Tuesday, October 25, 2016

ಮರಳಿ ಬಾನಿಗೆ

1 ಡಿಸೆಂಬರ್ 1972, ಜು಼ಲ್ಫೀಕರ್ ಆಲಿ ಭುಟ್ಟೊ ಪಾಕಿಸ್ತಾನದ ಅಂದಿನ ಪ್ರಧಾನಿ ,ರಾವಲ್ಪಿಂಡಿಯಲ್ಲಿ ಭಾರತೀಯ ವಾಯುಸೇನೆಯ ಪೈಲಟ್ ಗಳೂ ಸೇರಿದಂತೆ ಇತರೆ ಯುಧ್ಧಕೈದಿಗಳನ್ನುದ್ದೇಶಿಸಿ 'ನೀವಿನ್ನು ಸ್ವತಂತ್ರರು' ಎಂದು ಘೋಷಿಸುತ್ತಾರೆ!
   ಅಮೃತಸರದ ಹತ್ತಿರದ ವಾಘಾ ಬಾರ್ಡರಿನಲ್ಲಿ ಇವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
    ಅಮೃತಸರದ ವಾಯುನೆಲೆಯಲ್ಲಿ ಇವರ ಕುಟುಂಬದ ಸದಸ್ಯರುಗಳನ್ನೆಲ್ಲಾ ಮೊದಲೇ ಕರೆಸಿಟ್ಟುಕೊಂಡಿದ್ದರು. ಯುಧ್ಧ ಶುರುವಾದ ಬರೊಬ್ಬರಿ ಒಂದು ವರ್ಷದ ನಂತರ ಇವರ ಸಮಾಗಮ. ಆ ಒಂದು ಭಾವನೆಗಳ ಸಮ್ಮಿಳನ ಅದನ್ನು ಅನುಭವಿಸಿದವರಿಗೇ ಗೊತ್ತು. ನಾವೆಲ್ಲಾ ಪ್ರೇಕ್ಷಕಗಣ.
    ವಿಂಗ್ ಕಮಾಂಡರ್ ಗ್ರೇವಾಲ್,ಬಾನಿಗೆ ಮರಳಿದರಾದರೂ, ಕೆಲ ವರ್ಷಗಳ ನಂತರ ವಾಯುಪಡೆಗೆ ರಾಜೀನಾಮೆ ಕೊಟ್ಟು, ಹಿಮಾಲಯದ ತಪ್ಪಲಿನ 'ತೆರಾಯ್' ಪ್ರದೇಶದಲ್ಲಿ ಈಗಲೂ ವ್ಯವಸಾಯ ದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ನು ಈ Great Escape ನ ಮುಖಂಡ ಗ್ರೂಪ್ ಕ್ಯಾಪ್ಟನ್ ದಿಲಿಪ್ ಪರೂಲ್ಕರ್ ಪೂನಾದಲ್ಲಿ ವಿವಿಧ ಉದ್ಯೊಗಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.
   ನಮ್ಮ ಗ್ರೂಪ್ ಕ್ಯಾಪ್ಟನ್ ಹರೀಶ್  ಬೆಂಗಳೂರಿನಲ್ಲಿ ಸೆಟ್ಲಾದರು. ಆದರೆ ದುರದೃಷ್ಟವಶಾತ್ 1999 ರಲ್ಲಿ ಅನಾರೋಗ್ಯದಿಂದ ಬಳಲಿ ಮೃತರಾದರು. ಅವರ ಮಗ ವಿಕ್ರಮ್, ನರನರಗಳಲ್ಲೂ ಅವರ ಅಪ್ಪನ ನೆನಪುಗಳನ್ನೇ ತುಂಬಿಕೊಂಡು ಜೀವಿಸಿತ್ತಿರುವ ವ್ಯಕ್ತಿ, ನಮ್ಮ ಜೊತೆ 'ಇಂಡಿಗೊ ಏರ್ಲೈನ್' ನಲ್ಲಿ ಪೈಲಟ್ ಆಗಿದ್ದಾರೆ.
    ಇವರ ಈ ಸಾಹಸಗಾಥೆ 'ಖುಲೇ ಆಸ್ಮಾ ಕೆ ಓರ್' ಎನ್ನುವ ಚಲನಚಿತ್ರವಾಗಲಿದೆ ಎನ್ನುವ ವಿಷಯ ತಿಳಿದು ಬಂದಿದೆ.
