Friday, October 14, 2016

ಷಾಹೀನ್ ಬಸ್ಸಿನ ಸುತ್ತಮುತ್ತ


ಬಾಲ್ಯದ ದಿನಗಳ ನೆನಪು.. ದಟ್ಟ ಮಲೆನಾಡಿನ ಮತ್ತು ಬಯಲುಸೀಮೆಯ ನಡುವೆ ಹಂಚಿಕೊಂಡ ದಿನಗಳವು.
ಷಾಹೀನ್ ಎನ್ನುವ ಹಸಿರು ಬಣ್ಣದ ಬಸ್ಸು ದಾವಣಗೆರೆ ಯಿಂದ ಚಿಕ್ಕಮಗಳೂರಿನ ನಡುವೆ ಓಡುತ್ತಿದ್ದ 'ಎಕ್ಸ್ಪ್ರೆಸ್'ಗಾಡಿ. ಈಗಿನ ಬೆಂಗಳೂರು ಟು ನ್ಯೂಯಾರ್ಕ ಫ್ಲೈಟ್ ಗೆ ಇರುವ ಗತ್ತು ಆಗ ಆ ಬಸ್ಸಿಗೆ ಇರುತ್ತಿತ್ತು. ಬೆಳಗ್ಗೆ  ಆರು ಘಂಟೆಗೆ ದಾವಣಗೆರೆ ಯಿಂದ ಹೊರಟರೆ ಮಧ್ಯಾಹ್ನದ ಮೂರು ಘಂಟೆಗೆ ಚಿಕ್ಕಮಗಳೂರು ತಲುಪುತ್ತಿತ್ತು. ಜೋರಾಗಿ ಹಾರ್ನ ಹೊಡೆದು ಕೊಂಡು ಧೂಳೆಬ್ಬಿಸಿಕೊಂಡು ಬಂತೆಂದರೆ ಇತರೆ ಗ್ರಾಮಾಂತರದ ಬಸ್ಸುಗಳು ಮತ್ತು ಸಣ್ಣಪುಟ್ಟ ವಾಹನಗಳು ಸೈಡಾಗಲೇಬೇಕು. ಈ ಬಸ್ಸಿನಲ್ಲಿ ಕೆಲವು  ವರ್ಷಗಳ ತನಕ ದಾವಣಗೆರೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದೆವು.  ನಂತರ ನಮ್ಮ ತಂದೆಯವರಿಗೆ ಚಿಕ್ಕಮಗಳೂರಿನಿಂದ  ಬುಕ್ಕಾಂಬುಧಿ ಎನ್ನುವ ಸ್ಥಳಕ್ಕೆ ವರ್ಗಾವಣೆ ಯಾಯಿತು. ಆಗ ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಅವಧಿ ಕಡಿಮೆಯಾಯಿತಾದರೂ, ಅದರ ಜೊತೆಗಿನ ನಂಟು ನನ್ನ  ಎಸ್ಸೆಸ್ಎಲ್ಸಿ ಮುಗಿಯುವವರೆಗು ಪ್ರತಿ ವಾರಕ್ಕೊಮ್ಮೆ ಒಂದರಂತೆ ಮುಂದುವರೆಯಿತು.
  ಬುಕ್ಕಾಂಭುಧಿಯಲ್ಲಿ ನಮ್ಮ ತಂದೆಯ ಜೊತೆ ನಾನು, ಮತ್ತು ಅಲ್ಲಿಂದ ಸುಮಾರು ಐವತ್ತು ಕಿಮೀ ದೂರದ ಹುಟ್ಟೂರಾದ ಗಂಗೂರಿನಲ್ಲಿ ನಮ್ಮ ತಾಯಿ ಇತರೆ ಮೂವರು ಮಕ್ಕಳೊಂದಿಗೆ ಇರುವ ವ್ಯವಸ್ಥೆ. ಪಿತ್ರಾರ್ಜಿತ ಜಮೀನು ಕಂಡವರ ಪಾಲಾಗಬಾರದೆಂದು ನಮ್ಮ ತಂದೆ ತಾಯಿ ಮತ್ತು ಮಕ್ಕಳ ಮಧ್ಯದ ಈ ರೀತಿಯ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲೇ ಬೇಕಾದ ಪರಿಸ್ತಿತಿ ಉಂಟಾಗಿತ್ತು. ಈ ಎರಡು ಊರುಗಳ ನಡುವೆ ಹೊಕ್ಕಳು ಬಳ್ಳಿಯಂತೆ ಸಾರಿಗೆ ಭಾಂಧವ್ಯಕಲ್ಪಿಸಿದ್ದು ಷಾಹೀನ್ ಬಸ್ಸು.
