Wednesday, March 29, 2017

ಕುದುರೆ ಶೆಟ್ಟರು

         
 
             ಆಗಿನ್ನೂ ಕೃಷ್ಣದೇವರಾಯರ ಪಟ್ಟಾಭಿಷೇಕವಾಗಿರಲಿಲ್ಲ. ನಮ್ಮ ತಂದೆಯವರು ವಿಜಯನಗರದಿಂದ ಭಟ್ಕಳಕ್ಕೆ  ಮೊದಲ ಸಲ ನನ್ನನ್ನು ಕರೆದುಕೊಂಡು ಹೋಗಿದ್ದರು. ಒಂದು ತಿಂಗಳು ಭಟ್ಕಳದಲ್ಲಿದ್ದು ಅಲ್ಲಿಯ ಕುದುರೆ ವ್ಯಾಪಾರಿಗಳಿಗೆ ಪರಿಚಯಿಸಿದರು. ಅಲ್ಲಿಂದ ಹೊನ್ನಾವರ, ಅಂಕೋಲ ಮತ್ತು ಗೋವಾಕ್ಕೆ ಪ್ರಯಾಣಿಸುತ್ತಾ ಇನ್ನೊಂದು ತಿಂಗಳು ಕಳೆಯಿತು.
    ಮೂಲತಃ ನಾವು ವಿಜಯನಗರದಲ್ಲಿ ಸಾಂಬಾರ ದಿನಸಿಗಳ ವ್ಯಾಪಾರ ಮಾಡುತ್ತಿದ್ದೆವು. ಸುತ್ತ ಮುತ್ತಲಿನ ಪ್ರದೇಶಗಳಿಂದ ಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗಗಳನ್ನೆಲ್ಲಾ ಸಂಗ್ರಹಿಸಿ ಭಟ್ಕಳಕ್ಕೆ ಸಾಗಿಸಿ ಅಲ್ಲಿಯ ಮಾಪಿಳ್ಳರ ಮುಖಾಂತರ ಅರಬ್ಬೀ ದೇಶದ ಮತ್ತು ಪೋರ್ಚುಗೀಸಿನ ವರ್ತಕರಿಗೆ ಮಾರಾಟ ಮಾಡುತ್ತಿದ್ದೆವು. ಸಂಪಾದನೆಯೇನೋ ಚೆನ್ನಾಗೇ ಇತ್ತು. ನಮ್ಮ ತಂದೆ ರಾಮಲಿಂಗ ಶೆಟ್ಟರು ವ್ಯಾಪಾರ ವಲಯದಲ್ಲಿ ನಂಬಿಕಸ್ಥ ಮರ್ಯಾದಸ್ಥ, ಯಾರಿಗೂ ಮೋಸಮಾಡುವವರಲ್ಲ ಎನ್ನುವ ಹೆಸರು ಗಳಿಸಿದ್ದರು. ಆಗ ಒಂದು ಅಂದಾಜಿನ ಪ್ರಕಾರ ಸುಮಾರು ಇನ್ನೂರಕ್ಕೂ ಹೆಚ್ಚು ಬಂದರುಗಳಿದ್ದವಂತೆ ವಿಜಯನಗರ ಸಾಮ್ರಾಜ್ಯದಲ್ಲಿ. ಈ ಬಂದರುಗಳಲ್ಲಿ ಮಾಪಿಳ್ಳರದೇ ಮೇಲುಗೈ. ಇವರಲ್ಲಿ ಎರಡು ತರಹದ ಮಾಪಿಳ್ಳರಿದ್ದಾರೆ. ತಲತಲಾಂತರದಿಂದಲೂ ಅರಬ್ ವ್ಯಾಪಾರಿಗಳಿಗೆ ದುಬಾಷಿಗಳಾಗಿ, ದಲಾಲಿಗಳಾಗಿ ವ್ಯವಹರಿಸುತ್ತಿದ್ದ ಮುಸ್ಲೀಮ್ ಮಾಪಿಳ್ಳರು. ಇತ್ತೀಚಿಗೆ ಮತಾಂತರಗೊಂಡ ಕ್ರಿಶ್ಚಿಯನ್ ಮಾಪಿಳ್ಳರು. ಇವರನ್ನು ನಸರಾಣಿ ಮಾಪಿಳ್ಳರೂ ಅಂತಲೂ ಕರೆಯುತ್ತಾರೆ. ಈ ನಸರಾಣಿ ಮಾಪಿಳ್ಳರು ಪೋರ್ಚುಗೀಸರಿಗೆ ಹತ್ತಿರವಾದರು.
   
       ವಿಜಯನಗರ ಸಾಮ್ರಾಜ್ಯದ ಬಂದರುಗಳಲ್ಲಿ ಅತಿ ಹೆಚ್ಚು ಲಾಭದ ವ್ಯವಹಾರವೆಂದರೆ ಅರಬ್ಬೀದೇಶದ ಮತ್ತು ಯೂರೋಪಿನ ಹಲವಾರು ದೇಶಗಳಿಂದ ಬರುತ್ತಿದ್ದ ಕುದುರೆಗಳ ಮಾರಾಟ. ಇದರಲ್ಲಿ ಹೂಡಿಕೆಯೂ ದೊಡ್ಡ ಮೊತ್ತದಲ್ಲಿರುತ್ತದೆ ಹಾಗಾಗಿ ಸಣ್ಣಪುಟ್ಟ ವ್ಯಾಪಾರಿಗಳು ಇದಕ್ಕೆ ಕೈಹಾಕುವುದಕ್ಕೆ ಹೆದರುತ್ತಾರೆ.
         
           ನಮ್ಮ ತಾತನವರು 'ನಾನು ಕುದುರೆ ವ್ಯಾಪಾರ ಮಾಡುತ್ತೇನೆ' ಎಂದು ಹೇಳಿದಾಗ ಇಡೀ ಕುಟುಂಬವೇ ವಿರೋದಿಸಿದರಂತೆ. ಮೊಟ್ಟಮೊದಲ ಹೆದರಿಕೆ ಎಂದರೆ ಈ ವ್ಯವಹಾರದಲ್ಲಿ ಪ್ರವೇಶಿಸಿದವರನ್ನು ಮತಾಂತರ ಮಾಡುತ್ತಾರೆಂಬ ಮಾತು. ಕುದುರೆ ವ್ಯಾಪಾರ ಅರಬರ ಜೊತೆ ಮಾಡಬೇಕು ಎಂದರೆ ಮುಸ್ಲೀಮ್ ಮಾಪಿಳ್ಳನಾಗಿರಬೇಕು ಇಲ್ಲಾ ಪೋರ್ಚುಗೀಸರೊಂದಿಗೆ ವ್ಯವಹರಿಸಲು ನಸರಾಣಿ ಮಾಪಿಳ್ಳನಾಗಿರಬೇಕು. ಆದರೆ ನಮ್ಮ ತಾತನವರು ಮಾತ್ರ ಆಗಲೇ ಧೃಡನಿಶ್ಚಯ ಮಾಡಿಯಾಗಿತ್ತು...ಮತಾಂತರಕ್ಕೊಳಗಾಗದೆ ವ್ಯಾಪಾರ ಮಾಡುತ್ತೇನೆಂದು ಆಶ್ವಾಸನೆ ಕೊಟ್ಟರು. ಕುದುರೆ ವ್ಯಾಪಾರ ಅಷ್ಟು ಲಾಭದಾಯಕವಾಗಿತ್ತು. ಕುದುರೆಗಳ ಖರೀದಿಗೆ ಮುಂಗಡವಾಗಿ ಹಣಪಾವತಿ ಮಾಡಬೇಕು ಮತ್ತು ಕುದುರೆಗಳು ಬಂದಮೇಲೆ ಅಂದಿನ ಪರಿಸ್ಥಿತಿಗೆ ತಕ್ಕಂತೆ ಖರೀದಿದಾರಗೆ ಮಾರಬೇಕು. ಕೆಲವೊಮ್ಮೆ ಹೂಡಿಕೆಗಿಂತ ನಾಲ್ಕುಪಟ್ಟು ಲಾಭವಾಗುತ್ತಿತ್ತು ಮತ್ತೆ ಕೆಲವೊಮ್ಮೆ ಹೂಡಿಕೆಯ ಹಣವೂ ದಕ್ಕುತ್ತಿರಲಿಲ್ಲ.  ಕುದುರೆಗಳ ಮಾರಾಟ ರಾಜಕೀಯ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.
   
         ಕೃಷ್ಣದೇವರಾಯರ ಪಟ್ಟಾಭಿಷೇಕವಾದ ಮೇಲೆ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಗೋವಾದ ಬಂದರಿಗೆ ಬಂದಿಳಿದ ಕುದುರೆಗಳನ್ನು ಬಹಮನಿ ಸುಲ್ತಾನರ ಕಡೆಗೆ ಹೋಗದ ಹಾಗೆ ನೋಡಿಕೊಳ್ಳುವುದು ಮತ್ತು ಆ ಎಲ್ಲಾ ಕುದುರೆಗಳೂ ವಿಜಯನಗರದ ಸೈನ್ಯಕ್ಕೆ ಸೇರುವ ವ್ಯವಸ್ಥೆಯಾಗುವಂತೆ ಪೋರ್ಚುಗೀಸರ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಪೋರ್ಚುಗೀಸರಿಗೂ ಇವರ ಸೈನ್ಯದ ನೆರವು ಬೇಕಿತ್ತು ಹಾಗಾಗಿ ಒಂದು ಸಮತೂಲವಾದ ಒಪ್ಪಂದ ಮಾಡಿಕೊಂಡರು.
    ಧರ್ಮಭೀರುವಾದ ಕೃಷ್ಣದೇವರಿಗೆ ಚೆನ್ನಾಗಿ ಅರಿವಿತ್ತು ಪೋರ್ಚುಗೀಸರ ಹುನ್ನಾರ...ಇವರು ಬರೀ ವ್ಯಾಪಾರಕ್ಕೆಂದು ಬಂದವರಲ್ಲ. ಒಂದು ಕೈಯಲ್ಲಿ ಶಿಲುಬೆ ಒಂದು ಕೈಯಲ್ಲಿ ಖಡ್ಗ ಹಿಡಿದುಕೊಂಡೇ ಗೋವಾಕ್ಕೆ ಪ್ರವೇಶಿಸಿದ ಇವರು ಹಿಂದೂಗಳ ಮೇಲೆ ನಡೆಸಿದ ಮತಾಂತರ, ದೌರ್ಜನ್ಯದ ಬಗ್ಗೆ ಮಾಹಿತಿಯಿತ್ತು. ಆದರೆ ಗೋವಾದಲ್ಲಿ ಬಹಮನಿ ಸುಲ್ತಾನರನ್ನು ಸೋಲಿಸಿದ ಪೋರ್ಚುಗೀಸರು...ಶತ್ರುಗಳ ಶತ್ರುಗಳು..ಸದ್ಯಕ್ಕೆ ಮಿತ್ರರು!
        
