ಮಿಲಿಟರಿ ಟ್ರೈನಿಂಗಿನ ಒಂದು ವಿಷೇಶವೆಂದರೆ ನಮ್ಮ ಬ್ಯಾಚ್ ಮೇಟ್ ಗಳ ಜೊತೆಗಿರುವ ಗಾಢವಾದ ಮಿತ್ರುತ್ವ . ಮಿಲಿಟರಿಗೆ ಸೇರಿ ನಮ್ಮ ತರಬೇತಿ ಶುರುವಾದಾಗ ಇನ್ನೂ 18 -19 ರ ವಯಸ್ಸು. ಮನೆಯಿಂದ,ಬಂಧು ಬಳಗ, ಸ್ನೇಹಿತರಿಂದ ಮತ್ತು ನಮ್ಮ ಪರಿಚಿತವಾದ ಪರಿಸರಗಳಿಂದ ದೂರಾಗಿ ಬಂದು,ಇಲ್ಲಿ ವಿವಿಧ ಹಿನ್ನಲೆಯಿಂದ ಬಂದಿರುವ ಇತರೆ ಅಭ್ಯರ್ಥಿಗಳ ಜೊತೆ ಬೆರೆತು ತರಬೇತಿಯ ಸಮಯದಲ್ಲಿ ಆಗುವ ನೋವು ನಲಿವುಗಳನ್ನು ಹಂಚಿಕೊಳ್ಳುವುದನ್ನು ಕಲಿಯುತ್ತೇವೆ.
ವಾಯುಸೇನೆಯ ವೈಮಾನಿಕ ತರಬೇತಿ ಶುರುವಾದಾಗ ನಮ್ಮನ್ನೆಲ್ಲಾ ಅಧೀರರನ್ನಾಗಿಸುತ್ತಿದ್ದ ಇನ್ನೊಂದು ಅಂಶವೆಂದರೆ ತರಬೇತಿಗೆ ಬಂದವರಲ್ಲಿ ಎಲ್ಲರೂ'ಪೈಲಟ್ ಆಫೀಸರ್'ಆಗಿ ಯಶಸ್ವಿಯಾಗಿ ಪಾಸಾಗುತ್ತಾರೆ ಅನ್ನುವ ಖಚಿತತೆ ಇರುವುದಿಲ್ಲ. ವಿಮಾನ ಹಾರಾಟದ ತರಬೇತಿಯೇ ಹಾಗೆ ' ಯೇಗ್ದಾಗೆಲ್ಲಾ ಐತೆ,' ಅನಿಸುತ್ತೆ. ಬಂದಿರುವ 40 ಜನಗಳ ಬ್ಯಾಚಿನಲ್ಲಿ 8-10 ಅಭ್ಯರ್ಥಿಗಳು ತರಬೇತಿಯ ಒತ್ತಡವನ್ನು ನಿಭಾಯಿಸಲಾಗದೆ ಮನೆಗೆ ಮರುಳುತ್ತಾರೆ. ಆ ಒಂದು ಅನಿಶ್ಚಿತೆ ನಮ್ಮನ್ನು ಇನ್ನೂ ಒಬ್ಬರಿಗೊಬ್ಬರನ್ನು ಹತ್ತಿರ ತರುತ್ತದೆ. ಮೂರು ಹಂತದಲ್ಲಿ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಮೇಲೆ ಒಂದು 'ದೀಕ್ಷಾಂತ ಸಮಾರೋಹ' ದಲ್ಲಿ ನಮಗೆ President's Commission ಸಿಗುತ್ತದೆ. ಅದಕ್ಕೇ ಸಾಮಾನ್ಯವಾಗಿ ಮಿಲಿಟರಿ ಆಫೀಸರುಗಳನ್ನು Commissioned Officers ಎಂದು ಕರೆಯುತ್ತಾರೆ. ಇದು ಒಂದು ಬ್ರಿಟಿಷ್ ಸಂಪ್ರದಾಯ,ಅಲ್ಲಿ Queen's commission ಎಂದು ಕರೆಯುತ್ತಾರೆ ಇನ್ನೊಂದು ವಿಷೇಶವೆಂದರೆ ಬ್ರಿಟಿಷ್ ರಾಜ ಮನೆತನದಲ್ಲಿ ಈಗಲೂ ಸಹ ಸಾಂಪ್ರದಾಯಕವಾಗಿ ಎಲ್ಲಾ ಯುವರಾಜರು ಪಾರಂಪರಿಕ ಕಡ್ಡಾಯತೆಯಿಂದ ಬ್ರಿಟನ್ನಿನ ಮಿಲಿಟರಿಯಲ್ಲಿ Queen's Commission ಪಡೆಯಲೇ ಬೇಕು. ನಮ್ಮ ದೇಶದಲ್ಲಿ ಈ ಪರಂಪರೆ ರಾಜಾಸ್ತಾನದ ರಾಜಮನೆತನಗಳಲ್ಲಿ ಈಗಲೂ ಜೀವಂತವಾಗಿದೆ. ದುರದೃಷ, ನಮ್ಮ ಕರ್ನಾಟಕದಲ್ಲಿ ಈ ಸಂಸ್ಕ್ರುತಿ ಬೆಳೆಯಲಿಲ್ಲ .
ಇದಾದನಂತರ ಪುನಃ ನಮ್ಮನ್ನು ಮೂರು ವಿಭಾಗಗಳಲ್ಲಿ ಬೇರ್ಪಡಿಸುತ್ತಾರೆ. ಹೆಚ್ಚಿನ ಪಾಲು ಪೈಲಟ್ ಗಳು ಯುಧ್ಧ ವಿಮಾನಗಳಿಗೆ ಹೋದರೆ , ಕೆಲವರನ್ನು ಹೆಲಿಕಾಪ್ಟರ್ ಮತ್ತು ಟ್ರಾನ್ಸಪೋರ್ಟ್ ಏರೋಪ್ಲೇನುಗಳಿಗೆ ಕಳುಹಿಸುತ್ತಾರೆ. ನಮ್ಮ ವಿಭಾಗದ ಮುಂದಿನ ತರಬೇತಿಗಾಗಿ ಚದುರಿ ಹೋಗುತ್ತೇವೆ. ಆದರೆ ತರಬೇತಿ ಸಮಯದ ಆ ನೆನಪುಗಳು ಮಾತ್ರ ಗಟ್ಟಿಯಾಗಿ ಉಳಿದು ಕೊಂಡುಬಿಡುತ್ತವೆ. ಮುಂದೆ ಎಂದಾದರೊಮ್ಮೆ ಭೇಟಿಯಾದಾಗ ನಮ್ಮ ಮಾತುಕತೆಗಳೆಲ್ಲಾ ಆ ತರಬೇತಿಯ ದಿನಗಳದ್ದೇ. ಆಗಿನ ಅಡ್ಡ ಹೆಸರುಗಳೇ ಈಗಲೂ ಚಾಲ್ತಿಯಲ್ಲಿವೆ. ಸಕ್ಸೇನ ಎನ್ನುವ ಹೆಸರು 'ಸೆಕ್ಸಿ'ಯಾಗಿ,ಸಂಪತ್ ನ ಹೆಸರು 'ಸ್ಯಾಮ್' ಆಗಿಯೇ ಮುಂದುವರೆಯತ್ತವೆ.
ಈ Jungle and snow survival ಕೋರ್ಸಿನಲ್ಲಿ ನನ್ನ ಜೊತೆ ಇಬ್ಬರು ಬ್ಯಾಚ್ ಮೇಟುಗಳಿರುವುದು ಒಂದು ಸಮಾಧಾನದ ವಿಷಯ. ನಾವು ಮೂವರು ಯಾವ ಮುಚ್ಚು ಮರೆ ಇಲ್ಲದೆ,ಮುಕ್ತವಾಗಿ, ಮಾತನಾಡಬಹುದು ಎನ್ನುವ ಅನಿಸಿಕೆಯೇ ಒಂದು stress buster.
