊಲೆಟ್,ಸೂಪಿನ ಪೊಟ್ಟಣಗಳು, ಕೆಲವು ಮೇಣದ ಬತ್ತಿಗಳು,ಆತ್ಮರಕ್ಷಣೆಗೆ ಬೇಕಾದ ಕೆಲವು ಆಯುಧಗಳು ಇರುತ್ತವೆ. ಯುಧ್ಧದ ಸಮಯದಲ್ಲಿ ಒಂದು ಪಿಸ್ತೂಲು ಮತ್ತು ಶತ್ರುದೇಶದ ಹಣವನ್ನೂ ಪ್ಯಾಕ್ ಮಾಡಿರುತ್ತಾರೆ.

            ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ,ನಾವು ಭಾಗವಹಿಸುತ್ತಿರುವ Jungle and snow survival ಕೋರ್ಸು ಇದೇ ಹಿನ್ನಲೆಯಿಂದ ರಚಿತವಾದದ್ದು. ಈ ಕೋರ್ಸಿನ ಕೊನೆಯ ಭಾಗವಂತೂ ಇನ್ನೂ ರೋಚಕ ,ಅದರಲ್ಲಿ ನಮಗೆ ಅಪರಿಚಿತ ಕೆಲವು ಸೈನಿಕರಿಂದ ತಪ್ಪಿಸಿಕೊಂಡು ಒಂದು ನಿರ್ದಿಷ್ಟ ಸ್ಥಳವನ್ನು ತಲುಪಬೇಕು. ಅವರ ಕೈಗೇನಾದರು ಸಿಕ್ಕಿಬಿದ್ದರೆ 'ಯುಧ್ಧ ಕೈದಿ' ಎಂದು ಘೋಷಿಸಲಾಗುತ್ತದೆ.
     ಕಾಡಿನಲ್ಲಿ ಬೆಂಕಿ ಮಾಡಿಕೊಂಡು ಮತ್ತು ಅದನ್ನು ಆರದಹಾಗೆ ನೋಡಿಕೊಳ್ಳುವುದು ಒಂದು ಅತ್ಯಂತ ತಾಳ್ಮೆಯ ಮತ್ತು ಶಿಸ್ತಿನ ಕೆಲಸ. ಬೆಂಕಿಯೊಂದಿದ್ದರೆ,ಒಂದು ಮಟ್ಟದ ಆತ್ಮಸ್ಥೈರ್ಯವಿರುತ್ತದೆ.  ಎನನ್ನಾದರೂ ಬೇಯಿಸಿಕೊಂಡು ಹಸಿವು ನೀಗಿಸಿಕೊಳ್ಳಬಹುದು,ಕಾಡುಪ್ರಾಣಿಗಳ ಹೆದರಿಕೆ ಇರುವುದಿಲ್ಲ ಮತ್ತು ಇನ್ನೊಂದು ಮುಖ್ಯವಾದ ಅಂಶ ಎಂದರೆ ಈ ತರಹದ ಘಟನೆಗಳಾದ ನಂತರ ಹೆಲಿಕಾಪ್ಟರ್ಗಳಿಂದ ಹುಡುಕಾಟದ ಪ್ರಕ್ರಿಯೆ ಶುರುವಾಗುತ್ತದೆ ಹೊಗೆಯ ಜಾಡು ಸಿಕ್ಕರೆ ಅನುಕೂಲ.
     ಇನ್ನು ಕಾಡಿನಲ್ಲಿ ಏನೇನು ತಿನ್ನಬಹುದು ಎನ್ನುವುದೂ ಬಹಳ ಸಂಯಮದಿಂದ ಮಾಡಬೇಕಾದ ಕೆಲಸ. ಹಸಿವಿನ ಒತ್ತಡ ತಾಳಲಾರದೆ ಏನನ್ನಾದರೂ ತಿಂದು ಆಪತ್ತಿಗೀಡಾಗುವುದು ಬಹಳ ಸುಲಭ. ಕೋತಿಗಳು ತಿನ್ನುವುದನ್ನು ಮನುಷ್ಯರು ತಿನ್ನಬಹುದು  ಎಂಬ ಸಲಹೆ ಎಲ್ಲಾಸಮಯದಲ್ಲೂ ಅನುಸರಿಸುವುದು ಕಷ್ಟ. ಅನಿವಾರ್ಯತೆ ಇದ್ದರೆ ಹಾವೂ ಸಹ ಆಹಾರದ ವಸ್ತು! ತಲೆಯಿಂದ ಆರು ಇಂಚು ಬಾಲದಿಂದ ಆರು ಇಂಚು ಕತ್ತರಿಸಿದರೆ ಉಳಿದಿದ್ದನ್ನು ಬೆಂಕಿಯಲ್ಲಿ ಚೆನ್ನಾಗಿ ಸುಟ್ಟರೆ ಸ್ನೇಕ್ ಕಬಾಬ್ ರೆಡಿ!