ಪೋರ್ಚುಗೀಸರೊಂದಿಗೆ ವ್ಯವಹರಿಸಲು ಭಟ್ಕಳದ ಸಾಮಂತ ತಿಮ್ಮಯ್ಯನವರಿಗೆ ಸಂಪೂರ್ಣ ಸ್ವಾತಂತ್ರ ಕೊಟ್ಟುಬಿಟ್ಟಿದ್ದರು. ಅವರ ಪೂರ್ಣ ಗಮನ ಒಂದು ಬೃಹತ್ ಸೈನ್ಯವನ್ನು ಕಟ್ಟುವುದರ ಕಡೆಗೆ ಕೇಂದ್ರೀಕೃತವಾಗಿತ್ತು.
  
        ವಿಜಯನಗರದಲ್ಲಿ ನಡೆಯುತ್ತಿರುವ ಹಾಗುಹೋಗುಗಳ ಬಗ್ಗೆ ನಿಗಾ ಇಡಲು ಪೋರ್ಚುಗೀಸರು ಲೂಯಿಸ್ ಎನ್ನುವ ರಾಯಭಾರಿಯನ್ನು ಕಳುಹಿಸಿದ್ದರು ಆದರೆ ಕೆಲವು ತಿಂಗಳುಗಳಲ್ಲಿ ಇವರು ಅನುಮಾನಾಸ್ಪದ ಸಂದರ್ಭದಲ್ಲಿ ಹತರಾದರು. ಮುಸ್ಲೀಮರ ಯುವಕನೊಬ್ಬ ಇವರನ್ನು ಹತ್ಯೆಗೈದು ತಪ್ಪಿಸಿಕೊಂಡು ಓಡಿಹೋಗಿದ್ದಾನೆಂಬ ಮಾಹಿತಿ ಗೋವಾಕ್ಕೆ ಮುಟ್ಟಿಸಲಾಯಿತು. ಆದರೆ ನಡೆದಿದ್ದೇ ಬೇರೆ. ಗೋವಾದಿಂದ ಕುದುರೆಗಳು ಬೇರಲ್ಲಿಗೋ ರವಾನೆಯಾಗಿ  ಅಂತಿಮವಾಗಿ ಬಹಮನಿ ತುರುಕರ ಕೈವಶವಾಗುತ್ತಿವೆ ಎಂಬ ಮಾಹಿತಿ ಬೇಹುಗಾರರ ಮೂಲಕ ಕೃಷ್ಣದೇವರಾಯರಿಗೆ ವಿಷಯ ತಿಳಿಯಿತು. ಹೊನ್ನಾವರ ಮತ್ತು ಭಟ್ಕಳದ ಸಾಮಂತರ ಜೊತೆ ಈ ವಿಷಯವನ್ನು ನಿಷ್ಕರ್ಶಿಸಿ ಒಂದು ವ್ಯೂಹದ ರಚನೆ ಮಾಡಿದ್ದರು. ವಿಜಯನಗರಕ್ಕೆ ಬೇಕಾದ ಇಪ್ಪತ್ತು ಸಾವಿರ ಕುದುರೆಗಳು ದೊರತಕೂಡಲೇ ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸುವುದು. ಇದಕ್ಕೆಂದೇ ಹಲವಾರು ಸಾಮಂತರಿಗೆ ಸೇನೆಯ ಅವಶ್ಯಕತೆಯ ಪಟ್ಟಿಯನ್ನಾಗಲೇ ಗುಪ್ತವಾಗಿ ಕಳುಹಿಸಿ ಕೊಟ್ಟಿದ್ದರಂತೆ. ಆದರೇ ಈ ವಿಷಯ ಹೇಗೋ ರಾಯಭಾರಿಗೆ ಗೊತ್ತಾಗಿಬಿಟ್ಟಿದೆ. ಇನ್ನೇನು ಗೋವಾದ ವೈಸರಾಯಿಗೆ ಈ ವಿಷಯ ರವಾನಿಸುವುದರಲ್ಲೇ ಇದ್ದರು ಅವರೇ ರವಾನಿಯಾಗಿ ಬಿಟ್ಟರು!

Monday, March 27, 2017

ಜಲಲ ಜಲಲ ಜಲ ಧಾರೆ..


 ಹರಿಯುವ ನೀರಿಗೆ ಇರುವ ಚೈತನ್ಯದಾಯಕತೆ, ಔಷದೀಯ ಗುಣಗಳು ನಿಂತ ನೀರಿಗೆ ಇರಲ್ವಂತೆ..ಹೀಗಂತ ನಮ್ಮಜ್ಜ ನನಗೆ ನಮ್ಮ ಕುಲ ಕಸಬನ್ನು ಕಲಿಸಿಕೊಡುವಾಗ ಹೇಳಿಕೊಟ್ಟ ಮೊದಲ ಪಾಠ. ನಾವು 'ನೀರುಗಂಟಿಗಳ' ವಂಶದವರು, ಜಲ ನಿರ್ವಹಣೆಯೇ ನಮ್ಮ ಜೀವನ.
      ವಿಜಯನಗರದ ಅರಸರು ನೀರಿಗೆ ಕೊಟ್ಟೊಷ್ಟು ಮಹತ್ವವನ್ನು ಇನ್ನಾರೂ ಕೊಡಲಿಲಲ್ಲವಂತೆ. ಎರಡು ಗುಡ್ಡಗಳನ್ನು ನೋಡಿದರೆ ಸಾಕು ಅದರ ಕಣಿವೆಯಲ್ಲಿ ಕೆರೆ ಕಟ್ಟಿಸುತ್ತಿದ್ದರಂತೆ. ನೋಡು ನೋಡುತ್ತಿದ್ದಂತೇ ಕೆಲವೇ ವರ್ಷಗಳಲ್ಲಿ ಕೆರೆತುಂಬಿಕೊಂಡು, ಸುತ್ತಲೂ ಹಸಿರು ಹರಡಿಕೊಂಡು,ಹಸನಾದ ಬೆಳೆಗಳ ಸಮೃಧ್ಧದ ಬೀಡಾಗುತ್ತಿತ್ತಂತೆ. ಆ ಕೆರೆಗಳ ನಿಯಂತ್ರಣಕ್ಕೆ ನಮ್ಮ ವಂಶದ ನೀರುಗಂಟಿಗಳ ನೇಮಕವಾಗುತ್ತಿತ್ತು. ಹಾಗಾಗಿ ಕೆರೆಗಳ ಜೊತೆಗೇ ನಮ್ಮ ವಂಶವೂ ಹರಡಿಕೊಳ್ಳ ತೊಡಗಿತು.
      ಆಗ ವ್ಯಾಪಾರಾರ್ಥವಾಗಿ  ವಿಜಯನಗರಕ್ಕಾಗಲೇ ಪೋರ್ಚುಗೀಸರ ಪ್ರವೇಶವಾಗಿತ್ತು. ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಇವರ ಹಡಗಿನಿಂದಲೇ ಅರಬ್ಬೀ ದೇಶದಿಂದ ಗೋವಾಕ್ಕೆ, ಭಟ್ಕಳದ ಬಂದರಿನಿಂದ ವಿಜಯನಗರಕ್ಕೆ ಬರುತ್ತಿದ್ದವು. ಇವರ ಇನ್ನೊಂದು ತಾಂತ್ರಿಕ ಪರಿಣಿತಿಯಿಂದ ಕೃಷ್ಣದೇವರಾಯರಿಗೆ ಇವರು ಆಪ್ತರಾದರು. ಇವರೂ ನಮ್ಮ ಹಾಗೆ ಜಲ ನಿರ್ವಹಣೆಯ ಪ್ರವೀಣರು. ನನ್ನನ್ನು 'ಪೋಂಟೆ' ಎಂಬ ತಂತ್ರಙ್ನರೊಡನೆ ತರಬೇತಿಗೆ ನಿಯಮಿಸಲಾಯಿತು.
      ಕೃಷ್ಣದೇವರ ಯೋಜನೆಯ ಪ್ರಕಾರ ತುಂಗಭಧ್ರಾನದಿಯ ನೀರನ್ನು ಕಾಲುವೆಗಳ ಮೂಲಕ ಕಮಲಾಪುರದ ಕೆರೆಯವರೆಗೂ ಹರಿಸುವುದು. ಈ ಯೋಜನೆಯಿಂದ ಉತ್ತರಕ್ಕೆ ತುಂಗಭದ್ರೆ, ದಕ್ಷಿಣಕ್ಕೆ ಕಮಲಾಪುರದ ಕೆರೆ... ವರ್ಷವಿಡೀ ನೀರಿನ ಕೊರತೆಯೇ ಇಲ್ಲ..ಎಂಥಹ ಅಧ್ಭುತ ವಿಚಾರ. ಕಲ್ಲು ಬಂಡೆಗಳ ನಾಡೆಂದು ಹೆಸರು ಪಡೆದಿದ್ದ ವಿಜಯನಗರ ಏನಾಗಬಹುದು.
      ಕಲ್ಲು ಬಂಡೆಗಳೇ ನಮ್ಮ ಅಣೆಕಟ್ಟಿನ ಮೂಲಾಧಾರ. ಹಂಪೆಯಿಂದ ಸುಮಾರು ಮೂವತ್ತು ಮೈಲಿದೂರದಲ್ಲಿ ತುಂಗಭದ್ರ ನದಿ ಕವಲೊಡೆದು ಹರಿಯುತ್ತಿತ್ತು. ಮಧ್ಯ ಒಂದು ಪುಟ್ಟ ದ್ವೀಪ. ಯೋಜನಯಂತೆ ದ್ವೀಪದ ಎರಡೂ ಕಡೆ ಕಲ್ಲು ಬಂಡೆಗಳಿಂದಲೇ ಅಣೆಕಟ್ಟು ಕಟ್ಟುವುದು ಮತ್ತು ನದಿ ನೀರನ್ನು ಇಬ್ಬದಿಯಿಂದಲೂ ಕಾಲುವೆಗಳಿಗೆ ಹರಿಸುವುದು. ಕಲ್ಲು ಬಂಡೆಗಳ ನಡುವೆ ಹೂಣು ಕಟ್ಟದಹಾಗೆ ಕಿರಿದಾದ ಜಾಗದಲ್ಲಿ ವೇಗವಾಗಿ ನೀರು ಹರಿಯುತ್ತಿತ್ತು. ಹೀಗೆ ನದಿ ನೀರಿನ ವೇಗಕ್ಕಿಂತ ಕಾಲುವೆ ನೀರಿನ ರಭಸ ಹೆಚ್ಚಾಗಿ ಎತ್ತರದ ಪ್ರದೇಶಗಳಿಗೆ ನೀರು ಸರಾಗವಾಗಿ ತಲುಪುತ್ತಿತ್ತು.
      ಕೃಷ್ಣದೇವರಾಯರ ಸಮ್ಮುಖದಲ್ಲೇ ಇದರ ಉಧ್ಗಾಟನೆ ವಿಜ್ರಂಭಣೆಯಿಂದ ನಡೆಯಿತು. ಈ ಕಾಲುವೆಗೆ 'ರಾಯ ಕಾಲುವೆ' ಎಂದು ಹೆಸರಿಸಲಾಯಿತು.
      ಕೃಷ್ಣದೇವರು ಆಗತಾನೇ ಅವರ ತಾಯಿಯ ನೆನಪಿನಲ್ಲಿ'ನಾಗಲಾಪುರ' ನಗರವನ್ನು ಕಟ್ಟಲು ಪ್ರಾರಂಭಿಸುತ್ತಿದ್ದರು. ನಗರ ನಿರ್ಮಾಣಕ್ಕೆ ಮೊದಲೇ ತುಂಗಭದ್ರೆ ಆ ನಗರ ಪ್ರವೇಶಕ್ಕೆ ಸಿಧ್ಧಳಾಗಿದ್ದಳು.
      "ಕಟ್ಟು ಮತ್ತು ಕೊಡುಗೆ" ಎನ್ನುವ ಯೋಜನೆ ವಿಜಯ ನಗರ ಸಾಮ್ರಾಜ್ಯದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಮತ್ತು ಜಮೀನುದಾರಿಗೆ ಜನಪ್ರಿಯವಾದ ಅವಕಾಶ. ಇದರ ಪ್ರಕಾರ ಕೆರೆ, ಕಾಲುವೆ ಮತ್ತು ಚಿಕ್ಕ ಅಣೆಕಟ್ಟುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ 'ಕಟ್ಟು'ವವರಿಗೆ 'ಕೊಡುಗೆ'ಯಾಗಿ ಕೆಲವು ಎಕರೆ ಜಮೀನನ್ನು ದೇಣಿಗೆಯಾಗಿ ಕೊಡುತ್ತಿದ್ದರು. ಕೆರೆ ಕಾಲುವೆಗಳ ನಿರ್ವಹಣೆ ಮಾಡುತ್ತಿದ್ದ ನಮ್ಮ ವಂಶಸ್ತರಿಗೆ ತೆರೆಗೆ, ಕಂದಾಯಗಳ ವಿನಾಯಿತಿ ಇರುತ್ತಿತ್ತು.
      ಹೀಗಾಗಿ ರಾಜಬೊಕ್ಕಸಕ್ಕೆ ನಷ್ಟವಿಲ್ಲದೆ ಸಾಮ್ರಾಜ್ಯ ಸಂಪದ್ಭರಿತವಾಗಿ ಬೆಳೆಯುತ್ತಾಹೋಯಿತು.

