Monday, November 20, 2017

ಸೂರ್ಯನ ಪ್ರಖರತೆಗೆ ಪರವಾನಗಿಯೇ

ಸೂರ್ಯನ ಪ್ರಖರತೆಗೆ ಪರವಾನಗಿಯೇ?

ಜುಲೈ 1893 ನಲ್ಲಿ ಕೆನಡಾದ ವ್ಯಾಂಕೂವರ್ ತಲುಪಿದ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಚಿಕಾಗೋ ನಗರಕ್ಕೆ ಪ್ರಯಾಣ ಬೆಳಸುತ್ತಾರೆ.
World Parliament of Religions ಎನ್ನುವ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸುವ ಉತ್ಸಾಹ ಕಣಕಣದಲ್ಲೂ ನರ್ತಿಸುತ್ತಿತ್ತು.

ಅಮೆರಿಕಾದಲ್ಲಿ New Religion Movement ನ ಆಯೋಜನೆಯಲ್ಲಿ ನಡೆಯುತ್ತಿದ್ದ ಒಂದು ವಿನೂತನ ಧಾರ್ಮಿಕ ಪ್ರಯೋಗವಿದು. ಅಮೆರಿಕದ ಅಸ್ತಿತ್ವದ 400 ವರ್ಷಗಳ ಸಂಭ್ರಮ.
ರೋಮನ್ ಕ್ಯಾಥೋಲಿಕ್ ಧರ್ಮದಿಂದ ದೂರಾಗಿ ತಮ್ಮದೇ ಆದ ಹೊಸ ಕ್ರಿಶ್ಚಿಯನ್ ಮತವನ್ನು ಸ್ಥಾಪಿಸಿದ್ದ Swedenborgian ಎನ್ನುವ 'ನೂತನ ಮತಕೂಟ" ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದರು.
ವಿಶ್ವದಾದ್ಯಂತ ಹರಡಿರುವ ಎಲ್ಲಾ ಜಾತಿ, ಮತ ಮತ್ತು ಧರ್ಮದ ಸಮಾವೇಶದಲ್ಲಿ ಸುಮಾರು 7000 ಧಾರ್ಮಿಕ ಗುರುಗಳನ್ನು ಆಮಂತ್ರಿಸಲಾಗಿತ್ತು.

ವ್ಯಾಂಕೂವರಿನಿಂದ ಚಿಕಾಗೋಕ್ಕೆ ಪ್ರಯಾಣಿಸುತ್ತಿರುವಾಗ ರೈಲಿನಲ್ಲಿ ಇವರಿಗೆ ಕೇಟ್ ಸ್ಯಾನ್ಬೋರ್ನ್ ಎನ್ನುವ ಮಹಿಳೆಯ ಪರಿಚಯವಾಗುತ್ತದೆ. ಸುಮಾರು ಐವತ್ತೈದರ ಈ ಮಹಿಳೆ ಉಪನ್ಯಾಸಕಿ, ಬರಹಗಾರ್ತಿ ಮತ್ತು ಸಮಾಜ ಸೇವಕಿ.
ವಿವೇಕಾನಂದರ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾರೆ, ಅವರ ಭಾಷಾ ಜ್ಞಾನಕ್ಕೆ ಅಚ್ಚರಿಗೊಳ್ಳುತ್ತಾರೆ, ಜ್ಞಾನದ ಅಗಾಧತೆಗೆ ಮರುಳಾಗುತ್ತಾರೆ. ಚಿಕಾಗೋದಲ್ಲಿ ಸಮಾರಂಭ ಮುಗಿದ ಮೇಲೆ ಬೋಸ್ಟನ್ ನಗರ ಸಮೀಪದ ತಮ್ಮ ತೋಟದ ಮನೆಗೆ ಬರಲು ನಿಮಂತ್ರಣ ಕೊಟ್ಟು ತಮ್ಮ ವಿಳಾಸ ಪತ್ರವನ್ನು ಕೊಡುತ್ತಾರೆ.

ಚಿಕಾಗೋ ತಲುಪಿದ ವಿವೇಕಾನಂದರಿಗೆ ಆಘಾತಗಳ ಸರಮಾಲೆ ಕಾದಿರುತ್ತದೆ. ಮೊದಲನೆಯದು ಸಮ್ಮೇಳನವನ್ನು ಸೆಪ್ಟಂಬರಿಗೆ ಮುಂದೂಡಲಾಗಿದೆ, ಅಂದರೆ ಎರಡು ತಿಂಗಳುಗಳು ಅಮೆರಿಕಾದಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಅವರನ್ನು ಬೆಚ್ಚಿಬೀಳಿಸಿದೆ ವಿಷಯವೆಂದರೆ ಈ ಸಮ್ಮೇಳನದಲ್ಲಿ ಭಾಗವಹಿಸಲು ಅವರ ದೇಶದ ಪ್ರತಿಷ್ಟಿತ ಸಂಸ್ಥೆಗಳ, ವ್ಯಕ್ತಿಗಳ ಪರಿಚಯ ಮತ್ತು ಪರವಾನಗಿಯ ಪತ್ರ ಹೊಂದಿರಬೇಕು, ಇಲ್ಲದಿದ್ದರೆ ನೊಂದಣಿ ಮಾಡಿಕೊಳ್ಳುವುದಿಲ್ಲ. ಅಷ್ಟಕ್ಕೂ ನೊಂದಣಿಯ ದಿನಾಂಕವಾಗಲೇ ಮಿಗಿದು ಹೋಗಿದೆ. ಇದೆಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ ಕೆಲವೇ ದಿನಗಳಿಗಾಗುವಷ್ಟು ಹಣ ಮಾತ್ರ ಉಳಿದಿತ್ತು. ಪ್ರೇಕ್ಷಕನಾಗಿ ಸಮ್ಮೇಳನದಲ್ಲಿ ಭಾಗವಹಿಸಲಾದರೂ ಎರಡು ತಿಂಗಳಿಗಾಗುವಷ್ಟು ಹಣವಂತೂ ಇರಲಿಲ್ಲ. ಚಿಕಾಗೋದಂತಹ ದುಬಾರಿ ನಗರದಲ್ಲಿರುವುದಕ್ಕಿಂತ ಬೋಸ್ಟನ್ನಿಗೆ ಹೋದರೆ ಸ್ವಲ್ಪ ಹಣ ಉಳಿಸಬಹುದೆಂಬ ಸಲಹೆಯಂತೆ ಅಲ್ಲಿಗೆ ಪ್ರಯಾಣ ಬೆಳಸಿದರು.