     ಕಾಡಿನಲ್ಲೇ ಸಿಗುವ ಗಡ್ಡೆ ಗೆಣಸುಗಳು ಹಣ್ಣು ಹಂಪಲುಗಳನ್ನೂ ಸಹ ತಾಳ್ಮೆಯಿಂದ ಆರಿಸಿಕೊಳ್ಳಬೇಕು ಏನನ್ನೂ ಅವಸರದಿಂದ ತಿನ್ನಬಾರದು. ಇಷ್ಟೆಲ್ಲಾ ದೈಹಿಕ ಹಂತದ ತರಬೇತಿಯ ವಿಷಯಗಳಾದರೆ,ಮಾನಸಿಕವಾಗಿಯೂ ಸ್ಥೈರ್ಯ,ವಿಶ್ವಾಸಗಳನ್ನು ಧೃಢವಾಗಿ ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖವಾದ ವಿಷಯ ಮತ್ತು ಅದು ಪ್ರತ್ಯಕ್ಷವಾಗಿ ಅನುಭವವಾದಾಗಲೇ ಅದರ ಮಹತ್ವ ತಿಳಿಯುವುದು.
      ಇಷ್ಟೆಲ್ಲಾ ಪೂರ್ವಸಿಧ್ಧತೆಯ ನಂತರ ಕಾಡಿಗೆ ಹೊರಡುವ ದಿನ ಬಂದೇಬಿಟ್ಟಿತು. ಶ್ರೀನಗರದಿಂದ 'ಸರ್ಸಾವ' ಎನ್ನುವ ಪಂಜಾಬಿನ ವಾಯುನೆಲೆಗೆ ವಾಯುಸೇನೆಯ ವಿಮಾನಯಾನ, ಅಲ್ಲಿಂದ ಡೆಹ್ರಾಡೂನಿನ ಸಮೀಪದ ಕಾಡಿಗೆ ಟ್ರಕ್ಕುಗಳಲ್ಲಿ ಪ್ರಯಾಣ ಮುಂದುವರೆಯಿತು.
      ನೀಲಿಬಣ್ಣದ flying dress,ಸೊಂಟಕ್ಕೆ ಕಟ್ಟಿಕೊಂಡ 'ಕುಕ್ರೀ',ಪ್ಯಾರಾಚೂಟಿನ ಜೊತೆಗೆ ಒಂದು ಚಿಕ್ಕ survival pack, ಒಂದು ಪಿಂಗಾಣಿಯ ನೀರಿನ ಬಾಟಲು,ಇವಿಷ್ಟೇ ನಮ್ಮ ಜೊತೆಗೆ ತೆಗೆದುಕೊಂಡು ಹೋಗಬಹುದಾದ ವಸ್ತುಗಳು. ಕೆಲವರು ಸ್ವಲ್ಪ ತಿನಿಸುಗಳನ್ನು ಕಳ್ಳಸಾಗಾಣಿಕೆ ಮಾಡುವ ವ್ಯರ್ಥಪ್ರಯತ್ನವನ್ನೂ ಮಾಡಿದರು,ಬ್ರಷ್,ವಾಚು, ಬಾಚಿಣಿಕೆಗಳನ್ನೂ ಬಿಡದೆ ನಿರ್ದಾಕ್ಷಿಣ್ಯವಾಗಿ ಕಿತ್ತೊಗೆದರು. ನಾಲ್ಕುದಿನಗಳ ಕಾಡಿನವಾಸವೇನು ಮೋಜಿನ ಪ್ರವಾಸವೇನೂ ಆಗಲಾರದು ಎಂದು ಗೊತ್ತಿದ್ದರೂ ಉತ್ಸಾಹದಿಂದಲೇ ಕಾಡಿನಲ್ಲಿ ಬಂದಿಳಿದೆವು. ತರಬೇತಿ ಸಿಬ್ಬಂದಿಯವರು ಇನ್ನೊಮ್ಮೆ ಎಲ್ಲಾ ವಸ್ತುಗಳ ತಪಾಸಣೆ ನಡೆಸಿ ನಿರ್ಗಮಿಸಿದರು. ಅಂತೂ ಹರಸಾಹಸ ಮಾಡಿ ಒಂದು ಪೆನ್ನು ಉಳಿಸಿಕೊಂಡಿದ್ದೆ! ಬರೆಯುವಗೀಳು ಮೊದಲಿಂದಲೂ ಇತ್ತು.
