Tuesday, October 25, 2016

The Great Escape

ಕ್ಯಾಪ್ಟನ್ ಸೌರಭ್ ಕಾಲಿಯ ರವರ ಛಿದ್ರಗೊಂಡ ಮೃತದೇಹವನ್ನು ನೋಡಿ ಪಾಕೀಸ್ತಾನಿಗಳ ಕ್ರೌರ್ಯಕ್ಕೆ ಇಡೀ ಭಾರತಕ್ಕೆ ಭಾರತವೇ ಕೆರಳಿಹೋಯ್ತು.
    ಒಬ್ಬ ಯುದ್ದ ಕೈದಿಯನ್ನು ಹೇಗೆ ನೋಡಿಕೊಳ್ಳ ಬೇಕೆಂಬ ಹಲವಾರು ಅಂತರಾಷ್ಟ್ರೀಯ ನಿಯಮಗಳಿದ್ದರೂ ಸಹ,ಈ ಕ್ರೂರಿಗಳು ಅವರನ್ನು ಚಿತ್ರಹಿಂಸೆಗೀಡು ಮಾಡಿ ಕೊಂದರು.
    ಇದೇ ಕಾರ್ಗಿಲ್ ಸಮಯದಲ್ಲೇ ಫ್ಲೈಯಿಂಗ್ ಆಫೀಸರ್ ನಚಿಕೇತ ಎನ್ನುವ ಫೈಟರ್ ಪೈಲಟ್ ಸಹ ಯುದ್ದಕೈದಿಗಳಾಗಿ ಪಾಕಿಸ್ತಾನಿಯರ ಕೈಗೆ ಸಿಕ್ಕಿ ಬಿದ್ದರು. ಮೊದಮೊದಲು ಅವರಿಗೂ ಯಮಯಾತನೆ ಕೊಟ್ಟರು. ಆದರೆ ಅಂತರಾಷ್ಟ್ರೀಯ ಮಾಧ್ಯಮಗಳು ಇವರ ಬಂಧನದ ಬಗ್ಗೆ ಬಿತ್ತರಿಸತೊಡಗಿದಾಗ,ಮತ್ತು ಆಗಿನ ಸರಕಾರದ ಬಲವಾದ ಒತ್ತಡದಿಂದ ಅವರನ್ನು ಬಿಡುಗಡೆ ಮಾಡಿದರು. ಆದರೆ ಅವರಿಗೆ ಕೊಟ್ಟ ದೈಹಿಕ ಹಾಗು ಮಾನಸಿಕ ಹಿಂಸೆಯ ನೆನಪುಗಳಿಂದ ಹೊರಬರಲು ತುಂಬಾ ಸಮಯ ಹಿಡಿಯಿತಂತೆ.
    1971 ರಲ್ಲಿ ನಡೆದ ಯುಧ್ಧದಲ್ಲಿಯೂ ಸಹ ಇದೇ ಧರ್ಮ,ಅಧರ್ಮಗಳ ಘರ್ಷಣೆ ಭಾರತ ಮತ್ತು ಪಾಕೀಸ್ತಾನಗಳ ನಡುವೆ ಯುಧ್ಧಕೈದಿಗಳನ್ನು ಬಿಡುಗಡೆಯ ವಿಷಯವಾಗಿ ನಡೆಯಿತು. ಬಂಗ್ಲಾದೇಶದಲ್ಲಿ ಶರಣಾದ 90 ಸಾವಿರಕ್ಕೂ ಹೆಚ್ಚು ಪಾಕಿಗಳನ್ನು 'ಸಿಮ್ಲಾ ಸಂಧಾನ 'ದಂತೆ ನಾವು ಬಿಡುಗಡೆ ಮಾಡಿದರೂ ಸಹ ನಮ್ಮ ದೇಶದ ಕೆಲವು ಯುಧ್ಧಕೈದಿಗಳ ಬಿಡುಗಡೆಗೆ ಕಳ್ಳಗೊಂದು ಪಿಳ್ಳೆನೆವದಂತೆ ಕಿರಿಕ್ಕು ಮಾಡುತ್ತಾ ಬಂತು ಪಾಕಿಸ್ತಾನ. ಇದರಲ್ಲಿ ಸುಮಾರು 15 ಜನ ಭಾರತೀಯ ವಾಯುಸೇನೆಯ ಪೈಲಟ್ಗಳೂ ಇದ್ದರು.