ಎಲ್ಲೆಡೆ ನಿರಾಸೆಯ ದಟ್ಟ ಮೋಡಗಳು. ವಿಶ್ವಮಟ್ಟದಲ್ಲಿ ವೇದ ಉಪನಿಷತ್ತುಗಳ, ಹಿಂದೂ ಧರ್ಮದ ಅಗಾಧತೆಯನ್ನು ಜಗತ್ತಿಗೆ ಪರಿಚಯಿಸುವ ಮಹದಾಸೆ ಅಸಾಧ್ಯವಾಗುತ್ತಿರುವುದು ಗೋಚರಿಸುತ್ತಿತ್ತು. ಮುಂದೇನು ಮಾಡುವುದು ಎನ್ನುವ ಆಘಾತ ದಲ್ಲಿದ್ದವರಿಗೆ ಕೇಟ್ ಸ್ಯಾನ್ಬೋರ್ನರ ನೆನಪು ಬಂತು.
ಕೆಲವೇ ಘಂಟೆಗಳಲ್ಲಿ ಅವರ "Breezy Meedows" ತೋಟದ ಮನೆಯಲ್ಲಿ ಪ್ರತ್ಯಕ್ಷರಾದರು. ಕೇಟ್ ತುಂಬಾ ಸಂತೋಷದಿಂದ ಬರಮಾಡಿಕೊಂಡರು. ಹತಾಶಗೊಂಡ ಅವರ ಮುಖ ಸೋಲಿನ ಕಥೆಯನ್ನು ಹೇಳುತ್ತಿತ್ತು. ಕಳವಳಗೊಂಡ ಕೇಟ್ ಮೊದಲು ಅವರಿಗೆ ಸ್ನಾನ, ಊಟದ ವ್ಯವಸ್ಥೆ ಮಾಡಿ, ಸ್ವಲ್ಪ ಚೇತರಿಸಿಕೊಂಡ ಮೇಲೆ ವಿವೇಕಾನಂದರಿಂದ ನಡೆದ ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಳ್ಳುತ್ತಾರೆ. ಪರಿಚಯ ಪತ್ರವಿಲ್ಲದಿದ್ದರೆ ಸಮ್ಮೇಳನದಲ್ಲಿ ಪ್ರವೇಶವಿಲ್ಲ.

ಉಪನ್ಯಾಸಕಿಯಾದುದರಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ಅನೇಕ ಪ್ರೊಫೆಸರುಗಳ ಪರಿಚಯವಿರುತ್ತದೆ ಕೇಟ್ ಅವರಿಗೆ. ಅದರಲ್ಲಿ ಗ್ರೀಕ್ ಭಾಷೆ ಕಲಿಸುತ್ತಿದ್ದ ಜಾನ್ ಹೆನ್ರಿ ರೈಟ್ ಎನ್ನುವವರು ಸಂಸ್ಕೃತ ಕಲಿತವರು, ಹಾಗಾಗಿ ಭಾರತದ ಮತ್ತು ಭಾರತೀಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುತ್ತದೆ, ವಿವೇಕಾನಂದರಿಗೆ ಪರಿಚಯ ಪತ್ರ ಇವರಿಂದ ಸಿಗಬಹುದು ಎಂದು ವಿವೇಕಾನಂದನಂದರಿಗೆ ಅವರನ್ನು ಪರಿಚಯ ಮಾಡಿ ಕೊಡುತ್ತಾರೆ.

ವಿವೇಕಾನಂದರನ್ನು ನೋಡುತ್ತಲೇ ಪ್ರೊಫೆಸರ್ ರೈಟ್ ಅವರ ಧೀಮಂತ ವ್ಯಕ್ತಿತ್ವಕ್ಕೆ ಮಾರು ಹೋಗುತ್ತಾರೆ. ಮೂರು ದಿನಗಳ ಕಾಲ ತಮ್ಮ ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಕೆಲವು ಉಪನ್ಯಾಸ ಸಭೆಗಳನ್ನು ಏರ್ಪಡಿಸಿ ಬೋಸ್ಟನ್ನಿನ ಗಣ್ಯವ್ಯಕ್ತಿಗಳಿಗೆ ಆಮಂತ್ರಣ ನೀಡುತ್ತಾರೆ. ವಿವೇಕಾನಂದರಿಗಿರುವ ಭಾಷಾ ಪ್ರಾವೀಣ್ಯತೆ, ಭಾಷಣದ ಶೈಲಿ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ.

ವಿಶ್ವ ಧರ್ಮ ಸಮ್ಮೇಳನಕ್ಕೆ ಹೋಗುವ ಆಸೆಯನ್ನು ಬಿಟ್ಟಿದ್ದ ವಿವಾಕಾನಂದರಲ್ಲಿ ಪ್ರೋತ್ಸಾಹ ತುಂಬುತ್ತಾರೆ ಪ್ರೊಫೆಸರ್ ರೈಟ್.
'ನಿಮ್ಮಂತವರಿಂದ ಪರಿಚಯದ ಪತ್ರಬೇಕೇ ಅವರಿಗೆ....
"To ask for your credentials is like asking the Sun to state it's right to shine."
ಸೂರ್ಯನ ಪ್ರಖರತೆಗೆ ಪರವಾನಗಿ ಬೇಕೇ?

ಕೂಡಲೇ ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ರವರಿಗೆ ಪರಿಚಯ ಪತ್ರ ಬರೆದು ಕಳುಹಿಸುತ್ತಾರೆ. ಆ ಪತ್ರದಲ್ಲಿ... "ವಿವೇಕಾನಂದರೊಬ್ಬರೇ ನಮ್ಮ ಎಲ್ಲಾ ಹಾರ್ವರ್ಡ್ ಪ್ರೊಫೆಸರುಗಳಿಗೆ ಸಮ. ಇವರನ್ನು ನೀವು ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರೆ, ಒಬ್ಬ ಮೇಧಾವಿಯ ಪರಿಚಯದ ಲಾಭ ನಿಮಗಾರಿಗೂ ಸಿಗದು..ಅದು ನಿಮ್ಮ ದುರಾದೃಷ್ಟ " ಎಂದು ಬರೆಯುತ್ತಾರೆ.
ವಿವೇಕಾನಂದರಿಗೆ ನೀವು ಚಿಕಾಗೋಕ್ಕೆ ಹೊರಡಿ ಎಂದು ಬೀಳ್ಕೊಡುತ್ತಾರೆ.

ಇದಾದ ಹಲವಾರು ವರ್ಷಗಳ ಕಾಲ ಇಬ್ಬರೂ ಪತ್ರಗಳ ಮುಖಾಂತರ ಸಂಪರ್ಕವಿಟ್ಟುಕೊಂಡಿರುತ್ತಾರೆ. ಪತ್ರದಲ್ಲಿ ವಿವೇಕಾನಂದರು ಇವರನ್ನು " Dear Adhyapak" ಎಂದೇ ಸಂಭೋದಿಸುತ್ತಿದ್ದರು.

2 ಸೆಪ್ಟೆಂಬರ್1893...  ಬೋಸ್ಟನ್ನಿನಿಂದ ಚಿಕಾಗೋಕ್ಕೆ ಹೊರಡುತ್ತಾರೆ, ಆದರೆ ಅವಘಡಗಳ ಸರಮಾಲೆ ಇನ್ನೂ ಅವರ ಬೆನ್ನು ಬಿಟ್ಟಿರಲಿಲ್ಲ....9/11 ಇನ್ನೂ ಏಳು ದಿನಗಳ ದೂರ...

