ಕಾಶ್ಮೀರದಲ್ಲಿ ಕೃಷ್ಣಮೂರ್ತಿ
ಒಂದು ತಿಂಗಳ ವಾರ್ಷಿಕ ರಜೆ ಮುಗಿಸಿಕೊಂಡು ಅಲಹಬಾದಿನ ವಾಯುನೆಲೆಗೆ ಮರಳುವ ಸಮಯ ಬಂತು. ಹೊರಡುವ ಮುನ್ನ ವಾಡಿಕೆಯಂತೆ ಸಪ್ನ ಬುಕ್ ಅಂಗಡಿಗೆ ಭೇಟಿಕೊಟ್ಟು ನನಗೆ ಮತ್ತು ಅಲಹಬಾದಿನ ಸ್ನೇಹಿತರಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಿದ ಮೇಲೆ ರೈಲು ಹತ್ತುವ ಪ್ಲಾನು ಇತ್ತು. ಆ ಸಲದ 'ಅಲೆ' ಶಿವರಾಮ ಕಾರಂತರ ಪುಸ್ತಕಗಳದ್ದು. 'ಮೂಕಜ್ಜಿಯ ಕನಸುಗಳು' ಪುಸ್ತಕಕ್ಕೆ ಪುರಸ್ಕಾರ ಸಿಕ್ಕು ಹಲವೇ ವರ್ಷಗಳು ಕಳೆದಿದ್ದರೂ ಆ ಪುಸ್ತಕವನ್ನಿನ್ನೂ ಓದಿರಲಿಲ್ಲ. ಅದರ ಜೊತೆಗೆ ಕಾರಂತರ ಇನ್ನೂ ಅನೇಕ ಪುಸ್ತಕಗಳನ್ನು ಖರೀದಿಸಿ ಇಂಗ್ಲೀಷು ಪುಸ್ತಕಗಳ ವಿಭಾಗಕ್ಕೆ ಹೋದೆ. ನಿರ್ದಿಷ್ಟವಾಗಿ ಇಂತದೇ ಪುಸ್ತಕ ಕೊಂಡುಕಳ್ಳುವ ಇರಾದೆ ಏನೂ ಇರಲಿಲ್ಲವಾದರೂ ಹಾಗೇ ಕಣ್ಣಾಡಿಸುತ್ತಾ ಬಂದೆ. ಜಿದ್ದು ಕೃಷ್ಣಮೂರ್ತಿಯವರ ಪುಸ್ತಕಗಳ ಉದ್ದನೆಯ ಸಾಲೇ ಇತ್ತು. ಅವರ ಬಗ್ಗೆ ಎಲ್ಲೋ ಹೀಗೇ ಓದಿದ ನೆನಪು,ಆದರೆ ನಿಖರವಾಗಿ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಇವರದೂ ಒಂದು ಪುಸ್ತಕವಿರಲಿ ಎಂದು ಇದ್ದುದರಲ್ಲೇ ಅತಿ ಚಿಕ್ಕ ಪುಸ್ತಕವೊಂದನ್ನು ಎತ್ತಿಕೊಂಡೆ. "Beyond Violence" ಶೀರ್ಷಿಕೆಯ ಈ ಪುಸ್ತಕ ಸುಮಾರು ಎಂಭತ್ತು ಪುಟಗಳಿಷ್ಟಿತ್ತು.
ಚಿಕ್ಕಂದಿನಿಂದಲೂ ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರಭಾವಿತನಾಗಿ ಸ್ವಲ್ಪಮಟ್ಟಿಗೆ ಆಧ್ಯಾತ್ಮದತ್ತ ಒಲವು ಬೆಳೆದಿತ್ತು. ಆದರೆ ಬೇರೆ ಯಾವ ತತ್ವಶಾಸ್ತ್ರವಾಗಲೀ,ಧಾರ್ಮಿಕ ಪುಸ್ತಕಗಳಾಗಲೀ ಹೆಚ್ಚಾಗಿ ಓದಿರಲಿಲ್ಲ. ಕೆಲವು ಸಲ ಓದಲು ಪ್ರಯತ್ನಿಸಿದೆ,ಆದರೆ ಸಹಜವಾದ ಆಸ್ಥೆ ಬೆಳಯಯಲಿಲ್ಲ.
