Friday, October 14, 2016

ಶೆಟ್ಟರ ಸವಾಸ

ಶೆಟ್ಟರ ಸವಾಸ


     ಗಂಗೂರಿನ ನಮ್ಮ ಮನೆಯ ಎದುರು ಸೀತಾರಾಮ ಶೆಟ್ಟರ ಮನೆ. ಶೆಟ್ಟರು ಮತ್ತು ನಮ್ಮ ತಂದೆಯವರು  ಬಾಲ್ಯಸ್ನೇಹಿತರು,ಇಬ್ಬರೂ ಜೊತೆಗೆ ಪ್ರಾಥಮಿಕ ಶಾಲೆಯಿಂದಲೂ  ಒಟ್ಟಿಗೆ ಓದಿಕೊಂಡು ಬೆಳೆದವರು. ಎಂಬತ್ತರ ದಶಕಗಳಲ್ಲಿರುವ ಇಬ್ಬರೂ, ಈಗಲೂ ಅನ್ಯೋನ್ಯವಾಗಿದ್ದಾರೆ. ಎರಡೂ ಮನೆಗಳ ಮಧ್ಯ ಸಣ್ಣಪುಟ್ಟ ವಿರಸಗಳಿದ್ದರೂ ಸಹ,ಕಾಲಕ್ರಮೇಣ ಇವರ ಸ್ನೇಹ ಮಾತ್ರ ಭದ್ರವಾಗಿ ಉಳಿದಿದೆ. ವಿಧ್ಯಾಭ್ಯಾಸ  ಮುಗಿದು ನಮ್ಮ ತಂದೆಯವರು ಉಪಾಧ್ಯಾಯರಾದರೆ, ಶೆಟ್ಟರು ತಮ್ಮ ಕುಲಕಸುಬಾದ ವ್ಯಾಪಾರದ ದಾರಿ ಹಿಡಿದರು. ಸುತ್ತಲಿನ ಹಳ್ಳಿಗಳ ಹತ್ತಿ,ಮೆಣಸಿನಕಾಯಿ ಮತ್ತು ಇತರೆ ದವಸ ಧಾನ್ಯಗಳನ್ನು  ಖರೀದಿಸಿ ಮನೆಯಲ್ಲಿ ಕೂಡಿಸಿಡುತ್ತಿದ್ದರು. ಮಾರುಕಟ್ಟೆಯಲ್ಲಿ  ಒಳ್ಳೆಯ ದರ ಸಿಕ್ಕಾಗ ಬೆಂಗಳೂರಿನ ಮಂಡಿಯಲ್ಲಿ  ಮಾರಿ ಬರುತ್ತಿದ್ದರು. ಹಾಗೆ ಬೆಂಗಳೂರಿಗೆ ಹೋದಾಗಲೆಲ್ಲ ಎರಡು ಮೂರು ದಿನಗಳು ಅಲ್ಲೇ ಇರಬೇಕಾಗಿರುತ್ತಿತ್ತು.
