Friday, November 9, 2018

ಮೇಲುಕೋಟೆಯಲ್ಲಿ ಮಾರಣ ಹೋಮ

ಮೇಲುಕೋಟೆಯಲ್ಲಿ ಮಾರಣ ಹೋಮ
'ಲೇ ಸರಸೋತಿ ಬೇಗ ಸ್ನಾನ ಮುಗಿಸಿ ಬಾರೇ, ಹಂಡೆ ನೀರೆಲ್ಲಾ ನೀನೇ ಮುಗಿಸ ಬೇಡ..ಇನ್ನೂ ನಾಲ್ಕು ಜನ ಇದಾರೆ ಸ್ನಾನಕ್ಕೆ ಇವತ್ತು ನರಕ ಚತುರ್ದಶಿಯ ಅಭ್ಯಂಜನ ಬೇರೆ..'
ಜಾನಕಮ್ಮ ಪೂಜಾ ಪರಿಕರಗಳನ್ನು ಅಣಿಗೊಳಿಸುತ್ತಾ ಬಚ್ಚಲು ಮನೆಯಲ್ಲಿರುವ ಮಗಳಿಗೆ ಕೇಳಿಸುವ ಹಾಗೆ ಲಘುವಾಗಿ ಗದರಿಸಿದರು.
,
ತಿರುಮಲ ಐಯ್ಯಂಗಾರರ ಮನೆಯಲ್ಲಿ ಹಬ್ಬದ ಸಡಗರ. ಮೇಲುಕೋಟೆಯ ಪ್ರತಿ ಮಂಡ್ಯಂ ಐಯ್ಯಂಗಾರರ ಮನೆ ಮನೆಯಲ್ಲೂ ಅಂದು ವಿಶೇಷ ಪೂಜೆ ಆಚರಣೆಗಳು.
'ಹೋಗಲಿ ಬಿಡೇ ಮಗು ನಿಧಾನಕ್ಕೆ ಬರಲಿ, ಗಂಡು ಹುಡುಗರೆಲ್ಲಾ ಆಗಲೇ ಕಲ್ಯಾಣಿಗಳ ಕಡೆ ಹೋಗಾಯ್ತು'.
ಒದ್ದೆಯಾದ ಪಂಚೆಯನ್ನು ಹಿತ್ತಿಲಿನಲ್ಲಿ ಒಣಗಲು ಹಾಕಿ, ಪೂಜೆಗೆ ಇನ್ನಷ್ಟು ಹೂಗಳನ್ನು ಬಿಡಿಸುತ್ತಾ ಹೆಂಡತಿಗೆ ಸಮಾಧಾನವಾಗಿರಲು ಹೇಳಿದರು ತಿರುಮಲ ಐಯ್ಯಂಗಾರರು.
'ಏನು ಮಕ್ಕಳೆಲ್ಲಾ ಕಲ್ಯಾಣಿಗೆ ಹೋದರೇ..'
ಒಂದೇ ಸಲ ಹೌಹಾರಿದಂತೆ ಕೇಳಿದರು ಜಾನಕಮ್ಮ.
'ಯಾಕೇ ಇಷ್ಟು ಗಾಬರಿಪಟ್ಟಕೊಂಡಿದೀಯಾ..ದಿನಾಲೂ ಹೋಗೊಲ್ವೆ'
ಐಯ್ಯಂಗಾರರು ಹೆಂಡತಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
'ಇಲ್ಲಾರೀ...ನನಗೇಕೋ ಗಾಬರಿ, ಎಡಗಣ್ಣೂ ಕೂಡ ಹೊಡಕೊಳ್ತಾ ಇದೆ, ಯಾಕೋ ಹೆದರಿಕೆ ಆಗ್ತಿದೆ... ನೀವು ಪೂಜೆಗೆ ಕೂರೋಕ್ಕೆ ಮುಂಚೆ ಯಾರನ್ನಾದ್ರೂ ಕಳಿಸಿ ಮಕ್ಕಳನ್ನ ಕರ್ಕೊಂಡು ಬರೋಕೆ'
ಐಯ್ಯಂಗಾರರಿಗೆ ಜಾನಕಮ್ಮನವರ ನಡುವಳಿಕೆ ವಿಚಿತ್ರವೆನಿಸಿತು. ಮಕ್ಕಳನ್ನು ಹೊರಗೆ ಆಟಕ್ಕೆ, ಕೊಳಗಳಿಗೆ ಈಜೋಕ್ಕೆ ಕಳುಹಿಸಲು ಎಂದೂ ಹಿಂಜರಿದವರಲ್ಲ. ಬ್ರಾಹ್ಮಣರು ಕುಸ್ತಿಯಾಡೋದು ಕಲೀಬೇಕು, ಕತ್ತಿವರಸೆಯನ್ನೂ ಕಲೀಲಿ ಎನ್ನುವವರು, ಇವತ್ತ್ಯಾಕೆ ಹೀಗೆ ಗಾಬರಿಯಾಗಿದ್ದಾಳೆ ಎನ್ನುತ್ತಲೇ,
'ಸರಿ ನಾನೇ ಹೋಗಿ ಕರೆದುಕೊಂಡು ಬರುತ್ತೇನೆ ಎಂದು  ಅಕ್ಕ ತಂಗಿಯರ ಕೊಳದ ಕಡೆ ಹೊರಟರು.
ದೇವರಕೋಣೆಗೆ ಬಂದ ಜಾನಕಮ್ಮ ದೀಪಗಳನ್ನ ಹಚ್ಚಲು ಶುರುಮಾಡಿಕೊಂಡರು...
ಅದು ಯಾವ ಮಾಯದಲ್ಲಿ ಟಿಪ್ಪು ಸುಲ್ತಾನನ ಸೈನಿಕರು ಮನೆಯೊಳಗೆ ನುಗ್ಗಿ ಕಣ್ಣಿಗೆ ಕಂಡವರನ್ನೆಲ್ಲಾ ಕೊಲ್ಲಲು ಶುರುಮಾಡಿಕೊಂಡರೋ..ಕ್ಷಣಾರ್ಧದಲ್ಲಿ ಹಚ್ಚುತ್ತಿದ್ದ ದೀಪಗಳ ಮೇಲೇ ಉರುಳಿ ಬಿತ್ತು ಜಾನಕಮ್ಮನ ದೇಹ, ಮಗು ಸರಸ್ವತಿ ಬಚ್ಚಲು ಕೋಣೆಯಲ್ಲೇ ಹತವಾದಳು.
ತಿಳಿನೀರಿನ ಕಲ್ಯಾಣಿಗಳು ಕೆಂಪಾಗತೊಡಗಿದವು..
ತಿರುಮಲ ಐಯ್ಯಂಗಾರರ ಮತ್ತು ಮಕ್ಕಳ ಛಿದ್ರಗೊಂಡ ದೇಹಗಳು ಒಂದರ ಮೇಲೊಂದು ಉರುಳಿಬಿದ್ದವು.
ಆ ನರಕ ಚತುರ್ಥಿಯಂದು ಮೇಲುಕೋಟೆ ನರಕವಾಗಿ ಹೋಯಿತು..ಎಲ್ಲೇಲ್ಲೂ ಆಕ್ರಂದನ, ಅಂಧಕಾರ.
ಇಂದಿಗೂ ಮೇಲುಕೋಟೆಯಲ್ಲಿ ದೀಪಾವಳಿಯಂದು ಕತ್ತಲಿನದ ಅಟ್ಟಹಾಸ.
✍️...ವಿಂಗ್ ಕಮಾಂಡರ್ ಸುದರ್ಶನ

No comments:

Post a Comment