    ಯುಧ್ಧಮುಗಿದು 5-6 ತಿಂಗಳುಗಳಾದರೂ ಸಹ ಬಿಡುಗಡೆಯ ದಿನ ಘೋಷಿಲಿಲ್ಲದಿದ್ದಾಗ ಈ ಪೈಲಟ್ಗಳ ಮನೋಸ್ಥೈರ್ಯ ಕುಸಿಯತೊಡಗಿತು. ಇದು ಸಹಜವೆ. ಪಾಕಿಸ್ತಾನದ ಕಾರ್ಯ‌ವೈಖರಿಯನ್ನು ಬಹಳ ಹತ್ತಿರದಿಂದ ನೋಡಿದ ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾದರು.
    ಯುಧ್ಧದಲ್ಲಿ ಪೂರ್ವ ಪಾಕೀಸ್ತಾನವನ್ನು ಕಳೆದು ಕೊಂಡು ಅವಮಾನಿತರಾದ ಪಾಕಿಗಳು,ಈ ಯುಧ್ಧ ಕೈದಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಶುರುಮಾಡಿದರು.  ರಾವಲ್ಪಿಂಡಿಯ ಜೈಲಿನಲ್ಲಿದ್ದ ಭಾರತೀಯ ವಾಯುಸೇನೆಯ ಪೈಲಟ್ ಗಳಲ್ಲಿ ಕೆಲವರು ಹತಾಶೆಯಿಂದ ಕೈಚೆಲ್ಲಿ ಕುಳಿತರೆ ಇನ್ನು ಕೆಲವರು ಒಂದು great escape ನ ನೀಲಿನಕಾಶೆ ತಯಾರು ಮಾಡಲು ಶುರುಹಚ್ಚಿಕೊಂಡರು.
    ಪರೂಲ್ಕರ್, ಗ್ರೇವಾಲ್ ಹಾಗು ಮೈಸೂರಿನವರಾದ ಹರೀಷ್ ಸಿನ್ಹಜಿ ಅಲ್ಲಿಂದ ಪರಾರಿಯಾಗುವ ಒಂದು ಅಧ್ಭುತ ಪ್ಲಾನನ್ನು ರಚಿಸಿದರು.  ಜೈಲಿನಿಂದ ಹೊರಬಿದ್ದು ಪೇಷಾವರದ ಬಳಿಯ ರೈಲ್ವೆ ನಿಲ್ದಾಣ ತಲುಪಿದರೆ ಅಲ್ಲಿಂದ ಅಫ್ಘಾನಿಸ್ಥಾನವನ್ನು ತಲುಪಬಹುದು ಎನ್ನುವ  ಯೋಜನೆಯೊಂದಿಗೆ ತಯಾರಿ ಶುರುವಾಯಿತು.
