Saturday, November 10, 2018

ಕುಲಗುರು ವ್ಯಾಸತೀರ್ಥರು ಮತ್ತು ರುದ್ರಾಭಿಷೇಕ





ನಮ್ಮ ತಂದೆಯವರು ನನಗೆ ಭೀಮಕ್ಕ ಅಂತಾ ಯಾಕೆ ಹಾಗೆ ಹೆಸರಿಟ್ಟರು ಎಂದು ಚಿಕ್ಕಂದಿನಲ್ಲಿ ಕೆಲವೊಮ್ಮೆ ಕೋಪ ಬರುತ್ತಿತ್ತು ಆದರೆ 'ಬನ್ನೂರಿನ ಭೀಮಕ್ಕ' ಎಂದು ಕರೆಸಿಕೊಂಡೇ ಬೆಳೆದು ದೊಡ್ಡವಳಾಗಿ ಒಂಥರಾ ಆ ಹೆಸರಿನೊಂದಿಗೆ ಹೊಂದಾಣಿಕೆ ಮಾಡಿಕೊಂಡುಬಿಟ್ಟೆ.
ಹಾಗೇ.. ನನ್ನ ತಂದೆಯ ಹೆಸರೂ ವಿಚಿತ್ರವೆನಿಸುತ್ತಿತ್ತು, 'ಸುಮತಿ ಬಾಲಣ್ಣ'  ಅದೊಂಥರಾ ಹೆಂಗಸರ ಹೆಸರಿನಂತಿಲ್ಲವೇ?
ಸುಮತಿ ಎನ್ನುವುದು ಅವರಿಗೆ ಬನ್ನೂರಿನ ಜನ ಕೊಟ್ಟ ಬಿರುದಂತೆ, ಅವರ ಒಳ್ಳೆಯ ಗುಣಕ್ಕೆ. ಹೌದು ಅದಂತೂ ನಿಜ ನಮ್ಮನ್ನೆಲ್ಲಾ
ಒಳ್ಳೆಯ ಸಂಸ್ಕಾರದಿಂದ ಬೆಳಸಿ, ವಿದ್ಯೆಯ ಧಾರೆಯೆರೆದು ಪೋಷಿಸಿದ ಬುನಾದಿಯೇ ಈಗಲೂ ನಮ್ಮ ಬದುಕಿನ ಆಧಾರ.
ಅದರಲ್ಲೂ ನನ್ನ ತಮ್ಮ ಯತಿರಾಜು ಮೈಸೂರಿನ ಬಳಿಯ ಈ ಚಿಕ್ಕಹಳ್ಳಿಯಲ್ಲಿ ಹುಟ್ಟಿ ಮುಂದೊಮ್ಮೆ ಕರ್ನಾಟಕ ಸಾಮ್ರಾಜ್ಯದ ಧರ್ಮಪಾಲಕನಾಗಿ, ಕೃಷ್ಣದೇವರಾಯರಿಂದ ಕುಲಗುರು ಎನ್ನುವ ಆದರದ ಗೌರವವನ್ನು ಸಂಪಾದಿಸಿ, " ಶ್ರೀಪಾದ ವ್ಯಾಸತೀರ್ಥರು" ಎಂದು ಪ್ರಸಿದ್ದಿ ಪಡೆದಿರುವುದಕ್ಕೆ ಕಾರಣ ನಮ್ಮ ತಂದೆಯವರು ಹಾಕಿಕೊಟ್ಟ ಭದ್ರಬುನಾದಿ.