     ನಮ್ಮೂರಿಗೆ ಹಿಂತಿರುಗಿ ಬಂದ ನಂತರ ಅವರ ಬೆಂಗಳೂರಿನ ಪ್ರವಾಸದ ಬಗ್ಗೆ ಬಹಳ ರಸವತ್ತಾಗಿ ಕಥೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಿದ್ದರು. ಅವರು  ಹೋದ ಹೋಟೆಲ್ಗಳ ವಿವರಣೆ, ತಿಂದ ತಿಂಡಿಗಳ ವರ್ಣನೆ,ಬೆಂಗಳೂರುನ್ನು ಕಂಡರಿಯದ ನಾವು, ಬಿಟ್ಬ  ಬಾಯಿ ಬಿಟ್ಟ ಹಾಗೆ, ಅವರು ಹೇಳುವುದನ್ನೇ ಕೇಳುತ್ತ, ಬೆಂಗಳೂರು ಹಾಗಿರಬಹುದು ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೆವು. ಅವರು ನಮ್ಮ ತಂದೆಯ ವಯಸ್ಸಿನವರಾದರೂ ಸಹ,ನಾವಿಬ್ಬರೂ ಪಕ್ಕಾ ದೋಸ್ತುಗಳು. ನಾನೂ ಅವರ ಹತ್ತಿರ ಯಾವ ಸಂಕೋಚವಿಲ್ಲದೆ ಮಾತಾಡುತ್ತಿದ್ದೆ. ನಮ್ಮ ಮನೆಯವರಲ್ಲಿ ಮಾತನಾಡದ ವಿಷಯಗಳನ್ನು ಇವರ ಹತ್ತಿರ ನಿರ್ಗಳವಾಗಿ ಮಾತಾಡುತ್ತಿದ್ದೆ. ಶೆಟ್ಟರು ತುಂಬಾ ಹಾಸ್ಯಸ್ವಭಾವದ ವ್ಯಕ್ತಿ, ಮಾತಾಡಲು ಶುರು ಹಚ್ಚಿಕೊಂಡರೆ,ಲಂಗು ಲಗಾಮೆ ಇಲ್ಲ. ಇದೇ ಕಾರಣ ಕೆಲವು ಸಲ ಹಳ್ಳಿಯ ಹೆಂಗಸರ ಕೆಂಗಣ್ಣಿಗೂ ತುತ್ತಾಗುತ್ತಿದ್ದರಾದರೂ ಸ್ವಲ್ಪ ಹೊತ್ತಿನಲ್ಲೇ ಸರಿಪಡಿಸಿಕೊಳ್ಳುವ ಜಾಣತನವೂ ಇತ್ತು.
     ಒಮ್ಮೆ ಏನಾಯಿತೆಂದರೆ,ಹಿತ್ತಲಿನಲ್ಲಿ ಒಬ್ಬ ಹೆಣ್ಣುಮಗಳು ಸಗಣಿಗೆ ತೌಡು ಸೇರಿಸಿ ಬೆರಣಿ ತಟ್ಟುತ್ತಿದ್ದರು,ಇದು ನಮ್ಮ ಹಳ್ಳಿಗಳಲ್ಲಿ ಕಾಣುವ ಸಾಮಾನ್ಯ ದೃಷ್ಯ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶೆಟ್ಟರು ಆವಮ್ಮನನ್ನು ನೋಡಿ'ಏನಿದು ರಮಣಿ ನಿನ್ನ ಮುಖವೆಲ್ಲಾ ಸಗಣಿ' ಎನ್ನಬೇಕೇ!ಮೊದಲೇ ಸಿಟ್ಟಿನಲ್ಲಿದ್ದ ಆವಮ್ಮ ಸಗಣಿಯ ಉಂಡೆಯೊಂದನ್ನು ಶೆಟ್ಟರ ಮುಖಕ್ಕೆ ಗುರಿಯಿಟ್ಟು ಎಸದುಬಿಟ್ಟಳು,ಶೆಟ್ಟರಂತೂ ಸ್ವಲ್ಪದರಲ್ಲಿ ಬಚಾವಾದರು!,ಹೀಗೆ ಕೆಲವೊಮ್ಮೆ ಅವಾಂತರಕ್ಕೀಡಾಗುತ್ತಿದ್ದರು. ಅವರ ಮನೆಯ ಎತ್ತರವಾದ ಕಟ್ಟೆಯ ಮೇಲೆ ಕುಳಿತು ಹೋಗಿ ಬರುವವರನ್ನೆಲ್ಲ ಮಾತಾಡಿಸಿದ್ದೇ ಮಾತಾಡಿಸಿದ್ದು. ಅವರ ಹಾಸ್ಯ,ಕುಚೇಷ್ಟೆಯ ಮಾತುಗಳು ಇತರರ ಮೇಲೂ ಸಾಂಕ್ರಾಮಿಕ ಪರಿಣಾಮಬೀರಿ ಒಂದು ನಗೆಯ ವಾತಾವರಣ ತನಗೆತಾನೇ ಸೃಷ್ಟಿಯಾಗುತ್ತಿತ್ತು.