ಬೆಳಗ್ಗೆ ಎಚ್ಚರವಾದಾಗ ಇನ್ನೂ ಮುಸುಕು ಬೆಳಗು. ಕಾಡಿನಲ್ಲಿ ಬದುಕುವ ಕೆಲವು ಆತಂಕದ ವಿಷಯಗಳಲ್ಲಿ ಮುಖ್ಯವಾದ್ದು ಹಸಿವು ಮತ್ತು ಅಲ್ಲಿಯೇ ಸಿಗುವ ಆಹಾರದ ಹುಡುಕಾಟ. ಪ್ಯಾಕಿನಲ್ಲಿ ಇನ್ನೂ ಎರಡು ಮೂರು ಸೂಪಿನ ಪೊಟ್ಟಣಗಳಿದ್ದರೂ ಪರಿಸ್ತಿತಿ ಬಿಗಡಾಯಿಸುವುದಕ್ಕೆ ಮುನ್ನವೇ ಏನಾದರೂ ಹುಡುಕಬೇಕು, ಒಂದು ತಂಡವನ್ನು ಮಾಡಿಕೊಂಡು ಹೊರಟೆವು. ಅಮೃತಬಳ್ಳಿಯಗಿಡ ಮತ್ತು ಕರಿಬೇವಿನ ಮರಗಳು ಯಥೇಚ್ಚವಾಗಿದ್ದವು. ಗೆಣಸಿನಂತೆ ಕಾಣುವ ಕೆಲವು ಗಡ್ಡೆಗಳನ್ನು ಕಿತ್ತು ಕಲೆಹಾಕಿದೆವು. ಈಗ ಅದು ತಿನ್ನಲು ಅರ್ಹವೊ ಎನ್ನುವುದನ್ನು ಪರೀಕ್ಷಿಸ ಬೇಕು.
ನೀರನ್ನು ಚೆನ್ನಾಗಿ ಕುದಿಸಿ ಅಮೃತಬಳ್ಳಿಯ ಮತ್ತು ಕರಿಬೇವಿನ ಸೂಪು ತಯಾರಾಯಿತು. ಅದಕ್ಕೆ ನಾನೇ ಪ್ರಯೋಗ ಪಶುವಾದೆ. ಸ್ವಲ್ಪವೇ ಕುಡಿದೆ,ರುಚಿಯು ಪರವಾಗಿಲ್ಲ ಎನಿಸಿತು. ಆರೋಗ್ಯಕ್ಕೆ ಒಳ್ಳೆಯದೆಂದು ಖಚಿತವಾಗಿ ಗೊತ್ತಿತ್ತು. ಆದರೆ ಇತರರಿಗ್ಯಾಕೊ ನನ್ನ ರೆಸಿಪಿ ಇಷ್ಟವಾಗಲಿಲ್ಲ. ಅಷ್ಟೊತ್ತಿಗಾಗಲೇ ತರಬೇತಿ ಸಿಬ್ಬಂದಿಯವರು ಬಂದು ಅವತ್ತಿನ task ಹೇಳುತ್ತಿದ್ದರು.