ಹೌದು, ಇಡೀ ಕರ್ನಾಟಕ ಸಾಮ್ರಾಜ್ಯವೇ ಇವರ ಪಾಂಡಿತ್ಯಕ್ಕೆ ಶಿರಬಾಗಿಸಿ ವಂದಿಸಿದೆ. ಇವರ ಕೃತಿಗಳು, ಕೀರ್ತನೆಗಳ ಕಂಪು ಎಲ್ಲೆಡೆ ಪಸರಿಸಿವೆ.
 'ಕೃಷ್ಣಾ.. ನೀ ಬೇಗನೇ ಬಾರೋ' ಒಮ್ಮೆ ಇವರು ಉಡುಪಿಯಲ್ಲಿ ರಚಿಸಿದ ಹಾಗೂ ಇನ್ನೂ ನೂರಾರು ಹಾಡುಗಳು ಕೃಷ್ಣದೇವರಾಯರು ಸ್ವತಃ ಹಾಡುತ್ತಾರಂತೆ.
 ಅಂತಹ ವ್ಯಾಸತೀರ್ಥರು ಈ ಬನ್ನೂರಿನ ಭೀಮಕ್ಕನ ತಮ್ಮ, ಯತಿ..ಯತಿರಾಜು. ಇದನ್ನೆಲ್ಲಾ ನೆನಪಿಸಿಕೊಂಡು ಹೆಮ್ಮೆಯಿಂದ ಎದೆಯುಬ್ಬಿತ್ತದೆ.

ಈಗ ಮುಳುಬಾಗಿಲಿನ ಶ್ರೀಪಾದ ಮಠದ ಕೆಲವು ಶಿಷ್ಯವೃಂದದ ಜೊತೆ ನಾವೆಲ್ಲರೂ ಗೋಕರ್ಣಕ್ಕೆ  ಬಂದು, ನನ್ನ ತಮ್ಮ ಯತಿ..ಅಲ್ಲಲ್ಲ ವ್ಯಾಸತೀರ್ಥರ ಮತ್ತು ಕೃಷ್ಣದೇವರಾಯರ ಆಗಮನಕ್ಕಾಗಿ ಅವರು ನಡೆಸಿಕೊಡುವ ರುದ್ರಾಭಿಷೇಕಕ್ಕಾಗಿ ಕಾಯುತ್ತಾ ಕುಳಿತಾಗ ಇದೆಲ್ಲಾ ನೆನಪಿಗೆ ಬಂತು.

ಆರನೇ ವರ್ಷದಲ್ಲಿ ಉಪನಯನವಾದ ನಂತರ ನನ್ನ ತಮ್ಮನನ್ನು ಚನ್ನಪಟ್ಟಣದ ಬಳಿಯಿರುವ ಅಬ್ಬೂರಿನ ಗುರುಕುಲಕ್ಕೆ ಕರೆದುಕೊಂಡು ಹೋದರು ಗುರು ಬ್ರಾಹ್ಮಣ್ಯತೀರ್ಥರು. ಅಲ್ಲಿಂದ ಪ್ರಾರಂಭವಾಯಿತು ಇವರ ಪರ್ಯಟನೆ. ಮುಂದೆ ಹನ್ನೆರಡು ವರ್ಷ ಮುಳುಬಾಗಿಲಿನ ಶ್ರೀಪಾದರ ಮಠದಲ್ಲಿ ತಮ್ಮ ವೇದವ್ಯಾಸಂಗ, ಚಿಂತನೆ ಮತ್ತು ತರ್ಕಗಳಲ್ಲಿ ಪರಿಣಿತಿ ಪಡೆದರು. ಆಗ ತಿರುಪತಿಯಲ್ಲಿ ತುಂಬಾ ಅನಾಚಾರ ಗಳು ನಡೆಯುತ್ತಿದ್ದವಂತೆ.

 ಅಷ್ಟಕ್ಕೇ ತೃಪ್ತಿ ಸಿಗಲಿಲ್ಲ ಎಂದು ತಿರುಪತಿಗೆ ಬಂದು ನೆಲಸಿದರು. ಮುಂದಿನ ಹನ್ನೆರಡು ವರ್ಷಗಳ ನಿರಂತರ ಶ್ರೀನಿವಾಸರ ಆರಾಧನೆ, ಅಧ್ಯಯನ.