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಕಾರಣ ಮತ್ತು ಪರಿಣಾಮ

ಕಾರಣ ಮತ್ತು ಪರಿಣಾಮ

Complete works of Swamy Vivekananda ಸರಮಾಲೆ ಪುಸ್ತಕಗಳಲ್ಲಿ ಕರ್ಮಯೋಗದಲ್ಲಿ Cause and Effect ನ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. Every thing happens with a reason....ನಮ್ಮ ನಮ್ಮ ಕರ್ಮಫಲಾನುಸಾರ ಜೀವನದಲ್ಲಿ ಘಟನೆಗಳು ನಡೆಯುತ್ತವೆ.
 ‎
 ‎Parliament of Religions ನಿಗದಿತ ಸಮಯದಂತೆ ಜುಲೈ 1893 ಯಲ್ಲಿ ನಡೆದಿದ್ದರೆ ಬಹುಷಃ ಪರಿಚಯ ಪತ್ರವಿಲ್ಲದೆ, ಯಾರ ಪರಿಚಯವೂ ಇಲ್ಲದೆ ಸಮ್ಮೇಳನದಲ್ಲಿ ಭಾಗವಹಿಸದೆ ಮರುಳುತ್ತಿದ್ದರೇನೋ, ಭಾಗವಹಿಸಿಧ್ಧರೂ ಸಹ ಅಂತಹ ಒಂದು ಅಧ್ಭುತವಾದ, ಸಂಮೋಹಕ ಭಾಷಣ ಕೊಡಲಾಗುತ್ತಿತ್ತೇ?. ನೆರೆದಿದ್ದ 7000 ಪ್ರತಿನಿಧಿಗಳಲ್ಲಿ , ಸಮ್ಮೇಳನದ ಅಧ್ಯಕ್ಷ ಜಾನ್ ಬರ್ರೋಸ್ ಇವರನ್ನೇ ಪ್ರತ್ಯೇಕವಾಗಿ ಕರೆದು ಶ್ಲಾಘನೆಯ ಹೊಳೆಯನ್ನೇ ಹರಿಸಿ, ನೀವು ಒಟ್ಟು ಆರು ಸಲ ಭಾಷಣ ಮಾಡಬೇಕೆಂಬ ವಿಶೇಷ ಆಮಂತ್ರಣ ನೀಡುತ್ತಿದ್ದರೇ?
 ‎ಸಮ್ಮೇಳನ ಮುಗಿದ ಮೇಲೂ ಸುಮಾರು ಮೂರೂವರೆ ವರ್ಷಗಳ ಕಾಲ ಅಮೆರಿಕಾದಲ್ಲಿ ಉಳಿಯುತ್ತಿದ್ದರೇ?  ಅಷ್ಟೊಂದು ಅಮೆರಿಕನ್ನರ ಆರಾಧ್ಯದೈವವಾಗುತ್ತಿದ್ದರೇ?
 ‎ಇದೇ ಕರ್ಮಯೋಗದ "ಕಾರಣ ಮತ್ತು ಪರಿಣಾಮ" ಇದ್ದಿರಬಹುದು.


 ‎ಬೋಸ್ಟನ್ನಿನಿಂದ ಕೇಟ್ , ಪ್ರೊಫೆಸರ್ ರೈಟ್ ಮತ್ತು ಅವರ ಕುಟುಂಬದವರಿಗೆ ವಿದಾಯ ಹೇಳಿ ರೈಲಿನಲ್ಲಿ ಸಮ್ಮೇಳನಕ್ಕೆಂದು ಚಿಕಾಗೋಗೆ ಹೊರಟ ವಿವೇಕಾನಂದರಿಗೆ ಇನ್ನೊಂದು ಸುತ್ತಿನ ಅವಘಡವೋ, ಸಂಚಿತ ಕರ್ಮಫಲವೋ ಅಥವಾ ಅವರನ್ನು ಪ್ರವಾದಿಗಳ ಮಟ್ಟಕ್ಕೇರಿಸುವ  ಅಗೋಚರ ಶಕ್ತಿಗಳ ಸಂಚೋ..ಗೊತ್ತಿಲ್ಲ, ಆಟವಂತೂ ಶುರುವಾಗಿತ್ತು.
 ‎
 ‎ಚಿಕಾಗೋದಲ್ಲಿ ಪ್ರೊಫೆಸರ್ ರೈಟ್ ರವರ ಸ್ನೇಹಿತರೊಬ್ಬರ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ್ದರು. ಅವರ ಮನೆಯ ವಿಳಾಸ ಮತ್ತು ಪರಿಚಯ ಪತ್ರವನ್ನು ಒಂದು ಲಕೋಟೆಯಲ್ಲಿ ಹಾಕಿ ಕೊಟ್ಟಿದ್ದರು, ಆದರೆ ರೈಲಿನಿಂದ ಇಳಿಯುವಾಗ ಎಲ್ಲೋ ಬಿದ್ದು ಹೋಗಿಬಿಟ್ಟಿತು. ಈಗೇನು ಮಾಡುವುದು? ದಿಕ್ಕೇ ತೋಚದಂತಾಯಿತು .
 ‎ಆ ರಾತ್ರಿಯನ್ನು ಅಲ್ಲೇ ನಿಂತಿದ್ದ ಒಂದು ರೈಲ್ವೇ ಬೋಗಿಯಲ್ಲಿ ಕಳೆದರು. ಬೆಳಗ್ಗೆ ಎದ್ದವರಿಗೆ ತಾಳಲಾರದ ಹಸಿವು, ಕೈಯಲ್ಲಿ ಬಿಡಿಗಾಸಿಲ್ಲ. ಹತಾಶರಾಗಿ ಚಿಕಾಗೋ ನಗರದ ಬೀದಿಗಳಲ್ಲಿ ಸುತ್ತಾಡುತ್ತಾ ಲೇಕ್ ಶೋರ್ ಡ್ರೈವ್ ಎಂಬಲ್ಲಿಗೆ ಬಂದರು. ಆಹಾರಕ್ಕೆ ಭಿಕ್ಷೆ ಬೇಡಲೂ ಯೋಚಿಸಿದರು, ಆದರೆ ಅವರ ದಿರಿಸಿನಿಂದಾಗಿ ಹಾದು ಹೋಗುವವರೆಲ್ಲಾ ಅನುಮಾನದಿಂದ ನೋಡುತ್ತಾ ಹೋಗುತ್ತಿದ್ದರು, ಹಾಗಾಗಿ ಇನ್ನೂ ಅವಮಾನಿತನಾಗುವುದು ಬೇಡ ಎಂದು ಅಲ್ಲೇ ಮನೆಯೊಂದರ ಮುಂದಿನ ಮರದ ನೆರಳಿನಲ್ಲಿ ಕುಸಿದು ಕುಳಿತರು, ಹಸಿವಿನಿಂದ, ಹತಾಶೆಯಿಂದ, ನಿರಾಶೆಯಿಂದ,  ಇದು ಪ್ರಾರಬ್ದ ಕರ್ಮವೇ, ಸಂಚಿತ ಕರ್ಮವೇ...ಅವರ ಅಮ್ಮನ ನೆನಪು ಬಂದು, ದುಖಃ ಒತ್ತರಿಸಿ ಬಂತು.

 ‎
 ‎ಅದೇ ಸಮಯಕ್ಕೆ ಆ ಮನೆಯ ಕಿಟಕಿಯಿಂದ ಇವರನ್ನು ನೋಡುತ್ತಾ ಕುಳಿತಿದ್ದರು ಒಬ್ಬ ಮಹಿಳೆ...
 ‎
 ‎ಮುಂದೆ ಇವರ "Dear Mother" ಎಂದು ನೂರಾರು ಪತ್ರಗಳ ಸಂಭೋದಿತೆ, ಆ ಮನೆಯನ್ನೇ ವಿವೇಕಾನಂದರ ಅಮೆರಿಕದ ಮುಖ್ಯಾಲಯವನ್ನಾಗಿ ಮಾಡಿದ ಮಾತೆ, ಮುಂದೆ ಅಮೆರಿಕಾದ ಮೂಲೆ ಮೂಲೆಗಳಲ್ಲಿ ಮಾಡಿದ ಉಪನ್ಯಾಸಕ್ಕೆ ಸಿಗುತ್ತಿದ್ದ ಸಂಭಾವನೆಗೆ ತಿಜೋರಿಯಾಗಿ, ನೊಂದ ಮನಸ್ಸಿಗೆ ಸಾಂತ್ವಾನ ಹೇಳುವ ಮೈತ್ರಿಯಾಗಿ, ತಪ್ಪು ಮಾಡಿ ಒಪ್ಪಿಕೊಂಡಾಗ ಧರಿತ್ರಿಯಾಗಿ...ವಿವೇಕಾನಂದರನ್ನು ಮಗುವಿನಂತೆ ಪೋಷಿಸಿದ ದೇವಿ ಸ್ವರೂಪಿ ಶ್ರೀಮತಿ ಎಲ್ಲೆನ್ ಹೇಲ್...
 ‎
ವಿವಾಕಾನಂದರಿಗಾಗೇ ಕಾಯುತ್ತಿದ್ದರೇನೋ ಎನ್ನುವಂತೆ ಕುಳಿತಿದ್ದರು ಕಿಟಿಕಿಯಿಂದ ನೋಡುತ್ತಾ, ಸ್ವಲ್ಪಹೊತ್ತು ನೋಡಿ ಹೊರ ಬಂದರು ವಿವೇಕಾನಂದನಂದರ ಮುಖವನ್ನೇ...ಈಗ ಬಂದೆಯಾ ಎನ್ನುವಂತೆ ನೋಡಿದರು. ಬಾ...ಒಳಗೆ ಎಂದು ಸ್ವಾಗತಿಸಿ ಕರೆದುಕೊಂಡು ಹೋದರು.