    
     ಒಂದು ಸಂಜೆ ಶೆಟ್ಟರ ಹತ್ತಿರ ಮಾತನಾಡುತ್ತ ,ಪಿಯುಸಿ ಮುಗಿದ ಮೇಲೆ ನಾನು ಏರ್ಫೋರ್ಸಿಗೆ ಸೇರುವ ಆಲೋಚನೆಯ ಬಗ್ಗೆ ತಿಳಿಸಿದೆ. 'ಏನೋ ಏರ್ಫೋರ್ಸು ಎಂದರೆ?'ಎಂದು ಕೇಳಿದರು. ಅಲ್ಪ ಸ್ವಲ್ಪ ನನಗೆ ಆಗ ತಿಳಿದಿದ್ದನ್ನು ಹೇಳಿದೆ.ಓ.. ಅದು ಮಿಲಿಟ್ರೀನಾ,ಗಾಳಿ ಬಂದ್ರೆ ತೂರಿಕೊಂಡು ಹೋಗ್ತೀಯ  ನಿನ್ಯಾರು ತಂಗತಾರೆ'  ಎಂದು ಗೇಲಿ ಮಾಡಿದರು.  ಆದರೆ ಏರ್ಫೋರ್ಸ ಬಗ್ಗೆ ಅವರಿಗಿಷ್ಟವಾದ ಅಂಶವೆಂದರೆ ಊಟ ತಿಂಡಿ, ವಸತಿ ರೈಲುಪ್ರಯಾಣ ಎಲ್ಲಾ ಫ್ರೀ!
      
      ನನ್ನ ಅದೃಷ್ಟ ಚೆನ್ನಾಗಿತ್ತು. ಪಿಯುಸಿ ಮುಗಿದನಂತರ ಅಗ್ರಿಕಲ್ಚರ್  ಬಿಎಸ್ಸಿ ಕೋರ್ಸ್ನ ಸಂದರ್ಶನಕ್ಕೆ ಬೆಂಗಳೂರಿಗೆ ಹೋಗಬೇಕಾಗಿತ್ತು ಮತ್ತು ಅದರ ಮರುದಿನವೇ ಏರ್ಫೋರ್ಸನ ಸಂದರ್ಶನದ ಕರೆಯೂ ಬಂತು. ಆದರೆ ಶೆಟ್ಟರನ್ನು  ಬಿಟ್ಟರೆ ಈ ವಿಷಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ಬೆಂಗಳೂರನ್ನು ತಲುಪಿದ ಮೇಲೆ ತಂದೆಯವರಿಗೆ ಏರ್ಫೋರ್ಸಿನ ಸಂದರ್ಶನದ ಬಗ್ಗೆ ತಿಳಿಸಿದೆ. ಸರಿ ನಿನ್ನ್ ಇಷ್ಟ ಎಂದರು.  ಏರ್ರ್ಫೋರ್ಸಿನ ಆಯ್ಕೆಯ ಪ್ರಕ್ರಿಯೆ ಸತತವಾಗಿ ನಾಲ್ಕು ದಿನಗಳವರೆಗೂ ನಡೆಯಿತು. ಈ ಅನಿರೀಕ್ಷಿತ ನಾಲ್ಕು ದಿನಗಳ ಬೆಂಗಳೂರಿನ ಖರ್ಚು ವೆಚ್ಚಗಳನ್ನು ಭರಿಸಲು ಶೆಟ್ಟರ ಪರಿಚಯದ ಮಂಡಿ ಸಾಹುಕಾರರಿಂದ ಸಹಾಯ ಪಡೆಯಬೇಕಾಯಿತು.