    ಇನ್ನೊಬ್ಬರು ಈ ಸಾಹಸಗಾಥೆಯನ್ನು ಒಂದು ವಿಷೇಶ ರೀತಿಯಲ್ಲಿ ಬರೆದರು. ಏನು ಅವರ ಬರಹದಲ್ಲಿ ವೈವಿಧ್ಯತೆ ಎಂದರೆ ,ಅವರು ಬಾಯಲ್ಲಿ ಪೆನ್ನು ಕಚ್ಚಿಕೊಂಡು ಬರೆದರು,ಅವರು ಬರೆಯುತ್ತಿದ್ದುದೇ ಹಾಗೆ!
    ಅವರೇ ಫ್ಲೈಯೀಂಗ್ ಆಫೀಸರ್ ಅನಿಲ್ ಕುಮಾರ್.
    1988ರಲ್ಲಿ ಪಠಾಣಕೊಟಿನ ವಾಯುನೆಲೆಯಲ್ಲಿ ನಡೆದ ಒಂದು ಧುರ್ಘಟನೆಯಲ್ಲಿ ಈ ಫೈಟರ್ ಪೈಲಟ್ ನ ಕತ್ತು ಮುರಿದು ಹೋಯಿತು. ಬದುಕುಳಿದರಾದರೂ ಕತ್ತಿನಕೆಳಿಗಿನ ಅಂಗಗಳೆಲ್ಲಾ ನಿಷ್ಕ್ರಿಯ. ಪುಣೆಯ ಸಮೀಪದ ಮಿಲಟರಿ ಆಸ್ಪತ್ರೆಯನ್ನೇ ಮನೆ ಮಾಡಿಕೊಂಡರು. ತಮ್ಮ ನೋವನ್ನೆಲ್ಲಾ ಮರೆತು ಸದಾ ಬೇರೆಯವರ ಆಸರೆಯಾಗುತ್ತಿದ್ದರು. ಮೊದಲು ಬಾಯಲ್ಲಿ ಪೆನ್ನು ಕಚ್ಚಿ ಬರೆದರು ಆಮೇಲೆ ಅದರಿಂದಲೇ ಕೀಬೋರ್ಡನ್ನು ಒತ್ತಲು ಶುರು ಮಾಡತೊಡಗಿದರು. ಅದೇ ಅವರ ಅಸ್ತ್ರ.  ಆಸ್ಪತ್ರೆಯ ಸಿಬ್ಬಂದಿಯಾಗಲೀ,ಆಡಳಿತವರ್ಗವಾಗಲಿ ಎಂದೂ ಇವರನ್ನು ನಿರ್ಲಕ್ಷಿಸಲಿಲ್ಲ,ಇವರು ಹಾಗಾಗಲು ಬಿಡುತ್ತಲೂ ಇರಲಿಲ್ಲ. ಇವರಿಗೆ chair borne warrior  ಎಂಬ ಬಿರುದಾಂಕಿತವೂ ಆಗಿತ್ತು. ಕೆಲಸ ಮಾಡುತ್ತಿದ್ದ ಅಂಗಾಂಗಳನ್ನೆಂದೂ ನಿಷ್ಕ್ರಿಯವಾಗಿರಲು ಬಿಡಲಿಲ್ಲ. ಇವರು ಕುಳಿತಲ್ಲೇ ಗುಟುರು ಹಾಕಿದರೆ ಆಸ್ಪತ್ರೆಯೇ ನಡುಗುವಷ್ಟು ನಿಯಂತ್ರಣವಿತ್ತು. ಇವರ ಸಹಾಯ ಕೇಳಿಕೊಂಡು ಎಲ್ಲೆಲ್ಲಿಂದಲೊ ಬರುತ್ತಿದ್ದರು. ವಾಯುಸೇನೆಯ ಅಧ್ಯಕ್ಷರೂ ಸಹ ಇವರ ಮಾತನ್ನು ತಳ್ಳಿಹಾಕುತ್ತಿರಲಿಲ್ಲ,ಅಷ್ಟೊಂದು ಖಧರ್ ಇತ್ತು. 2014 ರಲ್ಲಿ ತುಂಬಾದಿನಗಳ ಅನಾರೋಗ್ಯದಿಂದಾಗಿ ಪರ ಲೋಕಕ್ಕೆ ಹೊರಟುಹೋದರು. ಅಂತಹ ಸ್ಥಿತಿಯಲ್ಲಿಯೂ 26 ವರ್ಷಗಳ ಸಾರ್ಥಕ ಜೀವನ ನಡೆಸಿದರು,ಎಂದಿಗೂ ತಮ್ಮ ಬಗ್ಗೆ self pity ತೋರಿಸದ ಗಟ್ಟಿಜೀವ.