ಕರ್ಮಫಲ..ಅಮೆರಿಕಾದ ಬಾಗಿಲು ತೆರೆಯಿತು.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಕಿವಿಗಡಚಿಕ್ಕುವ ಕರತಾಡನ

ಕಿವಿಗಡಚಿಕ್ಕುವ ಕರತಾಡನ


10 ಸೆಪ್ಟೆಂಬರ್ 1893, ಚಿಕಾಗೋದ ಡಿಯರ್ಬಾನ್ ಏವ್ ರಸ್ತೆಯ ಬಂಗಲೆಯ ಒಡತಿ ಶ್ರೀಮತಿ ಎಲ್ಲೆನ್ ಹೇಲ್ ತಮ್ಮ ಮನೆಯ ಮುಂದೆ ಕುಳಿತಿದ್ದ ವಿವೇಕಾನಂದರನ್ನು ಒಳಗೆ ಕರೆದುಕೊಂಡು ತಮ್ಮ ಪತಿ ಜಾರ್ಜ್ ಹೇಲ್ ರವರಿಗೆ ಪರಿಚಯಿಸುತ್ತಿದ್ದ ಹಾಗೇ, ಮಕ್ಕಳು ಮೇರಿ, ಹ್ಯಾರಿಯೆಟ್ ಕೂಡ ಬಂದು ವಂದಿಸುತ್ತಾರೆ.

"ಈ ಅಪಚರಿತನನ್ನು ಹೇಗೆ ಸ್ವಾಗತಿಸಿದರು ಎಂದರೆ ನಾವು ಹಿಂದೂಗಳು ನಂಬುವ ಪೂರ್ವಜನ್ಮದ ಋಣಾನುಬಂಧವಿದ್ದಿರಬಹುದೇನೋ ಎನಿಸಿತು.." ಎಂದು ಆರು ವರ್ಷಗಳ ನಂತರ ವಿವೇಕಾನಂದರು ಮೇರಿ ಹೇಲ್ ರವರಿಗೆ ಬರೆದ ಪತ್ರದಲ್ಲಿ ಭಾವುಕರಾಗಿ ಬರೆಯುತ್ತಾರೆ.

ಇವರು ಸಮ್ಮೇಳನಕ್ಕೇ ಬಂದವರಿರಬೇಕೆಂಬ ಊಹೆ ಸರಿಯೆಂದು ತಿಳಿದು ಹರ್ಷಿಸುತ್ತಾರೆ. ನಾವು ಹಿಂದೂ ತತ್ವಗಳನ್ನು ಓದಿದ್ದೇವೆ ಆದರೆ ಇದೇ ಮೊದಲ ಸಲ ಒಬ್ಬ ಹಿಂದೂ ಸ್ವಾಮಿಯನ್ನು ನೋಡುತ್ತಿರುವುದು ಎಂದು ಅಥಿತಿ ಸತ್ಕಾರದಲ್ಲಿ ತೊಡಗುತ್ತಾರೆ. ಸಮ್ಮೇಳನದಲ್ಲಿ ತಮ್ಮ ಹೆಸರು ನೊಂದಣಿಯಾಗಿಲ್ಲ ಎಂದು ವಿವೇಕಾನಂದರು ಹೇಳಿದಾಗ ಶ್ರೀಮತಿ ಹೇಲ್ ಖುದ್ದಾಗಿ ಅವರನ್ನು ಸಮ್ಮೇಳನದ ಆಡಳಿತ ವರ್ಗದವರೊಂದಿಗೆ ಪರಿಚಯಿಸಿ ಅವರ ಹೆಸರನ್ನು ನೊಂದಾಯಿಸುತ್ತಾರೆ.
ಮರುದಿನ, 11 ಸೆಪ್ಟೆಂಬರ್ ಸಮ್ಮೇಳನದ ಉಧ್ಗಾಟನೆಯ ದಿನದ ಮಧ್ಯಾಹ್ನದ  ಭಾಷಣಕಾರರಾಗಿ ಅರ್ಧ ಗಂಟೆಯ ಅವಧಿಯನ್ನು ಕೊಡಲಾಗಿದೆ ಎಂದೂ ತಿಳಿಸುತ್ತಾರೆ.
ಅಂತೂ ಇಲ್ಲಿವರೆಗೆ ಪಟ್ಟ ಕಷ್ಟವೆಲ್ಲಾ ಸಾರ್ಥಕವಾಯಿತು ಎಂದು ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

11 ಸೆಪ್ಟೆಂಬರ್ ಬೆಳಗ್ಗೆ ವಿವೇಕಾನಂದರನ್ನು ಹೇಲ್ ದಂಪತಿಗಳು ಚಿಕಾಗೋದ ಪ್ರಸಿದ್ಧ Art Palace Auditorium ಕಲಾ ಮಂದಿರಕ್ಕೆ ಕರದುಕೊಂಡು ಹೋಗುತ್ತಾರೆ. ಆಗಲೇ ಸುಮಾರು ಏಳುಸಾವಿರ ಧಾರ್ಮಿಕ ವ್ಯಕ್ತಿ ಗಳ ಸಮಾವೇಷ ನಡದಿರುತ್ತದೆ. ಭಾರತದಿಂದ ಬ್ರಹ್ಮೊ ಸಮಾಜದ P C ಮಜುಂದಾರನ್ನು ಬಿಟ್ಟರೆ ಒಬ್ಬರೂ ಪರಿಚಯವದರಿರುವುದಿಲ್ಲ. ಅಂತಹ ಬೃಹತ್, ವೈವಿಧ್ಯಮಯ ಸಮಾವೇಶವನ್ನು ನೋಡಿ ದಂಗಾಗಿ ಬಿಡುತ್ತಾರೆ.

ಮಧ್ಯಾಹ್ನದ ಸಮಾವೇಶ...ವಿವೇಕಾನಂದರ ಭಾಷಣದ ಸರದಿ, ಅಧ್ಯಕ್ಷ ಜಾನ್ ಬರ್ರೋಸರು ವಿವೇಕಾನಂದರನ್ನು ಸಮಾವೇಶಕ್ಕೆ ಪರಿಚಯಿಸುತ್ತಾರೆ. ಸ್ವಲ್ಪ ಮಟ್ಟದ ಅಧೀರತೆಯಿಂದಲೇ ವೇದಿಕೆಯನ್ನೇರುತ್ತಾರೆ. ನೆರೆದ ಜನಸ್ತೋಮಕ್ಕೆ ತಲೆ ಬಾಗಿಸಿ ಕೈಮುಗಿದು, ಕಣ್ಣು ಮುಚ್ಚಿಕೊಂಡು ದೇವಿ ಸರಸ್ವತಿಯನ್ನು ಸ್ಮರಿಸುತ್ತಾರೆ, ಕಣ್ಣು ತೆರೆದವರೇ..

