Tuesday, March 6, 2018

ರಾಯಚೂರಿನಲ್ಲಿ ರಾಯರ ಶೌರ್ಯ


'ನೀನು ಅಪ್ಪಿತಪ್ಪಿ ಪುರೋಹಿತರ ವಂಶದಲ್ಲಿ ಹುಟ್ಟಿದೀಯಾ...'
ಹಾಗಂತಾ ನಮ್ಮ ಅಜ್ಜಿ ನನಗೆ ಚಿಕ್ಕಂದಿನಲ್ಲಿ ಗದರಿಸುತ್ತಿದ್ದಾಗ ನನಗೇನು ಬೇಜಾರಾಗುತ್ತಿರಲಿಲ್ಲ. ಅವರ ಗದರಿಕೆಯಲ್ಲೂ ಒಂದಿಷ್ಟು ಕೋಪ ಮತ್ತೊಂದಿಷ್ಟು ಹೆಮ್ಮೆ ಇರುತ್ತಿತ್ತು.  ಕೋಪ ಯಾಕೆಂದ್ರೆ ಅವರಿಗೆ ಕೇಳಬೇಕೆನಿಸಿದ ವಿಷ್ಣುಪುರಾಣವನ್ನು ಓದುವುದನ್ನು ಬಿಟ್ಟು ಯುದ್ಧಗಳ, ಸಾಹಸದ ಕಥೆಗಳನ್ನು ಹೇಳುತ್ತಿದ್ದೆ. ಯುಧ್ಧ ಕೌಶಲ್ಯಗಳ ಬಗ್ಗೆ ನನಗೆ ಗೊತ್ತಿದ್ದ ಜ್ಞಾನದ ಬಗ್ಗೆ ಅಜ್ಜಿಗೆ ಮೆಚ್ಚುಗೆಯಂತೂ ಇತ್ತು. ಹಂಪೆಯಲ್ಲಿ ಪೌರೋಹಿತ್ಯಕ್ಕೆ ಹೆಸರುವಾಸಿಯಾದ ಕೃಷ್ಣಾಶಾಸ್ತ್ರಿಯ ಮಗ ಅನಂತಶಾಸ್ತ್ರಿಯಾದ ನನಗೆ ಅದೇಕೋ ಏನೋ ಯುದ್ದದ ಕತೆಗಳು ಅಂದರೆ ಬಲು ಇಷ್ಟ. ರಾಮಾಯಣ, ಮಹಾಭಾರತಗಳಲ್ಲಿ ಬರುವ ಯುದ್ಧ ಪ್ರಸಂಗಗಳನ್ನು ಪದೇ ಪದೇ ಓದಿ ಬಾಯಿಪಾಠ ವಾಗಿಬಿಟ್ಟಿತ್ತು. ಅದನ್ನು ಅಷ್ಟೇ ಆಸಕ್ತಿಯಿಂದ ಕೇಳಿಸಿಕೊಳ್ಳುವ ಗೆಳೆಯರ ಗುಂಪುಗಳು ಅದಕ್ಕೇ ಕಾಯುತ್ತಿದ್ದವು. ಕೃಷ್ಣದೇವರಾಯರ ಕಾಲದಲ್ಲಿ ಹಂಪೆಯಲ್ಲಿ ಹುಟ್ಟಿಬೆಳೆದವನಿಗೆ ಸಾಹಸ, ಶೌರ್ಯಗಳ ಪ್ರಸಂಗಗಳಿಗೇನು ಕೊರತೆಯೇ? ಅಂತಹ ವೀರಾಧಿವೀರ ರಾಯರನ್ನು ನೋಡುವುದೇ ಒಂದು ಸೌಭಾಗ್ಯ. ಅವರ ಪಟ್ಟಾಭಿಷೇಕವಾದಾಗ ನನಗಿನ್ನೂ ಹದಿನಾಲ್ಕು ವರ್ಷ. ಅವರು ಬಹಮನಿಯ ಸುಲ್ತಾನರನ್ನು ರಾಯಚೂರಿನಿಂದ ಹೊಡೆದೋಡಿಸಿದ್ದು, ಉಮ್ಮತ್ತೂರಿನ ಗಂಗರಾಜನ ದಂಗೆಯಡಗಿಸಿದ್ದು, ಕಳಿಂಗರಾಜ ಪ್ರತಾಪ ರುದ್ರನನ್ನು ಸೋಲಿಸಿ ಸಾಮ್ರಾಜ್ಯವನ್ನು ಒಡಿಶಾದ ಕಟ್ಟಕ್ಕಿನವರೆಗೂ ವಿಸ್ತರಿಸಿದ್ದು ಇವೆಲ್ಲವನ್ನೂ ಅತ್ಯಂತ ವಿವರವಾಗಿ ಬರೆದಿಟ್ಟಿದ್ದೇನೆ.
