Monday, November 20, 2017

ಕಿವಿಗಡಚಿಕ್ಕುವ ಕರತಾಡನ

ಕಿವಿಗಡಚಿಕ್ಕುವ ಕರತಾಡನ


10 ಸೆಪ್ಟೆಂಬರ್ 1893, ಚಿಕಾಗೋದ ಡಿಯರ್ಬಾನ್ ಏವ್ ರಸ್ತೆಯ ಬಂಗಲೆಯ ಒಡತಿ ಶ್ರೀಮತಿ ಎಲ್ಲೆನ್ ಹೇಲ್ ತಮ್ಮ ಮನೆಯ ಮುಂದೆ ಕುಳಿತಿದ್ದ ವಿವೇಕಾನಂದರನ್ನು ಒಳಗೆ ಕರೆದುಕೊಂಡು ತಮ್ಮ ಪತಿ ಜಾರ್ಜ್ ಹೇಲ್ ರವರಿಗೆ ಪರಿಚಯಿಸುತ್ತಿದ್ದ ಹಾಗೇ, ಮಕ್ಕಳು ಮೇರಿ, ಹ್ಯಾರಿಯೆಟ್ ಕೂಡ ಬಂದು ವಂದಿಸುತ್ತಾರೆ.

"ಈ ಅಪಚರಿತನನ್ನು ಹೇಗೆ ಸ್ವಾಗತಿಸಿದರು ಎಂದರೆ ನಾವು ಹಿಂದೂಗಳು ನಂಬುವ ಪೂರ್ವಜನ್ಮದ ಋಣಾನುಬಂಧವಿದ್ದಿರಬಹುದೇನೋ ಎನಿಸಿತು.." ಎಂದು ಆರು ವರ್ಷಗಳ ನಂತರ ವಿವೇಕಾನಂದರು ಮೇರಿ ಹೇಲ್ ರವರಿಗೆ ಬರೆದ ಪತ್ರದಲ್ಲಿ ಭಾವುಕರಾಗಿ ಬರೆಯುತ್ತಾರೆ.

ಇವರು ಸಮ್ಮೇಳನಕ್ಕೇ ಬಂದವರಿರಬೇಕೆಂಬ ಊಹೆ ಸರಿಯೆಂದು ತಿಳಿದು ಹರ್ಷಿಸುತ್ತಾರೆ. ನಾವು ಹಿಂದೂ ತತ್ವಗಳನ್ನು ಓದಿದ್ದೇವೆ ಆದರೆ ಇದೇ ಮೊದಲ ಸಲ ಒಬ್ಬ ಹಿಂದೂ ಸ್ವಾಮಿಯನ್ನು ನೋಡುತ್ತಿರುವುದು ಎಂದು ಅಥಿತಿ ಸತ್ಕಾರದಲ್ಲಿ ತೊಡಗುತ್ತಾರೆ. ಸಮ್ಮೇಳನದಲ್ಲಿ ತಮ್ಮ ಹೆಸರು ನೊಂದಣಿಯಾಗಿಲ್ಲ ಎಂದು ವಿವೇಕಾನಂದರು ಹೇಳಿದಾಗ ಶ್ರೀಮತಿ ಹೇಲ್ ಖುದ್ದಾಗಿ ಅವರನ್ನು ಸಮ್ಮೇಳನದ ಆಡಳಿತ ವರ್ಗದವರೊಂದಿಗೆ ಪರಿಚಯಿಸಿ ಅವರ ಹೆಸರನ್ನು ನೊಂದಾಯಿಸುತ್ತಾರೆ.
ಮರುದಿನ, 11 ಸೆಪ್ಟೆಂಬರ್ ಸಮ್ಮೇಳನದ ಉಧ್ಗಾಟನೆಯ ದಿನದ ಮಧ್ಯಾಹ್ನದ  ಭಾಷಣಕಾರರಾಗಿ ಅರ್ಧ ಗಂಟೆಯ ಅವಧಿಯನ್ನು ಕೊಡಲಾಗಿದೆ ಎಂದೂ ತಿಳಿಸುತ್ತಾರೆ.
ಅಂತೂ ಇಲ್ಲಿವರೆಗೆ ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

11 ಸೆಪ್ಟೆಂಬರ್ ಬೆಳಗ್ಗೆ ವಿವೇಕಾನಂದರನ್ನು ಹೇಲ್ ದಂಪತಿಗಳು ಚಿಕಾಗೋದ ಪ್ರಸಿದ್ಧ Art Palace Auditorium ಕಲಾ ಮಂದಿರಕ್ಕೆ ಕರದುಕೊಂಡು ಹೋಗುತ್ತಾರೆ. ಆಗಲೇ ಸುಮಾರು ಏಳುಸಾವಿರ ಧಾರ್ಮಿಕ ವ್ಯಕ್ತಿ ಗಳ ಸಮಾವೇಷ ನಡದಿರುತ್ತದೆ. ಭಾರತದಿಂದ ಬ್ರಹ್ಮೊ ಸಮಾಜದ P C ಮಜುಂದಾರನ್ನು ಬಿಟ್ಟರೆ ಒಬ್ಬರೂ ಪರಿಚಯವದರಿರುವುದಿಲ್ಲ. ಅಂತಹ ಬೃಹತ್, ವೈವಿಧ್ಯಮಯ ಸಮಾವೇಶವನ್ನು ನೋಡಿ ದಂಗಾಗಿ ಬಿಡುತ್ತಾರೆ.