ಕೃಷ್ಣದೇವರಾಯರ ತಂದೆ ನರಸನಾಯಕರು ಪರಿಪರಿಯಾಗಿ ಬೇಡಿಕೊಂಡ ನಂತರ ವಿಜಯನಗರಕ್ಕೆ ಆಗಮನಿಸಿದರು. ಚಂದ್ರಗಿರಿಯಲ್ಲಿ ತಮ್ಮ ಮಠದಲ್ಲಿ ಧರ್ಮ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲಿವರೆಗೂ ಕೇವಲ ಧಾರ್ಮಿಕ ಗುರುವಾಗಿದ್ದರೇ ಹೊರತು ಸಾಮ್ರಾಜ್ಯದ ಆಡಳಿತಕ್ಕೆ ತೊಡಗಿಸಿಕೊಂಡಿರಲಿಲ್ಲ.

ಆದರೆ ಕೃಷ್ಣದೇವರಾಯರ ಆಗಮನವಾಗುತ್ತಲೇ ಇವರಿಗೆ ಭವಿಷ್ಯದ ದರ್ಶನವಾಯಿತಂತೆ. ಇಲ್ಲೊಬ್ಬ ಚಕ್ರವರ್ತಿಯ, ಒಂದು ಮಹಾನ್ ಸಾಮ್ರಾಜ್ಯದ ಉಗಮವಾಗಲಿದೆ ಎಂದು ಭವಿಷ್ಯ ನುಡಿದರಂತೆ. ಅಂತಹ ಭವ್ಯ ಸಾಮ್ರಾಜ್ಯದ ಧರ್ಮರಕ್ಷಕನ ಹೊಣೆಹೊತ್ತು ಅಲ್ಲೇ ನೆಲಸುವ ನಿರ್ಧಾರ ಮಾಡಿಬಿಟ್ಟರು.
ಪಟ್ಟಾಭಿಷೇಕದ ಸಮಾರಂಭದಲ್ಲಿ ವೇದಘೋಷಗಳ ಮಧ್ಯ ಇವರೇ ಸ್ವತಃ ರಾಯರಿಗೆ ಶ್ರೀಗಂಧ, ಅರಿಶಿನ ಪೂಸಿಸಿ ಹಾಲಿನ ಅಭಿಷೇಕ ಮಾಡಿ, ಸಿಂಹಾಸನದ ಮೇಲೆ ಕೂರಿಸಿ ಸಾಮ್ರಾಜ್ಯದ ಕಿರೀಟವನ್ನು ರಾಯರ ಶಿರದ ಮೇಲಿರಿಸಿ ಆಶೀರ್ವಾದಿಸಿದರಂತೆ.
ಅದೇ ಸಿಂಹಾಸನಕ್ಕೆ 'ಕುಹುಯೋಗ' ದಿಂದ ಕುತ್ತು ಬಂದು ಅವಘಡಗಳು ಅರಿವಾಗಿ, ತಾವೇ ಕೆಲಕಾಲ ಸಿಂಹಾಸನವನ್ನು ಅಲಂಕರಿಸಿ ರಾಯರ ಮತ್ತು ಸಾಮ್ರಾಜ್ಯದ ರಕ್ಷಣೆ ಮಾಡಿದರು.

ಇದಕ್ಕೆ ಗುರುದಕ್ಷಿಣೆಯಾಗಿ ರಾಯರು ವ್ಯಾಸತೀರ್ಥರಿಗೆ 'ರತ್ನಾಭಿಷೇಕ' ನೆರವೇರಿಸಿದರಂತೆ. ಗುರುವನ್ನು ಚಿನ್ನದ ಪೀಠದಲ್ಲಿ ಕುಳ್ಳಿರಿಸಿ, ಚಿನ್ನದ ಬಟ್ಟಲಿನಲ್ಲಿ ಮುತ್ತು ರತ್ನಗಳನ್ನು ತುಂಬಿ ತುಂಬಿ ಅಭಿಷೇಕ ಮಾಡುತ್ತಿದ್ದಾಗ, ಅವೇ ಮುತ್ತು ರತ್ನಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ಅಲ್ಲಿ ನೆರೆದಿದ್ದವರಿಗೆ ದಾನಮಾಡುತ್ತಿದ್ದರಂತೆ ವ್ಯಾಸತೀರ್ಥರು. ಆಹಾ..ಅದೆಂತಹಾ ಅಧ್ಭುತ ದೃಷ್ಯವಾಗಿರಬಹುದು ನೋಡಲು.