   ಈ Great Escape ನ ವಿಷಯ ಯಾಕೆ ಬಂತು ಅಂದರೆ,ಗುಲ್ಮರ್ಗದ ಹಿಮದ ಅನುಭವದ ನಂತರ ನಮ್ಮ ತರಬೇತಿಯ ಮುಂದಿನ ಹಂತವೇ ಅದಾಗಿತ್ತು. Escape from the enemy to fight another day.
   ಅಂದು ಗುಲ್ಮರ್ಗದಿಂದ ಶ್ರೀನಗರದ ವಾಯುನೆಲೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಮುಖ್ಯದ್ವಾರದಲ್ಲಿರುವ ಗಾರ್ಡರೂಮಿನಲ್ಲಿ ನಮ್ಮನ್ನು ಕೂರಿಸಿಕೊಂಡು ನಾವು ಮಾಡಬೇಕಾಗಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.
  ಎಲ್ಲರ ಕೈಯಲ್ಲೂ ಮೂರು ಟೋಕನ್ನುಗಳು.  ವಾಯುನೆಲೆಯಲ್ಲಿ ಅಲ್ಲಲ್ಲಿ ಕಮಾಂಡೊಗಳು ಇರುತ್ತಾರೆ ಅವರೇ ನಿಮ್ಮ ಶತ್ರುಗಳು. ನೀವು ಯಾವಕಾರಣಕ್ಕೂ ಅವರ ಕೈಗೆ ಸಿಗಬಾರದು ,ಅವರ ಕಣ್ಣಿಗೆ ಕಾಣಿಸದ ಹಾಗೆ ತಪ್ಪಿಸಿಕೊಂಡು ವಾಯುಯಾನ ನಿಯಂತ್ರಣ ಕೇಂದ್ರವನ್ನು (ATC tower) ತಲುಪಬೇಕು.  ಅಪ್ಪಿತಪ್ಪಿ  ಕಮಾಂಡೊಗಳ ಕೈಗೆ ಸಿಕ್ಕರೆ ಅವರಿಗೆ ಒಂದು ಟೋಕನ್ ಒಪ್ಪಿಸಬೇಕು,ಏನಾದರು ಓಡಲು ಪ್ರಯತ್ನಿಸಿದರೆ ಕಮಾಂಡೊಗಳಿಗೆ ನಮ್ಮನ್ನು ಬಂದಿಸಲು ಏನು ಬೇಕಾದರೂ ಮಾಡಬಹುದೆಂಬ ಅಧಿಕಾರ ವಿರುತ್ತದೆ. ಕಮಾಂಡೊಗಳು ಎಂದರೆ ಕೇಳಬೇಕೆ..ಯಾಕೆ ರಿಸ್ಕು ಎಂದು ಮೂರು ಟೋಕನ್ನುಗಳನ್ನು ಕೊಟ್ಟುಬಿಟ್ಟರೆ ಅಲ್ಲಿಗೆ ಅವರನ್ನು  ಯುಧ್ಧಕೈದಿಗಳು ಎಂದು ಘೋಷಿಸಿ ಮುಂದೆ Geneva Convention ನಿಯಮಗಳಂತೆ ಮುಂದಿನ ಕಾರ್ಯಕ್ರಮ!.
  ಯುಧ್ಧಕೈದಿಗಳು ಬರಿ ಅವರ ಹೆಸರು. ಪದವಿ ಮತ್ತು ಅವರ ಸೈನಿಕ ಸಂಖ್ಯೆ , ಬರಿ ಇಷ್ಟೇ ಹೇಳಬೇಕು. ಶತ್ರುಗಳು ಎಷ್ಟೇ ಹಿಂಸಿಸಲಿ ಇನ್ನಾವ ರಕ್ಷಣಾ ವ್ಯವಸ್ಥೆಯ ಬಗ್ಗೆ ಬಾಯಿಬಿಡಬಾರದು. ಮೊದಲೆಲ್ಲಾ ಈ ತರಬೇತಿಯಲ್ಲಿ 'ಥರ್ಡ್ ಡಿಗ್ರಿ ,ಏರೋಪ್ಲೇನ್ ಏರಿಸೊದು ಎಲ್ಲ ನಡೆಯುತ್ತಿತ್ತಂತೆ! ಆದರೆ ನಮಗೆ ಸದ್ಯಕಿದ್ದದ್ದು ಯುಧ್ಧಕೈದಿಯಾಗುವ ಅವಮಾನದಿಂದ ತಪ್ಪಿಸಿಕೊಳ್ಳಬೇಕೆಂಬ ಛಲ.