ಬೆಂಗಳೂರಿನಿಂದ ಅಲಹಬಾದಿಗೆ ಸುಮಾರು ಎರಡು ದಿನಗಳ ಪ್ರಯಾಣ. ಒಳ್ಳೆ ಸಹಪ್ರಯಾಣಿಕರ ಜೊತೆ ಸಿಕ್ಕರೆ ಅಥವಾ ಒಳ್ಳೆಯ ಪುಸ್ತಕಗಳಿದ್ದರೆ ಪ್ರಯಾಣ ಸಂತಸವಾಗೇ ಸಾಗುತ್ತದೆ. ಈಸಲ ಒಳ್ಳೆಯ ಪುಸ್ತಕಗಳ ಸಾಂಗತ್ಯವಿತ್ತು. ಕೆಲವೇ ಘಂಟೆಗಳಲ್ಲಿ ಕರ್ನಾಟಕದ ನೆಲದಿಂದ ದೂರಾಗಿ ಆಂಧ್ರ,ತಮಿಳುನಾಡಿನ ಹವೆಯೊಂದಿಗೆ ಚಲ್ಲಾಟವಾಡುತ್ತ ರೈಲು ಹೋಗುತ್ತಿದ್ದರೆ ನಾನು ಪುಸ್ತಕಗಳಕಡೆ ಗಮನ ಹರಿಸಿದೆ. ಶಿವರಾಮಕಾರಂತರ ಪುಸ್ತಕಗಳಲ್ಲಿ ಮೈಮರೆಯುವದಕ್ಕಿಂತ ಮುಂಚೆ ಈ ಕೃಷ್ಣಮೂರ್ತಿಯವರ ಪುಸ್ತಕವನ್ನೊಮ್ಮೆ ನೋಡೋಣ ಎಂದು ನನ್ನ ಸಂಗ್ರಹಗಳಲ್ಲೇ ಅತಿ ಚಿಕ್ಕ ' Beyond Violence' ಪುಸ್ತಕವನ್ನು ಕೈಗೆತ್ತಿಕೊಂಡೆ. ಅದು ಕೃಷ್ಣಮೂರ್ತಿಯವರು ಬರೆದ ಪುಸ್ತಕವಲ್ಲ ಎಂಬುದು ಮೊಟ್ಟಮೊದಲು ತಿಳಿದ ಅಂಶ. ಅಸಲಿಗೆ ಅವರು ಯಾವ ಪುಸ್ತಕವನ್ನೂ ಬರೆದಿಲ್ಲ. ಅಂದರೆ ಸಪ್ನ ಬುಕ್ ಹೌಸಿನಲ್ಲಿ ಸಾಲುಸಾಲಾಗಿ ಪೇರಿಸಿದ್ದ ಪುಸ್ತಕಗಳೆಲ್ಲಾ ಅವರ ಭಾಷಣಗಳ,ಸಂವಾದಗಳ ಮತ್ತು ಸಂದರ್ಶನಗಳ ಸಂಕಲನ. ಇದು ಸದ್ಯ ಕಥೆಪುಸ್ತಕವಲ್ಲ ,ಮೊದಲಿಂದ ಕೊನೆಯವರೆಗೂ ಓದುವ ಕಟ್ಟುಪಾಡಿಲ್ಲ,ಇಂತಹ ಪುಸ್ತಕಗಳನ್ನು ಎಲ್ಲಿಂದಾದರೂ ಶುರುಮಾಡಿಕೊಂಡು ಎಲ್ಲಿ ಬೇಜಾರಾಗತ್ತೋ ಅಲ್ಲಿ ನಿಲ್ಲಿಸಬಿಡಬಹುದು ಎಂದು ಸಮಾಧಾನ ಪಟ್ಟುಕೊಂಡೆ. ಅಧ್ಯಾಯಗಳ ವಿಂಗಡನೆ ನೋಡಿದರೆ ಇದೊಂದು psychology ತರಹದ ಪುಸ್ತಕ ಎನಿಸಿತು. Fear, attention, fragmentation of mind,
ಸರಿ,"ಭಯ" ಎನ್ನುವ ವಿಷಯದಿಂದಲೇ ಶುರುಮಾಡಿಕೊಂಡೆ.
ಒಂದು ಸಂಪೂರ್ಣ,ಅರ್ಥಪೂರ್ಣ ಜೀವನ ನಡೆಸಲು,ಒಂದು ಮಟ್ಟದ ತೀವ್ರತೆಯ,ಉತ್ಕಟತೆಯ ಮನೋಭಾವಿರಬೇಕು ಎಂಬುದು ಕೃಷ್ಣಮೂರ್ತಿಯವರ ಅಭಿಪ್ರಾಯ. ಭಯ ತಲೆಎತ್ತುವುದು ಇಂತಹ intensity ಇಲ್ಲದಿದ್ದಾಗ. ಭಯ ಎಂದೂ ಸ್ವಾವಲಂಬಿಯಲ್ಲ ಅಂದರೆ, ಭಯ ಸಮಯದ ಪರಾವಲಂಬಿ. ನಿನ್ನೆಯ ಕಹಿ ಘಟನೆಗೋ, ನಾಳೆ ಸಂಭವಿಸಬಹುದಾದ ಅವಘಡಕ್ಕೋ ಅಂಟಿಕಳ್ಳುವುದೇ ಭಯದ ಸ್ವಭಾವ,ಅದೊಂದು ಅಸ್ತಿತ್ವವೇ ಇಲ್ಲದ ಮನಃಸ್ಥಿತಿ,ಬರೀ ಅಂತರಂಗದ ಸೃಷ್ಟಿ..ಅಷ್ಟೆ.