  ಪ್ರತಿ  ಸೋಮವಾರ ಗಂಗೂರಿನ ಮನೆಯಲ್ಲಿ ದಡಬಡಿಸಿಕೊಂಡು ಎದ್ದು ನಿದ್ದೆಗಣ್ಣಿನಲ್ಲೇ ಬಸ್ಸ್ಟಾಂಡ್ ತಲುಪಿ ಷಾಹೀನ್ ಬಸ್ಸು ಹಿಡಿದು ಬಿಟ್ಟು ಬುಕ್ಕಾಂಬುಧಿ ತಲುಪಿದರೆ ಪುನಃ ಶನಿವಾರದ ಬೆಳಗಿನ ಕ್ಲಾಸ್ ಮುಗಿಸಿಕೊಂಡು ಗಂಗೂರಿನ ಕಡೆಗೆ ಸವಾರಿ. ನನಗೆ ಮಾತ್ರ ಷಾಹೀನ್ ಬರೀ ಒಂದು ಬಸ್ಸಾಗಿರಲಿಲ್ಲ,ಅದರ ಜೊತೆಗೆ ಒಂದು ಗಾಢವಾದ ಬಾಂಧವ್ಯ ಏರ್ಪಟ್ಟಿತ್ತು. . ಒಂದು ಕಡೆ ತಂದೆಯವರ ಉದ್ಯೋಗ ಪರ್ವ ಇನ್ನೊಂದು ಕಡೆ ತಾಯಿಯ ಕರ್ಮಭೂಮಿ. ಇವೆರಡರ ನಡುವೆ ನಾನು ಮತ್ತು ನನ್ನ ಷಾಹೀನ್ ಬಸ್ಸು.  ಈ ಬಸ್ಸೇ ನನ್ನದೇನೊ ಎನ್ನುವ ಭಾವನಾತ್ಮಕ ಸಂಬಂಧ ಬೆಳೆದುಕೊಂಡುಬಿಟ್ಟತ್ತು ಅದರೊಟ್ಟಿಗೆ ಕಳೆದ ನಾಲ್ಕು ವರ್ಷಗಳಲ್ಲಿ.
  ಬುಕ್ಕಾಂಬುಧಿಯಲ್ಲಿ ಏಳನೇ ತರಗತಿಯಿಂದ ಎಸ್ ಎಸ್ ಎಲ್ಸಿ ಮುಗಿಯುವವರೆಗಿನ ಆ ನಾಲ್ಕು ವರ್ಷಗಳು ನನ್ನ ಬದುಕಿಗೇ ಮಹತ್ತರ ತಿರುವುಕೊಟ್ಟ ಹಂತ.
  ಮೊಟ್ಟಮೊದಲ ಪಾಠ, ಅಡುಗೆಮಾಡುವ ಅನಿವಾರ್ಯತೆ. ಮೊದಲಿಂದಲೂ ಇದರಲ್ಲಿ ಸ್ವಲ್ಪ ಅಭಿರುಚಿ ಇದ್ದುದರಿಂದ ಅದೇನು ಕಷ್ಟವೆನಿಸಲಿಲ್ಲ.