  ಸ್ವಲ್ಪ ಹೊತ್ತಿನಲ್ಲೇ ನಮ್ಮನ್ನೆಲ್ಲಾ ಚದುರಿಸಿ ಬೇರೆ ಬೇರೆ ಮಾರ್ಗಗಳಲ್ಲಿ ಬಿಟ್ಟರು. ಇನ್ನು ಮೇಲೆ ನಮ್ಮ ನಮ್ಮ ಕುರುಕ್ಷೇತ್ರ..ನಾವೇ ಕಾದಾಡಬೇಕು. ATC tower ನ ಮೇಲೆ ಒಂದು ನಿರ್ದಿಷ್ಟ ವೇಗದಲ್ಲಿ ಸುತ್ತುವ ಪ್ರಖರವಾದ  ಲೈಟ್ ಇರುತ್ತದೆ. ವಿಮಾನಗಳಿಗೆ ಇದೇ ದಾರಿದೀಪ. ಅವತ್ತು ನಮಗೂ ಅದೇ ಮಾರ್ಗದರ್ಶಿ. ಅದನ್ನು ನೋಡುತ್ತಲೇ ಏಳುತ್ತಾ ಬೀಳುತ್ತ,ತೆವಳುತ್ತ..ಯಾರ ಕಣ್ಣಿಗೂ ಕಾಣದ ಹಾಗೆ ಕತ್ತಲಿನಲ್ಲಿ ಕರಗುತ್ತಾ ಮುನ್ನಡೆದೆ.  ಸಮಯದ ಪರಿವೆ, ನಾನು ಎಲ್ಲಿದ್ದೆನೆಂಬ ಅರಿವು ಉಹುಂ..ಏನೂ ಗೊತ್ತೇ ಇಲ್ಲ. ದೂರದಲ್ಲೆಲ್ಲೋ ಮಾತಾಡುವ ಶಬ್ದ ಕೇಳಿಸಿದ ಕೂಡಲೇ ಎಚ್ಚರವಹಿಸಿ ಸ್ತಬ್ದವಾಗಿ ಆಲಿಸಿ,ಕಮಾಂಡೊಗಳಲ್ಲ ಎಂದು ಖಚಿತವಾದ ಮೇಲೆ ಮುಂದುವರೆಯುತ್ತಿದ್ದೆ. ನನ್ನ ಮಿತ್ರರ ಸುಳಿವೇ ಇಲ್ಲ,ಅವರೆಲ್ಲಾ ಆಗಲೇ ತಲುಪಿದರಾ? ಯಾರಾದರೂ ಸಿಕ್ಕಿಬಿದ್ದರಾ?
  ದೂರದಲ್ಲಿ ಒಂದು ವಾಹನದ ಶಬ್ದ ಕೇಳಿಸಿತು ಅದು ಹತ್ತಿರವಾಗುತ್ತಿದ್ದ ಹಾಗೆ ಒಂದು ಮರದ ಹಿಂದೆ ನಿಂತೆ. ಅದು ಒಂದು ಮಿಲಿಟರಿ ಟ್ರಕ್ಕು. ಸ್ವಲ್ಪ ಮುಂದೆ ಹೋಗಿ ನಿಂತಿತು. ಪುನಃ ಜೋರು ಜೋರಾಗಿ ಮಾತಾಡುವುದು ಕೇಳಿಸಿತು. ಗಮನವಿಟ್ಟು ಆಲಿಸಿದಾಗ ಅವರಲ್ಲಿ ಯಾರೂ ಕಮಾಂಡೊಗಳಲ್ಲ ಎನ್ನುವುದು ಖಚಿತವಾಯಿತು. ಅದು ಒಂದು ಊಟ ಹಂಚುವ ಟ್ರಕ್ಕು. ವಾಯುನೆಲೆಯ ಹಂತ ಹಂತದಲ್ಲೂ ರಕ್ಷಣಾ ಸಿಬ್ಬಂದಿಗಳನ್ನು ನೇಮಿಸಿರುತ್ತಾರೆ. ಅವರ ಊಟದ ವ್ಯವಸ್ಥೆಯನ್ನು ಅವರಿರುವ ಕಾವಲು ಜಾಗಕ್ಕೇ ತಲುಪಿಸಲಾಗುತ್ತದೆ. ಡ್ರೈವರ್ ಗಾಡಿಯನ್ನು ನಿಲ್ಲಿಸಿ,ಬಂದ ಗಾರ್ಡುಗಳ ತಟ್ಟೆಗಳಿಗೆ, ಕ್ಯಾರಿಯರ್ ಗಳಿಗೆ ಬಡಿಸಿ ಒಂದು ಸಿಗರೇಟ್ ಹಚ್ಚಿಕೊಂಡು ಅವರ ಜೊತೆ ಮಾತಿಗಿಳಿದ.