ಒಂದು ಪುಟವಿನ್ನೂ ಮುಗಿದಿರಲಿಲ್ಲ,ನನ್ನೊಳಗಿನ ವಿವೇಚನೆಯನ್ನು ಬಡಿದೆಬ್ಬಿಸಿದ ಅನುಭವ. ಮತ್ತೆ ಭಯವನ್ನು ಹೋಗಲಾಡಿಸುವ ಬಗೆ ಹೇಗೆ? ನೋಡೋಣ ಮುಂದೇನು ಹೇಳುತ್ತಾರೆಂದು ಮತ್ತೆ ಪುಸ್ತಕವನ್ನು ಕೈಗೆತ್ತಿಕೊಂಡೆ.
ಭಯದ ಇನ್ನೊಂದು ಮೂಲ 'ಸುಖ,ಸಂತೋಷಗಳ ನಿರೀಕ್ಷೆ!' ಎಂದು ಹೇಳುತ್ತಾರೆ. ಅದು ಹೇಗೆ ಎಂದು ಮತ್ತೆ ನನ್ನ ಆಲೋಚನಗಳನ್ನು ಕೆಣಕಿದರು. 'ಸಂತೋಷ' ನಿಮ್ಮ ಆಲೋಚನೆಗಳ ಸೃಷ್ಟಿ,ಆದರೆ 'ಆನಂದ'ಹಾಗಲ್ಲ ಅದು ಆಗಿಂದ್ದಾಗ್ಗೆ ದೊರಕುವ ಅನುಭವ. 'ಸಂತೋಷ'ದಲ್ಲಿ ಅದನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎನ್ನುವ ಭಯ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು.
ಯಾವುದಾದರೂ ಒಂದು ವಸ್ತು ಅಥವಾ ಘಟನೆಯನ್ನು ವೀಕ್ಷಿಸುವಾಗ,ಅದನ್ನು ಅತಿ ತೀಕ್ಷಣತೆಯಿಂದ,ಯಾವ ವಿಮರ್ಷೆ ಇಲ್ಲದೆ,ಅತಿ ತೀವ್ರತೆಯಿಂದ ಗಮನಿಸಿದರೆ ,ಆ ವಸ್ತು ನನ್ನ ಅಸ್ತಿತ್ವದ ಅಂಗವೇನೋ ಎಂಬಂತಹ ಉತ್ಕಟತೆಯಿದ್ದರೆ,ನಿಮ್ಮೊಳಗೇ ಒಂದು ಶಕ್ತಿಯ ಸಂಚಲನವಾಗುತ್ತದೆ, ಇದು ಉಢಾಫೆಯ ವಿಷಯವಲ್ಲ, ಹೀಗೆಂದಾದರೂ ಅನುಭವಾಗಿದೆಯೇ...ಎಂದು ಚಾಲೆಂಜ್ ಮಾಡುತ್ತಾರೆ .ಇಂತಹ intensity ಬೆಳಸಿಕೊಂಡರೆ ಭಯವಿರುವುದಿಲ್ಲ.
ಇವರು ವರ್ಣಿಸುವ ರೀತಿಯಲ್ಲಿ ಒಂದು ಕೆಣಕುತನವಿದೆ ಎನಿಸಿತು. ಅದೆಷ್ಟು ಹೊತ್ತು ಹಾಗೇ ಯೋಚಿಸುತ್ತಿದ್ದೆನೋ,ಅರಿವಿರಲಿಲ್ಲ.
ಸುಮಾರು ಎರಡೂವರೆ ದಿನಗಳ ಪ್ರಯಾಣದಲ್ಲಿ ಓದಿದ್ದು ಕೆಲವೇ ಪುಟಗಳು ಆದರೆ ಅಂತರಂಗದ ಮಂಥನ ಅವಿರತವಾಗಿ ನಡೆಯುತ್ತಿತ್ತು.
ಅಲಹಬಾದಿನ ವಾಯುನೆಲೆಗೆ ತಲುಪಿ ಪುನಃ ಸಮವಸ್ತ್ರದ ಜೀವನಕ್ಕೆ ಮರುಳಿದೆನಾದರೂ ಕೃಷ್ಣಮೂರ್ತಿಯವರ ಗೀಳಿನಿಂದ ಹೊರಬರಲು ಸಾಧ್ಯವಾಗಲಿಲ್ಲ.
ಏರ್ಫೋರ್ಸಿನಲ್ಲಿ ಪೈಲಟ್ ರಜೆಯಿಂದ ಮರಳಿದ ಮೇಲೆ,ಅವರಿಗೆ ಒಂದು ಟ್ರೈನಿಂಗ್ ಫ್ಲೈಟ್ pilots examiner ಜೊತೆ ಮಾಡಬೇಕು. ರಜೆಯ ಅವಧಿಯಲ್ಲಿ ಕೆಲವು ಅಂಶಗಳು ಮರೆತಿದ್ದರೆ ಒಂದು refresher training.
ಮರುದಿನದ ಬೆಳಗಿನ ಈ ಫ್ಲೈಟಿಗೆ ತಯಾರಿಯನ್ನು ಹಿಂದಿನ ರಾತ್ರಿಯೇ ಮಾಡಿಕೊಂಡೆ.