     ಊಟದ ಜೊತೆಗೆ ಬರುತ್ತಿದ್ದ ಚಾಕು ಚಮಚಗಳನ್ನು ಉಪಯೋಗಿಸಿಕೊಂಡು  ಹಿಂದಿನ ಗೋಡೆಯನ್ನು ಕೊರೆದು ಒಂದು ಅಂಗೈಯಗಲದ ತೂತಿನಿಂದ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಹತ್ತಿರವೇ ಒಂದು ಸಿನೆಮಾ ಥಿಯೇಟರ್ ಇತ್ತು ಮತ್ತು ಅದರ ಪಕ್ಕದಲ್ಲೇ ಒಂದು ಬಸ್ ನಿಲ್ದಾಣವೂ ಇತ್ತು. ರಾತ್ರಿಯ ಕೊನೆಯಪ್ರದರ್ಶನದ ನಂತರ ಒಂದು ಬಸ್ಸು ಅಲ್ಲಿಂದ ಹೊರಟು ಪೇಷಾವರಕ್ಕೆ ಹೋಗುವ ವಿಷಯನ್ನು ತಿಳಿದು ಕೊಂಡರು.   ಇವರಿಗೆ ಸಿಕ್ಕ ಒಂದು ಹಳೆಯ ಮ್ಯಾಪಿನ ಪ್ರಕಾರ,ಆ ಟೌನಿನಿಂದ ಸ್ವಲ್ಪ ದೂರದಲ್ಲೇ ಒಂದು ರೈಲ್ವೆ ನಿಲ್ದಾಣವಿದೆ ಮತ್ತು ಅಲ್ಲಿಂದ ಆಫ್ಘಾನಿಸ್ತಾನದ ಗಡಿಗೆ ಕೆಲವೇ ಘಂಟೆಗಳ ಪ್ರಯಾಣ. ಒಮ್ಮೆ ಅಲ್ಲಿಗೆ ತಲುಪಿ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿದರೆ ಇನ್ನೇನು ನಮ್ಮ great escape ಯಶಸ್ವಿಯಾದ ಹಾಗೆ ಎನ್ನುವವರೆಗೂ ಎಲ್ಲಾ ಸಿದ್ದತೆಗಳು ನಡೆದವು.
    ಆ ಅಂಗೈಯಗಲದ ಕಿಂಡಿಯನ್ನು ಇಟ್ಟಿಗೆಗಳ ಮಧ್ಯದ ಕಾಂಕ್ರೀಟು ಕೆರೆದು ಅಗಲ ಮಾಡುತ್ತಾ ಹೋದರು. ರಾತ್ರಿಯೆಲ್ಲಾ ಈ ಕೆಲಸ ನಡೆಯುತ್ತಿತ್ತು ಮತ್ತು ಬೆಳಗಾಗುವ ಮುನ್ನ ಯಾರಿಗೂ ಅನುಮಾನ ಬರದಂತೆ ಇಟ್ಟಿಗೆಗಳನ್ನು ಜೋಡಿಸಿಟ್ಟು ಬಿಡುತ್ತಿದ್ದರು. ಕೆಲವೇ ದಿನಗಳಲ್ಲಿ ಇದು ಒಬ್ಬಬ್ಬರಾಗಿ ನುಸುಳಿಕೊಂಡು ಹೊರಬರುವಷ್ಟು ಅಗಲವಾಯಿತು.
    ಆಗಸ್ಟ್ 12 ರ ರಾತ್ರಿ great escape ನ ಕಾರ್ಯಾಚರಣೆ ಶುರು. ಪ್ಲಾನು ಎಷ್ಟು ಕರಾರುವಕ್ಕಾಗಿ ಮಾಡಿದ್ದರೆಂದರೆ, ಕತ್ತಲಿನಲ್ಲಿ,ಇನ್ನೇನು ಸಿನೆಮಾ ಮುಗಿದು ಜನರ ಗುಂಪು ಹೊರ ಬರುತ್ತಿದ್ದ ಹಾಗೆ ಈ ಮೂವರು ನುಸುಳಿಕೊಂಡು  ಬಂದರು. ಅದೇ  ಸಮಯಕ್ಕೆ  ಮಳೆಯೂ ಶುರುವಾದ್ದರಿಂದ ಇವರು ನುಸುಳಿಕೊಂಡು ಹೊರ ಬಂದದ್ದು  ಯಾರಿಗೂ ಕಾಣಲಿಲ್ಲ. ಸದ್ಯ ದೇವರು ನಮ್ಮೊಂದಿಗಿದ್ದಾನೆ ಎನಿಸಿತಂತೆ.  ಥಿಯೇಟರಿನಿಂದ ಹೊರಬಂದ ಗುಂಪು ಸೀದಾ ಬಸ್ಸಿನಲ್ಲಿ ತುಂಬಿಕೊಂಡು ಬಿಟ್ಟಿತು. ಇವರೂ ಗುಂಪಿನಲ್ಲಿ ಗೋವಿಂದರಾದರು.           