  ತಂದೆಯವರಿಗೂ ಮಲೆನಾಡಿನ ಶೈಲಿಯ ರುಚಿಕರವಾದ ಅಡುಗೆ ಮಾಡುವ ಅನುಭವವಿದ್ದುದರಿಂದ ಕಲಿಯಲು ಸಲೀಸಾಯಿತು. ಮಲೆನಾಡಿನ  ಶೈಲಿಯ ಹುಳಿ ಎಂದರೆ ತೆಂಗಿನಕಾಯಿ ಮತ್ತು ಸಾಂಬಾರ್ ಮಸಾಲೆ ರುಬ್ಬಿಕೊಂಡು ಬೇಯಿಸಿದ ಬೇಳೆ ತರಕಾರಿಗೆ ಬೆರೆಸಿ ಮಾಡಬೇಕು ಮತ್ತು ಅದಕ್ಕೆ ತುಪ್ಪದ ಒಗ್ಗರಣೆ, ಅದೇನು ರುಚಿ!,ಸ್ವಲ್ಪ ಸಮಯದಲ್ಲೇ ಎಕ್ಸ್ಪರ್ಟು. ಸೋಮವಾರ ಅಲ್ಲಿ ಸಂತೆ. ವಾರಕ್ಕಾಗುವಷ್ಟು ಸೊಪ್ಪು ತರಕಾರಿಗಳನ್ನು ಖರೀದಿಸಿ,ಒದ್ದೆ ಬಟ್ಟೆಯಲ್ಲಿ ಸುತ್ತಿ ಜತನ ಮಾಡಿಟ್ಟುಕೊಳ್ಳುತ್ತಿದ್ದೆ.
  ಬುಕ್ಕಾಂಬುಧಿಗೆ ಆ ಹೆಸರು ಬಂದಿದ್ದು ಅಲ್ಲಿನ ಅಂಬುಧಿಯೋಪಾದಿಯ, ಬುಕ್ಕರಾಯ ಕಟ್ಟಿಸಿದ ಕೆರೆಯಿಂದಾಗಿ.ಆ ವಿಶಾಲವಾದ ಕೆರೆಯ ನೀರು ಸುತ್ತಲಿನ ಹಳ್ಳಿಗಳನ್ನು,,ಗದ್ದೆ,ತೋಟಗಳನ್ನು ನಿರಂತರವಾಗಿ ತಣಿಸುತ್ತದೆ. ಅಡಿಕೆ ತೆಂಗು, ಬಾಳೆ, ಕಬ್ಬು ಸಮ್ರುದ್ದವಾಗಿ ಬೆಳೆದು ಎಲ್ಲಿನೋಡಿದರಲ್ಲಿ ಹರಿದ್ರ ಸೌಂದರ್ಯದ ಮೆರವಣಿಗೆ. ಕೆರೆಯ ಮತ್ತು ಊರಿನ ನಡುವೆ ಒಂದು ಬೆಟ್ಟ. ನಮ್ಮ ಹೈಸ್ಕೂಲು ಆ ಬೆಟ್ಟದ ತಪ್ಪಲಿನಲ್ಲೇ ಇದ್ದುದರಿಂದ ನನ್ನಂತಹ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತ ವಾತಾವರಣ. ಬೆಟ್ಟದ ಮೇಲೆ ಒಂದು ಪುಟ್ಟ ದೇವಸ್ಥಾನ, ಅಲ್ಲಿ ಒಬ್ಬರು ಸನ್ಯಾಸಿ ಕೂಡ ವಾಸಿಸುತ್ತಿದ್ದರು.ಆ ಊರಿನ ಜನರಿಗೆ ಸನ್ಯಾಸಿಯವರ ಬಗ್ಗೆ ತುಂಬಾ ಗೌರವ. ಮುಂದೆ ಭೈರಪ್ಪನವರ ಕಾದಂಬರಿ ಯಲ್ಲಿ ಇದೇ ತರಹದ ಬೆಟ್ಟದ ಮೇಲೆ ಒಬ್ಬ ಸನ್ಯಾಸಿಯ ಬಗ್ಗೆ ಓದುತ್ತಿದ್ದಾಗ ಇವರನ್ನು ನೆನಪಿಸಿಕೊಳ್ಳುತ್ತಿದ್ದೆ.  