ಆದರೆ ಈ ಸಲದ ತಯಾರಿಯಲ್ಲಿ ಒಂದು ವಿಭಿನ್ನತೆ ಒಂದು ನವನವೀನ ಉತ್ಸಾಹ ಇದ ಅನಿಸಿತು. ತೀವ್ರತೆ, ಉತ್ಕಟತೆ..ಇಡೀ ಏರೊಪ್ಲೇನು ನನ್ನ ಅಸ್ತಿತ್ವದ ಅಂಗ..ಇಂತ ವಿಚಾರಗಳು ಆಳವಾಗಿ ಇಳಿದಿವೆ ಎನಿಸಿತು. ಒಂದು ಘಂಟೆ ಅವಧಿಯ ಈ ಫ್ಲೈಟಿನಲ್ಲಿ autopilot ನ ಪಾತ್ರವೇನು ಇರುವುದಿಲ್ಲ . ಏರೊಪ್ಲೇನಿನ ನಿಯಂತ್ರಣ ಪೂರ್ತಿ ನಮ್ಮ ಅಂಗಾಂಗಳು ಮತ್ತು ಪಂಚೇಂದ್ರಿಯಗಳಿಂದಲೇ! ವಿಮಾನ ಹಾರಿಸುವುದು ಪ್ರಪಂಚದ ಅತ್ಯಂತ ಕೌಶಲ್ಯದ ಕೆಲಸದಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಮಾನಸಿಕ ಸ್ಥೈರದ ಜೊತೆ ದೈಹಿಕ ಧಾರ್ಢ್ಯತೆಗೂ ತುಂಬಾ ಮಹತ್ವವಿದೆ. ಸಂಯಮ ಮತ್ತು ಚುರುಕುತನ ಎರಡೂ ಸರಿಸಮನಾಗಿ ಮೇಳೈಸಿರಬೇಕು,'ಭಯ'ಕ್ಕೆ ಜಾಗವೇ ಇಲ್ಲ.
ಈಗ ಹಲವಾರು ವರ್ಷಗಳೇ ಆದವು ಆ 'ಫ್ಲೈಟ್'ಮಾಡಿ ಆದರೆ ನನ್ನ ಜೊತೆಗಿದ್ದ ಆ examiner ಸಹ ದಂಗುಬಡಿದು ಹೋದರು,ಅಂತಹ ಘಟನೆಗಳು ನಡೆದು ಹೋದವು ಆ ದಿನದ ಫ್ಲೈಟಿನಲ್ಲಿ.
ಆ ದಿನ ಸೂರ್ಯೋದಯದ ಜೊತೆಗೇ ನಾವೂ ಬಾನಿಗೆ ಹಾರಿದೆವು. ಪ್ರಶಾಂತವಾದ ಬೆಳಗು,ಇಂಜಿನ್ನಿನ ನಾದ,(ಅದು ನಮಗೆ ಶಬ್ದವಲ್ಲ!) ಮನಸ್ಸಿನಲ್ಲಿ ಒಂದು ಅನಿರ್ವಚನೀಯ ಪ್ರಶಾಂತತೆ,ಧೃಢವಾದ ಏಕಾಗ್ರತೆ. ಏರೋಪ್ಲೇನಿನ controls ಗಳು ನನ್ನ ಶರೀರದ ಅಂಗಭಾಗ ಎನಿಸುವಷ್ಟು ಉತ್ಕಟತೆ ,ಕಣ್ಣುಗಳು ತೀಕ್ಷ್ಣ ವಾಗಿ ಮುಂದಿರುವ ಎಲ್ಲಾ ಸ್ವಿಚ್ಚುಗಳನ್ನು,ಡಯಲ್ಗಳನ್ನು ಅವಲೋಕಿಸುತ್ತಿವೆ. Examiner ಹೇಳಿದ ಒಂದೊಂದೇ training exercise ಮಾಡಿತೋರಿಸುತ್ತಿದ್ದೇನೆ. ಎಲ್ಲೂ ಒಂದಿಷ್ಟು ತಪ್ಪಾಗಲಿಲ್ಲ, ಈ ಮಧ್ಯ ಒಂದು ಎಂಜಿನ್ನನ್ನು ನಿಷ್ಕ್ರಿಯಗೊಳಿಸಿದರು. ಅದಕ್ಕೂ ವಿಚಲಿತನಾಗದೆ ಉಳಿದಿರುವ ಇನ್ನೊಂದು ಇಂಜಿನ್ನಿನಲ್ಲೇ ಇನ್ನು ಕೆಲಸಮಯ ಹಾರಾಡಿಕೊಂಡು ವಾಪಾಸು ಭೂಸ್ಪರ್ಶ ಮಾಡಿದೆವು,ಅದೂ ಒಂದೆ ಇಂಜಿನ್ನಿನ ಸಹಾಯದಿಂದ.