"ಅಮೇರಿಕಾದ ಸಹೋದರಿಯರೇ..ಸಹೋದರರೇ"

ಕಂಚಿನ ಕಂಠದ ಧ್ವನಿ ಹೊರಡುತ್ತಲೇ...ಸಭೆಯಲ್ಲಿ ವಿದ್ಯುತ್ ಸಂಚಲನವಾಗುತ್ತದೆ. ಏಳುಸಾವಿರ ಜನ ಎದ್ದು ನಿಂತು ಸುಮಾರು ಎರಡು ನಿಮಿಷಗಳ ಕಾಲ ಸತತವಾಗಿ ಗಡಚಿಕ್ಕುವ ಕರತಾಡನ ಮಾಡುತ್ತಾರೆ.  ಕಿಂಚಿತ್ತು ಅಧೀರತೆಯಿಂದ ಬಂದವರಿಗೆ ಇಂತಹ ನಭೂತೋ ನಭವಿಷ್ಯತಿ.. ಸ್ವಾಗತ ಅವರನ್ನು ಅಚಂಭಿತಗೊಳಿಸಿ, ಪ್ರೋತ್ಸಾಹಿಸಿ, ಕಣ ಕಣದಲ್ಲೂ ಚೈತನ್ಯವನ್ನು ಹರಿಸುತ್ತದೆ. ಚಪ್ಪಾಳೆಯ ಸದ್ದಡಗುವುದನ್ನೇ ಕಾಯ್ದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ..

ಸಮಾರಂಭಲ್ಲಿ ನೆರೆದಿದ್ದವರಲ್ಲಿ ಅತಿ ಚಿಕ್ಕವರಾದ ಮೂವತ್ತು ವರ್ಷದ ಈ ವ್ಯಕ್ತಿ ಪ್ರಪಂಚದ ಅತಿ ಪ್ರಾಚೀನ..ಸನಾತನ ಧರ್ಮದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆ.

ಹಾಗೆ ನೋಡಿದರೆ, ಅವರ ಪ್ರಾರಂಭದ ಸಾಲಿನಲ್ಲಿ ಏನು ಅಂತಹ ವಿಷೇಶವೇನೂ ಇರಲಿಲ್ಲ.. ಅಮೆರಿಕದ ಸಹೋದರ, ಸಹೋದರಿಯರೇ..
ಈ ವಾಕ್ಯವನ್ನು ಈಗಲೂ ಅಂದರೆ ಘಟನೆ ನಡೆದ 124 ವರ್ಷಗಳ ನಂತರವೂ ನೆನಸಿಕೊಂಡರೆ ಹೆಮ್ಮೆಯಿಂದ ಎದೆ ಉಬ್ಬುವುದು ಏಕೆ ಎಂದರೆ ಅವರ ವಾಕ್ಯದ ಪ್ರಾಮಾಣಿಕತೆಯಿಂದ. ಧ್ವನಿಯಲ್ಲಿದ್ದ ಉತ್ಕಟತೆ, ಆದರತೆ ಮತ್ತು ಅಪ್ಯಾಯಮಾನತೆಯಿಂದ.

ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಹೆಸರಿಡಿದು ಕರೆಯುವ ವಾಡಿಕೆ ಇರುವ ಆ ನಾಡಿನಲ್ಲಿ ಭಾರತೀಯ ಸಂಸ್ಕಾರವನ್ನು ಪರಿಚಯಿಸಿದ್ದರು. ಅದರಲ್ಲೇ ಇರುವುದು ಕಿವಿ ಗಡಚಿಕ್ಕುವ ಕರತಾಡನದ ವಿಷೇಶತೆ.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

Sunday, November 19, 2017

ದೂರದಿಂದ ಬಂದವರು

ದೂರದಿಂದ ಬಂದವರು

      ನಾವಿಲ್ಲಿಗೆ ಬಂದ ಹೊಸತರಲ್ಲಿ ನಮ್ಮನ್ನು ಹಾಗೇ ಕರೆಯುತ್ತಿದ್ದವರು...ದೂರದಿಂದ ಬಂದವರು. 

ತೀರ್ಥಹಳ್ಳಿಯ ಸಮೀಪದ ಕ್ಷೇಮಾಪುರದಿಂದ ವಿಜಯನಗರಕ್ಕೆ ಕಾಲುನಡಿಗೆಯಿಂದ ಬಂದವರಿಗೆ... ದೂರವೇ

‘ಸರಸ್ವತೀ..ಹೊರಡು ವಿಜಯನಗರಕ್ಕೆ ಹೋಗೋಣ, ಅಲ್ಲಿ ಸಂಗೀತದ ಮೂಲಕ ಶ್ರೀಹರಿಯ ಸೇವೆ ಮಾಡೋಣ ಎಂದಾಗ, ಸಂತೋಷದಿಂದ ನಾನೂ ಮಕ್ಕಳೊಂದಿಗೆ ಹೊರಟೇಬಿಟ್ಟೆ.
 ಇವರು ಶ್ರೀನಿವಾಸ ನಾಯಕರಾಗಿದ್ದಾಗ, ವಜ್ರದ ವ್ಯಾಪಾರಕ್ಕೆ ಬರುತ್ತಿದ್ದಾಗ ವಿಜಯನಗರದಲ್ಲಿ ಇವರ ಸಿರಿತನಕ್ಕೆ ತಕ್ಕಂತೆ ರಾಜಮರ್ಯಾದೆ ಸಿಗುತ್ತಿತ್ತಂತೆ. ಇವರು ನವಕೋಟಿ ನಾರಾಯಣರಾಗಿದ್ದುದೂ ಇಲ್ಲಿಂದಲೇ ತಾನೇ.

      ಕೃಷ್ಣದೇವರಾಯರ ಪಟ್ಟಾಭಿಷೇಕ ನಡೆದಾಗ ರಾಜ್ಯದ ಪರಿಸ್ಥಿತಿ ಇನ್ನೂ ಅತಂತ್ರದಲ್ಲಿತ್ತಂತೆ. ಒಳದಂಗೆ, ಉತ್ತರಕ್ಕೆ ಬಹಮನಿ ಮುಸ್ಲೀಮರ ಕಾಟ, ಖಾಲಿಯಾದ ಖಜಾನೆ, ಸಂಬಳವಿಲ್ಲದೆ ಅಧೀರರಾಗಿದ್ದ ಸೈನಿಕರು. ಪಟ್ಟಾಭಿಷೇಕ ಮಾಡಲೇ ಬೇಕಾದ ಅನಿವಾರ್ಯತೆ..ಹೊಂಚುಹಾಕುತ್ತಿದ್ದ   ಶತ್ರುಗಳಿಂದ ರಾಜ್ಯವನ್ನು ಉಳಿಸಿಕೊಳ್ಳಲು….ಎಂದೆಲ್ಲಾ ವಿಜಯನಗರದ ಪರಿಸ್ಥಿತಿಯನ್ನು ವಿವರಿಸುತ್ತಲೇ ಬಂದರು ಹಾದಿ ಉದ್ದಕ್ಕೂ.
       ಕೃಷ್ಣದೇವರ ಹೆಸರು ಹೇಳುತ್ತಲೇ ಇವರಿಗೆ ಎಲ್ಲಿಲ್ಲದ ಉತ್ಸಾಹ..
      'ಸರಸ್ವತಿ.. ಅಂತಹ ಎದೆಗಾರನನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ' ಎಂದು ಅವರ ಸಾಹಸ, ಶೌರ್ಯಗಳ ವೃತ್ತಾಂತವನ್ನೇ ಬಿಚ್ಚಿಡುತ್ತಿದ್ದರು. 

