Tuesday, October 25, 2016

ಗೌರಿ ನಡೆದುಬಂದ ಮಾರ್ಗ

            ಬೆಳ್ಳಂಬೆಳಗ್ಗೆ ಕಾಶ್ಮೀರದ ಗುಲ್ಮರ್ಗದಲ್ಲಿ ಆ ನದೀ ತೀರದಲ್ಲಿನಿಂತು ಸದ್ಯ ಬದುಕಿದೆಯಾ ಬಡಜೀವವೇ ಎಂದು ಏದುಸಿರು ಬಿಡುತ್ತಾ ನಿಂತಿರುವಾಗಲೇ ನಮ್ಮ ತರಬೇತಿ ತಂಡದವರು ಬಂದು ತಲುಪಿದರು. ಹಿಂದಿನ ರಾತ್ರಿ ನಾವು ಹಿಮಗಟ್ಟಿದ ನದಿಯ ಮೇಲೆ ಮಲಗಿಕೊಂಡದ್ದು ಮತ್ತು ಬೆಳಗ್ಗೆ ಹಿಮಕರಗಿ ನದಿ ರಭಸವಾಗಿ ನಮ್ಮ platform ಕೆಳಗೇ ಹರಿಯುತ್ತಿದ್ದನ್ನು ಕೇಳಿಸಿಕೊಳ್ಳುತ್ತಲೇ ನಿದ್ದೆಮಂಪರಿನಲ್ಲಿ ಮಾತುಕತೆಯಾಡುತ್ತಿದ್ದುದು, ಯಾರೋ ಕೂಗಿ ನಮ್ಮನ್ನು ಎಚ್ಚರಿಸಿದ್ದು,ಕ್ಷಣಾರ್ಧದಲ್ಲಿ ಬಿದ್ದೆವೋ ಕೆಟ್ಟೆವೋ ಎಂದು ಓಡಿ ಬಂದದ್ದು,ಅದೆಲ್ಲಾ ಈಗ ಹೊಟ್ಟೆ ಹುಣ್ಣಾಗುವಂತೆ ನಗುವ ವಿಷಯವಾಗಿತ್ತು ನಮ್ಮೆಲ್ಲರಿಗೆ. ಮಿಲಿಟರಿ ಮೆಂಟಾಲಿಟಿಯೇ ಹಾಗೆ,ಸಾವಿನದವಡೆಯಿಂದ ತಪ್ಪಿಸಿಕೊಂಡು ಬಂದವರು ತಕ್ಷಣ ಮಾಡುವ ಕೆಲಸವೆಂದರೆ ಆ ವೃತ್ತಾಂತವನ್ನೆಲ್ಲಾ ಸ್ನೇಹಿತರಲ್ಲಿ ಹೇಳಿಕೊಂಡು ಬಿದ್ದು ಬಿದ್ದು ನಗುವುದು.
    ವಾತಾವರಣ ಸ್ವಲ್ಪ ತಿಳಿಯಾದ ಮೇಲೆ ನಮ್ಮ ಆಸುಪಾಸಿನ  ಅಧ್ಭುತ ಸೌಂದರ್ಯದ ಅರಿವಾಯಿತು. ಗುಲ್ಮರ್ಗವನ್ನು ಕೆಲವುಕಡೆ ಸ್ವಿಟ್ಜರ್ಲಾಂಡಿಗೆ ಹೋಲಿಸಿ ಬರೆಯಲಾಗಿದೆ. ಅಂದಿನ"ಗೌರಿ ಮಾರ್ಗ"ಮುಂದೆ ಮುಘಲರ ಕಾಲದಲ್ಲಿ ಗುಲ್ಮರ್ಗವಾಯಿತೆಂದು ಹೇಳುತ್ತಾರೆ. ವರ್ಷಾ ವರ್ಷಾ ಗೌರಿ ಇದೇ ಮಾರ್ಗವಾಗಿ ಗಣೇಶನನ್ನು ಕರೆದುಕೊಂಡು ಬರುತ್ತಿದ್ದಳಂತೆ.
    ಕಾಶ್ಮೀರ, ನದಿಗಳ,ಹಿಮಚ್ಛಾದಿತ ಪರ್ವತಗಳ ಮತ್ತು ಸಾಗರದೋಪಾದಿಯ ಸರೋವರಗಳ ನಾಡು. 'ಮಿರ,ಮೈರ' ಹಿಂದಿಯಲ್ಲಿ ಸಾಗರ ಎಂದಾಗುತ್ತದೆ. ಕಶ್ಯಪಮುನಿಯ ಬೀಡಿದು, ಅದಕ್ಕೇ ಕಶ್ಯಪ + ಮಿರ = "ಕಾಶ್ಮೀರ "ಎನ್ನುವ ‌ಹೆಸರಿನ ಇತಿಹಾಸ. ಆಗ ಇಡೀ ಕಾಶ್ಮೀರ ಒಂದು ದೊಡ್ಡ ಸರೋವರವಂತೆ. ಕಶ್ಯಪ ಮುನಿಗಳು ಕೆಲವು ಕಣಿವೆಗಳ ಮೂಲಕ ಈ ಸರೋವರವನ್ನು ಬರಿದು ಮಾಡಿ ,ಕೆಲ ಬ್ರಾಹ್ಮಣರನ್ನು  ಇಲ್ಲಿರಲು ಆಹ್ವಾನಿಸಿದರಂತೆ.  ಕ್ರಮೇಣ ಎಲ್ಲಾ ಕಡೆಯಿಂದಲೂ ಜನರು ಬಂದು ನೆಲೆಸಲು ಶುರುಮಾಡಿ ನಗರ ದೊಡ್ಡದಾದಂತೆ ಇದಕ್ಕೆ ಕಾಶ್ಮೀರ ಪುರವೆಂಬ ಹೆಸರಿಡಲಾಯಿತಂತೆ. ದೇವಿ ಸರಸ್ವತಿಯನ್ನು 'ಕಾಶ್ಮೀರ ಪುರವಾಸಿನಿ 'ಎಂದು ಹಲವೆಡೆ ಉಲ್ಲೇಖಿಸಲಾಗಿದೆ. ದೇವಿ ಲಕ್ಷ್ಮಿಯ ಊರು ಶ್ರೀನಗರ,ಈಗಿನ ರಾಜಧಾನಿ.