ಧರ್ಮೋ ರಕ್ಷತಿ ರಕ್ಷಿತಃ




ಕೃಷ್ಣದೇವರಾಯರ ಜೊತೆ ಇದು ಏಳನೇ ಸಲ ನಾನು ತಿರುಪತಿಗೆ ಹೋಗುತ್ತಿರುವುದು. ಪ್ರತಿಯೊಂದು ಸಲ ಹೋದಾಗಲೂ ಅದೊಂದು ಅಧ್ಭುತ ಅನುಭವ. ಮೊದಲ ಸಲ ನಮ್ಮ ತಂದೆ ಶ್ಯಾಮಾಶರ್ಮರ ಮೇಲ್ವಿಚಾರಣೆಯಲ್ಲಿ ನಾವು ಮೂವರು ವಿದ್ಯಾರ್ಥಿಗಳುರಾಯರ ಜೊತೆ ತಿರುಪತಿಯ ತೀರ್ಥಯಾತ್ರೆಗೆ ಆಯ್ಕೆಯಾಗಿದ್ದೆವು.
      ದೇವರಾಯರು ಇತರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಾಗ ಅವರ ಜೊತೆ ಹೋಗಲು ಯೊಗ್ಯವಾದ ಒಂದು ತಂಡವನ್ನು ಸ್ಪರ್ಧೆಯ ಮುಖಾಂತರ ಆಯ್ಕೆ ಮಾಡಲಾಗುತ್ತಿತ್ತು.

ತಿರುಪತಿಯ ತಂಡದಲ್ಲಿದ್ದವರಿಗೆ ಕನ್ನಡ, ತೆಲುಗು ಮತ್ತು ಸಂಸ್ಕೃತ ಚೆನ್ನಾಗಿ ಗೊತ್ತಿರಬೇಕು. ಕೆಲವೊಮ್ಮೆ ಪುರಂದರದಾಸರೂ ಬರುತ್ತಿದ್ದರು, ಹಾಗಾಗಿ ಅವರ ದೇವರನಾಮಗಳನ್ನು ಸುಶ್ರಾವ್ಯವಾಗಿ ಹಾಡಲು ಬರಬೇಕು. ಎಲ್ಲದಿಕ್ಕಿಂತ ಮಿಗಿಲಾಗಿ ಧಾರ್ಮಿಕ ವಿಷಯಗಳನ್ನು ಅದರಲ್ಲೂ ತಿರುಪತಿಯ ಬಗ್ಗೆ ವಿಷೇಶವಾಗಿ ತಿಳಿದು ಕೊಂಡಿರಬೇಕು ಏಕೆಂದರೆ ಈ ತೀರ್ಥಯಾತ್ರೆಯ ಸಮಯದಲ್ಲೇ ಕೃಷ್ಣದೇವರಾಯರು ತಮ್ಮ 'ಅಮುಕ್ತಮಲ್ಯದ' ರಚತೆಯಲ್ಲಿ ತೊಡಗುತ್ತಿದ್ದರು.

      ಕೃಷ್ಣದೇವರಾಯರಿಗೊಮ್ಮೆ ಕನಸಿನಲ್ಲಿ ವಿಷ್ಣುದೇವರು ಪ್ರತ್ಯಕ್ಷವಾಗಿ ಅವರ ಮತ್ತು 'ಆಂಡಾಳಮ್ಮನವರ' ವಿವಾಹದ ಬಗ್ಗೆ ಬರೆಯಲು ಆದೇಶಿದ್ದರಂತೆ ಆ ಅಧ್ಭುತ ಕೃತಿಯೇ 'ಆಮುಕ್ತಮಲ್ಯದ' ಇದರ ರಚನೆಗೆ ಕೆಲವೊಮ್ಮೆ ನಮ್ಮ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಇದಕ್ಕೆ ತೆಲುಗಿನ ಅಣ್ಣಮಯ್ಯನವರ ಪದಗಳ ಪರಿಚಯವೂ ಇರಬೇಕಿತ್ತು..ಹಾಗಾಗಿ ನಾವು ಅವರ ಸಾಹಿತ್ಯರಚನೆಯ ಗುಂಪಿನ ಸದಸ್ಯರಾಗಿದ್ದೆವು.
 
     ತಿರುಪತಿ ತಲುಪಿದಮೇಲೆ ನಮ್ಮ ಜವಾಬ್ದಾರಿಗಳು ಇನ್ನೂ ಹೆಚ್ಚಾಗುತ್ತಿದ್ದವು. ಪ್ರತಿಸಲ ಬಂದಾಗಲೂ ದೇವಸ್ಥಾನಕ್ಕೆ ಕೊಡುವ ಅನುದಾನದ ವಿವರಗಳನ್ನು ತಯಾರಿಸಬೇಕಾಗಿತ್ತು. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅವರ ಅವಶ್ಯತೆಗಳನ್ನು ಆಗಿಂದ್ದಾಗ್ಗೇ ಪೂರೈಸುತ್ತಿದ್ದೆವು. ಯಾತ್ರಾರ್ತಿಗಳಿಗೆ ವಸತಿಗೃಹ ನಿರ್ಮಾಣ, ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಇತರೆ ದೇವಸ್ತಾನಗಳಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಇದರ ವರದಿಯನ್ನು ಸಾಯಂಕಾಲದ ಗಾನಸಭೆ ಮುಗಿದ ನಂತರ ಕೃಷ್ಣದೇವರಾಯರಿಗೆ ವರದಿ ಸಲ್ಲಿಸ ಬೇಕಾಗಿತ್ತು.
 