ಕೃಷ್ಣದೇವರಾಯರ ಮೊದಲ ಆದ್ಯತೆ ಒಂದು ಒಳ್ಳೆಯ ಸೈನ್ಯಕಟ್ಟಬೇಕು, ಸೈನಿಕರ ತರಬೇತಿಗೆ, ಅರಬ್ಬೀ ದೇಶದ ಕುದುರೆಗಳನ್ನು, ದಕ್ಷಿಣದಿಂದ ಆನೆಗಳನ್ನು ತರಲು ಹಣದ ಕೊರತೆಯಿದ್ದಾಗ ನಮ್ಮವರಿಂದ ಆರ್ಥಿಕ ಸಹಾಯ ಪಡೆದರಂತೆ.ಸಹಾಯ ಉಹುಂ, ಇವರದು ಸಹಾಯಮಾಡುವ ಜಾಯಮಾನವೇ ಅಲ್ಲ..ಆಗ, ಶ್ರೀನಿವಾಸ ನಾಯಕರಾಗಿದ್ದಾಗ.., ಶುಧ್ಧ ವ್ಯವಹಾರದ ಲೆಕ್ಕಾಚಾರ.ಕೃಷ್ಣರಾಯರಿಂದಲೇ ಮುಂದೆ ವಿಜಯನಗರದ ಸಂಪತ್ತು ವೃಧ್ಧಿಸಲಿದೆ ಎನ್ನುವ ಬಲವಾದ ನಂಬಿಕೆ ಮತ್ತು ಆಗ ಬರಬಹುದಾದ ಇಮ್ಮಡಿ, ಮುಮ್ಮಡಿ ಗಾತ್ರದ ಲಾಭದ ಆಸೆ. ಅದು ಹಾಗೇ ಆಯಿತು ಕೂಡ. 'ಕುದುರೆ ಶೆಟ್ಟರು' ಎನ್ನುವ ವ್ಯಾಪಾರಿಗಳ ಗುಂಪಿಗೆ ಧಾರಾಳವಾಗಿ ಸಾಲ ಕೊಟ್ಟರಂತೆ. ಇವರು ಅರಬ್ಬೀ ದೇಶದಿಂದ ಕುದುರೆಗಳನ್ನು ತರಿಸಿ ವಿಜಯನಗರದ ಸೈನ್ಯಕ್ಕೆ ಕೊಡುತ್ತಿದ್ದರಂತೆ. ಮುಂದಿನ ಯುಧ್ಧಕ್ಕೆ ಸೈನ್ಯ ಸನ್ನಧ್ಧವಾಗಿದ್ದೇ ತಡ ಸಾಮ್ರಾಜ್ಯ ವಿಸ್ತರಣೆಯ ಪ್ರಕ್ರಿಯೆ ಶುರು. ಕೃಷ್ಣದೇವರಾಯರೇ ಮಂಚೂಣಿಯಲ್ಲಿ ನಿಂತು ವೀರಾವೇಷದಿಂದ ಕಾದಾಡಿ ಆ ಪ್ರಾಂತ್ಯದ ರಾಜರನ್ನು ಸೋಲಿಸಿ ಅಲ್ಲಿಯ ಸಂಪತ್ತನ್ನು ವಿಜಯನಗರದ ಬೊಕ್ಕಸಕ್ಕೆ ತುಂಬಿಸಿಬಿಟ್ಟಿರುತ್ತಿದ್ದರಂತೆ. ತೀರ್ಥಹಳ್ಳಿಯಿಂದ ಮುಂದಿನ ಸಲ ವಜ್ರದ ವ್ಯಾಪಾರಕ್ಕೆ ಹೋದಾಗ ಇಮ್ಮಡಿ ಗಾತ್ರದ ಧನರಾಶಿ ಇವರಿಗೆ ಖುದ್ದಾಗಿ ಕೃಷ್ಣದೇವರಾಯರೇ ಒಪ್ಪಿಸುತ್ತಿದ್ದರಂತೆ.

      ಅದೆಲ್ಲಾ ತುಂಬಾ ಹಳೆಯ ವಿಷಯ....'ನನ್ನ ಮೂಗುತಿಯ ಪ್ರಸಂಗದ' ನಂತರ ನಡೆದ ಘಟನಾವಳಿಗಳು ಜಗಜ್ಜಾಹೀರಾದ ಸಂಗತಿ. ಅದನ್ನೆಲ್ಲಾ ಇಲ್ಲೇನು ಹೇಳುವುದು? ಅದನ್ನೆಲ್ಲಾ ಬಿಚ್ಚುತ್ತಾ ಹೋದರೆ ವಿಜಯನಗರದ ವೃತ್ತಾಂತವೇ ಮರೆತು ಹೋಗುತ್ತದೇನೋ.

“ಆದದ್ದೆಲ್ಲಾ ಒಳಿತೇ ಆಯಿತು “..ಎಂದು ಎಂದು ಮೊಟ್ಟ ಮೊದಲಿಗೆ ಹಾಡಲು ಶುರು ಮಾಡಿಕೊಂಡಾಗ ನನಗೇ ಆಶ್ಚರ್ಯವಾಯಿತು...ಯಾರಾದರೂ ಈ ಹಂತಕ್ಕೆ ಬದಲಾಗುವುದು ಸಾಧ್ಯವೇ ಅಂತ.
ಇವರು ಇರುವುದೇ ಹಾಗೇ, ಏನು ಮಾಡಿದರೂ ಒಂದು ಹುಚ್ಚು,ತೀವ್ರತೆ ಮತ್ತು ಆಸ್ಥೆಯಿಂದ ಮಾಡುತ್ತಾರೆ. ವಜ್ರದ ವ್ಯಾಪಾರದಲ್ಲಿ, ಲೇವಾದೇವಿ ವ್ಯವಹಾರದಲ್ಲಿ  ಕೋಟಿ ಕೋಟಿ ಗಳಿಸಿದರು. ಆದರೆ ಇದಲ್ಲಾ ನಶ್ವರ..ಆ ಹರಿಯೇ ಎಲ್ಲಾ ಅಂದೆನಿಸಿದ ಕೂಡಲೇ ಕಿಂಚಿತ್ತೂ ಯೋಚಿಸದೆ ಎಲ್ಲವನ್ನೂ ತ್ಯಜಿಸಿ ಭಕ್ತಿಯಸಾಗರದಲ್ಲಿ ಮುಳುಗಿ ಹೋದರು.
      ಸದ್ಯ ಅಂತೂ ಇಲ್ಲಿಗೆ ಬಂದು ತಲುಪಿದೆವು. ಕೃಷ್ಣದೇವರಾಯರನ್ನು ಭೇಟಿ ಮಾಡಿದಾಗ ದೇವರಾಯರಿಗೆ ಎಲ್ಲಿಲ್ಲದ ಆಶ್ಚರ್ಯ 'ಏನು ಶ್ರೀನಿವಾಸ ನಾಯಕರೇ..ನನಗೇ ಸಾಲ ಕೊಡುವಷ್ಟು ಶ್ರೀಮಂತರಾಗಿದ್ದವರು ಎಲ್ಲವನ್ನೂ ತ್ಯಾಗಮಾಡಿ ಇದೇನು ಅವತಾರ?' ಎಂದಾಗ 'ನಿಮಗೆ ಬೇಕಾಗಿರುವುದು ರಾಜ್ಯ, ನನಗೆ ಹರಿ ಸ್ಮರಣೆಯಷ್ಟೇ ಸಾಕು..' ಎಂದುಬಿಡೋದೇ!
      ಮುಂದೆ ತಿರುಪತಿಯಿಂದ ವ್ಯಾಸತೀರ್ಥರನ್ನು ಮಹಾರಾಜರೇ ಕರೆದುಕೊಂಡು ಬಂದು 'ರಾಜಗುರು' ಪಟ್ಟವನ್ನಲಂಕರಿಸಲು ಮನವಿಮಾಡಿಕೊಂಡ ಮೇಲೆ ವ್ಯಾಸರು ಮಾಡಿದ ಮೊದಲ ಕಾರ್ಯವೆಂದರೆ ಇವರಿಗೆ 'ಪುರಂದರ ದಾಸ' ಎಂದು ದೀಕ್ಷೆ ಕೊಡಿಸಿದ್ದು.