ಹೀಗೆಲ್ಲಾ ಆಲೋಚನೆಗಳ ಸರಮಾಲೆಯ ನಡುವೆಯೇ ವಿಜಯನಗರದ ರಾಜಪಡೆ ದೇವಸ್ಥಾನದ ಆವರಣವನ್ನು ಪ್ರವೇಶಿಸಿದರು. ಈಗ ಪ್ರತ್ಯಕ್ಷವಾಗಿ ವ್ಯಾಸತೀರ್ಥರ ನಿರ್ದೇಶನದಲ್ಲಿ ನಡೆಯುವ ರುದ್ರಾಭಿಷೇಕವನ್ನು ನೋಡುವ ಭಾಗ್ಯ…

ಪ್ರಾಣಲಿಂಗದ ಪೂಜೆ

ಒಮ್ಮೆ ಹಂಪೆಯಲ್ಲಿ ಏರ್ಪಡಿಸಿದ್ದ ಧರ್ಮ ಸಮ್ಮೇಳನದಲ್ಲಿ ಕಳಿಂಗ ದೇಶದ ಬಸವ ಭಟ್ಟರು ನನ್ನ ತಮ್ಮ ವ್ಯಾಸತೀರ್ಥರಿಗೆ ಒಂದು ಶಿವಲಿಂಗವನ್ನು  ನೆನಪಿನಾರ್ಥವಾಗಿ ಕೊಟ್ಟಿದ್ದರಂತೆ. ವ್ಯಾಸತೀರ್ಥರು ಅದನ್ನು ತಮ್ಮ ಮಠದಲ್ಲಿ ಸ್ಥಾಪನೆ ಮಾಡಿ ಪ್ರತೀ ಸೋಮವಾರ ರುದ್ರಾಭಿಷೇಕ ನೆರವೇರಿಸುತ್ತಿರುವರಂತೆ. ವರ್ಷಕ್ಕೊಮ್ಮೆ ಮಹಾಶಿವರಾತ್ರಿಯಂದು ಸಹಸ್ರಾರು ಭಕ್ತರು ಮಠಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರಂತೆ. ತಾವು ವೈಯಕ್ತಿಕವಾಗಿ ಮಾಧ್ವ ತತ್ವದ ಪರಿಪಾಲನೆ ಮಾಡುತ್ತಿದ್ದರೂ ಸಹಾ ಇಡೀ ಸಾಮ್ರಾಜ್ಯದ ವಿವಿಧ ಧಾರ್ಮಿಕ ಪರಂಪರೆಗಳ ಜವಾಬ್ದಾರಿ ತಮ್ಮ ಮೇಲಿದೆ ಎಂಬುದನ್ನು ವ್ಯಾಸತೀರ್ಥರು ಎಂದೂ ಮರೆತಿರಲಿಲ್ಲ. ಸುಮಾರು ಏಳು ನೂರಕ್ಕೂ ಹೆಚ್ಚು ಆಂಜನೇಯ ವಿಗ್ರಹಗಳನ್ನು, ದೇವಸ್ಥಾನಗಳನ್ನು ಸಾಮ್ರಾಜ್ಯದ ಹಲವಾರು ಪ್ರದೇಶಗಳಲ್ಲಿ ಸ್ಥಾಪಿಸಿದ್ದಾರಂತೆ.