'ಮಂತ್ರಗಳನ್ನು ಬರೆಯುವ ತಾಳೇಗರಿಗಳಲ್ಲಿ ನಿನ್ನ ಕದನದ ಕಥೆಗಳನ್ನು ಬರೆದಿದ್ದೀಯ..?'
ಎಂದು ನಮ್ಮ ತಂದೆಯವರ ಕೆಂಗಣ್ಣಿಗೆ ಗುರಿಯಾಗಿದ್ದೇನೆ.

ಈಗ ಇನ್ನೊಂದು ಕದನದ ಕಾವೇರುತ್ತಿದೆ....
ಇವರ ಹಿಂದೆ ನಾನೂರು ಜನರ ಅಡುಗೆ ಸಿಬ್ಬಂದಿ,  ಪ್ರತಿ ಏಳು ಗಾವುದ ದೂರದಲ್ಲಿ ಒಂದು ಊಟದ ಬಿಡಾರ, ಒಟ್ಟು ಎಂಟು ಬಿಡಾರಗಳು.


ಶ್ರೀರಂಗಪಟ್ಟಣದಿಂದ ಅಲ್ಲಿಯ ರಾಜ ಮತ್ತು ಕೃಷ್ಣದೇವರಾಯರ ಮಾವ, ಕುಮಾರ ವೀರಯ್ಯನವರು ತಮ್ಮ ಸೈನ್ಯದದೊಂದಿಗೆ ಹಂಪೆಯ ಹೊರ ವಲಯದಲ್ಲಿ ಬೀಡುಬಿಟ್ಟಾಗಲೇ
ನನ್ನ ಕುತೂಹಲ ಗರಿಕೆದರಿಕೊಂಡಿತು. ನೋಡು ನೋಡುತ್ತಿದ್ದಂತೆ ಹಲವಾರು ಸಾಮಂತರು ಸೈನ್ಯದೊಂದಿಗೆ ಬಿಡಾರ ಹೂಡಿರುವುದು ಹಂಪೆಯಿಂದ ಹಲವಾರು ಗಾವುದ ದೂರದವರೆಗೂ ಕಾಣುವ ಸಾಮಾನ್ಯ ದೃಶ್ಯವಾಯಿತು.
ಕ್ರಮೇಣ ಈ ಸಲ ವಿಜಯನಗರದ ಸೈನ್ಯ ಎಲ್ಲಿಗೆ ಮುತ್ತಿಗೆ ಹಾಕಲಿದೆ ಎನ್ನುವುದು ರಹಸ್ಯದ ವಿಷಯವಾಗಿ ಉಳಿಯಲಿಲ್ಲ.  ಹೌದು...ಬಿಜಾಪುರದ ಅದಿಲ್ ಶಾಹ ವಂಶಸ್ಥರು ಹಿಂದಿನಿಂದಲೂ ವಿಜಯನಗರದ ಸಾಮ್ರಜ್ಯಕ್ಕೆ ಮಾಡಿದ ದ್ರೋಹ, ಅನ್ಯಾಯಗಳ ಮತ್ತು ಕುತಂತ್ರಗಳ ಎಲ್ಲೆ ಮೀರಿದ್ದು, ಅವರ ಪಾಪದ ಕೊಡ ತುಂಬಿ ಹೋಗಿದೆ, ಶೀಘ್ರದಲ್ಲೇ ಅವರ ಹುಟ್ಟಡಗಿಸುವ ದಿನಗಳು ಬರಲಿವೆ. ವಿಜಯನಗರ ಸಾಮ್ರಾಜ್ಯ ಈ ಕ್ರಿಮಿಗಳಿಂದ ಮುಕ್ತವಾಗುವ ಸಮಯವಿದು.
