ನಮ್ಮೂರು ಗಂಗೂರಿನಿಂದ ದಾವಣಗೆರೆಗೆ ಹೋಗಲು ಎರಡು ಮಾರ್ಗಗಳಿವೆ. ಒಂದು ಚನ್ನಗಿರಿಯ ಮುಖಾಂತರವಾಗಿ,ಇನ್ನೊಂದು ಸಂತೇಬೆನ್ನೂರಿನ ಮುಖಾಂತರವಾಗಿ. ಚನ್ನಗಿರಿ ಮುಖಾಂತರ ಎಂದರೆ ಏಷಿಯಾದಲ್ಲೇ ಎರಡನೇ ಅತಿದೊಡ್ಡ ಸರೋವರ'ಶಾಂತಿಸಾಗರ' ಅಥವಾ ಸೂಳೆಕೆರೆಯನ್ನು ನೋಡಬಹುದು. ವಿಶ್ವೇಶ್ವರಯ್ಯನವರು ಎರಡು ಬೆಟ್ಟಗಳ ನಡುವೆ ಕಟ್ಟಿಸಿದ ನೀರಿನ ತೂಬು ಒಂದು ತಾಂತ್ರಿಕ ಅಚ್ಚರಿಯಾದರೆ,ಅಲ್ಲಿಯ ಪ್ರಕೃತಿ ಸೌಂದರ್ಯ ಅಗಾಧ. ಕಣ್ಮನಗಳನ್ನು ತಣಿಸುವ ಈ ಅಚ್ಚ ಹಸಿರಿನ ಮಾರ್ಗದಲ್ಲಿ ಋತುವಿಗನುಸಾರವಾಗಿ ವಿವಿಧ ತರಹದ ಹಣ್ಣುಗಳು ರಸ್ತೆಯ ಎರಡೂ ಬದಿಗಳಲ್ಲಿ ,ಹಣ್ಣಿನ ತೋಟದ ಮುಂದೇ ಯಥೇಚ್ಚವಾಗಿ ಸಿಗುತ್ತವೆ. ಹದಡಿಯ ಸಮೀಪದ ಸಕ್ಕರೆ ಕಾರ್ಖಾನೆಯ ಕಮ್ಮಟು ಮೂಗಿಗೆ ಬಡಿಯಿತೆಂದರೆ ಇನ್ನೇನು ದಾವಣಗೆರೆ ಬಂತು ಅಂತಲೇ ಲೆಕ್ಕ.
ಸಂತೇಬೆನ್ನೂರಿನ ಮಾರ್ಗವಾಗಿ ಬಂದರೆ ಹದಿನಾರನೇ ಶತಮಾನದಲ್ಲಿ ನಿರ್ಮಿಸಲಾದ ರಾಮತೀರ್ಥ ಪುಷ್ಕರಿಣಿಯ ಸುಂದರ ದೃಷ್ಯವನ್ನು ಮನತಣಿಯೆ ನೋಡಬಹುದು. "ಗುರ್ರಾಜ" ಎನ್ನುವ ಕೆಂಪು ಮುಖದ ಬಸ್ಸು ನಮ್ಮೂರಿನಿಂದ ದಾವಣಗೆರೆಗೆ ಈ ಮಾರ್ಗದಲ್ಲೇ ಹೋಗುತ್ತಿದ್ದರಿಂದ ನಾವು ಚಿಕ್ಕವರಾಗಿನಿಂದಲೂ ಸಂತೇಬೆನ್ನೂರಿನ ಹೊಂಡವನ್ನು ತಪ್ಪದೇ ನೋಡುತ್ತಿದ್ದೆವು. ಈ ಮಾರ್ಗದಲ್ಲಿ ದಾವಣಗೆರೆ ಇನ್ನೇನು ಬಂದೇ ಬಿಟ್ಟಿತು ಎನ್ನುವ ಸೂಚನೆ ಸಿಗುತ್ತಿದ್ದಿದ್ದು 'ರವಿ ಮಿಲ್ಲಿನ' ಶೇಂಗಾ ಎಣ್ಣೆಯ ಕಮ್ಮನೆಯ ವಾಸನೆಯಿಂದ ಮತ್ತು ಮಿಲ್ಲಿನ ಹೊರಗೆ ಸಾಲು ಸಾಲಾಗಿ ಶೇಂಗಾ ಮೂಟೆಗಳನ್ನು ಹೊತ್ತು ನಿಂತಿರುವ ಎತ್ತಿನ ಗಾಡಿಗಳು ಹಾಗು ಟ್ರಾಕ್ಟರುಗಳಿಂದ. ಇನ್ನು ಮುಂದಿನ ದೃಷ್ಯಾವಳಿಗಳನ್ನು ಕಣ್ಣು ತುಂಬಾ ತುಂಬಿಸಿ ಕೊಳ್ಳಲು ಬಸ್ಸಿನ ಕಿಟಕಿಗೇ ಆತುಕೊಂಡು ಬಿಟ್ಟಕಣ್ಣು ಬಿಟ್ಟುಕೊಂಡು ಈ ಸಲ ದಾವಣಗೆರೆಯಲ್ಲಿ ಏನು ಹೊಸತಾಗಿದೆ ಬಂದಿದೆ ಎಂದು ನೋಡುತ್ತಿದ್ದೆವು. ದಾವಣಗೆರೆ ನಮ್ಮ ತಾಯಿಯ ಹುಟ್ಟೂರು,ಹಾಗಾಗಿ ರಜಾದಿನಗಳಲ್ಲಿ ನಮ್ಮ ಅಜ್ಜಿಯ ಮನೆಗೆ ಬರುವುದೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ.
No comments:
Post a Comment