      ಮೊಟ್ಟಮೊದಲು ನಾವೆಲ್ಲಾ ಮಾಡಿದ ಕೆಲಸವೆಂದರೆ ಎರಡು ಮರಗಳ ನಡುವೆ ಪ್ಯಾರಾಚೂಟನ್ನು ಕಟ್ಟಿ ನಮ್ಮ ಮಲಗುವ ವ್ಯವಸ್ಥೆಯನ್ನು ಮಾಡಿಕೊಂಡೆವು.
      ಕೆಲವು ಕೆಲಸಗಳನ್ನು ನಮ್ಮ ನಮ್ಮಲ್ಲೇ ಹಂಚಿಕೊಂಡೆವು಼. ಕೆಲವರು ನೀರನ್ನು ಹುಡುಕಲು ಹೊರಟರು,ಇನ್ನು ಕೆಲವರು ಸೌದೆ ಮತ್ತು ಗರಿಕೆಗಳನ್ನು ಕಲೆಹಾಕತೊಡಗಿದರು. ಕತ್ತಲಾಗುವ ಮುನ್ನ ಬೆಂಕಿಯ ಸ್ಥಾಪನೆಯಾಗಲೇ ಬೇಕು.
      ದುರಾದೃಷ್ಟದಿಂದ ಆಗಲೇ ಸಣ್ಣಗೆ ಮಳೆ ಶುರುವಾಯಿತು.  ಬೆಂಕಿಮಾಡುವ  ಕೆಲಸವನ್ನು ನಾನು ವಹಿಸಿಕೊಂಡಿದ್ದೆ. ಸ್ವಲ್ಪ ಹೊತ್ತು ಹಾಗೇ ಕುಳಿತುಕೊಂಡು ಸುತ್ತಲೂ ವೀಕ್ಷಿಸಿದೆ. ಇದ್ದುದರಲ್ಲೆ ಒಣಗಿದ ಕಟ್ಟಿಗೆ ತುಂಡುಗಳನ್ನು ಆರಿಸಿಕೊಂಡು ಪ್ಯಾರಾಚೂಟಿನ ಕೆಳಗೆ ಕುಳಿತು ಒಂದು ಕಟ್ಟಿಗೆಯನ್ನು ಕುಕ್ರಿಯಿಂದ ಕೆತ್ತಿ ಮೊನಚು ಮಾಡಿಕೊಂಡು ಇನ್ನೊಂದು ತುಂಡಿನ ತೊಗಟನ್ನು ತೆಗೆದು ಸಪೂರ ಮಾಡಿಕೊಂಡು,ಚೂಪಾದ ತುಂಡನ್ನು ಅದರ ಮೇಲೆ ಉಜ್ಜುತ್ತಾ ಹೋದೆ.