         ಇತ್ತೀಚಿಗೆ ನಡೆದ ರಾಜದ್ರೋಹದ ಘಟನೆಯಿಂದ ರಾಯರು ಕೆಂಡಾಮಂಡಲವಾಗಿರುವುದಂತೂ ಸತ್ಯ. ದೇನಾಯಿತೆಂದರೆ...ಗೋವಾಕ್ಕೆ ಬಂದಿಳಿದ ಅರಬ್ಬೀ ಕುದುರೆಗಳನ್ನು ಹಂಪೆಗೆ ಕರೆದು ತರಲು ಸೈಯದ್ ಮೇರಿಕ್ಕರ್ ಎನ್ನುವ ಅಧಿಕಾರಿಯನ್ನು ನಿಯಮಿಸಿದ್ದರು. ಕೃಷ್ಣದೇವರಾಯರು ಖುದ್ದಾಗಿ ಅವನ ಕೈಗೆ ನಲವತ್ತು ಸಾವಿರ ಚಿನ್ನದ ವರಾಹಗಳನ್ನು ಕೊಟ್ಟು ಕಳುಹಿಸಿದ್ದರು. ಹಲವಾರು ದಿನಗಳಾಯಿತು, ಕುದುರೆಗಳೂ ಇಲ್ಲ, ಈ ಮುಸ್ಲಿಮನು ನಾಪತ್ತೆ.  ವಿಚಾರಣೆ ನಡೆಸಿದರೆ ಪತ್ತೆಯಾಗಿದ್ದೇನೆಂದರೆ, ಈ ದ್ರೋಹಿ ಗೋವಾ ತಲುಪೇ ಇಲ್ಲ. ಪೋಂಡಾದಲ್ಲಿ ಇನ್ನೂ ಕೆಲವು ಮುಸ್ಲಿಮರ ಜೊತೆ ಸೇರಿಕೊಂಡು ಬಿಜಾಪುರಕ್ಕೆ ಓಡಿಹೋಗಿ, ಅಲ್ಲಿಯ ಸುಲ್ತಾನ ಇಸ್ಮಾಯಿಲ್ ಆದಿಲ್ ಶಾಹನ ಮೊರೆಹೋಗಿದ್ದಾನೆ. ಚಿನ್ನದ ವರಾಹಗಳನ್ನು ಹಂಚಿಕೊಂಡಿದ್ದಾರಂತೆ. ಇವರೆಲ್ಲಾ ಒಂದೇ ಬಣ್ಣದವರಲ್ಲವೇ..ರಾಯರು ಯಾಕೆ ಇವರ ಮೇಲೆ ನಂಬಿಕೆ ಇಡುತ್ತಾರೋ ನನಗಂತೂ ಅರ್ಥವಾಗುತ್ತಿಲ್ಲ, ಆಥವಾ ಇವರನ್ನು ಬೇರು ಸಮೇತ ಕಿತ್ತೊಗೆಯಲು ಇದೊಂದು ದೈವನಿಯೋಜಿತ ಪ್ರಕರಣವಿರಬಹುದು.