You are better than autopilot,ಅಷ್ಟೆ ಅವರು ನನಗೆ ಹೇಳಿದ್ದು. ಆದರೆ ಇತರೆ ಪೈಲಟ್ಗಳ ಜೊತೆ ಕಾಫಿಕುಡಿಯುತ್ತ 'ಈ ಸಲದ ರಜೆಯಲ್ಲಿ ಏನೋ ಚಮತ್ಕಾರ ನಡೆದಿರಬಹುದು' ಎಂದು ಹೇಳುತ್ತಿದ್ದುದ್ದನ್ನು ಹಾಗೇ ಕೇಳಿಸಿಕೊಂಡೆ. ಆಗ ನನಗೂ ಕೃಷ್ಣಮೂರ್ತಿಯವರ ತತ್ವಗಳು ನನ್ನ ಮೇಲೆ ಆಳವಾಗಿ ಪರಿಣಾಮ ಬೀರುತ್ತಿವೆ ಎನಿಸಿತು.
ಇದಾದ ಒಂದು ವಾರದಲ್ಲೇ ನನಗೆ ಕಾಶ್ಮೀರಕ್ಕೆ ಹೋಗುವ ಅವಕಾಶ ದೊರಕಿತು. ಇಲ್ಲಿ ಸುಮಾರು ಒಂದು ತಿಂಗಳು ಅವಧಿಯ Jungle and Snow Survival ಕೋರ್ಸು ಮಾಡಲು ಶ್ರೀನಗರಕ್ಕೆ ಬಂದಿಳಿದೆ. ಇದು ಏರ್ಫೋರ್ಸಿನ ಎಲ್ಲಾ ಪೈಲಟ್ಗಳು ಕಡ್ಡಾಯವಾಗಿ ಮಾಡಲೇಬೇಕಾದ ಟ್ರೈನಿಂಗು. ಇದರ ಹಿನ್ನೆಲೆಯೆಂದರೆ ಕಾಡಿನಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಹೊರಬಂದು ಕಾಡಿನಲ್ಲಿ ಮತ್ತು ಹಿಮಾವೃತ ಪ್ರದೇಶದಲ್ಲಿ ಬದುಕಿ ಉಳಿಯುವುದರ ಒಂದು ಕಠಿಣ ತರಬೇತಿ. ಒಂದು ಪ್ಯಾರಾಚೂಟು,ಕೆಲವು ಜೀವನಾವಶ್ವದ ಸಾಮಗ್ರಿಗಳ ಒಂದು ಸಣ್ಣ ಚೀಲ ಮತ್ತು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಒಂದು ಚಿಕ್ಕ ಮಚ್ಚು ,"ಕುಕ್ರಿ"ಎನ್ನುವ ಈ ಬಹುಉಪಯೋಗಿ ಆಯುಧ ಗೂರ್ಖರು ಸದಾ ಅವರ ಸೊಂಟಕ್ಕೆ ಕಟ್ಟಿಕೊಂಡಿರುವ ಅವರ ಧಾರ್ಮಿಕ ಸಂಕೇತ. ಎಷ್ಟೋಜನ ಈ ತರಬೇತಿಯಿಂದ ನುಣಿಚಿಕೊಳ್ಳುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಾರೆ. ಊಟ,ನೀರಿಲ್ಲದೆ ಡೆಹ್ರಾಡೂನಿನ ಕಾಡಿನಲ್ಲಿ ಮತ್ತು ಕೊರೆಯುವ ಕಾಶ್ಮೀರದ ಹಿಮದಲ್ಲಿ ಕಳೆಯುವ ಆ ನಾಲಕ್ಕು ದಿನಗಳ ಅನುಭವ ಎಲ್ಲರ ಕೈಲು ನಿಭಾಯಿಸಲು ಆಗುವುದಿಲ್ಲ. ಎಂತಹ ಸಾಹಸಿಗಳನ್ನೂ ಅಧೀರರನ್ನಾಗಿ ಮಾಡಿಬಿಡುತ್ತದೆ.
ಆದರೆ ಸೀದಾ ಕಾಡಿಗೆ ಕಳುಹಿಸುವುದಿಲ್ಲ,ಮೊದಲು ದೈಹಿಕವಾಗಿ,ಮಾನಸಿಕವಾಗಿ ಸುಮಾರು ಹದಿನೈದು ದಿನಗಳ ಕಠಿಣ ತರಬೇತಿಯನ್ನು ಶ್ರೀನಗರದ ವಾಯುನೆಲೆಯಲ್ಲಿ ಕೊಡಲಾಗುತ್ತದೆ.