ಕಾಡಿನ ಒಂದು ಹಳೆಯ ಮ್ಯಾಪ್,ಒಂದು ದಿಕ್ಸೂಚಿಯ ಸಹಾಯದಿಂದ ಒಂದು ನಿರ್ದಿಷ್ಟ ಪ್ರದೇಶವನ್ನು ತಲುಪಬೇಕು. ಆದರೆ ಮರಳಿ ಬರುವಾಗ ಯಾವ ಸಹಾಯವಿಲ್ಲದೆ ನಮ್ಮ ಕ್ಯಾಂಪನ್ನು ತಲುಪಬೇಕು. ಸುಮಾರು ನಾಲ್ಕು ಕಿಮೀಗಳ ಚಾರಣ. ಒಬ್ಬರ ಕೈಯಲ್ಲಿ ಮ್ಯಾಪು,ಇನ್ನೊಬ್ಬರ ಕೈಯಲ್ಲಿ ಕಂಪಸ್ಸು ಇವರ ಹಿಂದೆ ಇಬ್ಬರು ಕುಕ್ರಿಯನ್ನಿಡಿದು ನಾವು ಸಾಗುತ್ತಿದ್ದ ದಾರಿಯ ಇಕ್ಕೆಲಗಳಿಲ್ಲಿರುವ ಮರಗಳ ಮೇಲೆ ಗುರುತು ಮಾಡುತ್ತಾ ಸಾಗುತ್ತಿದ್ದರು,ಇದರಿಂದ, ಮರಳಿಬರುವಾಗ ದಾರಿ ತಪ್ಪಬಾರದೆಂದು. ಬೆನ್ನಿಗೆ ಒಂದು ಚೀಲ ಕಟ್ಟಿಕೊಂಡು ನೀರಿನ ಬಾಟಲಿ ಸೊಂಟಕ್ಕೆ ಬಿಗಿದು ಕೊಂಡು ,ಕೈಯಲ್ಲಿ ಕುಕ್ರಿ ಹಿಡಿದುಕೊಂಡು ಹೊರಟೆವು.
ಇದು ದಿನವಿಡೀ ನಡೆಯುವ ಪ್ರಕ್ರಿಯೆ,ನನ್ನ ನೀರಿನ ಬಾಟಲಿಯಲ್ಲಿ ನೀರಿಗೆ ಬದಲು ಅಮೃತ ಬಳ್ಳಿಯ ಸೂಪನ್ನು ತುಂಬಿಕೊಂಡೆ. ಇಂತಹ ಸಮಯದಲ್ಲಿ ವ್ಯರ್ಥವಾಗಿ ಶಕ್ತಿಯವ್ಯಯವಾಗದಂತೆ ಗಮನವನ್ನು ಕೇಂದ್ರೀಕರಿಸಿಕೊಂಡು ಎಲ್ಲರಜೊತೆ ಸಾಲಿನಲ್ಲಿ ನಡೆಯ ತೊಡಗಿದೆ.
ನಮ್ಮ ಹಳ್ಳಿಯಲ್ಲಿ ಇರುವ ಹನ್ನೆರಡು ಎಕರೆ ಹೊಲದಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ನಮ್ಮ ಮುತ್ತಜ್ಜನ ಕಾಲದಿಂದಲೂ ಔಷದಿಯ ಗಿಡಗಳನ್ನು ಬೆಳೆಸುತ್ತಿದ್ದರು ಮತ್ತು ಅದರ ಔಷಧಿಗಳನ್ನು ಮನೆಯಲ್ಲಿಯೆ ತಯಾರಿಸಿ ವಂಶ ಪಾರಂಪರ್ಯವಾದ ವೈದ್ಯಕೀಯ ನಮ್ಮ ತಂದೆಯವರ ಕಾಲದ ವರೆಗೂ ನಡೆಯಿತು. ಅದರಿಂದಾಗಿ,ಅಶ್ವಗಂಧ, ಬ್ರಾಹ್ಮೀ, ನೆಲ್ಲಿಕಾಯಿ,ವಿವಿದ ಬಗೆಯ ತುಳಸಿಗಳು ಇನ್ನು ಇತರೆ ಹಲವಾರು ಗಿಡ ಮೂಲಿಕೆಗಳ ಪರಿಚಯವಿತ್ತು. ಆಶ್ಚರ್ಯವೆಂದರೆ ಡೆಹರಾಡೂನಿನ ಕಾಡಿನಲ್ಲಿ ಅವಲ್ಲಾ ಯಥೇಚ್ಚವಾಗಿದ್ದುದನ್ನು ಕಂಡು ಆನಂದ ಪುಳಕಿತನಾದೆ. ಇನ್ನು ಹಸಿವು ನನ್ನನ್ನು ಕಾಡಲಾರದು!