ಮಧ್ಯಾಹ್ನದ ಸಮಾವೇಶ...ವಿವೇಕಾನಂದರ ಭಾಷಣದ ಸರದಿ, ಅಧ್ಯಕ್ಷ ಜಾನ್ ಬರ್ರೋಸರು ವಿವೇಕಾನಂದರನ್ನು ಸಮಾವೇಶಕ್ಕೆ ಪರಿಚಯಿಸುತ್ತಾರೆ. ಸ್ವಲ್ಪ ಮಟ್ಟದ ಅಧೀರತೆಯಿಂದಲೇ ವೇದಿಕೆಯನ್ನೇರುತ್ತಾರೆ. ನೆರೆದ ಜನಸ್ತೋಮಕ್ಕೆ ತಲೆ ಬಾಗಿಸಿ ಕೈಮುಗಿದು, ಕಣ್ಣು ಮುಚ್ಚಿಕೊಂಡು ದೇವಿ ಸರಸ್ವತಿಯನ್ನು ಸ್ಮರಿಸುತ್ತಾರೆ, ಕಣ್ಣು ತೆರೆದವರೇ..

"ಅಮೇರಿಕಾದ ಸಹೋದರಿಯರೇ..ಸಹೋದರರೇ"

ಕಂಚಿನ ಕಂಠದ ಧ್ವನಿ ಹೊರಡುತ್ತಲೇ...ಸಭೆಯಲ್ಲಿ ವಿದ್ಯುತ್ ಸಂಚಲನವಾಗುತ್ತದೆ. ಏಳುಸಾವಿರ ಜನ ಎದ್ದು ನಿಂತು ಸುಮಾರು ಎರಡು ನಿಮಿಷಗಳ ಕಾಲ ಸತತವಾಗಿ ಗಡಚಿಕ್ಕುವ ಕರತಾಡನ ಮಾಡುತ್ತಾರೆ.  ಕಿಂಚಿತ್ತು ಅಧೀರತೆಯಿಂದ ಬಂದವರಿಗೆ ಇಂತಹ ನಭೂತೋ ನಭವಿಷ್ಯತಿ.. ಸ್ವಾಗತ ಅವರನ್ನು ಅಚಂಭಿತಗೊಳಿಸಿ, ಪ್ರೋತ್ಸಾಹಿಸಿ, ಕಣ ಕಣದಲ್ಲೂ ಚೈತನ್ಯವನ್ನು ಹರಿಸುತ್ತದೆ. ಚಪ್ಪಾಳೆಯ ಸದ್ದಡಗುವುದನ್ನೇ ಕಾಯ್ದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ..

ಸಮಾರಂಭಲ್ಲಿ ನೆರೆದಿದ್ದವರಲ್ಲಿ ಅತಿ ಚಿಕ್ಕವರಾದ ಮೂವತ್ತು ವರ್ಷದ ಈ ವ್ಯಕ್ತಿ ಪ್ರಪಂಚದ ಅತಿ ಪ್ರಾಚೀನ..ಸನಾತನ ಧರ್ಮದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ.

ಹಾಗೆ ನೋಡಿದರೆ, ಅವರ ಪ್ರಾರಂಭದ ಸಾಲಿನಲ್ಲಿ ಏನು ಅಂತಹ ವಿಷೇಶವೇನೂ ಇರಲಿಲ್ಲ.. ಅಮೆರಿಕದ ಸಹೋದರ, ಸಹೋದರಿಯರೇ..
ಈ ವಾಕ್ಯವನ್ನು ಈಗಲೂ ಅಂದರೆ ಘಟನೆ ನಡೆದ 124 ವರ್ಷಗಳ ನಂತರವೂ ನೆನಸಿಕೊಂಡರೆ ಹೆಮ್ಮೆಯಿಂದ ಎದೆ ಉಬ್ಬುವುದು ಏಕೆ ಎಂದರೆ ಅವರ ವಾಕ್ಯದ ಪ್ರಾಮಾಣಿಕತೆಯಿಂದ. ಧ್ವನಿಯಲ್ಲಿದ್ದ ಉತ್ಕಟತೆ, ಆದರತೆ ಮತ್ತು ಅಪ್ಯಾಯಮಾನತೆಯಿಂದ.

ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಹೆಸರಿಡಿದು ಕರೆಯುವ ವಾಡಿಕೆ ಇರುವ ಆ ನಾಡಿನಲ್ಲಿ ಭಾರತೀಯ ಸಂಸ್ಕಾರವನ್ನು ಪರಿಚಯಿಸಿದ್ದರು. ಅದರಲ್ಲೇ ಇರುವುದು ಕಿವಿ ಗಡಚಿಕ್ಕುವ ಕರತಾಡನದ ವಿಷೇಶತೆ.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

No comments:

Post a Comment