 ನವರಾತ್ರಿಯ ಸಮಾರಂಭವನ್ನು ವಿದೇಶಗಳಲ್ಲೆಲ್ಲಾ ವರ್ಣಿಸಲಾಗಿದೆಯಂತೆ. ಅಂತಹ ಅಧ್ಭುತ ಅನುಭವದ ಮಧ್ಯದಲ್ಲೇ ಒಂದು ನವರಾತ್ರಿಯ ಸಮಾರಂಭದಂದು ನಮಗೇ ಎಂದು  'ಪುರಂದರ ಮಂಟಪ' ದ ಉಧ್ಘಾಟನೆಯಾಯಿತು. ತುಂಬಿ ಹರಿಯುತ್ತಿದ್ದ ತುಂಗಾನದಿಯ ತೀರದ ಪ್ರಶಾಂತವಾದ ವಾತಾವರಣದಲ್ಲಿ ಕಟ್ಟಿಸಿದ ಈ ವಿಶಾಲವಾದ ಮಂಟಪದಿಂದ ಎತ್ತ ನೋಡಿದರೂ ಪೃಕೃತಿಯ ವೈಭವ, ದೇವಸ್ಥಾನಗಳ ಗೋಪುರಗಳು, ಜುಳು ಜುಳು ಶಬ್ದದೊಂದಿಗೆ ಬೆರೆತು ಹೋಗುತ್ತಿದ್ದ ಹಕ್ಕಿಗಳ ಕಲರವ.
ಭಕ್ತಿ ಸಂಗೀತ ಅವಿರತವಾಗಿ ಹರಿಯಲು ಪ್ರಶಸ್ತ ಸ್ಥಳ.

ಅಂದಿನಿಂದ ಅಲ್ಲೇ ನಮ್ಮವಾಸ. ಅಲ್ಲಿಗೆ ಕನಕದಾಸರೂ ನಿಯಮಿತವಾಗಿ ಬರಲು ಪ್ರಾರಂಭಿಸಿದ ಮೇಲಂತೂ ಅದು ಭಕ್ತಿಯ ಕೇಂದ್ರವಾಯಿತು, ಹರಿಭಜನೆಯ ಬೀಡಾಯಿತು. ಕೆಲವು ಸಲ ಕೃಷ್ಣದೇವರಾಯರೂ ಇದರಲ್ಲಿ ಭಾಗವಹಿಸುತ್ತಿದ್ದರು. ದಕ್ಷಿಣದ ತುದಿಯಿಂದ ಕೃಷ್ಣ ಗೋದಾವರಿಗಳನ್ನು ದಾಟಿ ಕಳಿಂಗದ ದೇಶದ ವರೆಗೂ ಹರಡಿರುವ ಸಾಮ್ರಾಜ್ಯದ ಅಧಿಪತಿ...ಪುರಂದರ ಮಂಟಪದಲ್ಲಿ ಒಬ್ಬ ಸಾಮಾನ್ಯ ಭಕ್ತರಂತೆ ಕುಳಿತು ಇವರ ಗಾನಸುಧೆಯಲ್ಲಿ ಮಿಂದು ಹೋಗುತ್ತಿದ್ದರು.
      'ಕನ್ನಡ ರಾಜ್ಯ ರಮಾರಮಣ' ಬಿರುದು ಪಡೆದ ಅಪ್ರತಿಮ ವೀರನನ್ನೂ ಭಕ್ತಿಯ ಹೊಳೆಯಲ್ಲಿ ಮೀಯಿಸಿ ಬಿಡುತ್ತಿದ್ದವು ಪುರಂದರ ದಾಸರ ಕೀರ್ತನೆಗಳು.     

ಕಾಲಚಕ್ರ...ಉರುಳುತ್ತಾ ಮುಂದೊಂದು ದಿನ ವಿಜಯ ವಿಠ್ಠಲನ ಮೂರುತಿಯನ್ನು ಇದೇ ಮಂಟಪದಲ್ಲಿ ರಕ್ಷಿಸುವ ದುರ್ವಿದಿಯೂ ಬಂದೆರಗಿತು. ಕೃತಜ್ಞತಾ ಭಾವದಿಂದ ವಿಠ್ಠಲನ ಆರಾಧಕರಿಗೆ ಅರ್ಪಪಿಸಿದ ಈ ಮಂಟಪವೇ ವಿಠ್ಠಲ ಮೂರುತಿಗೆ ಆಸರೆಯಾಯಿತು..

ದೂರದಿಂದ ಬಂದಿದ್ದಕ್ಕೂ ಸಾರ್ಥಕವಾಯಿತು.

ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಷೇಶ ಅಶ್ವಾರೂಢರ ದಳವಿತ್ತು.   ಸೈನ್ಯಾದಿಕಾರಿಗಳ,  ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ,ಮಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ.

ಮೊದಲನೆ ವಿಶ್ವಯುಧ್ಧದ ಅಲೆಯಾಗಲೇ ಎದ್ದಾಗಿತ್ತು. ಯೂರೋಪಿನ, ಆಫ್ರಿಕಾದೆಲ್ಲೆಡೆ ಸೈನ್ಯದ ಜಮಾವಣೆ ಭರದಿಂದ ಸಾಗುತ್ತಿತ್ತು. ಇದೇ ಸಮಯದಲ್ಲಿ ಬ್ರಿಟಿಷರು ಮೈಸೂರಿನ ಅಶ್ವಾರೂಢರೊಂದಿಗೆ, ಜೋಧಪುರ ಮತ್ತು ಹೈದರಾಬಾದಿನ ಅಶ್ವಾರೂಢರನ್ನು ಸೇರಿಸಿ ಮೇಜರ್ ದಲಪತ್ ಸಿಂಗ್ ಶೆಖಾವತ್ತರ ನೇತೃತ್ವದಲ್ಲಿ 33 ಹಡಗುಗಳಲ್ಲಿ ಭಾರತದ ಅಶ್ವಾರೂಢ ದಳವನ್ನು ಈಜಿಪ್ಟಿಗೆ ರವಾನಿಸಿ ಬಿಡುತ್ತಾರೆ.