     ಮೊದಲ ಸಲತಿರುಪತಿಗೆ  ಬಂದಾಗ ವ್ಯಾಸತೀರ್ಥರು ಇಲ್ಲೇ ನೆಲಸಿದ್ದರು. ರಾಯರು ಅವರನ್ನು ವಿಜಯನಗರಕ್ಕೆ ಆಹ್ವಾನಿಸಿದರು. ಮೊದಲು ತಿರುಪತಿಯನ್ನು ಬಿಟ್ಟುಬರಲು ನಿರಾಕರಿಸಿದ್ದರು ಆದರೆ ಕೃಷ್ಣದೇವರಾಯರು ತಾವು ನಿರಂತರವಾಗಿ ನಡೆಸುತ್ತಿರುವ ಧರ್ಮಸಂರಕ್ಷಣೆಯ ಯುಧ್ಧದ ಬಗ್ಗೆ ಅರಿವು ಮಾಡಿಕೊಟ್ಟಮೇಲೆ ಆಹ್ವಾನವನ್ನು ಸ್ವೀಕರಿಸಿ ವಿಜಯನಗರಕ್ಕೆ ಬಂದರು ಮತ್ತು ಅಲ್ಲೇ ನೆಲಸಿಬಿಟ್ಟರು.
 
     ಉತ್ತರದಲ್ಲಾಗಲೇ ಮುಸ್ಲೀಮ್ ಮತಾಂಧರು ಅಟ್ಟಹಾಸದಿಂದ ಮೆರೆಯುತ್ತಿದ್ದರು.
     "ಕೃಷ್ಣಾನದಿಯಿಂದ ದಕ್ಷಿಣಕ್ಕೆ ಅವರು ಬಾರದಂತೆ ನಾನು ನೋಡಿಕೊಳ್ಳುತ್ತೇನೆ ನೀವು ನಮ್ಮ ಪ್ರಜೆಗಳು ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿ ನಮ್ಮ ಸನಾತನ ಧರ್ಮವನ್ನು ಕಾಪಾಡುವಂತೆ ಮಾರ್ಗದರ್ಶನ ಮಾಡಿ"  ಎಂದು ಕೋರಿಕೊಂಡ ಮೇಲೆ ವ್ಯಾಸತೀರ್ಥರು, ಪುರಂದರದಾಸರು ಮತ್ತು ಕನಕದಾಸರು ಸೇರಿಕೊಂಡು ದಾಸ ಸಾಹಿತ್ಯದ ಹುಟ್ಟು ಹಾಕಿದರು.

    ದೇವಭಾಷೆಯಾದ ಸಂಸ್ಕೃತದಲ್ಲಿ ಹುದುಗಿಹೋಗಿದ್ದ ವೇದ, ಉಪನಿಷತ್ತುಗಳ ತಿರುಳನ್ನು ಆಡುಭಾಷೆಯಾದ ಕನ್ನಡಕ್ಕೆ ದೇವರನಾಮಗಳ ಮೂಲಕ, ಸಂಗೀತದ ಮೂಲಕ ಸರಳವಾದ ರೀತಿಯಲ್ಲಿ ಜನರಿಗೆ ಮನದಟ್ಟುವ ಹಾಗೆ ಹೊರತಂದರು. ದೇವಸ್ಥಾನಗಳನ್ನು ಒಂದು ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿದರು. ಶ್ರೀಶೈಲ, ಶ್ರೀರಂಗ, ಮೇಲುಕೋಟೆ,ಹರಿಹರ, ಉಡುಪಿ ಮುಂತಾದ ಅನೇಕ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳಲು ಪ್ರೋತ್ಸಾಹಿಸಿದರು. ವಿಜಯನಗರ ಸಾಮ್ರಾಜ್ಯದ ಉದ್ದಗಲಕ್ಕೂ ವಿರೂಪಾಕ್ಷ, ವಿಟ್ಟಲ, ರಾಮ, ಕೃಷ್ಣರ ಮತ್ತು ಅವರವರ ಗ್ರಾಮದೇವರುಗಳ  ದೇವಸ್ಥಾನಗಳನ್ನು ಕಟ್ಟಿಸಿದರು.
 
    ಜನಗಳಲ್ಲಿ ತಮ್ಮ ತಮ್ಮ ಜಾತಿಗಳ ಬಗ್ಗೆ ಇದ್ದ ಸಂಕುಚಿತ ನಿಲುವನ್ನು ಸಾಕಷ್ಟು ಮಟ್ಟಿಗೆ ದೂರಮಾಡಿದರು. ದೇವರನಾಮಗಳಲ್ಲೇ ಸಾಮಾಜಿಕ ಚಳುವಳಿ ನಡೆಯತೊಡಗಿತು. ಸಂಗೀತಸುಧೆಯ ಜೊತೆಗೆ ಭಕ್ತಿಸಾರದ ಹೊಳೆಯೇ ಹರಿಯತೊಡಗಿತು. ಹಳ್ಳಿ ಹಳ್ಳಿಗಳಲ್ಲೂ ಮಠಗಳು ಉಧ್ಭವವಾದವು, ಜನಗಳಲ್ಲಿ ಧಾರ್ಮಿಕ ಪ್ರವೃತ್ತಿ ಬೆಳೆಯುತ್ತಾ ಹೋಯಿತು.  ನಾವೇನೋ ಬ್ರಾಹ್ಮಣರು..ವೇದಾದ್ಯಯನ, ಪೂಜೆ ಪುನಸ್ಕಾರಗಳು ನಮಗೆ ಪರಂಪರಾಗತವಾಗಿ ಕಲಿಸಲಾಗಿದೆ, ಅದೇ ನಮ್ಮ ಜೀವನಾಧಾರವೂ ಕೂಡ. ಧರ್ಮ ಪಾಲನೆ ನಮ್ಮ ವೃತ್ತಿ.
    ಕೃಷ್ಣದೇವರಾಯರು ತಮ್ಮ ಜೀವನದ ಒಂದು ಪಾತ್ರದಲ್ಲಿ  ಯೋಧನಾಗಿ ಯುಧ್ಧಭೂಮಿಯಲ್ಲಿ ಹೋರಾಡುತ್ತಾ, ಮಾರಣಹೋಮ ನಡೆಸುತ್ತಾ ಇತರೆ ಮತಾಂಧರಿಂದ ಸನಾತನ ಧರ್ಮಕ್ಕೆ ಧಕ್ಕೆಯಾಗದಂತೆ ರಕ್ಷಿಸುತ್ತಿದ್ದರೆ ಇನ್ನೊಂದು ಪಾತ್ರದಲ್ಲಿ ತಾವೇ ಗುರುಗಳಲ್ಲಿ ರಾಜಗುರುವಾಗಿ, ಪುರೋಹಿತರಲ್ಲಿ ಮುಖ್ಯ ಪುರೋಹಿತರಾಗಿ, ಸಾಹಿತಿಗಳಲ್ಲಿ ಮೇರು ಸಾಹಿತಿಯಾಗಿ ಮೆರೆಯುತ್ತಿದ್ದಾರೆ.
    ಸಮುದ್ರ ಮಾರ್ಗದಿಂದ ವ್ಯಾಪಾರದ ನೆಪದಲ್ಲಿ ಕುಯುಕ್ತಿಯಿಂದ ಬರುವ ಮತಾಂಧರನ್ನೂ ನಮ್ಮ ಧರ್ಮಕ್ಕೆ ಸೋಂಕು ತಗಲಿಸದಂತೆ ಹಿಮ್ಮೆಟ್ಟಬೇಕಿದೆ...ಆದರೆ ನಮ್ಮ ನಮ್ಮ ಜಾತಿಯ ಕೆಲವು ಸಂಕುಚಿತ ಅಂಶಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಈ ಅವಕಾಶವಾದಿಗಳು ವಿಷದಬೀಜ ಬಿತ್ತಿಬಿಡಬಹುದು.
    ಒಂದು ಪ್ರಶ್ನೆ ಸದಾ ನನ್ನನ್ನು ಕಾಡುತ್ತಿತ್ತು..ನಾವೇಕೆ ಇವರ ಹಾಗೆ ನಮ್ಮ ಧರ್ಮದ ಬಲವಂತ ಪ್ರಚಾರ ಮಾಡುತ್ತಿಲ್ಲ? ಅದಕ್ಕೆ ನಮ್ಮ ತಂದೆ ಶ್ಯಾಮಾಶರ್ಮರ ಉತ್ತರದಿಂದ ಸ್ವಲ್ಪ ಸಮಾಧಾನವಾಯಿತು.
    " ನಮ್ಮ ಸನಾತನ ಧರ್ಮಕ್ಕೆ ಮಾತೃಸ್ಥಾನ ಕೊಟ್ಟು ಗೌರವಿಸುತ್ತೇವೆ...ಮತ್ತೆ ತಾಯಿಯನ್ನು ಮಾರಿಕೊಳ್ಳುವುದೇ..?"ಐ
 

Wednesday, March 22, 2017

ಅಕ್ಷಯ..ಅಮರ..-3

ಭೂಮಿ, ಆಕಾಶ, ವಾಯು, ಜಲ ಮತ್ತು ಅಗ್ನಿ...
ಹುಂ.. ಅಂತಿಮವಾಗಿ ಅಗ್ನಿಯಲ್ಲಿ..ಪಂಚಭೂತಗಳಲ್ಲಿ‌‌..
ಲೀನವಾದ ನನಗೆ ಮಾನವ ಸಹಜ ಭಾವನೆಗಳಿಲ್ಲವಂತಿಲ್ಲ. ಮಾತೃ ಪ್ರೇಮ, ದೇಶಪ್ರೇಮ ಇವೆಲ್ಲಾ ಅಳಿಸಿ ಹೋಗಲಾರದ ಮನೋಧರ್ಮಗಳು.