    ಇಷ್ಟೆಲ್ಲಾ ಬರೆಯಲು ಎಷ್ಟುಚಂದ,ಓದಲು ಎಷ್ಟುಚಂದ.
    ಆದರೆ ಈಗಿನ ಪರಿಸ್ಥಿತಿ ವಿಷಾದಕರ..ಈ ತುರುಕರು ಬಂದು ಅಂತಹ ಸೌಂದರ್ಯದ ಬೀಡನ್ನು ರಕ್ತಸಿಕ್ತಗೊಳಿಸಿದರು. ನೆಹರೂನಂತ ಲಂಪಟನನ್ನು ಈ ದೇಶದ ಪ್ರಧಾನಿಯನ್ನಾಗಿಸಿದ್ದು ನಮ್ಮ ರಕ್ಷಣಾಪಡೆಗಳ ದುರಂತ ...ಅತ್ತ ಹಾವೂ ಸಾಯಬಾರದು ಇತ್ತ ಕಡ್ಡಿನೂ ಮುರಿಬಾರದು. ಸಾವಿರಾರು ಸೈನಿಕರು ಇಂತಹ ಅತಂತ್ರದ ರಾಜನೀತಿಯ ಬಲಿಪಶುಗಳಾಗತ್ತಿದ್ದೇವೆ. ನಾವು ‌ಹೆಂಗಿದ್ರೂ ಹೋಗೋದೇ,ಒಂದು ಸಲ ನಮ್ಮ ಕೈಗೆ ಕಟ್ಟಿರೋ ಹಗ್ಗ ಬಿಚ್ರೀ...ಅಂತಾ ಚೀರುತ್ತಿರೋ ಆ ಸೈನಿಕರ ಆಕ್ರಂದನ ಯಾರಿಗೆ ಕೇಳಿಸಬೇಕು... it's really sad.
   ಸರಿ,ಮುಂದೆ ಅವತ್ತಿನ task ಅಂದ್ರೆ, ಹಿಮದ ಇಟ್ಟಿಗೆಗಳಿಂದ ಒಂದು ಐದು ಅಡಿ ಎತ್ತರದ 'ಇಗ್ಲೂ' ಕಟ್ಟಬೇಕು. ಬಿಸಿಲೇರಿದ ಹಾಗೆ ಕಣ್ಣುಬಿಡುವುದೇ ಕಷ್ಟವಾಗತೊಡಗಿತು. ಬೆಳ್ಳನೆ ಹಿಮದಿಂದ ಪ್ರತಿಬಿಂಬಿಸುವ ಸೂರ್ಯನ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ ಕಣ್ಣುಮುಚ್ಚಿಕೊಂಡು ಓಡಾಡಬೇಕಾದ ಪ್ರಮೇಯ! ಗಟ್ಟಿಹಿಮವನ್ನು ಕುಕ್ರಿಯಿಂದ ಕೆತ್ತಿ ಒಂದು ತಂಡ ತಯಾರಿ ಮಾಡುತ್ತಿದ್ದಹಾಗೆ ಇನ್ನೊಂದು ತಂಡ ಅದನ್ನು ಒಂದು ಅರ್ಧ ಗೋಲಾಕಾರದ ಮನೆಯನ್ನು ನಿರ್ಮಿಸಿಲು ಅಣಿವು ಮಾಡಿಕೊಂಡೆವು. ಮಧ್ಯಾಹ್ನದಷ್ಟೊತ್ತಿಗೆ ತಯಾರಾಯಿತು.
   ಮುಂದಿನದು, ಹಿಮಚ್ಚಾದಿತ  ಶಿಖರಗಳ ಪರ್ವತಾರೋಹಣ. ಒಂದು ಉದ್ದನೆಯ ಹಗ್ಗದಿಂದ ಎಲ್ಲರ ಸೊಂಟಕ್ಕೂ ಒಂದು ಸುತ್ತು ಬಿಗಿದುಕೊಂಡು, ಶುರು ಮಾಡಿಕೊಂಡೆವು. ಏನೇ ಆಗಲಿ ಕೈಗಳ ಹಿಡಿತ ಮಾತ್ರ ಬಿಡಲೇ ಬಾರದು. ನಿಗದಿತ ಹಂತಕ್ಕೆ ತಲುಪಿ ಪುನಃ ವಾಪಸ್ಸು ಕೆಳಗಿಳಿಯಬೇಕು. ಅದು ಹೆಚ್ಚು ದೂರ ಏನೂ ಇರಲಿಲ್ಲ.
   ತರಬೇತಿ ಸಿಬ್ಬಂದಿಯವರಾಗಲೇ ಹೊರಡಲು ಅಣಿಯಾಗಿದ್ದರು, ಯಾಕೆಂದರೆ ಇನ್ನೊಂದು ಕೌತುಕ ಶ್ರೀನಗರದ ವಾಯುನೆಲೆಯಲ್ಲಿ ಕಾಯುತ್ತಿತ್ತು.!  

No comments:

Post a Comment