ಈಜಿಪ್ಟಿನ ಸೂಯೆಜ್ ಕಾಲುವೆ ಅತ್ಯಂತ ಮಹತ್ತರ ಜಲಸಂಪರ್ಕದ ಕೊಂಡಿ. ಅದಕ್ಕೆ ನಿರಂತರ ರಕ್ಷಣೆ ನೀಡಲು ಮೈಸೂರಿನ ಆ ಅಶ್ವದಳದ ಸೇನೆಯನ್ನು ನಿಯೋಜಿಸಲಾಗಿತ್ತು. ಸುಮಾರು ಮೂರು ವರ್ಷಗಳ ಯಶಸ್ವೀ ಕಾರ್ಯ ನಿರ್ವಹಿಸಿದ ಈ ಮೈಸೂರಿನ ತಂಡಕ್ಕೆ
1918 ರ ಸೆಪ್ಟೆಂಬರಿನಲ್ಲಿ ಇನ್ನೊಂದು ಮಹತ್ತರ ಕಾರ್ಯಾಚರಣೆಯನ್ನು ವಹಿಸಲಾಗಿತ್ತು. ಅದೇ "ಹೈಫಾ" ಬಂದರನ್ನು ತುರುಕರಿಂದ ವಶಪಡಿಸಿಕೊಳ್ಳುವುದು.

ಸುಮಾರು 400 ವರ್ಷಗಳಿಂದ ತುರ್ಕಿಯ  ಒಟ್ಟೊಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಈ ಮುಖ್ಯ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರ ಕದನತಂತ್ರದ ಬಹು ಮುಖ್ಯವಾದ ಅಂಗವಾಗಿತ್ತು . ಹೈಫಾ ಬಂದರಿನ ಭೌಗೋಳಿಕ ಪ್ರಾಮುಖ್ಯತೆಯನ್ನರಿತಿದ್ದ ಜರ್ಮನರು ಮತ್ತು ತುರುಕರು ಅಲ್ಲಿ ರಕ್ಷಣಾಪಡೆಗಳ ಕೋಟೆಯನ್ನೇ ನಿರ್ಮಿಸಿದ್ದರು. ಒಂದು ಕಡೆ ನದಿ, ಗುಡ್ಡಗಳ ಸಾಲು ಮತ್ತು ಪಶ್ಚಿಮಕ್ಕೆ ಸಮುದ್ರ. ಬೆಟ್ಟಗಳ ಮೇಲೆ ನೆಲೆಸಿದ್ದ ತುರುಕರ  ಸೈನ್ಯ  ಮತ್ತು ಜರ್ಮನರ ಮಷೀನು ಗನ್ನುಗಳು ನಾಲ್ಕೂಕಡೆ ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದರು, ಹಾಗಾಗಿ ಈ ಬಂದರನ್ನು ವಶಪಡಿಸುವುದಿರಲಿ ಒಬ್ಬಬ್ಬರಾಗಿ ಪ್ರವೇಶಿಸುವದೂ ಕಷ್ಟಸಾಧ್ಯವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಮಷೀನು ಗನ್ನುಗಳ ಪೋಸ್ಟ್, ಮತ್ತು ಮದ್ದು ಗುಂಡುಗಳ ಉಗ್ರಾಣಗಳನ್ನು ನಿರ್ಮಿಸಲಾಗಿತ್ತು.

ಬ್ರಿಟಿಷರು ಇನ್ನೇನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಮೇಜರ್ ದಲಪತ್ ಶೆಖಾವತ್ತರು ತಮ್ಮ ಯುಧ್ಧತಂತ್ರವನ್ನು ಜನರಲ್ ಗಳಿಗೆ ವಿವರಿಸುತ್ತಾರೆ. ಅದರಂತೆ ಅಶ್ವರೂಢರ ಒಂದು ಪಡೆ 'ಮೌಂಟ್ ಕಾರ್ಮೆಲ್ಲ್' ಒಂದು ಗುಡ್ಡವನ್ನು ಕ್ಷಿಪ್ರವಾಗಿ ಹಿಂದಿನಿಂದ ಹತ್ತಿ ಅಲ್ಲಿಯ ಮಷೀನು ಗನ್ನುಗಳನ್ನು ವಶಪಡಿಸಿ ಕೊಳ್ಳುವುದು. ಬೆಟ್ಟದ ಮೇಲಿನ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಸಿಗ್ನಲ್ ಸಿಗುತ್ತಿದ್ದಂತೇ ಮೈಸೂರಿನ ಅಶ್ವಾರೂಢ ಪಡೆ  ನಗರದ ಮುಖ್ಯದ್ವಾರದಿಂದ ಮಿಂಚಿನಂತೆ ನಾಗಾಲೋಟನಡೆಸಿ ಅಲ್ಲಿಯ ಸೈನಿಕರ ಮೇಲೆ ಹಲ್ಲೆ ನಡೆಸುವುದು.  ಅಶ್ವರೂಢ ಸೈನಿಕರು ಬರೀ ಭರ್ಚಿ ಮತ್ತು ಖಡ್ಗಗಳೊಂದಿಗೆ ಮಷೀನು ಗನ್ನುಗಳ ವಿರುದ್ಧದ ಸಮರ !
23 ಸೆಪ್ಟಂಬರ್ ಪೂರ್ವ ನಿಯೋಜಿತ ತಂತ್ರದಂತೆ ಅಶ್ವಾರೂಢರ ಮಿಂಚಿನ ದಾಳಿ ನಡೆದೇ ಬಿಟ್ಟಿತು. ಕುದುರೆಗಳ ನಾಗಾಲೋಟದ ಈ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ತುರುಕರ ಮತ್ತು ಜರ್ಮನರ ಸೈನಿಕರು ಮಷೀನು ಗನ್ನುಗಳ ದಾಳಿ ನಡೆಸಿದರೂ, ನಿರಂತರವಾಗಿ ಬರುತ್ತಿದ್ದ ಕುದುರೆ ಪಡೆಗಳನ್ನು ನೋಡಿ ಓಡಲು ಶುರುಮಾಡಿದರು.
ಕೆಲವೇ ಘಂಟೆಗಳಲ್ಲಿ ಹೈಫಾ ಬಂದರು ನಗರ ಬ್ರಿಟಿಷರ ವಶವಾಯಿತು. ಮುಂದೆ 1948 ರಲ್ಲಿ ಇಸ್ರೇಲಿನ ಸ್ಥಾಪನೆಯಾದನಂತರ ಇಸ್ರೇಲಿನ ಪ್ರಮುಖ ಬಂದರು ನಗರವಾಯಿತು. ಈ ಕಾರ್ಯಾಚರಣೆಯಲ್ಲಿ ಮೇಜರ್ ದಲಪತ್ ಶೆಖಾವತ್ತರು ವೀರಮರಣವನ್ನಪ್ಪಿದರು. ಮೈಸೂರಿನ ಹಲವಾರು ಅಶ್ವಾರೋಹಿ ಸೈನಿಕರೂ ಸಹ ಹತವಾದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಸ್ರೇಲಿನ ಭೇಟಿಯ ಸಮಯದಲ್ಲಿ ಈ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು.
ಇಸ್ರೇಲಿನ ಪಠ್ಯ ಪುಸ್ತಕಗಳಲ್ಲಿ ಈ ವೀರಗಾಥೆಯನ್ನು ಇಲ್ಲಿಯ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.

ಇಸ್ರೇಲಿನ ಸರ್ಕಾರ ಈಗ ಈ ಮೈಸೂರಿನ ಸಾಹಸೀ ಅಶ್ವಾರೂಢರ ಗೌರವಾರ್ಥವಾಗಿ ಸ್ಟ್ಯಾಂಪೊಂದನ್ನೃ ಬಿಡುಗಡೆ ಮಾಡಿದ್ದಾರೆ.

ಇಸ್ರೇಲಿನಂತಹ ವೀರರ ನಾಡಿನಲ್ಲಿ ನಮ್ಮ ನಾಡಿನ ಶೂರರೂ ಪ್ರದರ್ಶಿಸಿದ ಪರಾಕ್ರಮ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ?

✍....ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com