            ನಮ್ಮ ಕುಟುಂಬದವರ ಜೊತೆ ತೀರ್ಥಯಾತ್ರೆ ಮಾಡಿದ ಅನುಭವ ಮಾತ್ರವಿದ್ದ ನನಗೆ ಈ ಬೃಹತ್ ದಂಡಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಮಾತ್ರ ತೆನಾಲಿ ರಾಮಕೃಷ್ಣರ ಕೃಪೆಯಿಂದ. ಅವಸರದಲ್ಲಿ ಒಂದು ದಿನ ಮನೆಗೆ ಬಂದವರೇ..ಈ ಸಲ ನಿಮ್ಮ ಮಗನನ್ನು ಕಳುಹಿಸಿ ಕೊಡಿ ರಾಜಪರಿವಾರದಲ್ಲಿ ನಡೆಯುವ ಪೂಜಾವಿಧಿಗಳಿಗೆ ಸಹಾಯಕನಾಗಿ. ರೋಗಿ ಬಯಸಿದ್ದು, ವೈದ್ಯಹೇಳಿದ್ದು...ಹಾಲು ಅನ್ನ!
ಆದರೆ ನಮ್ಮಜ್ಜಿಗೆ ಸ್ವಲ್ಪ ಆತಂಕ ಆಯಿತು ಅನ್ನುವುದನ್ನು ಬಿಟ್ಟರೆ ನನ್ನ ಪ್ರಯಾಣಕ್ಕೆ ಯಾವ ಅಡಚಣೆಗಳಾಗಲಿಲ್ಲ. ಕೃಷ್ಣದೇವರಾಯರ ರಾಜ ಬಿಡಾರದ ಸಮೀಪದಲ್ಲೇ ಶಿವ, ವಿಷ್ಣು, ರಾಮ ಮತ್ತು ಕೃಷ್ಣರ ಉತ್ಸವ ಮೂರ್ತಿಗಳ ಬಿಡಾರದಲ್ಲಿ ನಮ್ಮ ಹೋಮ ಹವನಗಳು ನಡೆಯ ಬೇಕಂತೆ.
ಜೊತೆಗೆ ನನಗೆ ಇನ್ನೊಂದು ಜವಾಬ್ದಾರಿಯನ್ನೂ ವಹಿಸಿದ್ದರು, ಅದೇನೆಂದರೆ ಯುದ್ಧ ಸಮಯದಲ್ಲಿ ನಡೆಯುವ ದವಸ ಧಾನ್ಯಗಳ ಖರ್ಚು ವೆಚ್ಚಗಳ ಲೆಕ್ಕ ದಾಖಲಿಸುವುದು. ಇದರಿಂದ ನನಗೆ ಎಲ್ಲಾ ಕಡೆ ಓಡಾಡುವ ಸ್ವಾತಂತ್ರ್ಯ ಸಿಕ್ಕಿತು.
ಮೊಟ್ಟಮೊದಲ ತಂಡ ಹೊರಟು ನಿಂತಾಗ ನಾನು ಹೋಗಿ ಎಷ್ಟು ಜನ ಹೊರಟಿದ್ದಾರೆ ಏನು ಏನೆಲ್ಲಾ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಲೆಕ್ಕವನ್ನು ಬರೆದಿಡಲು ಹೊರಟೆ. ಸುಮಾರು ಐದು ಸಾವಿರ ವರ್ತಕರು ಮತ್ತು ವರ್ತಕರ ಮಾರುವೇಷದಲ್ಲಿದ್ದ ಗೂಢಾಚಾರರು. ವರ್ತಕರು ರಾಯಚೂರುನಿಂದ ಏಳೆಂಟು ಗಾವುದ ದೂರದಲ್ಲಿ ಒಂದು ಮಾರುಕಟ್ಟೆಯನ್ನು ನಿರ್ಮಿಸಬೇಕು. ಸೈನ್ಯ ಬರುವವರೆಗೆ ಗೂಢಾಚಾರರು ಇವರಿಗೆ ರಕ್ಷಣೆ ಕೊಡುತ್ತಾರೆ.   ಇವರ ಹಿಂದೆ ಹೊರಟವರು ನೀರಾಳುಗಳು. ರಾಯಚೂರಿನ ದಾರಿಯುದ್ದಕ್ಕೂ ಹಿಂದೆ ಬರಲಿರುವ ಬೃಹತ್ ಸೈನ್ಯಕ್ಕೆ ನೀರು ಒದಗಿಸುವ ಪುಣ್ಯ ಕಾರ್ಯ ಇವರದ್ದು.