   ಮೊದಲ ದಿನ   ಸುಮಾರು 200 ಅಭ್ಯರ್ಥಿಗಳಿಂದ  ಕಿಕ್ಕಿರಿದು ತುಂಬಿದ್ದ ,ಕಬ್ಬನ್ ರೋಡಿನ ವಾಯು ಸೈನಿಕ ಆಯ್ಕೆ ಕೇಂದ್ರದಲ್ಲಿ ಎಲ್ಲಾ ಕಲಾಪಗಳು ಶಿಸ್ತಿನಿಂದ ಚಕಚಕನೆ ನಡೆಯುತ್ತಿದ್ದವು. ಎಲ್ಲಾ ಸಂಭಾಷಣೆಗಳು ಇಂಗ್ಲೀಷಿನಲ್ಲಿ,ಕಕ್ಕಾಬಿಕ್ಕಿಯಾಗಿ ಹೋದೆ! ಆದರೂ ನನ್ನ ಕನಸನ್ನು ನನಸಾಗಿಸಿ ಕೊಳ್ಳುವ ಅವಕಾಶವನ್ನು ಕೈಬಿಡಬಾರದೆಂದು ಅವಡುಗಚ್ಚಿಕೊಂಡು ಎಲ್ಲಾ ಪರೀಕ್ಷೆಗಳಲ್ಲಿ ಭಾಗವಹಿಸಿದೆ. ಪ್ರತಿದಿನ ವಿವಿದ ರೀತಿಯ  ಸರಣಿ ಪರೀಕ್ಷೆಗಳು ಮತ್ತು ಆಗಿಂದಾಗಲೇ ಫಲಿತಾಂಶ ಪ್ರಕಟಿಸುತ್ತಿದ್ದರು. ಪಾಸಾದವರು ಮುಂದಿನ ಪರೀಕ್ಷೆಗೆ ತಯಾರಾಗಬೇಕು, ಫೇಲಾದವರು ನಿರ್ಗಮಿಸುತ್ತಿದ್ದರು. ನಾಲ್ಕನೇ ದಿನ ಅಂತಿಮ ಸಂದರ್ಶನ ಅಷ್ಟೊತ್ತಿಗೆ ಉಳಿದು ಕೊಂಡಿದ್ದವರು ನಾನು ಮತ್ತು ಬೆಳಗಾವಿ ಜಿಲ್ಲೆಯಿಂದ ಬಂದಿದ್ದ ಇನ್ನೊಬ್ಬ ಅಭ್ಯರ್ಥಿ. ಆಯ್ಕೆಕೇಂದ್ರದ ಅಧ್ಯಕ್ಷರ ಸಂದರ್ಶನದಲ್ಲಿ ಇಬ್ಬರೂ ಪಾಸಾದೆವು.  ನಾನು ಆಯ್ಕೆಯಾಗಿದ್ದೀನಿ ಎನ್ನುವ ವಿಷಯ ಅದೇಕೋ ಇನ್ನೂ ನಂಬಲಾರೆ ಆದರೆ ತಂದೆಯವರಾಗಲೇ ಬಿಮ್ಮನೆ ಬೀಗುತ್ತಿದ್ದರು. ಅವತ್ತು ನನ್ನ ಹದಿನೇಳನೆ ಹುಟ್ಟು ಹಬ್ಬ ಎನ್ನುವುದು ಮತ್ತೊಂದು ವಿಶೇಷ.  ಸಾಯಂಕಾಲ ಮೆಜೆಸ್ಟಿಕ್ಕಿನ ಹೋಟಲೊಂದರಲ್ಲಿ ವಿಶೇಷ ಭೋಜನ ಮತ್ತು ಸಂತೋಷ್ ಟಾಕೀಸಿನಲ್ಲಿ 'ಬಯಲು ದಾರಿ' ಸಿನಿಮ ನೋಡಿ ನನ್ನ ಹಟ್ಟು ಹಬ್ಬ ಮತ್ತು ಏರ್ಫೋರ್ಸಗೆ ಆಯ್ಕೆಯ ಸಂಭ್ರಮ ವನ್ನು ಆಚರಿಸಿಕೊಂಡು ನಮ್ಮ ಹಳ್ಳಿಗೆ ಮರಳಿದೆವು.

    'ಲಕ್ಷ ರೂಪಾಯಿಯ ಲಾಟರಿ ಹೊಡೆದು ಬಿಟ್ಟೆಯಲ್ಲೋ'ಸೀತಾರಾಮ ಶೆಟ್ಟರ ಉದ್ಗಾರ, ನನ್ನ  ಏರ್ಫೋರ್ಸಿನ ಆಯ್ಕೆಯ ವಿಷಯ ತಿಳಿದು. ಅಂದಿನಿಂದಲೆ ನನ್ನ ಯಶಸ್ಸಿನ ಅಧಿಕೃತ ವಕ್ತಾರರಾಗಿಬಿಟ್ಟರು. ಅವರೇ  ಆಯ್ಕೆಯಾಗಿದ್ದಾರೆನೋ ಎನ್ನುವಷ್ಟು ಖುಶಿ ಪಟ್ಟರು. ಕೆಲವೇ  ದಿನಗಳಲ್ಲೇ ಏರ್ಫೋರ್ಸಿನ ತರಬೇತಿಯ ಕರೆ ಬಂತು,ಜೀವನದ ಹೊಸ ಪರ್ವ ಶುರುವಾಯಿತು.