ಪ್ರಕ್ರುತಿಯ ಸಂತುಷ್ಟತೆ ಇದ್ದಾಗ ಜನರೂ ಸುಸಂಸ್ಕಕೃತರಾಗಿರುತ್ತಾರೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ. ಧಾರ್ಮಿಕತೆ ಮಲೆನಾಡಿನ ಜನಗಳಲ್ಲಿ ಸಹಜವಾಗಿ ಮೈಗೂಡಿರುತ್ತದೆ. ಊರಿನ ಮಧ್ಯದಲ್ಲಿ ವಿರೂಪಾಕ್ಷ ದೇವರ ದೇವಸ್ತಾನ,ಆದರ ಸುತ್ತಲಿನ ವಿಶಾಲವಾದ ಆವರಣದಲ್ಲಿ ಒಂದಲ್ಲ ಒಂದು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವರುಷವಿಡೀ ನಡೆಯುತರುತ್ತಿತ್ತು. ಗಣೇಶ ಚತುರ್ಥಿ ಅಲ್ಲಿನ ವಿಶೇಷವಾದ ಹಬ್ಬ. ಹನ್ನೊಂದು ದಿನಗಳು ಊರಿಗೆ ಊರೇ ಸಂಭ್ರಮದ ಬೀಡಾಗಿರುತ್ತಿತ್ತು. ನಾಟಕ, ಹಾಡುಗಾರಿಕೆಗಳ ಸ್ಪರ್ಧೆ, ಯಕ್ಷಗಾನ, ಗೊಂಬೆಯಾಟ ಇನ್ನುಇತರೆ ಪ್ರತಿಭಾ ಪ್ರದರ್ಶನಕ್ಕೆಒಂದು ಒಳ್ಳೆಯ ವೇದಿಕೆ.
   ನಮ್ಮ ಶಾಲೆಯ ಕನ್ನಡ ಪಂಡಿತರು ಕಾಸರಗೋಡಿನ ಕಡೆಯವರು. ಅಧ್ಭತ  ಪ್ರತಿಭಾವಂತ ವ್ಯಕ್ತಿ. ಅವರೇ ರಚಿಸಿದ ಮತ್ತು‌ ನಿರ್ದೇಶಿಸಿದ ಗೀತಾನಾಟಕಗಳಂತೂ ಮರೆಯಲಾರದ ಅನುಭವ. ಇವರ ಪ್ರೋತ್ಸಾಹದಿಂದ ನಾನು ಒಂದು ಮಟ್ಟದ ಗಾಯಕನಾದೆ,ನಟನಾದೆ.'ಜನತಾ ಫ್ರೌಢಶಾಲೆಯ' proud ವಿಧ್ಯಾರ್ಥಿಯಾದೆ. ನಮ್ಮ ಹೈಸ್ಕೂಲಿನ ಕುಮುದ ಎನ್ನುವ ಪತ್ರಿಕೆಯ ಉಪ ಸಂಪಾದಕನೂ ಆದೆ. ಇನ್ನೂ ತುಂಬಾ ಸಾಧನೆ ಮಾಡುವ ಹುಮ್ಮಸ್ಸು ಬೆಳೆಯತೊಡಗಿತು. ಹಗಲುಗನಸುಗಳು ಗರಿಕೆದರಿಕೂಂಡವು. ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಸಮಯ ಈ ಸಾಧನೆಗಳ ತುಡಿತಕ್ಕೆ  ರೆಕ್ಕೆಗಳು ಕಟ್ಟಿಕೊಂಡು ಇನ್ನೂ  ತೀವ್ರವಾಗುತ್ತಿತ್ತು. ವಾರಾಂತ್ಯ ಗಂಗೂರಿನ ಹೊಲದಲ್ಲಿ ಮತ್ತು ಹಿತ್ತಲಿನಲ್ಲಿ  ಕೆಲಸ ಮಾಡುವ ಅನಿವಾರ್ಯತೆ ಇದ್ದುದರಿಂದ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಲು ಕಷ್ಟವಾಗುತ್ತಿತ್ತು. ಇದನ್ನು  ಗಮನಿಸಿದ ಹೆಡ್ಮಾಷ್ಟರು 'ಏನೂ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಗುತ್ತಾ ಇದೆ' ಎನ್ನುವ ಎಚ್ಚರಿಕೆಯನ್ನೂ ಕೊಟ್ಟರು.