ಕೆಲವನ್ನಂತೂ ಹಸಿ ಹಸಿಯಾಗಿ ತಿನ್ನತೊಡಗಿದೆ,ಇನ್ನು ಕೆಲವು ಎಲೆಗಳು,ಹೂಗಳನ್ನು ಬಿಡಿಸಿಕೊಂಡು ಚೀಲಕ್ಕೆ ತುಂಬಿಸಿಕೊಂಡೆ. ಕೆಲವು ಸಣ್ಣದಾಗಿ ಮತ್ತು ಬರಿಸುವ ಸಸ್ಯಗಳನ್ನೂ ನೊಡಿದೆ, ಮುಟ್ಟಲಿಲ್ಲ, ಮೊದಲೇ ಹೊಟ್ಟೆ ಖಾಲಿ!.ಅಪಾಯ.
ಗಮನ ಹಲವಾರು ವಿಧದ ಹೂಗಳತ್ತ ಹರಿಯಿತು. ಕೆಂಪು ಹೂವಿನಲ್ಲೇ ಅದೆಷ್ಟು ವಿಧವಾದ ಕೆಂಪುಗಳು,ನಸುಗೆಂಪು,ಕಡುಗೆಂಪು,ಬಿಳಿಪು ಮಿಶ್ರಿತ ಕೆಂಪು,ಹಳದಿ ಮಿಶ್ರಿತ ಕೆಂಪು,ಹಸಿರೆಲೆಗಳ ಮರೆಯಲ್ಲಿರುವ ಕೆಂಪು,ನಾನೇ ಇಲ್ಲಿಯ ರಾಣಿ ಎಂದು ಬಿಮ್ಮನೆ ಬೀಗುತ್ತಿರುವ ಕೆಂಪು.
ಒಂದು ಕಣ್ಣು ನಾವು ಸಾಗುತ್ತಿರುವ ಮಾರ್ಗದ ಕಡೆ ನೆಟ್ಟಿತ್ತು,ಇನ್ನುಳಿದ ನಾಲ್ಕೂವರೆ ಇಂದ್ರಿಯಗಳು ಈ ಅಧ್ಭುತ ಪ್ರಕೃತಿಯನ್ನಾವರಿಸಿಕೊಂಡುಟ್ಟಿದ್ದವು. ದೂರದಲ್ಲೆಲ್ಲೋ ಜುಳು ಜುಳು ನದಿಯನೀರು ಹರಿಯುತ್ತಿರುವ ಶಬ್ದ ಒಮ್ಮೆಲೇ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿಬಿಟ್ಟಿತು. ಮ್ಯಾಪಿನಲ್ಲಿ ಈ ನದಿ ಇರಲಿಲ್ಲವಲ್ಲಾ..ಹಾದಿ ತಪ್ಪಿದೆವಾ?
ಇಲ್ಲ...ಇದು ತರಬೇತಿ ಸಿಬ್ಬಂದಿಯವರ ವತಿಯಿಂದ ಸ್ನಾನಮಾಡಲಿ ಎಂದು ಒಂದು ಪುಟ್ಟ surprise! ಶುಭ್ರವಾದ ಸಿಹಿ ನೀರು ಮೈಮೇಲೆ ಒಂದು ನೂಲೂ ಇಲ್ಲದ ಹಾಗೆ ಉಟ್ಟಿದ್ದ ಬಟ್ಟೆಗಳನ್ನೆಲ್ಲಾ ಕಿತ್ತೆಸೆದು ನದಿಗೆ ಹಾರಿದೆವು. ನನ್ನ ಬೆಂಗಾಲಿ ಸ್ನೇಹಿತನಿಗೆ ಸ್ನಾನಕ್ಕಿಂತ ಮುಖ್ಯವಾಗಿ ಮೀನು ಹಿಡಿಯ ಬೇಕಾಗಿತ್ತು. ಅಂತೂ ಕೆಲವು ಮೀನಗಳನ್ನು ಹಿಡಿದು ರಾತ್ರಿಯ ಊಟದ ಚಿಂತೆಯನ್ನು ಬಗೆಹರಿಸಿಕೊಂಡ.