ಮೊದಲೆಲ್ಲಾ ನಮ್ಮ ಹಳ್ಳಿಗಳಲ್ಲಿ ,ಕೆಲವರ ಮೈಮೇಲೆ ದೇವರು ಬರುತ್ತದೆ ಇನ್ನು ಕೆಲವರ ಮೈಮೇಲೆ ದೆವ್ವ ಬರುತ್ತೆ ಎನ್ನುವುದು ಪ್ರಚಲಿತ ವಿಷಯ. ನಮ್ಮ ತಂದೆಯವರು ,ಸೀತಾರಾಮ ಶೆಟ್ರು ಅವರ ಪ್ರಾಯದ ದಿನಗಳಲ್ಲಿ ಹಳ್ಳಿಯಲ್ಲಿ ಬೆಳೆದು ಬಂದಿದ್ದ ಕೆಲವು ಮೂಢನಂಬಿಕೆಗೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದರ ಬಗ್ಗೆ ಆಗಾಗ ಹೇಳುತ್ತಿದ್ದರು.
ಇಂತಹ ಒಂದು ಸ್ವಾರಸ್ಯಕರ ಘಟನೆ ಶೆಟ್ಟರದೇ ಆದ ವಿಶಿಷ್ಟ ಶೈಲಿಯಲ್ಲಿ ಕೇಳುವುದೇ ಮಜ!
  ಒಂದು ದಿನ ಯಾರೊ ಹೆಣ್ಣುಮಗಳೊಬ್ಬಳ ಮೇಲೆ ದೆವ್ವಬಂದಿದೆ ಎಂದು ಅವಳನ್ನು ಮಾರಮ್ಮನ ದೇವಸ್ತಾನಕ್ಕೆ ಕರೆದುಕೊಂಡು ಬಂದರು. ಅಲ್ಲೇಇದ್ದ ಶೆಟ್ಟರಿಗೆ ಈ'ದೆವ್ವದ'ಬಗ್ಗೆ ಸ್ವಲ್ಪ ಅನುಮಾನ ಬಂದು ಆಸುಪಾಸಿನಲ್ಲಿ ವಿಚಾರಿಸಿದ್ದಾಗ ಗೊತ್ತಾಗಿದ್ದೇನೆಂದರೆ ನೆರಮನೆಯವರನ್ನು ಹೆದರಿಸಲು ಮಾಡಿರುವ ನಾಟಕವಿರಬಹುದು  ಎನ್ನುವ ಅನುಮಾನ ಮೂಡಿದೆ. ಸರಿ ,ಶೆಟ್ಟರು ತಮ್ಮದೇ ಶೈಲಿಯಲ್ಲಿ ಕಾರ್ಯಗತರಾದರು. ದುರ್ಗಪ್ಪನ ಮೇಲೆ ಮಾರಮ್ಮ ಬರುತ್ತಾಳೆ ಎನ್ನುವುದೂ ಸಹ ಆಗ ಚಾಲ್ತಿಯಲ್ಲಿದ್ದ ಸುದ್ದಿ. ಆ ದುರ್ಗಪ್ಪನನ್ನೇ ಹಿಡಿದು ಅವನ ಕೈಗೆ ದಪ್ಪನೆ ಬೇವಿನಮರದ ರೆಂಬೆಯೊಂದನ್ನು ಕೊಟ್ಟು, "ಅಕ್ಕಲೆ ದುರ್ಗ ಅಮ್ಮ ಏಳಿತಿ" ಎಂದು ಅವನಿಗೆ ಆದೇಶಿಸಿದರು. ಆ ದುರ್ಗಪ್ಪನೂ ಅದಕ್ಕೆ ತಕ್ಕಂತೆ ಮೈಯನ್ನೆಲ್ಲಾ ಕುಣಿಸುತ್ತಾ ' ಯಾರೇ ನೀನು,ಇಲ್ಲಗ್ಯಾಕೇ ಬಂದೆ' ಎಂದು ರಪ ರಪನೆ ಬೇವಿನ ರೆಂಬೆಯಿಂದ ಬಾರಿಸಲು ಶುರು ಮಾಡಿದ. ಆ ಹೊಡೆತಕ್ಕೆ 'ದೆವ್ವ' ಬಿದ್ದೆನೊ, ಸತ್ತೆನೊ ಎಂದು ಓಡಿಹೋಯಿತಂತೆ.