  ಆದರೆ ಎಸ್ಸೆಸ್ಎಲ್ಸಿ ಪರೀಕ್ಷೆಗೆ ಗುಟ್ಟಾಗಿ ತಯಾರಿ ನಡೆಸಿರುವ ಹುನ್ನಾರ ಇತರರಿಗೆ ಗೊತ್ತೇ ಆಗಲಿಲ್ಲ . ರಾತ್ರಿ ಎಲ್ಲರೂ ಮಲಗಿದ ಮೇಲೆ ಅಟ್ಟದ ಮೇಲೆ ಹೋಗಿ ಓದಲು ಶುರುಮಾಡಿಕೊಳ್ಳುತ್ತಿದ್ದೆ. ಲೈಟು ಬಲ್ಬಿಗೆ ಕಪ್ಪು ಪೇಪರ್ನಿಂದ ಸುತ್ತಿಬಿಟ್ಟು ಸ್ವಲ್ಪ ಬೆಳಕು ಬೀಳುವ ಜಾಗದಲ್ಲಿ ಕುಳಿತು ಓದುತ್ತಿದ್ದೆ. ತೂಕಡಿಕೆ ಬಂದಾಗ ತಣ್ಣೀರು ಚುಮಿಕಿಸಿಕೊಂಡು ಪುನಃ ಶುರುಮಾಡಿಕೊಳ್ಳುತ್ತಿದ್ದೆ. ಹೀಗೊಂದು  ದಿನ ಜೋರಾಗಿ ನಿದ್ದೆ ಬಂದು ಅಟ್ಟದ ಮೆಟ್ಟಲಿನ ಮೇಲಿಂದ ಜಾರಿ ಸೀದಾ ಕೆಳಗೆ ಬಂದು ಬೆನ್ನಿಗೆ ಪೆಟ್ಟು ಮಾಡಿ ಕೊಂಡಮೇಲೆ ಈ ಗುಪ್ತ ಮಾರ್ಗವನ್ನು ಬಿಡಬೇಕಾಯಿತು.
  ಷಾಹೀನ್ ಬಸ್ಸಿನಲ್ಲಿ ಪ್ರಯಾಣದ ಸಮಯದಲ್ಲಿ ಪುಸ್ತಕ ಗಳು ಜೊತೆಗೆ ಇರುತ್ತಿತ್ತು, ಆಗಾಗ ಓದಿ ಮನದಟ್ಟು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು.
  ಅಂತೂ ನೋಡು ನೋಡುತ್ತಿದ್ದ ಹಾಗೆ ಪರೀಕ್ಷೆಯ ಸಮಯ ಬಂದೇಬಿಟ್ಟಿತು. ಅಜ್ಜಂಪುರದ ಪರೀಕ್ಷಾ ಕೇಂದ್ರ ಸ್ವಲ್ಪ ದೂರವಿದ್ದುದರಿಂದ ಅಲ್ಲಿಯ ಆಶ್ರಮದಲ್ಲೇ ವಾಸದ ವ್ಯವಸ್ಥೆ ಮಾಡಿದ್ದರು. ಓದಲು ತುಂಬಾ ಪ್ರಶಾಂತ ವಾತಾವರಣದಲ್ಲಿ ಪರೀಕ್ಷೆಯ ತಯಾರಿ ಸುಲಭವಾಯಿತು. ಆಶ್ರಮದ ಸ್ವಾಮಿಗಳು ಆಗಾಗ ಮಾತಾಡಿಸಿ ಪ್ರೋತ್ಸಾಹ ನೀಡುತ್ತಿದ್ದರು. ಪರೀಕ್ಷೆಗಳಲ್ಲಿ  ಚೆನ್ನಾಗಿ ಮಾಡಿದ್ದೇನೆ ಎನ್ನುವ ಸಂತಸದಿಂದ ಗಂಗೂರಿಗೆ ಅದೇ ಷಾಹೀನ್ ಬಸ್ಸಿನಲ್ಲಿ ಮರುಳಿದೆ.