  Good night ಅಮ್ಮಾ...ಎಂದು ಮಲಗಿದವನು, ಬೆಳಗ್ಗೆ ಕಣ್ಣುಬಿಡುವ ಮುಂಚೆನೇ ಹೊರಡುತ್ತಿದ್ದ ಶಬ್ದ..ಅಮ್ಮಾ. 
ನನಗೆ ಕನ್ನಡಕ ಬಂದಮೇಲಂತೂ  'ಅಮ್ಮಾ ನನ್ನ ಕನ್ನಡಕ ಕಾಣುತ್ತಾ ಇಲ್ಲ' ಎನ್ನುವುದೇ ನನ್ನ ಸುಪ್ರಭಾತ. ಇದಕ್ಕೆಂದೇ ಅಮ್ಮ ಇನ್ನೊಂದು ಜೊತೆ ಕನ್ನಡಕ ಮಾಡಿಸಿ ಬಿಟ್ಟರು. 'ಅಮ್ಮಾ ಕನ್ನಡಕ' ಅಂದ ಕೂಡಲೇ ಅದನ್ನು ತಂದು ಕೊಟ್ಟು ಬಿಡುವರು, ನಂತರ ನಾನು ಹಿಂದಿನರಾತ್ರಿ ಅಲ್ಲೆಲ್ಲೋ ಬಿಟ್ಟಿದ್ದ ಕನ್ನಡಕವನ್ನು ಜೋಪಾನವಾಗಿಟ್ಟು ಕೊಳ್ಳುತ್ತಿದ್ದರು... ಮರುದಿನ ಕೊಡಲು!

Akshay's Spectacles found by mother Meghna Girish
  ಹೀಗೆ ನಮ್ಮಮ್ಮನ ಸೆರಗಿನಲ್ಲೇ ಬೆಳದೆ..ಸೈನ್ಯಕ್ಕೆ ಸೇರುವವರೆಗೂ. ಆಮೇಲೆ ನಮ್ಮಿಬ್ಬರ 'ದೋಸ್ತಿ' ಮೊಬೈಲುಗಳಲ್ಲಿ ಮುಂದುವರೆಯಿತು. ವಾಟ್ಸಪ್ಪಿನಲ್ಲಿ ದಿನಕ್ಕೆ ನಾಲ್ಕೈದು ಸಲವಾದರೂ ಸಂದೇಶಿಸುತ್ತಿದ್ದೆವು.

ಈಗ ಅಮ್ಮ ದುಖಿಃಸುತ್ತಾಳೆ, ಎಲ್ಲರೂ ಕಣ್ಣೀರಿಡುತ್ತಿದ್ದಾರೆ..ಸಹಜವೇ.
   ಅವತ್ತು ಅಮ್ಮ, ಅಪ್ಪ, ನೇಹಾ ಮತ್ತು ಭಾವ ಪ್ರದೀಶ್ ನಗ್ರೋತಕ್ಕೆ ಬಂದಿದ್ದರು. ಆತಂಕವಾದಿಗಳನ್ನು ಹಿಮ್ಮೆಟ್ಟಿ ಕೊಂದು ಮುಗಿಸಿದ್ದನ್ನು ವಿವರವಾಗಿ ಹೇಳುತ್ತಿದ್ದರು ಕರ್ನಲ್ ಪ್ರಕಾಶ್. ಮಧ್ಯ ಮಧ್ಯ ಅಮ್ಮ ,ನೇಹಾರ ಅಳು... ನಾನಿಲ್ಲೇ ಇದ್ದೇನೆ ಅಮ್ಮಾ..ನಿನ್ನ ಹತ್ತಿರ.
   ಗುಂಡಿನೇಟು, ಗ್ರೆನೇಡಿನ ಸ್ಪೋಟದಿಂದ ನಾನು ಬಿದ್ದಿದ್ದ ಸ್ಥಳಕ್ಕೆ ಬಂದರು. ಕಣ್ಣು ತುಂಬಿ ಬಂತು ಅಮ್ಮನಿಗೆ. ಅಲ್ಲೇ ಬಿದ್ದಿದ್ದ ಒಂದು ಚಿಕ್ಕ ಕಲ್ಲನ್ನು ಎತ್ತಿಕೊಂಡಳು ಅಮ್ಮಾ..ನನ್ನ ನೆನಪಿನ Memento ದಂತೆ.
   ಅಲ್ಲೇ ಹತ್ತಿರದಲ್ಲೇ ಅದೇ ನನ್ನ ಕನ್ನಡಕ ಬಿದ್ದಿದ್ದನ್ನು ಈಗ ಎಷ್ಟೋ ದಿನಗಳಾದರೂ ಯಾರಿಗೂ ಕಾಣಿಸಲಿಲ್ಲವೇ..ಈಗ ಅಮ್ಮನೂ ಅದನ್ನು ದಾಟಿ ಕೊಂಡೇ ಹೋದಳು...ಅಮ್ಮಾ ಹಿಂತಿರುಗಿ ಬಾ..ನನ್ನ ಕನ್ನಡಕ ಎತ್ತಿಕೊಂಡು ಹೋಗು ಎಂದು ಕೂಗ ಬೇಕಿನಿಸಿತು. ಸ್ವಲ್ಪ ದೂರ ಹೋದವಳು ತಿರುಗಿ ಬಂದಳು...ಆಗ ಕಾಣಿಸಿತು ಅಮ್ಮನಿಗೆ ನನ್ನ ಕನ್ನಡಕ.
   ಕಣ್ಣೀರಧಾರೆಯಲ್ಲೇ ತೊಳೆದು ಬಿಟ್ಟಳು ನನ್ನ ಕನ್ನಡಕವನ್ನು. ಅಂತೂ ನನ್ನ ಕನ್ನಡಕ ಅಮ್ಮನ ಬಳಿ ಜೋಪಾನವಾಯ್ತು. ಇನ್ನೆಂದೂ ನನ್ನ ಕನ್ನಡಕ ಹುಡಿಕಿಕೊಡು ಎನ್ನುವುದಿಲ್ಲ....
   ಆದರೆ ಅದು ಹೇಗೆ ನನ್ನ ಕನ್ನಡಕವನ್ನು ದಾಟಿಕೊಂಡು ಹತ್ತಾರು ಜನ, ಹಲವಾರು ದಿನ ಓಡಾಡಿದರು, ನಮ್ಮಮ್ಮನೂ ದಾಟಿಕೊಂಡು ಹೋದವಳು..ಮರಳಿ ಬಂದು ಎತ್ತಿಕೊಂಡಳು?
   "ತೆನವಿನ ತೃಣಮಪಿನ ಚಲತಿ"
   ನಿನ್ನ ಕರುಣೆ ಇಲ್ಲದೆ ಹುಲುಕಡ್ಡಿಯೂ ಅಲ್ಲಾಡದು.  
Akshya's Spectacles

Tuesday, March 21, 2017

ಅಕ್ಷಯ..ಅಮರ-2

 
 
 
If body drops you..It is death
If you drop the body then it is ultimate sacrifice..You attain Moksha.
ಹಾಗಂತ ಎಲ್ಲೋ ಕೇಳಿದ್ದೆ..

     ಅವತ್ತು ನಗ್ರೋತದ ಆರ್ಮಿ ಕ್ಯಾಂಪಿನಲ್ಲಿ ನಾನು ನಮ್ಮ ಸೈನಿಕರನ್ನು, ಅವರ ಕುಟುಂಬದವರನ್ನು ಆತಂಕವಾದಿಗಳಿಂದ ಸಂರಕ್ಷಿಸಲು ತೆಗೆದುಕೊಂಡ ಅಂತಿಮ ನಿರ್ಧಾರ...ಒಬ್ಬ ಸೈನಿಕನಿಗೆ ಅವನ ದೇಶ, ದೇಶದ ಜನಗಳೇ ಅವನ ಜೀವ...ಅವರನ್ನು ಸಂರಕ್ಷಿಸಲು ಅವಶ್ಯಕತೆಯಿದ್ದರೆ ನನ್ನ ದೇಹವನ್ನು ಬಿಡುವ ಪ್ರಮೇಯ ಬಂದರೂ ಸರಿ ಎಂದು  ಸುರಕ್ಷಿತ ಸ್ಥಳದಿಂದ ಎದ್ದು ಬಂದೇ ಬಿಟ್ಟೇ..ಹಿಂದಿನಿಂದ ಚಿರಂತನ್ ಮಷಿನ್ ಗನ್ನಿನ ಫೈರಿಂಗ್ ಮಾಡುವುದನ್ನು ಬಿಟ್ಟು ನನ್ನ ಹಿಂದೆ ಓಡಿ ಬಂದ. ಆದರೆ ಪುನಃ ಅವನನ್ನು ಗನ್ ಪೋಸ್ಟಿಗೆ ವಾಪಾಸು ಕಳಿಸಿದೆ 'ನೀನು ಹೋಗು ಗನ್ ಪೋಸ್ಟಿಗೆ ನನಗೆ cover fire ಕೊಡು ನಾನು ಈ ನಾಯಿಗಳನ್ನು ಬಿಡುವುದಿಲ್ಲ' ಎಂದು ಪೊದೆಗಳ ಹಿಂದಿನಿಂದ ಅವರು ಅಡಗಿ ಕೊಂಡಿದ್ದ ಕಟ್ಟಡವನ್ನು ಸಮೀಪಿಸಿದೆ. ಅಷ್ಟೊತ್ತಿಗಾಗಲೇ ಅವರು ಮೊದಲ ಮಹಡಿಗೇರಿ ಬಿಟ್ಟಿದ್ದರು. ಪೊದೆಗಳ ಹಿಂದೆ ಕಂಡ ನನ್ನ ಮೇಲೆ ಗುಂಡು ಹಾರಿಸೇ ಬಿಟ್ಟರು..
       ನನ್ನ ದೇಹದಿಂದ ಹೊರಬಂದೆ..ಇದನ್ನು ನಿಶ್ಚಯಿಸಿಕೊಂಡೇ ಮಾಡಿದ ಕರ್ತವ್ಯ.