ಇವತ್ತು ಇಲ್ಲಿ ಗೋಕರ್ಣದ ಮಹಬಲೇಶ್ವರ ಮಂದಿರದಲ್ಲಿ ಬೆಳಗ್ಗೆಯಿಂದ ವ್ಯಾಸತೀರ್ಥರ ನಿರ್ದೇಶನದಲ್ಲಿ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಈಗಾಗಲೇ ಮೃತ್ಯುಂಜಯ ಹೋಮ ಮುಗಿದ ಮೇಲೆ ಪ್ರಾಣಲಿಂಗಕ್ಕೆ ರುದ್ರಾಭಿಷೇಕದ ಸಮಾರಂಭ. ಮಧ್ಯ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು 'ಈಗ ಬಂದೆಯಾ ಅಕ್ಕಾ..’ ಎನ್ನುವಷ್ಟೇಕ್ಕೇ ನನ್ನ ತಮ್ಮನಿಗೆ ಬಿಡುವಾಗಿದ್ದು.

ಆತ್ಮಲಿಂಗದ ಸಮೀಪ ಕೃಷ್ಣದೇವರಾಯರು ಮತ್ತು ವ್ಯಾಸತೀರ್ಥರು ಕುಳಿತಿದ್ದಾರೆ. ಅವರ ಹಿಂದೆಯೇ ರಾಣಿ ತಿರುಮಲಾಂಬೆ ಮತ್ತು ಚಿನ್ನಮ್ಮದೇವಿಯರೊಡನೆ ರಾಜ ಪರಿವಾರದ ಸದಸ್ಯರು ಆಸೀನರಾಗಿದ್ದಾರೆ. ಇನ್ನೂ ಐದುವರ್ಷದ ಪುಟ್ಟ ಯುವರಾಜ ತಿರುಮಲ ರಾಯ ವೇದಶಾಲೆಯ ವಿಧ್ಯಾರ್ಥಿಗಳೊಂದಿಗೆ ಕುಳಿತಿದ್ದಾರೆ. ಸಾಮೂಹಿಕ ವೇದಘೋಷಗಳ ಅಲೆಯ ತರಂಗಾಂತರಗಳು ಎಲ್ಲೆಲ್ಲೂ ಪ್ರತಿಧ್ವನಿಸಿತ್ತಿವೆ....

ಓಂ ತ್ರಯಂಬಕಂ ಯಜಾಮಹೇ
ಸುಗಂಧಿಮ್ ಪುಷ್ಟಿವರ್ಧನಮ್
ಉರುವಾರುಕಮಿವ ಬಂಧನಾನ್
ಮೃತ್ಯೋರ್ಮಿಕ್ಷಿಯ ಮಾಮ್ರಿತಾತ್...

ಆತ್ಮಲಿಂಗದ ಸುತ್ತಲೂ ಪೇರಿಸಿದ್ದ ಪೂಜಾ ಪ್ರಾಕರಗಳಿಂದ ಒಂದಂದೇ ಪಧಾರ್ಥವನ್ನು ಎತ್ತಿ ರಾಯರ ಕೈಗೆ ಕೊಡಲಾಗುತ್ತಿದೆ. ಮೊದಲು ಗಂಗಾಜಲದ ಅಭಿಷೇಕ, ನಂತರ ಹಾಲು, ಜೇನುತುಪ್ಪ, ಮೊಸರು, ಕಬ್ಬಿನಹಾಲು, ಎಳೆನೀರು, ಫಲೋದಕ ಮತ್ತು ಗಂಧೋದಕದಿಂದ ಅಭಿಷೇಕ ಮಾಡುತ್ತಿದ್ದಾರೆ ಕೃಷ್ಣದೇವರಾಯರು. ಮಧ್ಯ ಮಧ್ಯ ನಮಕ ಮತ್ತು ಚಮಕಗಳನ್ನು ಕೇಳುತ್ತಾ ಕಣ್ಣು ಮುಚ್ಚಿಕೊಂಡು ಧ್ಯಾನಕ್ಕೆ ಇಳಿದು ಬಿಡುತ್ತಿದ್ದಾರೆ. ಮುಖದಲ್ಲಿ ಒಂದು ಕಿರುನಗು ಆಗಾಗ, ಶಿವನೊಂದಿಗೆ ಸಂಭಾಷಿಸುತ್ತಿದ್ದಾರೇನೋ ಎನ್ನುವ ಭಾವ.
ನಮ್ಮ ತಂದೆಯವರು ಈ ನಮಕ ಮತ್ತು ಚಮಕಗಳ ಬಗ್ಗೆ ಹೇಳುತ್ತಿದ್ದದು ನೆನಪಾಯಿತು.

ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ|
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ|

ಹೀಗೆ ರುದ್ರಮಂತ್ರಗಳ ಒಂದೊಂದು ಪಾದ ನಮಃ ದಲ್ಲಿ ಅಂತ್ಯವಾಗುವುದರಿಂದ ಅವುಗಳನ್ನೂ ನಮಕವೆಂದು ಕರೆಯುತ್ತಾರೆ.

ನಮೋ ಭವಾಯ ಚ
ರುದ್ರಾಯ ಚ
ನಮಃ ಶರ್ವಾಯ ಚ
ಪಶುಪತಯೇ ಚ
ನಮೋ ನೀಲಗ್ರೀವಾಯ ಚ
ಶಿತಿಕಂಠಾಯ ಚ
ನಮಃ ಕಪರ್ದಿನೇ ಚ
ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ

ಹೀಗೆ ಪ್ರತಿ ಪಾದವೂ ಚ ದಲ್ಲಿ ಅಂತ್ಯಗೊಂಡಿರುವುದರಿಂದ ಚಮಕ ಎಂದು ಕರೆಯುತ್ತಾರೆ.

ಈ ರುದ್ರಮಂತ್ರಗಳ ತರಂಗಗಳ ಅನುಭೂತಿಯನ್ನು ಸವಿಯಲು ನಾನೂ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ಧ್ಯಾನಕ್ಕಿಳಿದು ಬಿಟ್ಟೆ. ಸಮಯ, ಸ್ಥಳದ ಅರಿವೇ ಇಲ್ಲದಂತೆ ಎಲ್ಲವೂ ರುದ್ರಮಯ..ಆದರೆ ರೌದ್ರತೆ ಇಲ್ಲದ ಪ್ರಶಾಂತ ಶಿವಲೋಕದಲ್ಲಿ ಸಂಚರಿಸಿದ ಅನುಭವ.
ಮಹಾಮಂಗಳಾರತಿಯ ಪ್ರಾರಂಭದ ಗಂಟೆಗಳ ಶಬ್ದ ನನ್ನನ್ನು ಇಹಲೋಕಕ್ಕೆ ತಂದು ಇಳಿಸಿತು.
ಮೈಮನಗಳಲ್ಲಿ ಆನಂದದ ಪ್ರವಾಹ ಹರಿದಂತಹ ಅನುಭವ. ಕಣ್ಣುತೆರೆದು ರಾಣಿಯರ ಕಡೆ ನೋಡಿದೆ. ಇಬ್ಬರೂ ವೇದಶಾಲೆಯ ವಿಧ್ಯಾರ್ಥಿಗಳ ಮಧ್ಯ ಕುಳಿತಿದ್ದ ಯುವರಾಜನನ್ನೇ ಹೆಮ್ಮೆಯಿಂದ ನೋಡುತ್ತಿದ್ದರು.
ಸಪ್ತಮುಕ್ತಿ ಯಾತ್ರೆ ಮುಗಿದ ಮೇಲೆ ಈ ಯುವರಾಜರಿಗೆ ಪಟ್ಟಾಭಿಷೇಕವಂತೆ, ಇನ್ನೂ ಮಗು ಆಡುವ, ಕಲಿಯುವ ವಯಸ್ಸು. ಒಂದು ಸಮೃದ್ಧ, ಸುರಕ್ಷ ಸಾಮ್ರಾಜ್ಯಕ್ಕೆ ಎಲ್ಲವನ್ನೂ ಕರುಣಿಸಿದ ದೇವರು ಸಂತಾನ ಭಾಗ್ಯದಲ್ಲಿ ಸ್ವಲ್ಪ ಜಿಪುಣತನ ಮಾಡಿಬಿಟ್ಟರು ಎನಿಸಿತು.
 ಹೌದು, ಎನ್ನುವಂತೆ ಆತ್ಮಲಿಂಗದ ಮೇಲಿನ ಹೂವು ಎಡಭಾಗದಿಂದ ಉರುಳಿತು…