  ಅಂದಿನಿಂದ "ಅಕ್ಕಲೆ ದುರ್ಗ ಅಮ್ಮ ಏಳಿತಿ"ಎನ್ನುವುದು ಶೆಟ್ಟರ ಕಾಪಿರೈಟ್ ಪ್ರೊಟೆಕ್ಟೆಡ್ ಸ್ಲೋಗನ್!

  ಏರ್ಫೋರ್ಸಗೆ ಸೇರಿದ ನಂತರ ಶೆಟ್ಟರ ಭೇಟಿ ವರ್ಷಕ್ಕೊಮ್ಮೆ ಸೀಮಿತವಾಯಿತು.  ಆದರೂ ಜೀವನದ ಹಾಗುಹೋಗುಗಳು,ಏರಿಳಿತಗಳನ್ನೆಲ್ಲ ಶೆಟ್ಟರ ಜೊತೆ ಹಂಚಿಕೊಳ್ಳತ್ತಿದ್ದೆ. ವಾಯುಸೈನಿಕನಾಗಿ ಸೇರಿದ ನಾಲ್ಕು ವರ್ಷಗಳಲ್ಲೇ ಶೆಟ್ಟರು ಹೇಳುವ ಹಾಗೆ,ಇನ್ನೊಮ್ಮೆ ದೊಡ್ಡ ಲಾಟರಿ ಹೊಡೆಯಿತು. ಸ್ವಲ್ಪ ತಲೆ ಕೆಡಿಸಿಕೊಂಡು ಪ್ರಯತ್ನಿಸಿದ್ದಕ್ಕೆ ಪೈಲಟ್ ತರಬೇತಿಗೆ ಆಯ್ಕೆಯಾದೆ. ತರಬೇತಿಯನ್ನು ಮುಗಿಸಿ  ಅಂದಿನ ಕೇಂದ್ರ ರಕ್ಷಣಾ ಮುಂತ್ರಿಯವರ ಕೈಯೀಂದಲೇ 'ಪೈಲಟ್ ಆಫೀಸರ್' ಹುದ್ದೆಯೂ ಪ್ರಧಾನವಾಯಿತು.   ಪಿಯುಸಿ ಮಾಡಿಕೊಂಡುವನಿಗೆ ಮೊದಲ ‌‌ವರ್ಗದ ಗೆಜಟಡ್ ಅಧಿಕಾರಿಯ ಸ್ಥಾನ! ಎಲ್ಲಾ ದೇವರ ದಯೆ.
  ಕಾಲಕ್ರಮೇಣ ಶೆಟ್ರು ಗಂಗೂರನ್ನು ಬಿಟ್ಟು ಮಕ್ಕಳ ಜೊತೆಗೆ ಬೆಂಗಳೂರುನಲ್ಲಿ ಸೆಟ್ಲಾದರು.
  ಇತ್ತೀಚಿಗೆ ನಮ್ಮ ತಂದೆಯವರ ಸಹಸ್ರ ಪೂರ್ಣಚಂದ್ರಶಾಂತಿ, ಅವರೇ ಕಟ್ಟಿಸಿದ ಚೆನ್ನಕೇಶವ ದೇವಾಲಯದಲ್ಲಿ ನೆರವೇರಿತು. ಪೂಜೆಯ, ತುಲಾಭಾರದ ಸಿದ್ದತೆ ಜೋರಾಗಿ ನಡೆಯುತ್ತಿತ್ತು.  ಶೆಟ್ಟರಿಗೂ ಇದೇ ಸಂದರ್ಭದಲ್ಲಿ ತುಲಾಭಾರವನ್ನು ಮಾಡಿಸುವ ಆಲೋಚನೆಯು ಬಂತು.