      ಸುತ್ತಲಿನ ಶಬ್ದಗಳನ್ನು ಆಲಿಸುತ್ತಾ ಹೋದೆ, ಶಬ್ದದ ತರಂಗಗಳನ್ನು ಆಳವಾಗಿ ಕೇಳಿಸಿಕೊಳ್ಳುತ್ತಾ ಹೋಗಿ,ಅದನ್ನು ವಿಷ್ಲೇಶಿಸಬೇಡಿ ಎನ್ನುತ್ತಾರೆ ಜಿದ್ದು ಕೃಷ್ಣಮೂರ್ತಿ. ಅತಿ ತೀಕ್ಷಣವಾದ ಅರಿವಿನಿಂದ ಆಲಿಸುತ್ತಾಹೋದೆ. ಎಲೆಗಳ ಮೇಲೆ ಬೀಳುತ್ತಿದ್ದ ಮಳೆ ಹನಿಗಳು, ಜೀರುಂಡೆಗಳ,ಹಕ್ಕಿಗಳ ಕೂಗು,ಅದು ಬಿಟ್ಟರೆ ಇನ್ನೆಲ್ಲ ನಿಶಬ್ದ,ನೀರವತೆ.  ಆ ನಿಶಬ್ದತೆಯಲ್ಲೂ ನಾದಗಳ ಮೇಳ ನಡೆಯತ್ತಿತ್ತು. ಕಿವಿಗಳು ಬಿಸಿಯಾದ ಅನುಭವ. ನಾನು ಈ ನಾದ ಮೇಳದ ಒಂದು ಅವಿಭಾಜ್ಯ ಅಂಗ, ನಾನು ಬೆಂಕಿ ಮಾಡಲು ತಿಕ್ಕುತ್ತಿದ್ದಾ ಗಸ ಗಸ ಶಬ್ದವೂ ಈ ಆರ್ಕೆಸ್ಟ್ರಾದ ವಾದ್ಯ...ಹೀಗೇ ಸುತ್ತಲಿನದೆಲ್ಲಾ ಉತ್ಕಟವಾಗಿ ಆಲಿಸುತ್ತಿದ್ದಾಗ ಶರೀರದ ಆಯಾಸವೆಲ್ಲಾ ನೀಗಿ ಹೊಸ ಉತ್ಸಾಹದೊಂದಿಗೆ ನನ್ನ ಆರ್ಕೇಸ್ಟ್ರಾದ ನಾದದಗತಿಯನ್ನು ತೀವ್ರಗೊಳಿಸಿದೆ.
      "ನಿಶಬ್ದದಲ್ಲೂ ಅವೆಷ್ಟು ಶಬ್ದಗಳಿವೆ!"

      ಒಮ್ಮೆಲೇ ಕೈಗೆ ಬಿಸಿ ತಗುಲಿತು. ಇಲ್ಲಿಯವರೆಗೂ ಹೊಗೆಯಾಡುತ್ತಿದ್ದ ಕಟ್ಟಿಗೆಯ ಮೊನಚಾದ ತುದಿಗೆ ಬೆಂಕಿ ಹತ್ತಿಕೊಂಡಿತು! ನನ್ನನ್ನೇ ಆಶ್ಚರ್ಯದಿಂದ ನೊಡುತ್ತಿದ್ದ ಇಬ್ಬರು ಸಹ ಪೈಲಟ್ಗಳು  ಓಡಿಬಂದು ಕೆಲವು ಒಣಗಿದ ಎಲೆಗಳ ಸಹಾಯದಿಂದ ಬೆಂಕಿಯನ್ನು ಹೆಚ್ಚಿಸಿದರು. ನೋಡು ನೋಡತ್ತಲೇ ನಮ್ಮ camp fire ರೆಡಿಯಾಯಿತು.
      ಇನ್ನು ಮೂರುದಿನಗಳು ಈ ಬೆಂಕಿಯನ್ನು ಆರದ ಹಾಗೆ ಉಳಿಸಿಕೊಳ್ಳಬೇಕು. ಮಳೆಯಲ್ಲೂ ಸಹಾ. ಆ ಸಾಯಂಕಾಲ ನನಗೆ 'Lord of Fire'ಎನ್ನುವ ಹೊಸ ನಾಮಕರಣವನ್ನೂ ಮಾಡಿದರು.
      ಇನ್ನೂ ಪೂರ್ತಿ ಕತ್ತಲಾಗಿರಲಿಲ್ಲ. ನನ್ನ ಕಣ್ಣುಗಳಾಗಲೇ ಬೇರೊಂದು ವಸ್ತುವಿಗೆ ಹುಡುಕಾಟ ನಡೆಸಿದ್ದವು. ಅಂತು ಒಂದು ಪೆನ್ನನ್ನು ಕಳ್ಳಸಾಗಾಣಿಕೆ ಮಾಡಿಕೊಂಡು ಬಂದಿದ್ದೆ,ಆದರೆ ಯಾವುದರಲ್ಲಿ ಬರೆಯುವುದು? ಒಂದು ಉಪಾಯ ಹೊಳೆಯಿತು. ಒಂದು ಉದ್ದನೆಯ ನೀಲಗಿರಿ ಮರಕ್ಕೆ ಹೋಲುವ ಮರದ  ತೊಗಟೆಯನ್ನು ಸುಮಾರು ಮೂರು ಪದರಗಳಷ್ಟು ಬಿಡಿಸಿದ ಮೇಲೆ ನವಿರಾದ ಅಂಗೈ ಅಗಲದ ಕಂದು ಬಣ್ಣದ ಹಾಳೆ ಸಿಕ್ಕಿತು. ನನ್ನ ಅವಿಷ್ಕಾರಕ್ಕೆ ನಾನೆ ಹೆಮ್ಮೆ ಪಟ್ಟುಕೊಂಡೆ.