ಆ ಸಮಯದ ದಿನಚರಿ ಹೇಗಿತ್ತೆದೆಂದರೆ,ಬೆಳಗ್ಗೆ ಆರು ಘಂಟೆಗೆ ಶ್ರೀನಗರದ ವಾಯುನೆಲೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಅಂದರೆ ಸುಮಾರು ಮೂರು ಕಿಮೀ ದೂರ ಒಂದು ನಿರ್ದಿಷ್ಟ ವೇಗದಲ್ಲಿ ಓಡಬೇಕು,ಮತ್ತೆ ಎರಡು ಮೂರು ನಿಮಿಷಗಳ ನಂತರ ವಾಪಸ್ ಎಲ್ಲಿಂದ ಶುರು ಮಾಡಿಕೊಂಡಿದ್ದೆವೋ ಅಲ್ಲಿಗೆ ಹೋಗಿ ತಲುಪಬೇಕು. ಒಟ್ಟು ಸುಮಾರು ಆರು ಕಿ ಮೀ ದೂರ. ಒಂದು ವಾರದ ನಂತರ ಇದರ ಪರೀಕ್ಷೆ, ಪಾಸಾಗದವರಿಗೆ ಪುನಃ ಸಾಯಂಕಾಲ ಆರು ಕಿಮೀ ಓಟ!. ಈ ಹಿಂಸೆಯಿಂದ ತಪ್ಪಿಸಿಕೊಳ್ಳಬೇಕು ಎಂದರೆ ಏನಾದರೂ ಸರಿ ಮೊದಲ ಸಲವೇ ಪಾಸಾಗಬೇಕೆಂಬ ಅನಿವಾರ್ಯತೆ.
ಅಷ್ಟರಲ್ಲಿ ಜಿದ್ದು ಕೃಷ್ಣಮೂರ್ತಿಯವರ 'ಧ್ಯಾನ'ದ ಅಧ್ಯಾಯ ಓದುತ್ತಿದ್ದೆ. ಅವರ ಪ್ರಕಾರ ಧ್ಯಾನ ಯಾರೋ ಒಬ್ಬರು ಹೇಳಿಕಟ್ಟಂತೆ ಕುಳಿತು ಮಾಡುವ ವಿಧಾನವಲ್ಲ . ಅದು ಶಿಸ್ತಿನಿಂದ ಕಲಿತ ವಿದ್ಯೆಯೂ ಅಲ್ಲ.
ಧ್ಯಾನ ನೀವೇ ಸೃಷ್ಟಿಸಿಕೊಳ್ಳಬೇಕಾಗಿರುವ ಒಂದು ಸುಪ್ತತೆ. ಒಂದು ಅಧ್ಭುತವಾದ ನಿಶಬ್ದಾವಸ್ತೆ .ಅದು ಪುಸ್ತಕಗಳನ್ನು ಓದಿದರೆ,ಉಪನ್ಯಾಸಗಳನ್ನು ಕೇಳಿದರೆ ಕರಗತವಾಗುವ ಕಲೆಯಲ್ಲ. ನಿಮ್ಮ ಆಲೋಚನಾ ಲಹರಿಯನ್ನು,ಮನಸ್ಸನ್ನು ಬಹಳ ಶಾಂತವಾಗಿ ಆದರೆ ಯಾವ ಒಂದು ಒತ್ತಡವಿಲ್ಲದೆ,ಅದರಲ್ಲೇ ಅವಿಭಾಜ್ಯವಾಗಿ,ಉತ್ಕಟತೆಯಿಂದ ಗಮನಿಸುವ ಅವಸ್ಥೆ.
ಆಗುತ್ತದೆಯಾ? ನಿಮ್ಮಿಂದ ಸಾಧ್ಯವಾ? ಮತ್ತೆ ಕೆಣಕಲು ಶುರು ಹಚ್ಚಿಕೊಂಡರು.
ದೈಹಿಕವಾಗಿ ನನಗೆ ಕ್ರೀಡಾಪಟುಗಳಿಗಿರುವಂತಹ ಸಾಮರ್ಥ್ಯ ಯಾವಾಗಲೂ ಇರಲಿಲ್ಲ. ಅದ್ದರಿಂದ ಈ ಆರು ಕಿಮೀಗಳ ಓಟದ ಸ್ಪರ್ಧೆ ಒಂದು ಚಾಲೆಂಜ್ ಮತ್ತು ಮಾಡಲಾಗದಿದ್ದರೆ ಇತರೆ ಪೈಲಟ್ಗಳ ಮುಂದೆ ಮುಖಭಂಗ. ಈ ಚಾಲೆಂಜಿಗಿಂತ ನನ್ನ ಮುಂದಿದ್ದ ಇನ್ನೊಂದು ಛಲ ,ಅದೆಂದರೆ ಇವರು ಧ್ಯಾನದ ಬಗ್ಗೆ ಹೇಳುತ್ತಿರುವ 'ಸುಪ್ತಾವಸ್ಥೆ'ಯ ಅನುಭವ ಪಡೆಯಬೇಕು ಎನ್ನುವುದು. ಆ ವಿಚಾರದಲ್ಲೇ ಮುಳುಗಿ ಹೋಗಿದ್ದೆ.