ಮೊಟ್ಟಮೊದಲ ಸೈನಿಕರ ತಂಡದ ಮುಖಂಡ ಪೆಮ್ಮಸಾನಿ ರಾಮಲಿಂಗ ನಾಯಕ. ಅವರ ನಾಯಕತ್ವದಲ್ಲಿ ಮೂವತ್ತು ಸಾವಿರ ಜನ ಸೈನಿಕರು, ಒಂದು ಸಾವಿರ ಕುದುರೆಗಳು ಮತ್ತು ಅವರದೊಂದು ಆನೆ.  ಎರಡನೇ ತಂಡದಲ್ಲಿ ಶ್ರೀರಂಗಪಟ್ಟಣದ ರಾಜ, ಕೃಷ್ಣದೇವರಾಯರ ಮಾವ, ಕುಮಾರ ವೀರಯ್ಯನವರ ಜೊತೆ ಕನ್ನಡ ಬಸವಪ್ಪ ನಾಯಕ, ತಿಮ್ಮಪ್ಪ ನಾಯಕ. ಒಬ್ಬೊಬ್ಬರದೂ ಮೂವತ್ತು ಸಾವಿರ ಸೈನಿಕರ ತಂಡ.
ಕೃಷ್ಣದೇವರಾಯರ ಮುಂದಾಳತ್ವದಲ್ಲಿ ಮುಖ್ಯ ಸೈನ್ಯ ರಾಯಚೂರಿನ ಕಡೆಗೆ ದೌಡಾಯಿಸುತ್ತಿದ್ದ ಒಟ್ಟು ಸಂಖ್ಯೆಯನ್ನು ಬರೆಯುವಷ್ಟರಲ್ಲಿ ನನ್ನ ಕೈ ಬಿದ್ದು ಹೋಗಿತ್ತು.  ಏಳು ಲಕ್ಷಕ್ಕೂ ಮೀರಿದ ಸೈನ್ಯ, ಮೂವತ್ತೆರಡು ಸಾವಿರದ ಆರು ನೂರು ಕುದುರೆಗಳು ಮತ್ತು ಐನೂರ ಐವತ್ತು ಆನೆಗಳು.ಹಿಂದಿನ ಗುಂಪಿನಲ್ಲಿ ನಾನೂರು ಜನ ಕಮ್ಮಾರರು,
ಚಮ್ಮಾರರು ದರ್ಜಿಗಳು, ಸೇವಕ,ಸೇವಕಿಯರು, ಕಲಾವಿದರು, ಅರ್ಚಕರು...ಹೀಗೆ  ವಿಜಯನಗರ ಸಾಮ್ರಾಜ್ಯ ದಂಡೆತ್ತಿ ಹೋಯಿತೆಂದರೆ ಅದು ಕೇವಲ ಸೈನಿಕರ ವಾಬ್ದಾರಿಯಾಗಿರುತ್ತಿರಲಿಲ್ಲ. ಸಾಮ್ರಾಜ್ಯದ ರಾಜ, ಮಂತ್ರಿ, ಸಾಮಂತ, ವರ್ತಕ, ರೈತ, ಪೂಜಾರಿ, ಸಮಾಜದ ಎಲ್ಲಾ ವರ್ಗದವರ ಪಾತ್ರವಿರುತ್ತದೆ...ಅದಕ್ಕೇ ವಿಜಯನಗರಕ್ಕೆ "ವಿಜಯ" ಅಭ್ಯಾಸವಾಗಿ ಹೋಗಿದೆ.

No comments:

Post a Comment