      ಅವತ್ತಿನ ರಾತ್ರಿಯ ಊಟವೆಂದರೆ ಒಂದು  ಪ್ಯಾಕೆಟ್ ಸೂಪ್. ಆಶ್ಚರ್ಯವೆಂದರೆ ಪ್ಯಾಕಿನಲ್ಲಿ ಒಂದು  ಸಿಗರೇಟ್ ಪ್ಯಾಕ್ ಕೂಡ ಇತ್ತು. ಇದನ್ನು ಸಿಗರೇಟು ಸೇದುವವರಿಗೆ ಒಂದು ಪ್ಯಾಕೆಟ್ ಸೂಪ್ ಗಾಗಿ ಮಾರಾಟದ ವ್ಯವಹಾರವೂ ನಡೆದು ಹೋಯಿತು.
      ಮಲಗುವ ಮುನ್ನ ಇನ್ನೂ ಒಂದು 'task' ಮಾಡಬೇಕಿತ್ತು. ಮೊಲದಂತಹ ಚಿಕ್ಕ ಪ್ರಾಣಿಗಳನ್ನು ಬಲೆಹಿಡಿಯುವ ಒಂದು ಟ್ರ್ಯಾಪ್ ನಿರ್ಮಿಸಬೇಕು. ಮಳೆ ಬಂದು ಭೂಮಿ ಸ್ವಲ್ಪ ನೆಂದಿದ್ದರಿಂದ ಗುಂಡಿ ತೋಡುವುದು ಸುಲಭವಾಯಿತು. ಗೆಜ್ಜರಿಯಂತ ಕೆಲವು ಗೆಡ್ಡೆಗಳನ್ನು ಹಾಕಿ ಎಲೆಗಳಿಂದ ಆ ಗುಂಡಿಯನ್ನು ಮುಚ್ಚಿ ಬಂದೆವು. ಹಾಗೇನಾದರು ಮೊಲಗಳು ಸಿಕ್ಕಿಹಾಕಿ ಕೊಂಡರೆ ,ತರಬೇತಿ ಸಿಬ್ಬಂದಿಗೆ ತೋರಿಸಿ ಅವುಗಳನ್ನು ಪುನಃ ಕಾಡಿಗೆ ಬಿಟ್ಟುಬಿಡಬೇಕೆಂಬ ನಿಯಮವಿತ್ತು. ನಾಳೆ ಇನ್ನು ಏನೇನು ಕಾದಿದೆಯೋ ಎನ್ನುವ ಆತಂಕದಿಂದಲೇ ಒಬ್ಬಬ್ಬರಿಗೂ ಶುಭರಾತ್ರಿ ಹೇಳುತ್ತ ಪ್ಯಾರಾಚೂಟಿನ ತೂಗು ಹಾಸಿಗೆಯಲ್ಲಿ ಅಡ್ಡಾದೆವು.
      ಇಂತಹ ಶಾಂತಿಯ ವಾತಾವರಣದಲ್ಲಿ ಭಯ ಮತ್ತು ಹಿಂಸೆ ಇರಲು ಸಾಧ್ಯವೇ. ದೈಹಿಕ ಸುರಕ್ಷತೆಯ ಭಯ ಕಾಡಿನಲ್ಲಿರುವುದು ಸಹಜ ಆದರೆ ಹಿಂಸಾಪ್ರವೃತ್ತಿ?
      ಈ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ಮಲಗಿರುವವರೆಲ್ಲಾ ಅಹಿಂಸಾವಾದಿಗಳೇ ,ಇಲ್ಲ ನಾಳೆ ಬೆಳಗ್ಗೆ ಎದ್ದ ಮೇಲೆ ಕೆಲವು ಘರ್ಷಣೆಗಳು ನಡೆಯುವುದನ್ನು ನಿರೀಕ್ಷಿಸಬಹುದು ಏಕೆಂದರೆ ಇದು ಸ್ಪರ್ಧೆ, survival of the fittest. ನಕ್ಸಲೀಯರು ಇಂತಹ ಸುಂದರವಾದ ಅರಣ್ಯಗಳಿಂದಲೇ ತಾನೆ ರಕ್ತದೋಕುಳಿ ಹರಿಸುವ ಪ್ಲಾನು ಹಾಕುವುದು.