ಮರಳಿ ಬರುವಷ್ಟೊತ್ತಿಗೆ ಸಾಯಂಕಾಲವಾಗಿತ್ತು. ಆದರೆ ತರಬೇತಿ ಸಿಬ್ಬಂದಿ ಇನ್ನೊಂದು task ಕೊಟ್ಟರು. ನಮ್ಮಲ್ಲಿ ಒಬ್ಬನು ಅನಾರೊಗ್ಯದಿಂದ ಮಲಗಿ ಬಿಟ್ಟಿದ್ದಾನೆ ಅವನನ್ನು ಹೊತ್ತುಕೊಂಡು ಕ್ಯಾಂಪಿಗೆ ಕರದೊಯ್ಯಬೇಕು. ಸರಿ ಒಂದು makeshift ಚಟ್ಟ ಕಟ್ಟಿ ಅವನನ್ನು ಹೊತ್ತುಕೊಂಡು ಬಂದೆವು. ಆದರೆ ಕಾಡಿನಿಂದ ಹೊರಗೆ ಬಂದು ಶ್ರೀನಗರ ತಲುಪಿದ ನಂತರ ಎಲ್ಲರಿಗೂ ಒಂದು ಒಳ್ಳೆಯ ಹೋಟಲಿನಲ್ಲಿ ಊಟ ಕೊಡಿಸುತ್ತೇನೆಂದು ಆಣೆ ಪ್ರಮಾಣ ಮಾಡಿದ ಮೇಲೇ ಅವನ ಚಟ್ಟ ಹೊತ್ತಿದ್ದು!
ಅವತ್ತು ರಾತ್ರಿಯ campfire ನ ಮಂದ ಬೆಳಕಿನ ಮುಂದೆ ಕುಳಿತಾಗ ಮನಸ್ಸನ್ನಿಡೀ ಆವರಿಸಿದ್ದು "ಕುಮಾರ ವ್ಯಾಸ". ಒಂಥರ ವಿಚಿತ್ರವೆನಿಸಿತು. ಯಾಕೆ ಬಂತು ಈ ವಿಚಾರ?
ಆಗ, ನಾನು ಕುಳಿತು ಹೀಗೆ ಯೋಚಿಸುತ್ತಿದ್ದ ನೆಲ ದ್ರೋಣಾಚಾರ್ಯರ ಜನ್ಮಭೂಮಿ. ಡೆಹ್ರಾಡೂನಿಗೆ ಯಾಕೆ ಈ ಹೆಸರು ಬಂತು ಎನ್ನುವ ಹಲವಾರು ಪ್ರತೀತಿಗಳಲ್ಲಿ ದ್ರೋಣರ ಮತ್ತು ಕ್ರಿಪಿಯ(ಕೃಪಾಚಾರ್ಯರ ತಂಗಿ) ಪ್ರಣಯ ವೃತ್ತಾಂತಗಳಿವೆ. ಅಶ್ವಥ್ಥಾಮ ಹುಟ್ಟಿ ಬೆಳೆದ ನಾಡು ಇದು.
ಅವನು ಹುಟ್ಟಿದ ಕೂಡಲೇ ಕುದುರೆಯ ತರ ಕೆನೆಯಲು ಶುರು ಮಾಡಿದ್ದಕ್ಕೆ ಈ ತರದ ಅಡ್ಡ ಹೆಸರಿಟ್ಟರಂತೆ. ಆದರೆ ಅಶ್ವಥ್ಥಾಮ ಚಿರಂಜೀವಿಯಲ್ಲವೇ,ಹಾಗಾಗಿ ಅದರ ಬಗ್ಗೆಯೂ ತುಂಬ ವದಂತಿಗಳಿವೆ.
ಅದು ಸರಿ, ಗದುಗಿನ ನಾರಾಣಪ್ಪನಿಗೂ ಈ ಡೆಹ್ರಾಡೂನಿನ ಕಾಡಿಗೂ ಏನು ಸಂಬಂಧ?
No comments:
Post a Comment