✍️...ವಿಂಗ್ ಕಮಾಂಡರ್ ಸುದರ್ಶನ

Friday, November 9, 2018

ಮೇಲುಕೋಟೆಯಲ್ಲಿ ಮಾರಣ ಹೋಮ

ಮೇಲುಕೋಟೆಯಲ್ಲಿ ಮಾರಣ ಹೋಮ
'ಲೇ ಸರಸೋತಿ ಬೇಗ ಸ್ನಾನ ಮುಗಿಸಿ ಬಾರೇ, ಹಂಡೆ ನೀರೆಲ್ಲಾ ನೀನೇ ಮುಗಿಸ ಬೇಡ..ಇನ್ನೂ ನಾಲ್ಕು ಜನ ಇದಾರೆ ಸ್ನಾನಕ್ಕೆ ಇವತ್ತು ನರಕ ಚತುರ್ದಶಿಯ ಅಭ್ಯಂಜನ ಬೇರೆ..'
ಜಾನಕಮ್ಮ ಪೂಜಾ ಪರಿಕರಗಳನ್ನು ಅಣಿಗೊಳಿಸುತ್ತಾ ಬಚ್ಚಲು ಮನೆಯಲ್ಲಿರುವ ಮಗಳಿಗೆ ಕೇಳಿಸುವ ಹಾಗೆ ಲಘುವಾಗಿ ಗದರಿಸಿದರು.
,
ತಿರುಮಲ ಐಯ್ಯಂಗಾರರ ಮನೆಯಲ್ಲಿ ಹಬ್ಬದ ಸಡಗರ. ಮೇಲುಕೋಟೆಯ ಪ್ರತಿ ಮಂಡ್ಯಂ ಐಯ್ಯಂಗಾರರ ಮನೆ ಮನೆಯಲ್ಲೂ ಅಂದು ವಿಶೇಷ ಪೂಜೆ ಆಚರಣೆಗಳು.
'ಹೋಗಲಿ ಬಿಡೇ ಮಗು ನಿಧಾನಕ್ಕೆ ಬರಲಿ, ಗಂಡು ಹುಡುಗರೆಲ್ಲಾ ಆಗಲೇ ಕಲ್ಯಾಣಿಗಳ ಕಡೆ ಹೋಗಾಯ್ತು'.
ಒದ್ದೆಯಾದ ಪಂಚೆಯನ್ನು ಹಿತ್ತಿಲಿನಲ್ಲಿ ಒಣಗಲು ಹಾಕಿ, ಪೂಜೆಗೆ ಇನ್ನಷ್ಟು ಹೂಗಳನ್ನು ಬಿಡಿಸುತ್ತಾ ಹೆಂಡತಿಗೆ ಸಮಾಧಾನವಾಗಿರಲು ಹೇಳಿದರು ತಿರುಮಲ ಐಯ್ಯಂಗಾರರು.
'ಏನು ಮಕ್ಕಳೆಲ್ಲಾ ಕಲ್ಯಾಣಿಗೆ ಹೋದರೇ..'
ಒಂದೇ ಸಲ ಹೌಹಾರಿದಂತೆ ಕೇಳಿದರು ಜಾನಕಮ್ಮ.
'ಯಾಕೇ ಇಷ್ಟು ಗಾಬರಿಪಟ್ಟಕೊಂಡಿದೀಯಾ..ದಿನಾಲೂ ಹೋಗೊಲ್ವೆ'
ಐಯ್ಯಂಗಾರರು ಹೆಂಡತಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