   ಒಬ್ಬ ಸೈನಿಕನ ಕರ್ತವ್ಯದಲ್ಲಿ ಮೂರು ವಿಷೇಶ ಅಂಶಗಳಿರುತ್ತವೆ.
   ನಾಮ್, ನಮಕ್, ನಿಶಾನ್...

ನಾಮ್...ನನ್ನ ಮತ್ತು ನನ್ನ ದೇಶದ ಹೆಸರು..ಅಭಿಮಾನ ಮತ್ತು ಗೌರವದಿಂದ ‌ಹೆಸರುವಂತಿರ ಬೇಕು. ಹೆಸರಿನ ಮಾನ್ಯತೆಗೆ ದಕ್ಕೆ ಬರುವಂತಾ ಯಾವ ಕೆಲಸವನ್ನು ಎಂದಿಗೂ ಮಾಡಬಾರದು.

ನಮಕ್...ಉಪ್ಪು ತಿಂದ ಮನಗೆ ಎರಡು ಬಗೆಯ ಬಾರದು. ಜೀವಕೊಟ್ಟು ಪೋಷಿಸಿದ ತಾಯಿಗೆ ಕುಟುಂಬಕ್ಕೆಮತ್ತು ದೇಶಕ್ಕೆ ಎಂದಿಗೂ ದ್ರೋಹ ಬಗೆಯಬಾರದು.

ನಿಶಾನ್...ನಮ್ಮ ಹೆಮ್ಮೆಯನ್ನು ಸಂಕೇತಿಸುವ ಲಾಂಛನ ನಮ್ಮ ರಾಷ್ಟ್ರಧ್ವಜ..ನಮ್ಮ ಸೈನ್ಯದ ಮತ್ತು ರೆಜಿಮೆಂಟಿನ ಧ್ವಜಗಳು. ಅವಕ್ಕೆ ಅಗೌರವವನ್ನು ತೋರಿಸಬಾರದು ಮತ್ತು ಅಗೌರಿಸುವವರನ್ನು ಸುಮ್ಮನೆ ಬಿಡಬಾರದು.

ಸೇನೆಯ ಸಮವಸ್ತ್ರ ಧರಿಸಿದ ಮೇಲೆ ದೇಶ ಸೇವೆಯ ಬ್ರಹ್ಮದೀಕ್ಷೆ ಪಡೆದ ಹಾಗೇ...ಅದು ನಿರಂತರ, ನಿವೃತ್ತಿ ಹೊಂದಿದ ಮೇಲೂ...ದೇಹವನ್ನು ತ್ಯಜಿಸಿದ ಮೇಲೂ..
ನನ್ನ ಕೋರಿಕೆಯೊಂದೇ...ನೀವು ಸೈನಿಕರನ್ನು, ಅವರ ದೇಶಪ್ರೇಮವನ್ನು ಎಂದೂ ಸಂದೇಹಿಸಬೇಡಿ...
ಶಾಂತಿಯಿಂದ ನಿದ್ರೆಮಾಡಿ...ನಾವಿದ್ದೇವೆ.

Thursday, March 9, 2017

ದಸರಾ ಹಬ್ಬಕ್ಕೆ ಬಂದ ನೆಂಟರು




ಕೃಷ್ಣದೇವರಾಯರು ನಮ್ಮಕ್ಕ ತಿರುಮಲಾದೇವಿಯನ್ನು ಮದುವೆಯಾದ ಮೇಲೆ ನಾನು ಶ್ರೀರಂಗಪಟ್ಟಣದಿಂದ ವಿಜಯನಗರಕ್ಕೆ ಬರುತ್ತಿರುವುದು ಇದು ಎರಡನೇ ಸಲ. ಮಹಾನವಮಿ ಮಂಟಪದ ಉಧ್ಘಾಟನೆಗೆಂದು ನಮ್ಮ ತಂದೆಯವರಾದ ಮಹಾರಾಜ 'ಬೆಟ್ಟದ ಚಾಮರಾಯರಿಗೆ' ವಿಷೇಶ ಆಹ್ವಾನ ಬಂದಿತ್ತು,ಆದರೆ ಅವರ ಆರೋಗ್ಯ ಸರಿಯಿರಲಿಲ್ಲ, ಇಷ್ಟುದೂರದ ಪ್ರಯಾಣ ಮಾಡುವುದು ಅಸಾಧ್ಯ..'ನೀನೇ ಹೋಗಿ ಬಾ..ಕುಮಾರ ವೀರಯ್ಯ 'ಎಂದರು.

     ಕೃಷ್ಣದೇವರಾಯರಂತಹ ಪರಾಕ್ರಮಿ, ಧರ್ಮಭೀರು, ಸಾಹಿತ್ಯ ಪ್ರೇಮಿ ಮತ್ತು ದಕ್ಷ ಆಡಳಿತಗಾರರ  ಸಂಗ ಕೆಲವು ದಿನಗಳು ಇದ್ದು ಅವರಿಂದ ಕೆಲವು ಸೂತ್ರಗಳನ್ನಾದರೂ ಕಲಿಯ ಬೇಕೆಂಬ ಉತ್ಸಾಹ ನನಗೂ ಇತ್ತು. ಮೈಸೂರಿನ ಓಡೆಯರೂ ಸೇರಿದಂತೆ ಸುತ್ತಲಿನ ಇತರೆ ರಾಜರುಗಳು ಶ್ರೀರಂಗಪಟ್ಟಣದ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರುತ್ತಾರೆ. ವಿಜಯನಗರದ ಶ್ರೀರಕ್ಷೆ ಇರುವುದರಿಂದ ಇವರಾರೂ ಸದ್ಯಕ್ಕೇನು ದುಸ್ಸಾಹಸ ಮಾಡುತ್ತಿಲ್ಲ. ಈ ಸಮಾರಂಭಕ್ಕೆ ನಾನು ಹೋಗಿದ್ದೆ ಎಂಬ ವಿಷಯ ಇವರಿಗೂ ಗೊತ್ತಾಗಲಿ ಎಂಬುದೂ ಉದ್ದೇಶವಾಗಿತ್ತು.
    