ಅಂತಿಮ ಪರೀಕ್ಷೆಯ ದಿನ ಬಂದೇ ಬಿಟ್ಟಿತು. ಎಲ್ಲರ ಕೈಯಲ್ಲಿ ಮೂರು ಬಿಲ್ಲೆಗಳು. ಪ್ರತಿ ಎರಡು ಕಿಮೀ ದೂರದಲ್ಲಿ ನಿಂತಿರುವ ತರಬೇತಿ ಸಿಬ್ಬಂದಿಗೆ ಆ ಬಿಲ್ಲೆಗಳನ್ನು ಕೊಡಬೇಕು. ಇದರಿಂದ ಯಾರಿಗೂ ಕಿರುದಾರಿಯಲ್ಲಿ ಹೋಗುವ ಅವಕಾಶವಿರುವುದಿಲ್ಲ. ನಿರ್ದಿಷ್ಟವಾದ ಮಾರ್ಗದಲ್ಲೇ ಓಡಬೇಕು.
ಆರಂಭದ ಸೀಟಿಯೊಡನೆ ಸ್ಪರ್ಧೆ ಶುರುವಾಯಿತು. ಎಲ್ಲರ ಜೊತೆ ನಾನೂ ನಿಧಾನಗತಿಯಲ್ಲಿ ಓಟ ಶುರು ಮಾಡಿದೆ. ಧ್ಯಾನಾವಸ್ತೆಯಲ್ಲೇ ಮನಸ್ಸನ್ನು ಕೇಂದ್ರೀಕರಿಸಿಟ್ಟುಕೊಂಡು ವೇಗವನ್ನು ಕ್ರಮೇಣ ಹೆಚ್ಚುಸುತ್ತಾ ಹೋದೆ. ದೇಹದ ಪ್ರತಿಯೊಂದು ಭಾಗದತ್ತ ಗಮನ ಹರಿಸುತ್ತಾ ಹೋದೆ. ನನಗೆ ನಾನೇ ಕೆಣಕಿಕೊಳ್ಳುತ್ತಾ,ಗಮನವನ್ನು ಒಂದು ಕಡೆ ಕದಲದಹಾಗೆ ಇಟ್ಟುಕೊಂಡಿರಲು ಸಾಧ್ಯವಾ?,ಆಗುತ್ತಾ?
ಮೊದಲನೆ ಪಾಯಿಂಟಿನಲ್ಲಿ ಒಂದು ಬಿಲ್ಲೆಯನ್ನು ಕೊಟ್ಟು ಓಟವನ್ನು ಮುಂದುವರೆಸಿದೆ. ಆದರೆ ನನಗಿಂತ ಸ್ವಲ್ಪದೂರದಲ್ಲೆ ಮೂವರು ಏದುಸಿರು ಬಿಡುತ್ತಾ ಓಡುತ್ತಿದ್ದರು. ಆಗಾಗಲೇ ಏಳೆಂಟು ಬಿಲ್ಲೆಗಳು ಅವರ ಕೈಯಲ್ಲಿದ್ದವು. ಈ ಹಂತದಲ್ಲಿ ಅಂದರೆ ಮುಂದಿನ ಬಿಲ್ಲೆಯನ್ನು ಕೊಡುವವರೆಗೂ ಗಮನವನ್ನು ಬಲಗಾಲಿನ ಹೆಬ್ಬೆರಳಿನಲ್ಲಿ ಅಚಲವಾಗಿ,ಶರೀರದ ಎಲ್ಲಾ ಶಕ್ತಿಯು ಅಲ್ಲೇ ಕೂಡಿಕೊಂಡಿದೆ ಎಂದು ನನಗೆ ನಾನೇ ಹೇಳಿಕೊಳ್ಳುತ್ತಾ ಓಟದ ತೀವ್ರತೆಯನ್ನು ಹೆಚ್ಚಿಸುತ್ತಾ ಹೋದೆ. ಉಸಿರಾಟದ ತೀವ್ರತೆ ಹೆಚ್ಚುತ್ತಿದ್ದುದು ಗಮನಕ್ಕೆ ಬಂತು,ಧೀರ್ಘವಾಗಿ ಉಸಿರಾಡುವುದನ್ನು ನಿಯಂತ್ರಿಸುತ್ತಾ ಚಿತ್ತವನ್ನು ಅತ್ತಿತ್ತ ಕದಲಿಸದಂತೆ ಕ್ರೋಡೀಕೃತಿಸಿಕೊಂಡು ಒಮ್ಮೆ ತಲೆಎತ್ತಿ ನೋಡಿದೆ. ಇನ್ನೇನು ಎರಡನೇ ಪಾಯಿಂಟು ಸ್ವಲ್ಪದೂರಲ್ಲೇ ಕಾಣುತಿತ್ತು,ಇಬ್ಬರು ಈಗಾಗಲೇ ಆ ಪಾಯಿಂಟನ್ನು ತಲುಪಿದ್ದರು. ನನ್ನ ಬಿಲ್ಲೆಯನ್ನು ಕೊಟ್ಟು ಓಟವನ್ನು ಮುಂದುವರೆಸಿ ಪುನಃ ಕೃಷ್ಣಮೂರ್ತಿ ಯವರ ಧ್ಯಾನದ ಪ್ರಕಾರದಲ್ಲಿ ತಲ್ಲೀನಾದೆ. ನಿಯಮಿತವಾಗಿ ಧೀರ್ಘವಾಗಿ ಉಸಿರಾಡುತ್ತಿದ್ದುದರಿಂದ ಹೆಚ್ಚಿನ ಆಯಾಸವೆನಿಸಲಿಲ್ಲ. ಈ ಹಂತದಲ್ಲಿ ಗಮನವನ್ನು ಎಡಗಾಲಿನ ಹೆಬ್ಬೆರಳಿನ ಮೇಲೆ ಕೇಂದ್ರೀಕರಿಸಿದೆ,ಅದರಲ್ಲಿಯೇ ತಲ್ಲೀನನಾದೆ,ನನ್ನಷ್ಟಿಗೆ ನಾನೇ..