'ಇಲ್ಲಾರೀ...ನನಗೇಕೋ ಗಾಬರಿ, ಎಡಗಣ್ಣೂ ಕೂಡ ಹೊಡಕೊಳ್ತಾ ಇದೆ, ಯಾಕೋ ಹೆದರಿಕೆ ಆಗ್ತಿದೆ... ನೀವು ಪೂಜೆಗೆ ಕೂರೋಕ್ಕೆ ಮುಂಚೆ ಯಾರನ್ನಾದ್ರೂ ಕಳಿಸಿ ಮಕ್ಕಳನ್ನ ಕರ್ಕೊಂಡು ಬರೋಕೆ'
ಐಯ್ಯಂಗಾರರಿಗೆ ಜಾನಕಮ್ಮನವರ ನಡುವಳಿಕೆ ವಿಚಿತ್ರವೆನಿಸಿತು. ಮಕ್ಕಳನ್ನು ಹೊರಗೆ ಆಟಕ್ಕೆ, ಕೊಳಗಳಿಗೆ ಈಜೋಕ್ಕೆ ಕಳುಹಿಸಲು ಎಂದೂ ಹಿಂಜರಿದವರಲ್ಲ. ಬ್ರಾಹ್ಮಣರು ಕುಸ್ತಿಯಾಡೋದು ಕಲೀಬೇಕು, ಕತ್ತಿವರಸೆಯನ್ನೂ ಕಲೀಲಿ ಎನ್ನುವವರು, ಇವತ್ತ್ಯಾಕೆ ಹೀಗೆ ಗಾಬರಿಯಾಗಿದ್ದಾಳೆ ಎನ್ನುತ್ತಲೇ,
'ಸರಿ ನಾನೇ ಹೋಗಿ ಕರೆದುಕೊಂಡು ಬರುತ್ತೇನೆ ಎಂದು  ಅಕ್ಕ ತಂಗಿಯರ ಕೊಳದ ಕಡೆ ಹೊರಟರು.
ದೇವರಕೋಣೆಗೆ ಬಂದ ಜಾನಕಮ್ಮ ದೀಪಗಳನ್ನ ಹಚ್ಚಲು ಶುರುಮಾಡಿಕೊಂಡರು...
ಅದು ಯಾವ ಮಾಯದಲ್ಲಿ ಟಿಪ್ಪು ಸುಲ್ತಾನನ ಸೈನಿಕರು ಮನೆಯೊಳಗೆ ನುಗ್ಗಿ ಕಣ್ಣಿಗೆ ಕಂಡವರನ್ನೆಲ್ಲಾ ಕೊಲ್ಲಲು ಶುರುಮಾಡಿಕೊಂಡರೋ..ಕ್ಷಣಾರ್ಧದಲ್ಲಿ ಹಚ್ಚುತ್ತಿದ್ದ ದೀಪಗಳ ಮೇಲೇ ಉರುಳಿ ಬಿತ್ತು ಜಾನಕಮ್ಮನ ದೇಹ, ಮಗು ಸರಸ್ವತಿ ಬಚ್ಚಲು ಕೋಣೆಯಲ್ಲೇ ಹತವಾದಳು.
ತಿಳಿನೀರಿನ ಕಲ್ಯಾಣಿಗಳು ಕೆಂಪಾಗತೊಡಗಿದವು..
ತಿರುಮಲ ಐಯ್ಯಂಗಾರರ ಮತ್ತು ಮಕ್ಕಳ ಛಿದ್ರಗೊಂಡ ದೇಹಗಳು ಒಂದರ ಮೇಲೊಂದು ಉರುಳಿಬಿದ್ದವು.
ಆ ನರಕ ಚತುರ್ಥಿಯಂದು ಮೇಲುಕೋಟೆ ನರಕವಾಗಿ ಹೋಯಿತು..ಎಲ್ಲೇಲ್ಲೂ ಆಕ್ರಂದನ, ಅಂಧಕಾರ.
ಇಂದಿಗೂ ಮೇಲುಕೋಟೆಯಲ್ಲಿ ದೀಪಾವಳಿಯಂದು ಕತ್ತಲಿನದ ಅಟ್ಟಹಾಸ.
✍️...ವಿಂಗ್ ಕಮಾಂಡರ್ ಸುದರ್ಶನ