    ವಿಜಯನಗರ ತಲುಪಿ, ನಮ್ಮಕ್ಕ ತಿರುಮಲಾಂಬೆಯನ್ನು ನೋಡುತ್ತಿದ್ದಂತೇ ಪ್ರಯಾಣದ ಆಯಾಸವೆಲ್ಲಾ ಪರಿಹಾರವಾಯಿತು. ಚಿಕ್ಕ ತಮ್ಮನಾದ್ದರಿಂದ ನನ್ನ ಬಗ್ಗೆ ವಿಶೇಷವಾದ ಅಕ್ಕರೆ. ನನಗಿಷ್ಟವಾದ ಖಾದ್ಯಗಳನ್ನು ತಾನೇ ತಯಾರಿಸಿ ಬಡಿಸಿದಳು. ಭವ್ಯ ವಿಜಯನಗರ ಸಾಮ್ರಾಜ್ಯದ ಪಟ್ಟದರಾಣಿ ಅಡುಗೆ ಮಾಡುವುದೇ! ಅಷ್ಟು ಕುಕ್ಕುಲಾತಿ ನಮ್ಮಕ್ಕನಿಗೆ ನನ್ನನ್ನು ಕಂಡರೆ.
      ಪ್ರತಿಸಲ ವಿಜಯೋತ್ಸವದಿಂದ ಮರಳಿದ ದೇವರಾಯರು ತಮ್ಮ ರಾಣಿಯರ ಬೊಕ್ಕಸವನ್ನು ಮುತ್ತು ರತ್ನ, ವಜ್ರ ವೈಢೂರ್ಯವನ್ನು ತುಂಬಿ ಬಿಡುತ್ತಾರಂತೆ. ಅದನ್ನೆಲ್ಲಾ ತೋರಿಸುತ್ತಲೇ ನನ್ನ ಕೊರಳು ಭಾರವಾಗುವಂತೆ ಕಂಠಹಾರಗಳನ್ನು ಬಲವಂತವಾಗಿ ಹಾಕೇಬಿಟ್ಟಳು.
      ನಮ್ಮ ರಾಜ್ಯ ಶ್ರೀರಂಗಪಟ್ಟಣವೂ ವಿಜಯನಗರ ಸಮ್ರಾಜ್ಯಕ್ಕೆ ಸೇರಿದ್ದು. ನಾವೂ ವಿಧೇಯರಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತೇವೆ. ಇಲ್ಲಿಂದ ಆದೇಶ ಬಂದಾಗ ನಮ್ಮ ಸೈನಿಕರನ್ನು, ಕುದುರೆಗಳನ್ನು ಆನೆಗಳನ್ನು ಕಳುಹಿಸಿಕೊಡುತ್ತೇವೆ. ಕೆಲವೊಮ್ಮೆ ನಮ್ಮ ಕುಟುಂಬದಲ್ಲಿ ಇದರ ಬಗ್ಗೆ ಅಸಮಧಾನದ ಮಾತುಗಳು ನಡೆಯುತ್ತದೆ. ಆದರೆ ಕೃಷ್ಣದೇವರಾಯರ ವಿರುದ್ದ ದಂಗೆಯೆದ್ದವರ ಪಾಡು ಏನಾಗುತ್ತದೆ ಎಂಬ ಹಲವಾರು ನಿದರ್ಶನಗಳನ್ನು ನೋಡಿದ್ದೇವೆ. ಶ್ರೀರಂಗಪಟ್ಟಣದ ರಾಜಕುಮಾರಿ ಈ ಸಾಮ್ರಾಜ್ಯದ ಪಟ್ಟಮಹಿಷಿಯಲ್ಲವೇ...ವಿಷಯ ಅಲ್ಲಿಗೆ ನಿಂತು ಬಿಡುತ್ತದೆ. ಏನೋ ನಮ್ಮಕ್ಕನ ಐಶ್ವರ್ಯವನ್ನು ನೋಡಿ ಇದೆಲ್ಲಾ ನೆನಪಿಗೆ ಬಂತು.
      ಸಾಯಂಕಾಲ ಕೃಷ್ಣದೇವರಾಯರ ಭೇಟಿಯೂ ಆಯಿತು. ಆಗತಾನೇ ಉದಯಗಿರಿಯನ್ನು ಜಯಿಸಿಬಂದ ವಿಜಯದ ಕಳೆ ಮುಖದಲ್ಲಿ ರಾರಾಜಿಸುತ್ತಿತ್ತು. ಇವರ ಪ್ರತಿ ವಿಜಯ ಮಹೋತ್ಸವವನ್ನು ಒಂದು ಹೊಸ ದೇವಾಲಯ, ಇನ್ನೊಂದು ಅರಮನೆ, ಮತ್ತೊಂದು ಮಹಲನ್ನು ಉಧ್ಘಾಟಿಸುವ ಮೂಲಕ ಆಚರಿಸುತ್ತಾರಂತೆ. ಈ ಸಲದ ವಿಜಯೋತ್ಸವ ಮಹಾನವಮಿ ಮಂಟಪವೆಂಬ ಭವ್ಯ ಮಂಟಪದ ಉಧ್ಘಾಟನೆಯಿಂದ ನಡೆಯಲಿದೆ. ಒಂಭತ್ತು ದಿನಗಳ ದಸರಾ ಮಹೋತ್ಸವವೂ ಅಲ್ಲೇ ನಡೆಯುತ್ತಂತೆ.
      ರಾತ್ರಿಯ ಭೋಜನದ ನಂತರ ಹಾಗೇ ಒಂದು ಸುತ್ತು ನಗರದ ಕಡೆ ಹೊರಟೆ. ದೂರದ ಊರುಗಳಿಂದ ಈ ಸಮಾರಂಭಕ್ಕೆಂದು ಜನಸಾಗರವೇ ಹರಿದು ಬಂದಿತ್ತು.
       ಕಲಾವಿದರಿಗೆಂದು ಪ್ರತ್ಯೇಕವಾದ ಬಿಡಾರ ವ್ಯವಸ್ಥೆಯಲ್ಲಿ ಆಗಲೇ ತೆನಾಲಿ ರಾಮಕೃಷ್ಣರು ಓಡಾಡಿಕೊಂಡು ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದರು. ನನ್ನ ಜೊತೆ ಬಂದಿದ್ದ ಸೇನಾಧಿಕಾರಿಗಳು ನನ್ನ ಪರಿಚಯವನ್ನು ಮಾಡಿಕೊಟ್ಟ ಮೇಲೆ ಆದರದಿಂದ ನನ್ನನ್ನು ಸ್ವಾಗತಿಸಿದರು. ಎಲ್ಲೆಲ್ಲೂ ಕಲಾವಿದರ ಕಲರವ. ಕನ್ನಡ ಮತ್ತು ತೆಲುಗು ಭಾಷೆಗಳ ಸಮ್ಮಿಶ್ರಣದ ಮಾತುಕತೆಗಳು. ತೆಲುಗು ಬಾರದ ನನಗೆ ಸ್ವಲ್ಪ ವಿಚಿತ್ರವೆನಿಸಿದರೂ, ಈ ಎರಡೂ ಭಾಷೆಗಳ, ಸಂಸ್ಕೃತಿ ಮತ್ತು ಸಾಹಿತ್ಯಗಳ ನೈಸರ್ಗಿಕವಾದ ಮಿಶ್ರಣವೇ ವಿಜಯನಗರದ ವೈಶಿಷ್ಟ್ಯವೆನಿಸಿತು. ಅವರ ಭೋಜನ ಮತ್ತು ವಸತಿ ಸೌಕರ್ಯಗಳನ್ನು ನೋಡಿದೆ, ಎಷ್ಟು ಅಚ್ಚುಕಟ್ಟಾಗಿದೆ ಎಲ್ಲವೂ ಎನಿಸಿತು. ಕಲಾವಿದರ ಆವಶ್ಯತೆಗಳು, ಕುಂದು ಕೊರತೆಗಳನ್ನು ಪರಿಶೀಲಿಸಲು ನಿಯಮಿಸಿದ್ದ ಅಧಿಕಾರಿಗಳು ಕಲಾವಿದರ ನಡುವೆಯೇ ಓಡಾಡಿಕೊಂಡು ಆಗಿಂದ್ದಾಗ್ಗೆ ಪರಿಹರಿಸುತ್ತಿದ್ದುದು ಕಂಡುಬಂತು.
      ಪಕ್ಕದಲ್ಲೇ ಮಲ್ಲಯುಧ್ಧದ ಸ್ಪರ್ಧೆಗೆ ಬಂದಿದ್ದ ಕುಸ್ತಿಪಟುಗಳ ಬಿಡಾರ. ಇದು ಕೃಷ್ಣದೇವರಾಯರ ಅಚ್ಚುಮೆಚ್ಚಿನ ಸ್ಪರ್ಧೆ. ಅದರ ಪಕ್ಕದಲ್ಲಿ ಹೊರದೇಶದಿಂದ ಬಂದಿದ್ದ ಅತಿಥಿಗಳ ಬಿಡಾರ. ಇವರಲ್ಲಿ ಬಹುತೇಕರು ಪೋರ್ಚುಗೀಸರಂತೆ. ವಿಜಯನಗರದ ಸೈನ್ಯಕ್ಕೆ ಹಲವಾರು ವರ್ಷಗಳಿಂದಲೂ  ಕುದುರೆಗಳ ಸರಬರಾಜು ಮಾಡುತ್ತಿದ್ದುದು ಇವರಂತೆ. ನದಿ ಮತ್ತು ಕೆರೆಗಳ ನೀರನ್ನು  ನಾಗರೀಕರಿಗೆ, ದೇವಸ್ಥಾನಗಳಿಗೆ ಮತ್ತು ಅರಮನೆಗಳಿಗೆ ತೂಬುಗಳ ಮುಖಾಂತರ ಹರಿಸುವ ವ್ಯವಸ್ಥೆಯನ್ನು ಇವರೇ ಮಾಡಿಕೊಟ್ಟದ್ದಂತೆ.
      ಇದರ ಪಕ್ಕದಲ್ಲೇ ಸಾಮಾನ್ಯ ನಾಗರೀಕರ ಬಿಡಾರ. ಇಲ್ಲಿಯ ಶಿಸ್ತನ್ನು ಕಾಪಾಡಲು ಮತ್ತು ಸೌಲಭ್ಯಗಳನ್ನು ಪರಿಭಾರಿಸಲು ಸೈನಿಕರನ್ನು ನಿಯಮಿಸಿದ್ದರು. ಗಂಡಸರು ಮತ್ತು ಹೆಂಗಸರಿಗೆ ಪ್ರತ್ಯೇಕ ವ್ಯವಸ್ಥೆ. ಪ್ರತಿ ನೂರು ಅಡಿಗೊಂದರಂತೆ ನೀರು, ಮಜ್ಜಿಗೆ ಮತ್ತು ಪಾನಕಗಳ ವ್ಯವಸ್ಥೆ. ವಿಶಾಲವಾದ ಭೋಜನಾಲಯದಲ್ಲಿ ಊಟದ ಸಂಭ್ರಮ ನಡೆಯುತ್ತಿತ್ತು.
      ಇಂತಹ ಸಂಧರ್ಭಗಳಲ್ಲಿ ಕಳ್ಳಕಾಕರ ಸಂಚಾರವಿರುವುದು ಸಹಜ , ಅದಕ್ಕೇನು ವ್ಯವಸ್ಥೆ ಮಾಡಿದ್ದಾರೆ ಎಂದು ಸೈನ್ಯಾಧಿಕಾರಿಗಳನ್ನು ಕೇಳಿದೆ... ಅವರ ಕೊಟ್ಟ ಉತ್ತರಕ್ಕೆ ದಂಗಾಗಿ ಹೋದೆ. ಈಗಾಗಲೇ ಸಿಕ್ಕ ಹತ್ತು ಹನ್ನೆರಡು ಕಳ್ಳರ ಕೈಗಳನ್ನು ಎಲ್ಲರ ಮುಂದೆಯೇ ಕತ್ತರಿಸಲಾಗಿದೆಯಂತೆ. ‌ಸಮಾಜದಲ್ಲಿ ಶಿಸ್ತು ಕಾಪಾಡಲು ಇಂತಹ ಮಟ್ಟದ ಕ್ರೌರ್ಯವಿರಬೇಕೆ ಎಂದು ಯೋಚಿಸುತ್ತಾ ನನ್ನ ಅತಿಥಿ ಗೃಹಕ್ಕೆ ಮರಳಿದೆ.   


Wednesday, March 8, 2017

ಶಿಲೆಗಳು ಸಂಗೀತವಾ ಹಾಡಿದೆ (Hampi Vittala Temple)

 
       ವಿಠ್ಠಲಾಪುರ ನಮ್ಮೂರು. ತುಂಗಭಧ್ರಾನದಿ ಮತ್ತು ವಿಠ್ಠಲ ದೇವಸ್ಥಾನದ ಮಧ್ಯ ನಮ್ಮ ಮನೆ. ಬೆಣಚುಕಲ್ಲು, ಪೆಡಸುಕಲ್ಲು, ಬಳಪದಕಲ್ಲಿನಲ್ಲಿ ಆಡುತ್ತಲೇ ಬೆಳೆದವರು ನಾವು. ಕಲ್ಲು ಕೆತ್ತನೆಯೇ ನಮ್ಮ ಕುಲಕಸುಬು. ವಿಠ್ಠಲ ದೇವಾಲಯವನ್ನು ಕಟ್ಟಿದವರು ನಮ್ಮ ಹಿರಿಯರು.
ಈಗ ಶೃಂಗೇರಿ, ಮಧುರೈನಿಂದ ಬಂದ ಶಿಲ್ಪಿಗಳೂ ನಮ್ಮ ವಠಾರದಲ್ಲೇ ತಂಗಿದ್ದಾರೆ. ಕೃಷ್ಣದೇವರಾಯರ ಆದೇಶದಂತೆ ಈಗ ನಾವೆಲ್ಲಾ 'ಸರಿಗಮ'ಮಂಟಪ ನಿರ್ಮಿಸುತ್ತಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಕೆಲಸ ಮುಗಿದು ಬಿಡುತ್ತದೆ. ಹೊರಗಿನಿಂದ ಬಂದ ಶಿಲ್ಪಿಗಳಿಗೆ ಇಲ್ಲಿಯ ಶಿಲೆಗಳ ಪರಿಚಯುವುಸುದೂ ಸಹ ನನ್ನ ಜವಾ...ಬ್ದಾರಿಯಾಗಿ ಬಿಟ್ಟಿದೆ.
 