ಚಾಲೆಂಜ್ ಮಾಡಿಕೊಂಡು ಓಟದ ತೀವ್ರತೆಯನ್ನು ಇನ್ನು ಹೆಚ್ಚಿಸಲು ಆಗುತ್ತಾ ತಾಕತ್ತಿದಯಾ...ಹಾಗಾದರೆ ಮಾಡು ನೋಡೋಣ ಅಂದುಕೊಳ್ಳುತ್ತಾ ಮೂರನೆ ಪಾಯಿಂಟಿನ ಕಡೆ ಗಮನವಿಟ್ಟು ಅತ್ತಿತ್ತ ನೋಡದಹಾಗೆ ಮುಂದುವರೆದೆ. ದಾರಿಯಲ್ಲಿ ಇಬ್ಬರು ಇನ್ನು ಓಡೋಕ್ಕೆ ಆಗಲ್ಲ ಎಂದು ಏದುಸಿರು ಬಿಡುತ್ತಾ ಕುಳಿತೇಬಿಟ್ಟರು.
ಮೂರನೇ ಪಾಯಿಂಟು ತಲುಪಿ ನನ್ನ ಬಿಲ್ಲೆಯನ್ನು ಅವರ ಕೈಗೆ ಕೊಟ್ಟೆ. ಅವರ ಕೈಯಲ್ಲಿ ಯಾವ ಬಿಲ್ಲೆಯೂ ಕಾಣಲಿಲ್ಲ. ಸುಮಾರು ಎರಡು ಮೂರು ನಿಮಿಷಗಳ ನಂತರ ನಮ್ಮ ಬ್ಯಾಚಿನಲ್ಲೆ ದೈಹಿಕ ಧಾರ್ಢ್ಯದಲ್ಲಿ ಹೆಸರಾದ ಪೈಲಟ್, ಭಾರಧ್ವಜ್ ಎನ್ನುವವರು ಬಂದರು. ಬೆವರೊರೆಸಿಕೊಳ್ಳುತ್ತಾ ನನ್ನ ಹತ್ತಿರ ಬಂದು you are a dark horse,congratulations! ಅಂದಾಗಲೇ ನನಗೆ ಗೊತ್ತಾಗಿದ್ದು ಎಲ್ಲರಿಗಿಂತ ಮೊದಲು ಬಂದವನು ನಾನೇ ಅಂತ. ಕೃಷ್ಣಮೂರ್ತಿಯವರಿಗೆ ಮನಸ್ಸಿನಲ್ಲೇ ನಮಿಸಿದೆ.
ಮೂರು ದಿನಗಳ ನಂತರ ಇನ್ನೊಂದು ಸ್ಪರ್ಧೆ. ಈ ಸಲ ಶ್ರೀನಗರದ ಶಂಕರಾಚಾರ್ಯ ಬೆಟ್ಟವನ್ನು ಹತ್ತುವುದು. ಅದೇ ಮೂರು ಬಿಲ್ಲೆಗಳ ಸ್ಪರ್ಧೆಯ ನಿಯಮ. ಬೆಟ್ಟದ ಮೇಲೆ ಪ್ರಸಿದ್ದವಾದ ಶಿವಾಲಯವಿದೆ. ಮೂರನೆ ಬಿಲ್ಲೆಯನ್ನು ಶಿವಾಲಯದಲ್ಲಿ ಕಾಯುತ್ತಿರುವ ಸಿಬ್ಬಂದಿಗೆ ಕೊಡುವಾಗಲೂ ಇನ್ನೂ ಯಾರೂ ಕೊಟ್ಟಿರಲಿಲ್ಲ.
ಇದೆಲ್ಲಾ ಮುಗಿದು ದೈಹಿಕ ಧಾರ್ಢ್ಯತೆ,ಮಾನಸಿಕ ಸ್ಥೈರ್ಯತೆಯ ಜೊತೆ ಕೃಷ್ಣಮೂರ್ತಿಯವರಿಂದ ಪಡೆದ ಹೊಸ ಸ್ಪೂರ್ತಿಯೊಂದಿಗೆ ಉತ್ತರಾಖಾಂಡದ ಕಾಡುಗಳು ಮತ್ತು ಕಾಶ್ಮೀರದ ಹಿಮಚ್ಚಾದಿತ ಪರ್ವತಗಳ ಕಡೆ ನಿರ್ಗಮಿಸುವ ಸಮಯ ಬಂತು.
No comments:
Post a Comment