ಹಾಗಾದರೆ ಹಿಂಸೆಯ ಉಧ್ಭವ ಎಲ್ಲಿಂದ?

      ನಮ್ಮ ವಿವೇಚನೆಗಳು ಒಂದು ಪಂಗಡದ,ಸಮಾಜದ , ಜಾತಿಯ ತತ್ವಗಳಿಂದ ಪ್ರೇರೇಪಿತವಾಗಿರುತ್ತವೆ. ಇವು ನಮ್ಮ ನಮ್ಮ ನಂಬಿಕೆಯ ಪರಾವಲಂಬಿತ ಆಲೋಚನೆಗಳು. ಎಲ್ಲಿ ಮನಸ್ಸು ಆಲೋಚನಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತದೋ ಅಲ್ಲಿ "ಈಗ ಮತ್ತು ಇಲ್ಲಿ"ಯ ಅರಿವಿರುವುದಿಲ್ಲ. ಅಂತರ್ಮುಖಿಯಾಗಿ,ಮನಸ್ಸಿನ ಸಂವೇದನೆಗಳನ್ನು ಯಾವ ಹಿಂಸೆಗೂ ಒಳಪಡಿಸದೆ, ಕಟ್ಟುಪಾಡುಗಳಿಲ್ಲದೆ ಮುಕ್ತವಾಗಿ ಅವಲೋಕಿಸುವ ಸಾಮರ್ಥ್ಯ ಬೆಳಸಿಕೊಂಡರೆ ದ್ವಂದ್ವ ಇರುವುದಿಲ್ಲ. ಹಿಂಸೆಯೂ ಇರುವುದಿಲ್ಲ.
'ಕಾಫಿರ'ರನ್ನು ಗುಂಡಿಕ್ಕಿ ಕೊಲ್ಲುವುದು ಹಿಂಸೆಯ ಪರಮಾವಧಿಯಾದರೆ ,'ಈ ಮುಂಡೇ ಮಗನನಿಂದ ನನ್ನ ಮಡಿ ಹಾಳಾಯಿತು' ಎನ್ನುವುದೂ ಕೂಡ ಹಿಂಸೆಯೇ,ಏಕೆಂದರೆ ಇಬ್ಬರ ಆಲೋಚನೆಗಳಲ್ಲಿ ಸ್ವಂತಿಕೆ ಇರುವುದಿಲ್ಲ. ಕಟ್ಟುಪಾಡಿನ, ತಲತಲಾಂತರಗಳ ನಂಬಿಕೆಗಳ ನಿಯಂತ್ರಣಕ್ಕೊಳಗಾದ ಮನಸ್ಸು ಮುಕ್ತವಾಗಬೇಕು,ಸುತ್ತ ಮುತ್ತಲಿನ ಆಗು ಹೋಗುಗಳನ್ನು ಯಾವ ಪೂರ್ವ ನಿಯೋಜಿತ ವಿಚಾರಗಳಿಲ್ಲದೆ ಗಮನಿಸುವ ಗಾಢತೆ ಇದ್ದರೆ ಮನಸ್ಸು ಹಿಂಸಾಮುಕ್ತವಾಗಲು ಸಾಧ್ಯ ಎಂದು ಹೇಳುತ್ತಾರೆ ಕೃಷ್ಣಮೂರ್ತಿಯವರು.

       ಇವನ್ನಲ್ಲಾ camp fire ನ ಮುಂದ ಬೆಳಕಿನಲ್ಲಿ ತೆಳುವಾದ ಮರದ ತೊಗಟೆಯ ಹಾಳೆಯಲ್ಲಿ ಬರೆಯುತ್ತಿರುವಾಗಲೇ ಕಾಡುಹಂದಿಯೊಂದು ಗುಟುರು ಹಾಕತ್ತಾ ಸ್ವಲ್ಪಹೊತ್ತು ನಿಂತಿದ್ದು ಹಾಗೇ ಹಿಂದೆಸರಿದು ಹೊರಟು ಹೋಯಿತು.     

No comments:

Post a Comment