    ಪಂಜಾಬಿನವರಾದ ಗ್ರೇವಾಲ್ ಪಠಾಣರ ಮಾದರಿಯಲ್ಲಿ ಮಾತನಾಡುತ್ತ ಯಾರಿಗೂ ಅನುಮಾನ ಬರದ ಹಾಗೆ ನೋಡಿಕೊಂಡರು. ಮೈಸೂರಿನ ಹರೀಶರಿಗೆ 'ಹರಾಲ್ಡ್' ಎಂದು ನಾಮಕರಣ ಮಾಡಿ ಅವರು ಬಾಯಿಬಿಡದ ಹಾಗೆ ನೋಡಿಕೊಂಡರು!
    ಬೆಳಗಿನ ಜಾವದಷ್ಟು ಹೊತ್ತಿಗೆ ಬಸ್ಸು ಪೇಷಾವರಕ್ಕೆ ಬಂದು ತಲುಪಿತು. ರಾತ್ರಿಯೀಡೀ ಬ‍ಸ್ಸಿನಲ್ಲಿ ತೂಕಡಿಸುತ್ತಾ ಹರೀಷ್ ತಮ್ಮ ಮೈಸೂರಿನ ನಜರಾಬಾದ ಮನೆಯಲ್ಲಿ,ತಂದೆ ತಾಯಿಯರ ಜೊತೆ ಊಟ ಮಾಡುವ ಕನಸು ಕಾಣುತ್ತಿದ್ದರಂತೆ..
    ಇವರ ಕೈಲಿದ್ದ ಮ್ಯಾಪಿನ ಪ್ರಕಾರ 'ಲಂಡಿ ಖಾನ' ಎನ್ನುವ  ರೈಲು ನಿಲ್ದಾಣ ಮೂರು ಕಿಮೀ ದೂರ. ಅಲ್ಲೇಹತ್ತಿರದ ಚಹಾದಂಗಡಿಯಲ್ಲಿ ಚಹಾ ಕುಡಿಯುತ್ತಾ,ನಾವು ಪಾಕಿಸ್ತಾನದ ವಾಯುಸೈನಿಕರು ರಜೆಯಲ್ಲಿದ್ದೇವೆ ,ಪ್ರವಾಸ ಮಾಡುತ್ತಿದ್ದೇವೆ ಎಂದು ಯಾರಿಗೂ ಅನುಮಾನ ಬರದ ಹಾಗೆ ಮಾತಾಡಿದರು. ಇನ್ನೂ ಯುಧ್ಧದ ನೆನಪು ಮಾಸಿರಲಿಲ್ಲ,ಅಪನಂಬಿಕೆಯ ವಾತಾವರಣ ಆದರೂ ಇರಬಹುದೇನೋ ಎಂದು ಅವರ ಪಾಡಿಗೆ ಹೋಗುತ್ತಿದ್ದರೇನೋ...ಆದರೆ ಇವರಿಂದ ಒಂದು ದೊಡ್ಡ ಪ್ರಮಾದ ನಡೆದು ಹೋಯಿತು. ಅದರಿಂದಾಗಿ ಮೂವರೂ ಪುನಃ ರಾವಲ್ಪಿಂಡಿಯ ಕಾರಾಗೃಹಕ್ಕೆ ವಾಪಸಾಗುವ ಪರಿಸ್ಥಿತಿ ನಿರ್ಮಾಣವಾಯಿತು.!

No comments:

Post a Comment