  ಕರೆ ಮಾಡಿದಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿಯಿತು. " ನಾನು ಬಂದರೆ ನಂದೂ ತುಲಾಭಾರ ಮಾಡುಸ್ತಿಯೇನೋ" ಎಂದರು,ಸರಿ ಬನ್ನಿ ಮಾಡಿಸೋಣ ಎಂದೆ.  ಯಾಕೋ ಶೆಟ್ಟರು ಖಿನ್ನರಾಗಿದ್ದಾರೆ ಎನಿಸಿತು. ಎರಡು ದಿನಬಿಟ್ಟು ಮತ್ತೆ ಕರೆ ಮಾಡಿದೆ, ಇನ್ನೂ ಆಸ್ಪತ್ರೆಯಲ್ಲಿ ಇದ್ದರು.  ಡಾಕ್ಟರು  ಪ್ರಯಾಣ ಮಾಡಬಾರದು ಎಂದು ಹೇಳಿದರಂತೆ. ಹೋಗಲಿ ಬಿಡು ನನ್ನ ತುಲಾಭಾರದ ಖರ್ಚು ಉಳಿಯಿತು ಎಂದರು. ಆದರೆ ನನ್ನ ಪ್ಲಾನಿನ  ಪ್ರಕಾರ ನೀವು ಬಂದರೆ ಇನ್ನೂ ಖರ್ಚು ಉಳಿಯುತ್ತದೆ ಎಂದೆ,'ಅದು ಹೇಗೋ?' ಎಂದರು,ಸರಿ ನನ್ನ ಪ್ಲ್ಯಾನನ್ನು ವಿವರಿಸಿದೆ...ಒಂದು ತಕ್ಕಡಿಯಲ್ಲಿ ನಮ್ಮ ತಂದೆಯವರು(ಬರೋಬ್ಬರಿ 90ಕಿಲೊ) ಒಂದು ತಕ್ಕಡಿಯಲ್ಲಿ ಶೆಟ್ಟರು (45 ಕಿಲೊ) ಉಳಿದ 45 ಕಿಲೊಗಳ ಬಾಳೆಹಣ್ಣು ! ಹೇಗಿದೆ ತುಲಾಭಾರ ಎಂದೆ,ಅಂತೂ ಬಾಳೆಹಣ್ಣಿನ ಜೊತೆ ನನ್ನನ್ನೂ ದಾನ ಮಾಡುವ ಪ್ಲಾನು ಇದೆ, ಅಂಗಾರೆ ಖಂಡಿತಾ ಬರಲ್ಲ ಎಂದರು. ಇಷ್ಟು ಮಾತಾಡುವ ಹೊತ್ತಿಗೆ ಅವರ ಮೂಡು ತಿಳಿಯಾಗಿದೆ ಎನಿಸಿತು,ಅದೇ ನನ್ನ ಉದ್ದೇಶವೂ ಆಗಿತ್ತು.
     ಮುಂದೊಮ್ಮೆ ಬೆಂಗಳೂರಿನ ಮನೆಯಲ್ಲಿ ನಡೆದ ಸಮಾರಂಭಕ್ಕೆ ನಮ್ಮ ಮನೆಗೆ ಬಂದರು. ನನಗಂತೂ ಶೆಟ್ರು ನಮ್ಮ ಮನೆಗೆ ಬಂದರು ಅಂತ ಸಂಭ್ರಮವೋ   ಸಂಭ್ರಮ. ಈಗಲೂ ಪ್ರತಿವರ್ಷ ಯುಗಾದಿಯ ಸಂಜೆ ಶೆಟ್ಟರನ್ನು ,ಅವರೆಲ್ಲಿದ್ದರೂ ಸರಿ ಅವರನ್ನು ಮಾತಾಡಿಸಿ ಅವರ ಆಶೀರ್ವಾದವನ್ನು ಪಡೆಯುವುದೇ ನನ್ನ ಪುಣ್ಯ ಎಂದು ಭಾವಿಸುತ್ತೇನೆ.

No comments:

Post a Comment