                 ಸಾಮಾನ್ಯ ನೋಡುಗರಿಗೆ ಈ ಕಲ್ಲು ಬಂಡೆಗಳೆಲ್ಲಾ ಒಂದೇ ತರಹ ಕಾಣಬಹುದು ಆದರೆ ಈ ಬಂಡೆಗಳ ಜೊತೆಗೇ ಉಸಿರಾಡುವ ನಮಗೆ ಇವುಗಳ ಸೂಕ್ಷ್ಮತೆ ಗೊತ್ತು. ನಾವು ವಿಜಯನಗರದ ಉದ್ದಗಲಕ್ಕೂ ಈಗ ಹುಡುಕುತ್ತಿರುವುದು "ಹೆಣ್ಣುಕಲ್ಲು" ಮತ್ತು "ಗಂಡುಕಲ್ಲು"!
ನಮ್ಮ ಹಿರಿಯ ಶಿಲ್ಪಿಗಳು ಹೇಳಿಕೊಟ್ಟ ವಿದ್ಯೆ ಇದೆಲ್ಲಾ. ಪ್ರತಿಯೊಂದು ಜೀವಕ್ಕೂ, ಕಣ ಕಣಕ್ಕೂ ಅದರದೇ ಆದ ತರಂಗಾಂತರವಿರುತ್ತದೆ. ನಮಗೂ ಹಾಗೇ..ನಮ್ಮ ನಮ್ಮ ದೇಹಕ್ಕೆ , ಮನಸ್ಸಿಗೆ ಒಂದು ತರಂಗಾಂತರವಿದೆ, ಆದರೆ ಅದನ್ನು ನಾವಾಗೇ ಕಂಡುಕೊಳ್ಳಬೇಕು...ಅದಕ್ಕೆ ಧ್ಯಾನ ಮುಖ್ಯ. ಅದಕ್ಕೆ ನಮಗೆಲ್ಲಾ ಧ್ಯಾನದಿಂದಲೇ ಪ್ರಾರಂಭವಾದ ತರಬೇತಿ. ನಾವೇನೋ ಸಜೀವಿಗಳು...ಆದರೆ ಕಲ್ಲುಗಳ ತರಂಗಾಂತರ?
ಮೊದಮೊದಲು ಇವೆಲ್ಲಾ ಸುಳ್ಳು ಎನಿಸಿತ್ತು. ಕಲ್ಲುಗಳಲ್ಲೂ ಹೆಣ್ಣು ಗಂಡು ಎಂಬ ಭೇಧವೇ! ಗಂಡು ಕಲ್ಲುಗಳಿಂದ ತಾಳವಾದ್ಯಗಳ ಧ್ವನಿ ಮತ್ತು ಹೆಣ್ಣು ಕಲ್ಲುಗಳಿಂದ ತಂತಿವಾದ್ಯಗಳ ಧ್ವನಿ ಬರುತ್ತದೆ.
 ಐವತ್ತಾರು ಸಂಗೀತ ಕಂಭಗಳ ಮಂಟಪವೊಂದನ್ನು ನಿರ್ಮಿಸುವ ‌ಹೊಣೆಹೊತ್ತು.. ಕೃಷ್ಣದೇವರಾಯರಿಗೆ ಅವರ ಇನ್ನೊಂದು ಯುಧ್ಧದ ವಿಜಯೋತ್ಸವದ ಸಂಧರ್ಭದಲ್ಲಿ ಉಧ್ಘಾಟನೆಗೆ ತಯಾರಾಗಿರುತ್ತದೆ ಎಂದು ಆಶ್ವಾಸನೆ ಕೊಟ್ಟಮೇಲೆ ನಮಗೆಲ್ಲಾ ಬಿಡುವೇ ಇಲ್ಲ. ಕೃಷ್ಣದೇವರಾಯರು ಬಹಮನಿ ತುರಕರೊಂದಿಗೆ ಯುಧ್ಧಕ್ಕೆ ಹೋದರೆ ನಮಗಿಲ್ಲಿ ಕಲ್ಲು ಬಂಡೆಗಳೊಡನೆ ಸಮರ.
ನಾಲ್ಕು, ಆರು ಸಂಗೀತದ ಕಲ್ಲು ಕಂಭಗಳನ್ನು ನಮ್ಮ ಪೂರ್ವಜರಾದ ಜಕಣಾಚಾರಿ, ಡಂಕಣಾಚಾರಿಯರು ಸೃಷ್ಟಿಸಿದ್ದರೆಂದು ಕೇಳಿದ್ದೆವು ಆದರೆ ಐವತ್ತಾರು ಕಂಭಗಳ ವಾದ್ಯವೃಂದ ಸೃಷ್ಟಿಮಾಡುವುದೆಂದರೆ ಸಾಮಾನ್ಯದ ಮಾತೇ? ಈ ಸಂಗೀತ ಸೃಷ್ಟಿಸುವ ಕಲ್ಲುಗಳನ್ನು ಎಲ್ಲಿ ಹುಡುಕುವುದು, ಹೇಗೆ ಕೆತ್ತುವುದು? ಬರಿ ಶಬ್ದ ಬಂದರೆ ಸಾಲದು, ಶೃತಿ, ಗಾನ ಮತ್ತು ಲಯಗಳನ್ನೊಳಗೊಂಡ ಸಪ್ತಸ್ವರಗಳ ಸಂಗಿತದ ಸೃಷ್ಟಿಯಾಗಬೇಕು.


              ಮೊದಲು ನಮಗೆಲ್ಲಾ ತಾಳವಾದ್ಯಗಳ ತರಂಗಾಂತರಗಳ ಕಲಿಕೆ ಶುರುವಾಯಿತು. ಪಂಚತಾಳ, ತಬಲಾ,ಮೃದಂಗ, ಜಲತರಂಗ ಮತ್ತು ಮದ್ದಳೆ ಇವುಗಳ ಧ್ವನಿ ತರಂಗಗಳನ್ನು ಏಕಾಗ್ರತೆಯಿಂದ ಕೇಳಿ, ಕಂಭಗಳನ್ನು ಇದೇ ನಿರ್ಧಿಷ್ಟವಾದ ಕಂಪನ ಬರುವವರೆಗೂ ಕೆತ್ತನೆ ನಡೆಸಬೇಕು. ಸುಮಾರು ವಾರಗಳ ಹುಡುಕಾಟದ ನಂತರ ಹದಿನೈದು ಅಡಿ ಎತ್ತರದ ಸುಮಾರು ಎಂಭತ್ತು ಕಂಭಗಳನ್ನು ವಿಠ್ಠಲ ಮಂದಿರದ ಆವರಣಕ್ಕೆ ಆನೆಗಳ ಸಹಾಯದಿಂದ ಸಾಗಿಸಲಾಯಿತು. ಪೂರ್ವನಿರ್ಧಾರಿತ ಯೋಜನೆಯಂತೆ ಮಂಟಪ ಮಧ್ಯದಲ್ಲಿ ಹದಿನಾರು ಕಂಭಗಳನ್ನು ಚೌಕಾಕಾರದಲ್ಲಿ ಸ್ಥಾಪಿಸಬೇಕು. ಇನ್ನು ನಲವತ್ತು ಕಂಭಗಳು ಮಂಟಪದ ಸುತ್ತಲೂ ಸ್ಥಾಪಿಸಬೇಕು. ಪ್ರತಿಯೊಂದು ಕಂಭವೂ ಹನ್ನೊಂದು ಅಡಿ ಹತ್ತು ಇಂಚಿನಂತೆ ಕೆತ್ತಿ ಇಡಲಾಯಿತು. ಪ್ರತಿಯೊಂದು ಕಂಬದ ಅನುರಣಿಯ ತರಂಗಾಂತರದ ಪ್ರಕಾರ ಸೂಕ್ಷ ಕೆತ್ತನೆಯನ್ನು ಹಿರಿಯ ಶಿಲ್ಪಿಗಳು ಮಾಡುತ್ತಿದ್ದಾರೆ..ಈ ಕೆಲಸಗಳೆಲ್ಲಾ ನಿಶಬ್ದ ವಾತಾವರಣದಲ್ಲಿ ನಡೆಯಬೇಕು. ಹಗಲೆಲ್ಲಾ ಸ್ಥೂಲಕಾರ್ಯಗಳು, ರಾತ್ರಿಯ ನೀರವತೆಯಲ್ಲಿ ವಾದ್ಯದ ತರಂಗ ಬರುವವರೆಗೂ ತದೇಕಚಿತ್ತತೆಯಲ್ಲಿ ಶಿಲ್ಪನಿರ್ಮಾಣ.
ಕೃಷ್ಣದೇವರಾಯರ ಇನ್ನೊಂದು ಯುಧ್ಧದಲ್ಲಿ ವಿಜಯಿಯಾಗಿ ಬರುತ್ತಿದ್ದಾರೆ ಎನ್ನುವ ಸಮಾಚಾರ ಬರುವುದಕ್ಕೂ ಎರಡು ದಿನ ಮುಂಚಿತವಾಗೇ ಮಂಟಪದ ನಿರ್ಮಾಣವನ್ನು ಮುಕ್ತಾಯಗೊಳಿಸಿ ರಾಯರ ಆಗಮನವನ್ನೇ ಎದಿರು ನೋಡುತ್ತಾ ಕುಳಿತಿದ್ದೇವೆ.