ಫಕ್ಕನೆ ಒಂದು ಐಡಿಯ ಬಂತು. ಡ್ರೈವರ್ ಉಭಯಕುಶಲೋಪರಿಯ ಮಾತುಗಳನ್ನು ಮುಗಿಸಿ ಗಾಡಿ ಶುರು ಮಾಡಿದ್ದೇ ತಡ ಹಿಂದಿನಿಂದ ಓಡಿಹೋಗಿ ಗಾಡಿಯನ್ನು ಹತ್ತಿಕೊಂಡು ಬಿಟ್ಟೆ. ಬಿಸಿ ಬಿಸಿ ಊಟದಲ್ಲಿ ಮಗ್ನರಾಗಿದ್ದ ಗಾರ್ಡುಗಳಿಗೆ ಇದು ಕಾಣಿಸಲೇ ಇಲ್ಲ!
   ಏನು ಅದೃಷ್ಟ ಅಂದರೆ ಮುಂದಿನ ಕಾವಲು ನಿಲ್ದಾಣವೇ ATC tower, ನಾನು ತಲುಪಬೇಕಿದ್ದ ತಾಣ. ಅಲ್ಲಿ ಕಮಾಂಡೊಗಳ ದಂಡೇ ನೆರೆದಿತ್ತು. ಅವರನ್ನು ದಾಟಿಕೊಂಡು ಟ್ರಕ್ಕು ಮುಂದೆ ಹೋಯಿತು. ಯಾರೂ ಈ ಟ್ರಕ್ಕಿನ ಕಡೆ ಗಮನಹರಿಸಲೇಇಲ್ಲ. ಟ್ರಕ್ಕು ನಿಧಾನಗತಿಗೆ ಬಂದ ಕೂಡಲೇ ಕೆಳಗೆ ಜಿಗಿದು ಮತ್ತೆ ಕತ್ತಲಿನಲ್ಲಿ ಲೀನವಾದೆ. ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿಯ ಅರಿವಾಯಿತು. ಕಮಾಂಡೊಗಳು ಆಗಲೇ ಕೆಲವರನ್ನು ಹಿಡಿದಾಗಿತ್ತು. ಒಬ್ಬರಿಗೆ ಚೇಳು ಕಚ್ಚಿ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ರಾತ್ರಿ ಹತ್ತು ಘಂಟೆಯಾದರೂ ನಾನು ಮತ್ತು ನನ್ನ ಬ್ಯಾಚ್ ಮೇಟ್ ರಾವ್ ಕಾಣುತ್ತಲೇ ಇಲ್ಲ ಎಂದು ಆತಂಕ ಪಡುತ್ತಿದ್ದರು ನಮ್ಮ ತರಬೇತಿ ಸಿಬ್ಬಂದಿ. ಇದನ್ನೆಲ್ಲಾ ಮನವರಿಸಿಕೊಂಡು ಇನ್ನು ನಾನು ಸುರಕ್ಷಿತವಾಗಿದ್ದೇನೆ ಎನಿಸಿದ ಮೇಲೆ ಕತ್ತಲಿಂದ ಹೊರಬಂದೆ. ಮೂರು ಟೋಕನ್ಗಳು ನನ್ನ  ಹತ್ತಿರ ಸುರಕ್ಷಿತವಾಗಿದ್ದವು!..ಮಾನ ಉಳಿಯಿತು.
   ಈ ಮಾನ ಸಮ್ಮಾನಗಳನ್ನು ಉಳಿಸಿಕೊಳ್ಳುವುದೇ ನಮ್ಮ ಮಿಲಿಟರಿ ತರಬೇತಿಯಲ್ಲಿ ಕಲಿಸಿಕೊಡುವುದು.

ನಮ್ಮ ಮಾನ, ನಮ್ಮ ಭಾರತ ಮಾತೆಯ ಮಾನ. ಇದಕ್ಕೆ ಯಾವ ಬೆಲೆಯನ್ನೂ ಕೊಡಲು ಸಿದ್ದ.
ಜಯ ಭಾರತ.

No comments:

Post a Comment