  ಬೇಸಿಗೆ ರಜಾ ದಿನಗಳಂತೂ ಕಳೆದಿದ್ದೇ ಗೊತ್ತಾಗಲಿಲ್ಲ.
  ಅಷ್ಟರಲ್ಲಿ ಹಳ್ಳಿಯ, ಹೊಲಗಳ,ವ್ಯವಸಾಯದ ಜೀವನದ ಒಂದು ಹದ ಸಿಕ್ಕಿತು. ಅದು ಎಷ್ಟರ ಮಟ್ಟಿಗೆ ಅದರಲ್ಲಿ ಬೆರೆತು ಹೋಗಿದ್ದೆನೆಂದರೆ,ಎಸ್ಸೆಸೆಲ್ಸಿಯ ಪರೀಕ್ಷಾ ಪಲಿತಾಂಶ ಬಂದಾಗ ನಾನು ಜಿಟಿಜಿಟಿ ಮಳೆಯಯಲ್ಲಿ,ಮೆಣಸಿನಸಸಿಗಳನ್ನು ಕಸಿ ಮಾಡುತ್ತಿದ್ದೆ.
  ಹೊಲಕ್ಕೇ ನಮ್ಮ ತಂದೆಯವರು ಬರೆದ ಪತ್ರ ತಲುಪಿಸಿದರು. ಮಳೆಯಲ್ಲಾಗಲೇ ಅರ್ಧ ನೆನೆದು ಹೋಗಿದ್ದ ಪತ್ರದಲ್ಲಿತ್ತು ನನ್ನ ಪಲಿತಾಂಶ,ಮೊದಲ ದರ್ಜೆ ಯಲ್ಲಿ ಪಾಸಾಗಿದ್ದೆ! ಕೆಲವೇ ಕ್ಷಣಗಳಲ್ಲಿ ನನ್ನ ಪ್ರಪಂಚವೇ ಬದಲಾಯಿತು. ಧಿಢೀರನೆ ಸಿಕ್ಕ ಪ್ರಖ್ಯಾತಿ,ಹೊಗಳಿಕೆಗೆ ಕಕ್ಕಾಬಿಕ್ಕಿಯಾದೆ.
  ಸ್ಕೂಲಿನಿಂದ  ಸನ್ಮಾನ ಸಮಾರಂಭದ ಕರೆ ಬಂತು. ಎಷ್ಟು ಪ್ರೋತ್ಸಾಹದಿಂದ ಹುರಿದುಂಬಿಸಿದರು ಬುಕ್ಕಾಂಬುದಿಯ ಜನ,ಅವಿಸ್ಮರಣೀಯ.  ದಾವಣಗೆರೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಯಾಣ. ಷಾಹೀನ್ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಗಳ ಜೊತೆ ಸಿಹಿ ಹಂಚಿಕೂಂಡು ಅವರಿಗೆ ವಿದಾಯ ಹೇಳುವಾಗ ಗಂಟಲು ತುಂಬಿ ಬಂತು.
  ಈಗಲೂ ದಾವಣಗೆರೆಯ ಕಡೆ ಹೋದಾಗ ಕಣ್ಣುಗಳು ಆ ಹಸಿರು ಬಣ್ಣದ ಬಸ್ಸನ್ನೇ ಹುಡುಕುತಿರುತ್ತವೆ.
  


  

No comments:

Post a Comment